ಸಾ.ರಾ.ಗೋವಿಂದು, ಬಾ.ಮ.ಹರೀಶ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ
ಕನ್ನಡ ಚಿತ್ರರಂಗಕ್ಕೆ ಸುಮಾರು ಎಂಟು ದಶಕಕ್ಕೂ ಹೆಚ್ಚು ಕಾಲ ಇತಿಹಾಸವಿದೆ. ಹಾಗೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಐದು ದಶಕಕ್ಕೂ ಹೆಚ್ಚು ಕಾಲದ ಇತಿಹಾಸವಿದೆ. ಕನ್ನಡ ಚಿತ್ರರಂಗಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೃದಯವಿದ್ದಂತೆ. ಈ ಫಿಲ್ಮ್ ಚೇಂಬರ್ ಕನ್ನಡ ಚಿತ್ರರಂಗದ ಪ್ರಗತಿಗೆ ಬೆನ್ನೆಲುಬು. ಈವರೆಗೆ ಈ ಫಿಲ್ಮ್ ಚೇಂಬರ್‌ನಲ್ಲಿ ಸಾಕಷ್ಟು ಹಿರಿಯರು ಚುಕ್ಕಾಣಿ ಹಿಡಿದು, ಕನ್ನಡ ಚಿತ್ರರಂಗದ ಏಳಿಗೆಗೆ ದುಡಿದಿದ್ದಾರೆ. ಇನ್ನೂ ಕೆಲವರು ದುಡಿಯುತ್ತಿದ್ದಾರೆ. ಇಷ್ಟಕ್ಕೂ ಈ ಫಿಲ್ಮ್ ಚೇಂಬರ್ ಕುರಿತ ಸುದ್ದಿ ಯಾಕೆಂದರೆ, ಪ್ರತಿ ವರ್ಷವೂ ಫಿಲ್ಮ್ ಚೇಂಬರ್ ಚುನಾವಣೆ ನಡೆಯುತ್ತದೆ. ಕೆಲವೊಮ್ಮೆ ಈ ಫಿಲ್ಮ್ ಚೇಂಬರ್‌ನಲ್ಲಿ ಅವಿರೋಧ ಆಯ್ಕೆಯಾಗಿರುವುದೂ ಉಂಟು. ಬಹುತೇಕ ಚುನಾವಣೆ ಮೂಲಕ ಚುಕ್ಕಾಣಿ ಹಿಡಿದವರೇ ಹೆಚ್ಚು. ಈಗ ಸದ್ಯಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದೆ. ಅದಕ್ಕೀಗ ಕ್ಷಣಗಣನೆ ಕೂಡ ಶುರುವಾಗಿದೆ. ಈಗಾಗಲೇ ಫಿಲ್ಮ್ ಚೇಂಬರ್‌ನಲ್ಲಿ ನಡೆದ ಸಭೆಯಲ್ಲಿ ಚೇಂಬರ್‌ನ ಮಾಜಿ ಅಧ್ಯಕ್ಷರಾದ ಥಾಮಸ್ ಡಿಸೋಜ ಅವರನ್ನು ಚುನಾವಣಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಥಾಮಸ್ ಡಿಸೋಜ ಅವರು, ಇಷ್ಟರಲ್ಲೇ ಸಭೆ ಕರೆದು, ಫಿಲ್ಮ್ ಚೇಂಬರ್‌ಗೆ ಯಾವಾಗ ಚುನಾವಣೆ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಷ್ಟೇ ಅಲ್ಲ, ದಿನಾಂಕವನ್ನೂ ನಿಗದಿಗೊಳಿಸಲಿದ್ದಾರೆ.
ಇನ್ನು, ಈಗ ಹಾಲಿ ಜೈ ರಾಜ್ ಅವರು ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿದ್ದಾರೆ. ಅವರ ಅವಧಿ ಜೂನ್‌ನಲ್ಲೇ ಪೂರ್ಣಗೊಂಡಿದೆ. ಆದರೆ, ಕೊರೊನೊ ಹಾವಳಿ ಇದ್ದುದರಿಂದ, ಸದ್ಯಕ್ಕೆ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದರು. ಈಗಷ್ಟೇ ಸಮಿತಿ ಸಭೆಯಲ್ಲಿ ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ. ನಂತರದ ದಿನಗಳಲ್ಲಿ ದಿನಾಂಕ ನಿಗಧಿಗೊಳಿಸಿ, ಚುನಾವಣೆ ನಡೆಸುವ ತಯಾರಿ ನಡೆಯಬೇಕಿದೆ.
ಅಂದಹಾಗೆ, ಈ ಬಾರಿ ಅಧ್ಯಕ್ಷ ಸ್ಥಾನ ಬಯಸಿದವರ ಸಂಖ್ಯೆ ಬಹಳಷ್ಟು ಇದೆಯಾದರೂ, ಬಾ.ಮ.ಹರೀಶ್ ಅವರು ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇನ್ನುಳಿದಂತೆ, ಮೂಲಗಳ ಪ್ರಕಾರ ಸಾ.ರಾ.ಗೋವಿಂದು ಅವರೂ ಕೂಡ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆಗಿಳಿಯಲಿದ್ದಾರೆ ಎನ್ನಲಾಗಿದೆ.
ಹಾಗೆ ನೋಡಿದರೆ, ಫಿಲ್ಮ್ ಚೇಂಬರ್‌ನಲ್ಲಿ ಸಾ.ರಾ.ಗೋವಿಂದು ಮತ್ತು ಬಾ.ಮ.ಹರೀಶ್ ಅವರು ಅಧಿಕಾರ ನಡೆಸಿದವರು. ಮೂರು ಬಾರಿ ಸಾ.ರಾ.ಗೋವಿಂದು ಅವರು ಫಿಲ್ಮ್ ಚೇಂಬರ್‌ಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅಂತೆಯೇ, ಈ ಬಾರಿಯೂ ಸ್ಥಾನಕ್ಕೆ ಸ್ಪರ್ಧೆಗಳಿಯಲಿದ್ದಾರೆ ಎನ್ನಲಾಗಿದೆ. ಇನ್ನು, ಬಾ.ಮ.ಹರೀಶ್ ಅವರು ಕೂಡ ಈ ಹಿಂದೆ ತಲ್ಲಂ ನಂಜುಂಡಶೆಟ್ಟಿ ಅವರ ಅವಧಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿ ಕೆಲಸ ಮಾಡಿದ್ದರು. ಆ ನಂತರದ ದಿನಗಳಲ್ಲಿ ಥಾಮಸ್ ಡಿಸೋಜ ಅವರು ಅಧ್ಯಕ್ಷರಾದ ಸಂದರ್ಭದಲ್ಲೂ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಚಿನ್ನೇಗೌಡ ಅವರು ಅಧ್ಯಕ್ಷರಾಗಿದ್ದಾಗಲೂ ಬಾ.ಮ.ಹರೀಶ್ ಅವರು ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆ ನಡೆಸಿದ್ದರಾದರೂ, ಸಾ.ರಾ.ಗೋವಿಂದು ಅವರ ವಿರುದ್ಧ ಕಡಿಮೆ ಅಂತರದಲ್ಲೇ ಅವರು ಸೋಲು ಕಂಡಿದ್ದರು. ಈ ಸಲ ಗೆಲ್ಲುವ ವಿಶ್ವಾಸದೊಂದಿಗೆ ಸ್ಪರ್ಧೆಗಿಳಿಯುತ್ತಿರುವುದಾಗಿ ಹೇಳುತ್ತಾರೆ.