Categories
ಸಿನಿ ಸುದ್ದಿ

ರಾಜ್ಯದ 30 ಚಿತ್ರಮಂದಿರಗಳಲ್ಲಿ ನಾಳೆ ʼಆರ್‌ ಆರ್‌ ಆರ್‌ʼ ಟ್ರೇಲರ್‌ ಲಾಂಚ್‌ !

ಎಸ್.‌ ಎಸ್.‌ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ʼಆರ್‌ ಅರ್‌ ಆರ್‌ʼ ಟ್ರೇಲರ್‌ ಲಾಂಚ್‌ಗೆ ಕೊನೆಗೂ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ ಡಿಸೆಂಬರ್‌ 9 ಕ್ಕೆ ಕರ್ನಾಟಕದಲ್ಲೂ ಆರ್‌ ಆರ್‌ ಆರ್‌ ಚಿತ್ರದ ಟ್ರೇಲರ್‌ ದಾಖಲೆಯ ಹಾಗೆ ಲಾಂಚ್‌ ಆಗಲಿದೆ. ಕನ್ನಡ ಚಿತ್ರ ರಂಗದ ಇತಿಹಾಸದಲ್ಲೇ ಇದೇ ಮೊದಲು ಎನ್ನುವ ಹಾಗೆ, ಆರ್‌ ಆರ್‌ ಆರ್‌ ಟ್ರೇಲರ್‌ ಒಟ್ಟು 30 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿಯೇ ಲಾಂಚ್‌ ಆಗುತ್ತಿದೆ. ಸಿನಿಮಾ ರಿಲೀಸ್‌ ಮಾದರಿಯಲ್ಲಿಯೇ ಚಿತ್ರ ತಂಡ ಟ್ರೇಲರ್‌ ಲಾಂಚ್‌ ಮಾಡುತ್ತಿದೆ.

ಬೆಂಗಳೂರಿನ ಲಾಲ್‌ ಬಾಗ್‌ ರಸ್ತೆಯ ಊರ್ವಶಿ ಚಿತ್ರ ಮಂದಿರ ಮೊದಲ್ಗೊಂಡು ಮಾಗಡಿ ರಸ್ತೆಯ ಅಂಜನ್‌, ಆಗರದ ತಿರುಮಲ, ಜೆ.ಪಿ. ನಗರದ ಸಿದ್ದೇಶ್ವರ, ಎಂಜಿ ರಸ್ತೆಯ ಶಂಕರ್‌ ನಾಗ್‌, ಸ್ಯಾಂಕಿ ರಸ್ತೆಯ ಕಾವೇರಿ, ಆರ್.ಟಿ. ನಗರದ ರಾಧಾಕೃಷ್ಣ ಸೇರಿದಂತೆ ಬೆಂಗಳೂರಿನ ಆಚೆಯೂ ಅಂದರೆ ಕೋಲಾರ, ಚಿಕ್ಕಬಳ್ಳಾಪುರ, ಮುಳುಬಾಗಿಲು, ದೊಡ್ಡ ಬಳ್ಳಾಪುರ, ಮೈಸೂರು, ವಿಜಿಪುರ, ದಾವಣಗೆರೆ, ಬಳ್ಳಾರಿ, ಹೊಸಪೇಟೆ, ಸಿರಗುಪ್ಪ ಸೇರಿದಂತೆ ತೆಲುಗು ಪ್ರಭಾವ ಇರುವ ರಾಜ್ಯದ ೩೦ ಚಿತ್ರಮಂದಿರಗಳಲ್ಲಿ ಟ್ರೇಲರ್‌ ಲಾಂಚ್‌ಗೆ ಚಿತ್ರದ ವಿತರಣೆಯ ಹಕ್ಕು ಪಡೆದಿರುವ ಕೆವಿಎನ್‌ ಸಂಸ್ಥೆ ಪ್ಲಾನ್‌ ಹಾಕಿಕೊಂಡಿದೆ.

ಟ್ರೇಲರ್‌ ಲಾಂಚ್‌ ಕಾರ್ಯಕ್ರಮವನ್ನೇ ಒಂದು ಹಬ್ಬದ ರೀತಿಯಲ್ಲಿ ಗ್ರಾಂಡ್‌ ಆಗಿ ಲಾಂಚ್‌ ಮಾಡಲು ಮುಂದಾಗಿರುವ ಚಿತ್ರ ತಂಡ ಚಿತ್ರ ರಿಲೀಸ್‌ ಅನ್ನು ಇನ್ನೇಗೆ ಸಂಭ್ರಮಿಸಬಹುದು ಅನ್ನೋದು ಸಹಜವಾಗಿಯೇ ಭಾರೀ ಕುತೂಹಲ ಹುಟ್ಟಿಸಿದೆ. ಇನ್ನು ಆರ್‌ ಆರ್‌ ಆರ್‌ ಟ್ರೇಲರ್‌ ಲಾಂಚ್‌ಗೆ ಈ ಮುಂಚೆಯೇ ಅಂದರೆ ಡಿಸೆಂಬರ್‌ 4ಕ್ಕೆ ದಿನ ನಿಗದಿ ಆಗಿತ್ತು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಅಂದೇ ಈ ಟ್ರೇಲರ್‌ ರಿವೀಲ್‌ ಆಗಲಿತ್ತು. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಅದು ಪೋಸ್ಟ್‌ ಪೋನ್ಡ್‌ ಆಗಿತ್ತು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಲಾಂಚ್‌ ಆಗಿದೆ “ಬಾಡಿ ಗಾಡ್” ಚಿತ್ರದ ಪವರ್ ಫುಲ್ ಸಾಂಗ್ಸ್‌ – ಕೇಳುಗರ ಮನಕಲುಕುತ್ತಿದೆ ಪವರ್‌ ಸ್ಟಾರ್ ವಾಯ್ಸ್‌ !

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನಗಲಿ ಒಂದು ತಿಂಗಳೇ ಕಳೆದಿದೆ. ಆದರೂ ದುಃಖ ಮಾಸಿಲ್ಲ. ಅಪ್ಪು ಅವರು “ಬಾಡಿಗಾಡ್” ಚಿತ್ರಕ್ಕಾಗಿ ಹಾಡಿರುವ “ಆರೇಸ ಡನ್ಕನಕ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬಾ ಅರ್ಥಗರ್ಭಿತವಾದ ಈ ಹಾಡನ್ನು ಎಸ್ ಕೆ ಎಸ್ ಬರೆದಿದ್ದಾರೆ. ಇತ್ತೀಚೆಗೆ ಈ ಹಾಡನ್ನು ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ.ಇಷ್ಟು ದಿನ ನನ್ನ ತಮ್ಮನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಇಂದು ಗೀತಾಂಜಲಿ ಸಲ್ಲಿಸಿದ್ದೇನೆ. ಅವನು ಇಲ್ಲ ಎಂದು ಕೊರಗುವುದು ಬೇಡ. ಅವನು ಹಾಡಿರುವ ಹಾಡಿನಲ್ಲಿ, ಮಾಡಿರುವ ಕೆಲಸದಲ್ಲಿ ಅವನಿದ್ದಾನೆ. ನಿರ್ದೇಶಕ ಪ್ರಭು ಶ್ರೀನಿವಾಸ್ ನನಗೆ ಮೊದಲಿನಿಂದಲೂ ಪರಿಚಯ. ಅವರ ಈ ಪ್ರಯತ್ನಕ್ಕೆ ಶುಭವಾಗಲಿ ಎಂದು ರಾಘಣ್ಣ ಹಾರೈಸಿದರು.

ಅಪ್ಪು ಸರ್ ಅವರನ್ನು ಭೇಟಿಯಾಗಿ ಈ ಹಾಡನ್ನು ಹಾಡಲು ಕೇಳಿದಾಗ, ಇದು ತುಂಬಾ ಹೈಪಿಚ್ ನಲ್ಲಿ ಹಾಡಬೇಕು. ನೋಡಿ ನನ್ನ ಧ್ವನಿ ಸರಿ ಹೊಂದುತ್ತದೆಯಾ? ಎಂದು ಕೇಳಿದರು. ಸರಿ ಹೊಂದದಿದ್ದಲ್ಲಿ ಬೇರೆ ಅವರ ಬಳಿ ಹಾಡಿಸಿ ಎಂದರು. ಇಲ್ಲ ಈ ಹಾಡನ್ನು ನೀವೇ ಹಾಡಬೇಕು ಎಂದು ಕೇಳಿದಾಗ, ಅವರ ಸ್ಟುಡಿಯೋದಲ್ಲೇ ಈ ಹಾಡು ಹಾಡಿದರು. ನನಗೆ ತಿಳಿದ ಹಾಗೆ ಇದೇ ಅವರು ಹಾಡಿರುವ ಕೊನೆಯ ಗೀತೆ ಅನಿಸುತ್ತದೆ.‌ ಈ ಹಾಡಿನಲ್ಲಿ‌ ಬರುವ ಕೆಲವು ಸಾಲುಗಳು ಪುನೀತ್ ಅವರಿಗೆ ಹತ್ತಿರವಾಗಿದೆ ಎಂದು ಅವರ ಮರಣದ ನಂತರ ತಿಳಿಯುತ್ತಿದೆ.

“ಬಾಡಿ ಗಾಡ್” ತೆರೆಗೆ ಬರಲು ಸಿದ್ದವಾಗಿದ್ದು, ಜನವರಿಯಲ್ಲಿ ತೆರೆಗೆ ತರುತ್ತೇವೆ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಪ್ರಭು ಶ್ರೀನಿವಾಸ್.ನನಗೆ ಅಪ್ಪು ಅವರು ಹಾಡುವ ಹಾಡಿಗೆ ಡ್ಯಾನ್ಸ್ ಮಾಡಬೇಕೆಂದು ಆಸೆಯಿತ್ತು. ಈ ಹಾಡಿನ ಬಗ್ಗೆ ಮಾತನಾಡಲು ನಿರ್ದೇಶಕರೊಂದಿಗೆ ಅಪ್ಪು ಸರ್ ಮನೆಗೆ ಹೋದಾಗ, ಅವರ ಸ್ವಾಗತ ನೋಡಿ ನನಗೆ ಆಶ್ಚರ್ಯವಾಯಿತು.‌ “ಬನ್ನಿ ಮನೋಜ್. ಹೇಗಿದ್ದೀರಿ.‌ ಆರು, ಏಳು ಸರಿ ಶಾಸಕರಾಗಿದ್ದ ಮತ್ತೆ ಉನ್ನತ ಹುದ್ದೆ ಅಲಂಕರಿಸಿದ ಪ್ರಸಿದ್ಧ ವ್ಯಕ್ತಿಯ ಮಗನಾಗಿದ್ದರು‌, ನಿಮ್ಮಲ್ಲಿ ಒಂದು ಚೂರು ಅಹಂ ಇಲ್ಲ” ಎಂದು ಅವರು ಹೇಳಿದ ಮಾತು ಇನ್ನೂ ಕಿವಿಯಲ್ಲೇ ಇದೆ. ಎಂದು ಭಾವುಕರಾದರು ನಾಯಕ ಮನೋಜ್.

ನಾನು ಮೊದಲ ಬಾರಿಗೆ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದೇನೆ. ಉತ್ತಮ ಪಾತ್ರ ನೀಡಿದ ನಿರ್ದೇಶಕರಿಗೆ ವಂದನೆಗಳು ಎಂದರು ನಾಯಕಿ‌ ದೀಪಿಕಾ. ಗೀತರಚನೆಕಾರ ಗೌಸ್ ಫಿರ್ ಅವರ ಬಳಿ ಸಹಾಯಕರಾಗಿದ್ದ ಎಸ್ ಕೆ ಎಸ್, ವೆಂಕಟೇಶ್ ಕುಲಕರ್ಣಿ, ಸಂಕಲನಕಾರ ಉಜ್ವಲ್ ಚಂದ್ರ ಹಾಗೂ ನೃತ್ಯ ನಿರ್ದೇಶಕ ರಾಜು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಪ್ರಭು ಶ್ರೀನಿವಾಸ್ ನಿರ್ದೇಶಿಸಿರುವ ಈ ಚಿತ್ರದ ನಾಯಕನಾಗಿ ಮೊಗ್ಗಿನ‌ ಮನಸ್ಸಿನ ಮನೋಜ್ ನಟಿಸಿದ್ದಾರೆ. ದೀಪಿಕಾ ನಾಯಕಿ.‌ ಮಠ ಗುರುಪ್ರಸಾದ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಪದ್ಮಜಾರಾವ್, ನಿರಂಜನ್, ಅಶ್ವಿನ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕರಣ್ ಬಿ ಕೃಪ ಈ ಚಿತ್ರಕ್ಕೆ ಸಂಗೀತ ನೀಡಿರುವ ಈ ಚಿತ್ರಕ್ಕೆ ವೇಲ್ ಮುರುಗನ್ ಅವರ ಛಾಯಾಗ್ರಹಣವಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಯೋಗರಾಜ್‌ ಭಟ್ಟರ ʼಪದವಿ ಪೂರ್ವʼ ಕ್ಕೆ ಸೇರಿದ ನಟಿ ದಿವ್ಯ ಉರುಡುಗ !

ಬಿಗ್‌ ಬಾಸ್‌ ಖ್ಯಾತಿಯ ನಟಿ ದಿವ್ಯ ಉರುಡುಗ ಮತ್ತೆ ನಟನೆಯಲ್ಲಿ ಬ್ಯುಸಿ ಆಗುತ್ತಿದ್ದಾರೆ. ಇದೀಗ ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್‌ರವರ ಜಂಟಿ ನಿರ್ಮಾಣದಲ್ಲಿ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ಚಿತ್ರ “ಪದವಿಪೂರ್ವ”ಕ್ಕೆ ಈಗ ದಿವ್ಯ ಉರುಡುಗ ಎಂಟ್ರಿ ಆಗಿರುವ ಹೊಸ ಸುದ್ದಿ ರಿವೀಲ್‌ ಆಗಿದೆ. ಅಂದ ಹಾಗೆ, ಈಗಾಗಲೇ ಪದವಿ ಪೂರ್ವ ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿರುವುದು ನಿಮಗೂ ಗೊತ್ತಿದೆ. ಅಂದ್ಮೇಲೆ ಈ ಚಿತ್ರದಲ್ಲಿ ಅವರೇನು ಪಾತ್ರ ಅಂತ ನಿಮಗೂ ಕುತೂಹಲ ಇರಬಹುದು. ಅದು ವಾಸ್ತವವೂ ಹೌದು. ದಿವ್ಯ ಉರುಡುಗ ಪದವಿ ಪೂರ್ವಕ್ಕೆ ಬಂದರೂ ನಾಯಕಿ ಆಗಿ ಅಲ್ಲ ಎನ್ನುವುದು ನಿಮಗೂ ಗೊತ್ತಿರುವ ಹಾಗೆಯೇ ಅವರಲ್ಲಿ ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದಾರಂತೆ. ಭಟ್ಟರ ತಂಡ ಸೇರಿದ್ದಕ್ಕೆ ಅವರಿಗೂ ಸಿಕ್ಕಾಪಟ್ಟೆ ಖುಷಿ ಆಗಿದೆಯಂತೆ.

ʼ ಭಟ್ಟರ ಸಿನಿಮಾ ಅಂದ್ರೆ ಹೆಚ್ಚೇನು ಹೇಳಬೇಕಿಲ್ಲ, ಅಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಇಲ್ಲಿ ಅವರು ನಿರ್ದೇಶನ ಮಾಡುತ್ತಿಲ್ಲ ಅಂದ್ರು ನಿರ್ಮಾಣ ಅವರದ್ದೇ ಆಗಿದೆ. ಹಾಗಾಗಿ ಅವರ ಸಿನಿಮಾಗಳ ಮೇಲೆ ಪ್ರೇಕ್ಷಕರಿಗೂ ಸಾಕಷ್ಟು ನಿರೀಕ್ಷೆ ಇದ್ದೇ ಇರುತ್ತದೆ. ನಂಗೆ ಅಂತಹ ಕುತೂಹಲ ಇತ್ತು. ಈಗ ಅವರದ್ದೇ ನಿರ್ಮಾಣದ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಖುಷಿ ಆಗಿದೆ ಅಂತ ನಟಿ ದಿವ್ಯ ಉರುಡುಗ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇನ್ನು ದಿವ್ಯ ನಟಿಸಲಿರುವ ಭಾಗದ ಚಿತ್ರೀಕರಣವು ಬೆಂಗಳೂರು ಹಾಗು ಮಂಗಳೂರಿನ ಸುತ್ತಮುತ್ತ ಶೀಘ್ರದಲ್ಲೇ ಶುರು ಆಗಲಿದ್ದು, ಚಿತ್ರದ ಐದನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ. ಇದು ಹರಿಪ್ರಸಾದ್‌ ಜಯಣ್ಣ ನಿರ್ದೇಶನದ ಚಿತ್ರ. ಚಿತ್ರದ ನಾಲ್ಕನೇ ಹಂತದ ಚಿತ್ರೀಕರಣವು ಕಳೆದ ತಿಂಗಳಷ್ಷೇ ಪೂರ್ಣಗೊಂಡಿದ್ದು, ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಸಿದ ಚಿತ್ರೀಕರಣದ ದೃಶ್ಯಗಳು ಅತ್ಯಂತ ಸೊಗಸಾಗಿ ಮೂಡಿಬಂದಿದೆಯಂತೆ.

ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಯೋಜಿಸಿರುವ ರಾಗಗಳಿಗೆ ಕನ್ನಡ ಶೋತೃಗಳ ವಿಕಟಕವಿ ಯೋಗರಾಜ್ ಭಟ್ ಸಾಹಿತ್ಯ ರಚಿಸಿದರೆ, ಖ್ಯಾತ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಮಧು ತುಂಬಕೆರೆಯ ಸಂಕಲನದ ಕೈಚಳಕ ಚಿತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ ಎನ್ನುವುದು ಚಿತ್ರ ತಂಡದ ಮಾತು

  • ಎಂಟರ್‌ ಟೈನ್‌ ಮೆಂಟ್‌ ಸಿನಿಲಹರಿ
Categories
ಸಿನಿ ಸುದ್ದಿ

ಕಾಶೀನಾಥ್‌ ಪುತ್ರನ ಚಿತ್ರಕ್ಕೆ ಹಾಡು ಹಾಡಿ ಸಾಥ್‌ ನೀಡಿದ ಅಭಿನಯ ಚಕ್ರವರ್ತಿ -ಶೂಟಿಂಗ್‌ ಮುಗಿಸಿ ನಿಂತ ʼಎಲ್ಲಿಗೆ ಪಯಣ ಯಾವುದೋ ದಾರಿ”

ಅಭಿಮನ್ಯು ಕಾಶೀನಾಥ್‌ ಅಭಿನಯದ ಚಿತ್ರʼಎಲ್ಲಿಗೆ ಪಯಣ ಯಾವುದೋ ದಾರಿʼ ಶೂಟಿಂಗ್‌ ಮುಗಿಸಿದೆ. ಥ್ರಿಲ್ಲರ್‌ ಜಾನರ್‌ ನ ಈ ಸಿನಿಮಾ ವಿಭಿನ್ನ ಕಾರಣಕ್ಕೆ ಸದ್ದು ಮಾಡುತ್ತಿದೆ. ಅದರಲ್ಲೂ ಈ ಚಿತ್ರದ ಒಂದು ಹಾಡಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಹಾಡಿದ್ದಾರೆಂದರೆ ಅಲ್ಲೇನೋ ವಿಶೇಷತೆ ಇದೆ ಎಂದೇ ಅರ್ಥ.

………………………………………………

ಕನ್ನಡದ ಹೆಸರಾಂತ ನಟ, ನಿರ್ದೇಶಕ ಕಾಶೀನಾಥ್‌ ಪುತ್ರ ಅಭಿಮನ್ಯು ಕಾಶೀನಾಥ್‌ ಅಭಿನಯದ ʼಎಲ್ಲಿಗೆ ಪಯಣ ಯಾವುದೋ ದಾರಿʼ ಚಿತ್ರಕ್ಕೆ ಶೂಟಿಂಗ್‌ ಮುಗಿದಿದೆ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯ ವಿವಿಧೆಡೆಗಳಲ್ಲಿ ಸುಂದರ ತಾಣಗಳಲ್ಲಿ ಚಿತ್ರ ತಂಡ ಒಟ್ಟು 108 ದಿನಗಳ ಕಾಲ ಚಿತ್ರೀಕರಣ ನಡೆಸಿ, ಬೆಂಗಳೂರಿಗೆ ವಾಪಾಸ್‌ ಆಗಿದೆ. ಕಿರಣ್‌ ಸೂರ್ಯ ನಿರ್ದೇಶನ ಈ ಚಿತ್ರವು ವಿಭಿನ್ನ ಕಥಾ ಹಂದರ ಹೊಂದಿದೆ. ಥ್ರಿಲ್ಲರ್‌ ಜಾನರ್‌ ನ ಈ ಕಥೆಗೆ ನಿರ್ದೇಶಕ ಕಿರಣ್‌ ಸೂರ್ಯ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಸುದರ್ಶನ ಆರ್ಟ್ಸ್ ಲಾಂಛನದಲ್ಲಿ ಜತಿನ್ ಜಿ ಪಟೇಲ್ ಹಾಗೂ ಚೇತನ್ ಕೃಷ್ಣ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಾಶೀನಾಥ್‌ ಪುತ್ರ ಅಭಿಮನ್ಯ ಕಾಶೀನಾಥ್‌ ಅವರಿಗೆ ಇಲ್ಲಿ ಸ್ಪೂರ್ತಿ ಉಡಿಮನೆ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ವಿಜಯಶ್ರಿ ಕಲಬುರ್ಗಿ ಕೂಡ ನಾಯಕಿ ಆಗಿ ಅಭಿನಯಿಸಿದ್ದಾರೆ. ಹೆಸರಾಂತ ನಟ ಬಲ ರಾಜವಾಡಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಚಿತ್ರದಲ್ಲಿ ಎರಡು ಹಾಡುಗಳಿದ್ದು, ಅನಂತ್‌ ಕಾಮತ್‌ ಸಂಗೀತ ನೀಡಿದ್ದಾರೆ. ವಿಶೇಷ ಅಂದ್ರೆ ಎರಡು ಹಾಡುಗಳ ಪೈಕಿ ಒಂದು ಹಾಡಿಗೆ ಅಭಿನಯ ಚಕ್ರವರ್ತಿ ಕಿಚ್‌ ಸುದೀಪ್‌ ಧ್ವನಿ ನೀಡಿದ್ದಾರೆ. ಹೊಸಬರ ತಂಡಕ್ಕೆ ನಟ ಸುದೀಪ್‌ ತಮ್ಮದೇ ರೀತಿಯಲ್ಲಿ ಸಾಥ್‌ ನೀಡಿ, ಶುಭ ಹಾರೈಸಿದ್ದಾರೆ. ಚಿತ್ರದ ತಂಡ ಇಷ್ಟರಲ್ಲಿಯೇ ಈ ಸಾಂಗ್‌ ಲಾಂಚ್‌ ಮೂಲಕ ಸದ್ದು ಮಾಡಲು ಸಜ್ಜಾಗುತ್ತಿದೆ. ಚಿತ್ರಕ್ಕೆ ಸತ್ಯ ಛಾಯಾಗ್ರಹಣ, ಗಣೇಶ್ ನಿರ್ಚಲ್ ಸಂಕಲನ ಹಾಗೂ ವಿಶ್ವ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ʼಮಾಫಿಯಾʼಕ್ಕೆ ಹೋಗುವ ಮುನ್ನ ಹೇರ್‌ ಕಟ್‌ ಮಾಡಿಸಿದ ಡೈನಾಮಿಕ್‌ ಪ್ರಿನ್ಸ್‌ – ತಲೆ ಕೂದಲು ದಾನದಲ್ಲೂ ಮಾನವೀಯತೆ ಮೆರೆದ ನಟ !

ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಹೇರ್‌ ಕಟ್‌ ಮಾಡಿಸಿದ್ದಾರೆ. ಅರೆ, ಹೇರ್‌ ಕಟ್‌ ಮಾಡಿಸಿದ್ರಲ್ಲೇನು ಅಂತ ವಿಶೇಷ ಅಂತ ಗುರ್‌ ಅನ್ಬೇಡಿ, ಅವರು ಎರಡು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಉದ್ದನೆಯ ತಲೆ ಕೂದಲನ್ನು ಈಗ ಎರಡು ಕಾರಣಕ್ಕಾಗಿ ಕಟ್‌ ಮಾಡಿಸಿಕೊಡಿದ್ದಾರೆ. ಒಂದು ಅವರು ಮುಂದೆ ಅಭಿನಯಸಲಿರುವ ಬಹುನಿರೀಕ್ಷಿತ ಮಾಫಿಯಾ ಚಿತ್ರಕ್ಕಾಗಿ. ಇನ್ನೊಂದು ಕಾರಣ ಒಂದು ಸಾಮಾಜಿಕ ಉದ್ದೇಶಕ್ಕಾಗಿ. ಅವರೆಡು ಕಾರಣಕ್ಕೆ ಈಗ ಹೇರ್ ಕಟ್‌ ಮಾಡಿಸಿಕೊಂಡಿರುವ ನಟ ಪ್ರಜ್ವಲ್‌ ದೇವರಾಜ್‌ ಮಾಫಿಯಾ ಜಗತ್ತಿಗೆ ಇಳಿಯಲು ಸಜ್ಜಾಗಿದ್ದಾರೆ. ಅದಕ್ಕಾಗಿಯೇ ಈಗ ಹೊಸ ಲುಕ್‌ ನೊಂದಿಗೆ ಸಖತ್‌ ಪೋಸು ನೀಡಿರುವುದು ಕೂಡ ಇಲ್ಲಿ ವಿಶೇಷವೇ ಹೌದು. ಅವರ ಈ ನಯಾ ಅವತಾರದ ಬಗ್ಗೆ ಆಮೇಲೆ ಹೇಳ್ತೀವಿ, ಈಗ ಅವರು ಹೇರ್‌ ಕಟ್‌ ಮಾಡಿಸಿ, ದಾನ ಮಾಡಿದ ಕಥೆ ಕೇಳಿ.

ಈಗ ಕೂದಲು ದಾನದ ಬಗ್ಗೆ ನೀವೇ ಕೇಳಿಯೇ ಇರುತ್ತೀರಿ, ಕ್ಯಾನ್ಸರ್‌ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ಸೆಲಿಬ್ರಿಟಿಗಳು ಕೂದಲು ದಾನ ಮಾಡುವುದೀಗ ಒಂಥರ ಟ್ರೆಂಡ್‌ ಆಗಿದೆ. ಕಳೆದ ಕೆಲವು ದಿನಗಳ ಹಿಂದೆ ನಟ ಧ್ರುವ ಸರ್ಜಾ ಕೂಡ ತಾವು ʼಪೊಗರುʼ ಚಿತ್ರದ ರಗಡ್‌ ಲುಕ್‌ ಗೆ ಅಂತ ದಟ್ವಾಗಿ ಬೆಳೆಸಿದ್ದ ತಲೆ ಕೂದಲು ಕತ್ತರಿಸಿ, ಅದನ್ನು ಕ್ಯಾನ್ಸರ್‌ ರೋಗಿಗಳಿಗೆ ದಾನವಾಗಿ ಕೊಟ್ಟಿದ್ದರು. ಅದೇ ರೀತಿ ಸಾಕಷ್ಟು ನಟರು ಕೂಡ ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗ ತಮ್ಮ ಬಹುನಿರೀಕ್ಷಿತ ʼಮಾಫಿಯಾʼ ಚಿತ್ರದ ಅವತಾರಕ್ಕೆ ಅಂತ ನಟ ಪ್ರಜ್ವಲ್‌ ದೇವರಾಜ್‌ ಕಳೆದ ಎರಡು ವರ್ಷಗಳಿಂದ ದಟ್ಟವಾಗಿ ಬೆಳೆಸಿದ್ದ ಉದ್ದನೆಯ ತಲೆ ಕೂದಲಿಗೆ ಕತ್ತರಿ ಹಾಕಿಸಿಕೊಂಡಿದ್ದಾರೆ. ಹಾಗೆಯೇ ಆ ಕೂದಲನ್ನು ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇನ್ನು ʼಮಾಫಿಯಾʼ ಪ್ರಜ್ವಲ್‌ ದೇವರಾಜ್‌ ಅಭಿನಯದ35 ಚಿತ್ರ. “ಮಮ್ಮಿ”ಹಾಗೂ “ದೇವಕಿ”ಚಿತ್ರಗಳ ಖ್ಯಾತಿಯ ಲೋಹಿತ್ ಇದರ ನಿರ್ದೇಶಕ. ಹಾಗೆಯೇ ಪ್ರಜ್ವಲ್ ದೇವರಾಜ್ ಅವರಿಗೆ ಇಲ್ಲಿ ನಟಿ ಅದಿತಿ ಪ್ರಭುದೇವ್‌ ಜೋಡಿ. ಈ ಚಿತ್ರದ ಮುಹೂರ್ತ ಸಮಾರಂಭ ಡಿಸೆಂಬರ್ 2ರಂದು ನಡೆಯಲಿದೆ. ಚಿತ್ರೀಕರಣ ಡಿಸೆಂಬರ್ 6 ರಿಂದ ಆರಂಭವಾಗಲಿದೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್.ಬಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಅನೂಪ್ ಸೀಳಿನ್ ಸಂಗೀತ, ಮಾಸ್ತಿ ಸಂಭಾಷಣೆ ಹಾಗೂ ತರುಣ್‌ ಛಾಯಾಗ್ರಹಣ ವಿದೆ.

  • ಎಂಟರ್‌ ಟೈನ್ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಗ್ಯಾಂಗ್‌ ಸ್ಟರ್‌ ಪಾತ್ರದಲ್ಲಿ ಶಾನ್ವಿ ಶ್ರೀವಾಸ್ತವ್-‌ ಇಲ್ಲಿ ಡ್ಯಾಡಿ ಆಗಿದ್ದಾರೆ ಗಾಯಕ ರಘು ದೀಕ್ಷಿತ್‌ !

ಅವನೇ ಶ್ರೀಮನ್ನಾರಾಯಣ ಚಿತ್ರದ ಖ್ಯಾತಿಯ ನಟಿ ಶಾನ್ವಿ ಶ್ರೀವಾಸ್ತವ್‌ ʼಕಸ್ತೂರಿ ಮಹಲ್‌ʼ ಪ್ರವೇಶಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಅದೀಗ ತೆರೆಗೆ ಬರುವುದಕ್ಕೂ ರೆಡಿಯಾಗಿದೆ. ಈ ನಡುವೆಯೇ ಅವರೀಗ ಬ್ಯಾಂಗ್‌ ಹೆಸರಿನ ಚಿತ್ರಕ್ಕೂ ಬಣ್ಣ ಹಚ್ಚಿದ್ದು, ಅಲ್ಲಿ ಅವರು ಗ್ಯಾಂಗ್‌ ಸ್ಟರ್‌ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅದೀಗ ರಿಲೀಸ್‌ ಹತ್ತಿರಕ್ಕೆ ಬಂದಿದೆ. ಇತ್ತೀಚೆಗಷ್ಟೇ ಆ ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ಲಾಂಚ್‌ ಆಯಿತು. ವಸಂತ್‌ ಕುಮಾರ್‌ ಹಾಗೂ ಪೂಜಾ ವಸಂತ್‌ ಕುಮಾರ್‌ ನಿರ್ಮಾಣದ ಈ ಚಿತ್ರಕ್ಕೆ ಗಣೇಶ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಹೆಸರಿಗೆ ತಕ್ಕಂತೆ ಇದೊಂದು ಡಾರ್ಕ್‌ ಕಾಮಿಡಿ ಹಾಗೂ ಆಕ್ಷನ್ ಥ್ರಿಲ್ಲರ್ ಚಿತ್ರವಂತೆ.

ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಗಣೇಶ್‌ ಪರಶುರಾಮ್‌, ಇದು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲರಿಗೂ ಹಿಡಿಸುವ ಕಥೆ. ನಲವತ್ತೆಂಟು ಘಂಟೆಗಳಲ್ಲಿ ನಡೆಯುವ ಘಟನೆಯೊಂದನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಮೊದಲ ಬಾರಿಗೆ ಶಾನ್ವಿ ಶ್ರೀವಾಸ್ತವ್ ಇಲ್ಲಿ ಗ್ಯಾಂಗ್ ಸ್ಟರ್ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಇದೇ ಪ್ರಥಮ ಬಾರಿಗೆ ಡ್ಯಾಡಿ ಎಂಬ ಪಾತ್ರದ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ ಎಂದರು. ವಿಶೇಷ ಅಂದ್ರೆ ಈ ಚಿತ್ರವು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ತೆರೆಗೆ ಬರುತ್ತಿದೆ. ಫೆಬ್ರವರಿಗೆ ರಿಲೀಸ್‌ ಪ್ಲಾನ್‌ ಹಾಕಿಕೊಂಡಿದೆ ಚಿತ್ರ ತಂಡ. ಅದಕ್ಕೂ‌ ಮುನ್ನ ‌ಜನವರಿಯಲ್ಲಿ ಟ್ರೇಲರ್ ಲಾಂಚ್‌ ಆಗಲಿದೆಯಂತೆ.


ಚಿತ್ರಕ್ಕೆ ತಾವು ಎಂಟ್ರಿಯಾದ ಬಗ್ಗೆ ಹಾಗೂ ತಮ್ಮ ಪಾತ್ರದ ಬಗ್ಗೆ ನಟಿ ಶಾನ್ವಿ ಶ್ರೀವಾಸ್ತವ್‌ ಹೇಳಿಕೊಂಡರು.ʼ ನಾನು ಈ ರೀತಿ ಪಾತ್ರ ಯಾವತ್ತೂ ಮಾಡಿಲ್ಲ.‌ ಮೊದಲು ಯೋಚನೆ ಮಾಡಿದ್ದೆ. ನನಗೆ ಈ ಪಾತ್ರ ಸರಿ ಹೊಂದುತ್ತದೊ ಇಲ್ಲವೋ? ಎಂದು. ಮೊದಲ ದಿನ ಚಿತ್ರೀಕರಣಕ್ಕೆ ಹೋದಾಗ, ನಾನು‌ ನಿರ್ಧಾರ ಸರಿ ಅನಿಸಿತು. ನಾಯಕಿಯಾಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇಂತಹ ಪಾತ್ರಗಳು ಬರುವುದು ಕಡಿಮೆ. ಕಥೆ ತುಂಬಾ ಚೆನ್ನಾಗಿದೆ ಎಂದರು ಶಾನ್ವಿ ಶ್ರೀವಾಸ್ತವ್. ಹಾಗೆಯೇ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ತಾವು ಡ್ಯಾಡಿ ಯಾದ ಕಥೆ ಬಿಚ್ಚಿಟ್ಟರು. ʼ ಗೆಳೆಯ ರಿತ್ವಿಕ್ ಹಾಗೂ ನಿರ್ದೇಶಕ ಗಣೇಶ್ ಮಾತನಾಡಲು ಮನೆಗೆ ಬಂದರು. ನಾನು ಸಂಗೀತ ನಿರ್ದೇಶನ ಅಥವಾ ಹಾಡು ಹಾಡಿಸುವುದಕ್ಕಾಗಿ ಕೇಳಲು ಮನೆಗೆ ಬಂದಿದ್ದಾರೆ ಅಂದು ಕೊಂಡೆ. ನಂತರ ಅವರು ನೀವು ಈ ಚಿತ್ರದಲ್ಲಿ ನಟಿಸಬೇಕೆಂ ದರು.‌ ಒಂದು ಸಲ ಆಶ್ಚರ್ಯವಾಯಿತು. ಮೊದಲು ನಾನು ಒಪ್ಪಲಿಲ್ಲ. ನಂತರ ಅವರ ಒತ್ತಡಕ್ಕೆ ಮಣಿದು ಒಪ್ಪಿಕೊಂಡೆ. ಡ್ಯಾಡಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಒಳ್ಳೆಯ ನಿರ್ಮಾಪಕ ರೊಂದಿಗೆ ಹಾಗೂ ಚಿತ್ರತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆʼ ಎಂದರು ರಘು ದೀಕ್ಷಿತ್.

ಚಿತ್ರದಲ್ಲಿ ನಾಲ್ಕು ಸ್ನೇಹಿತರ ಪಯಣದಲ್ಲಿ ಈ ಕಥೆ ನಡೆಯುತ್ತದೆ. ಚಿತ್ರದ‌ ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್ ಆರವ್ ಪಾತ್ರದಲ್ಲಿ, ಸುನೀಲ್ ತಮ್ಮದೇ ಹೆಸರಿನ ಪಾತ್ರದಲ್ಲಿ, ನಾಟ್ಯ ರಂಗ ಭೂಷಣ್ ಆಗಿ‌ ಹಾಗೂ ಸಾತ್ವಿಕ ಅವರು ಸಿರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ನಾಲ್ಕು ಜನರು ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು. ಛಾಯಾಗ್ರಾಹಕ ಉದಯಲೀಲ, ಸಂಕಲನಕಾರ ಹಾಗೂ‌ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿರುವ ವಿಜೇತ್ ಚಂದ್ರ ಚಿತ್ರದ ತಮ್ಮ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಯು.ಕೆ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.‌ ಈಗಾಗಲೇ ಆನ ಹಾಗೂ ನಾನು, ಅದು ಮತ್ತು ಸರೋಜ ಚಿತ್ರಗಳನ್ನು ನಿರ್ಮಾಣ ಮಾಡಿರುವ ಪೂಜಾ ವಸಂತಕುಮಾರ್ ಅವರ ನಿರ್ಮಾಣದ ಮೂರನೇ ಚಿತ್ರ ‘ಬ್ಯಾಂಗ್’.
ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ

Categories
ಸಿನಿ ಸುದ್ದಿ

ದೊಡ್ಡಣ್ಣ ಬಡಾವಣೆಗೆ ದೊಡ್ಮನೆ ಮಗನ ಹೆಸರು- ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನಾಮಫಲಕ ಅನಾವರಣ ಮಾಡಿದ್ರು ಫ್ಯಾನ್ಸ್‌ !

ಅಭಿಮಾನಿಗಳ ಪ್ರೀತಿಯ ಅಪ್ಪು, ನಿಜಕ್ಕೂ ಅಜಾರಾಮರ. ಅಭಿಮಾನಿಗಳ ಮನೆ-ಮನದಲ್ಲಿ ಮಾತ್ರವಲ್ಲ ಅಪ್ಪು ಹೆಸರು, ನಾಡಿನ ಗಲ್ಲಿ ಗಲ್ಲಿಗಳಲ್ಲೂ ಅಚ್ಚಾಗುತ್ತಿದೆ. ಆಕಾಲಿಕವಾಗಿ ನಿಧನರಾದ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಹೆಸರನ್ನು ಚಿರಕಾಲ ಉಳಿಸುವ ಪ್ರಯತ್ನದಲ್ಲಿ ಅವರ ಅಭಿಮಾನಿಗಳು ಈಗಾಗಲೇ ಅವರ ಪ್ರತಿಮೆಗಳನ್ನು ಸ್ಥಾಪಿಸಿದ್ದು ಮಾತ್ರವಲ್ಲ, ತಮ್ಮೂರಿನ ರಸ್ತೆಗಳಿಗೂ ಅಪ್ಪು ಹೆಸರಿಡುತ್ತಿರುವ ಘಟನೆಗಳಿಗೆ ಈಗ ಬೆಂಗಳೂರಿನ ಹೆಗ್ಗಡೆದೇವನಪುರದ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಹೆಗ್ಗಡದೇವನಪುರದ ದೊಡ್ಡಣ್ಣ ಬಡಾವಣೆಯ ಮುಖ್ಯ ರಸ್ತೆಗೆ ಈಗ ಅಪ್ಪು ರಸ್ತೆ ಅಂತ ನಾಮಕರಣ ಮಾಡಲಾಗಿದೆ. ಹಾಗೆಯೇ ಅಲ್ಲಿ ದೊಡ್ಡದೊಂದು ನಾಮಫಲಕ ಹಾಕಿ, ಅಪ್ಪು ಅವರ ಹೆಸರನ್ನು ಅನುಗಾಲವೂ ಅಜರಾಮರವಾಗುಳಿಸುವಂತೆ ಮಾಡಲಿದ್ದಾರೆ. ʼಅಪ್ಪು ರಸ್ತೆʼ ಯ ನಾಮಫಲಕವನ್ನು ಸೋಮವಾರ ಉದ್ಘಾಟಿಸಲಾಯಿತು.

ಅಂದ ಹಾಗೆ, ಸೋಮವಾರಕ್ಕೆ ನಟ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ನಿಧನರಾಗಿ ಒಂದು ತಿಂಗಳಾಯಿತು. ಇದೇ ಕಾರಣಕ್ಕೆ ಸೋಮವಾರ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಪ್ಪು ಸಮಾಧಿಗೆ ಅವರ ಕುಟುಂಬ ವರ್ಗದವರು ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಅತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಹೆಗ್ಗಡದೇವನಪುರದಲ್ಲೂ ನಟ ಪುನೀತ್‌ ರಾಜಕುಮಾರ್‌ ಅಭಿಮಾನಿಗಳು ಕೂಡ ಸೋಮವಾರ ಅಪ್ಪು ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದರು. ವಿಶೇಷವಾಗಿ ಅಪ್ಪು ಮೇಲಿನ ಅಭಿಮಾನಕ್ಕೆ ಹೆಗ್ಗಡದೇವನಪುರದ ದೊಡ್ಡಣ ಬಡಾವಣೆಯ ಮುಖ್ಯರಸ್ತೆಗೆ ʼಅಪ್ಪು ರಸ್ತೆʼ ಎಂದು ನಾಮಕರಣ ಮಾಡಿ, ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನ ಮೆರೆದರು.

ʼ ರಾಜ್‌ ಕುಟುಂಬದಲ್ಲಿ ನಾವು ತುಂಬಾ ಇಷ್ಟ ಪಡುತ್ತಿದ್ದ ನಟ ಪುನೀತ್‌ ರಾಜಕುಮಾರ್.‌ ಅದಕ್ಕೆ ಕಾರಣ ಸಿನಿಮಾ ಮೇಲಿನ ಅವರ ಬದ್ದತೆ ಮತ್ತು ಪ್ರೀತಿ. ಹಾಗಾಗಿ ಆರಂಭದಿಂದಲೂ ಅವರ ಸಿನಿಮಾಗಳನ್ನು ನೋಡುತ್ತಾ ಬಂದ ನಮಗೆ ಅವರ ಸಿನಿಮಾಗಳು ಬಿಡುಗಡೆ ಅಂದ್ರೆ ಒಂದ್ರೀತಿ ಹಬ್ಬವೇ ಎನ್ನುವಂತೆಯೇ ಇತ್ತು. ಅವರು ಅಭಿನಯಿಸಿದ ಯಾವುದೇ ಸಿನಿಮಾಗಳನ್ನು ನಾವು ನೋಡದೆ ಬಿಟ್ಟಿಲ್ಲ. ಹಾಗೆಯೇ ಅವರಿಗಿದ್ದ ಸಾಮಾಜಿಕ ಕಾಳಜಿಯೂ ಕೂಡ ನಾವು ಅವರನ್ನು ಹೆಚ್ಚು ಪ್ರೀತಿಸಲು ಕಾರಣ. ಇವತ್ತು ಪ್ರಚಾರಕ್ಕಾಗಿಯೇ ಸಮಾಜ ಸೇವೆ ಮಾಡುವವರ ನಡುವೆ ಅವರು ತಾವು ಮಾಡಿದ ಯಾವುದೇ ಸಾಮಾಜಿಕ ಕೆಲಸವೂ ಪ್ರಚಾರಕ್ಕೆ ಬರಬಾರದು ಅಂತ ತೆರೆಮರೆಯಲ್ಲಿಯೇ ಮಂದಿ ಮಕ್ಕಳಿಗೆ, ಅಸಹಾಯಕರಿಗೆ ಸೇವೆ ಮಾಡುತ್ತಾ ಬಂದಿದ್ದರು. ಆದರೆ ಅವರಿಲ್ಲದ ಈಕ್ಷಣವನ್ನು ನಾವು ಅರಗಿಸಿಕೊಳ್ಳುವುದಕ್ಕೂ ಆಗುತ್ತಿಲ್ಲ. ಅವರು ಮಾಡಿದ ಸಾಮಾಜಿಕ ಕೆಲಸ ಮಾತ್ತು ಸಿನಿಮಾ ಬದ್ದತೆಯನ್ನು ಚಿರಕಾಲ ನೆನಪಿಸಿಕೊಳ್ಳಬೇಕೆಂಬ ಕಾರಣಕ್ಕೆ ನಮ್ಮದೊಂದು ಸಣ್ಣ ಕೆಲಸ ಅಂತ ಈ ರಸ್ತೆಗೆ ಅಪ್ಪು ರಸ್ತೆ ಅಂತ ನಾಮಕರಣ ಮಾಡಿದ್ದೇವೆ ಎನ್ನುತ್ತಾರೆ ದೊಡ್ಡಣ್ಣ ಬಡಾವಣೆಯ ನಿವಾಸಿ ಮಂಜು.

ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಓಮಿಕ್ರಾನ್‌, ಓಮಿಕ್ರಾನ್…‌ಎಲ್ಲೆಲ್ಲೂ ಈಗ ಓಮಿಕ್ರಾನ್‌ ವೈರಸ್‌ ಭೀತಿ – ಸಿನಿಮಾ ಥಿಯೇಟರ್‌ಗಳಿಗೂ ತಟ್ಟುತ್ತಾ ಈ ವೈರಸ್‌ ಬಿಸಿ ?

ಉಸ್ಸಪ್ಪಾ ಅಂತ ಚಿತ್ರೋದ್ಯಮ ಈಗಷ್ಟೇ ಸುಧಾರಿಸಿಕೊಂಡಿದೆ. ಚಿತ್ರಮಂದಿರಗಳೂ ಒಂದಷ್ಟು ರಿಲ್ಯಾಕ್ಸ್‌ ಮೂಡಿಗೆ ಬಂದಿವೆ. ರಿಲೀಸ್‌ ಆಗುತ್ತಿರುವ ಸಿನಿಮಾಗಳ ಪೈಕಿ ಸ್ಟಾರ್‌ ಸಿನಿಮಾಗಳಿಗೆ ಹೌಸ್‌ ಫುಲ್‌ ಬೋರ್ಡ್‌ ಕಾಣುತ್ತಿವೆ. ಹಾಗೆಯೇ ಹೊಸ ಸಿನಿಮಾಗಳ ಮುಹೂರ್ತಗಳು, ಆಡಿಯೋ-ವಿಡಿಯೋ ರಿಲೀಸ್‌ ಕಾರ್ಯಕ್ರಮಗಳು ಕಳೆಗಟ್ಟುತ್ತಿವೆ. ಆಗಲೇ ಈಗ ಗಾಯದ ಮೇಲೆ ಬರೆ ಎಳೆದಂತೆ ಅದ್ಯಾವುದೋ ಓಮಿಕ್ರಾನ್‌ ಭೀತಿ ಕವಿದಿದೆ. ಕೊರೋನಾದ ಒಂದು ಮತ್ತು ಎರಡನೇ ಅಲೆಯ ಹಾಗೆ ಇದು ಎಷ್ಟರ ಮಟ್ಟಿಗೆ ಜನರ ಆರೋಗ್ಯದ ಮೇಲೆ ಅನಾಹುತ ಸೃಷ್ಟಿಸುತ್ತೋ ಗೊತ್ತಿಲ್ಲ. ಹಾಗೆಯೇ ಇದು ಕರ್ನಾಟಕಕ್ಕೆ ಕಾಲಿಟ್ಟ ಬಗ್ಗೆಯೂ ಖಾತರಿ ಆಗಿಲ್ಲ, ಆದರೆ ದಕ್ಷಿಣಾ ಆಫ್ರಿಕಾ, ಇಂಗ್ಲೆಂಡ್‌ , ಜರ್ಮಿನಿ ದೇಶಗಳಲ್ಲಿ ಈಗಾಗಲೇ ಓಮಿಕ್ರಾನ್‌ ಪ್ರಕರಣಗಳು ಪತ್ತೆ ಆಗಿರೋದ್ರಿಂದ ಸಹಜವಾಗಿಯೇ ಅನ್ಯ ದೇಶಗಳಲ್ಲೂ ಓಮಿಕ್ರಾನ್‌ ಹರಡುವ ಭೀತಿ ಶುರುವಾಗಿದೆ.

ಅದೇ ಕಾರಣಕ್ಕೆ ರಾಜ್ಯದಲ್ಲೂ ಸರ್ಕಾರ ಮುನ್ನೆಚ್ಚೆರಿಕೆ ಕ್ರಮವಾಗಿ ಈಗಾಗಲೇ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸದ್ಯಕ್ಕೀಗ ಗಡಿ ಜಿಲ್ಲೆಗಳಲ್ಲಿ ಆರ್‌ ಟಿಪಿಸಿಆರ್‌ ನೆಗೆಟಿವ್‌ ರಿಪೊರ್ಟ್‌ ಕಡ್ಡಾಯ ಮಾಡಿದೆ. ಹೊಟೇಲ್‌, ರೆಸ್ಟೋರೆಂಟ್‌ಗಳು, ಸಿನಿಮಾ ಹಾಲ್‌ ಗಳು, ಈಜುಕೊಳ ,ಮೃಗಾಲಯಗಳು ಮತ್ತು ಜೈವಿಕ ಉದ್ಯಾನವನಗಳಲ್ಲಿ ಕೆಲಸ ಮಾಡುವವರು ಎರಡು ಡೋಸ್‌ ಲಸಿಕೆ ಪಡೆದಿರಬೇಕೆಂದು ಸರ್ಕಾರ ಆದೇಶಿಸಿದೆ. ಇನ್ನು ಶಾಲಾ ಕಾಲೇಜುಗಳಲ್ಲಿ ಸೆಮಿನಾರ್‌, ಸಂಭ್ರಮಗಳಿಗೆ ಬ್ರೇಕ್‌ ಹಾಕಿದೆ. ಒಟ್ಟಾರೆ ಸಮೂಹ ಸೇರುವುದನ್ನು ಸರ್ಕಾರ ಬಂದ್‌ ಮಾಡಿದೆ. ಹಾಗಾದ್ರೆ ಮುಂದೆ ಸಿನಿಮಾ ಹಾಲ್‌ ಗಳ ಕಥೆಯೇನು ಅನ್ನೋದು ಈಗ ಚಿತ್ರೋದ್ಯಮದಲ್ಲಿ ದೊಡ್ಟ ಆತಂಕ ಹುಟ್ಟು ಹಾಕಿದೆ. ಈ ಕ್ಷಣಕ್ಕೆ ಸರ್ಕಾರ ಲಾಕ್‌ ಡೌನ್‌ ಪ್ತಸ್ತಾಪವೇ ಇಲ್ಲ ಎಂದಿದೆ. ಅಂತಹ ಪರಿಸ್ಥಿತಿಯೂ ಕೂಡ ಮುಂದೆ ಬರಲಾರದು ಅಂತೆಯೇ ಇಟ್ಟುಕೊಂಡರೂ, ಒಂದೆಡೆ ಜನ ಸೇರುವುದನ್ನುನಸರ್ಕಾರ ನಿಲ್ಲಿಸಬೇಕಾದಾಗ, ಚಿತ್ರಮಂದಿರಗಳು ಅದರ ಕರಾಳ ಛಾಯೆಗೆ ಒಳಗಾಗುತ್ತವೆ ಎನ್ನುವುದು ಗ್ಯಾರಂಟಿಯೂ ಹೌದು.

ʼ ಇದ್ಯಾವುದೋ ವರೈಸ್‌ ಬಂದು ಏನ್ಮಾಡುತ್ತೋ ಗೊತ್ತಿಲ್ಲ, ಆದರೆ ವೈರಸ್‌ ನಿಯಂತ್ರಣಕ್ಕೆ ಅಂತ ಸರ್ಕಾರಗಳು ಕಟ್ಟು ನಿಯಮಗಳನ್ನು ಜಾರಿಗೆ ತಂದರೆ ಚಿತ್ರೋದ್ಯಮಕ್ಕೆ ದೊಡ್ಡ ಹೊಡೆತ ನೀಡುವುದಂತೂ ಹೌದು. ಹಾಗಂತ ನಾವು ಸರ್ಕಾರದ ಮನ್ನೆಚ್ಚರಿಕೆ ಕ್ರಮಗಳನ್ನು ವಿರೋಧಿಸಲು ಆಗದು. ದುಡಿಮೆ, ಹಣ ಅನ್ನೋದಕ್ಕಿಂತ ಜನರ ಜೀವ ಮುಖ್ಯ. ಜೀವ ಇದ್ದರೆ ಎಲ್ಲವೂ ಅಲ್ಲವೇ? ಹಿಂದೆ ಏನಾಯ್ತು ಅಂತ ಎಲ್ಲರಿಗೂ ಗೊತ್ತೇ ಇದೆ. ಸಾವಿನ ಸರಣಿಯೇ ನಡೆದು ಹೋಯಿತು. ಕೊರೋನಾ ದೊಡ್ಡ ಅವಾಂತರ ಸೃಷ್ಟಿಸಿ ಬಿಟ್ಟಿತು. ಈಗ ಅದನ್ನ ಹೇಗೋ ದಾಟಿಕೊಂಡು ಬಂದು , ಕೊಂಚ ನಿಟ್ಟುಸಿರು ಬಿಟ್ಟೆವು ಎನ್ನುವ ಹೊತ್ತಿಗೆ ಇದ್ಯಾವದೋ ಓಮಿಕ್ರಾನ್‌ ವೈರಸ್‌ ಭೀತಿ ಶುರುವಾಗಿದೆ. ಪರಿಸ್ಥಿತಿಗಳು ಹೀಗೆಯೇ ಸೃಷ್ಟಿಯಾಗುತ್ತಾ ಹೊರಟರೆ ಜನರ ಪರಿಸ್ಥಿತಿ ಅದೋಗತಿ. ಈಗಾಗಲೇ ಕೊರೋನಾ ಕಾರಣಕ್ಕೆ ಎಲ್ಲರ ಬದುಕು ಹೈರಾಣವಾಗಿದೆ. ಮತ್ತೆ ಕಠಿಣ ನಿಯಮಗಳು, ಲಾಕ್‌ ಡೌನ್‌ ಅಂತೇನಾದ್ರೂ ಮತ್ತೊಂದು ಸಂಕಷ್ಟ ಎದುರಾದರೆ ನಮ್ಮಗಳ ಕಥೆ ಮುಗೀತುʼ ಎನ್ನುವ ಮೂಲಕ ಭವಿಷ್ಯದ ದಿನಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಾರೆ ಚಿತ್ರೋದ್ಯಮದ ಹಿರಿಯ ನಿರ್ಮಾಪಕರೊಬ್ಬರು.

ಕೊರೋನಾ ಇನ್ನೆಂದಿಗೂ ಬಾರದಿರಲ್ಲಪ್ಪ ಅಂತ ದೇವರಲ್ಲಿ ಪ್ರಾರ್ಥಿಸಿಕೊಂಡವರಿಗೆ ಲೆಕ್ಕವೇ ಇಲ್ಲ. ಯಾಕಂದ್ರೆ ಅದು ಸೃಷ್ಟಿಸಿದ ಅವಾಂತರಗಳೇ ಹಾಗಿದ್ದವು. ಕೆಲಸ ಇಲ್ಲದೆ, ಕಾರ್ಯ ಇಲ್ಲದೆ ಹೊಟ್ಟೆ ಪಾಡಿಗೂ ಪರದಾಡಿದ ಆ ಕಡು ಕಷ್ಟಗಳ ನಡುವೆಯೇ ಸಾವು-ನೋವು ತಂದ ಕಣ್ಣೀರಿನ ಕಥೆಗಳನ್ನು ನೆನಪಿಸಿಕೊಂಡರೆ, ಕರುಳು ಹಿಂಡಿದಂತಾ ಗುತ್ತದೆ. ಅದೇ ಕಾರಣಕ್ಕೆ ಕೊರೋನಾ ಎನ್ನುವ ಮಹಾಮಾರಿ ಇನ್ನೆಂದಿಗೂ ಬಾರದಿರಲಿ ಅಂತ ಜನ ದೇವರಲ್ಲಿ ಮೊರೆಯಿಟ್ಟರೂ, ಈಗ ಅದ್ಯಾವುದೋ ಒಮಿಕ್ರಾನ್‌ ಎನ್ನುವ ವೈರಸ್‌ ಭೀತಿ ಈಗ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಸದ್ಯಕ್ಕೆ ಇದು ಎಷ್ಟರ ಮಟ್ಟಿಗೆ ಅನಾಹುತ ಸೃಷ್ಟಿಸುತ್ತೋ ಗೊತ್ತಿಲ್ಲ, ಆದರೆ ಜನರಲ್ಲಿ ಭೀತಿಯಂತೂ ದಟ್ಟವಾಗಿ ಆವರಿಸಿದೆ. ಈ ನಡುವೆ ಶೀತಗಾಳಿ ಬೇರೆ ಬೆಂಗಳೂರಿಗೆ ಅಡರಿಕೊಂಡಿದೆ. ಪ್ರಕೃತಿಯ ಈ ಅವಾಂತರಗಳಿಗೆ ಯಾರನ್ನು ದೂರಬೇಕೋ ಗೊತ್ತಿಲ್ಲ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ
Categories
ಸಿನಿ ಸುದ್ದಿ

ಇದು ಕನ್ನಡದ ಮಡ್ಡಿ, ಜಗತ್ತಿನಾದ್ಯಂತ ಹೊರಡಲು ರೆಡಿ – ಡಿಸೆಂಬರ್‌ 10 ಕ್ಕೆ ತೆರೆಗೆ ಬರುತ್ತಿದೆ ಹೊಸಬರ ಚಿತ್ರ !

ಡಿಫೆರೆಂಟ್‌ ಟೈಟಲ್‌ ಮೂಲಕವೇ ಸ್ಯಾಂಡಲ್‌ವುಡ್‌ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಬಂದಿದ್ದ ಮಡ್ಡಿ ಹೆಸರಿನ ಚಿತ್ರ ಇದೇ ಡಿಸೆಂಬರ್‌ 10 ಕ್ಕೆ ಗ್ರಾಂಡ್‌ ರಿಲೀಸ್‌ ಆಗುತ್ತಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಇಂಗ್ಲೀಷ್ ಭಾಷೆಗಳಲ್ಲೂ ತೆರೆಗೆ ಬರುತ್ತಿದೆ. ಇದೊಂದು ಹೊಸಬರ ಚಿತ್ರವಾದರೂ ಸಿನಿಮಾ ನಿರ್ಮಾಣದಲ್ಲಿ ಸಾಕಷ್ಟು ಪಳಗಿದ ಅನುಭವಿಗಳೇ ಸೇರಿಕೊಂಡು ನಿರ್ಮಾಣ ಮಾಡಿದ ಅಂತಾರಾಷ್ಟ್ರೀಯ ಗುಣಮಟ್ಟದ ಸಿನಿಮಾ ಇದು. ಹಾಗಂತ ಚಿತ್ರ ತಂಡ ಮಾತು.

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಮಡ್‌ ರೇಸ್‌ ಕುರಿತ ಚಿತ್ರ. ಕಳೆದ ಐದು ವರ್ಷಗಳ ಕಾಲ ಮಡ್ ರೇಸ್​ ಬಗ್ಗೆ ಅಧ್ಯಯನ ನಡೆಸಿ ಈ ಕಥೆ ಸಿದ್ದಪಡಿಸಿದ್ದೇನೆ. ಇದು ಎರಡು ತಂಡಗಳ ನಡುವಿನ ಸ್ಪರ್ಧೆಯ ವಿಶೇಷತೆ ಇರುವ ಚಿತ್ರ. ಇದರ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್, ಭಾವನಾತ್ಮಕ ಅಂಶಗಳು ಮತ್ತು ಸಾಹಸದ​ ತಿರುವುಗಳನ್ನೂ ಈ ಸಿನಿಮಾದಲ್ಲಿ ಮಿಕ್ಸ್‌ ಆಗಿವೆ.

  • ನಿರ್ದೇಶ ಕ ಪ್ರಗ್ಬಲ್‌ ದಾಸ್.‌

ಪಿಕೆ7 ಪ್ರೊಡಕ್ಷನ್ಸ್ ಹೌಸ್ ಅಡಿಯಲ್ಲಿ ಪ್ರೇಮ್ ಕೃಷ್ಣ ದಾಸ್ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದು, ಡಾ. ಪ್ರಗ್ಬಲ್ ದಾಸ್ ಆಕ್ಷನ್‌ ಕಟ್‌ ಹೇಳಿದ್ದಾರೆ. ಅವರಿಗಿದು ಮೊದಲ ಹೆಜ್ಜೆ. ಚಿತ್ರದ ಮೊದಲ ಟೀಸರ್ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆ ಆಗಿದ್ದು, ಅಭೂತಪೂರ್ವ ಮೆಚ್ಚುಗೆ ಪಡೆದುಕೊಂಡಿದೆ. ಈಗ ಬಿಡುಗಡೆಯ ಹೊಸ್ತಿಲಿಗೆ ಬಂದಿದೆ. ಅದೇ ರೀತಿ ಚಿತ್ರಕ್ಕೆ ಒಟಿಟಿಯಲ್ಲಿ ಬಹು ಬೇಡಿಕೆ ಇದ್ದರೂ, ಚಿತ್ರಮಂದಿರದಲ್ಲಿಯೇ ಸಿನಿಮಾ ರಿಲೀಸ್ ಮಾಡಲು ತಂಡ ನಿರ್ಧರಿಸಿದೆ.

ಒಟ್ಟು 13 ಕ್ಯಾಮರಾಗಳನ್ನು ಈ ಚಿತ್ರದ ಶೂಟಿಂಗ್ ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆಯಂತೆ. ಸ್ಯಾನ್​ ಲೋಕೇಶ್​ ಸಂಕಲನ, ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಹಾಗೂ ಹಾಲಿವುಡ್​ ಸಿನಿಮಾಗಳ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡಿರುವ ಕೆ.ಜಿ ರತೀಶ್ ಅವರ ಛಾಯಾಗ್ರಹಣದ ಕೈ ಚಳಕ ಈ ಚಿತ್ರದಲ್ಲಿದೆ. ನೈಸರ್ಗಿಕ ಅರಣ್ಯ ಪ್ರದೇಶದಲ್ಲಿ ಇಡೀ ಸಿನಿಮಾದ ಶೂಟಿಂಗ್ ಆಗಿದ್ದು, ಸಿಂಕ್ ಸೌಂಡ್ ಟೆಕ್ನಾಲಜಿ ಬಳಸಿ ಸಿನಿಮಾ ಮೂಡಿಬಂದಿದ್ದು, ಬಹುತೇಕ ಹೊಸಬರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಯುವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್, ಹರೀಶ್ ಪೆರಾಡಿ, ವಿಜಯನ್, ರೆಂಜಿ ಪೆನಿಕರ್ ತಾರಾಗಣದಲ್ಲಿದ್ದಾರೆ.

ಚಿತ್ರದ ಟೈಟಲೇ ಹೇಳುವ ಹಾಗೆ ಇದು ಮಡ್‌ ರೇಸ್‌ ಕುರಿತ ಕಥಾ ಹಂದರ ಚಿತ್ರ. ಚಿತ್ರದ ನಿರ್ದೇಶಕರು ಕಳೆದ ಐದು ವರ್ಷಗಳ ಕಾಲ ಮಡ್ ರೇಸ್​ ಬಗ್ಗೆ ಅಧ್ಯಯನ ನಡೆಸಿ ಈ ಕಥೆ ಸಿದ್ದಪಡಿಸಿದ್ದಾರಂತೆ. ಹಾಗಾದ್ರೆ ಆ ರೇಸ್‌ ವಿಶೇಷತೆ ಏನು ಅನ್ನೋದು ಚಿತ್ರದ ಒಳಗಿನ ಕಥಾಹಂದರ.ʼ ಇದು ಎರಡು ತಂಡಗಳ ನಡುವಿನ ಸ್ಪರ್ಧೆಯ ವಿಶೇಷತೆ ಇರುವ ಚಿತ್ರ. ಇದರ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್, ಭಾವನಾತ್ಮಕ ಅಂಶಗಳು ಮತ್ತು ಸಾಹಸದ​ ತಿರುವುಗಳನ್ನೂ ಈ ಸಿನಿಮಾದಲ್ಲಿ ಮಿಕ್ಸ್‌ ಆಗಿವೆ ಎನ್ನುತ್ತಾರೆ ನಿರ್ದೇಶ ಕ ಪ್ರಗ್ಬಲ್‌ ದಾಸ್.‌ ಚಿತ್ರದ ಮೋಷನ್ ಪೋಸ್ಟರ್ ಅನ್ನು ಈ ಹಿಂದೆ ಕಾಲಿವುಡ್ ನಟ ವಿಜಯ್ ಸೇತುಪತಿ, ಕನ್ನಡದಲ್ಲಿ ಶ್ರೀಮುರಳಿ, ಬಾಲಿವುಡ್ ನಟ ಅರ್ಜುನ್ ಕಪೂರ್ ಬಿಡುಗಡೆ ಮಾಡಿದ್ದರು. ಅದಾದ ಬಳಿಕ ಹಲವು ಭಾಷೆಗಳ ಟೀಸರ್​ ಅನ್ನು ಶಿವರಾಜಕುಮಾರ್, ಫಹಾದ್ ಪಾಸಿಲ್, ಉನ್ನಿ ಮುಕುಂದನ್, ಅಪರ್ಣ ಬಾಲಮುರಳಿ ಸೇರಿ ಹಲವು ಸ್ಟಾರ್ ನಟರು ಬಿಡುಗಡೆ ಮಾಡಿದ್ದರು.ಇದೀಗ ಈ ಬಹುನಿರೀಕ್ಷಿತ ಸಿನಿಮಾ ಡಿ.10ಕ್ಕೆ ಚಿತ್ರ ಬಿಡುಗಡೆ ಆಗುತ್ತಿದೆ.
– ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ

Categories
ಸಿನಿ ಸುದ್ದಿ

ಕಿರುಚಿತ್ರದಲ್ಲಿ ದಿಯಾ ನಾಯಕಿ, ಸೋಷಲ್ ಮೀಡಿಯಾದಲ್ಲಿ ʼಇಕ್ಷಣ ‘ ಅದ್ದರದ್ದೇ ಸುದ್ದಿ …!

ಕಿರುಚಿತ್ರಗಳಂದ್ರೆ ನೋಡುಗನನ್ನು ಕಡಿಮೆ‌‌ ಸಮಯದಲ್ಲಿ ಹೆಚ್ಚು ಇಂಪ್ರೆಸ್ ಮಾಡೋದು. ಅಥವಾ ನೋಡುಗನ ಮನಸ್ಸಿಗೆ ತಟ್ಟುವುದು. ಅಂತಹ ಕಿರುಚಿತ್ರಗಳ‌ ಪೈಕಿ ಈಗ ಯುಟ್ಯೂಬ್ ನಲ್ಲಿ ಸಖತ್ ಟ್ರೆಂಡಿಂಗ್‌ ನಲ್ಲಿರುವ ಕಿರುಚಿತ್ರದ ಹೆಸರು ‘ಇಕ್ಷಣ’.ಫ್ಲಿಕರಿಂಗ್‌ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿರೋ ಈ ಕಿರುಚಿತ್ರವನ್ನು ಇತ್ತೀಚೆಗೆ ನಟ ಗೊಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದ್ದರು. ಅದು ಲಾಂಚ್ ಆದ ಕ್ಷಣದಿಂದ ಸೋಷಲ್‌ ಮೀಡಿಯಾದಲ್ಲಿ ವೈರಲ್ ಆಗಿ ಸಖತ್ ಸುದ್ದಿಮಾಡುತ್ತಿದೆ.

ಅದಕ್ಕೆ ಕಾರಣಗಳು ಇವೆ. ಆ ಪೈಕಿ ಮೊದಲ ಕಾರಣ ಇದರ ತಾರಾಗಣ. ಈ ಕಿರುಚಿತ್ರದ ಪ್ರಮುಖ ಆಕರ್ಷಣೆ ದಿಯಾ ಖ್ಯಾತಿಯ ನಟಿ ಖುಷಿ ರವಿ. ಹಾಗೆಯೇ ಹಿರಿಯ ನಟರಾದ ಕೆ.ಎಸ್ ಶ್ರೀಧರ್ ಅಲಿಯಾಸ್ ಸಿದ್ಲಿಂಗು ಶ್ರೀಧರ್.‌ ಹಾಗೆಯೇ ಡಾ. ಸೀತಾ ಕೋಟೆ ನಟಿಸಿದ್ದಾರೆ. ಕಿರುಚಿತ್ರ ಗಳಂದ್ರೆ ಹೊಸಬರು ಇಲ್ಲವೇ ಉದಯೋನ್ಮುಖ ಕಲಾವಿದರೇ ಕಾಣಿಸಿಕೊಳ್ಳುವುದು ಸಹಜವೇ ಎನ್ನುವಂತಾಗಿರುವಾಗ, ಈ ಕಿರುಚಿತ್ರ ಸ್ಟಾರ್ ಕಲಾವಿದರನ್ನೇ ಒಳಗೊಂಡಿದ್ದು ಅದರ ವಿಶೇಷತೆಗಳಲ್ಲೊಂದು. ಹಾಗೆಯೇ ಇಲ್ಲಿರುವ ಕಥೆ. ಅದರ ಎರಡನೇಯ ಕಾರಣ.

ಈ‌ ಕಿರುಚಿತ್ರದಲ್ಲಿ ನಾನು ಅಭಿನಯಿಸಲು ಒಪ್ಪಿಕೊಂಡಿದ್ದಕ್ಕೆ ಎರಡು ಕಾರಣ ಇದ್ದವು. ಮೊದಲು ಅದರ ಕಥೆ.‌ಆದಾದ ನಂತರ ಎರಡನೇ ಕಾರಣ ಅದರ ನಿರ್ಮಾಪಕರು. ಒಂದೊಳ್ಳೆಯ ಕಥೆಯನ್ನು ಒಂದು ಕಮರ್ಷಿಯಲ್ ಸಿನಿಮಾ‌ಮಾದರಿಯಲ್ಲೇ ನಿರ್ಮಾಣ ಮಾಡಬೇಕೆಂದು ಬಯಸಿದ್ಧರು. ಹಾಗಾಗಿ ನಾನು ಇದರಲ್ಲಿ ಖುಷಿಯಿಂದಲೇ ಅಭಿನಯಿಸಿದೆ.
– ಖುಷಿ ರವಿ, ನಟಿ

ಅಪ್ಪ-ಮಗಳ ನಡುವೆ ಸಣ್ಣದೊಂದು‌ ಕಾಫಿ ವಿಷಯದೊಂದಿಗೆ ಶುರುವಾಗುವ ವಾಗ್ವಾದವು, ಸಮಾಜ ನಿರ್ಮಿತ ತಾರತಮ್ಯಗಳ ಕುರಿತ ಗಂಭೀರ ಚರ್ಚಗೆ ಮುನ್ನುಡಿ‌ ಬರೆಯುತ್ತದೆ. ಈ ಕಥೆಯು ಒಂದು ಮನೆಯ ಏಕೈಕ ಪ್ರಾಬಲ್ಯ ಸ್ತಂಭವಾಗಿರುವ ಸಂಪ್ರದಾಯವಾದಿ ತಂದೆ ಮತ್ತು ಸ್ವತಂತ್ರವಾಗಿ ಕೆಲಸ ಮಾಡುತ್ತಿರುವ ಮಗಳು ತನ್ನ ಸ್ಥಾನವನ್ನು ಹುಡುಕಲು ಪ್ರಯತ್ನಿಸುತ್ತಿರುವ ಚರ್ಚೆಯ ಸುತ್ತ ಹೆಣೆಯಲಾಗಿದೆ.

ಗಂಡನಾದವನು ತಾನು ಕೆಲಸ ಮಾಡುವ ವ್ಯಕ್ತಿ ಎನ್ನುವ ಅ‌ಹಂ‌ನಲ್ಲಿ ಯಾಕೆ, ತನ್ನಂತೆಯೇ ಕೆಲಸ ಮಾಡಬೇಕು, ದುಡಿಬೇಕು, ಸಂಪಾದಿಸಬೇಕು, ಆ ಮೂಲಕ ತನ್ನೆಚ್ವೆಗಳನ್ನು ಪೂರೈಸಿಕೊಳ್ಳ ಬೇಕೆಂದು ಕೊಳ್ಳುವ ಹೆಂಡತಿಯನ್ನು ಕೇವಲ ಅಡುಗೆ ಮನೆ ಮಾತ್ರ ಸಿಮೀತ ಗೊಳಿಸುತ್ತಾನೆನ್ನುವ ಚರ್ಚೆಯ ಜತೆಗೆ, ಮದುವೆಯಾಗುವ ಹೆಣ್ಣು ಎಷ್ಟೇ ಓದಿ‌ವಿದ್ಯಾವಂತ ಳಾದರೂ,ತನ್ನ ಗಂಡ ತನಗಿಂತ ಹೆಚ್ವು ದುಡಿಯಬೇಕೆಂದು‌ ಬಯಸುತ್ತಾಳೆಂಬ ಪ್ರಶ್ನೆ ಗಳಿಗೂ ಉತ್ತರವಾಗುತ್ತದೆ. ಒಟ್ಟಾರೆ ಸಮಾಜ ನಿರ್ಮಿತ ಅನೇಕ ನಿಯಮಗಳು ಮತ್ತು ಏಕತಾನತೆಗಳಲ್ಲಿ, ಒಂದನ್ನು ಸೂಕ್ಷ್ಮವಾಗಿ ಚರ್ಚಿಸುವ ಉದ್ದೇಶದೊಂದಿಗೆ ನೋಡುಗನನ್ನು ಚಿಂತನೆಗೆ ಹಚ್ಚುತ್ತದೆ. ಅದೇ ಕಾರಣಕ್ಕೆ ಒಮ್ಮೆ ನೋಡಿದರೂ, ಮತ್ತೆ‌ಮತ್ತೆ‌ನೋಡುವಂತಹ ಕುತೂಹಲ ಮೂಡಿಸುವುದೇ ಇದರ ಪ್ಲಸ್ ಪಾಯಿಂಟ್.

ಕಥೆ‌ ಕೇಳಿದಾಗ ತುಂಬಾನೆ ಖುಷಿ ಯಾಯಿತು. ಅದನ್ನು‌ಒಂದು ಸಿನಿಮಾ‌ ಮಾದರಿಯಲ್ಲೇ ನಿರ್ಮಾಣ ಮಾಡಬೇಕೆಂದು ಹೊರಟಾಗ, ಸ್ಟಾರ್ ಕಲಾವಿದರು, ಅನುಭವಿ‌ತಂತ್ರಜ್ಜರೇ ನಮ್ಮ ಆದ್ಯತೆಯಾಯಿತು. ನಿರ್ಮಾಣದ ವೇಳೆ ಬಜೆಟ್ ಬಗ್ಗೆ ನಾವು ಆಲೋಚನೆ ಮಾಡಿಲ್ಲ, ಬದಲಿಗೆ ಒಂದೊಳ್ಳೆಯ ಕಿರುಚಿತ್ರ ಆಗಬೇಕೆಂದು‌ ಬಯಸಿದ್ದೇವು. ಅದೀಗ ಸಾಧ್ಯವಾಗಿದೆ ಎನ್ನುವ ಖುಷಿ‌ಸಿಕ್ಕಿದೆ.

ಸುಷ್ಮಿತಾ ಸಮೀರ,ನಿರ್ಮಾಪಕರು

ಫ್ಲಿಕರಿಂಗ್ ಸ್ಟುಡಿಯೋಸ್ ಸಂಸ್ಥೆ ಈಗ ಈ ಕಿರುಚಿತ್ರವನ್ನು ನಿರ್ಮಿಸಿದ್ದು, ಈ ಹಿಂದೆ ಕನ್ನಡ ಚಲನಚಿತ್ರಗಳಲ್ಲಿ ಸಂಭಾಷಣೆ ಗಾರರಾಗಿ ಕೆಲಸ ಮಾಡಿದ ಪ್ರಸನ್ನ ವಿ.ಎಂ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ಹಾಗೆಯೇಕನ್ನಡದ ಹೆಸರಾಂತ ಛಾಯಾಗ್ರಾಹಕ‌ ʼಟಗರುʼ ಖ್ಯಾತಿಯ ಮಹೇಂದರ್ ಸಿಂಹ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನಕಾರರಾಗಿ ಶ್ರೀಕಾಂತ್, ಸಂಗೀತಕ್ಕಾಗಿ ಜುಬಿನ್ ಪೌಲ್ ಅವರಂತಹ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಚಿಕ್ಕಮಗಳೂರಿನ ಜಯಂತಿ ಕಾಫಿ ಈ ಕಿರುಚಿತ್ರಕ್ಕೆ ಪ್ರಾಯೋಜಕತ್ವ ನೀಡಿದೆ. ಸ್ಟಾರ್ ತಾರಾಗಣ, ಅನುಭವಿ ತಂತ್ರಜ್ಜರು, ಒಂದು ಮನಸ್ಸು ತಟ್ಟುವ ಕಥೆಯ ಮೂಲಕ ‘ಇ ಕ್ಷಣ’ ಸಖತ್ ಸುದ್ದಿ ಮಾಡುತ್ತಿರುವುದು ವಿಶೇಷ. ಆಸಕ್ತರು flickering studios youtube ಚಾನೆಲ್‌ ನಲ್ಲಿ ಈ ಕಿರುಚಿತ್ರ ನೋಡಬಹುದು.
– ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ

error: Content is protected !!