ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನಗಲಿ ಒಂದು ತಿಂಗಳೇ ಕಳೆದಿದೆ. ಆದರೂ ದುಃಖ ಮಾಸಿಲ್ಲ. ಅಪ್ಪು ಅವರು “ಬಾಡಿಗಾಡ್” ಚಿತ್ರಕ್ಕಾಗಿ ಹಾಡಿರುವ “ಆರೇಸ ಡನ್ಕನಕ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬಾ ಅರ್ಥಗರ್ಭಿತವಾದ ಈ ಹಾಡನ್ನು ಎಸ್ ಕೆ ಎಸ್ ಬರೆದಿದ್ದಾರೆ. ಇತ್ತೀಚೆಗೆ ಈ ಹಾಡನ್ನು ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ.ಇಷ್ಟು ದಿನ ನನ್ನ ತಮ್ಮನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಇಂದು ಗೀತಾಂಜಲಿ ಸಲ್ಲಿಸಿದ್ದೇನೆ. ಅವನು ಇಲ್ಲ ಎಂದು ಕೊರಗುವುದು ಬೇಡ. ಅವನು ಹಾಡಿರುವ ಹಾಡಿನಲ್ಲಿ, ಮಾಡಿರುವ ಕೆಲಸದಲ್ಲಿ ಅವನಿದ್ದಾನೆ. ನಿರ್ದೇಶಕ ಪ್ರಭು ಶ್ರೀನಿವಾಸ್ ನನಗೆ ಮೊದಲಿನಿಂದಲೂ ಪರಿಚಯ. ಅವರ ಈ ಪ್ರಯತ್ನಕ್ಕೆ ಶುಭವಾಗಲಿ ಎಂದು ರಾಘಣ್ಣ ಹಾರೈಸಿದರು.
ಅಪ್ಪು ಸರ್ ಅವರನ್ನು ಭೇಟಿಯಾಗಿ ಈ ಹಾಡನ್ನು ಹಾಡಲು ಕೇಳಿದಾಗ, ಇದು ತುಂಬಾ ಹೈಪಿಚ್ ನಲ್ಲಿ ಹಾಡಬೇಕು. ನೋಡಿ ನನ್ನ ಧ್ವನಿ ಸರಿ ಹೊಂದುತ್ತದೆಯಾ? ಎಂದು ಕೇಳಿದರು. ಸರಿ ಹೊಂದದಿದ್ದಲ್ಲಿ ಬೇರೆ ಅವರ ಬಳಿ ಹಾಡಿಸಿ ಎಂದರು. ಇಲ್ಲ ಈ ಹಾಡನ್ನು ನೀವೇ ಹಾಡಬೇಕು ಎಂದು ಕೇಳಿದಾಗ, ಅವರ ಸ್ಟುಡಿಯೋದಲ್ಲೇ ಈ ಹಾಡು ಹಾಡಿದರು. ನನಗೆ ತಿಳಿದ ಹಾಗೆ ಇದೇ ಅವರು ಹಾಡಿರುವ ಕೊನೆಯ ಗೀತೆ ಅನಿಸುತ್ತದೆ. ಈ ಹಾಡಿನಲ್ಲಿ ಬರುವ ಕೆಲವು ಸಾಲುಗಳು ಪುನೀತ್ ಅವರಿಗೆ ಹತ್ತಿರವಾಗಿದೆ ಎಂದು ಅವರ ಮರಣದ ನಂತರ ತಿಳಿಯುತ್ತಿದೆ.
“ಬಾಡಿ ಗಾಡ್” ತೆರೆಗೆ ಬರಲು ಸಿದ್ದವಾಗಿದ್ದು, ಜನವರಿಯಲ್ಲಿ ತೆರೆಗೆ ತರುತ್ತೇವೆ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಪ್ರಭು ಶ್ರೀನಿವಾಸ್.ನನಗೆ ಅಪ್ಪು ಅವರು ಹಾಡುವ ಹಾಡಿಗೆ ಡ್ಯಾನ್ಸ್ ಮಾಡಬೇಕೆಂದು ಆಸೆಯಿತ್ತು. ಈ ಹಾಡಿನ ಬಗ್ಗೆ ಮಾತನಾಡಲು ನಿರ್ದೇಶಕರೊಂದಿಗೆ ಅಪ್ಪು ಸರ್ ಮನೆಗೆ ಹೋದಾಗ, ಅವರ ಸ್ವಾಗತ ನೋಡಿ ನನಗೆ ಆಶ್ಚರ್ಯವಾಯಿತು. “ಬನ್ನಿ ಮನೋಜ್. ಹೇಗಿದ್ದೀರಿ. ಆರು, ಏಳು ಸರಿ ಶಾಸಕರಾಗಿದ್ದ ಮತ್ತೆ ಉನ್ನತ ಹುದ್ದೆ ಅಲಂಕರಿಸಿದ ಪ್ರಸಿದ್ಧ ವ್ಯಕ್ತಿಯ ಮಗನಾಗಿದ್ದರು, ನಿಮ್ಮಲ್ಲಿ ಒಂದು ಚೂರು ಅಹಂ ಇಲ್ಲ” ಎಂದು ಅವರು ಹೇಳಿದ ಮಾತು ಇನ್ನೂ ಕಿವಿಯಲ್ಲೇ ಇದೆ. ಎಂದು ಭಾವುಕರಾದರು ನಾಯಕ ಮನೋಜ್.
ನಾನು ಮೊದಲ ಬಾರಿಗೆ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದೇನೆ. ಉತ್ತಮ ಪಾತ್ರ ನೀಡಿದ ನಿರ್ದೇಶಕರಿಗೆ ವಂದನೆಗಳು ಎಂದರು ನಾಯಕಿ ದೀಪಿಕಾ. ಗೀತರಚನೆಕಾರ ಗೌಸ್ ಫಿರ್ ಅವರ ಬಳಿ ಸಹಾಯಕರಾಗಿದ್ದ ಎಸ್ ಕೆ ಎಸ್, ವೆಂಕಟೇಶ್ ಕುಲಕರ್ಣಿ, ಸಂಕಲನಕಾರ ಉಜ್ವಲ್ ಚಂದ್ರ ಹಾಗೂ ನೃತ್ಯ ನಿರ್ದೇಶಕ ರಾಜು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಪ್ರಭು ಶ್ರೀನಿವಾಸ್ ನಿರ್ದೇಶಿಸಿರುವ ಈ ಚಿತ್ರದ ನಾಯಕನಾಗಿ ಮೊಗ್ಗಿನ ಮನಸ್ಸಿನ ಮನೋಜ್ ನಟಿಸಿದ್ದಾರೆ. ದೀಪಿಕಾ ನಾಯಕಿ. ಮಠ ಗುರುಪ್ರಸಾದ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಪದ್ಮಜಾರಾವ್, ನಿರಂಜನ್, ಅಶ್ವಿನ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕರಣ್ ಬಿ ಕೃಪ ಈ ಚಿತ್ರಕ್ಕೆ ಸಂಗೀತ ನೀಡಿರುವ ಈ ಚಿತ್ರಕ್ಕೆ ವೇಲ್ ಮುರುಗನ್ ಅವರ ಛಾಯಾಗ್ರಹಣವಿದೆ.
- ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿಲಹರಿ