ಓಮಿಕ್ರಾನ್‌, ಓಮಿಕ್ರಾನ್…‌ಎಲ್ಲೆಲ್ಲೂ ಈಗ ಓಮಿಕ್ರಾನ್‌ ವೈರಸ್‌ ಭೀತಿ – ಸಿನಿಮಾ ಥಿಯೇಟರ್‌ಗಳಿಗೂ ತಟ್ಟುತ್ತಾ ಈ ವೈರಸ್‌ ಬಿಸಿ ?

ಉಸ್ಸಪ್ಪಾ ಅಂತ ಚಿತ್ರೋದ್ಯಮ ಈಗಷ್ಟೇ ಸುಧಾರಿಸಿಕೊಂಡಿದೆ. ಚಿತ್ರಮಂದಿರಗಳೂ ಒಂದಷ್ಟು ರಿಲ್ಯಾಕ್ಸ್‌ ಮೂಡಿಗೆ ಬಂದಿವೆ. ರಿಲೀಸ್‌ ಆಗುತ್ತಿರುವ ಸಿನಿಮಾಗಳ ಪೈಕಿ ಸ್ಟಾರ್‌ ಸಿನಿಮಾಗಳಿಗೆ ಹೌಸ್‌ ಫುಲ್‌ ಬೋರ್ಡ್‌ ಕಾಣುತ್ತಿವೆ. ಹಾಗೆಯೇ ಹೊಸ ಸಿನಿಮಾಗಳ ಮುಹೂರ್ತಗಳು, ಆಡಿಯೋ-ವಿಡಿಯೋ ರಿಲೀಸ್‌ ಕಾರ್ಯಕ್ರಮಗಳು ಕಳೆಗಟ್ಟುತ್ತಿವೆ. ಆಗಲೇ ಈಗ ಗಾಯದ ಮೇಲೆ ಬರೆ ಎಳೆದಂತೆ ಅದ್ಯಾವುದೋ ಓಮಿಕ್ರಾನ್‌ ಭೀತಿ ಕವಿದಿದೆ. ಕೊರೋನಾದ ಒಂದು ಮತ್ತು ಎರಡನೇ ಅಲೆಯ ಹಾಗೆ ಇದು ಎಷ್ಟರ ಮಟ್ಟಿಗೆ ಜನರ ಆರೋಗ್ಯದ ಮೇಲೆ ಅನಾಹುತ ಸೃಷ್ಟಿಸುತ್ತೋ ಗೊತ್ತಿಲ್ಲ. ಹಾಗೆಯೇ ಇದು ಕರ್ನಾಟಕಕ್ಕೆ ಕಾಲಿಟ್ಟ ಬಗ್ಗೆಯೂ ಖಾತರಿ ಆಗಿಲ್ಲ, ಆದರೆ ದಕ್ಷಿಣಾ ಆಫ್ರಿಕಾ, ಇಂಗ್ಲೆಂಡ್‌ , ಜರ್ಮಿನಿ ದೇಶಗಳಲ್ಲಿ ಈಗಾಗಲೇ ಓಮಿಕ್ರಾನ್‌ ಪ್ರಕರಣಗಳು ಪತ್ತೆ ಆಗಿರೋದ್ರಿಂದ ಸಹಜವಾಗಿಯೇ ಅನ್ಯ ದೇಶಗಳಲ್ಲೂ ಓಮಿಕ್ರಾನ್‌ ಹರಡುವ ಭೀತಿ ಶುರುವಾಗಿದೆ.

ಅದೇ ಕಾರಣಕ್ಕೆ ರಾಜ್ಯದಲ್ಲೂ ಸರ್ಕಾರ ಮುನ್ನೆಚ್ಚೆರಿಕೆ ಕ್ರಮವಾಗಿ ಈಗಾಗಲೇ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸದ್ಯಕ್ಕೀಗ ಗಡಿ ಜಿಲ್ಲೆಗಳಲ್ಲಿ ಆರ್‌ ಟಿಪಿಸಿಆರ್‌ ನೆಗೆಟಿವ್‌ ರಿಪೊರ್ಟ್‌ ಕಡ್ಡಾಯ ಮಾಡಿದೆ. ಹೊಟೇಲ್‌, ರೆಸ್ಟೋರೆಂಟ್‌ಗಳು, ಸಿನಿಮಾ ಹಾಲ್‌ ಗಳು, ಈಜುಕೊಳ ,ಮೃಗಾಲಯಗಳು ಮತ್ತು ಜೈವಿಕ ಉದ್ಯಾನವನಗಳಲ್ಲಿ ಕೆಲಸ ಮಾಡುವವರು ಎರಡು ಡೋಸ್‌ ಲಸಿಕೆ ಪಡೆದಿರಬೇಕೆಂದು ಸರ್ಕಾರ ಆದೇಶಿಸಿದೆ. ಇನ್ನು ಶಾಲಾ ಕಾಲೇಜುಗಳಲ್ಲಿ ಸೆಮಿನಾರ್‌, ಸಂಭ್ರಮಗಳಿಗೆ ಬ್ರೇಕ್‌ ಹಾಕಿದೆ. ಒಟ್ಟಾರೆ ಸಮೂಹ ಸೇರುವುದನ್ನು ಸರ್ಕಾರ ಬಂದ್‌ ಮಾಡಿದೆ. ಹಾಗಾದ್ರೆ ಮುಂದೆ ಸಿನಿಮಾ ಹಾಲ್‌ ಗಳ ಕಥೆಯೇನು ಅನ್ನೋದು ಈಗ ಚಿತ್ರೋದ್ಯಮದಲ್ಲಿ ದೊಡ್ಟ ಆತಂಕ ಹುಟ್ಟು ಹಾಕಿದೆ. ಈ ಕ್ಷಣಕ್ಕೆ ಸರ್ಕಾರ ಲಾಕ್‌ ಡೌನ್‌ ಪ್ತಸ್ತಾಪವೇ ಇಲ್ಲ ಎಂದಿದೆ. ಅಂತಹ ಪರಿಸ್ಥಿತಿಯೂ ಕೂಡ ಮುಂದೆ ಬರಲಾರದು ಅಂತೆಯೇ ಇಟ್ಟುಕೊಂಡರೂ, ಒಂದೆಡೆ ಜನ ಸೇರುವುದನ್ನುನಸರ್ಕಾರ ನಿಲ್ಲಿಸಬೇಕಾದಾಗ, ಚಿತ್ರಮಂದಿರಗಳು ಅದರ ಕರಾಳ ಛಾಯೆಗೆ ಒಳಗಾಗುತ್ತವೆ ಎನ್ನುವುದು ಗ್ಯಾರಂಟಿಯೂ ಹೌದು.

ʼ ಇದ್ಯಾವುದೋ ವರೈಸ್‌ ಬಂದು ಏನ್ಮಾಡುತ್ತೋ ಗೊತ್ತಿಲ್ಲ, ಆದರೆ ವೈರಸ್‌ ನಿಯಂತ್ರಣಕ್ಕೆ ಅಂತ ಸರ್ಕಾರಗಳು ಕಟ್ಟು ನಿಯಮಗಳನ್ನು ಜಾರಿಗೆ ತಂದರೆ ಚಿತ್ರೋದ್ಯಮಕ್ಕೆ ದೊಡ್ಡ ಹೊಡೆತ ನೀಡುವುದಂತೂ ಹೌದು. ಹಾಗಂತ ನಾವು ಸರ್ಕಾರದ ಮನ್ನೆಚ್ಚರಿಕೆ ಕ್ರಮಗಳನ್ನು ವಿರೋಧಿಸಲು ಆಗದು. ದುಡಿಮೆ, ಹಣ ಅನ್ನೋದಕ್ಕಿಂತ ಜನರ ಜೀವ ಮುಖ್ಯ. ಜೀವ ಇದ್ದರೆ ಎಲ್ಲವೂ ಅಲ್ಲವೇ? ಹಿಂದೆ ಏನಾಯ್ತು ಅಂತ ಎಲ್ಲರಿಗೂ ಗೊತ್ತೇ ಇದೆ. ಸಾವಿನ ಸರಣಿಯೇ ನಡೆದು ಹೋಯಿತು. ಕೊರೋನಾ ದೊಡ್ಡ ಅವಾಂತರ ಸೃಷ್ಟಿಸಿ ಬಿಟ್ಟಿತು. ಈಗ ಅದನ್ನ ಹೇಗೋ ದಾಟಿಕೊಂಡು ಬಂದು , ಕೊಂಚ ನಿಟ್ಟುಸಿರು ಬಿಟ್ಟೆವು ಎನ್ನುವ ಹೊತ್ತಿಗೆ ಇದ್ಯಾವದೋ ಓಮಿಕ್ರಾನ್‌ ವೈರಸ್‌ ಭೀತಿ ಶುರುವಾಗಿದೆ. ಪರಿಸ್ಥಿತಿಗಳು ಹೀಗೆಯೇ ಸೃಷ್ಟಿಯಾಗುತ್ತಾ ಹೊರಟರೆ ಜನರ ಪರಿಸ್ಥಿತಿ ಅದೋಗತಿ. ಈಗಾಗಲೇ ಕೊರೋನಾ ಕಾರಣಕ್ಕೆ ಎಲ್ಲರ ಬದುಕು ಹೈರಾಣವಾಗಿದೆ. ಮತ್ತೆ ಕಠಿಣ ನಿಯಮಗಳು, ಲಾಕ್‌ ಡೌನ್‌ ಅಂತೇನಾದ್ರೂ ಮತ್ತೊಂದು ಸಂಕಷ್ಟ ಎದುರಾದರೆ ನಮ್ಮಗಳ ಕಥೆ ಮುಗೀತುʼ ಎನ್ನುವ ಮೂಲಕ ಭವಿಷ್ಯದ ದಿನಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಾರೆ ಚಿತ್ರೋದ್ಯಮದ ಹಿರಿಯ ನಿರ್ಮಾಪಕರೊಬ್ಬರು.

ಕೊರೋನಾ ಇನ್ನೆಂದಿಗೂ ಬಾರದಿರಲ್ಲಪ್ಪ ಅಂತ ದೇವರಲ್ಲಿ ಪ್ರಾರ್ಥಿಸಿಕೊಂಡವರಿಗೆ ಲೆಕ್ಕವೇ ಇಲ್ಲ. ಯಾಕಂದ್ರೆ ಅದು ಸೃಷ್ಟಿಸಿದ ಅವಾಂತರಗಳೇ ಹಾಗಿದ್ದವು. ಕೆಲಸ ಇಲ್ಲದೆ, ಕಾರ್ಯ ಇಲ್ಲದೆ ಹೊಟ್ಟೆ ಪಾಡಿಗೂ ಪರದಾಡಿದ ಆ ಕಡು ಕಷ್ಟಗಳ ನಡುವೆಯೇ ಸಾವು-ನೋವು ತಂದ ಕಣ್ಣೀರಿನ ಕಥೆಗಳನ್ನು ನೆನಪಿಸಿಕೊಂಡರೆ, ಕರುಳು ಹಿಂಡಿದಂತಾ ಗುತ್ತದೆ. ಅದೇ ಕಾರಣಕ್ಕೆ ಕೊರೋನಾ ಎನ್ನುವ ಮಹಾಮಾರಿ ಇನ್ನೆಂದಿಗೂ ಬಾರದಿರಲಿ ಅಂತ ಜನ ದೇವರಲ್ಲಿ ಮೊರೆಯಿಟ್ಟರೂ, ಈಗ ಅದ್ಯಾವುದೋ ಒಮಿಕ್ರಾನ್‌ ಎನ್ನುವ ವೈರಸ್‌ ಭೀತಿ ಈಗ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಸದ್ಯಕ್ಕೆ ಇದು ಎಷ್ಟರ ಮಟ್ಟಿಗೆ ಅನಾಹುತ ಸೃಷ್ಟಿಸುತ್ತೋ ಗೊತ್ತಿಲ್ಲ, ಆದರೆ ಜನರಲ್ಲಿ ಭೀತಿಯಂತೂ ದಟ್ಟವಾಗಿ ಆವರಿಸಿದೆ. ಈ ನಡುವೆ ಶೀತಗಾಳಿ ಬೇರೆ ಬೆಂಗಳೂರಿಗೆ ಅಡರಿಕೊಂಡಿದೆ. ಪ್ರಕೃತಿಯ ಈ ಅವಾಂತರಗಳಿಗೆ ಯಾರನ್ನು ದೂರಬೇಕೋ ಗೊತ್ತಿಲ್ಲ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ

Related Posts

error: Content is protected !!