Categories
ಸಿನಿ ಸುದ್ದಿ

ಆರ್ಮುಗಂ ರವಿಶಂಕರ್‌ ಪುತ್ರನ ರಂಗಪ್ರವೇಶ,ಆಡ್‌ ಶೂಟ್‌ ಮೂಲಕ ಈಗ ಕಲರ್ ಫುಲ್‌ ಜಗತ್ತಿಗೆ ಎಂಟ್ರಿ

ಆರ್ಮುಗಂ ಖ್ಯಾತಿಯ ಖಳ ನಟ ರವಿಶಂಕರ್‌ ಪುತ್ರ ಅದ್ವೈತ್‌ ಇಷ್ಟರಲ್ಲಿಯೇ ಹೀರೋ ಬೆಳ್ಳಿತೆರೆಗೆ ಎಂಟ್ರಿ ಆಗುವುದು ಗ್ಯಾರಂಟಿ ಆಗಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ 2020 ರಲ್ಲೆ ಅದ್ವೈತ್ಹೀರೋ ಆಗಿ ಸ್ಯಾಂಡಲ್ ವುಡ್‌ಗೆ ಕಾಲಿಡಬೇಕಿತ್ತು. ಆದರೆ ಕೊರೋನಾ ಎನ್ನುವ ಮಹಾ ಮಾರಿ ಅದ್ವೈತ್‌ ಅವರ ಬೆಳ್ಳಿತೆರೆ ಪ್ರವೇಶಕ್ಕೂ ಅಡ್ಡಿ ಉಂಟು ಮಾಡಿತು. ಕೊರೋನಾ ಆತಂಕ ಒಂದಷ್ಟು ಕಮ್ಮಿ ಆಗಿ ಚಿತ್ರೋದ್ಯಮದ ಚಟುವಟಿಕೆಗಳು ಗರಿಗೆದರಿಕೊಂಡ ಬೆನ್ನಲೇ ಅದ್ವೈತ್‌ ಬೆಳ್ಳಿತೆರೆ ಪ್ರವೇಶದ ಸಿದ್ಧತೆಗೆ ಚಾಲನೆ ಸಿಕ್ಕಿದೆ.

ಮಾತೃ ಭಾಷೆ ತೆಲುಗು ಆಗಿದ್ದರೂ, ಬದುಕು ಕೊಟ್ಟ ಕನ್ನಡದ ಮೂಲಕವೇ ಪುತ್ರ ನಟನಾಗಿ ಪರಿಚಯವಾಗಬೇಕೆನ್ನುವುದು ನಟ ರವಿಶಂಕರ್‌ ಅವರ ಆಸೆ. ಅದಕ್ಕೆ ಪೂರಕ ಎಂಬಂತೆ ಅದ್ವೈತ್‌ ರಂಗ ಪ್ರವೇಶ ಆರಂಭವಾಗಿದೆ. ಅವರ ದೊಡ್ಡಪ್ಪ ಹಾಗೂ ಹೆಸರಾಂತ ನಟ ಸಾಯಿಕುಮಾರ್‌ ಅವರ ಪುತ್ರಿ ಡಾ.ಜ್ಯೋತಿರ್ಮಯಿ ಹಾಗೂ ಕೃಷ್ಣ ಪಲ್ಗುಣ ದಂಪತಿ ಒಡೆತನದ ಕ್ಸೋಬು ಫುಡ್ಸ್‌ ಮತ್ತು ಬೆವರೇಜಸ್‌ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಫುಡ್‌ ಸ್ಟೆಪ್ಸ್‌ ಮಕ್ಕಳ ರುಚಿಕರ ಆಹಾರ ಪದಾರ್ಥದ ಪ್ರಚಾರಕ್ಕೆ ಆಡ್‌ ಶೂಟ್‌ ಮಾಡಿದ್ದೇ ಅದ್ವೈತ್.‌ ಇದು ಅವರ ಮೊದಲ ಕೊಡುಗೆ. ಇದು ತುಂಬಾ ಗುಣಮಟ್ಟ ಹಾಗೂ ಆಕರ್ಷಣೀಯವಾಗಿ ಮೂಡಿ ಬಂದಿದೆ.

ಪುತ್ರನ ಈ ಕೆಲಸದ ಬಗ್ಗೆ ಮಾತನಾಡುವ ನಟ ಆರ್ಮುಗಂ ಖ್ಯಾತಿಯ ರವಿಶಂಕರ್‌, ಇದು ಆತನ ರಂಗ ಪ್ರವೇಶ. ನಮ್ಮ ಫ್ಯಾಮೀಲಿಯೇ ಬಣ್ಣದ ಜಗತ್ತಿನಲ್ಲಿರುವುದರಿಂದ ಆತನಿಗೆ ನಟ ಆಗ್ಬೇಕು ಅನ್ನೋದಿದೆ. ಅದಕ್ಕಂತಲೇ ಅಮೆರಿಕದ ನ್ಯೂಯಾರ್ಕ್‌ ನ ಪ್ರತಿಷ್ಟಿತ ಆಕ್ಟಿಂಗ್‌ ಸ್ಕೂಲ್‌ ನಲ್ಲಿ ಮೂರು ವರ್ಷ ಆಕ್ಟಿಂಗ್‌ ಟ್ರೈನಿಂಗ್‌ ಮುಗಿಸಿಕೊಂಡು ಬಂದಿದ್ದಾನೆ. ಇದು ಆತನ ಆಸಕ್ತಿಯ ಕ್ಷೇತ್ರ. ನಮ್ಮ ಒತ್ತಾಯವೇನಿಲ್ಲ. ಆಸಕ್ತಿ ಇದ್ದ ಕ್ಷೇತ್ರದಲ್ಲೇ ಆತನೂ ಇರಲಿ ಅನ್ನೋದು ನಮ್ಮಾಸೆ. ಸದ್ಯಕ್ಕೆ ಅದಕ್ಕೆ ನಮ್ಮಣ್ಣ , ಮತ್ತು ಮಗಳು ಹಾಗೂ ಅಳಿಯ ಅದಕ್ಕೊಂದು ಅವಕಾಶ ಕೊಟ್ಟಿದ್ದಾರೆ. ಮುಂದಿನದು ಬೆಳ್ಳಿ ತೆರೆ ಪ್ರವೇಶʼ ಎನ್ನುತ್ತಾರೆ.

ರವಿಶಂಕರ್‌ ಅವರ ಹಾಗೆಯೇ ಅವರ ಪುತ್ರ ಅದ್ವೈತ್‌ ಕೂಡ ಹ್ಯಾಂಡ್‌ ಸಮ್‌ ಆಗಿದ್ದಾರೆ. ಹೆಚ್ಚು ಕಡಿಮೆ 6 ಅಡಿ ಕಟೌಟ್.‌ ನಟನೆ, ಡಾನ್ಸ್‌ ಸೇರಿದಂತೆ ಸಿನಿಮಾಕ್ಕೆ ಬೇಕಾದ ಎಲ್ಲಾ ಕಲೆಗಳನ್ನು ಕಲಿತುಕೊಂಡೆ ಬಂದಿದ್ದಾರೆ. ಇನ್ನೇನು ಕ್ಯಾಮೆರಾ ಎದುರಿಸುವುದೊಂದೇ ಬಾಕಿಯಿದೆ. ಅಂದುಕೊಂಡಂತಾದರೆ ಇಷ್ಟರಲ್ಲಿಯೇ ಕನ್ನಡಕ್ಕೆ ಮತ್ತೊಬ್ಬ ಆರಡಿ ಹೀರೋ ಬರುವುದು ಖಚಿತ.

Categories
ಸಿನಿ ಸುದ್ದಿ

ಸಲಾರ್‌ ಗೆ ಬಂದಳು ಸೌತ್‌ ಇಂಡಸ್ಟ್ರಿಯ ಫೇಮಸ್‌ ನಟಿ, ಬರ್ತ್‌ಡೇ ದಿನದಂದೇ ಶ್ರುತಿ ಹಾಸನ್‌ ಗೆ ಸಿಕ್ತು ಭರ್ಜರಿ ಗಿಫ್ಟ್‌!

ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಲು ಒಂದಾಯ್ತು ಫೇಮಸ್‌ ಜೋಡಿ

ಸೌತ್‌ ಸಿನಿಮಾ ಇಂಡಸ್ಟ್ರಿಯ ಫೇಮಸ್‌ ನಟಿ ಶ್ರುತಿ ಹಾಸನ್‌ ಅವರಿಗೆ ಇಂದು ಬರ್ತಡೇ ಸಂಭ್ರಮ. ಅವರ ಹುಟ್ಟು ಹಬ್ಬಕ್ಕೆ “ಕೆಜಿಎಫ್‌ʼ ಖ್ಯಾತಿಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ಭರ್ಜರಿ ಗಿಫ್ಟ್‌ ನೀಡಿದೆ. ಪ್ರಭಾಸ್‌ ಅಭಿನಯದ ಅದ್ದೂರಿ ವೆಚ್ಚದ ಸಿನಿಮಾ ” ಸಲಾರ್‌ʼ ಗೆ ಶ್ರುತಿ ಹಾಸನ್‌ ನಾಯಕಿ ಆಗಿದ್ದಾರೆ. ಶ್ರುತಿ ಹಾಸನ್‌ ಬರ್ತ್‌ಡೇ ದಿನದಂದೇ ಹೊಂಬಾಳೆ ಫಿಲಂಸ್‌ ಅಧಿಕೃತವಾಗಿ ಅನೌನ್ಸ್‌ ಮಾಡಿದೆ.

‘ಕೆಜಿಎಫ್‌ 2’ ಚಿತ್ರದ ಜತೆಗೆಯೇ ಹೊಂಬಾಳೆ ಫಿಲಂಸ್‌ ಬಹುಭಾಷೆಯಲ್ಲಿ ನಿರ್ಮಾಣ ಮಾಡುತ್ತಿರುವ ಅದ್ದೂರಿ ವೆಚ್ಚದ ಸಿನಿಮಾ ‘ಸಲಾರ್‌’ . ಇನ್ನು ವಿಶೇಷ ಅಂದ್ರೆ ಇದು ಪ್ರಶಾಂತ್‌ ನೀಲ್‌ ಆಕ್ಷನ್‌ ಕಟ್‌ ಹೇಳುತ್ತಿರುವ ಸಿನಿಮಾ. ಹೈದರಾಬಾದ್‌ನಲ್ಲಿ ಮೊನ್ನೆಯಷ್ಟೇ ಚಿತ್ರದ ಮುಹೂರ್ತ ವಿಶೇಷವಾಗಿ ನಡೆದಿತ್ತು. ಉಪ ಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ್‌, ನಿರ್ಮಾಪಕ ವಿಜಯ್‌ ಕಿರಗಂದೂರು, ನಟ ರಾಕಿಂಗ್‌ ಸ್ಟಾರ್‌ ಯಶ್‌ ಸೇರಿದಂತೆ ತೆಲಗು ಚಿತ್ರರಂಗದ ದೊಡ್ಡ ತಂಡವೇ ಅಲ್ಲಿ ಹಾಜರಿತ್ತು. ಈ ನಡುವೆ ಈಗ ಚಿತ್ರದ ನಾಯಕ ಪ್ರಭಾಸ್‌ ಅವರಿಗೆ ನಾಯಕಿ ಹುಡುಕಿದೆ ಚಿತ್ರ ತಂಡ.

ಹೊಂಬಾಳೆ ಫಿಲ್ಮ್ಸ್‌ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ನಟಿ ಶ್ರುತಿಹಾಸನ್‌ ಅವರಿಗೆ ಬರ್ತ್‌ ಡೇ ಶುಭಾಶಯ ಕೋರುವ ಮೂಲಕ ಚಿತ್ರಕ್ಕೆ ಸ್ವಾಗತ ಕೋರಿದೆ ಚಿತ್ರ ತಂಡ. ಹಾಗೆಯೇ ನಾಯಕ ಪ್ರಭಾಸ್‌ ಕೂಡ ನಟಿ ಶ್ರುತಿ ಹಾಸನ್‌ ಅವರಿಗೆ ಸ್ವಾಗತ ಕೋರಿದ್ದಾರೆ. “ಹುಟ್ಟುಹಬ್ಬದ ಶುಭಾಶಯಗಳು ಶ್ರುತಿ ಹಾಸನ್‌! ಸಲಾರ್ ಚಿತ್ರದಲ್ಲಿ ನಿಮ್ಮೊಂದಿಗೆ ಅಭಿನಯಿಸಲು ಉತ್ಸುಕನಾಗಿದ್ದೇನೆ” ಎಂದು ತಮ್ಮ ಫೇಸ್‌ ಬುಕ್‌ ಪೇಜ್‌ ನಲ್ಲಿ ಬರೆದುಕೊಂಡಿದ್ದಾರೆ.ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದಲ್ಲಿ ಪ್ರಶಾಂತ್ ನೀಲ್‌ ನಿರ್ದೇಶಿಸಿದ್ದ ‘ಕೆಜಿಎಫ್‌’ ಭಾರತ ಮಾತ್ರವಲ್ಲದೆ ಸಾಗರದಾಚೆಯೂ ಸದ್ದು ಮಾಡಿತ್ತು. ಇದೀಗ ‘ಕೆಜಿಎಫ್‌’ ಸರಣಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ನಂತರ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್‌’ ಆರಂಭವಾಗಲಿದೆ. ಇದೀಗ ಚಿತ್ರದ ನಾಯಕಿಯ ಆಯ್ಕೆ ನಡೆದಿದ್ದು, ಚಿತ್ರದ ಇತರೆ ಪ್ರಮುಖ ಕಲಾವಿದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಇನ್ನು ಪ್ರಭಾಸ್ ಸದ್ಯ ರಾಧಾಕೃಷ್ಣಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್‌’ ರೊಮ್ಯಾಂಟಿಕ್ ಡ್ರಾಮಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ನಂತರ ‘ಸಲಾರ್‌’ ಶುರುವಾಗಲಿದೆ.

ನಟಿ ಶ್ರುತಿ ಹಾಸನ್ ಇತ್ತೀಚೆಗೆ ಸಂಕ್ರಾಂತಿಗೆ ತೆರೆಕಂಡ ‘ಕ್ರ್ಯಾಕ್‌’ ಚಿತ್ರದಲ್ಲಿ ರವಿತೇಜಾ ಜೋಡಿಯಾಗಿ ನಟಿಸಿದ್ದರು. ಕೋವಿಡ್‌ನ ಆತಂಕದ ಮಧ್ಯೆಯೂ ಈ ಚಿತ್ರ ದೊಡ್ಡ ಯಶಸ್ಸು ಕಂಡು ಟಾಲಿವುಡ್ ಉದ್ಯಮಕ್ಕೆ ಭರವಸೆ ತುಂಬಿತ್ತು. ಈ ಯಶಸ್ಸಿನ ಹಿಂದೆಯೇ ಶ್ರುತಿ ದೊಡ್ಡ ಸಿನಿಮಾ ‘ಸಲಾರ್‌’ ಅವಕಾಶ ಪಡೆದಿದ್ದಾರೆ. ತೆರೆಯ ಮೇಲೆ ಮೊದಲ ಬಾರಿ ಅವರು ಪ್ರಭಾಸ್‌ಗೆ ಜೊತೆಯಾಗುತ್ತಿರುವುದು ವಿಶೇ‍ಷ. ನಿಸ್ಸಂಶಯವಾಗಿ ಇದು ಅವರ ವೃತ್ತಿಬದುಕಿನ ಮಹತ್ವದ ಚಿತ್ರವಾಗಲಿದೆ ಎನ್ನುವುದು ಅವರ ಅಭಿಮಾನಿಗಳ ಅಂಬೋಣ.

Categories
ಸಿನಿ ಸುದ್ದಿ

ವರ್ಷಕ್ಕೆ ಇನ್ಮೇಲೆ ಮೂರು ಸಿನಿಮಾ ಖಾಯಂ, ಅಭಿಮಾನಿಗೆಳಿಗೆ ನಟ ಪುನೀತ್‌ ರಾಜ್‌ ಕುಮಾರ್‌ ಕೊಟ್ಟರು ಭರ್ಜರಿ ಸಿಹಿ ಸುದ್ದಿ !

“ನೂರರಷ್ಟು ಭರ್ತಿಗೆ ಅವಕಾಶ ಸಿಕ್ಕಿದೆಯಂತೆ ಮಾಸ್ಕ್‌, ಸ್ಯಾನಿಟೈಸ್ಡ್‌ ಮರಿಯಬೇಡಿ” ಅಪ್ಪು ಮನವಿ

ನಟ ಪುನೀತ್‌ ರಾಜ್‌ ಕುಮಾರ್‌  ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಇಲ್ಲಿವರೆಗಿನ ಕತೆ ಮುಗಿಯಿತು, ಆದರೆ ಇನ್ಮುಂದೆ ವರ್ಷಕ್ಕೆ ಮೂರು ಸಿನಿಮಾದಲ್ಲಾದರೂ ಅಭಿನಯಿಸಬೇಕು, ಅವರು ಆ ವರ್ಷದಲ್ಲೇ ಹಂತ ಹಂತವಾಗಿ ತೆರೆ ಕಾಣಬೇಕು. ಆ ರೀತಿ ಡಿಸೈಡ್‌ ಮಾಡಿಕೊಂಡೇ ಸಿನಿಮಾಗಳಿಗೆ ಕಾಲ್‌ ಶೀಟ್‌ ನೀಡ್ಬೇಕು ಅನ್ನೋದು ಅವರ  ನಿರ್ಧಾ ರ .

ಇದು ಅಂತೆ, ಕಂತೆ ಯಲ್ಲ. ಖುದ್ದು ಅವರೇ ” ಸಿನಿ ಲಹರಿʼ  ಜತೆ ಹಂಚಿಕೊಂಡ ಮಾಹಿತಿ. ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್‌ ವೊಂದರಲ್ಲಿ ಜರುಗಿದ” ಫುಡ್‌ ಸ್ಟೆಪ್ಸ್ ʼ ಹೆಸರಿನ ಫುಡ್‌ ಪ್ರಾಡೆಕ್ಟ್‌ ಲಾಂಚ್‌ ಗೆ ಅತಿಥಿಯಾಗಿ ಬಂದಿದ್ದ ಅವರು, ಆನಂತರ “ ಸಿನಿ ಲಹರಿ ʼ ಜತೆ ಮಾತನಾಡಿದರು.“ ಚಿತ್ರ ಮಂದಿರಗಳಲ್ಲಿ ಈಗ ನೂರರಷ್ಟು ಆಸನಗಳ ಭರ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸಂತಸ ತಂದಿದೆ. ಇದರಿಂದ ಚಿತ್ರೋದ್ಯಮಕ್ಕೆ ಮತ್ತೆ ಚಾಲನೆ ಸಿಗಲಿದೆ. ಎಲ್ಲರಿಗೂ ಕೆಲಸ ಸಿಗಲಿದೆ. ಆದರೂ ಪ್ರೇಕ್ಷಕರು ಎಚ್ಚರಿಕೆಯಿಂದಲೇ ಇರಬೇಕಿದೆ. ಮಾಸ್ಕ್‌ ಹಾಗೂ ಸ್ಯಾನಿಟೈಸ್ಡ್‌ ಬಳಸುವುದನ್ನು ಮರೆಯಬಾರದು. ಮನರಂಜನೆ ಜತೆಗೆ ಅವರ ಆರೋಗ್ಯವೂ ಮುಖ್ಯ ಎಂದು ಮನವಿ ಮಾಡಿಕೊಂಡರು.

ಕೊರೋನಾ ಕಾರಣ ಸಂಕಷ್ಟದಲ್ಲಿರುವ ಚಿತ್ರೋದ್ಯಮಕ್ಕೆ ಇನ್ನಷ್ಟು ವೇಗ ಸಿಗಬೇಕಾದರೆ ಸ್ಟಾರ್‌ ಗಳು ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಸಿನಿಮಾ ಮಾಡುವುದು ಒಳ್ಳೆಯಲ್ಲವೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟ ಪುನೀತ್‌, ಇನ್ಮೇಲೆ ವರ್ಷಕ್ಕೆ ಕನಿಷ್ಟ ಮೂರು ಸಿನಿಮಾಗಳಲ್ಲಾದರೂ ಅಭಿನಯಿಸಲು ನಿರ್ಧರಿಸಿದ್ದೇನೆʼ ಅಂತ ತಮ್ಮ ನಿರ್ಧಾರ ರಿವೀಲ್‌ ಮಾಡಿದರು. ಈ ಡಿಸೈಡ್‌ ಈ ವರ್ಷದಲ್ಲೇ ಇಂಪ್ಲಿಮೆಂಟ್‌ ಆಗುತ್ತಾ ಎನ್ನುವ ಕುತೂಹಲದ ಪ್ರಶ್ನೆಗೆ, ನೋಡೋಣ, ಮುಂದೆ ಹೇಳ್ತೀನಿ ಅಂತ ಹಾಗೆಯೇ ಕುತೂಹಲ ಉಳಿಸಿದರು.

“  ಈ ವರ್ಷದ ಮಟ್ಟಿಗೆ ಈಗ ಯುವ ರತ್ನ ಬರಲಿದೆ. ಅದರ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಆಗಿದೆ. ಅದಾದ ಮೇಲೆ ಜೇಮ್ಸ್‌ ಸರದಿ. ಈಗಾಗಲೇ ಅದಕ್ಕೆ ಬಹುತೇಕ ಶೂಟಿಂಗ್‌ ಮುಗಿದಿದೆ. ಅದು ರಿಲೀಸ್‌ ಯಾವಾಗೋ ಗೊತ್ತಿಲ್ಲ, ಈ ವರ್ಷದಲ್ಲೇ ಬಂದ್ರು ಬರಬಹುದು ಅಂತ ಹೇಳಿದರು. ಹಾಗಾದ್ರೆ ಮುಂದಿನ ಸಿನಿಮಾ? ಎನ್ನುವ ಪ್ರಶ್ನೆಗೆ ಗೊತ್ತಿಲ್ಲ ಅಂತ ನಕ್ಕರು. ಅದೇನೆ ಇರಲಿ, ವರ್ಷಕ್ಕೆ ಒಂದೋ ಎರಡೋ ಸಿನಿಮಾ ಸಾಕು ಅಂದುಕೊಂಡಿದ್ದ  ಪುನೀತ್‌, ಈಗ ವರ್ಷಕ್ಕೆ ಮೂರು ಸಿನಿಮಾ ಗ್ಯಾರಂಟಿ ಅಂತ ಹೇಳಿಕೊಂಡಿರುವುದು ಅವರ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯಂತೂ ಹೌದು.

Categories
ಸಿನಿ ಸುದ್ದಿ

ಚಿತ್ರಮಂದಿರಕ್ಕೆ ಸಿಕ್ತು ಪೂರ್ಣ ಅನುಮತಿ

ಸಿನಿ ಪ್ರೇಕ್ಷಕರಿಗೆ ಇನ್ಮುಂದೆ ಹಬ್ಬ

ಕೊರೊನಾ ಹಾವಳಿಗೆ ತತ್ತರಿಸಿದ್ದ ಸಿನಿಮಾ ರಂಗಕ್ಕೆ ಈಗ ಪೂರ್ಣ ರಿಲೀಫ್ ದೊರೆತಿದೆ. ಹೌದು, ಕೊರೊನಾ ಸಮಸ್ಯೆಯಿಂದಾಗಿ ಸರ್ಕಾರ ಚಿತ್ರಮಂದಿರಕ್ಕೆ ಶೇ.50ರಷ್ಟು ಮಾತ್ರ ಅನುಮತಿ ನೀಡಿತ್ತು. ಕಳಡದ ಅಕ್ಟೋಬರ್ 15ರಿಂದ ಈ ಜಾರಿ ಇತ್ತು. ಅಲ್ಲಿಂದ ಇಲ್ಲಿಯವರೆಗೆ ಒಂದಷ್ಟು ಕನ್ನಡ ಚಿತ್ರಗಳು ಬಿಡುಗಡೆ ಕಂಡಿದ್ದವು. ಶೇ.100ರಷ್ಟು ಅನುಮತಿಗಾಗಿ ಚಿತ್ರೋದ್ಯಮ ಕಾಯುತ್ತಿತ್ತು. ಈಗ ಸರ್ಕಾರ ಶೇ.100ರಷ್ಟು ಅನುಮತಿ ನೀಡಿದೆ. ಪೂರ್ಣ ಪ್ರಮಾಣದ ಈ ಅನುಮತಿಯಿಂದಾಗಿ ಚಿತ್ರೋದ್ಯಮ ಸಂತಸದಲ್ಲಿದೆ.

 

ಈಗಾಗಲೇ ಸ್ಟಾರ್ ಸಿನಿಮಾಗಳು ಬಿಡುಗಡೆ ದಿನವನ್ನು ಘೋಷಣೆ ಮಾಡಿವೆ. ಚಿತ್ರಮಂದಿರಗಳಿಗೆ ಶೇ.100ರಷ್ಟು ಅನುಮತಿ ಸಿಕ್ಕ ಹಿನ್ನಲೆಯಲ್ಲಿ ಇದೀಗ ಸಿನಿಮಾ ರಂಗದಲ್ಲಿ ಮತ್ತಷ್ಟು ಚಟುವಟಿಕೆಗಳು ಜೋರಾಗಿವೆ.
ಅಂತೂ ಸಿಹಿ ಸುದ್ದಿ ಸಿಕ್ಕ ಬೆನ್ನಲ್ಲೇ ಸಿನಿಮಾ ಕಾರ್ಮಿಕ ವಲಯದಲ್ಲಿ ಮಂದಹಾಸ ಮೂಡಿದೆ.

Categories
ಸಿನಿ ಸುದ್ದಿ

ಜೈ ಕರ್ನಾಟಕ ಪದ ಬೇಡ ಅನ್ನುವುದಾದರೆ, ಆ ಪ್ರೋಗ್ರಾಮ್‌ ಕ್ಯಾನ್ಸಲ್‌ ಮಾಡಿ!

ಆರ್ಮುಗಂ ರವಿಶಂಕರ್‌ ಹೀಗೆಂದು ಖಡಕ್‌ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

“ನಾನು ಕನ್ನಡಿಗರಿಗೆ ಚಿರಋಣಿ. ಇಲ್ಲಿನ ನೆಲ, ಜಲ, ಭಾಷೆ ನನ್ನ ಬದುಕನ್ನು ಹಸನಾಗಿಸಿದೆ. ನನಗೆ ಜೀವನ ಕೊಟ್ಟ ಕರ್ನಾಟಕವನ್ನು ಎಂದಿಗೂ ಮರೆಯೋದಿಲ್ಲ…”
_ ಇದು “ಆರ್ಮುಗಂ” ಖ್ಯಾತಿಯ ರವಿಶಂಕರ್‌ ಸದಾ ಪ್ರೀತಿಯಿಂದಲೇ ಹೇಳುವ ಮಾತು.

ಇಷ್ಟಕ್ಕೂ ಖಳನಟ ರವಿಶಂಕರ್‌ ಅವರ ಬಗ್ಗೆ ಇಲ್ಲೇಕೆ ಪ್ರಸ್ತಾಪ ಎಂಬ ಪ್ರಶ್ನೆಗೆ, ರವಿಶಂಕರ್‌ ಬುಧವಾರ “ಸಿನಿಲಹರಿ” ಕಚೇರಿಗೆ ಆಗಮಿಸಿದ್ದರು. ಈ ವೇಳೆ ತಮ್ಮ ಸಿನಿ ಜರ್ನಿ ಕುರಿತು ಹೇಳಿಕೊಳ್ಳುತ್ತಿರುವಾಗ, ಒಂದು ಮರೆಯದ ಘಟನೆಯನ್ನೂ ನೆನಪಿಸಿಕೊಂಡರು. ಆ ಘಟನೆ ಕುರಿತಂತೆ ಸ್ವತಃ ರವಿಶಂಕರ್‌ ವಿವರಿಸಿದ್ದು ಹೀಗೆ.‌

ಓವರ್‌ ಟು ರವಿಶಂಕರ್…
ತೆಲುಗಿನ ಜನಪ್ರಿಯ ವಾಹಿನಿಯೊಂದರಲ್ಲಿ “ಆಲಿ ತೊ ಸರದಾಗ” ಎಂಬ ಸಕ್ಸಸ್‌ಫುಲ್‌ ಕಾರ್ಯಕ್ರಮವಿದೆ. ಆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ಅಲ್ಲಿ ತೆಲುಗಿನ ಖ್ಯಾತ ನಟ ಆಲಿ ಅವರು ಆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತು. ಮಧ್ಯೆ ಮಾತನಾಡುವಾಗ, ಒಂದು ಚಿತ್ರದ ಡೈಲಾಗ್‌ ಹೇಳಬೇಕು ಎಂಬ ಬೇಡಿಕೆ ಬಂತು.

ಆ ಬೇಡಿಕೆಯನ್ನು ಸ್ವೀಕರಿಸಿದ ನಾನು, ಡೈಲಾಗ್‌ ಹೇಳೋಕೆ ಅಣಿಯಾದೆ. ಆದರೆ, ಎಲ್ಲರಿಗೂ ನಾನು ತೆಲುಗಿನ “ಅರುಧಂತಿ” ಸಿನಿಮಾದ “ವದಲಾ ಬೊಮ್ಮಾಲಿ..” ಡೈಲಾಗ್‌ ಹೇಳಬಹುದು ಎಂದೇ ನಿರೀಕ್ಷಿಸಿದ್ದರು. ಆದರೆ, ನಾನು ಮಾತ್ರ ಹೇಳಿದ್ದು, “ಕೆಂಪೇಗೌಡ” ಚಿತ್ರದ “ಶಾಕ್‌ ಆಯ್ತಾ… ಶಾಕ್‌ ಆಗಲೇಬೇಕು ಅಂತ ತಾನೇ ನಾನಿಲ್ಲಿ ಮಾಗಡಿ ರೋಡ್‌ಗೆ ಪೋಸ್ಟಿಂಗ್‌ ಹಾಕಿಸಿದ್ದು…” ಎಂಬ ಡೈಲಾಗ್‌ ಹರಿಬಿಟ್ಟೆ. ಅಲ್ಲಿ ಕುಳಿತ ಆಡಿಯನ್ಸ್‌ ಎಲ್ಲರೂ ಚಪ್ಪಾಳೆ, ಶಿಳ್ಳೆಗಳ ಸುರಿಮಳೆಗೈದರು. ಕೊನೆಯಲ್ಲಿ ಎಲ್ಲರಿಗೂ ನಮಸ್ಕರಿಸುತ್ತಲೇ, ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎಂದು ಹೇಳಿದೆ.

ಆ ಕಾರ್ಯಕ್ರಮ ಮುಗಿದ ಬಳಿಕ, ಆ ಜನಪ್ರಿಯ ವಾಹಿನಿಯ ಸಂಪಾದಕರು ನನಗೆ ಫೋನ್‌ ಮಾಡಿ, ಎಲ್ಲಾ ಓಕೆ, ಆದರೆ, ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎನ್ನುವುದನ್ನು ಕಟ್‌ ಮಾಡ್ತೀನಿ. ಯಾಕೆಂದರೆ, ಇದು ತೆಲುಗು ವಾಹಿನಿ ಅಂದರು. ಆಗ ನಾನು, ಹಾಗೇನಾದರೂ ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಪದವನ್ನು ಕಟ್‌ ಮಾಡುವುದಾದರೆ, ಆ ಪ್ರೋಗ್ರಾಮ್‌ ಕ್ಯಾನ್ಸಲ್‌ ಮಾಡಿ. ನನಗೆ ಪಬ್ಲಿಸಿಟಿಯ ಅಗತ್ಯವೇ ಇಲ್ಲ ಅಂದುಬಿಟ್ಟೆ. ಹಾಗಾಗಿ, ಇವತ್ತಿಗೂ ಆ ಕಾರ್ಯಕ್ರಮದಲ್ಲಿ ನಾನು ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎಂದು ಹೇಳಿರುವುದಿದೆ‌ʼ ಎನ್ನುತ್ತಾರೆ ರವಿಶಂಕರ್.

ಅದೇನೆ ಇರಲಿ, ರವಿಶಂಕರ್‌ ಅವರು ಕನ್ನಡ ಚಿತ್ರರಂಗವನ್ನು ತುಂಬಾ ಗೌರವದಿಂದ ನೋಡುತ್ತಾರೆ. ಇಲ್ಲಿನ ಜನರನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ. ಕನ್ನಡ ಭಾಷೆ ಮೇಲೆ ಸದಾ ಪ್ರೀತಿ ತೋರುವ ಅವರು, ನನ್ನ ಅಣ್ಣ ಸಾಯಿಕುಮಾರ್‌ ಅವರಿಗೆ “ಪೊಲೀಸ್‌ ಸ್ಟೋರಿ” ದೊಡ್ಡ ಹೆಸರು ತಂದುಕೊಟ್ಟಿತು. ಕನ್ನಡದಲ್ಲೇ ಅಣ್ಣ ಕೂಡ ಸುದ್ದಿಯಾದವರು. ನನ್ನ ತಮ್ಮ ಅಯ್ಯಪ್ಪ ಶರ್ಮ ಕೂಡ ಇಲ್ಲಿ ಸದ್ದು ಮಾಡಿದವರೇ. ಇನ್ನು, ನನಗೆ, ತೆಲುಗು ಚಿತ್ರರಂಗದಲ್ಲಿ ಮೂರು ದಶಕ ಕೆಲಸ ಮಾಡಿದರೂ, ಹೇಳಿಕೊಳ್ಳುವ ಹೆಸರು ಸಿಗಲಿಲ್ಲ. ಆದರೆ, ಕನ್ನಡ ಚಿತ್ರರಂಗ ನನಗೆ ಹೆಸರು, ಗೌರವ ಎಲ್ಲವನ್ನೂ ಕೊಟ್ಟಿದೆ.

ಹೀಗಾಗಿ ನನಗೆ ಕನ್ನಡವೇ ನನ್ನ ಬದುಕಿನ ಭಾಷೆ, ಮಾತೃಭಾಷೆ ಎಲ್ಲವೂ ಇಲ್ಲೇ. ಇಂದು ನಾನು ಏನೆಲ್ಲಾ ಆಗಿದ್ದೇನೋ ಅದಕ್ಕೆಲ್ಲಾ ಕನ್ನಡಿಗರೇ ಕಾರಣ” ಮುಂದಿನ ದಿನಗಳಲ್ಲಿ ನನ್ನ ಮಗನನ್ನೂ ಕನ್ನಡ ಚಿತ್ರರಂಗದ ಮೂಲಕವೇ ಪರಿಚಯಿಸುತ್ತೇನೆ. ಅದಕ್ಕೆ ಈಗಾಗಲೇ ತಯಾರಿ ನಡೆದಿದೆ. ಈ ಹಿಂದೆಯೇ ಪರಿಚಯಿಸಬೇಕಿತ್ತು. ಆದರೆ, ಕೊರೊನಾ ಹಾವಳಿಯಿಂದ ಸ್ವಲ್ಪ ತಡವಾಗಿದೆ. ಬರುವ ಮೇ ತಿಂಗಳಲ್ಲಿ ಮಗನನ್ನು ಕನ್ನಡ ಸಿನಿಮಾ ಮೂಲಕ ಇಂಡಸ್ಟ್ರಿಗೆ ಪರಿಚಯಿಸುತ್ತಿದ್ದೇನೆ ಎನ್ನುತ್ತಾರೆ ಅವರು.

 

ಆಲ್‌ ದಿ ಬೆಸ್ಟ್‌ ಸಿನಿಲಹರಿ
ಕಚೇರಿಯಲ್ಲಿ ಕುಳಿತು ಇಷ್ಟೆಲ್ಲಾ ಮಾತನಾಡಿದ ಖಳನಟ ರವಿಶಂಕರ್‌ ಅವರು, ಕೊನೆಗೆ “ಸಿನಿಲಹರಿ” ಯಶಸ್ವಿಯಾಗಲಿ. ನಿಮ್ಮ ಬರವಣಿಗೆಯೇ ನಿಮಗೆ ಶಕ್ತಿ. ಕನ್ನಡ ಚಿತ್ರರಂಗದಲ್ಲಿ “ಸಿನಿಲಹರಿ” ಹೊಸ ಹೆಜ್ಜೆ ಮೂಡಿಸಲಿ. ಹೊಸ ಸುದ್ದಿಗಳ ಜೊತೆಗೆ ಕನ್ನಡ ಚಿತ್ರರಂಗದ ಪರ ಈ ಸಿನಿಲಹರಿ ಕೆಲಸ ಮಾಡಲಿ” ಎಂದು ಶುಭಹಾರೈಸಿದರು.

 

Categories
ಸಿನಿ ಸುದ್ದಿ

ಸಿನಿಮಾ ಮಂದಿಗೆ ಮಹಿಳಾ ಸಂಗೀತ ನಿರ್ದೇಶಕರು ಕಾಣಲ್ವಾ?

ನಮಗೂ ಅವಕಾಶ ಕೊಡಿ ಅಂದ್ರು ಗಾಯಕಿ ಇಂದು ವಿಶ್ವನಾಥ್‌


ಕನ್ನಡದ ಹೆಸರಾಂತ ಗಾಯಕಿ ಇಂದು ವಿಶ್ವನಾಥ್‌ ಮಹಿಳಾ ಸಂಗೀತ ನಿರ್ದೇಶಕರ ಪರ ಧ್ವನಿ ಎತ್ತಿದ್ದಾರೆ. ” ಅದ್ಯಾಕೋ ಕನ್ನಡದ ಸಿನಿಮಾ ಮಂದಿಗೆ ಮಹಿಳಾ ಸಂಗೀತ ನಿರ್ದೇಶಕರು ಕಾಣುತ್ತಿಲ್ಲ. ಅವಕಾಶ ಕೊಟ್ಟರೆ ನಾವು ಕೂಡ ಸಿನಿಮಾ ಸಂಗೀತ ಮಾಡಿ ತೋರಿಸುತ್ತಿವೆ. ಅದೆಲ್ಲಕ್ಕಿಂತ ಮುಖ್ಯವಾಗಿ ನಮಗೂ ಕೆಲಸ ಸಿಕ್ಕಂತಾಗುತ್ತದೆʼ ಅಂತ ಇಂದು ವಿಶ್ವನಾಥ್‌ ತುಂಬಿದ ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡರು.
ಹಾಗಂತ ಅವರಲ್ಲಿಗೆ ಅವಕಾಶ ಕೇಳಿಕೊಂಡು ಬಂದಿರಲಿಲ್ಲ. ಬದಲಿಗೆ ಅದು ಪ್ರತಿಷ್ಠಿತ” ಶ್ರೀ ರಾಘವೇಂದ್ರ ಚಿತ್ರವಾಣಿʼ ಪ್ರಶಸ್ತಿ ಪ್ರಧಾನ ಸಮಾರಂಭ. ಅವರು ಕೂಡ ಅಲ್ಲಿ ಪ್ರಶಸ್ತಿ ಪುರಸ್ಕೃತರು. ಶ್ರೀ ರಾಘವೇಂದ್ರ ಚಿತ್ರವಾಣಿಯ ಪ್ರತಿಷ್ಟಿತ ಡಾ. ರಾಜ್‌ ಕುಮಾರ್‌ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮಹಿಳಾ ಸಂಗೀತ ನಿರ್ದೇಶಕರು ಎದುರಿಸುತ್ತಿರುವ ಸವಾಲು ಹೇಳಿಕೊಂಡರು.
” ಅನೇಕ ಮಂದಿ ಪುರುಷ ಸಂಗೀತ ನಿರ್ದೇಶಕರ ಹಾಗೆ, ನಾವು ಕೂಡ ಸಿನಿಮಾ ಸಂಗೀತ ಮಾಡಲು ಆಸಕ್ತಿ ಹೊಂದಿದ್ದೇವೆ. ಆದರೆ ಅವಕಾಶ ಸಿಗುತ್ತಿಲ್ಲ. ಅದ್ಯಾಕೋ ಸಿನಿಮಾ ಮಂದಿ ಮಹಿಳಾ ಸಂಗೀತ ನಿರ್ದೇಶಕರತ್ತ ಗಮನ ಹರಿಸುತ್ತಿಲ್ಲ. ಇನ್ನಾದರೂ, ಸಿನಿಮಾ ನಿರ್ಮಾಪಕರು ಮಹಿಳಾ ಸಂಗೀತ ನಿರ್ದೇಶಕರಿಗೆ ಅವಕಾಶ ನೀಡಲಿʼ ಎಂದು ವಿನಂತಿಸಿಕೊಂಡರು. ಗಾಯಕಿ ಇಂದು ವಿಶ್ವನಾಥ್‌ ಅವರ ಮಾತಿಗೆ ವೇದಿಕೆಯಲ್ಲಿದ್ದ ಹಿರಿಯ ನಟಿ ತಾರಾ ಪ್ರತಿಕ್ರಿಯಿಸಿ, ಇಲ್ಲಿ ಅಂತಹದ್ದೇನು ತಾರಾತಮ್ಯ ಇಲ್ಲ. ಈಗ ಎಲ್ಲರೂ ಎಲ್ಲಾ ಕ್ಷೇತ್ರದಲ್ಲಿದ್ದಾರೆ. ಅವಕಾಶಗಳು ಸಿಗಬೇಕಿದೆ ಎಂದು ಹೇಳಿದರು.

Categories
ಸಿನಿ ಸುದ್ದಿ

ಕೆಜಿಎಫ್‌ ರೇಂಜ್‌ ಚೇಂಜ್‌ ಆಯ್ತು!

ಭಾರೀ ಮೊತ್ತಕ್ಕೆ ಸೇಲ್‌ ಆಯ್ತು ಹಿಂದಿ ಡಬ್ಬಿಂಗ್‌ ರೈಟ್ಸ್‌

ಭಾರತೀಯ ಸಿನಿಮಾರಂಗದಲ್ಲೇ ಜೋರು ಸುದ್ದಿ ಮಾಡಿರುವ “ಕೆಜಿಎಫ್‌ 2” ಇದೀಗ ಮತ್ತೊಂದು ಹೊಸ ದಾಖಲೆ ಬರೆದಿದೆ. ಹೌದು, ಈಗಾಗಲೇ ಬಹುನಿರೀಕ್ಷೆ ಹುಟ್ಟಿಸಿರುವ “ಕೆಜಿಎಫ್-‌೨” ಹೊಸದೊಂದು ದಾಖಲೆ ಮಾಡಿದೆ. ಬಿಡುಗಡೆಗೂ ಮುನ್ನವೇ ಒಂದು ಕುತೂಹಲ ಕೆರಳಿಸಿರುವ ಈ ಚಿತ್ರ ಈಗಾಗಲೇ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

ಮೂಲಗಳ ಪ್ರಕಾರ ತೆಲುಗಿನಲ್ಲಿ ದೊಡ್ಡ ಬೆಲೆಗೆ ಡಬ್ಬಿಂಗ್ ಹಕ್ಕು ಮಾರಾಟವಾಗಿರುವ ಕುರಿತು ವರದಿಯಾಗಿದೆ. ಸದ್ಯದ ಹೊಸ ಸುದ್ದಿ ಅಂದರೆ, ಹಿಂದಿಯಲ್ಲಿ “ಕೆಜಿಎಫ್-2” ಚಿತ್ರ ದಾಖಲೆ ಬೆಲೆಗೆ ಮಾರಾಟಗೊಂಡಿದೆ ಎಂಬ ಸುದ್ದಿ ಹೊರಬಿದ್ದಿದೆ.

ಮೊದಲ ಚಾಪ್ಟರ್‌ “ಕೆಜಿಎಫ್” ಚಿತ್ರವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಿದ್ದ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಈಗ “ಚಾಪ್ಟರ್-2” ಚಿತ್ರವನ್ನು ಖರೀದಿಸಿದೆ ಎನ್ನಲಾಗಿದೆ. ಬಾಲಿವುಡ್ ನಟ-ನಿರ್ಮಾಪಕ ಫರಾನ್ ಅಖ್ತರ್ ಎರಡನೇ ಭಾಗಕ್ಕೆ ದೊಡ್ಡ ಬೆಲೆ ನೀಡಿದ ಖರೀದಿಸಿದ್ದಾರೆ ಎಂದು ಬಾಲಿವುಡ್‌ ಡಿಜಿಟಲ್‌ ಮಾಧ್ಯಮಗಳು ವರದಿ ಮಾಡಿವೆ.


ಮೂಲಗಳ ಪ್ರಕಾರ ಸುಮಾರು 90 ಕೋಟಿ ರುಪಾಯಿಗೆ “ಕೆಜಿಎಫ್-‌2” ಮಾರಾಟ ಆಗಿದೆ ಎನ್ನಲಾಗಿದೆ. ಫರಾನ್ ಅಖ್ತರ್ ಸಂಸ್ಥೆ ಸುಮಾರು ಈ ಮೊತ್ತ ಕೊಟ್ಟು, ಹಕ್ಕು ಪಡೆದಿದೆ ಎನ್ನಲಾಗುತ್ತಿದೆ. ಮೂಲ ಚಿತ್ರದ ಬಜೆಟ್‌ಗಿಂತ ಹೆಚ್ಚು ಎಂದು ಸ್ವತಃ ಎಕ್ಸೆಲ್ ಸಂಸ್ಥೆಯ ಮೂಲಗಳು ಹೇಳಿಕೊಂಡಿವೆ. “ಕೆಜಿಎಫ್” ಈ ಹಿಂದೆ ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲೇ ವ್ಯಾಪಾರ ವಹಿವಾಟು ನಡೆಸಿತ್ತು. “ಚಾಪ್ಟರ್ 1” ಚಿತ್ರ ಆಗ 40 ಕೋಟಿವರೆಗೂ ಗಳಿಕೆ ಕಂಡಿದೆ ಎಂಬ ವರದಿಯಾಗಿತ್ತ. ಕನ್ನಡ ಸಿನಿಮಾವೊಂದು ಹಿಂದಿಯಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರವಾಗಿ ಹೊರಹೊಮ್ಮಿತ್ತು ಎಂಬುದು ವಿಶೇಷ.


ಸದ್ಯಕ್ಕೆ ಈಗ “ಚಾಪ್ಟರ್ 2” ಸಿನಿಮಾ ಮೇಲೆ ಎಲ್ಲರಿಗೂ ನಿರೀಕ್ಷೆ ಹೆಚ್ಚಿದೆ. ಕಾರಣ, “ಚಾಪ್ಟರ್ 2” ಚಿತ್ರದಲ್ಲಿ ಸಂಜಯ್ ದತ್, ರವೀನಾ ಟಂಡನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿಯೇ ಒಂದಷ್ಟು ಹೆಚ್ಚು ಹಣ ಗಳಿಸುವ ಲೆಕ್ಕಾಚಾರದಲ್ಲಿ ಫರಾನ್ ಅಖ್ತರ್ ದೊಡ್ಡ ಮೊತ್ತ ಕೊಟ್ಟು ಹಕ್ಕು ಖರೀದಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು, ತೆಲುಗಿನಲ್ಲಿ ದಾಖಲೆ ಬೆಲೆಗೆ ಸೇಲ್ ಆಗಿರುವುದು ಕೂಡ ಸುದ್ದಿಯಾಗಿದೆ. ವರಾಹಿ ಸಂಸ್ಥೆ ಈಗ ಚಾಪ್ಟರ್ 2 ಚಿತ್ರಕ್ಕೆ ಸುಮಾರು 60 ಕೋಟಿ ನೀಡಿ ಡಿಜಿಟಲ್ ಹಾಗೂ ಸ್ಯಾಟ್‌ಲೈಟ್ ಹಕ್ಕು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Categories
ಸಿನಿ ಸುದ್ದಿ

ಇದು ಅನೈತಿಕ! ರಾಜ್‌ಮೌಳಿ ವಿರುದ್ಧ ಗುಡುಗಿದ ಬೋನಿ ಕಪೂರ್‌

ತಮ್ಮ “ಮೈದಾನ್‌” ಚಿತ್ರದ ದಿನದಂದೇ ‘ಆರ್‌ಆರ್‌ಆರ್‌’ ಬಿಡುಗಡೆಗೆ ನಿರ್ಮಾಪಕ ಕಿಡಿ

ಮೊನ್ನೆಯಷ್ಟೇ ನಿರ್ದೇಶಕ ರಾಜ್‌ಮೌಳಿ ತಮ್ಮ ಮಹತ್ವಾಕಾಂಕ್ಷೆಯ “ಆರ್‌ಆರ್‌ಆರ್‌” ತೆಲುಗು ಸಿನಿಮಾ ದಸರಾಗೆ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದರು. ಈ ಸಿನಿಮಾ ಮೂಲ ತೆಲುಗು ಸೇರಿದಂತೆ ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಡಬ್ಬಿಂಗ್ ಅವತರಣಿಕೆಗಳಲ್ಲಿ ಥಿಯೇಟರ್‌ಗೆ ಬರಲಿದೆ. ಇದೀಗ ಬಾಲಿವುಡ್ ನಿರ್ಮಾಪಕ ಬೋನಿಕಪೂರ್ ಇದಕ್ಕೆ ತಕರಾರು ತೆಗೆದಿದ್ದಾರೆ.

“ಅದೇ ದಿನ ನನ್ನ ನಿರ್ಮಾಣದ “ಮೈದಾನ್‌” ಹಿಂದಿ ಸಿನಿಮಾ ತೆರೆಕಾಣುತ್ತಿದೆ. ಆರು ತಿಂಗಳ ಹಿಂದೆಯೇ ನಾನು ಬಿಡುಗಡೆ ದಿನಾಂಕ ಘೋಷಿಸಿದ್ದೆ. ಇದು ಗೊತ್ತಿದ್ದೂ ರಾಜಮೌಳಿ ಅದೇ ದಿನ ತಮ್ಮ ಸಿನಿಮಾ ಬಿಡುಗಡೆ ಮಾಡಲು ಸನ್ನದ್ಧರಾಗಿದ್ದಾರೆ. ಇದು ಅನೈತಿಕ!” ಎಂದು ಹೇಳುವ ಮೂಲಕ ಗುಡುಗಿದ್ದಾರೆ ಬೋನಿಕಪೂರ್‌.
ಜೀ ಸ್ಟುಡಿಯೋಸ್‌ ಹಾಗೂ ಮತ್ತಿಬ್ಬರು ನಿರ್ಮಾಪಕರೊಡಗೂಡಿ ಬೋನಿಕಪೂರ್ “ಮೈದಾನ್‌” ಹಿಂದಿ ಚಿತ್ರ ನಿರ್ಮಿಸುತ್ತಿದ್ದಾರೆ. ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶನದ ಈ ಸಿನಿಮಾ, ಖ್ಯಾತ ಫುಟ್‌ಬಾಲ್ ಕೋಚ್‌ ಸೈಯದ್ ಅಬ್ದುಲ್‌ ರಹೀಂ ಅವರ ಜೀವನಕಥೆಯನ್ನು ಆಧರಿಸಿದ ಚಿತ್ರವಾಗಿದ್ದು, ಒಂದು ರೀತಿಯ ಹೊಸ ಪ್ರಯೋಗವಿದು. ಅಜಯ್ ದೇವಗನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಬಯೋಪಿಕ್‌ನಲ್ಲಿ ಪ್ರಿಯಾಮಣಿ ಹಿರೋಯಿನ್‌. ಹಾಗೆ ನೋಡಿದರೆ ರಾಜ್‌ಮೌಳಿ ನಿರ್ದೇಶನದ “ಆರ್‌ಆರ್‌ಆರ್‌” ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಒಂದೇ ದಿನ ಅಜಯ್‌ರ ಎರಡು ಚಿತ್ರಗಳು ತೆರೆಕಾಣಲಿವೆ.


“ಕೊರೋನಾ ಕಾಲದಲ್ಲಿ ಮೊದಲೇ ಸಿನಿಮಾರಂಗ ಬಸವಳಿದಿದೆ. ಹೀಗಿರುವಾಗ ಒಮ್ಮೆಗೇ ಎರಡು ದೊಡ್ಡ ಸಿನಿಮಾಗಳು ತೆರೆಕಂಡರೆ ನಿರ್ಮಾಪಕರಿಗೆ ನಷ್ಟವಾಗುತ್ತದೆ. ಒಟ್ಟಾರೆ ಸಿನಿಮೋದ್ಯಮಕ್ಕೆ ತೊಂದರೆ. ರಾಜ್‌ಮೌಳಿ ತಮ್ಮ ಸಿನಿಮಾ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಮಾಡುವುದು ಒಳಿತು” ಎಂದಿದ್ದಾರೆ ಬೋನಿಕಪೂರ್‌. ಇದಕ್ಕೆ “ಆರ್‌ಆರ್‌ಆರ್‌” ತಂಡದ ಪ್ರತಿಕ್ರಿಯೆ ಏನು ಎನ್ನುವ ಕುತೂಹಲದೊಂದಿಗೆ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

Categories
ಸಿನಿ ಸುದ್ದಿ

ನಿರ್ದೇಶಕ ಗುರು ಪ್ರಸಾದ್‌ ಮಠ ಸೇರ್ತಾರಾ ? ಹರಿದಾಡುತ್ತಿದೆ ಹಾಗೊಂದು ಸುದ್ದಿ !

ಕುತೂಹಲ ಇರೋದು, ಮಠ ಸೇರುವಂತಹ ಪರಿಸ್ಥಿತಿ ಅವರೀಗ್ಯಾಕೆ ಬಂತು ಅಂತ . ನಾವ್‌ ಹೇಳ್ತೀವಿ ಕೇಳಿ ಆ ಕತೆ…

ನಿರ್ದೇಶಕ ಗುರುಪ್ರಸಾದ್‌ ” ಮಠʼ ಸೇರ್ತಾರಾ ? ಸದ್ಯಕ್ಕೆ ಅದಿನ್ನು ಕನ್ಪರ್ಮ್‌ ಆಗಿಲ್ಲ. ಆದರೆ ರವೀಂದ್ರ ವಂಶಿ ನಿರ್ದೇಶನದ ಹೊಸ” ಮಠʼ ಚಿತ್ರದಲ್ಲಿ ಗುರುಪ್ರಸಾದ್‌, ಪ್ರಮುಖ ಪಾತ್ರದಲ್ಲೇ ಅಭಿನಯಿಸುತ್ತಿದ್ದಾರೆನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಅದರಲ್ಲೂ ಅವರದೇ ನಿರ್ದೇಶನದ “ಮಠʼ ಚಿತ್ರದಲ್ಲಿ ನಟ ಜಗ್ಗೇಶ್‌ ನಿರ್ವಹಿಸಿದ್ದ ಪಾತ್ರಕ್ಕೆ ಈಗ ಗುರುಪ್ರಸಾದ್‌ ಅವರೇ ಬಣ್ಣ ಹಚ್ಚುತ್ತಿದ್ದಾರೆನ್ನುವ ಮಾತುಗಳಿವೆ. ಇದು ಎಷ್ಟರ ಮಟ್ಟಿಗೆ ಗ್ಯಾರಂಟಿಯೋ ನಿಖರವಾಗಿಲ್ಲ. ಆದರೆ ಹಾಗೊಂದು ಸುದ್ದಿ ಮಾತ್ರ ಹರಿದಾಡುತ್ತಿದೆ.

ಇನ್ನು “ಮಠʼ ಕ್ಕೂ ಗುರು ಪ್ರಸಾದ್‌ ಅವರಿಗೂ ಅದೇನು ಕನೆಕ್ಟ್‌ ಅಂತ ವಿವರಿಸಿ ಹೇಳಬೇಕಿಲ್ಲ. ನಟ ಜಗ್ಗೇಶ್‌ ಹಾಗೂ ನಿರ್ದೇಶಕ ಗುರುಪ್ರಸಾದ್‌ ಜೋಡಿಯ ಸೂಪರ್‌ ಹಿಟ್‌ ಸಿನಿಮಾ “ಮಠʼ . ಇದು ಬಂದು ಹೋಗಿದ್ದು ೨೦೦೬ ರಲ್ಲಿ. ಆ ಹೊತ್ತಿಗೆ ಇದು ಸೂಪರ್‌ ಹಿಟ್‌ ಸಿನಿಮಾ. ಆದಾಗಲೇ ಜಗ್ಗೇಶ್‌ ಸ್ಟಾರ್‌ ನಟರೇ. ಅಷ್ಟಾಗಿಯೂ ಅವರನ್ನು ಇನ್ನೊಂದು ಬಗೆಯಲ್ಲಿ ಈ ಚಿತ್ರ ಪ್ರೇಕ್ಷಕರಿಗೆ ಪರಿಚಯಿಸಿತು.

ಅದರಾಚೆ ನಿರ್ದೇಶಕರಾಗಿ ಗುರುಪ್ರಸಾದ್‌ ದೊಡ್ಡ ಸಕ್ಸಸ್‌ ಕಂಡಿದ್ದು ಈ ಚಿತ್ರದ ಮೂಲಕವೇ. ಉಳಿದಂತೆ ಹೊಸ ವಿಷಯಕ್ಕೆ ಬಂದರೆ, ಅದೇ ಮಠ ಈಗ ನಿರ್ದೇಶಕ ರವೀಂದ್ರ ವಂಶಿ ನಿರ್ದೇಶನದೊಂದಿಗೆ ಹೊಸ “ಮಠʼ ವಾಗಿ ರೆಡಿ ಅಗುತ್ತಿದೆ.ಈ ಚಿತ್ರ ಆರಂಭದಲ್ಲಿ ದೊಡ್ಡದಾಗಿ ಸುದ್ದಿ ಅಗಿದ್ದು ಸಾಧು ಕೋಕಿಲ ಎಂಟ್ರಿಯ ಕಾರಣಕ್ಕೆ. ಸಾಧು ಕೋಕಿಲ ಅವರದ್ದು ಇಲ್ಲಿ ಪ್ರಮುಖ ಪಾತ್ರ. ಅಂದ್ರೆ, ಅವರಿಲ್ಲಿ ಬಿಡದಿಯ ಸತ್ಯಾನಂದ. ಅಲ್ಲಿ ಅವರದು “ನಿತ್ಯ ಆನಂದʼ.

ಅದೇ ಕಾರಣಕ್ಕೆ 2020 ಆರಂಭದಲ್ಲಿ ಭರ್ಜರಿ ಸುದ್ದಿ ಆಗಿ ಕುತೂಹಲ ಮೂಡಿಸಿದ್ದ ಈ ಚಿತ್ರ ಇನ್ನೇನು ಶುರುವಾಗುವ ಕೊರೋನಾ ಬಂತು. ಹಾಗಾಗಿ ಈ ಸಿನಿಮಾದ ಚಟುವಟಿಕೆಗಳು ಅರ್ಧದಲ್ಲೇ ನಿಂತು ಹೋಗಿದ್ದವು. ಈಗ ಕೊರೋನಾ ನಂತರ ಮತ್ತೆ ಈ ಸಿನಿಮಾಕ್ಕೆ ಚಾಲನೆ ಸಿಗುವುದು ಗ್ಯಾರಂಟಿ ಆಗಿದೆ. ಅದರ ಒಂದು ವಿಷಯ ಈಗ ಹೆಚ್ಚು ಸುದ್ದಿ ಆಗುತ್ತಿದೆ. ಹಳೇ ಮಠದಲ್ಲಿ ಜಗ್ಗೇಶ್‌ ನಿರ್ವಹಿಸಿದ್ದ ಪಾತ್ರವನ್ನು ಹೊಸ ಮಠದಲ್ಲಿ ನಿರ್ದೇಶಕ ಗುರು ಪ್ರಸಾದ್‌ ಅವರೇ ನಿರ್ವಹಿಸುತ್ತಿದ್ದಾರೆ ಅಂತ. ಉಳಿದ ವಿವರ ಇಷ್ಟರಲ್ಲಿಯೇ ಗೊತ್ತಾಗಲಿದೆ ಎಂಬುದಾಗಿಯೂ ಮೂಲಗಳು ಹೇಳುತ್ತಿವೆ.

Categories
ಸಿನಿ ಸುದ್ದಿ

ಟಿಪಿಕಲ್‌ ಮಲೆನಾಡು ಹುಡುಗ, ಅಡಿಕೆ ಬೆಳೆಗಾರ, ಜತೆಗೆ  ಗೊಬ್ಬರದ ಅಂಗಡಿ ಮಾಲೀಕ….. ಮಜವಾಗಿದೆ ದೂದ್ ಪೇಡಾ ದಿಗಂತ್ ಹೊಸ ಅವತಾರ!

ಚಿತ್ರೀಕರಣ ದ ಕ್ಲೈಮ್ಯಾಕ್ಸ್ ನಲ್ಲಿ ‘ ಕ್ಷಮಿಸಿ ನಿಮ್ಮ‌ ಖಾತೆಯಲ್ಲಿ ಹಣವಿಲ್ಲ’ ಚಿತ್ರ ತಂಡ

ನಾನೂ ಕೂಡ ಮಲೆ‌ನಾಡಿನ ಹುಡುಗ.‌ಪಾತ್ರವೂ ಕೂಡ ಟಿಪಿಕಲ್ ಮಲೆ ‌ನಾಡಿನ ಹುಡುಗನದ್ದು. ಹಳೇ ಮೋಟಾರ್ ಬೈಕು, 800 ಕಾರು, ಸೋನೆ‌ಮಳೆ, ಅಡಿಕೆ ಕೋಯ್ಲು….ಎಲ್ಲವೂ ನಿಜ ಜೀವನದ್ದೇ. ಮೇಲಾಗಿ  ಐಂದ್ರಿತಾ ರೇ ಜತೆಗೆ ಏಳು ವರ್ಷದ ನಂತರ ಅಭಿನಯ. ಇದೊಂದು ತುಂಬಾ ಸೊಗಸಾದ ಜರ್ನಿ…..

‌ನಟ ದೂದ್ ಪೇಡಾ  ಹೀಗೆ ಚಿತ್ರ ದಲ್ಲಿನ ತಮ್ಮ ಪಾತ್ರ, ಪತ್ನಿ ಐಂದ್ರಿತಾ ರೇ ಜತೆಗೆ ಮತ್ತೆ ಅಭಿನಯಿಸುತ್ತಿರುವ ಅನುಭವ ಬಿಚ್ಚಿಡುತ್ತಾ ಹೋದರು. ಅಂದ ಹಾಗೆ ಅವರು ಅಲ್ಲಿ ಹೇಳುತ್ತಾ ಹೋಗಿದ್ದು ’ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’  ಚಿತ್ರದ ಕುರಿತು. ಈ ಚಿತ್ರವೀಗ  ಶೇಕಡಾ  90ರಷ್ಟು ಭಾಗದ ಚಿತ್ರೀಕರಣ ಮುಗಿಸಿದೆ.  ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಜತೆಗೆ ಒಂದಷ್ಟು ಪ್ರಚಾರ ಕಾರ್ಯಕ್ಕೂ ಮುಂದಾಗಿದೆ. ಅದೇ ಸಲುವಾಗಿ ಇತ್ತೀಚೆಗೆ ಚಿತ್ರ ತಂಡ ಮಾಧ್ಯಮ ಮುಂದೆ ಬಂದಾಗ ಒಂದಷ್ಟು ಸಂಗತಿ ಹಂಚಿಕೊಂಡಿತು.
‘ನನ್ನ ಮಟ್ಟಿಗೆ ಇದೊಂದು ವಿಶೇಷವಾದ ಸಿನಿಮಾ. ಯಾಕಂದ್ರೆ ನಾನು ಕೂಡ ಮಲೆನಾಡಿನವನು.‌ಈ‌ಕತೆ ನಡೆಯುವುದು ಕೂಡ ಅಲೆಯೇ.‌ಹಾಗೆಯೇ ನನ್ನ ಪಾತ್ರವೂ ಕೂಡ .ಇದೆಲ್ಲ ನಂಗೆ ನಿಜ ಜೀವನದಲ್ಲೇ ಆದ ಅನುಭವ. ಹಾಗಾಗಿ ಈ ಸಿನಿಮಾವನ್ನು ಖುಷಿಯಿಂದಲೇ ಒಪ್ಪಿಕೊಂಡಿದ್ದೆ. ಅಷ್ಟೇ ಖುಷಿಯಲ್ಲೇ ಚಿತ್ರೀಕರದಲ್ಲಿ ಪಾಲ್ಗೊಂಡಿದ್ದೇನೆ ‘ಅಂತ ಹೇಳುತ್ತಾರೆ ದಿಗಂತ್‌.

‘ ಎರಡೂವರೆ ವರ್ಷದ ಪಯಣ ಇಲ್ಲಿಯತನಕ ತಂದು ನಿಲ್ಲಿಸಿದೆ. ‌ಚಿತ್ರದಲ್ಲಿ ಮಲೆನಾಡಿನ ಜನಜೀವನವನ್ನು ಬಿಂಬಿಸಲಾಗಿದೆ.  ದಿಗಂತ್‌ರವರು ಶಂಕರನಾಗಿ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಅವರ ಜೀವನದಲ್ಲಿ ನಡೆದ ಒಂದು ಘಟನೆಯಿಂದ ಏನೇನು ಅವಾಂತರಗಳು ಆಗುತ್ತದೆ. ಅದರಿಂದ ಹೇಗೆ ಹೊರಗೆ ಬರುತ್ತಾರೆ ಎಂಬುದನ್ನು ಹಾಸ್ಯದ ಮೂಲಕ ತೋರಿಸಲಾಗಿದೆ’ ಎಂದು ಹೇಳುವ ಮೂಲಕ ಚಿತ್ರದ ಕತೆಯ ಬಗ್ಗೆ ಕುತೂಹಲ ಮೂಡಿಸಿದರು ನಿರ್ದೇಶಕ. ವಿನಾಯಕ‌ ಕೊಡ್ಸರ.

ಇದೊಂದು ದೊಡ್ಡ ತಾರಾಗಣವಿರುವ ಚಿತ್ರ. ಐಂದ್ರಿತಾರೈ, ರಂಜನಿರಾಘವನ್  ಚಿತ್ರದ ನಾಯಕಿ ಯ‌ರು.‌ಅವರಂತೆಯೇ  ಉಮಾಶ್ರೀ, ವಿದ್ಯಾಮೂರ್ತಿ, ರವಿಕಿರಣ್, ಯಶ್‌ವಂತ್‌ ಸರ್‌ದೇಶಪಾಂಡೆ, ಕಾಸರಗೂಡುಚಿನ್ನ  ಕೂಡ ಇದ್ದಾರೆ.‌ಚಿತ್ರಕ್ಕೀಗ ಸಾಗರ, ಸಿಗಂದೂರು ಮತ್ತು ಬೆಂಗಳೂರು ಕಡೆಗಳಲ್ಲಿ ಶೂಟಿಂಗ್ ನಡೆದಿದೆ. ಹಾಗೆಯೇ ಶೇಕಡ ಐವತ್ತರಷ್ಟು ಡಬ್ಬಿಂಗ್ ಮುಗಿದಿದೆ . ಚಿತ್ರಕ್ಕೆ ಬಂಡವಾಳ ಹಾಕಿದವರು ಸಿಲ್ಕ್ ಮಂಜು.

‘ ಒನ್ ಲೈನ್ ಕತೆ ಹೇಳಿದ್ದು ಕುತೂಹಲ ಮೂಡಿಸಿತು. ಅದರಿಂದಲೇ ದೀರ್ಘ ಕಾಲದ ನಂತರ ಬಂಡವಾಳ ಹೂಡಿರುವುದು ನೆಮ್ಮದಿ ಸಿಕ್ಕಿದೆ. ಸದ್ಯದಲ್ಲೆ ಮತ್ತೋಂದು ಚಿತ್ರವನ್ನು ಮಾಡುವುದಾಗಿ  ಅವರು ಮಾಹಿತಿ ಕೊಟ್ಟರು.ನಟಿಯರಾದ ಐಂದ್ರಿತಾ ಹಾಗೂ ರಂಜನಿ ರಾಘವನ್ ಇಬ್ಬರು ಮಾತನಾಡಿ, ಚಿತ್ರ ಕತೆ ತುಂಬಾ ಚೆನ್ನಾಗಿದೆ ಎಂದರು‌.ಪ್ರಜ್ವಲ್ ಪೈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.‌ರವೀಂದ್ರ ಜೋಷಿ ಕಾರ್ಯಕಾರಿ ನಿರ್ಮಾಪಕರು. ಹಾಗೆಯೇ ನಂದ ಕಿಶೋರ್‌ ಛಾಯಾಗ್ರಹಣ,   ವೇಣುಹಸ್ರಾಳಿ ಸಂಭಾಷಣೆ, ಸಂಕಲನಕಾರ ರಾಹುಲ್ ಸಂಕಲನ  ಚಿತ್ರಕ್ಕಿದೆ. ಸದ್ಯಕ್ಕೆ ಇನ್ನಷ್ಟು ಚಿತ್ರೀಕರಣ ಬಾಕಿ ಉಳಿಸಿಕೊಂಡಿರುವ ಚಿತ್ರ ಅದೆಲ್ಲ ಮುಗಿಸಿಕೊಂಡು ಮೇ ತಿಂಗಳಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

error: Content is protected !!