Categories
ಎಡಿಟೋರಿಯಲ್ ಸಿನಿ ಸುದ್ದಿ

ಸಿನಿ‌ಲಹರಿ ಯುಟ್ಯೂಬ್‌ ಚಾನೆಲ್‌ಗೆ ವರ್ಷದ ಹರ್ಷ… ಮೊದಲ ವರ್ಷದ ಯಶಸ್ವೀ ಪಯಣ…

ನಾವಿಬ್ಬರು ಸೇರಿ ಶುರು ಮಾಡಿದ ಸಿನಿಲಹರಿಗೆ ಪ್ರೀತಿಯ ಹಾರೈಕೆಗಳು ಅಪ್ಪಳಿಸಿದವು. ಸಿನಿಲಹರಿ ಸಂಸ್ಥೆ ಕೊರೊನಾ ಹೊಡೆತಕ್ಕೆ ಮುಗ್ಗರಿಸಿತಾದರೂ, ನಾವು ಅದನ್ನು ನಿಲ್ಲಲು ಬಿಡಲಿಲ್ಲ. ಎಲ್ಲರಿಗೂ ಆದಂತೆ ನಮಗೂ ಒಂದಷ್ಟು ಸಮಸ್ಯೆಗಳು ಎದುರಾದವು. ಅದನ್ನು ಮೆಟ್ಟಿ ನಿಂತೆವು. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಇದ್ದುದರಿಂದಲೇ ಸಿನಿಲಹರಿ ಯುಟ್ಯೂಬ್‌ ಚಾನೆಲ್‌ ಯಶಸ್ವಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆ…

2020 ನಂವೆಬರ್ 1ಕ್ಕೆ “ಸಿನಿ ಲಹರಿ” ವೆಬ್ ಸೈಟ್ ಶುರುವಾಗಿದ್ದು ಎಲ್ಲರಿಗೂ ಗೊತ್ತು. ಅಂದು ಎಲ್ಲವೂ ಹರಿಬಿರಿ, ಅವಸರ, ಆತುರ, ಸಣ್ಣ ಭಯ ಮತ್ತು ಒಂದಷ್ಟು ಗೊಂದಲದಲ್ಲಿಯೇ ಒಂದೊಳ್ಳೆಯ ಕಾರ್ಯಕ್ರಮ ನಡೆಯಿತು. ಅಂದು ಯಾರೆಲ್ಲ ಬರುತ್ತಾರೋ‌ ಎಂಬ ಸಣ್ಣ ಭಯದಲ್ಲೇ ಆಹ್ವಾನಿಸಿದರೆಲ್ಲರೂ ಬಂದು ಹೃದಯ ತುಂಬಿ ಹರಿಸಿದರು. ಅದ್ಯಾವ ಸಂದರ್ಭವೋ ಏನೋ ಗೊತ್ತಿಲ್ಲ. ಬಂದವರೆಲ್ಲ ಬೊಗಸೆ ತುಂಬಿ ಕೊಟ್ಟ ಪ್ರೀತಿ, ಹಾರೈಕೆ , ಧೈರ್ಯದಿಂದ ನಾವು ಯುಟ್ಯೂಬ್‌ ಚಾನೆಲ್‌ಗೂ ಕೈ ಹಾಕಿದೆವು.

ಸಿನಿ‌ಲಹರಿ‌ ವೆಬ್ಸೈಟ್ ಶುರುವಾಗಿ ನಾಲ್ಕು ತಿಂಗಳು ಕಳೆಯವ ಹೊತ್ತಿಗೆ ಒಂದು ವ್ಯವಸ್ಥಿತವಾದ ಸ್ಟುಡಿಯೋ, ಆಫೀಸು, ಕ್ಯಾಮೆರಾಗಳು, ಅಗತ್ಯ ಸಿಬ್ಬಂದಿ ಮೂಲಕ ಒಂದು ಯುಟ್ಯೂಬ್ ಚಾನೆಲ್ ಶುರುವಾಯ್ತು. ಇಷ್ಟೆಲ್ಲಾ ಆಗಿದ್ದು, ಆತ್ಮೀಯ ಗೆಳೆಯರ ಸಹಕಾರ, ಪ್ರೋತ್ಸಾಹ ಮತ್ತು ನಮ್ಮೊಳಗಿದ್ದ ಆತ್ಮವಿಶ್ವಾಸ. ಮಿತ್ರರು ಹಾಗು ಉದ್ಯಮಿ ಪಿ. ಕೃಷ್ಣ ಅವರು ನಮ್ಮೊಂದಿಗೆ ಸಾಥ್‌ ಕೊಟ್ಟರು. ಹಾಗಾಗಿ ಯುಟ್ಯೂಬ್‌ ಚಾನೆಲ್‌ ಯಾವುದೇ ಅಡೆತಡೆಗಳಿಲ್ಲದೆ ಶುರುವಾಯ್ತು.

ನಾವಿಬ್ಬರು ಸೇರಿ ಶುರು ಮಾಡಿದ ಸಿನಿಲಹರಿಗೆ ಪ್ರೀತಿಯ ಹಾರೈಕೆಗಳು ಅಪ್ಪಳಿಸಿದವು. ಸಿನಿಲಹರಿ ಸಂಸ್ಥೆ ಕೊರೊನಾ ಹೊಡೆತಕ್ಕೆ ಮುಗ್ಗರಿಸಿತಾದರೂ, ನಾವು ಅದನ್ನು ನಿಲ್ಲಲು ಬಿಡಲಿಲ್ಲ. ಎಲ್ಲರಿಗೂ ಆದಂತೆ ನಮಗೂ ಒಂದಷ್ಟು ಸಮಸ್ಯೆಗಳು ಎದುರಾದವು. ಅದನ್ನು ಮೆಟ್ಟಿ ನಿಂತೆವು. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಇದ್ದುದರಿಂದಲೇ ಸಿನಿಲಹರಿ ಯುಟ್ಯೂಬ್‌ ಚಾನೆಲ್‌ ಯಶಸ್ವಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆ.

ಚಿತ್ರೋದ್ಯಮಕ್ಕಾಗಿಯೇ ಶುರುವಾದ ಸಿನಿಲಹರಿ, ಚಿತ್ರರಂಗ ಒಪ್ಪುವ ಮತ್ತು ಅಪ್ಪುವಂತೆ ಕೆಲಸ ಮಾಡಿಕೊಂಡು ಹೋಗಬೇಕೆನ್ನುವ ಧ್ಯೇಯವಿದೆ. ಅದೇ ಹಾದಿಯಲ್ಲಿ ಸಾಗುತ್ತಿದೆ. ಸಿನಿ‌ಲಹರಿ ಅಂದರೆ ಒಂದಷ್ಟು ನಂಬಿಕೆ ಹುಟ್ಟ ಬೇಕೆನ್ನುವ ಹಾಗೆ ವೃತ್ತಿಯನ್ನು ಪ್ರದರ್ಶಿಸೋಣ ಅನ್ನೋದು ನಮ್ಮ ಆಸೆ. ಇದೆಲ್ಲ ಕೈ ಗೂಡಬೇಕಾದರೆ, ನೀವುಗಳೇ ಮುಖ್ಯ. ನಿಮ್ಮ ಬೆಂಬಲ ನಮಗೆ ಸದಾ ಇರಬೇಕು.


ಕೊನೆಯ ಮಾತು: ಪ್ರತಿಯೊಬ್ಬರ ಬದುಕಿನ ಸಾಹಸಗಳು ಸುಮ್ಮನೆ ಶುರುವಾಗೋದಿಲ್ಲ. ‌ಅವುಗಳ ಹಿಂದೆ ಹುಮ್ಮಸ್ಸು ಇರುತ್ತೆ, ಛಲ ಇರುತ್ತೆ, ದರ್ದು ಇರುತ್ತೆ ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ಅಲ್ಲಿ ನೋವು, ಅವಮಾನಗಳು ಇರುತ್ತವೆ. ಸಿನಿ‌ಲಹರಿ ಆರಂಭವೂ ಕೂಡ ಇದರಿಂದ ಹೊರತಲ್ಲ.

ವಿಜಯ್ ಭರಮಸಾಗರ, ದೇಶಾದ್ರಿ ಹೊಸ್ಮನೆ

Categories
ಎಡಿಟೋರಿಯಲ್

ಸಿನಿಮಾ, ಸೀರಿಯಲ್‌ ನಂಬಿಕೊಂಡವರ ಮೇಲೆ ಸರ್ಕಾರಕ್ಕೆ ಯಾಕಿಲ್ಲ ಕಾಳಜಿ… ?

ಕೊನೆಗೂ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್‌ ಜಾರಿಗೊಳಿಸಿದೆ. ಇದು ಲಾಕ್‌ ಡೌನ್‌ ಎನ್ನುವುದರ ಇನ್ನೊಂದು ರೂಪವೇ. ಲಾಕ್‌ಡೌನ್‌ ಎನ್ನುವ ಬದಲಿಗೆ ಟಫ್‌ ರೂಲ್ಸ್‌ ಹೆಸರಲ್ಲಿ ಅಘೋಷಿತ ಲಾಕ್‌ ಡೌನ್‌ಹೇರಿದೆ. ಆಸ್ಪತ್ರೆ, ಹಣ್ಣು-ಹಂಪಲು, ತರಕಾರಿ ಮಾರಾಟ ಸೇರಿದಂತೆ ಅಗತ್ಯ ಸೇವೆಗಳ ಓಡಾಟಕ್ಕೆ ಅವಕಾಶ ಇದೆ. ಉಳಿದಂತೆ ಎಲ್ಲವೂ ಗುರುವಾರ ಮಧ್ಯಾಹ್ನದಿಂದಲೇ ಬಂದ್‌ ಆಗಿವೆ. ಸಹಜವಾಗಿಯೇ ಇದರ ಎಫೆಕ್ಟ್‌ ಮನರಂಜನಾ ಕ್ಷೇತ್ರದ ಮೇಲೂ ಬಿದ್ದಿದೆ. ಸಿನಿಮಾ ಅಥವಾ ಸೀರಿಯಲ್‌ ಚಿತ್ರೀಕರಣಕ್ಕೆ ಸರ್ಕಾರ ನಿರ್ಧಿಷ್ಟವಾಗಿ ಏನನ್ನು ಹೇಳಿಲ್ಲ. ಸಭೆ-ಸಮಾರಂಭ ನಡೆಸುವಂತಿಲ್ಲ, ಗುಂಪು ಸೇರುವಂತಿಲ್ಲ ಅಂತೆಲ್ಲ ಆದೇಶ ನೀಡಿರುವುದರಿಂದ ಅದು ಸಿನಿಮಾ ಚಟುವಟಿಕೆಗಳಿಗೂ ಅನ್ವಯಿಸುತ್ತದೆ. ಅದರ ಇಂಫ್ಯಾಕ್ಟ್‌ ಈಗಾಗಲೇ ಸಿನಿಮಾ ಹಾಗೂ ಸೀರಿಯಲ್‌ ಕ್ಷೇತ್ರದ ಮೇಲೂ ಆಗಿದೆ. ಚಿತ್ರೀಕರಣದ ಹಂತದಲ್ಲಿದ್ದ ಸಾಕಷ್ಟು ಸಿನಿಮಾಗಳ ಚಿತ್ರೀಕರಣ ಗುರುವಾರದಿಂದಲೇ ಸ್ಟಾಪ್‌ ಆಗಿದೆ. ಸೀರಿಯಲ್‌ ಚಿತ್ರೀಕರಣ ಬಂದ್‌ ಆಗಿರುವುದರ ಬಗ್ಗೆ ಈವರೆಗೂ ಯಾವುದೇ ಮಾಹಿತಿ ದೊರೆತಿಲ್ಲ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಸೀರಿಯಲ್‌ ಚಿತ್ರೀಕರಣಕ್ಕೂ ಟಫ್‌ ರೂಲ್ಸ್‌ ಎಫೆಕ್ಟ್‌ ಬೀರುವುದು ಗ್ಯಾರಂಟಿ. ಹಾಗೊಂದು ವೇಳೆ, ಸಿನಿಮಾ ಹಾಗೂ ಸೀರಿಯಲ್‌ ಚಿತ್ರೀಕರಣದ ಚಟುವಟಿಕೆಗಳ ಸಂಪೂರ್ಣವಾಗಿ ಬಂದ್‌ ಆದ್ರೆ ಈಕ್ಷೇತ್ರಗಳನ್ನೆ ನಂಬಿಕೊಂಡವರ ಪರಿಸ್ಥಿತಿ ಶೋಚನೀಯ ಆಗುವುದು ಕಟ್ಟಿಟ್ಟ ಬುತ್ತಿ .

ಸಿನಿಮಾ ಅಥವಾ ಸೀರಿಯಲ್‌ ಅಂದಾಕ್ಷಣ ಜನ ಸಾಮಾನ್ಯರಿಗೆ ಬರುವ ಆಲೋಚನೆಯೇ ಬೇರೆ. ಅದೊಂದು ತಳಕು-ಬಳುಕಿನ ಜಗತ್ತು. ಅಲ್ಲಿನ ಜನರು ಸಹಜವಾಗಿಯೇ ಸುಖವಾಗಿದ್ದಾರೆನ್ನುವುದು ಸಹಜವಾದ ತಿಳಿವಳಿಕೆ.ಇವೆರೆಡು ಬಣ್ಣದ ಜಗತ್ತು ಅನ್ನೋದು ಕೂಡ ಅದಕ್ಕೆ ಕಾರಣ. ಆದ್ರೆ ಅದು ವಾಸ್ತವವಲ್ಲ. ಈಗಾಗಲೇ ಗೊತ್ತಿರುವಂತೆ ಕನ್ನಡ ಚಿತ್ರರಂಗದ ವಾರ್ಷಿಕ ಸಕ್ಸಸ್‌ ರೇಟ್‌ ಕೇವಲ 5 ರಷ್ಟು. ವರ್ಷಕ್ಕೆ ನೂರಿನ್ನೂರು ಚಿತ್ರಗಳು ಬಿಡುಗಡೆ ಯಾದರೂ, ಗೆಲ್ಲುವುದು ಮಾತ್ರ ಬೆರಳೆಣಿಕೆಯ ಚಿತ್ರಗಳು. ಹಾಗೆಯೇ ಇಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆದು ಸುಖವಾಗಿರುವವರ ಸಂಖ್ಯೆ ಕೂಡ ಕೇವಲ ೫ ರಷ್ಟು. ಉಳಿದ ಶೇ. 95 ರಷ್ಟು ಜನರ ಬದುಕು ದಿನಗೂಲಿಗಳಿಗಿಂತ ಭಿನ್ನವಾಗಿಲ್ಲ. ಅವರೆಲ್ಲ ಒಂದೂತ್ತಿನ ಅನ್ನಕ್ಕೂ ನಿತ್ಯ ದುಡಿಯಲೇಬೇಕು. ಅವರ ಪಾಡು ಈಗ ಅಕ್ಷರಶಃ ಬೀದಿ ಪಾಲಾಗಿದೆ.

ಕಳೆದ ಒಂದು-ಒಂದೂವರೆ ವರ್ಷದಿಂದ ಅವರಿಗೆ ಕೈ ತುಂಬಾ ಕೆಲಸ ಇಲ್ಲ. ಕೊರೋನಾ ಬಂದು ಅವರ ನೆಮ್ಮದಿ ಹಾಳಾಗಿದೆ. ವಾರಕ್ಕೆ ಒಂದು ದಿನ ಕೆಲಸ ಮಾತ್ರ. ಅಲ್ಲಿ ಸಿಕ್ಕ ಕೂಲಿಯಲ್ಲಿಯೇ ಅವರೆಲ್ಲ ವಾರದಷ್ಟು ಖರ್ಚು ವೆಚ್ಚ ನೋಡಿಕೊಳ್ಳಬೇಕಿದೆ. ಅದೇ ಬದುಕಿಗೆ ಈಗ ಮತ್ತೆ ಲಾಕ್‌ ಡೌನ್‌ ಗರ ಬಡಿದಿದೆ. ವಾರಕ್ಕೆ ಒಂದೋ, ಎರಡೋ ದಿನ ಸಿಗುತ್ತಿದ್ದ ಕೂಲಿಗೂ ಈಗ ಕಲ್ಲು ಬಿದ್ದಿದೆ. ಫ್ಯಾಕ್ಟರಿಗಳಿಗೆ, ಸರ್ಕಾರಿ ಕಚೇರಿಗಳಿಗೆ, ಖಾಸಗಿ ಕಂಪನಿಗಳಲ್ಲೂ ಇಂತಿಷ್ಟೇ ಜನ ಕೆಲಸ ಮಾಡ್ಬೇಕು ಅಂತ ಸರ್ಕಾರ ಗೈಡ್‌ ಲೈನ್ಸ್‌ ಕೊಟ್ಟಿದೆ. ಸಿನಿಮಾ ಮತ್ತು ಸೀರಿಯಲ್‌ ಕ್ಷೇತ್ರಕ್ಕೆ ಇಂತಹ ಯಾವುದೇ ಗೈಡ್‌ ಲೈನ್ಸ್‌ ನೀಡದೆ ಮೋಸ ಮಾಡಿದೆ. ಈ ಕ್ಷೇತ್ರಗಳನ್ನೇ ನಂಬಿ ಬದುಕುವವರು ಬೀದಿಗೆ ಬೀಳುವಂತಾಗಿದೆ. ಸರ್ಕಾರ ತಕ್ಷಣವೇ ಸಿನಿಮಾ ಮತ್ತು ಸೀರಿಯಲ್‌ ಚಿತ್ರೀಕರಣದ ಚಟುವಟಿಕೆಗಳಿಗೂ ಸೂಕ್ತ ಗೈಡ್‌ ಲೈನ್ಸ್‌ ಹೊರಡಿಸಿ, ಅಲ್ಲಿನ ಕಾರ್ಮಿಕರಿಗೂ ಕೆಲಸ ಮಾಡುವ ಅವಕಾಶ ನೀಡಬೇಕು. ಹಾಗೆಯೇ ಸೂಕ್ತ ಮುಂಜಾಗ್ರತೆ ವಹಿಸುವಂತೆ ಪ್ರೊಡಕ್ಷನ್‌ ಹೌಸ್‌ ಗಳಿಗೆ ಸೂಚನೆ ನೀಡಬೇಕು. ಹಾಗಾದಾಗ ಮಾತ್ರ ಸಿನಿಮಾ ಮತ್ತು ಸೀರಿಯಲ್‌ ಕ್ಷೇತ್ರಗಳನ್ನೇ ನಂಬಿಕೊಂಡು ಬದುಕುತ್ತಿರುವ ಕಾರ್ಮಿಕರು, ಕಲಾವಿದರಿಗೂ ಒಳೀತು.

Categories
ಎಡಿಟೋರಿಯಲ್

ಸವಾಲಿನ‌ ದಿನಗಳಲ್ಲೂ ಸಾಹಸದ ಮತ್ತೊಂದು‌ ಮಜಲು- ಸಿನಿಲಹರಿ ಯುಟ್ಯೂಬ್‌ ಲಾಂಚ್‌ !

ಇದು ನಿಜಕ್ಕೂ ಸಂಕಷ್ಟದ ಕಾಲ. ಏನೇ ಸಾಹಸಗಳು ಕೂಡ ಸವಾಲೇ. ಅಂತಹದ್ದೆ ಸವಾಲಿನ ಸಂದರ್ಭದಲ್ಲೇ ʼ ಸಿನಿಲಹರಿʼ ಸಾಹಸಗಳು ಮುಂದುವರೆದಿವೆ ಅನ್ನೋದು ನಮ್ಮ ಪಾಲಿಗೆ ಹೆಮ್ಮೆ. ʼ ಸಿನಿಲಹರಿʼ ವೆಬ್ ಸೈಟ್ ಶುರು ವಾಗಿದ್ದೇ ನಮ್ಮ ಪಾಲಿಗೆ ಒಂದು ದೊಡ್ಡ ಸಾಹಸ. ಕೋರೋನಾ ನಂತರದ ಲೌಕ್ ಡೌನ್ ದಿನಗಳು ಆಗಷ್ಟೇ ಮುಗಿದಿದ್ದವು. ಹಾಗಂತ ಜನರಿಗೆ ಕೊರೋನಾ ಆತಂಕ ದೂರವಾಗಿರಲಿಲ್ಲ. ಆ ಹೊತ್ತಿಗೆ ನಮಗೂ ಕೈಯಲ್ಲಿ ಕೆಲಸ ಇರಲಿಲ್ಲ. ಬದುಕಿಗೆ ಒಂದು ಕೆಲಸ ಅಂತ ಅನಿವಾರ್ಯವೇ ಇತ್ತು. ಆಗ ನಮಗೆ ಹೊಳೆದಿದ್ದು ವೆಬ್ ಸೈಟ್ ಶುರು ಮಾಡುವ ಆಲೋಚನೆ. ಅದೃಷ್ಟ ಎನ್ನುವ ಹಾಗೆ ಅದಕ್ಕೆ ದೊಡ್ಡ ಬೆಂಬಲ ನೀಡಿ, ಚಾಲನೆ ಕೊಟ್ಟಿದ್ದು ಲಹರಿ ರೆಕಾರ್ಡಿಂಗ್ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು ಅವರು. ” ಸಿನಿ ಲಹರಿʼ ಪ್ರತಿ ಹೆಜ್ಜೆಗಳಲ್ಲಿ ಅವರನ್ನು ನಾವು ಮರೆಯೋದಿಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ , ಕಂಗೆಟ್ಟಿದ್ದ ನಮಗೆ ಒಂದು ದಾರಿ ಸಿಕ್ಕಿದ್ದೇ ಅವರ ಮೂಲಕ.

ಯೋಗಾ ಯೋಗ ಅದಕ್ಕೆ ಹಲವರ ಬೆಂಬಲವೂ ಸಿಕ್ಕಿತು. ಅದು ಶುರುವಾಗಿ ಇಲ್ಲಿಗೆ ನಾಲ್ಕು ತಿಂಗಳ ಮೇಲಾಯಿತು. ಈಗ ಇನ್ನೊಂದು ಹೆಜ್ಜೆ. ʼ ಸಿನಿ ಲಹರಿʼ ಯುಟ್ಯೂಬ್ ಚಾನೆಲ್. ಹಾಗಂತ ಆರ್ಥಿಕವಾಗಿ ಏನೋ ಮ್ಯಾಜಿಕ್ ನಡೆದು ಹೋಯಿತು ಅಂತೇನಿಲ್ಲ. ಹಣಕಾಸಿನ ವಿಚಾರದಲ್ಲಿ ಈಗಲೂ ಸಂಕಷ್ಟವೇ. ಕೊರೋನಾ ಕಾರಣಕ್ಕೆ ಇಡೀ ಚಿತ್ರರಂಗ ಭಾರೀ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. ಅದು ಚೇತರಿಕೆ ಕಾಣಲು ಇನ್ನಷ್ಟು ಸಮಯ ಬೇಕಿದೆ. ಇಂತಹ ದಿನಗಳಲ್ಲಿ ಸಿನಿಮಾ ರಂಗ ನಂಬಿಕೊಂಡು ಏನೇನೋ ಮಾಡಲು ಹೊರಡುತ್ತೇವೆಂದರೆ ಅದರ ಪರಿಸ್ಥಿತಿ ಹೇಗೆ ಅಂತ ಬಿಡಿಸಿ ಹೇಳಬೇಕಿಲ್ಲ. ಅದೇ ಪರಿಸ್ಥಿತಿಯಲ್ಲೆ ನಾವೂ ಇದ್ದೇವೆ. ಅದರಾಚೆ, ಅತೀ ಕಡಿಮೆ ಅವದಿಯಲ್ಲಿ’ ಸಿನಿ ಲಹರಿ ”ಗೆ ಚಿತ್ರರಂಗದಿಂದ ದೊಡ್ಡ ಮನೋ‌ಬೆಂಬಲ‌ ಸಿಕ್ಕಿದೆ. ಸಿನಿಮಾಕ್ಕಂತಲೇ ಇಂತಹದೊಂದು ವೆಬ್ ಸೈಟ್ ಬೇಕಿತ್ತು, ಅದನ್ನು ನೀವಿಬ್ಬರು ಮಾಡಿದ್ದೀರಿ, ಅದನ್ನು ಇನ್ನಷ್ಟು, ಮತ್ತಷ್ಟು ಅಂದವಾಗಿ, ಚೆಂದವಾಗಿ ನಡೆಸಿಕೊಂಡು ಹೋಗುವ ಸಾಮಾರ್ಥ್ಯ ನಿಮಗಿದೆ, ಮಾಡಿ ಅಂದರು. ಹಲವು ನಟ- ನಟಿಯರು ಕಚೇರಿಗೆ ನೇರವಾಗಿ ಭೇಟಿ ಕೊಟ್ಟು, ಮಾನಸಿಕ ಸ್ಥೈರ್ಯ ಕೊಟ್ಟರು. ಅದೇ, ಹೊತ್ತಿಗೆ ನಮ್ಮ ಸಾಹಸಕ್ಕೆ ಆರ್ಥಿಕ ಸಹಾಯದ ಮೂಲಕ ‘ಸಿನಿ‌ಲಹರಿ’ ಗೆ ದೊಡ್ಡ ಬೆಂಬಲವಾಗಿ ನಿಂತಿದ್ದು ಉದ್ಯಮಿ ಪಿ. ಕೃಷ್ಣ. ಅವರಿವತ್ತು ಸಿನಿ ಲಹರಿ ಸಿಇಒ.

ಹಾಗೆ ನೋಡಿದರೆ, ಸಿನಿ‌ಲಹರಿ ಯುಟ್ಯೂಬ್ ಚಾನೆಲ್ ಶುರುವಿಗೆ ಅವರೇ ಕಾರಣ. ಅವರಿಂದಲೇ ಯುಟ್ಯೂಬ್ ಚಾನೆಲ್ ಆರಂಭದ ಕನಸುಗಳು ಗರಿಗೆದರಿಕೊಂಡವು. ಮುಂದೆ ಅವರೇ ಆಸಕ್ತಿ ವಹಿಸಿ, ಯುಟ್ಯೂಬ್ ಚಾನೆಲ್ ಆರಂಭದ ಪ್ರಕ್ರಿಯೆಗಳು ಶುರುವಾದವು. ಹೆಚ್ಚು ಕಡಿಮೆ ಒಂದು ತಿಂಗಳ ಸಿದ್ಧತೆಯಲ್ಲಿ ವ್ಯವಸ್ಥಿತ ಸ್ಟುಡಿಯೋ, ಮೂರ್ನಾಲ್ಕು ಹೈಟೆಕ್ ತಂತ್ರಜ್ಞಾನದ ಕ್ಯಾಮೆರಾ, ನುರಿತ ಸಿಬ್ಬಂದಿ‌ಯೊಂದಿಗೆ ಈಗ ಯುಟ್ಯೂಬ್ ಚಾನೆಲ್ ಸಿನಿಮಾ ರಂಗದ ಸೇವೆಗೆ ರೆಡಿಯಾಗಿದೆ‌. ಇಂದು( ಮಾ.10) ಜನಪ್ರಿಯ ಸಿನಿ ತಾರೆಯರು ಹಾಗೂ ಹಿತೈಷಿಗಳ ಮೂಲಕ ಚಿತ್ರರಂಗಕ್ಕೆ ಅರ್ಪಣೆ ಆಗುತ್ತಿರುವುದು ಸಿನಿ ಲಹರಿ ತಂಡದ ಹೆಮ್ಮೆ.

Categories
ಎಡಿಟೋರಿಯಲ್

ಮಾತು ಮನಸ್ಸು ಕೆಡಿಸಿತು, ಕೆಟ್ಟ ಮನಸುಗಳು ಮನೆ ಕೆಡಿಸಿದವು, ಇಬ್ಬರು ನಟರ ಜಗಳದಲ್ಲಿ ಚಳಿ ಕಾಯಿಸಿಕೊಂಡ ಕುತಂತ್ರಿಗಳಿಗೆ ನಿಜಕ್ಕೂ ಸಿಕ್ಕಿದ್ದೇನು ?

ಚಿತ್ರರಂಗ ಒಂದು ಮನೆ ಇದ್ದಂತೆ. ನಾವೆಲ್ಲ ಒಂದೇ ಕುಟುಂಬದ ಸದ್ಯಸರು ಅಂತ ಉದ್ಯಮದ ಸಭೆ- ಸಮಾರಂಭಗಳಲ್ಲಿ ನಟ-ನಟಿಯರು ಹೇಳಿಕೊಳ್ಳುವುದು ಸರ್ವೇ ಸಾಮಾನ್ಯ. ಅದು ನಿಜವೂ ಹೌದು. ವರನಟ ರಾಜ್ ಕುಮಾರ್ ಕಾಲದಿಂದಲೂ ಉದ್ಯಮ ಹಾಗೆ ಇದ್ದಿದ್ದೂ ನಿಮಗೂ ಗೊತ್ತು. ಆದರೆ ಈಗ ಕೆಟ್ಟ ಮನಸುಗಳ ಮೂಲಕ ಅದಕ್ಕೆ ಬೆಂಕಿ ಬಿದ್ದಿದೆ. ತರವಲ್ಲದ ಮಾತುಗಳು ಮನಸ್ಸು ಕೆಡಿಸಿವೆ. ಹಾಗೆಯೇ ಕೆಟ್ಟ ಮನಸುಗಳು ಸೇರಿಕೊಂಡು ಮನೆಯನ್ನೇ ಕೆಡಿಸಿವೆ. ದರ್ಶನ್ ಹಾಗೂ ಜಗ್ಗೇಶ್ ನಡುವಿನ ಈ ಜಗಳ ಎಲ್ಲಿಗೆ ಹೋಗಿ ನಿಲ್ಲುತ್ತೋ ಗೊತ್ತಿಲ್ಲ. ಸದ್ಯಕ್ಕಂತೂ ಒಂದು ವಿರಾಮ ಸಿಕ್ಕಿದೆ. ಅದೇ ಈಗ ಖುಷಿ ವಿಚಾರ.

ಅದೇನೆ ಇರಲಿ, ಮಾತು ಮನೆ ಕೆಡಿಸಿತು,ತೂತು ಒಲೆ ಕೆಡಿಸಿತು ಅನ್ನೊದೊಂದು ಗಾದೆ ಮಾತು.‌ಹಾಗೆಯೇ ಮಾತು ಆಡಿದರೆ ಹೊಯ್ತು, ಮುತ್ತು ಒಡೆದರೆ ಹೊಯ್ತು ಅನ್ನೊದು ಇನ್ನೊಂದು ಗಾದೆ‌ ಮಾತು. ಸದ್ಯಕ್ಕೆ ಚಿತ್ರರಂಗದಲ್ಲಿ ಇವರೆಡು ಗಾದೆ ಮಾತುಗಳು ನಿಜವಾಗಿ ಹೋದವು. ಗಾದೆ ಹೇಳಿದ ಹಿರಿಯರು, ಮಾತನಾಡುವಾಗ ಎಚ್ಚರ ಇರಲಿ ಅಂತ ಹೇಳಿದ್ದಕ್ಕೂ ಕ್ಯಾರೆ ಎನ್ನದೆ ಜಗ್ಗೇಶ್ ಮಾತನಾಡಿದ್ದರ ಪರಿಣಾಮ ಇವತ್ತು ಏನಾಗಿ ಹೋಯಿತು ಅಂತ ನಿಮಗೆಲ್ಲ ಗೊತ್ತೇ ಇದೆ. ಆ ಜಗಳದ ಬಗ್ಗೆ, ಹೆಚ್ಚೇನು ಹೇಳಬೇಕಿಲ್ಲ. ಆದರೆ ಹೇಳಲು ಹೊರಟಿದ್ದು ಆ ಇಬ್ಬರು ನಟರ ನಡುವೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡ ಮನಸು ಮತ್ತು ಮನಸ್ಥಿತಿ ಕುರಿತು.

ಆಫ್ ದಿ ರೆಕಾರ್ಡ್ ಮಾತುಕತೆ ಎಲ್ಲರಲ್ಲೂ ಸರ್ವೇ ಸಾಮಾನ್ಯ. ಅದೆಷ್ಟು ಸಲ ನಾವು ಕೆಲಸ ಮಾಡುವ ಆಫೀಸ್ ಗಳಲ್ಲಿಯೇ ಯಾರೋ ಆಗದವರ ಬಗ್ಗೆ ಫ್ರೆಂಡ್ಸ್ ಬಳಿ ಹಂಚಿಕೊಳ್ಳುತ್ತೇವೆ. ಅದು ಸಾತ್ವಿಕ ಸಿಟ್ಟು ಮಾತ್ರ. ಧ್ವೇಷ ಅಲ್ಲ. ನಿಜಕ್ಕೂ ಅದು ದ್ವೇಷವೇ ಆಗೋದಾದ್ರೆ ಇಷ್ಟೊತ್ತಿಗೆ ಯಾರ ಮನೆಯಲ್ಲೂ ನೆಮ್ಮದಿ ಉಳಿಯು ತ್ತಿರಲಿಲ್ಲ‌ . ಅತ್ತೆ ಬಗ್ಗೆ ಸೊಸೆ ಅಕ್ಕಪಕ್ಕದ ಮನೆಯವರ ಜತೆಗೆ ಹಂಚಿಕೊಳ್ಳುವ ಮಾತುಗಳನ್ನೇ ಚಾಡಿ ಹೇಳಿ ಬೆಂಕಿ ಹಚ್ಚುವುದಾದರೆ, ಪ್ರತಿ ಮನೆಗಳಲ್ಲೂ ಬೆಂಕಿ ಗ್ಯಾರಂಟಿ. ಮನೆಗಳಲ್ಲಿ ಮಾತ್ರವಲ್ಲ, ಅದು ಊರು, ರಾಜ್ಯ, ದೇಶಕ್ಕೂ ಅಷ್ಟೇ. ಹಾಗಾಗಿಯೇ ಕೆಲವನ್ನು ಕೇಳಿಯೂ ಕೇಳದ ಹಾಗೆ ಇದ್ದು ಬಿಡಬೇಕು ಅನ್ನೋದು.

ಕೆಲವರಿಗೆ ಒಂದು ತೆವಲು ಇರುತ್ತದೆ. ಒಬ್ಬರನ್ನು ಇನ್ನೊಬ್ಬರ ಮೇಲೆ ತಂದಿಕ್ಕುವುದು, ಆ ಮೂಲಕ ತಮ್ನ ಸ್ವಾರ್ಥದ ಬೆಳೆ ಕಾಳು ಬೇಯಿಸಿಕೊಳ್ಳುವುದು. ಅದೇ ಸಾಲಿನಲ್ಲಿ ಇವನು ಕೂಡ. ಜತೆಗೆ ಆತನಿಗೆ ಸಾಥ್ ಕೊಟ್ಟವನು ಕೂಡ. ಇವರೆಲ್ಲ ಮೀರ್ ಸಾಧಿಕ್ ಸಂಸ್ಕೃತಿಗೆ ಸೇರಿದವರು.

ಚಿತ್ರೋದ್ಯಮ ದಲ್ಲಂತೂ ಇದು ಮಾಮೂಲು. ಆಫ್ ದಿ ರೆಕಾರ್ಡ್ ಅಂತಲೇ ಒಂದಷ್ಟು ಮಾತುಕತೆ ನಡೆದು ಹೋಗುತ್ತವೆ. ತೀರಾ ತೀರಾ ನಂಬಿಕೆ ಮೇಲೆಯೇ ಇವೆಲ್ಲ ನಡೆದು ಹೋಗುತ್ತವೆ. ಸಮಾಜ ಕೂಡ ಇಷ್ಟು ದೂರ ಬಂದಿದ್ದೇ ಹಾಗೆ. ಅದೆಷ್ಟೋ ಸತ್ಯಗಳು ಕೂಡ ಹಾಗೆಯೇ ಹುದುಗಿ ಹೋಗಿವೆ‌. ಅಷ್ಟಾಗಿಯೂ ಸಮಾಜ ನಂಬಿಕೆ ಮೇಲೆ ಸಾಗುತ್ತಾ ಬಂದಿದೆ. ಅಂತಹ ನಂಬಿಕೆಯ ಸಮಾಜಕ್ಕೀಗ ನಂಬಿಕೆ ಇಟ್ಟವರ ಪೈಕಿ ದರ್ಶನ್ ಕುರಿತು ಜಗ್ಗೇಶ್ ಆಡಿದ್ದೆರೆನ್ನಲಾದ ಮಾತಿನ ಆಡಿಯೋ ಸೋರಿಕೆ ಮಾಡಿದವನು ಒಬ್ಬ.

ಹಾಗಂತ, ಜಗ್ಗೇಶ್ ಅದ್ಯಾವುದೋ ನಿರ್ಮಾಪಕನ ಜತೆ ಮಾತನಾಡುತ್ತಾ ದರ್ಶನ್ ಫ್ಯಾನ್ಸ್ ಬಗ್ಗೆ ಮಾತನಾಡಿದ್ದು ಸರಿ ಅಂತಲೂ ಅಲ್ಲ. ಅದು ಆಪ್ ದಿ ರೆಕಾರ್ಡ್ ಆದರೂ ಅದು ತಪ್ಪೇ. ಹಾಗೆಯೇ ಆ ಮಾತಿಗೆ ದರ್ಶನ್ ಅಭಿಮಾನಿಗಳನ್ನೆಲಾದವರು ಶೂಟಿಂಗ್ ಸ್ಥಳದಲ್ಲೇ ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗುವ ಮೂಲಕ ಅಸಭ್ಯವಾಗಿ ನಡೆದುಕೊಂಡಿದ್ದು ಕೂಡ ಸರಿನಾ? ಎಲ್ಲದಕ್ಕೂ ಒಂದು ರೀತಿ ರಿವಾಜು ಅಂತೆಲ್ಲ ಇವೆ. ಅದೆಲ್ಲವನ್ನು ಮರೆತು ಹಾದಿ ರಂಪ, ಬೀದಿ ರಂಪ ಆಗಿ ಹೋಯಿತು ಆಡಿಯೋ ಸೋರಿಕೆ ಪ್ರಕರಣ. ಅದು ಇನ್ನೆಲ್ಲಿಗೆ ಹೋಗುತ್ತೋ, ಸದ್ಯಕ್ಕೆ ನಟ ದರ್ಶನ್ ಒಂದಷ್ಟು ವಿರಾಮ ಕೊಟ್ಟಿದ್ದಾರೆ. ಆದರೆ ಆಪ್ ದಿ ರೆಕಾರ್ಡ್ ಅಂತ ಒಂಥರದ ನಂಬಿಕೆಯಲ್ಲಿಜಗ್ಗೇಶ್ ಹಗುರವಾಗಿ ಆಡಿದ ಮಾತುಗಳನ್ನು ಬೀದಿಗೆ ತಂದ ಆ ಮಹಾಶಯರು ಮಾಡಿದ ಘನ ಕಾರ್ಯ ಸಮಾಜದ ಸ್ವಾಸ್ಥ್ಯ ಕ್ಕೆ ಪೂರಕವಾಗಿದೆಯೇ ಅಂತ ಒಮ್ಮೆ ಎಲ್ಲರೂ ಯೋಚಿಸಬೇಕಿದೆ.

ಕೆಲವರಿಗೆ ಒಂದು ತೆವಲು ಇರುತ್ತದೆ. ಒಬ್ಬರನ್ನು ಇನ್ನೊಬ್ಬರ ಮೇಲೆ ತಂದಿಕ್ಕುವುದು, ಆ ಮೂಲಕ ತಮ್ನ ಸ್ವಾರ್ಥದ ಬೆಳೆ ಕಾಳು ಬೇಯಿಸಿಕೊಳ್ಳುವುದು. ಅದೇ ಸಾಲಿನಲ್ಲಿ ಇವನು ಕೂಡ. ಜತೆಗೆ ಆತನಿಗೆ ಸಾಥ್ ಕೊಟ್ಟವನು ಕೂಡ. ಇವರೆಲ್ಲ ಮೀರ್ ಸಾಧಿಕ್ ಸಂಸ್ಕೃತಿಗೆ ಸೇರಿದವರು. ನೀವೇ ಹೇಳಿ, ಇನ್ನು ಮೇಲೆ ನೀವು ಆತನ ಜತೆಗೆ ನೇರವಾಗಿಯೋ ಇಲ್ಲವೇ ಫೋನ್ ಮೂಲಕವೋ ಕಾನ್ಪಿಡೆನ್ಸಿಯಲ್ ಮ್ಯಾಟರ್ ಹಂಚಿಕೊಳ್ಳಲು ಸಾಧ್ಯವೇ? ಆತನದ್ದು ಸರಿ ಅಂತ ಒಪ್ಪಿಕೊಳ್ಳುವುದಾದರೆ ಸಮಾಜದಲ್ಲಿ ಯಾರ ಮೇಲೆ ನಂಬಿಕೆ ಇಡುವುದು? ಕಷ್ಟ- ಸುಖ ಅಂತ ಹೇಗೆಹಂಚಿಕೊಂಡು‌ ಮನಸು ಹಗುರ ಮಾಡಿಕೊಳ್ಳುವುದು? ಚಿತ್ರೊಧ್ಯಮ ಕೂಡ ಇಂತಹ ಚಾಡಿಕೋರಬಕೆಟ್ ಗಿರಾಕಿಗಳ ಬಗ್ಗೆ ಎಚ್ಚರದಿಂದರಲಿ.

Categories
ಎಡಿಟೋರಿಯಲ್ ಸಿನಿ ಸುದ್ದಿ

ಸಿನಿಮಾವನ್ನು ಸಿನಿಮಾವನ್ನಾಗಿ ಮಾತ್ರ ನೋಡಿ ಅಂತ ಹೇಳುವ ಧೈರ್ಯ ಯಾವ ಸ್ಟಾರ್ ಗೂ ಇಲ್ವಾ?

ಚಿತ್ರರಂಗ ಹಾಳಾಗುತ್ತಿದೆ ಅಂತ ಹಿರಿಯ ನಟ ಜಗ್ಗೇಶ್ ಇನ್ನಾವುದೋ ಘಟನೆಯಲ್ಲಿ ಮಂಗಳವಾರ ಆಕ್ರೋಶ ಹೊರ ಹಾಕಿದ ಬೆನ್ನಲೇ ಒಂದು ಸಮುದಾಯದ ಆಕ್ರೋಶಕ್ಕೆ ‘ ಪೊಗರು’ ಸಿನಿಮಾ ತಂಡ ಮಂಡೆ ಉರಿ ಬಿದ್ದಿದೆ. ವಿಚಿತ್ರ ಅಂದ್ರೆ ತೆರೆ ಮೇಲೆ ‘ ಪೊಗರು ‘ ತೋರಿಸಿದವರೇ ನಿಜ ಜೀವನದಲ್ಲಿ ಒಂದು ಸಮುದಾಯದ ಕೂಗಿಗೆ ವಿಲ ವಿಲ ಒದ್ದಾಡಿದ್ದಾರೆ. ಇವರದ್ದೆಲ್ಲ ಅರಚಾಟ ತೆರೆ ಮೇಲೆ ಮಾತ್ರವೇ ಅಂತ ಜನ ಮಾತನಾಡುತ್ತಿದ್ದಾರೆ. ಒಂಥರ ವಿಚಿತ್ರವಾಗಿದೆ ಈ ವಿದ್ಯಮಾನ.

ಆ ಕತೆ ಇರಲಿ, ಈಗ ಪೊಗರು ವಿವಾದದಲ್ಲಿ ರಾಜಿ ಪಂಚಾಯಿತಿಗಳು ನಡೆದರೂ, ವಿರೋಧದ ಕೂಗು ಜಾಸ್ತಿ ಆಗಿದೆ. ಪರಿಣಾಮ ವಿವಾದಕ್ಕೆ ಕಾರಣವಾದ ದೃಶ್ಯಕ್ಕೆ ಕತ್ತರಿ ಬೀಳುವುದು ಗ್ಯಾರಂಟಿ ಆಗಿದೆ. ಹಾಗಂತ ಚಿತ್ರ ತಂಡ ಒಪ್ಪಿಕೊಂಡಿದೆ ಎನ್ನುವ ಮಾಹಿತಿ ಇದೆ.ಅಲ್ಲಿಗೆ ನಿರ್ದೇಶಕನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯ ನೆಗೆದು ಬಿದ್ದಿದೆ. ಸಂಭಾವನೆ ವಿಚಾರದಲ್ಲಿ ನಿರ್ದೇಶಕರನ್ನೇ ಮಣ್ಣು‌ ಮುಕ್ಕಿಸುವ ಸ್ಟಾರ್ ಗಳು ಕೂಡ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಸುಮ್ಮನಿದ್ದಾರೆ. ಮುಂದೆ ಇನ್ನಾವ ಸಿನಿಮಾವೂ ಇಂತಹದೇ ವಿವಾದಕ್ಕೆ ಸಿಲುಕಿ ಕತ್ತರಿ ಪ್ರಯೋಗಕ್ಕೆ ಸಿಲುಕುತ್ತೋ ಗೊತ್ತಿಲ್ಲ.

ಯಾಕಂದ್ರೆ ಸಿನಿಮಾ ನಿರ್ದೇಶಕನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ಆಗುತ್ತಿರುವುದು ಇದೇ ಮೊದಲಲ್ಲ. ಸಾಹಿತಿಗಳು, ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನೇ ದಮನ ಮಾಡಿದ ಹಾಗೆ ಸಿನಿಮಾ ನಿರ್ದೇಶಕನ ಅಭಿವ್ಯಕ್ತಿ ಸ್ವತಂತ್ರ ಆಗಾಗ ಹರಣ ಆಗುತ್ತಲೇ ಬಂದಿದೆ. ಇಷ್ಟಾಗಿಯೂ ಚಿತ್ರರಂಗವಾಗಲಿ, ಸ್ಟಾರ್ ಗಳಾಗಲಿ ಒಂದಾಗಿ ಧ್ವನಿ ಎತ್ತಿದ್ದು ತೀರಾ ಅಪರೂಪ. ಅದರ ಪರಿಣಾಮವೀಗ ‘ಪೊಗರು’ ಮೇಲೂ ಬಿದ್ದಿದೆ.

ಹೋಮ ನೆಡೆಸಲು ಕುಳಿತ ವ್ಯಕ್ತಿಯ ಹೆಗಲ ಮೇಲೆ ಚಿತ್ರದ ನಾಯಕ ಕಾಲಿಟ್ಟಿದ್ದ ಎನ್ನುವುದೇ ‘ ಪೊಗರು’ ಸುತ್ತ ವಿವಾದ ಹುಟ್ಟಲು ಕಾರಣ. ಅಲ್ಲಿ ಹೋಮಕ್ಕೆ ಕುಳಿತವನು ಇಂತಹದೇ ಸಮುದಾಯಕ್ಕೆ ಸೇರಿದವನು ಅಂತ ಎಲ್ಲೂ ಹೇಳಿಲ್ಲ. ಹಾಗೆಯೇ ಒಂದು ಜಾತಿ ಸೂಚಕವಾಗಿಯೂ ಅದನ್ನು ತೋರಿಸಿಲ್ಲ. ಅಷ್ಟಾಗಿಯೂ ಆತ ತಮ್ಮವನೇ, ಹಾಗಾಗಿ ತಮ್ಮೀಡಿ ಸಮುದಾಯಕ್ಕೆ ಅವಮಾನ ಆಗಿದೆ ಅಂತ ಒಂದು ಸಮುದಾಯ ಧ್ವನಿ ಎತ್ತಿದೆ.ಮಂಗಳವಾರ ದಿನವೀಡಿ ರಾಜಿ ಸರ್ಕಸ್ ನಡೆದರೂ, ಅವರದೇ ಕೂಗು ಹೆಚ್ಚಾಗಿ, ಅನಿವಾರ್ಯ ವಾಗಿ ಚಿತ್ರದೊಳಗಿನ ದೃಶ್ಯಕ್ಕೆ ಕತ್ತರಿ ಬೀಳುತ್ತಿದೆ.

ಪ್ರಶ್ನೆ ಇರುವುದು ಸಿನಿಮಾವನ್ನು ಸಿನಿಮಾವನ್ನಾಗಿ ಮಾತ್ರ ನೋಡಿ ಅಂತ ಚಿತ್ರೋದ್ಯಮ ಯಾಕೆ ಅವರಿಗೆ ಹೇಳಿಲ್ಲ ಅಂತ. ಸದ್ಯಕ್ಕೀಗ ‘ಪೊಗರು’ . ಮುಂದ್ಯಾವುದು ಚಿತ್ರವೋ ಗೊತ್ತಿಲ್ಲ. ಅದರಲಿ, ಸಮಾಜ ಒಂದು ಸಿನಿಮಾದ ದೃಶ್ಯವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾ ಅಂತ. ಹಾಗೊಂದು ವೇಳೆ ಅದು ಹೌದು ಎನ್ನುವುದಾ ಗಿದ್ದರೆ ಒಂದು ಸಮುದಾಯ ತಲೆಮಾರು ಗಳಿಂದ ಶೋಷಿಸುತ್ತಲೇ ಬಂದ ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಎಷ್ಟೇಲ್ಲ ಚಿತ್ರ ಬಂದರೂ, ಅದನ್ಯಾಕೆ ಅವರು ಅಷ್ಟು ಗಂಭೀರವಾಗಿ ತೆಗೆದುಕೊಂಡಿಲ್ಲ? ಅಸ್ಫಶ್ಯತೆ ಆಚರಣೆ ತಪ್ಪು ಅಂತ ತೋರಿಸಿದರು, ಅದನ್ನಾಕೆ ನಿಲ್ಲಿಸಿಲ್ಲ? ತಾವು ಬಲಿಷ್ಟರು, ತಾವು ಮಾಡಿದ್ದೇ ಸರಿ ಎನ್ನುವ ಅಹಂ ನಿಂದಲೇ ತಾನೇ ಒಂದು ಸಮುದಾಯ ಪೊಗರು ಮೇಲೆ ಎಗರಿ ಬಿದ್ದಿದ್ದು? ಮುಂದೆ ಇದೇ ಸಮುದಾಯ ತಾವು ಹೇಳುವುದನ್ನೆ ಸಿನಿಮಾ ಮಾಡಿ ಅಂತ ಚಿತ್ರರಂಗಕ್ಕೆ ಸೂಚನೆ ಕೊಟ್ಟರು ಅಚ್ಚರಿ ಇಲ್ಲ. ಹಾಗೆಯೇ ಅದು ಜಾರಿಗೆ ಬಂದರೂ ಅಚ್ವರಿ ಪಡಬೇಕಿಲ್ಲ. ಕಾರಣ, ಅವರೇ ಅಲ್ಲವೇ ಚಿತ್ರೋದ್ಯಮವನ್ನು ನಿಯಂತ್ರಿಸುವವರು?

Categories
ಎಡಿಟೋರಿಯಲ್

ಸ್ಟಾರ್‌ಗಳ ಕನ್ನಡ ನಿರ್ಲಕ್ಷ್ಯವನ್ನು ಪ್ರೇಕ್ಷಕ ಯಾಕೆ ಪ್ರಶ್ನಿಸಬಾರದು ?

ಮನೆಗೆ ಇಂಗ್ಲಿಷ್‌ ಪೇಪರ್‌ ಬೇಕು, ಪ್ರಚಾರಕ್ಕೂ ಇಂಗ್ಲಿಷ್‌ ಪೇಪರ್‌ ಬೇಕು- ಇದೇ ಅಲ್ವೇ ಕೆಲವು ಸಿನಿಮಾ ಮಂದಿ ಕನ್ನಡ ಅಭಿಮಾನ

ಕನ್ನಡ ಸಿನಿಮಾಗಳಿಗೆ ನಿಜಕ್ಕೂ ಆಪತ್ತು ತಂದವರಾರು?

ನಟ-ನಟಿಯರು ಕನ್ನಡಿಗರ ಭಾಷಾಭಿಮಾನದ ಬಗ್ಗೆ ಮಾತನಾಡುವುದು ಒಂಥರ ವಿಚಿತ್ರ. ಯಾಕಂದ್ರೆ, ಹೇಳೋದು ಅಚಾರ, ತಿನ್ನೋದು ಬದನೆ ಕಾಯಿ ಅಂತಾರಲ್ಲ ಹಾಗಿದೆ ಕೆಲವು ಸಿನಿಮಾ ಮಂದಿ ಧೋರಣೆ. ಹಾಗೆ ನೋಡಿದರೆ, ಮೊದಲು ಭಾಷಾಭಿಮಾನ ಬೆಳೆಸಿಕೊಳ್ಳಿ ಅಂತ ನಾವೇ ಅವರಿಗೆ ಹೇಳಬೇಕಿದೆ. ಯಾಕಂದ್ರೆ, ಕನ್ನಡದಲ್ಲಿ ಕೆಲವು ಸ್ಟಾರ್‌ ಗಳನ್ನು ಬಿಟ್ಟರೆ, ಉಳಿದವರು ಇಂಗ್ಲಿಷ್‌ ಮೋಹಿಗಳು. ನಟಿಯರ ವಿಚಾರದಲ್ಲಂತೂ ಇದು ವಿಚಿತ್ರ ಕತೆ.

ಕರ್ನಾಟಕದಲ್ಲೇ ಹುಟ್ಟಿ ಬೆಳೆದರೂ ಕೆಲವು ನಟಿಯರಿಗೆ ಕನ್ನಡ ಕಷ್ಟ, ಬದಲಿಗೆ ಇಂಗ್ಲಿಷ್‌ ತುಂಬಾ ಇಷ್ಟ. ಇರಲಿ, ಹಾಗಂತ ನಾವೇನು ಇಂಗ್ಲಿಷ್‌ ವಿರೋಧಿಗಳಲ್ಲ. ಅಷ್ಟೇ ಅಲ್ಲ ಯಾವುದೇ ಭಾಷೆಯ ಅಂಧ ಅಭಿಮಾನಗಳು ನಾವಲ್ಲ. ಪ್ರಶ್ನೆ ಇರೋದು, ಕನ್ನಡ ಗೊತ್ತಿದ್ದು ನೀವು ಕನ್ನಡವನ್ನು ನಿರ್ಲಕ್ಷ್ಯ ಮಾಡೋದು ಯಾಕೆ ? ಕನ್ನಡ ಸಿನಿಮಾದಲ್ಲೇ ನಟಿಸಿ, ಆಮೇಲೆ ಆ ಸಿನಿಮಾ ನೋಡಿ ಕನ್ನಡಿಗರು ಹರಸಿ ಅಂತೆಲ್ಲ ಮನವಿ ಮಾಡುವ ನೀವು, ಮನೆಗೆ ಇಂಗ್ಲಿಷ್‌ ಪೇಪರ್‌ ಹಾಕಿಸಿಕೊಳ್ಳುವುದೇಕೆ ? ಪ್ರಚಾರಕ್ಕೂ ಇಂಗ್ಲಿಷ್‌ ಪೇಪರೇ ಬೇಕೆಂದು ದುಂಬಾಲು ಬೀಳುವುದೇಕೆ?

ಕೆಲವು ಸಿನಿಮಾ ಮಂದಿಯ ಧೋರಣೆ ಇದು. ವಾಸ್ತವ ಹೀಗಿದ್ದೂ ಕನ್ನಡಿಗರು ಸ್ವಾಭಿಮಾನಿಗಳಲ್ಲ ಅಂತ ಯಾರಾದರೂ ನಟ-ನಟಿಯರು ಕನ್ನಡಿಗರ ಭಾಷಾಭಿಮಾನವನ್ನೇ ಪ್ರಶ್ನಿಸಿದಾಗ,  ಕೆಲವು ನಟ-ನಟಿಯರ ನೈತಿಕತೆಯ ಪ್ರಶ್ನೆಯೂ ಶುರುವಾಗುತ್ತದೆ. ನಿಜ, ಕನ್ನಡಿಗರಿಗೆ ಭಾಷಾಭಿಮಾನ ಇಲ್ಲ ಎನ್ನುವುದು ಒಂದರ್ಥದಲ್ಲಿ  ಸತ್ಯವೂ ಕೂಡ. “ಕನ್ನಡಿಗರ’ ವಿಶಾಲ ಮನೋಭಾವದ ಗುಣದಿಂದಲೇ ಇವತ್ತು ಕನ್ನಡ‌ಭಾಷೆ, ನೆಲ- ಜಲ ಬದುಕಿಗೂ ಆಪತ್ತು ಬಂದಿರುವುದು ಸುಳ್ಳಲ್ಲ .‌ಅದು ಕನ್ನಡ ಸಿನಿಮಾಗಳ ವಿಚಾರದಲ್ಲೂ ಕೂಡ. ಅದರೆ ಇದಲ್ಲದ್ದಕ್ಕೂ ಯಾರು ಹೊಣೆ ? ಅಮಾಯಕ ಜನರಾ ಅಥವಾ ಅಧಿಕಾರದಲ್ಲಿರುವವರಾ ?

ಕನ್ನಡಿಗರ ಸ್ವಾಭಿಮಾನದ ವಿಚಾರ ಬಿಡಿ, ಅದಕ್ಕೆ ಬೇಕಾದ್ರೆ ಕಾರಣ ಜನರೇ ಅನ್ನೋಣ, ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸರ್ಕಾರವನ್ನು ಹೊಣೆಯಾಗಿಸೋಣ, ಆದರೆ, ಕನ್ನಡ ಸಿನಿಮಾಗಳಿಗೆ ಪರಭಾಷೆಯ ಸಿನಿಮಾಗಳಿಂದ ಆಪತ್ತು ಬಂದಿರುವುದಕ್ಕೆ  ಕೆಲವು ಸಿನಿಮಾ ಮಂದಿಯ ಪಾಲು ಇಲ್ಲವೇ?  ಕರ್ನಾಟಕದಲ್ಲೇ ಪರಭಾಷೆಯ ಸ್ಟಾರ್‌ ಸಿನಿಮಾಗಳ ವಿತರಣೆಗೆ ಇಲ್ಲಿನ ಕೆಲವು ಸಿನಿಮಾ ಮಂದಿಯೇ ವಹಿಸುವ ಮುತುವರ್ಜಿ ನೋಡಿದರೆ, ಕನ್ನಡಕ್ಕೆ ಆಪತ್ತು ತಂದವರ ಹೂರಣ ಬಯಲಾಗುತ್ತದೆ. ಆ ಕತೆ ಇರಲಿ ಬಿಡಿ, ಅದು ದೊಡ್ಡವರ ವಿಷಯ. ವಿಷಯ ಬೇರೆಯದೇ ಇದೆ.

ತೆರೆ ಮೇಲೆ ಕನ್ನಡ‌ ಮತ್ತು ಕನ್ನಡ ನುಡಿ, ನೆಲ,ಜಲ ಕುರಿತು ಟೆರಾಸ್ ಕಿತ್ತು ಹೋಗುವ ಹಾಗೆ ಡೈಲಾಗ್ ಹೊಡೆದು, ಅಭಿಮಾನಿಗಳಿಂದ ಸಿಳ್ಳೆ, ಕೇಕೆ , ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸ್ಟಾರ್ ಗಳೆಲ್ಲ ವಾಸ್ತವದಲ್ಲಿ ಎಷ್ಟು ಕನ್ನಡ ಪರ ? ಬೆಳಗ್ಗೆ ಅವರ ಮನೆಗೆ ಇಂಗ್ಲಿಷ್ ಪತ್ರಿಕೆ ಬೇಕು, ತಾಜಾ ಸುದ್ದಿಗಳನ್ನು ಹಂಚಿಕೊಳ್ಳಲು ಅವರಿಗೆ ಇಂಗ್ಲಿಷ್ ಪತ್ರಿಕೆಗಳ ವರದಿಗಾರರೇಬೇಕು, ಬೆಳಗ್ಗೆ ತಿಂಡಿ, ಸಂಜೆ ಸ್ನಾಕ್ಸ್ ಗೆ ಫೈ ಸ್ಟಾರ್ ಹೊಟೇಲ್ ಗಳೇ ಆಗಬೇಕು, ಜಾಲಿ ಟ್ರಿಪ್ ಗೆ ಮರ್ಸಿಡಿಸ್, ಬೆಂಜ್, ಇತ್ಯಾದಿ ಅದ್ದೂರಿ ವೆಚ್ಚದ ಕಾರುಗಳೇ ಬೇಕು. ಪ್ರವಾಸ ಅಂತ ಹಾಂಗ್ ಕಾಂಗ್ ಮಲೇಷಿಯಾ ಸುತ್ತಬೇಕು. ಹಾಗೆ ಹೋದವರು ಕೂಡ ಸುಮ್ಮನೆ ಬಂದಿದ್ದಾರೆಯೇ? ಸಿಂಗಾಪುರ  ಅಂದ್ರೆ ಸ್ವರ್ಗ, ಮಾಲ್ಡಿವ್ಸ್ ನಂತಹ ಸ್ವರ್ಗವನ್ನು ನಾನೆಲ್ಲೋ ಕಂಡಿಲ್ಲ ಅಂತ ಪೋಸು ಕೊಡುವ ಕನ್ನಡದ ಕೆಲವು ಸ್ಟಾರ್‌ ಗಳು ತಮ್ಮ ಬುಡಕ್ಕೆ ಬೆಂಕಿ ಬಿದ್ದಾಗ ಕನ್ನಡಿಗರ ಸ್ವಾಭಿಮಾನ ಪ್ರಶ್ನಿಸುತ್ತಾರೆ, ಕನ್ನಡಿಗರಿಗೆ ಭಾಷಾಭಿಮಾನ ಇಲ್ಲ ಅಂತ ದೂರುತ್ತಾರೆ. ಇದು ಎಷ್ಟು ಸರಿ ಅಂತ ಪ್ರಶ್ನಿಸುವುದಾರೂ ಯಾರು?

Categories
ಎಡಿಟೋರಿಯಲ್

ಆಗಿದ್ದೆಲ್ಲ ಮರೆತು ಬಿಡೋಣ, ಹೊಸದನ್ನು ಹೊಸತನದಲ್ಲೇ ಸ್ವಾಗತಿಸೋಣ

ಹೊಸ ವರ್ಷದಲ್ಲಿ ಚಿತ್ರರಂಗ ಪ್ರಜ್ವಲಿಸಲಿ

2020 ಇತಿಹಾಸಕ್ಕೆ ಜಾರುತ್ತಿದೆ. ಅದಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಅವಿಷ್ಟು ಕಳೆದು ಹೋದರೆ, ಹೊಸ ವರ್ಷ 2021 ಬರುತ್ತಿದೆ. ಕೊರೋನಾ ಆತಂಕ ಅಂತೆಲ್ಲ ಎಷ್ಟೇ ಕಟ್ಟು ನಿಟ್ಟಿನ ಆದೇಶಗಳಿದ್ದರೂ, ಹೊಸ ವರ್ಷ 2021 ಕ್ಕೆ ಅದ್ದೂರಿ ಸ್ವಾಗತ ಕೂರಲು ಜನತೆ ತುದಿಗಾಲ ಮೇಲೆ ನಿಂತಿದೆ. ಅದಕ್ಕೆ ಕಾರಣ 2020 ಎನ್ನುವ ಕರಾಬು ವರ್ಷದ ಕರಾಳ ಆಧ್ಯಾಯ. ಅದೇನು ? ಆ ಬಗ್ಗೆ ವಿವರಿಸಬೇಕಿಲ್ಲ. ಕೊರೋನಾ ಕಾರಣಕ್ಕೆ ಇಡೀ ಜಗತ್ತೇ ಏನೆಲ್ಲ ತೊಂದರೆ ಅನುಭವಿಸಿತು, ಎಷ್ಟೇಲ್ಲ ಸಾವು-ನೋವು ಕಂಡಿತು, ಆರ್ಥಿಕವಾಗಿ ಏನೆಲ್ಲ ಸಂಕಷ್ಟ ಎದುರಾಯಿತು ಅಂತೆಲ್ಲ ಎಲ್ಲರಿಗೂ ಗೊತ್ತು. ಅಂತಹದೇ ಕರಾಳ ಅಧ್ಯಾಯ ಕನ್ನಡ ಚಿತ್ರರಂಗದಲ್ಲೂ ಕಾಣಿಸಿಕೊಂಡಿತು. ಇದೆಲ್ಲ ಅನಿರೀಕ್ಷಿತ ದಾಳಿಯೇ ಆಗಿ ಹೋಯಿತು. ಚಿತ್ರರಂಗದ ಇತಿಹಾಸದಲ್ಲೇ ಇಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣ ಆಗಿರಲಿಲ್ಲ. ಹೆಚ್ಚು ಕಡಿಮೆ ವರ್ಷ ಗಟ್ಟಲೆ ಸಿನಿಮಾ ಚಟುವಟಿಕೆಗಳು ಬಂದಾಗಬಹುದು ಅಂತಲೂ ಸಿನಿಮಾ ಮಂದಿ ಕನಸು ಕಂಡಿರಲಿಲ್ಲ. ಆದರೂ ಕೊರೋನಾ ದಾಳಿಗೆ ಅವೆಲ್ಲ ಘಟಿಸಿ ಹೋದವು.

ಎಲ್ಲವೂ ಈಗ ಹೊಸತಾಗಿಯೇ ಶುರುವಾಗಬೇಕಿದೆ. ಚಿತ್ರೋದ್ಯಮವೂ ಕೂಡ ಅದರಿಂದ ಹೊರತಾಗಿಲ್ಲ. ಇದುವರೆಗಿನ ಸಿನಿಮಾ ನಿರ್ಮಾಣದ ವೈಖರಿ, ಕತೆಗಳ ಆಯ್ಕೆಯೂ ಸೇರಿ ಈಗ ಎಲ್ಲವನ್ನು ಪ್ರೇಕ್ಷಕರು ಹೊಸ ರೀತಿಯಲ್ಲೇ ನೋಡುತ್ತಿದ್ದಾರೆ. ಅದು ಕಾಲದ ಮಹಿಮೆಯೂ ಕೂಡ. ಡಿಜಿಟಲ್‌ ತಂತ್ರಜ್ಞಾನ ಎಲ್ಲವೂ ಬದಲಾಗುವಂತೆ ಮಾಡಿದೆ. ಅದರ ಜತೆಗೆ ಡಬ್ಬಿಂಗ್‌ ಗೆ ಸಿಕ್ಕಿರುವ ಮುಕ್ತ ಅವಕಾಶ ಕನ್ನಡದ ಸಿನಿಮಾ ಲೋಕಕ್ಕೆ ದೊಡ್ಡ ಸವಾಲು ಹಾಕಿದೆ. ಅದೆಲ್ಲವನ್ನು ಚಿತ್ರರಂಗ ಚಾಲೆಂಜ್‌ ಎನ್ನುವುದಕ್ಕಿಂತ ಕ್ರಿಯೇಟಿವಿಟಿಗೆ ಸಿಕ್ಕ ಅವಕಾಶ ಅಂತಲೇ ಸ್ವೀಕರಿಸಬೇಕಿದೆ

ಈಗಲೂ ಅದೇ ಕಾರಣಕ್ಕೆ ಚಿತ್ರರಂಗ ಇನ್ನು ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳದೆ ಸುಮ್ಮನೆ ಕೂತಿದೆ. ಅದು ಈಗ ದೂರವಾಗಬೇಕಿದೆ. ಕೊರೋನಾ ಎನ್ನುವ ಕೆಟ್ಟ ಮಹಾಮಾರಿ ಹೊಸ ವರ್ಷವಾದರೂ ಜಗತ್ತಿನಿಂದ ದೂರವಾದೀತೆ? ಜನ ಅದನ್ನೇ ಈಗ ಎದುರು ನೋಡುತ್ತಿದೆ. ಅದೇ ಕಾರಣಕ್ಕೆ ಹೊಸ ವರ್ಷ ಹೊಸತನ ತರಲಿ ಎನ್ನುವ ಆಶಯದಲ್ಲೇ ಇಡೀ ಜಗತ್ತು ಎದುರು ನೋಡುತ್ತಿರುವುದು ಸುಳ್ಳಲ್ಲ.

ಒಂದಂತೂ ಸತ್ಯ, ಎಲ್ಲವೂ ಈಗ ಹೊಸತಾಗಿಯೇ ಶುರುವಾಗಬೇಕಿದೆ. ಚಿತ್ರೋದ್ಯಮವೂ ಕೂಡ ಅದರಿಂದ ಹೊರತಾಗಿಲ್ಲ. ಇದುವರೆಗಿನ ಸಿನಿಮಾ ನಿರ್ಮಾಣದ ವೈಖರಿ, ಕತೆಗಳ ಆಯ್ಕೆಯೂ ಸೇರಿ ಈಗ ಎಲ್ಲವನ್ನು ಪ್ರೇಕ್ಷಕರು ಹೊಸ ರೀತಿಯಲ್ಲೇ ನೋಡುತ್ತಿದ್ದಾರೆ. ಅದು ಕಾಲದ ಮಹಿಮೆಯೂ ಕೂಡ. ಡಿಜಿಟಲ್‌ ತಂತ್ರಜ್ಥಾನ ಎಲ್ಲವೂ ಬದಲಾಗುವಂತೆ ಮಾಡಿದೆ. ಅದರ ಜತೆಗೆ ಡಬ್ಬಿಂಗ್‌ ಗೆ ಸಿಕ್ಕಿರುವ ಮುಕ್ತ ಅವಕಾಶ ಕನ್ನಡದ ಸಿನಿಮಾ ಲೋಕಕ್ಕೆ ದೊಡ್ಡ ಸವಾಲು ಹಾಕಿದೆ. ಅದೆಲ್ಲವನ್ನು ಚಿತ್ರರಂಗ ಚಾಲೆಂಜ್‌ ಎನ್ನುವುದಕ್ಕಿಂತ ಕ್ರಿಯೇಟಿವಿಟಿಗೆ ಸಿಕ್ಕ ಅವಕಾಶ ಅಂತಲೇ ಸ್ವೀಕರಿಸಬೇಕಿದೆ. ಇದು ಸಾಧ್ಯವೇ ಎನ್ನುವುದು ಕೂಡ ಪ್ರಶ್ನಾರ್ಥವಾಗಿದೆ. ಅದರೂ ಚಿತ್ರ ರಂಗ ಈಗ ಬದಲಾಗಲೇಬೇಕಿದೆ. ಕಳೆದ ವರ್ಷದ ಕರಾಳ ಅಧ್ಯಾಯ ಚಿತ್ರರಂಗವೇ ಬಣ್ಣ ಮಾಸುವಂತೆ ಮಾಡಿತ್ತು. ಹೊಸ ವರ್ಷ ಅದೆಲ್ಲವನ್ನು ಮರೆಸುವ ಆಶಾದಾಯಕ ಬೆಳವಣಿಗೆ ಕಾಡುತ್ತದೆ. ಚಿತ್ರ ರಂಗ ಮತ್ತೆ ಮೈ ಕೊಡವಿ ಎದ್ದು, ಮತ್ತಷ್ಟು ಕಲರ್ಫುಲ್ ಆಗಲಿ, ಭಾರತೀಯ ಚಿತ್ರ ರಂಗವೇ ಇತ್ತ ತಿರುಗಿ ನೋಡುವಂತಹ ಚಿತ್ರಗಳು ಬರಲಿ. ಆ ನಿಟ್ಟಿನಲ್ಲಿಯೇ ಚಿತ್ರ ರಂಗ ಹೊಸ ವರ್ಷವನ್ನು ನಗು ನಗುತಾ ಬರಮಾಡಿಕೊಳ್ಳಲಿ.

Categories
ಎಡಿಟೋರಿಯಲ್ ಸಿನಿ ಸುದ್ದಿ

ಫಿಲ್ಮ್‌ ಚೇಂಬರ್‌ ಚುನಾವಣಾಧಿಕಾರಿಯಾಗಿ ಥಾಮಸ್‌ ಡಿಸೋಜಾ ಆಯ್ಕೆ-ಮಂಡಳಿ ಚುನಾವಣೆಗೆ ಕ್ಷಣಗಣನೆ…

ಸಾ.ರಾ.ಗೋವಿಂದು, ಬಾ.ಮ.ಹರೀಶ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ

ಥಾಮಸ್‌ ಡಿಸೋಜ

ಕನ್ನಡ ಚಿತ್ರರಂಗಕ್ಕೆ ಸುಮಾರು ಎಂಟು ದಶಕಕ್ಕೂ ಹೆಚ್ಚು ಕಾಲ ಇತಿಹಾಸವಿದೆ. ಹಾಗೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಐದು ದಶಕಕ್ಕೂ ಹೆಚ್ಚು ಕಾಲದ ಇತಿಹಾಸವಿದೆ. ಕನ್ನಡ ಚಿತ್ರರಂಗಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೃದಯವಿದ್ದಂತೆ. ಈ ಫಿಲ್ಮ್‌ ಚೇಂಬರ್‌ ಕನ್ನಡ ಚಿತ್ರರಂಗದ ಪ್ರಗತಿಗೆ ಬೆನ್ನೆಲುಬು. ಈವರೆಗೆ ಈ ಫಿಲ್ಮ್‌ ಚೇಂಬರ್‌ನಲ್ಲಿ ಸಾಕಷ್ಟು ಹಿರಿಯರು ಚುಕ್ಕಾಣಿ ಹಿಡಿದು, ಕನ್ನಡ ಚಿತ್ರರಂಗದ ಏಳಿಗೆಗೆ ದುಡಿದಿದ್ದಾರೆ. ಇನ್ನೂ ಕೆಲವರು ದುಡಿಯುತ್ತಿದ್ದಾರೆ. ಇಷ್ಟಕ್ಕೂ ಈ ಫಿಲ್ಮ್‌ ಚೇಂಬರ್‌ ಕುರಿತ ಸುದ್ದಿ ಯಾಕೆಂದರೆ, ಪ್ರತಿ ವರ್ಷವೂ ಫಿಲ್ಮ್‌ ಚೇಂಬರ್‌ ಚುನಾವಣೆ ನಡೆಯುತ್ತದೆ. ಕೆಲವೊಮ್ಮೆ ಈ ಫಿಲ್ಮ್‌ ಚೇಂಬರ್‌ನಲ್ಲಿ ಅವಿರೋಧ ಆಯ್ಕೆಯಾಗಿರುವುದೂ ಉಂಟು. ಬಹುತೇಕ ಚುನಾವಣೆ ಮೂಲಕ ಚುಕ್ಕಾಣಿ ಹಿಡಿದವರೇ ಹೆಚ್ಚು. ಈಗ ಸದ್ಯಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದೆ. ಅದಕ್ಕೀಗ ಕ್ಷಣಗಣನೆ ಕೂಡ ಶುರುವಾಗಿದೆ. ಈಗಾಗಲೇ ಫಿಲ್ಮ್‌ ಚೇಂಬರ್‌ನಲ್ಲಿ ನಡೆದ ಸಭೆಯಲ್ಲಿ ಚೇಂಬರ್‌ನ ಮಾಜಿ ಅಧ್ಯಕ್ಷರಾದ ಥಾಮಸ್‌ ಡಿಸೋಜ ಅವರನ್ನು ಚುನಾವಣಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಥಾಮಸ್‌ ಡಿಸೋಜ ಅವರು, ಇಷ್ಟರಲ್ಲೇ ಸಭೆ ಕರೆದು, ಫಿಲ್ಮ್‌ ಚೇಂಬರ್‌ಗೆ ಯಾವಾಗ ಚುನಾವಣೆ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಷ್ಟೇ ಅಲ್ಲ, ದಿನಾಂಕವನ್ನೂ ನಿಗದಿಗೊಳಿಸಲಿದ್ದಾರೆ.

ಸಾ.ರಾ.ಗೋವಿಂದು

ಇನ್ನು, ಈಗ ಹಾಲಿ ಜೈ ರಾಜ್‌ ಅವರು ಫಿಲ್ಮ್‌ ಚೇಂಬರ್‌ ಅಧ್ಯಕ್ಷರಾಗಿದ್ದಾರೆ. ಅವರ ಅವಧಿ ಜೂನ್‌ನಲ್ಲೇ ಪೂರ್ಣಗೊಂಡಿದೆ. ಆದರೆ, ಕೊರೊನೊ ಹಾವಳಿ ಇದ್ದುದರಿಂದ, ಸದ್ಯಕ್ಕೆ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದರು. ಈಗಷ್ಟೇ ಸಮಿತಿ ಸಭೆಯಲ್ಲಿ ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ. ನಂತರದ ದಿನಗಳಲ್ಲಿ ದಿನಾಂಕ ನಿಗಧಿಗೊಳಿಸಿ, ಚುನಾವಣೆ ನಡೆಸುವ ತಯಾರಿ ನಡೆಯಬೇಕಿದೆ.
ಅಂದಹಾಗೆ, ಈ ಬಾರಿ ಅ‍ಧ್ಯಕ್ಷ ಸ್ಥಾನ ಬಯಸಿದವರ ಸಂಖ್ಯೆ ಬಹಳಷ್ಟು ಇದೆಯಾದರೂ, ಬಾ.ಮ.ಹರೀಶ್‌ ಅವರು ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇನ್ನುಳಿದಂತೆ, ಮೂಲಗಳ ಪ್ರಕಾರ ಸಾ.ರಾ.ಗೋವಿಂದು ಅವರೂ ಕೂಡ ಮತ್ತೊಮ್ಮೆ ಅ‍ಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆಗಿಳಿಯಲಿದ್ದಾರೆ ಎನ್ನಲಾಗಿದೆ.

ಬಾ.ಮ.ಹರೀಶ್

ಹಾಗೆ ನೋಡಿದರೆ, ಫಿಲ್ಮ್‌ ಚೇಂಬರ್‌ನಲ್ಲಿ ಸಾ.ರಾ.ಗೋವಿಂದು ಮತ್ತು ಬಾ.ಮ.ಹರೀಶ್‌ ಅವರು ಅಧಿಕಾರ ನಡೆಸಿದವರು. ಮೂರು ಬಾರಿ ಸಾ.ರಾ.ಗೋವಿಂದು ಅವರು ಫಿಲ್ಮ್‌ ಚೇಂಬರ್‌ಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅಂತೆಯೇ, ಈ ಬಾರಿಯೂ ಸ್ಥಾನಕ್ಕೆ ಸ್ಪರ್ಧೆಗಳಿಯಲಿದ್ದಾರೆ ಎನ್ನಲಾಗಿದೆ. ಇನ್ನು, ಬಾ.ಮ.ಹರೀಶ್‌ ಅವರು ಕೂಡ ಈ ಹಿಂದೆ ತಲ್ಲಂ ನಂಜುಂಡಶೆಟ್ಟಿ ಅವರ ಅವಧಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿ ಕೆಲಸ ಮಾಡಿದ್ದರು. ಆ ನಂತರದ ದಿನಗಳಲ್ಲಿ ಥಾಮಸ್‌ ಡಿಸೋಜ ಅವರು ಅಧ್ಯಕ್ಷರಾದ ಸಂದರ್ಭದಲ್ಲೂ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಚಿನ್ನೇಗೌಡ ಅವರು ಅಧ್ಯಕ್ಷರಾಗಿದ್ದಾಗಲೂ ಬಾ.ಮ.ಹರೀಶ್‌ ಅವರು ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆ ನಡೆಸಿದ್ದರಾದರೂ, ಸಾ.ರಾ.ಗೋವಿಂದು ಅವರ ವಿರುದ್ಧ ಕಡಿಮೆ ಅಂತರದಲ್ಲೇ ಅವರು ಸೋಲು ಕಂಡಿದ್ದರು. ಈ ಸಲ ಗೆಲ್ಲುವ ವಿಶ್ವಾಸದೊಂದಿಗೆ ಸ್ಪರ್ಧೆಗಿಳಿಯುತ್ತಿರುವುದಾಗಿ ಹೇಳುತ್ತಾರೆ.

Categories
ಎಡಿಟೋರಿಯಲ್ ಸಿನಿ ಸುದ್ದಿ

ತಲ್ವಾರ್‌ ಪೇಟೆಯಲ್ಲಿ ಸೀರಿಯಲ್ ಸೆಟ್ ಚಂದ್ರಪ್ಪ! ವಿಶೇಷ ಪಾತ್ರದಲ್ಲಿ ರವಿಶಂಕರ್‌ ಎಂಟ್ರಿ

ವಸಿಷ್ಠ ಜೊತೆ ಆರ್ಮುಗಂ ಆರ್ಭಟ!

ಕನ್ನಡದಲ್ಲಿ ಈಗಾಗಲೇ “ತಲ್ವಾರ್‌ಪೇಟೆ” ಸಿನಿಮಾ ಶುರುವಾಗಿದ್ದು ಗೊತ್ತೇ ಇದೆ. ವಸಿಷ್ಠ ಸಿಂಹ ಹೀರೋ ಆಗಿ ಕಾಣಿಸಿಕೊಂಡಿರುವುದು ಗೊತ್ತೇ ಇದೆ. ಈಗ ಹೊಸ ಸುದ್ದಿ ಅಂದರೆ, “ಆರ್ಮುಗಂ” ಖ್ಯಾತಿಯ ರವಿಶಂಕರ್‌ ಕೂಡ ಎಂಟ್ರಿಯಾಗಿದ್ದಾರೆ. ಹೌದು, ಶ್ರೀನಾಗಬ್ರಹ್ಮ ಕ್ರಿಯೇಷನ್ಸ್ ನಲ್ಲಿ ಡಾ. ಶೈಲೇಶ್ ಕುಮಾರ್.ಬಿ.ಎಸ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಸದ್ದಿಲ್ಲದೆಯೇ ಜೋರಾಗಿ ನಡೆಯುತ್ತಿದೆ.

ಈ ಚಿತ್ರದಲ್ಲೀಗ ಖಳನಟ ರವಿಶಂಕರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ರವಿಶಂಕರ್‌ ಚಿತ್ರದಲ್ಲಿ “ಸೀರಿಯಲ್‌ ಸೆಟ್‌” ಚಂದ್ರಪ್ಪ ಎಂಬ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಭಾಗದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗುತ್ತಿದ್ದು, ಒಂದಷ್ಟು ಹೊಸ ದೃಶ್ಯಗಳನ್ನು ನಿರ್ದೇಶಕ ಕೆ.ಲಕ್ಷ್ಮಣ್‌ ಸೆರೆಹಿಡಿಯುತ್ತಿದ್ದಾರೆ.


ನಿರ್ಮಾಪಕ ಡಾ.ಶೈಲೇಶ್ ಕುಮಾರ್ ಅವರಿಗೆ ಕನ್ನಡ ಮೇಲೆ ಅಗಾಧ ಪ್ರೀತಿ. ಆ ಕಾರಣಕ್ಕೆ ಒಂದೊಳ್ಳೆಯ ಮನರಂಜನಾತ್ಮಕ ಚಿತ್ರ ಮಾಡುವ ಆಸೆ ಇತ್ತು. “ತಲ್ವಾರ್‌ ಪೇಟೆ” ಕಥೆ ಹೊಸ ರೀತಿಯಿಂದ ಕೂಡಿದ್ದರಿಂದ ಈ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಅವರು, ತಮ್ಮ ಚಿತ್ರದಲ್ಲಿ ಎಲ್ಲರಿಗೂ ಗೊತ್ತಿರುವ ಕಲಾವಿದರೇ ಇರಬೇಕು ಎಂಬ ಕಾರಣಕ್ಕೆ ಪ್ರತಿಯೊಂದು ಪಾತ್ರಗಳಿಗೂ ನುರಿತ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ವಸಿಷ್ಠ ಸಿಂಹ ಹೀರೋ. ಅವರಿಗೆ ನಾಯಕಿಯಾಗಿ ಸೋನಾಲ್ ಮಾಂತೆರೊ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಹರೀಶ್ ಉತ್ತಮನ್, ಯಶವಂತ್‌ ಶೆಟ್ಟಿ, ಆಶಾಲತಾ, ವೀಣಾ ಪೊನ್ನಪ್ಪ, ಲಿಂಗರಾಜ್ ಬಲವಾಡಿ, ಸುರೇಶ್ ಚಂದ್ರ ಪ್ರದೀಪ್ ಪೂಜಾರಿ, ರಜನಿ ಕಾಂತ್, ಮನು ಇತರರು ಕಾಣಿಸಿಕೊಳ್ಳುತ್ತಿದ್ದಾರೆ.

. ಚಿತ್ರಕ್ಕೆ “ಮಫ್ತಿ”, “ಉಗ್ರಂ” ಚಿತ್ರಗಳಿಗೆ ಕಥೆ, ಸಂಭಾಷಣೆ ಬರೆದು, ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಕೆ.ರಾಮ್ , ಶ್ರೀಲಕ್ಷ್ಮಣ್ ಸಹೋದರರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಇನ್ನು, ಕೆ.ಲಕ್ಷ್ಮಣ್ ಶ್ರೀ ರಾಮ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಎಂ.ಯು. ನಂದಕುಮಾರ್ ಛಾಯಾಗ್ರಹಣವಿದೆ. ಶ್ರೀಕಾಂತ್ (ಉಗ್ರಂ, ಕೆ.ಜಿ.ಎಫ್) ಸಂಕಲನವಿದೆ. ಡಿಫರೆಂಟ್ ಡ್ಯಾನಿ, ರಾಮ್ ಲಕ್ಷ್ಮಣ್ ಸಾಹಸವಿದೆ. ಮುರಳಿ, ಮೋಹನ್, ಧನು, ಗೀತ ನೃತ್ಯ ನಿರ್ದೇಶನ ಹಾಗೂ ಆರ್ಟ್ ರಘು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಜಯಂತ್ ಕಾಯ್ಕಿಣಿ ಹಾಗೂ ಕೆ.ರಾಮ್ ಶ್ರೀಲಕ್ಷ್ಮಣ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತವಿದೆ.

 

Categories
ಎಡಿಟೋರಿಯಲ್ ಸಿನಿ ಸುದ್ದಿ

ಸಿನಿ‌ಲಹರಿ ಎಂಬ ಭಾವನೆಗಳ ಲಹರಿ !

ಲೈಕ್ ಒತ್ತಿ,  ಸಿನಿ ‌ಲಹರಿ ಹಿರಿಮೆ  ಗಗನಕ್ಕೇರಿಸಿ

ನೀವೂ ಡಿಜಿಟಲ್ ಆದ್ರಾ? ಹಲವು‌ ದಿನಗಳಿಂದ ನಮಗೆ ಎದುರಾದ ಪ್ರಶ್ನೆ ಇದು. ಅದಕ್ಕೆ‌ ಉತ್ತರಿಸಲು‌ ನಮ್ಮಿಂದ‌ ಈವರೆಗೂ ಆಗಿಲ್ಲ. ಹೌದು ಅಂತ ಹೇಳಿಬಿಡಬ ಹುದಾಗಿತ್ತೇನೋ, ಆದರೆ ಉತ್ತರ ಅಷ್ಟು ಸುಲಭ ಇಲ್ಲ‌. ಯಾಕಂದ್ರೆ, ಆ ಪ್ರಶ್ನೆಗಳೇ ವಿಚಿತ್ರವಾಗಿದ್ದವು.‌ ಹೌದು ಎನ್ನಬೇಕೆ, ಬೇಡವೇ ಗೊಂದಲಕ್ಕೆ ಸಿಲುಕಿ‌ ಮೌನಕ್ಕೆ‌ ಜಾರಿದ್ದೆವು.ಬದಲಿಗೆ ಅಂದುಕೊಂಡಿದ್ದನ್ನ‌ ಮಾಡಿ ತೋರಿಸೋಣ ಅಂತಷ್ಟೇ ಯೋಚಿಸಿದ್ದೇವು. ಈಗ ಅದು ಒಂದು ಹಂತಕ್ಕೆ ಬಂದಿದೆ. ಸರಳವಾಗಿಯೇ ಇರಲಿ‌ ಅತಂದುಕೊಂಡಿದ್ದರೂ, ಎಲ್ಲವೂ ಗ್ರಾಂಡ್ ರೂಪ ಪಡೆದಿವೆ.‌ ಇದೆಲ್ಲ ಹಿತೈಷಿಗಳ ಸಹಕಾರ. ಬೆಂಬಲ. ಅದರ ರೂಪವೇ ಈಗ ಸಿನಿ‌ಲಹರಿ.

ನಾವೇನು ಬ್ರಹ್ಮ ವಿಧ್ಯೆ ಕಲಿತವರಾ?

ಹೌದು, ಈಗ ನಮ್ಮದೇ ಒಂದು ಹಾದಿ. ಡಿಜಿಟಲ್ ಮಾಧ್ಯಮದ ದಾರಿ. ಅನೇಕ ಪ್ರಯೋಗಗಳ ಜತೆಗೆ ಇದೊಂದು ಹೊಸ ಪಯಣ‌. ಯಾಕೆ ಹೀಗೆ ಅಂತ ಅನೇಕರಿಗೆ ಅಚ್ಚರಿ. ಅದಕ್ಕೆ ಕಾರಣ ಕೋರೋನಾ. ಅದರಿಂದೇನಾಯ್ತ? ಅದಿಲ್ಲಿ‌ ಬೇಕಿಲ್ಲ.‌ ಆದರೆ ಏನಾದ್ರೂ ಕೆಲಸ ಮಾಡಲೇಬೇಕಿದೆ. ಹಾಗಂತ ಏನು‌ ಮಾಡಲು ಸಾಧ್ಯ? ಗೊತ್ತಿರೋದು ಬರವಣಿಗೆ ಮಾತ್ರ.‌ ಹಾಗಂತ ನಾವೇನು ಬ್ರಹ್ಮ ವಿದ್ಯೆ ಕಲಿತವರಾ? ಇಲ್ಲ, ಗೊತ್ತಿರೊದು ಅಷ್ಟೋ ಇಷ್ಟೋ ಸಿನಿಮಾ‌ ವರದಿಗಾರಿಕೆ.ಅದು ಹತ್ತಾರು ವರ್ಷ ಚಿತ್ರೋದ್ಯಮದ ಜತೆಗಿನ ನಂಟಿನಿಂದ ಕಲಿತಿದ್ದು. ಅದನ್ನೇ ನಂಬಿಕೊಂಡು ಕಾಲಕ್ಕೆ ತಕ್ಕಂತೆ ಏನಾದರೂ ಮಾಡಬೇಕು ಅಂದಾಗ ನಮಗೆ ಹೊಳೆದಿದ್ದು ಡಿಜಿಟಲ್ ಮಾಧ್ಯಮ.

ನಮ್ಮದೂ ಒಂದು‌ ಪ್ರಯತ್ನ!

ಆಧುನಿಕ ಜಗತ್ತೀಗ ಅಚ್ಚರಿಗೊಳ್ಳುವಷ್ಟು ಬದಲಾಗಿದೆ. ಪ್ರತಿ‌ದಿನವೂ ಹೊಸತು‌ಕಾಣುತ್ತಿದೆ. ಸಿನಿಮಾ ಮತ್ತು ಮಾಧ್ಯಮ ಜಗತ್ತು ಕೂಡ ಅದರಿಂದ ಹೊರತಾ ಗಿಲ್ಲ.‌ಮಾಧ್ಯಮ ಎನ್ನುವಂತಹದು ಹತ್ತಾರು ರೂಪುಗಳನ್ನು ದಾಟುತ್ತಾ ಬಂದಿದೆ. ಅಚ್ವುಮೊಳೆಯಿಂದ ಕಂಪ್ಯೂಟರ್ ತಂತ್ರಜ್ಞಾನ ಕ್ಕೆ, ಅಲ್ಲಿಂದೀಗ ಡಿಜಿಟಲ್ ತಂತ್ರಜ್ಞಾನ ದ  ಕಾಲಕ್ಕೆ  ಬಂದಿದೆ‌. ಹೇಳಿ – ಕೇಳಿ ಇದು ಮೊಬೈಲ್ ಯುಗ. ಬೆರಳಿನ ತುದಿಯಲ್ಲೇ ಜಗತ್ತು.ಅದನ್ನೇ ನಂಬಿಕೊಂಡು ಮಾಧ್ಯಮ ಕೂಡ ಹೊಸ ಅವತಾರ ತಾಳಿದೆ.‌‌ನಮ್ಮದೂ ಕೂಡ ಈಗ ಅದರ‌ ಒಂದು‌ ಪ್ರಯತ್ನ.‌ಅದೇ ಸಿನಿ‌ಲಹರಿ.

ಇದು ಬಣ್ಣದ ಭಾವನೆಗಳ ಲಹರಿ !

ಹೆಸರಲ್ಲೇನಿದೆ ಬಿಡಿ ಅಂದರೂ‌‌ ಹೆಸರು ಮುಖ್ಯವೇ. ಒಂದಷ್ಟು ಯೋಚಿಸಿ, ಚರ್ಚಿಸಿ ಈ ಹೆಸರು ಫೈನಲ್  ಆಗಿದೆ‌. ಈಗಾಗಲೇ ಅದಕ್ಕೆ ಒಳ್ಳೆಯ ಕಾಮೆಂಟ್ ಕೂಡ ಸಿಕ್ಕಿದೆ. ಅದು ನಮ್ಮ‌ ಪ್ರಯತ್ನದ ಪಾಸಿಟಿವ್ ವೈಬ್ರೇಷನ್. ಇನ್ನು ಮನೆಗೊಂದು ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ಇರುವ ಕಾಲ ಇದು.‌ ಅದರ ಅರಿವು ನಮಗಿದೆ. ಏನಾದ್ರೂ ಹೊಸತನ ಇರಬೇಕು ಅನ್ನೋದು ನಮ್ಮ ಬಯಕೆ. ದ್ವೇಷ, ಮತ್ಸರಕ್ಕೆ ಜಾಗ ಕೊಡದೇ ಸಕರಾತ್ಮಕ ಚಿಂತನೆಯ‌ ಮೂಲಕ‌ ಕನ್ನಡ ಚಿತ್ರ ರಂಗದ ಸಮಗ್ರ ಸುದ್ದಿ ಕೊಡುವ ವೆಬ್ ಸೈಟ್ ಮಾಡಬೇಕೆಂಬುದು ನಮ್ಮ ಉದ್ದೇಶ. ನಮಗ್ಯಾರು ಇಲ್ಲಿ‌ ಸ್ಪರ್ಧಿಗಳಿಲ್ಲ.‌ನಮಗೆ ನಾವೇ ಸ್ಪರ್ಧಿಗಳು ಮಾತ್ರ.

ಗೆಲ್ಲೋದೇ ನಮ್ಮ‌ ಟಾರ್ಗೆಟ್ ಅಲ್ಲ

ಕ್ಯೂರಿಯಾಸಿಟಿ‌ ಹುಟ್ಟಿಸಲು ಮಸಾಲೆ ಟೈಟಲ್ ನೀಡುವುದು, ಕತೆ ಕಟ್ಟುವುದು, ಯಾರದೋ ಮನಸ್ಸು ನೋಯಿಸುವಂತಹ ಬರಹ ಬರೆದು ನಮ್ಮ ವೆಬ್ ಸೈಟ್ ಮತ್ತು ಯುಟ್ಯೂಬ್ ವೀಕ್ಚಕರ ಸಂಖ್ಯೆಯನ್ನು ರಾತ್ರೋರಾತ್ರಿ ಹೆಚ್ಚಿಸಿಕೊಳ್ಳುವುದು ನಮ್ಮ ಉದ್ದೇಶ ಅಲ್ಲ. ತಾಜಾ‌,‌ವಸ್ತು ನಿಷ್ಟ, ಸಕರಾತ್ಮಕ, ನಂಬಿಕೆಗೆ ಅರ್ಹವಾದ ಸುದ್ದಿ ನೀಡುವುದಷ್ಟೇ ನಮ್ಮ‌ಕೆಲಸ. ಹಾಗಂತ ಇಲ್ಲಿ ಏನಾದ್ರೂ ‌ಮಾಡಿ ಗೆಲ್ಲೋದೇ ನಮ್ಮ ಟಾರ್ಗೆಟ್ ಅಲ್ಲ . ಅಂದುಕೊಂಡಿದ್ದನ್ನು ಅಚ್ಚುಕಟ್ಟಾಗಿ ಮಾಡೋಣ, ಒಂದೊತ್ತಿನ ಹೊಟ್ಟೆ ತುಂಬಿಸಿಕೊಳ್ಳೋಣ ಎನ್ನುವುದಷ್ಟೇ ನಮ್ಮ ಟಾರ್ಗೆಟ್.‌ ಆ ಮೂಲಕ ಸಿನಿಮಾ‌ಪ್ರೇಮಿಗಳಿಗೂ ಒಂದು ಚೆಂದದ ಸುದ್ದಿ ಜಾಲ ತಾಣ ಸಿಗಲಿದೆ. ಅದೆಲ್ಲದಕ್ಕೂ ನಿಮ್ಮಿಂದ ಆಗಬೇಕಿರುವುದು ಬೆಂಬಲ. ಆ ಬೆಂಬಲಕ್ಕೆ ಸಿನಿ ಲಹರಿ ಪೇಜ್ ಮತ್ತು ಯುಟ್ಯೂಬ್ ಚಾನೆಲ್ ಗೆ ಒಂದು ಲೈಕ್ ಒತ್ತಿ, ನಮ್ಮನ್ನು ಕೈ ಹಿಡಿದು ಮೇಲಕ್ಕೆತ್ತಿ. ಉಳಿದಂತೆ ‘ಸಿನಿ‌ಲಹರಿ ‘ನಿಮ್ಮದೇ ಸಿನಿಮಾ‌ ಸುದ್ದಿ ವೆಬ್ ಸೈಟ್.

error: Content is protected !!