ಸ್ಟಾರ್‌ಗಳ ಕನ್ನಡ ನಿರ್ಲಕ್ಷ್ಯವನ್ನು ಪ್ರೇಕ್ಷಕ ಯಾಕೆ ಪ್ರಶ್ನಿಸಬಾರದು ?

Share on facebook
Share on twitter
Share on linkedin
Share on whatsapp
Share on telegram

ಮನೆಗೆ ಇಂಗ್ಲಿಷ್‌ ಪೇಪರ್‌ ಬೇಕು, ಪ್ರಚಾರಕ್ಕೂ ಇಂಗ್ಲಿಷ್‌ ಪೇಪರ್‌ ಬೇಕು- ಇದೇ ಅಲ್ವೇ ಕೆಲವು ಸಿನಿಮಾ ಮಂದಿ ಕನ್ನಡ ಅಭಿಮಾನ

ಕನ್ನಡ ಸಿನಿಮಾಗಳಿಗೆ ನಿಜಕ್ಕೂ ಆಪತ್ತು ತಂದವರಾರು?

ನಟ-ನಟಿಯರು ಕನ್ನಡಿಗರ ಭಾಷಾಭಿಮಾನದ ಬಗ್ಗೆ ಮಾತನಾಡುವುದು ಒಂಥರ ವಿಚಿತ್ರ. ಯಾಕಂದ್ರೆ, ಹೇಳೋದು ಅಚಾರ, ತಿನ್ನೋದು ಬದನೆ ಕಾಯಿ ಅಂತಾರಲ್ಲ ಹಾಗಿದೆ ಕೆಲವು ಸಿನಿಮಾ ಮಂದಿ ಧೋರಣೆ. ಹಾಗೆ ನೋಡಿದರೆ, ಮೊದಲು ಭಾಷಾಭಿಮಾನ ಬೆಳೆಸಿಕೊಳ್ಳಿ ಅಂತ ನಾವೇ ಅವರಿಗೆ ಹೇಳಬೇಕಿದೆ. ಯಾಕಂದ್ರೆ, ಕನ್ನಡದಲ್ಲಿ ಕೆಲವು ಸ್ಟಾರ್‌ ಗಳನ್ನು ಬಿಟ್ಟರೆ, ಉಳಿದವರು ಇಂಗ್ಲಿಷ್‌ ಮೋಹಿಗಳು. ನಟಿಯರ ವಿಚಾರದಲ್ಲಂತೂ ಇದು ವಿಚಿತ್ರ ಕತೆ.

ಕರ್ನಾಟಕದಲ್ಲೇ ಹುಟ್ಟಿ ಬೆಳೆದರೂ ಕೆಲವು ನಟಿಯರಿಗೆ ಕನ್ನಡ ಕಷ್ಟ, ಬದಲಿಗೆ ಇಂಗ್ಲಿಷ್‌ ತುಂಬಾ ಇಷ್ಟ. ಇರಲಿ, ಹಾಗಂತ ನಾವೇನು ಇಂಗ್ಲಿಷ್‌ ವಿರೋಧಿಗಳಲ್ಲ. ಅಷ್ಟೇ ಅಲ್ಲ ಯಾವುದೇ ಭಾಷೆಯ ಅಂಧ ಅಭಿಮಾನಗಳು ನಾವಲ್ಲ. ಪ್ರಶ್ನೆ ಇರೋದು, ಕನ್ನಡ ಗೊತ್ತಿದ್ದು ನೀವು ಕನ್ನಡವನ್ನು ನಿರ್ಲಕ್ಷ್ಯ ಮಾಡೋದು ಯಾಕೆ ? ಕನ್ನಡ ಸಿನಿಮಾದಲ್ಲೇ ನಟಿಸಿ, ಆಮೇಲೆ ಆ ಸಿನಿಮಾ ನೋಡಿ ಕನ್ನಡಿಗರು ಹರಸಿ ಅಂತೆಲ್ಲ ಮನವಿ ಮಾಡುವ ನೀವು, ಮನೆಗೆ ಇಂಗ್ಲಿಷ್‌ ಪೇಪರ್‌ ಹಾಕಿಸಿಕೊಳ್ಳುವುದೇಕೆ ? ಪ್ರಚಾರಕ್ಕೂ ಇಂಗ್ಲಿಷ್‌ ಪೇಪರೇ ಬೇಕೆಂದು ದುಂಬಾಲು ಬೀಳುವುದೇಕೆ?

ಕೆಲವು ಸಿನಿಮಾ ಮಂದಿಯ ಧೋರಣೆ ಇದು. ವಾಸ್ತವ ಹೀಗಿದ್ದೂ ಕನ್ನಡಿಗರು ಸ್ವಾಭಿಮಾನಿಗಳಲ್ಲ ಅಂತ ಯಾರಾದರೂ ನಟ-ನಟಿಯರು ಕನ್ನಡಿಗರ ಭಾಷಾಭಿಮಾನವನ್ನೇ ಪ್ರಶ್ನಿಸಿದಾಗ,  ಕೆಲವು ನಟ-ನಟಿಯರ ನೈತಿಕತೆಯ ಪ್ರಶ್ನೆಯೂ ಶುರುವಾಗುತ್ತದೆ. ನಿಜ, ಕನ್ನಡಿಗರಿಗೆ ಭಾಷಾಭಿಮಾನ ಇಲ್ಲ ಎನ್ನುವುದು ಒಂದರ್ಥದಲ್ಲಿ  ಸತ್ಯವೂ ಕೂಡ. “ಕನ್ನಡಿಗರ’ ವಿಶಾಲ ಮನೋಭಾವದ ಗುಣದಿಂದಲೇ ಇವತ್ತು ಕನ್ನಡ‌ಭಾಷೆ, ನೆಲ- ಜಲ ಬದುಕಿಗೂ ಆಪತ್ತು ಬಂದಿರುವುದು ಸುಳ್ಳಲ್ಲ .‌ಅದು ಕನ್ನಡ ಸಿನಿಮಾಗಳ ವಿಚಾರದಲ್ಲೂ ಕೂಡ. ಅದರೆ ಇದಲ್ಲದ್ದಕ್ಕೂ ಯಾರು ಹೊಣೆ ? ಅಮಾಯಕ ಜನರಾ ಅಥವಾ ಅಧಿಕಾರದಲ್ಲಿರುವವರಾ ?

ಕನ್ನಡಿಗರ ಸ್ವಾಭಿಮಾನದ ವಿಚಾರ ಬಿಡಿ, ಅದಕ್ಕೆ ಬೇಕಾದ್ರೆ ಕಾರಣ ಜನರೇ ಅನ್ನೋಣ, ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸರ್ಕಾರವನ್ನು ಹೊಣೆಯಾಗಿಸೋಣ, ಆದರೆ, ಕನ್ನಡ ಸಿನಿಮಾಗಳಿಗೆ ಪರಭಾಷೆಯ ಸಿನಿಮಾಗಳಿಂದ ಆಪತ್ತು ಬಂದಿರುವುದಕ್ಕೆ  ಕೆಲವು ಸಿನಿಮಾ ಮಂದಿಯ ಪಾಲು ಇಲ್ಲವೇ?  ಕರ್ನಾಟಕದಲ್ಲೇ ಪರಭಾಷೆಯ ಸ್ಟಾರ್‌ ಸಿನಿಮಾಗಳ ವಿತರಣೆಗೆ ಇಲ್ಲಿನ ಕೆಲವು ಸಿನಿಮಾ ಮಂದಿಯೇ ವಹಿಸುವ ಮುತುವರ್ಜಿ ನೋಡಿದರೆ, ಕನ್ನಡಕ್ಕೆ ಆಪತ್ತು ತಂದವರ ಹೂರಣ ಬಯಲಾಗುತ್ತದೆ. ಆ ಕತೆ ಇರಲಿ ಬಿಡಿ, ಅದು ದೊಡ್ಡವರ ವಿಷಯ. ವಿಷಯ ಬೇರೆಯದೇ ಇದೆ.

ತೆರೆ ಮೇಲೆ ಕನ್ನಡ‌ ಮತ್ತು ಕನ್ನಡ ನುಡಿ, ನೆಲ,ಜಲ ಕುರಿತು ಟೆರಾಸ್ ಕಿತ್ತು ಹೋಗುವ ಹಾಗೆ ಡೈಲಾಗ್ ಹೊಡೆದು, ಅಭಿಮಾನಿಗಳಿಂದ ಸಿಳ್ಳೆ, ಕೇಕೆ , ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸ್ಟಾರ್ ಗಳೆಲ್ಲ ವಾಸ್ತವದಲ್ಲಿ ಎಷ್ಟು ಕನ್ನಡ ಪರ ? ಬೆಳಗ್ಗೆ ಅವರ ಮನೆಗೆ ಇಂಗ್ಲಿಷ್ ಪತ್ರಿಕೆ ಬೇಕು, ತಾಜಾ ಸುದ್ದಿಗಳನ್ನು ಹಂಚಿಕೊಳ್ಳಲು ಅವರಿಗೆ ಇಂಗ್ಲಿಷ್ ಪತ್ರಿಕೆಗಳ ವರದಿಗಾರರೇಬೇಕು, ಬೆಳಗ್ಗೆ ತಿಂಡಿ, ಸಂಜೆ ಸ್ನಾಕ್ಸ್ ಗೆ ಫೈ ಸ್ಟಾರ್ ಹೊಟೇಲ್ ಗಳೇ ಆಗಬೇಕು, ಜಾಲಿ ಟ್ರಿಪ್ ಗೆ ಮರ್ಸಿಡಿಸ್, ಬೆಂಜ್, ಇತ್ಯಾದಿ ಅದ್ದೂರಿ ವೆಚ್ಚದ ಕಾರುಗಳೇ ಬೇಕು. ಪ್ರವಾಸ ಅಂತ ಹಾಂಗ್ ಕಾಂಗ್ ಮಲೇಷಿಯಾ ಸುತ್ತಬೇಕು. ಹಾಗೆ ಹೋದವರು ಕೂಡ ಸುಮ್ಮನೆ ಬಂದಿದ್ದಾರೆಯೇ? ಸಿಂಗಾಪುರ  ಅಂದ್ರೆ ಸ್ವರ್ಗ, ಮಾಲ್ಡಿವ್ಸ್ ನಂತಹ ಸ್ವರ್ಗವನ್ನು ನಾನೆಲ್ಲೋ ಕಂಡಿಲ್ಲ ಅಂತ ಪೋಸು ಕೊಡುವ ಕನ್ನಡದ ಕೆಲವು ಸ್ಟಾರ್‌ ಗಳು ತಮ್ಮ ಬುಡಕ್ಕೆ ಬೆಂಕಿ ಬಿದ್ದಾಗ ಕನ್ನಡಿಗರ ಸ್ವಾಭಿಮಾನ ಪ್ರಶ್ನಿಸುತ್ತಾರೆ, ಕನ್ನಡಿಗರಿಗೆ ಭಾಷಾಭಿಮಾನ ಇಲ್ಲ ಅಂತ ದೂರುತ್ತಾರೆ. ಇದು ಎಷ್ಟು ಸರಿ ಅಂತ ಪ್ರಶ್ನಿಸುವುದಾರೂ ಯಾರು?

Related Posts

error: Content is protected !!