ವಸಿಷ್ಠ ಜೊತೆ ಆರ್ಮುಗಂ ಆರ್ಭಟ!
ಕನ್ನಡದಲ್ಲಿ ಈಗಾಗಲೇ “ತಲ್ವಾರ್‌ಪೇಟೆ” ಸಿನಿಮಾ ಶುರುವಾಗಿದ್ದು ಗೊತ್ತೇ ಇದೆ. ವಸಿಷ್ಠ ಸಿಂಹ ಹೀರೋ ಆಗಿ ಕಾಣಿಸಿಕೊಂಡಿರುವುದು ಗೊತ್ತೇ ಇದೆ. ಈಗ ಹೊಸ ಸುದ್ದಿ ಅಂದರೆ, “ಆರ್ಮುಗಂ” ಖ್ಯಾತಿಯ ರವಿಶಂಕರ್ ಕೂಡ ಎಂಟ್ರಿಯಾಗಿದ್ದಾರೆ. ಹೌದು, ಶ್ರೀನಾಗಬ್ರಹ್ಮ ಕ್ರಿಯೇಷನ್ಸ್ ನಲ್ಲಿ ಡಾ. ಶೈಲೇಶ್ ಕುಮಾರ್.ಬಿ.ಎಸ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಸದ್ದಿಲ್ಲದೆಯೇ ಜೋರಾಗಿ ನಡೆಯುತ್ತಿದೆ.
ಈ ಚಿತ್ರದಲ್ಲೀಗ ಖಳನಟ ರವಿಶಂಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ರವಿಶಂಕರ್ ಚಿತ್ರದಲ್ಲಿ “ಸೀರಿಯಲ್ ಸೆಟ್” ಚಂದ್ರಪ್ಪ ಎಂಬ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಭಾಗದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗುತ್ತಿದ್ದು, ಒಂದಷ್ಟು ಹೊಸ ದೃಶ್ಯಗಳನ್ನು ನಿರ್ದೇಶಕ ಕೆ.ಲಕ್ಷ್ಮಣ್ ಸೆರೆಹಿಡಿಯುತ್ತಿದ್ದಾರೆ.
ನಿರ್ಮಾಪಕ ಡಾ.ಶೈಲೇಶ್ ಕುಮಾರ್ ಅವರಿಗೆ ಕನ್ನಡ ಮೇಲೆ ಅಗಾಧ ಪ್ರೀತಿ. ಆ ಕಾರಣಕ್ಕೆ ಒಂದೊಳ್ಳೆಯ ಮನರಂಜನಾತ್ಮಕ ಚಿತ್ರ ಮಾಡುವ ಆಸೆ ಇತ್ತು. “ತಲ್ವಾರ್ ಪೇಟೆ” ಕಥೆ ಹೊಸ ರೀತಿಯಿಂದ ಕೂಡಿದ್ದರಿಂದ ಈ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಅವರು, ತಮ್ಮ ಚಿತ್ರದಲ್ಲಿ ಎಲ್ಲರಿಗೂ ಗೊತ್ತಿರುವ ಕಲಾವಿದರೇ ಇರಬೇಕು ಎಂಬ ಕಾರಣಕ್ಕೆ ಪ್ರತಿಯೊಂದು ಪಾತ್ರಗಳಿಗೂ ನುರಿತ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ವಸಿಷ್ಠ ಸಿಂಹ ಹೀರೋ. ಅವರಿಗೆ ನಾಯಕಿಯಾಗಿ ಸೋನಾಲ್ ಮಾಂತೆರೊ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಹರೀಶ್ ಉತ್ತಮನ್, ಯಶವಂತ್ ಶೆಟ್ಟಿ, ಆಶಾಲತಾ, ವೀಣಾ ಪೊನ್ನಪ್ಪ, ಲಿಂಗರಾಜ್ ಬಲವಾಡಿ, ಸುರೇಶ್ ಚಂದ್ರ ಪ್ರದೀಪ್ ಪೂಜಾರಿ, ರಜನಿ ಕಾಂತ್, ಮನು ಇತರರು ಕಾಣಿಸಿಕೊಳ್ಳುತ್ತಿದ್ದಾರೆ.
. ಚಿತ್ರಕ್ಕೆ “ಮಫ್ತಿ”, “ಉಗ್ರಂ” ಚಿತ್ರಗಳಿಗೆ ಕಥೆ, ಸಂಭಾಷಣೆ ಬರೆದು, ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಕೆ.ರಾಮ್ , ಶ್ರೀಲಕ್ಷ್ಮಣ್ ಸಹೋದರರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಇನ್ನು, ಕೆ.ಲಕ್ಷ್ಮಣ್ ಶ್ರೀ ರಾಮ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಎಂ.ಯು. ನಂದಕುಮಾರ್ ಛಾಯಾಗ್ರಹಣವಿದೆ. ಶ್ರೀಕಾಂತ್ (ಉಗ್ರಂ, ಕೆ.ಜಿ.ಎಫ್) ಸಂಕಲನವಿದೆ. ಡಿಫರೆಂಟ್ ಡ್ಯಾನಿ, ರಾಮ್ ಲಕ್ಷ್ಮಣ್ ಸಾಹಸವಿದೆ. ಮುರಳಿ, ಮೋಹನ್, ಧನು, ಗೀತ ನೃತ್ಯ ನಿರ್ದೇಶನ ಹಾಗೂ ಆರ್ಟ್ ರಘು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಜಯಂತ್ ಕಾಯ್ಕಿಣಿ ಹಾಗೂ ಕೆ.ರಾಮ್ ಶ್ರೀಲಕ್ಷ್ಮಣ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತವಿದೆ.