Categories
ಸಿನಿ ಸುದ್ದಿ

ಇನ್ಸ್‌ಪೆಕ್ಟರ್‌ ಪ್ರಿಯಾಂಕ!‌ ಮಹಿಳಾ ಪರ ಫೀಲ್ಡ್‌ಗೆ ಎಂಟ್ರಿ

ಉಗ್ರಾವತಾರ ಮೋಷನ್‌ ಪೋಸ್ಟರ್ ಬಂತು

ಪ್ರಿಯಾಂಕ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಒಂದಷ್ಟು ವಿಶೇಷತೆಗಳು ನಡೆದಿವೆ. ಕಳೆದ ವರ್ಷದ ಹುಟ್ಟುಹಬ್ಬ ಆಚರಣೆ ವೇಳೆ, “ಉಗ್ರಾವತಾರ” ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಗೊಂಡಿತ್ತು. ಈ ಹುಟ್ಟುಹಬ್ಬಕ್ಕೆ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಅಷ್ಟಕ್ಕೂ “ಉಗ್ರಾವತಾರ” ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದು ನಟ ಉಪೇಂದ್ರ. ಮೋಷನ್‌ ಪೋಸ್ಟರ್‌ ವೀಕ್ಷಿಸಿದ ಉಪೇಂದ್ರ, ಚಿತ್ರದ ಕೆಲ ತುಣುಕು ನೋಡಿದರೆ, ಮಾಲಾಶ್ರೀ ಅವರ ಚಿತ್ರಗಳು ನೆನಪಾಗುತ್ತವೆ ಎಂದು ಹೇಳುವುದರ ಜೊತೆಗೆ, ಪ್ರಿಯಾಂಕ ಉಪೇಂದ್ರ ಅವರು ಇನ್ಸ್‌ಪೆಕ್ಟರ್‌ ಆಗಿ ಕಾಣಿಸಿಕೊಂಡಿದ್ದು, ಚಿತ್ರ ಎಲ್ಲರಿಗೂ ಗೆಲುವು ಕೊಡಲಿ ಎಂದು ಶುಭಹಾರೈಸಿದ್ದಾರೆ.


ಪ್ರಿಯಾಂಕ ಉಪೇಂದ್ರ ಅವರು ಈ ಹಿಂದೆ “ಸೆಕೆಂಡ್‌ ಹಾಫ್”‌ ಚಿತ್ರದಲ್ಲಿ ಪೊಲೀಸ್‌ ಆಗಿ ಕಾಣಿಸಿಕೊಂಡಿದ್ದರು. ಈಗ “ಉಗ್ರಾವತಾರ” ಚಿತ್ರದಲ್ಲಿ ಇನ್ಸ್‌ಪೆಕ್ಟರ್‌ ಆಗಿ ಮಿಂಚಲಿದ್ದಾರೆ. ಅವರು ತಮ್ಮ ಪಾತ್ರದ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. “ಆರಂಭದಲ್ಲಿ ನಿರ್ದೇಶಕರು ಕಥೆ ಮತ್ತು ಪಾತ್ರದ ಕುರಿತು ವಿವರಿಸಿದಾಗ, ನಾನು ಈ ಪಾತ್ರವನ್ನು ನಿರ್ವಹಿಸಬಹುದಾ ಎಂಬ ಪ್ರಶ್ನೆ ಕಾಡಿದ್ದು ನಿಜ. ಆದರೆ, ಚಿತ್ರದ ನಿರ್ಮಾಪಕರು, ನಿರ್ದೇಶಕರು ಮತ್ತು ಛಾಯಾಗ್ರಾಹಕರು ಧೈರ್ಯ ತುಂಬಿ ಎಲ್ಲರೂ ಪ್ರೋತ್ಸಾಹಿಸಿ ಸಾಥ್ ಕೊಟ್ಟಿದ್ದರಿಂದ ಪಾತ್ರದಲ್ಲಿ ಜೀವಿಸಲು ಸಾಧ್ಯವಾಯಿತು. ಇನ್ನು, ಈ ಚಿತ್ರದಲ್ಲಿ ವಾಸ್ತವ ಅಂಶಗಳಿವೆ. ಮಹಿಳೆಯರ ಮೇಲಿನ ಶೋಷಣೆ, ಅಪರಾಧ ಇದರ ಜೊತೆಗೆ ಒಂದಷ್ಟು ಗಂಭೀರ ವಿಷಯಗಳನ್ನು ಇಟ್ಟುಕೊಂಡೇ ನಿರ್ದೇಶಕರು ಕಮರ್ಷಿಯಲ್ ಅಂಶಗಳೊಂದಿಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು, ನಾನಿಲ್ಲಿ ಸ್ಟಂಟ್‌ ಮಾಡಿದ್ದೇನೆ. ಎಲ್ಲವೂ ನೈಜವಾಗಿರಬೇಕೆಂಬ ಕಾರಣಕ್ಕೆ ಡ್ಯೂಪ್‌ ಇಲ್ಲದೆಯೇ ಒಂದಷ್ಟು ತರಬೇತಿ ಪಡೆದುಕೊಂಡೇ ಕ್ಯಾಮೆರಾ ಮುಂದೆ ಫೈಟ್‌ ಮಾಡಿದ್ದೇನೆ. ಇನ್ನು, ಐಪಿಎಸ್‌ ಅಧಿಕಾರಿ ರೂಪ ಮೇಡಮ್‌ ನನಗೆ ಪ್ರೇರಣೆ ಎಂಬುದು ಪ್ರಿಯಾಂಕ ಉಪೇಂದ್ರ ಅವರ ಮಾತು.


ನಿರ್ದೇಶಕ ಗುರುಮೂರ್ತಿ ಅವರಿಗೆ ಪ್ರಿಯಾಂಕ ಉಪೇಂದ್ರ ಅವರ ಜೊತೆ ಕೆಲಸ ಮಾಡಿದ್ದು ತುಂಬಾನೇ ಹೆಮ್ಮೆ ಎನಿಸಿದೆಯಂತೆ. ಅವರೇ ಹೇಳುವಂತೆ, ಮೇಡಮ್‌ ಚಿತ್ರೀಕರಣ ವೇಳೆ ತಮ್ಮ ಪಾತ್ರದ ಬಗ್ಗೆ ಸಾಕಷ್ಟು ಆಸಕ್ತಿ ವಹಿಸುತ್ತಾರೆ, ಕಾಳಜಿ ತೋರುತ್ತಾರೆ. ಅವರ ಸಹಕಾರ, ಪ್ರೋತ್ಸಾಹದಿಂದಲೇ ನಾವೀಗ ಶೇ.30 ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಸದ್ಯ ಮೂರು ಫೈಟ್ಸ್ ಬಾಕಿ ಇದೆ.‌ ಚಿತ್ರದಲ್ಲಿ ಮಹಿಳೆಯರಿಗೆ ಹೇಗೆ ಗೌರವ ತೋರಬೇಕು ಎಂಬುದು ಹೈಲೆಟ್‌. ಸತ್ಯಪ್ರಕಾಶ್, ಸುಮನ್ ಸೇರಿದಂತೆ ಇತರರು ನಟಿಸಿದ್ದಾರೆ. ಇಷ್ಟು ದಿನ ಪ್ರಿಯಾಂಕ ಅವರು ಗ್ಲಾಮರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಮೊದಲ ಸಲ ಈ ಚಿತ್ರದಲ್ಲಿ ಸ್ಟಂಟ್‌ ಮಾಡುವ ಮೂಲಕ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸಂಕ್ರಾಂತಿ ಹೊತ್ತಿಗೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ ಎಂಬುದು ನಿರ್ದೇಶಕರ ಮಾತು. ಈ ಚಿತ್ರವನ್ನು ಎಸ್.ಜಿ.ಸತೀಶ ನಿರ್ಮಿಸಿದ್ದಾರೆ. ಕಿನ್ನಾಳ್‌ ರಾಜ್‌ ಸಂಭಾಷಣೆ, ಸಾಹಿತ್ಯ ಬರೆದಿದ್ದಾರೆ. ವೀಣಾ ನಂದಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ದೀಪಾವಳಿಗೆ ಅಂತರಂಗದ ಹಾಡು- ಹೊಸ ಪ್ರಯೋಗದ ಜೊತೆ ಶುದ್ಧೀಕರಣ

ಒನ್‌ ನೈಟ್‌ ಸ್ಟೋರಿ ಸ್ಪೆಷಲ್‌, ಇಡೀ ರಾತ್ರಿ ಕಾರಲ್ಲೇ ಟ್ರಾವೆಲ್‌ !

 

“ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮದೇವನ ಒಲಿಸುವ ಪರಿ…

ಅರೇ, ಇದೇನಪ್ಪಾ, ಸಿನಿಮಾ ವೆಬ್ಸೈಟ್‌ನಲ್ಲಿ ಬಸವಣ್ಣನವರ ವಚನವಿದೆ ಎಂಬ ಸಣ್ಣ ಅಚ್ಚರಿಯಾಗಬಹುದು. ಅಚ್ಚರಿಯಾದರೂ, ಈ ವಚನಕ್ಕೂ ಇಲ್ಲಿ ಬರೆಯುತ್ತಿರೋ ಸಿನಿಮಾ ಸುದ್ದಿಗೂ ವಿಶೇಷವಿದೆ. ಇಲ್ಲೀಗ ಹೇಳಹೊರಟಿರುವ ವಿಷಯ “ಇದೇ ಅಂತರಂಗ ಶುದ್ಧಿ” ಚಿತ್ರದ್ದು. ಹೌದು, ಸಿನಿಮಾದ ಹೆಸರೇ ವಿಭಿನ್ನ ಎನಿಸುತ್ತೆ ಅಂದಮೇಲೆ, ಚಿತ್ರದ ಕಥೆ ಕೂಡ ಅಷ್ಟೇ ವಿಭಿನ್ನ ಎಂಬುದು ಚಿತ್ರತಂಡದ ಮಾತು. ಅಂದಹಾಗೆ, ಇದೊಂದು ಪ್ರಯೋಗಾತ್ಮಕ ಚಿತ್ರ. ಹೊಸ ಹೊಸ ಆಲೋಚನೆಗಳೊಂದಿಗೆ ಹೊಸಬರು ಹೊಸ ಪ್ರಯತ್ನ, ಪ್ರಯೋಗಕ್ಕಿಳಿದಿರುವುದು ಹೊಸದೇನಲ್ಲ. ಆ ಸಾಲಿಗೆ ಈ “ಇದೇ ಅಂತರಂಗ ಶುದ್ಧಿ” ಚಿತ್ರವೂ ಹೊಸದ್ದೊಂದು ಪ್ರಯೋಗ ಮಾಡ ಹೊರಟಿದೆ. “ಇದೇ ಅಂತರಂಗ ಶುದ್ಧಿ” ಚಿತ್ರದ ಹೆಸರಲ್ಲೊಂದು ವಿಶೇಷತೆಯೂ ಇದೆ. ಅದು ಸಿನಿಮಾ ಹೊರಬರುವವರೆಗೆ ಕಾಯಬೇಕಷ್ಟೇ. ಇದೇ ದೀಪಾವಳಿ ಹಬ್ಬದಂದು ಚಿತ್ರದ ಲಿರಿಕಲ್‌ ವಿಡಿಯೋ ಹೊರಬರುತ್ತಿದೆ. ನವೆಂಬರ್‌ ೧೫ರಂದು ನಿರ್ದೇಶಕ ಕುಮಾರ್‌ ದತ್‌ ಬರೆದಿರುವ “ನುಡಿಸು ಹೃದಯ” ಲಿರಿಕಲ್‌ ವಿಡಿಯೋ ರಿಲೀಸ್‌ ಆಗುತ್ತಿದೆ. ನಕುಲ್‌ ಅಭ್ಯಯಂಕರ್‌ ಹಾಡಿರುವ ಈ ಹಾಡನ್ನು ಡಿ. ಬೀಟ್ಸ್‌ ಆಡಿಯೋ ಕಂಪೆನಿ ಮೂಲಕ ಹೊರತರಲಾಗುತ್ತಿದೆ. ಅಂದಹಾಗೆ, ಈ ಚಿತ್ರದ ಕುರಿತು ನಿರ್ದೇಶಕ ಕುಮಾರ್‌ ದತ್ “ಸಿನಿ ಲಹರಿ” ಜೊತೆ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.

ಒಂದು ರಾತ್ರಿಯ ಕಥೆ
“ಇದು ನನ್ನ ಎರಡನೇ ನಿರ್ದೇಶನದ ಸಿನಿಮಾ. ಈ ಹಿಂದೆ “ಎರಡೊಂದ್ಲ ಮೂರು” ಸಿನಿಮಾ ಮಾಡಿದ್ದೆ. ಅದಾದ ಬಳಿಕ ಹೊಸ ಬಗೆಯ ಕಥೆ ಹೆಣೆದು ಸಿನಿಮಾಗೆ ಅಣಿಯಾದೆ. ಆಗ ಶುರುವಾಗಿದ್ದೇ “ಇದೇ ಅಂತರಂಗ ಶುದ್ಧಿ”. ಮೊದಲೇ ಹೇಳಿದಂತೆ, ಇದೊಂದು ಪ್ರಯೋಗಾತ್ಮಕ ಸಿನಿಮಾ. ಇಡೀ ಸಿನಿಮಾ ೨೦ ದಿನಗಳಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷವೆಂದರೆ, ಬಹುತೇಕ ರಾತ್ರಿ ವೇಳೆ ಚಿತ್ರೀಕರಿಸಿದ್ದೇನೆ. ಕಾರಣ, ಇದೊಂದು ಜರ್ನಿಯಲ್ಲಿ ಸಾಗುವ ಕಥೆ. ಅದರಲ್ಲೂ ರಾತ್ರಿ ಶುರುವಾಗಿ, ಬೆಳಗ್ಗೆ ಮುಗಿಯುವ ಕಥೆ. ಬೆಂಗಳೂರು ಆಚೆ ಹೋಗೋದು, ಅಲ್ಲಿಂದ ಈಚೆ ಬರುವ ದೃಶ್ಯಗಳು ಮಾತ್ರ ಇಲ್ಲಿರಲಿವೆ. ಇಲ್ಲಿ ಕಾರು, ಇನ್ನೋವ, ಟ್ಯಾಕ್ಸಿ ಇವುಗಳೂ ಹೈಲೆಟ್‌ ಆಗಿವೆ. ಒಂದು ಜರ್ನಿ ಪಾಯಿಂಟ್‌ನಲ್ಲೇ ಕಥೆ ಸಾಗಲಿದೆʼ ಎಂಬುದು ನಿರ್ದೇಶಕರ ಮಾತು.

ಕುಮಾರ್‌ ದತ್‌, ನಿರ್ದೇಶಕ

 

ಪ್ರಯೋಗಾತ್ಮಕ ಚಿತ್ರ
ಚಿತ್ರದ ಶೀರ್ಷಿಕೆಗೆ ತಕ್ಕಂತೆಯೇ ಇಲ್ಲಿ ಕಥೆ ಹೆಣೆಯಲಾಗಿದೆ. ಯಾವುದೇ ಕಾರಣಕ್ಕೂ ಶೀರ್ಷಿಕೆ ಇಲ್ಲಿ ದುರ್ಬಳಕೆಯಾಗಲ್ಲ. ಕಥೆಗೆ ಪೂರಕವಾಗಿಯೇ ಟೈಟಲ್‌ ಇಡಲಾಗಿದೆ. ಪ್ರಯೋಗಾತ್ಮಕ ಚಿತ್ರ ಅಂದಾಗ ವಿಶೇಷತೆಗಳು ಇರಲೇಬೇಕು. ಆ ಬಗ್ಗೆ ಹೇಳುವುದಾದರೆ, ಇಲ್ಲಿ ಇಡೀ ಸಿನಿಮಾದಲ್ಲಿ ಯಾವುದೇ ಸಿನಿಮಾ ಲೈಟ್‌ ಬಳಸಿಲ್ಲ. ಕಾರಿನ ಲೈಟ್ಸ್‌ಗಳು, ಬೀದಿ ದೀಪಗಳನ್ನೇ ಇಟ್ಟುಕೊಂಡು ಚಿತ್ರೀಕರಿಸಿದ್ದೇನೆ. ಎಲ್ಲವೂ ನೈಜತೆಯಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಪ್ರಯತ್ನ ಮಾಡಿದ್ದೇನೆ. ಆ ಪ್ರಯತ್ನ ಸಾರ್ಥಕವೂ ಎನಿಸಿದೆ. ಇನ್ನು, ಕಥೆ ಬಗ್ಗೆ ಹೇಳುವುದಾದರೆ, ಇಲ್ಲೂ ಲವ್‌ಟ್ರ್ಯಾಕ್‌ ಹೋಗುತ್ತೆ. ಒಂದು ಸಮಾಜಕ್ಕೊಂದು ಸಣ್ಣ ಸಂದೇಶವೂ ಇಲ್ಲಿದೆ. ಹಾಗೆಯೇ ಇಲ್ಲಿ ಉಗ್ರರ ನೆರಳೂ ಇದೆ. ಹುಡುಗಿಯೊಬ್ಬಳು ಮನೆಬಿಟ್ಟು ಹೋಗ್ತಾಳೆ, ಅವಳನ್ನು ಒಬ್ಬ ಹುಡುಗ ಭೇಟಿಯಾಗ್ತಾನೆ. ಒಬ್ಬೊಬ್ಬರು ಬಂದು ಒಂದು ಕಾರಲ್ಲಿ ಕೂರುತ್ತಾರೆ. ಅಲ್ಲಿ ಎಲ್ಲರ ಸ್ಟೋರಿಯೂ ಕನೆಕ್ಟ್‌ ಆಗ್ತಾ ಹೋಗುತ್ತದೆ ಎಂಬುದು ಅವರ ಮಾತು.

ಅಭಿಲಾಶ್‌ ಚಾಕ್ಲ , ವಜೀತ್‌ ಬುಲ್ಲರ್ ನಿರ್ಮಾಪಕರು

ಸಾಫ್ಟ್‌ವೇರ್‌ ಮಂದಿಯ ಕಲರ್‌ಫುಲ್‌ ಸಿನ್ಮಾ
ಈ ಚಿತ್ರ ಅಭಿನವ್‌ ಬ್ಯಾನರ್‌ನಲ್ಲಿ ತಯಾರಾಗಿದೆ. ಅಭಿಲಾಶ್‌ ಚಾಕ್ಲ ಮತ್ತು ವಜೀತ್‌ ಬುಲ್ಲರ್ ಈ ಚಿತ್ರದ ನಿರ್ಮಾಪಕರು. ಇವರಿಗೆ ಇದು ಮೊದಲ ಚಿತ್ರ. ಒಂದೊಳ್ಳೆಯ ಸಿನಿಮಾ ಮಾಡುವ ಆಸೆ ಇದ್ದುದರಿಂದಲೇ ಇವರು, ಕುಮಾರ್‌ ದತ್‌ ಹೇಳಿದ ಕಥೆ ಕೇಳಿ, ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಪಕರಿಗೆ ಒಳ್ಳೆಯ ಸಿನಿಮಾ ಮಾಡಿರುವ ತೃಪ್ತಿ ಇದೆ. ಇನ್ನು, ಚಿತ್ರಕ್ಕೆ ಆರ್ಯವರ್ಧನ್‌ ಹೀರೋ. ಅವರಿಗೆ ಪ್ರತಿಭಾ ಹಾಗೂ ಶ್ವೇತಾ ನಾಯಕಿಯರು. ಉಳಿದಂತೆ ಚಿತ್ರದಲ್ಲಿ ಶ್ರೀಧರ್‌, ಮಂಜುಳಾರೆಡ್ಡಿ, “ಕಾಮಿಡಿ ಕಿಲಾಡಿ” ಖ್ಯಾತಿಯ ಸೂರಜ್‌, ರೂಪೇಶ್‌ ಇತರರು ನಟಿಸಿದ್ದಾರೆ. ಲವ್‌ ಪ್ರಾಣ್‌ ಮೆಹ್ತಾ ಅವರ ಸಂಗೀತವಿದೆ. ವಿನಯ್‌ ಛಾಯಾಗ್ರಹಣ ಮಾಡಿದ್ದಾರೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ ಅಥವಾ ಜನವರಿಯಲ್ಲಿ ಚಿತ್ರ ತೆರೆಗೆ ಬರಲಿದೆ. ಸದ್ಯ ದೀಪಾವಳಿಗೆ “ನುಡಿಸು ಹೃದಯ” ಲಿರಿಕಲ್‌ ವಿಡಿಯೋ ಹೊರಬರುತ್ತಿದೆ. ಚಿತ್ರದಲ್ಲಿ ಒಂದು ಕ್ಲಾಸಿಕಲ್‌ ಗೀತೆ, ಮೆಲೋಡಿ ಹಾಗು ಕಥೆಗೆ ಪೂರಕವಾಗಿ ಸಾಗುವ ಹಾಡೊಂದು ಇದೆ. ಅದೇನೆ ಇರಲಿ, ಚಿತ್ರದ ಶೀರ್ಷಿಕೆಯೇ ಆಕರ್ಷಣೆ ಎನಿರುವುದರಿಂದ ಸಣ್ಣ ಕುತೂಹಲವಂತೂ ಚಿತ್ರದ ಮೇಲಿದೆ. ಇನ್ನು, ನ.೧೫ಕ್ಕೆ ಹೊರಬರುವ ಹಾಡು ಕೂಡ ಕೇಳುಗರಿಗೆ ಖಂಡಿತ ಇಷ್ಟವಾಗುತ್ತೆ ಎಂಬ ನಂಬಿಕೆ ಕೂಡ ಚಿತ್ರತಂಡಕ್ಕಿದೆ.

 

Categories
ಸಿನಿ ಸುದ್ದಿ

ಸುವರ್ಣದಲ್ಲಿ ಶುರುವಾಗಿದೆ ‘ ಸರಸು’

ಮುಗಿಲು ಮುಟ್ಟುವ ಮನಸ್ಸು
ಆಕೆಗಿದೆ ಬೆಟ್ಟದಷ್ಟು ಕನಸು …


ಲಾಕ್ ಡೌನ್ ಸಮಯದಲ್ಲಿ ಡಬ್ಬಿಂಗ್ ಧಾರಾವಾಹಿಗಳತ್ತ ಮನಸ್ಸು ಮಾಡಿದ್ದ ಸ್ಟಾರ್ ಸುವರ್ಣ ವಾಹಿನಿ ಈಗ ಸ್ವಮೇಕ್ ಧಾರಾವಾಹಿಗಳತ್ತ ಮುಖ ಮಾಡಿದೆ. ಇದೀಗ ಸುವರ್ಣದಲ್ಲಿ ಹೆಣ್ಣುಮಕ್ಕಳ ಆಶೋತ್ತರಗಳನ್ನು ಪ್ರತಿನಿಧಿಸುವ ಹೊಚ್ಚ ಹೊಸ ಧಾರಾವಾಹಿ ಸರಸು ನವೆಂಬರ್ 11 ರಿಂದಲೇ ಶುರುವಾಗಿದೆ‌. ಅದರಲ್ಲೂ ಈ ಧಾರಾವಾಹಿಗೆ ಚಾನೆಲ್ ಪ್ರೈಂ ಸಮಯ, ಅಂದ್ರೆ ರಾತ್ರಿ 9 ಗಂಟೆ ಮೀಸಲಿಟ್ಟಿರುವುದು ವಿಶೇಷವಾಗಿದೆ‌.

ಸಮಾನತೆ, ಹಕ್ಕು ಮತ್ತು ಸ್ವಾತಂತ್ರ್ಯದ ವಿಷಯದಲ್ಲಿ ಇಂದಿಗೂ ಸವಾಲು ಎದುರಿಸುತ್ತಿರುವ ಹೆಣ್ಣು ಮಕ್ಕಳ ಪ್ರತಿನಿಧಿ ಯುವತಿಯ ಕತೆಯೇ ‘ಸರಸು’. ತೀರ್ಥಹಳ್ಳಿಯ ಪ್ರಕೃತಿ ಮಡಿಲಲ್ಲಿ ಬೆಳದ ಸರಸು ಮತ್ತು ಮೆಟ್ರೋ ಸಿಟಿಯ ಮಾಡರ್ನ್ ಹುಡುಗ ಅರವಿಂದನ ಕತೆ ಅದು. ಇಂದಿನ ಕಾಲ‌ಮಾನಕ್ಕೆ‌ತಕ್ಕಂತೆ ಅದನ್ನು ತೆರೆಗೆ ತರಲಾಗುತ್ತಿದೆ. ಈಗಾಗಲೇ ಇದರ ಪ್ರೋಮೋ, ಸಾಮಾಜಿಕ ತಾಣದಲ್ಲಿ ಟ್ರೆಂಡ್ ಆಗಿದೆ . ಕಿರುತೆರೆ ವೀಕ್ಷಕರ ಮನಸ್ಸು ಗೆದ್ದಿವೆ. ಜನ ಹೇಗೆ ಸ್ವೀಕರಿಸುತ್ತಾರೆನ್ನುವ ಕುತೂಹಲ ಹೆಚ್ಚಾಗಿದೆ.

ಒಂದು‌ಮುದ್ದಾದ ಕತೆಯ ಕುತೂಹಲದ ಜತೆಗೆ ಇದರ ತಾರಾಗಣವೂ ಸೊಗಸಾಗಿದೆ. ಸುಪ್ರಿತಾ ಸತ್ಯನಾರಾಯಣ್ ಮತ್ತು ಸ್ಕಂದ ಅಶೋಕ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ಖ್ಯಾತ ಕಲಾವಿದ ಅಭಿಜಿತ್, ‘ಸರಸು ‘ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ್ದಾರೆ. ಹಾಗೆಯೇ ಹಿರಿತೆರೆ ಹಾಗೂ ಕಿರುತೆರಡಯ ಹೆಸರಾಂತ ನಟರಾದ ವೀಣಾ ಸುಂದರ್ ಮತ್ತು ಧರ್ಮೇಂದ್ರ ಅರಸ್ ಇದರ ಪ್ರಮುಖ ಆಕರ್ಷಣೆ.ಮೈಸೂರು ಮಂಜು ನಿರ್ದೇಶನದ ಜತೆಗೆ ಜೀವ ಅವರ ಛಾಯಾಗ್ರಹಣ ಮತ್ತು ಸುನಾದ್ ಗೌತಮ್ ಅವರ ಸಂಗೀತವಿದೆ.

Categories
ಸಿನಿ ಸುದ್ದಿ

ಅಂಧರ ಕಥಾಹಂದರ ಮನಸಾರೆ ನೋಡಿ

ನವೆಂಬರ್14ಕ್ಕೆ ಕಣ್ತೆರೆದು ನೋಡು ಫಸ್ಟ್ ಲುಕ್

ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದಲೂ ನೃತ್ಯ ನಿರ್ದೇಶಕರಾಗಿರುವ ಎಂ.ಆರ್. ಕಪಿಲ್ ಅವರು ಈಗಾಗಲೇ ನಿರ್ದೇಶಕರಾಗಿ ಗುರುತಿಸಿಕೊಂಡಿರುವುದು ಗೊತ್ತೇ ಇದೆ. ಈಗ ಮತ್ತೊಂದು ಸಿನಿಮಾ ನಿರ್ದೇಶನ ಮಾಡಿದ್ದು, ಅದೀಗ ಬಿಡುಗಡೆಗೆ ಸಿದ್ಧವಾಗುತ್ತಿದೆ.
ಅಂದಹಾಗೆ, ಆ ಚಿತ್ರಕ್ಕೆ ‘ಕಣ್ತೆರೆದು ನೋಡು’ ಎಂಬ ಹೆಸರಿಡಲಾಗಿದೆ.ಕುಶಿಲ ಸಿನಿ ಪ್ರೊಡಕ್ಷನ್ಸ್ ನ ಮೊದಲ ನಿರ್ಮಾಣದ ಚಿತ್ರವಿದು. ನವೆಂಬರ್ 14 ರಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.

ಶಿವಪ್ಪ ಕುಡ್ಲೂರು

ಇನ್ನು ಶಿವಪ್ಪ ಕುಡ್ಲೂರು ಈ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಕಪಿಲ್ ಅವರು, ಕಥೆಯ ಜೊತೆಗೆ ನೃತ್ಯ ನಿರ್ದೇಶನವನ್ನೂ ಮಾಡಿದ್ದಾರೆ. ಇದು ಅಂಧನೊಬ್ಬನ ಕಥೆ ಹೊಂದಿದ್ದು, ಸಮಾಜಕ್ಕೊಂದು ಸಂದೇಶ ಸಾರುವ ಅಂಶವಿದೆ. ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು ಅಂಧ ಗಾಯಕರ ಧ್ವನಿ ಇರುವುದು ವಿಶೇಷ. ಚಿತ್ರಕ್ಕೆ ದಿನೇಶ್ ಈಶ್ವರ್ ಅವರ ಸಂಗೀತವಿದೆ.

ಕಪಿಲ್ ನಿರ್ದೇಶಕ

ಚಿತ್ರದ ಪ್ರಮುಖ ಪಾತ್ರಧಾರಿ ಶಿವಪ್ಪ ಕುಡ್ಲೂರು ಮೂಲತಃ ಚಿಕ್ಕಮಗಳೂರಿನವರು ಬಾಲ್ಯದಿಂದಲೇ ನಟನೆ ಆಸಕ್ತಿ ಇಟ್ಟುಕೊಂಡಿದ್ದ ಇವರು, ಶಾಲೆ,ಕಾಲೇಜು ದಿನಗಳಲ್ಲಿ ನಾಟಕ, ಬೀದಿನಾಟಕಗಳಲ್ಲಿ ಭಾಗವಹಿಸಿ, ನಟನೆ ಗೀಳು ಇಟ್ಟಕೊಂಡಿದ್ದರು. ಹಾಗೆ ನೋಡಿದರೆ, ಇವರು ಕಳೆದ ಎರಡು ದಶಕಗಳ ಹಿಂದೆಯೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಇವರಿಗೆ ಅವಕಾಶ ಕಲ್ಪಿಸಿದ್ದು ಎಂಬುದು ವಿಶೇಷ.

ಆದರೆ, ಹಲವು ಕಾರಣಗಳಿಂದ ಚಿತ್ರರಂಗದಿಂದ ದೂರವಿದ್ದ ಇವರು ಕೈಗಾರಿಕಾ ಉದ್ಯಮದಲ್ಲಿ ತೊಡಗಿದ್ದರು. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಇವರೀಗ ‘ಕಣ್ತೆರೆದು ನೋಡು’ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ್ದಾರೆ.


ಚಿತ್ರಕ್ಕೆ ಪುಷ್ಪಲತಾ ಕುಡ್ಲೂರು ನಿರ್ಮಾಪಕರು. ಒಂದೊಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ನಿರ್ದೇಶಕ ಕಪಿಲ್ ಹೇಳಿದ ಅಂಧನೊಬ್ಬನ‌ ಕಥೆಗೆ ಬಂಡವಾಳ ಹಾಕಿದ್ದಾರೆ. ಇನ್ನು ಚಿತ್ರದ ನಿರ್ಮಾಣದಲ್ಲಿ
ಹರೀಶ್ ಹೆಬ್ಬಗೋಡು, ಡಾ. ಸಿ.ಬಿ.ಶಶಿಧರ್,
ಶಿವಕುಮಾರ್ ಜೇವರಗಿ, ಸಿದ್ದು ಸಾಹುಕಾರ ಕಬಾಡಗಿ ಇತರರು ಸಾಥ್ ನೀಡಿದ್ದಾರೆ.

 

 

Categories
ಸಿನಿ ಸುದ್ದಿ

ಶಶಿಕುಮಾರ್ ಪುತ್ರನಿಗೆ ಶಿವಣ್ಣ ಸಾಥ್

ಸೀತಾಯಣ ಟೀಸರ್ ರಿಲೀಸ್ ಮಾಡಿದ ಸೆಂಚುರಿ ಸ್ಟಾರ್

ಶಶಿಕುಮಾರ್ ಪುತ್ರ ಅಕ್ಷಿತ್ ಅಭಿನಯದ “ಸೀತಾಯಣ” ಬಿಡುಗಡೆಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಚಿತ್ರತಂಡ ಚಿತ್ರದ ಟ್ರೇಲರ್ ಹೊರ ತಂದಿದೆ.
ನಟ ಶಿವರಾಜಕುಮಾರ್ ಅವರು ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.


ಕಲರ್ಸ್ ಕ್ಲೌಡ್ಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ನಡಿ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ತಯಾರಾಗಿರುವ ’ಸೀತಾಯಣ’ ಸಿನಿಮಾದ ಟೀಸರ್‌ ವೀಕ್ಷಿಸಿದ ಶಿವರಾಜ್‌ಕುಮಾರ್, ‘ಶಶಿಕುಮಾರ್ ಸಹೋದರ ಇದ್ದಂತೆ. ಅವರ ಮಗ ಮೂರು ಭಾಷೆಯಲ್ಲಿ ತಯಾರಾಗಿರುವ ಚಿತ್ರದಲ್ಲಿ ನಾಯಕನಾಗಿದ್ದಾರೆ ಅದು ಖುಷಿಯ ವಿಷಯ.
ಮೂರು ಭಾಷೆಗಳಲ್ಲಿ ಒಬ್ಬ ಕನ್ನಡದ ಹುಡುಗನನ್ನು ಹಾಕಿಕೊಂಡು ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ಅಭಿನಂದನೆಗಳು.
ಟೀಸರ್ ನೋಡಿದರೆ, ಸಿನಿಮಾ ಗೆಲ್ಲುವ ಲಕ್ಷಣಗಳಿವೆ. ರಾಮಾಯಣದಂತೆ ಈ ಸಿನಿಮಾವು ಎಲ್ಲಾ ಭಾಷೆಯಲ್ಲಿ ಚರಿತ್ರೆ ಸೃಷ್ಟಿಸಲಿ ಎಂದು ಶುಭ ಹಾರೈಸಿದ್ದಾರೆ.


ನಿರ್ಮಾಪಕಿ ಲಲಿತಾ ರಾಜಲಕ್ಷೀ ಅವರಿಗೆ ‘ಸೀತಾಯಣ’ ಎಂಬ ಒಳ್ಳೆಯ ಸಿನಿಮಾ ಮಾಡಿದ ಹೆಮ್ಮೆ. ಚಿತ್ರದಲ್ಲಿ ಮಹಿಳೆಯರಿಗೆ ಗೌರವ ಕೊಡಬೇಕು ಎಂಬ ವಿಷಯ ಹೈಲೈಟ್ ಆಗಿದೆ ಎನ್ನುತ್ತಾರೆ ಅವರು.
ಚಿತ್ರದಲ್ಲಿ ಅಕ್ಷಿತ್‌ ಶಶಿಕುಮಾರ್‌ಗೆ ಜೋಡಿಯಾಗಿ ಅನಹಿತಾ ಭೂಷಣ್ ಇದ್ದಾರೆ. ಉಳಿದಂತೆ ಅಜಯ್‌ ಘೋಷ್, ‘ಕಾಮಿಡಿ ಕಿಲಾಡಿ’ ಖ್ಯಾತಿಯ ಹಿತೇಶ್, ಮಧುಸುಧನ್, ವಿಕ್ರಂಶರ್ಮ, ಮೇಘನಾಗೌಡ, ಬೇಬಿ ತ್ರಿಯುಕ್ತ, ವಿದ್ಯಲೇಖರಾಮನ್ ಇತರರು ನಟಿಸಿದ್ದಾರೆ.
ಪ್ರಭಾಕರ್‌ ಆರಿಪ್ಕಾ ನಿರ್ದೇಶನವಿದೆ. ಪದ್ಮನಾಭ ಭಾರದ್ವಾಜ್ ಸಂಗೀತವಿದೆ. ದುರ್ಗಾಪ್ರಸಾದ್‌ ಕೊಲ್ಲಿ ಛಾಯಾಗ್ರಹಣವಿದೆ. ಪ್ರವೀಣ್‌ಪುಡಿ ಸಂಕಲನ ಹಾಗೂ ಕವಿರಾಜ್, ಗೌಸ್‌ಪೀರ್ ಸಾಹಿತ್ಯವಿದೆ. ರಿಯಲ್ ಸತೀಶ್ ಸ್ಟಂಟ್ ಮಾಡಿದ್ದಾರೆ.

Categories
ಸಿನಿ ಸುದ್ದಿ

ರಿಯಲ್‌ನಲ್ಲಿ ಮೃದು ಪೋಲೀಸ್‌, ರೀಲ್‌ನಲ್ಲಿ ಖಡಕ್‌ ಅಧಿಕಾರಿ!

ಮಧು ತುಂಬಿದ ಬದುಕು…
ಇದು ಮಂದಗೆರೆ ಹುಡುಗನ ಸಿನ್ಮಾ ಪ್ರೀತಿ

ಅವರೊಬ್ಬ ಖಡಕ್‌ ಪೊಲೀಸ್‌ ಅಧಿಕಾರಿ. ದುಷ್ಟರನ್ನು ಬಗ್ಗು ಬಡಿಯೋ ಖದರ್‌ ವ್ಯಕ್ತಿ. ಇಲ್ಲಿಯವರೆಗೆ ಮಾಡಿರುವ ಎನ್‌ಕೌಂಟರ್‌ಗಳ ಒಟ್ಟು ಸಂಖ್ಯೆ 114!
ಅಬ್ಬಾ…! ಬರೋಬ್ಬರಿ 114 ಎನ್‌ಕೌಂಟರ್‌ ಮಾಡಿದ್ದಾರೆಂದರೆ, ಅದು ಸುಲಭದ ಮಾತಂತೂ ಅಲ್ಲ ಬಿಡಿ. ಹೀಗಂತ ಹಾಗೊಮ್ಮೆ ಅಚ್ಚರಿಯಾಗುವುದು ನಿಜ. ಇದು ರಿಯಲ್‌ ಪೋಲೀಸ್‌ವೊಬ್ಬರ ರೀಲ್‌ ಸ್ಟೋರಿ ಅಂದರೆ ನಂಬಲೇಬೇಕು. ಹೌದು, ಅವರು ರಿಯಲ್‌ ಲೈಫಲ್ಲಿ ರೈಲ್ವೆ ಇಲಾಖೆಯಲ್ಲಿ ಪೊಲೀಸ್‌ ಆದವರು. ರೀಲ್‌ನಲ್ಲಿ ಮಾತ್ರ ಎಸಿಪಿ, ಎಸ್‌ಪಿ ಆಗಿ ತೆರೆಯ ಮೇಲೆ ಮಿಂಚಿದವರು. ಗನ್‌ ಹಿಡಿದು ಎದುರಾಳಿಗಳನ್ನು ಮಲಗಿಸಿದವರು. ಕಳೆದ ಮೂರು ದಶಕಗಳಿಂದಲೂ ಸಿನಿರಂಗವನ್ನು ಅಪ್ಪಿಕೊಂಡಿರುವ ಅವರು ಅಪ್ಪಟ ಕನ್ನಡ ಸಿನಿಪ್ರೇಮಿ. ಅಂದಹಾಗೆ, ಅವರು ಬೇರಾರೂ ಅಲ್ಲ, ಮಧು ಮಂದಗೆರೆ. ಹೌದು, ಇದು ಮಧು ಮಂದಗೆರೆ ಟಿಪ್ಪಣಿ. ಅವರ ಇಷ್ಟು ವರ್ಷಗಳ ಜರ್ನಿ ಕುರಿತು “ಸಿನಿ ಲಹರಿ” ಜೊತೆ ಮಾತನಾಡಿದ್ದಾರೆ.

 

ಓವರ್‌ ಟು ಮಧು ಮಂದಗೆರೆ…
“ಸಿನಿಮಾ ನನ್ನ ಕನಸು. ಅದು ಈಗಿನದ್ದಲ್ಲ. ನನಗೆ ಸಿನಿಮಾ ನೋಡುವ ಆಸೆ ಹುಟ್ಟಿದ್ದಾಗಿನಿಂದಲೂ ಹುಟ್ಟಿದ ಕನಸದು. ನಾನು ಮೂಲತಃ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಊರಿನವನು. ಸಾಧಾರಣ ಗ್ರಾಮದಿಂದ ಬಂದವನು. ಕಳೆದ 30 ವರ್ಷಗಳಿಂದಲೂ ನನಗೆ ಸಿನಿಮಾ ಅಂದರೆ ಎಲ್ಲಿಲ್ಲದ ಪ್ರೀತಿ. ಅಂದಿನಿಂದ ಇಂದಿನವರೆಗೂ ಸಿನಿಮಾ ಜಪಿಸದ ದಿನವಿಲ್ಲ. ಕೆ.ವಿ.ರಾಜು ಅವರ “ಅಭಿಜಿತ್”‌ ಚಿತ್ರದ ಮೂಲಕ ನಾನು ಸಿನಿಮಾ ರಂಗ ಪ್ರವೇಶಿಸಿದೆ. ದೇವರಾಜ್‌ ಹಾಗೂ ಖುಷ್ಬು ಅವರ ಚಿತ್ರವದು. ಅಲ್ಲಿಂದ ಶುರುವಾದ ನನ್ನ ಸಿನಿಮಾ ಪಯಣ ಇಲ್ಲಿಯವರೆಗೂ ಮುಂದುವರೆದಿದೆ. ಈವರೆಗೆ ನಾನು ಸುಮಾರು 55ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಸದ್ಯಕ್ಕೆ ಬಿಡುಗಡೆಗೆ 11ಕ್ಕೂ ಹೆಚ್ಚು ಚಿತ್ರಗಳು ಸಾಲುಗಟ್ಟಿವೆ. ಇನ್ನು, ನಾನು ಇದುವರೆಗೆ ವಿಷ್ಣುವರ್ಧನ್‌, ಅಂಬರೀಶ್‌, ಶಿವರಾಜಕುಮಾರ್‌, ಪುನೀತ್‌ ರಾಜಕುಮಾರ್‌, ದರ್ಶನ್‌, ಸುದೀಪ್‌ ಸೇರಿದಂತೆ ಹಲವು ಸ್ಟಾರ್‌ ನಟರು ಹಾಗೂ ಈಗಿನ ಯುವ ನಟರ ಜೊತೆಗೂ ನಟಿಸಿದ್ದೇನೆ ಎಂಬ ಖುಷಿ ಇದೆʼ ಎಂಬುದು ಮಂದು ಮಂದಗೆರೆ ಮಾತು.

ಪೊಲೀಸ್‌ನಿಂದ ಎಸ್‌ಪಿವರೆಗೆ…
ನಾನು ಸಿನಿಮಾ ಕನಸು ಕಂಡಿದ್ದನ್ನು ನನಸು ಮಾಡಿಕೊಂಡಿದ್ದೇನೆ. ಸಿನಿಮಾ ನಂಟು ಬೆಳೆಸಿಕೊಂಡಿದ್ದವನಿಗೆ ಸರ್ಕಾರಿ ಕೆಲಸವೂ ಸಿಕ್ಕಿದ್ದು ಮತ್ತೊಂದು ವಿಶೇಷ. ರೈಲ್ವೆ ಇಲಾಖೆಯಲ್ಲಿ ಪೊಲೀಸ್‌ ಆಗಿ ಕೆಲಸ ಪಡೆದವನಿಗೆ. ಸಿನಿಮಾ ಇನ್ನೇನು ಮರೆತುಬಿಡಬೇಕು ಅನ್ನುವ ಹೊತ್ತಲ್ಲಿ, ನನ್ನೊಳಗಿನ ಪ್ರತಿಭೆ ಮತ್ತು ಅದಮ್ಯ ಉತ್ಸಾಹ ಕಂಡ ಕಚೇರಿಯ ಅಧಿಕಾರಿಗಳು ಸಾಥ್‌ ಕೊಟ್ಟರು. ಹಾಗಾಗಿಯೇ ನಾನು ಒಂದಷ್ಟು ಸಿನಿಮಾಗಳಲ್ಲಿ ನಟಿಸೋಕೆ ಸಾಧ್ಯವಾಯ್ತು. ನಾನೊಬ್ಬ ರೈಲ್ವೆ ಪೊಲೀಸ್‌ ಆಗಿಯೂ ಸಿನಿಮಾದಲ್ಲಿ ಅವಕಾಶ ಪಡೆದು ನಟಿಸಿದೆ. ರಿಯಲ್‌ನಲ್ಲಿ ಪೊಲೀಸ್‌ ಆಗಿದ್ದರೆ, ರೀಲ್‌ನಲ್ಲಿ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದೇನೆ ಎಂಬ ಹೆಮ್ಮೆ ಇದೆ. ಇಲಾಖೆಯಲ್ಲಿದ್ದುಕೊಂಡು ಅಧಿಕಾರಿಗಳ ಸಲಹೆ, ಸೂಚನೆಯೊಂದಿಗೆ ನನ್ನೊಳಗಿನ ಬಣ್ಣದ ಕನಸನ್ನು ನನಸಾಗಿಸಿಕೊಂಡು ಬಂದಿದ್ದೇನೆ. ಈಗ ಇನ್ನೊಂದು ವಿಷಯ ಹೇಳಲೇಬೇಕು. ನಾನು ರೈಲ್ವೆ ಪೊಲೀಸ್‌ ಆಗಿದ್ದೆ. ಈಗ ಪೊಲೀಸ್‌ ಕೆಲಸದಿಂದ ಹೊರಬಂದು, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಪೊಲೀಸ್‌ ಆಗಿ ಭಾರತದ ಹಲವು ರಾಜ್ಯಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಈಗ ಕಚೇರಿ ಕೆಲಸ ಪಡೆದಿದ್ದು, ಬೆಳಗ್ಗೆ ಹೋಗಿ, ಸಂಜೆ ಹಿಂದಿರುಗುತ್ತಿದ್ದೇನೆ. ಸಿನಿಮಾ ವಿಷಯಕ್ಕೆ ಬಂದರೆ, ಅವಕಾಶ ಸಿಕ್ಕಾಗೆಲ್ಲಾ ಪಾತ್ರಗಳನ್ನು ಒಪ್ಪಿ, ಅಪ್ಪಿ ನಿರ್ವಹಿಸುತ್ತಿದ್ದೇನೆ.

ಎರಡು ಸಿನ್ಮಾದಲ್ಲಿ ಲೀಡ್‌ ರೋಲ್
ನನ್ನ ಇಷ್ಟು ವರ್ಷಗಳ ಪಯಣದಲ್ಲಿ ಬಹುತೇಕ ಪೊಲೀಸ್‌ ಅಧಿಕಾರಿ ಪಾತ್ರಗಳನ್ನೇ ನಿರ್ವಹಿಸಿದ್ದೇನೆ ಎಂದು ಹೇಳೋಕೆ ಖುಷಿ ಆಗುತ್ತಿದೆ. ಅದೊಂದು ಅದೃಷ್ಟ ಎನ್ನಬಹುದು. ನನ್ನ ಹೈಟು, ಪರ್ಸನಾಲಿಟಿ ನೋಡಿದವರು ಅದೇ ಪಾತ್ರ ಹುಡುಕಿ ಕೊಡುತ್ತಾರೆ. ನಾನೂ ಕೂಡ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ. ಹಾಗಾಗಿ, ಪೊಲೀಸ್‌ ಅಧಿಕಾರಿ ಪಾತ್ರಕ್ಕೆ ಸಾಕಷ್ಟು ಅವಕಾಶಗಳು ಬಂದಿವೆ. ಬರುತ್ತಲೂ ಇವೆ. ಸದ್ಯಕ್ಕೆ ನಾನು ಎರಡು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದೇನೆ. ಅಲ್ಲಿ ಹೀರೋ ಎನ್ನುವುದಕ್ಕಿಂತ ಪ್ರಮುಖ ಪಾತ್ರ ಎನ್ನಬಹುದು. ಖ್ಯಾತ ಸಾಹಿತಿ ಬಿ.ಎಲ್.ವೇಣು ಅವರ ಕಾದಂಬರಿ ಆಧಾರಿತ “ದನಗಳು” ಮತ್ತು ಹೊಸಬರ “ಪವನ್‌ ಸ್ಟಾರ್”‌ ಎಂಬ ಚಿತ್ರಗಳಲ್ಲಿ ಪ್ರಮುಖ ಪಾತ್ರವಿದೆ. “ಪವನ್‌ ಸ್ಟಾರ್‌” ಚಿತ್ರಕ್ಕೆ ಸತೀಶ್‌ ಚಂದ್ರ ಎಂಬುವವರು ನಿರ್ಮಾಪಕರು. ಆ ಚಿತ್ರದಲ್ಲಿ ನಾನು ಆರ್ಮಿ ಪಾತ್ರ ಮಾಡುತ್ತಿದ್ದೇನೆ. ಎರಡು ಹಾಡು, ಫೈಟ್ಸ್‌ ಕೂಡ ಇದೆ. ಇನ್ನು, “ದನಗಳು” ಸಿನಿಮಾ “ಸಂಕ್ರಾಂತಿʼ ಹಬ್ಬಕ್ಕೆ ತೆರೆ ಕಾಣಲಿದೆ. ಸದ್ಯ “ಭಜರಂಗಿ-2”, “ಯುವರತ್ನ”, “ಅರ್ಜುನ್‌ ಗೌಡ”, :”ಜಾಸ್ತಿ ಪ್ರೀತಿ”,” ಪಂಟ್ರು”, “ಪ್ರಾರಂಭ”,”ಫೈಟರ್‌”,” ಅಲ್ಲೇ ಡ್ರಾ, ಅಲ್ಲೇ ಬಹುಮಾನ”,”ಜಿಪಿಎಸ್‌”,” ವಾಸಂತಿ ನಲಿದಾಗ”, “ದೃತಿ” ಸೇರಿದಂತೆ ಇನ್ನಷ್ಟು ಸಿನಿಮಾಗಳಿವೆ.

ಸಿನ್ಮಾ ಬದುಕು ತೃಪ್ತ
ನಾನು ಈವರೆಗೆ ಸಿನಿಮಾರಂಗದಲ್ಲಿ ಕೆಲಸ ಮಾಡಿದ್ದು ನನಗೆ ನಿಜಕ್ಕೂ ತೃಪ್ತಿ ಎನಿಸಿದೆ. ಇಲ್ಲಿ ನಿರ್ವಹಿಸಿದ ಪ್ರತಿ ಪಾತ್ರವೂ ಪ್ರಮಖ ಎನಿಸಿವೆ. ದೊಡ್ಡದು, ಸಣ್ಣದು ಎಂಬ ಲೆಕ್ಕ ಇಟ್ಟುಕೊಳ್ಳದ ನಾನು, ಯಾವುದೇ ಪಾತ್ರ ಸಿಕ್ಕರೂ ಪ್ರೀತಿಯಿಂದಲೇ ನಿರ್ವಹಿಸಿದ್ದೇನೆ ಎಂಬ ತೃಪ್ತಭಾವವಿದೆ. ಎಲ್ಲದ್ದಕ್ಕೂ ಹೆಚ್ಚಾಗಿ, ನಾನು ಇಂದು ಏನೇ ಮಾಡಿದ್ದರೂ, ಹೇಗೆ ಇದ್ದರೂ, ಅದಕ್ಕೆ ಕಾರಣ, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು. ಆ ರಾಯರ ಅನುಗ್ರಹದಿಂದ ಇಂದು ಸಿನ್ಮಾದಲ್ಲಿ ಒಂದಷ್ಟು ಗುರುತಿಸಿಕೊಂಡಿದ್ದೇನೆ. ಕನ್ನಡದ ಜೊತೆಯಲ್ಲಿ ನಾನು ಮೂರು ತಮಿಳು ಸಿನಿಮಾಗಳಲ್ಲೂ ನಟಿಸಿದ್ದೇನೆ. ಕನ್ನಡದಲ್ಲೇ ಹೆಚ್ಚು ಕೆಲಸ ಮಾಡಿ, ಇಲ್ಲೇ ಗುರುತಿಸಿಕೊಂಡು, ನೆಲೆಕಂಡುಕೊಳ್ಳುವ ಮಹಾದಾಸೆಯಂತು ಇದೆ ಎಂಬುದು ಮಧು ಮಾತು.

ಸಿನಿಮಾ ನಿರ್ದೇಶಿಸೋ ಆಸೆ
ಕಳೆದ ಮೂರು ದಶಕಗಳಿಂದಲೂ ಸಿನಿಮಾರಂಗವನ್ನು ನೋಡಿಕೊಂಡು ಬಂದವನು. ಇಲ್ಲಿ ಸೋಲು-ಗೆಲುವು ಎಲ್ಲವೂ ಇದೆ. ಹಾಗಂತ ನಾನು ಆರಂಭದ ದಿನಗಳಲ್ಲಿ ಅವಕಾಶಕ್ಕಾಗಿ ಅಲೆದಾಡಿ, ಸಿಗದಿದ್ದಾಗ, ಸಿನಿಮಾರಂಗದ ಸಹವಾಸ ಬೇಡ ಎಂದು ಯಾವತ್ತೂ ಅಂದುಕೊಂಡಿಲ್ಲ. ತಾಳ್ಮೆಯಿಂದ ಕಾದಿದ್ದರಿಂದಲೇ ಇಂದು ನಾನು ಸಿನಿಮಾದವರಿಗೆ ಬೇಕಾಗಿದ್ದೇನೆ. ಬಹುತೇಕ ನಿರ್ದೇಶಕ, ನಿರ್ಮಾಪಕರು ಕರೆದು ಅವಕಾಶ ಕೊಡುತ್ತಿದ್ದಾರೆ. ಇದಕ್ಕಿಂತ ಬೇರೇನೂ ಬೇಡ. ಇಷ್ಟು ವರ್ಷದ ಅನುಭವ ಪಡೆದಿದ್ದೇನೆ. ನನಗೂ ನಿರ್ದೇಶಿಸುವ ಆಸೆ ಇದೆ. ಅದಕ್ಕಾಗಿ ಒಂದು ಕಥೆಯನ್ನೂ ರೆಡಿ ಮಾಡಿಕೊಂಡಿದ್ದೇನೆ. ನಾನು ಇತ್ತೀಚೆಗೆ ಬಿಹಾರದ ಅಲಹಾಬಾದ್‌ಗೆ ಚುನಾವಣೆ ಕೆಲಸಕ್ಕೆಂದು ಹೋದಾಗ, ಅಲ್ಲಿನ “ರಂಡಿ ಬಜಾರ್”‌ (ವೇಶ್ಯೆಯರ ನಗರ)ಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಸಿಕ್ಕ ಕೆಲವರ ಜೊತೆ ಆಪ್ತವಾಗಿ ಮಾತನಾಡಿದಾಗ, ಒಂದೊಳ್ಳೆಯ ಲೈನ್‌ ಸಿಕ್ಕವು. ಅದನ್ನೇ ಇಟ್ಟುಕೊಂಡು ಒಂದು ಕಥೆ ಮಾಡಿದ್ದೇನೆ. “18 ದಿನಗಳು” ಎಂಬ ಹೆಸರಲ್ಲಿ ಚಿತ್ರ ಮಾಡುವ ಆಸೆ ಇದೆ. “ನಾನು ಮತ್ತು ಅವಳು” ಎಂಬ ಟ್ಯಾಗ್‌ಲೈನ್‌ ಕೂಡ ಇಟ್ಟಿದ್ದೇನೆ. ಅದೊಂದು ನೈಜ ಘಟನೆಯ ಕಥೆ. ಅಷ್ಟೇ ನೈಜವಾಗಿ ಮಾಡುವ ಆಸೆ ಇದೆ. ಇಷ್ಟೆಲ್ಲಾ ಮಾಡುತ್ತಿರುವುದರ ಹಿಂದೆ ನನ್ನ ಫ್ಯಾಮಿಲಿಯ ಸಹಕಾರವೂ ಇದೆ. ಹೆಂಡತಿ, ಮಗಳ ಸಹಕಾರ ಇರದಿದ್ದರೆ ಇದೆಲ್ಲಾ ಆಗುತ್ತಿರಲಿಲ್ಲ. ಜೊತೆಗೆ ನಿರ್ದೇಶಕರು, ನಿರ್ಮಾಪಕರು, ಗೆಳೆಯರು ಕೊಟ್ಟ ಉತ್ಸಾಹದಿಂದ ನಟನಾಗಿದ್ದೇನೆ. ನಾನಿನ್ನೂ ಸಾಧಿಸಿಲ್ಲ. ಸಾಧಿಸುವ ಉತ್ಸಾಹವಿದೆ.

 

ಅಪ್ಪು ಸ್ಫೂರ್ತಿ
ನಾನು ಡಾ.ರಾಜಕುಮಾರ್‌ ಅವರ ಅಪ್ಪಟ ಅಭಿಮಾನಿ. ಅದರಲ್ಲೂ ಪುನೀತ್‌ ರಾಜಕುಮಾರ್‌ ಅವರ ಪಕ್ಕಾ ಫ್ಯಾನು. ಅಪ್ಪು ಸರ್‌ ನನಗೆ ಸ್ಫೂರ್ತಿ. ಅವರಿಂದಲೇ ಸಿನಿಮಾ ಆಸೆ ಹೆಚ್ಚಾಯ್ತು. ಇದುವರೆಗೆ ನಾನು ಒಬ್ಬ ರೈಲ್ವೆ ಪೊಲೀಸ್‌ ಆಗಿ, ಇಂಡಿಯಾ ಸುತ್ತಿ ಬಂದಿದ್ದೇನೆ. ಈಗ ಪೊಲೀಸ್‌ ವೃತ್ತಿಯಿಂದ ಆಚೆ ಬಂದು ಕಚೇರಿಯೊಳಗಿನ ಕೆಲಸ ಮಾಡುತ್ತಿದ್ದೇನೆ. ಮೊದ ಮೊದಲು ಅವಕಾಶ ಹುಡುಕಿ ಹೋಗುತ್ತಿದ್ದೆ. ಸಣ್ಣ ಪಾತ್ರವಾದರೂ ಸಿಗುತ್ತಿತ್ತು. ಈಗ ಅವಕಾಶ ಹುಡುಕಿ ಬರುತ್ತಿದೆ. ಸಣ್ಣದಿರಲಿ, ದೊಡ್ಡದಿರಲಿ ಕಣ್ಣಿಗೊತ್ತಿ ಮಾಡುತ್ತಿದ್ದೇನೆ ಎನ್ನುವ ಮಧು, ಸಿನಿಮಾಗಿಂತ ಖುಷಿಯ ಜಾಗ ಬೇರೊಂದಿಲ್ಲ ಎನ್ನುತ್ತಾರೆ ಅವರು.

ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆ
ಮಧು ಮಂದಗೆರೆ ಮಂಡ್ಯದವರು. ಗೌಡ್ರು ಸದಾ ಸದ್ದು ಮಾಡುತ್ತಿರಬೇಕು ಸರ್‌ ಎನ್ನುವ ಅವರು, ಸಿನಿಮಾದ ಜೊತೆ ಜೊತೆಗೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅವರ ಮಂದಗೆರೆ ಗ್ರಾಮದಲ್ಲಿ ಸುಮಾರು 40 ಹುಡುಗರ ಬಳಗ ಕಟ್ಟಿಕೊಂಡು, ಅವರಿಗೆ ಒಂದು ಕಚೇರಿ ಮಾಡಿಕೊಟ್ಟು, ನಿತ್ಯ ಆಟವಾಡಲು ಕ್ರೀಡೆ ಸಾಮಾಗ್ರಿ ಕೊಡಿಸಿದ್ದಾರೆ. ಅಷ್ಟೇ ಅಲ್ಲ, ಕಚೇರಿಯಲ್ಲಿ ಅಂಬೇಡ್ಕರ್‌, ಬುದ್ಧ, ಬಸವ ಹೀಗೆ ಮಹನೀಯರ ಕುರಿತಾದ ಪುಸ್ತಕಗಳನ್ನಿಟ್ಟು, ಓದುವಂತೆ ಪ್ರೇರೇಪಿಸುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮಧು ಮಂದಗೆರೆ ಅವರು, ತನ್ನೂರಲ್ಲಿ ಅಂಬೇಡ್ಕರ್‌ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದಾರೆ.

ಇದೇ ಡಿಸೆಂಬರ್‌ 6 ರಂದು ಮಂದಗೆರೆಯಲ್ಲಿ ಪಂಚಾಯ್ತಿ ಸೂಚಿಸಿರುವ ಜಾಗದಲ್ಲಿ ಮಧು ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆ ಮಾಡುತ್ತಿದ್ದಾರೆ. ಈ ಬಗ್ಗೆ ಹೇಳುವ ಮಧು, ನಾನು ಇವತ್ತಿಗೂ ಜಾತಿ ಬಗ್ಗೆ ಮಾತಾಡಲ್ಲ. ಅದರ ಬಗ್ಗೆ ಗೊತ್ತೂ ಇಲ್ಲ. ನಾನು ಬುದ್ಧ, ಬಸವ, ಅಂಬೇಡ್ಕರ್‌ ಸಿದ್ಧಾಂತಗಳನ್ನು ಒಪ್ಪಿಕೊಂಡವನು. ಹಾಗಾಗಿ ಮೊದಲಿಗೆ ಅಂಬೇಡ್ಕರ್‌ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದೇನೆ. ನನ್ನೂರ ಜನರ ಬೆಂಬಲಿವೆ. ಡಿ.6ರಂದು ದೊಡ್ಡ ಕಾರ್ಯಕ್ರಮ ಮೂಲಕ ಅಂದು ಅಂಬೇಡ್ಕರ್‌ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದೆ. ಇದು ನನ್ನ ಬಾಲ್ಯದ ಕನಸು ಕೂಡ. ಅಂದು ಅನೇಕ ಗಣ್ಯರು ಭಾಗಿಯಾಗಲಿದ್ದಾರೆ ಎನ್ನುತ್ತಾರೆ ಅವರು.

Categories
ಸಿನಿ ಸುದ್ದಿ

ಗಮನ ಸೆಳೆದ ಗಮನಂ… ಎಲ್ಲರೂ ಇತ್ತ ಒಮ್ಮೆ ಗಮನಿಸಿ!

ಶಿವಣ್ಣ ಮೆಚ್ಚಿದ ಟ್ರೇಲರ್‌

ಆಕೆ ಹೇಳುತ್ತಾಳೆ- “ಆ ಮೋಡಗಳನ್ನು ನೋಡು ಎಷ್ಟು ಚೆನ್ನಾಗಿವೆ.

ಅವನು ಹೀಗನ್ನುತ್ತಾನೆ- “ಎಲ್ಲಿಗೆ ಹೋಗುತ್ತವೆʼ
ಅವನ ಪ್ರಶ್ನೆಗೆ ಆಕೆಯ ಉತ್ತರ- “ಎಲ್ಲಿಯವರೆಗೆ ಹೋಗುತ್ತವೋ ಅವುಗಳಿಗೇ ಗೊತ್ತಿಲ್ಲ. ಹಾಗೆ ಹೋಗ್ತಾ ಹೋಗ್ತಾ ಕರಗಿ ಮಳೆಯಾಗುತ್ತೆ. ಒಂದು ಮಳೆಯಾದರೆ, ಇನ್ನೊಂದು ಒಂಟಿಯಾಗ್‌ ಬಿಡುತ್ತೆ…”

 

ಇದು ಕೇಳುವುದಕ್ಕಷ್ಟೇ ಅಲ್ಲ, ನೋಡುವುದಕ್ಕೂ ಅಷ್ಟೇ ಅದ್ಭುತವಾಗಿದೆ. ಇಷ್ಟಕ್ಕೂ ಇಲ್ಲಿ ಹೇಳಹೊರಟಿರುವ ವಿಷಯ “ಗಮನಂ” ಚಿತ್ರದ್ದು. ಹೌದು, ಇದೇ ಮೊದಲ ಬಾರಿಗೆ ನಿರ್ದೇಶಕಿಯಾಗಿರುವ ಸುಜನಾರಾವ್‌ ಅವರ ಚೊಚ್ಚಲ ಚಿತ್ರವಿದು. ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಿರುವ ನಟ ಶಿವರಾಜಕುಮಾರ್‌, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಷ್ಟೇ ಅಲ್ಲ, “ಗಮನಂ” ಟ್ರೇಲರ್‌ ನೋಡಿದ ಶಿವರಾಜಕುಮಾರ್‌, ” ಈ ಚಿತ್ರ ಗಮನಸೆಳೆಯಿತು ಎಂದಿದ್ದಾರೆ. ಅಂದಹಾಗೆ, ಇದು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಚಿತ್ರ. ಕನ್ನಡ ಟ್ರೇಲರ್​ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಆಲ್​ದಿ ಬೆಸ್ಟ್ ಹೇಳಿರು ಶಿವರಾಜಕುಮಾರ್‌, ಚಿತ್ರತಂಡಕ್ಕೆ ಗೆಲುವು ಸಿಗಲಿʼ ಎಂದು ಹಾರೈಸಿದ್ದಾರೆ.


ಅಂದಹಾಗೆ, ಕ್ರಿಯಾ ಫಿಲಂ ಕಾರ್ಪ್​ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್​ ಸಾಕಷ್ಟು “ಗಮನ”ಸೆಳೆದಿದೆ. ಈ ಹಿಂದೆ ಫ್ಯಾಷನ್ ಡಿಸೈನಿಂಗ್ ಕಲಿತು, ಎಡಿಟಿಂಗ್ ಕೋರ್ಸ್ ಮುಗಿಸಿ, ದೆಹಲಿಯ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸಿ, ಜತೆಗೆ ಸಾಕಷ್ಟು ಜಾಹೀರಾತುಗಳನ್ನು ನಿರ್ದೇಶಿಸಿದ್ದ ಸುಜನಾ ರಾವ್, ಈಗ “ಗಮನಂ” ಮೂಲಕ ನಿರ್ದೇಶಕಿಯಾಗಿ ಸಿನಿಮಾರಂಗದ ಗಮನಸೆಳೆಯುತ್ತಿದ್ದಾರೆ. ಈ ಚಿತ್ರವನ್ನು ರಮೇಶ್ ಕರುತೂರಿ. ವೆಂಕಿ ಪುಶದಾಪು ಮತ್ತು ಜ್ಞಾನಶೇಖರ್ ವಿ.ಎಸ್. ಸೇರಿ ಕ್ರಿಯಾ ಫಿಲ್ಮ್ಸ್ ಕಾರ್ಪ್ ಮೂಲಕ ನಿರ್ಮಾಣ ಮಾಡಿದ್ದಾರೆ. ಈನ್ನು, ಈ ಚಿತ್ರದ ಟ್ರೇಲರ್‌ ಅನ್ನು, ಕನ್ನಡದಲ್ಲಿ ಶಿವರಾಜಕುಮಾರ್‌ ಬಿಡುಗಡೆ ಮಾಡಿದರೆ, ತೆಲುಗಿನಲ್ಲಿ ಪವನ್​ ಕಲ್ಯಾಣ್ ಬಿಡುಗಡೆ ಮಾಡಿದ್ದಾರೆ. ಅತ್ತ, ತಮಿಳಿನಲ್ಲಿ ಜಯಂರವಿ, ಮಲಯಾಳಂನಲ್ಲಿ ಫಹಾದ್ ಫಾಸಿಲ್​ ಟ್ರೇಲರ್​ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಬಹುತಾರಾಗಣದ ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರಿದ್ದಾರೆ ಎಂಬುದು ವಿಶೇಷ. ಹಿರಿಯ ನಟ ಚಾರು ಹಾಸನ್, ಶ್ರಿಯಾ ಸರಣ್, ಪ್ರಿಯಾಂಕಾ ಜವಾಲ್ಕರ್, ಶಿವ ಕಂದುಕುರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಸ್ವರೂಪ್, ಇಂದೂ ಆನಂದ್, ಪ್ರಿಯಾ, ಸುಹಾಸ್, ಮಾಸ್ಟರ್ ನೇಹಾಂತ್, ಬಿತಿರಿ ಸತ್ತಿ, ರವಿಪ್ರಕಾಶ್ ಮುಂತಾದ ಕಲಾವಿದರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಗಾಯಕಿಯಾಗಿ ನಿತ್ಯಾ ಮೆನನ್ ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷ.

ಗಮನಂ ವಿಶೇಷ
ಬದುಕಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಹಂಬಲಿಕೆ, ಹುಡುಕಾಟ, ಪರದಾಟಗಳು ಇದ್ದೇ ಇರುತ್ತವೆ. ಅವುಗಳ ನಡುವೆ ಒಂಚೂರು ವಿಷಾದ, ನೋವು, ನಲಿವು ಎಲ್ಲವೂ ಇರುತ್ತವೆ. ಕನಸುಗಳನ್ನೆಲ್ಲಾ ಹರವಿಕೊಂಡು, ಮತ್ತೆ ಜೋಡಿಸಲು ಆಗಬಹುದಾ ಎಂಬ ಆಸೆ ಪಡುವವರು, ಅವರೆದುರು ಕೂತು ʻಇದು ಕಷ್ಟ ಸಾಧ್ಯʼ ಎನ್ನುವರಿಗೇನೂ ಕಮ್ಮಿ ಇಲ್ಲ. ಯಾರಿಗೂ ಕೆಟ್ಟದ್ದನ್ನು ಬಯಸದ ಒಂದಷ್ಟು ಜೀವಗಳು, ನಗರದಲ್ಲಿ ಕಾಣಸಿಗುವ ಒಂದಷ್ಟು ವಿಚಾರಗಳು ಚಿತ್ರದ ಹೈಲೈಟ್.‌ ಹಿರಿಯ ಸಂಗೀತ ನಿರ್ದೇಶಕ, ಇಳಯರಾಜಾ ʻಗಮನಂʼಗೆ ಸಂಗೀತ ನೀಡಿದ್ದಾರೆ. ಹಿಂದಿಯ ಮಣಿ ಕರ್ಣಿಕಾ, ತೆಲುಗಿನ ಗೌತಮೀಪುತ್ರ ಶಾತಕರ್ಣಿ, ವೇದಂ ಮೊದಲಾದ ಸಿನಿಮಾಗಳಿಗೆ ಕ್ಯಾಮರಾ ಕೆಲಸ ನಿರ್ವಹಿಸಿದ್ದ ಜ್ಞಾನಶೇಖರ್ ವಿ.ಎಸ್. ಛಾಯಾಗ್ರಹಣವಿದೆ. ಸಾಯಿ ಮಾಧವ ಬುರಾ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ.

Categories
ಸಿನಿ ಸುದ್ದಿ

ನೈಂಟಿ ಹೊಡಿ ಮನೀಗ್ ನಡಿ ಇದು ಬಿರಾದಾರ ಅವರ 500ನೇ ಚಿತ್ರ

ನಾಟೀ ಸ್ಟೈಲ್ ಹಾಡಿಗೆ ಬಿರಾದಾರ್ ಸ್ಟೆಪ್ 

ಹಾಸ್ಯ ನಟ ಬಿರಾದಾರ ಅವರ ಅಭಿಮಯದ ಐನೂರನೇ ಚಿತ್ರ’ನೈಂಟಿ‌ ಹೊಡಿ ಮನೀಗ್ ನಡಿ’ ಚಿತ್ರ ಇತ್ತೀಚೆಗೆ ಹಾಡೊಂದನ್ನು ಚಿತ್ರೀಕರಿಸಿದೆ. ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಹಾಕಿದ ಅದ್ಧೂರಿ ಸೆಟ್ ನಲ್ಲಿ ಹಾಕಿಸಿ ‘ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರ್ನಾ ಬಾರಸ್ತಿ..” ಎಂಬ ಪಕ್ಕಾ ನಾಟೀ ಸ್ಟೈಲ್ ಹಾಡಿಗೆ ನಟಿ ನೀತಾ ಜೊತೆ ಬಿರಾದಾರ್ ಸ್ಟೆಪ್ ಹಾಕಿದ್ದಾರೆ.
ಅಮ್ಮಾ ಟಾಕೀಸ್ ಬಾಗಲಕೋಟೆ ಬ್ಯಾನರ್ ನಲ್ಲಿ ರತ್ನಮಾಲಾ ಬಾದರದಿನ್ನಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.


ಈ ಚಿತ್ರಕ್ಕೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ನಿರ್ದೇಶಕರು.
ಇನ್ನು,’ಸಿಂಗಲ್ ಕಣ್ಣಿ’ನ ಹಾಡಿಗೆ ಚುಟು-ಚುಟು ಖ್ಯಾತಿಯ ಶಿವು ಭೇರಗಿ ಸಾಹಿತ್ಯ ಬರೆದು ರಾಗ ಸಂಯೋಜಿಸಿದ್ದಾರೆ‌. ಶಮಿತಾ ಮಲ್ನಾಡ್ ಮತ್ತು ರವೀಂದ್ರ ಸೊರಗಾಂವಿ ಹಾಡಿದ್ದಾರೆ.
ಈ ಹಾಡಿಗೆ ಭೂಷಣ್ ನೃತ್ಯ ಸಂಯೋಜಿಸಿದ್ದಾರೆ.

ಚಿತ್ರದಲ್ಲಿ ಕರಿಸುಬ್ಬು, ಧರ್ಮ, ಪ್ರಶಾಂತ್ ಸಿದ್ಧಿ, ಅಭಯ್ ವೀರ್, ನೀತಾ, ಪ್ರೀತು ಪೂಜಾ, ಆರ್.ಡಿ ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ ಇತರರು ಇದ್ದಾರೆ.
ಚಿತ್ರಕ್ಕೆ ಕೃಷ್ಣ ನಾಯ್ಕರ್ ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ರಾಜಾ ರಮೇಶ್ ಅವರ ಸಾಹಸವಿದೆ.
ಡಿಸೆಂಬರ್ ನಲ್ಲಿ‌ ಬಹುತೇಕ ಚಿತ್ರೀಕರಣ ಮುಗಿಸುವ ತಯಾರಿ‌ ಮಾಡಿಕೊಂಡಿದೆ ಕುಂಬಳಕಾಯಿ ಕಾಣಿಸುವ ಯೋಚನೆ ಚಿತ್ರತಂಡದ್ದು.

Categories
ಸಿನಿ ಸುದ್ದಿ

ಫ್ಯಾಂಟಸಿ ಮುಕ್ತಾಯ, ಹೊಸಬರ ಥ್ರಿಲ್ಲರ್‌ ಸಿನಿಮಾ

ಫೆಬ್ರವರಿಯಲ್ಲಿ ಬಿಡುಗಡೆಗೆ ತಯಾರಿ

ಕೆಲವು ಸಿನಿಮಾಗಳು ಸದ್ದಿಲ್ಲದೆಯೇ ಶುರುವಾಗಿ ಸದ್ದಿಲ್ಲದೆಯೇ ಮುಕ್ತಾಯಗೊಳ್ಳುತ್ತವೆ. ಅಂತಹ ಚಿತ್ರಗಳ ಸಾಲಿಗೆ ಈಗ “ಫ್ಯಾಂಟಸಿ” ಸಿನಿಮಾವೂ ಒಂದು. ಹೌದು, ಇತ್ತೀಚೆಗಷ್ಟೇ ಶುರುವಾಗಿದ್ದ “ಫ್ಯಾಂಟಸಿ” ಚಿತ್ರ ತನ್ನ ಶೂಟಿಂಗ್‌ ಮುಗಿಸಿದೆ. ಕೇವಲ 24 ದಿನಗಳಲ್ಲಿ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಈಗ ಖುಷಿಯಲ್ಲಿದೆ. ಇತ್ತೀಚೆಗೆ ರಾಕ್‌ಲೈನ್‌ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಿ, ಅಂದೇ ಚಿತ್ರ ಪೂರ್ಣಗೊಳಿಸಿದೆ. ಇನ್ನು, ಪವನ್​ ಡ್ರೀಮ್​ ಫಿಲಂಸ್ ಬ್ಯಾನರ್‌ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಪವನ್‌ ಕುಮಾರ್‌ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರದೆ. ಅಷ್ಟೇ ಅಲ್ಲ, ನಿರ್ಮಾಣವನ್ನೂ ಮಾಡಿದ್ದಾರೆ. ಪೋಷಕರಾದ ಎಂ. ಮಹಾದೇವಿ, ಟಿ. ರಂಗಸ್ವಾಮಿ ಅವರು ಸಹ ನಿರ್ಮಾಪಕರು.


ತಮ್ಮ ಸಿನಿ ಜರ್ನಿ ಕುರಿತು ಹೇಳುವ ನಿರ್ದೇಶಕ ಪವನ್‌ ಕುಮಾರ್‌, ” ಆರಂಭದಲ್ಲಿ ನಾನು ನಿರ್ದೇಶಕ ಗುರು ದೇಶಪಾಂಡೆ ‘ಸಂಹಾರ’ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಗಾಂಧಿನಗರಕ್ಕೆ ಎಂಟ್ರಿಯಾದೆ. ನಂತರದ ದಿನಗಳಲ್ಲಿ ‘ಅಮ್ಮ ಐ ಲವ್​ ಯೂ’ ಹಾಗೂ ‘ಆದ್ಯಾ’ ಸಿನಿಮಾಗಳಲ್ಲಿ ಕೆಲಸ ಮಾಡಿದೆ. ಚಿರು ಸರ್ಜಾ ಅವರೇ ನಾನು ಈ ಸಿನಿರಂಗಕ್ಕೆ ಬರಲು ಕಾರಣ. ಇನ್ನು, ನಿರ್ದೇಶಕ ಚೈತನ್ಯ ಅವರಿಂದ ನಿರ್ದೇಶನದ ಕೆಲಸ ಕಲಿತಿದ್ದೇನೆ ಎನ್ನುವ ಅವರು, ಇದೊಂದು ಥ್ರಿಲ್ಲರ್ ಶೈಲಿಯ ಸಿನಿಮಾ. ಚಿತ್ರದ ಶೇ. 90 ಭಾಗ ಒಳಾಂಗಣದಲ್ಲಿ ನಡೆದರೆ, ಇನ್ನು ಶೇ. 10 ಹೊರಾಂಗಣದಲ್ಲಿ ಶೂಟ್ ಮಾಡಿದ್ದೇವೆ. ಪೋಸ್ಟ್ ಪ್ರೊಡಕ್ಷನ್​ ಕೆಲಸವೂ ನಡೆಯುತ್ತಿದೆ. ಫೆಬ್ರವರಿ ವೇಳೆಗೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ ಎನ್ನುತ್ತಾರೆ ಅವರು.


ಈ ಸಿನಿಮಾಗೆ ಛಾಯಾಗ್ರಾಹಕ ಪಿ.ಕೆ.ಎಚ್.​ ದಾಸ್​ ಶಕ್ತಿಯಾಗಿದ್ದಾರೆ. ಗಣೇಶ್​ ನಾರಾಯಣ್​ ಸಂಗೀತ ನೀಡಿದ್ದಾರೆ. ಶಶಿರಾಮ್​ ಸಂಕಲನ ಮಾಡಿದ್ದಾರೆ. ಬಲರಾಜ ವಾಡಿ ಇಲ್ಲಿ ಹೊಸ ರೀತಿಯ ಪಾತ್ರ ನಿರ್ವಹಿಸಿದ್ದಾರಂತೆ. ಭಾಸ್ಕರ್ ಪೊನ್ನಪ್ಪ ಎಂಬ ಪಾತ್ರ ಚಿತ್ರದ ವಿಶೇಷತೆಗಳಲ್ಲೊಂದು ಎಂಬುದು ಅವರ ಮಾತು. ಇನ್ನು,
ಚಿತ್ರದ ನಾಯಕಿ ಪ್ರಿಯಾಂಕಾ ಸಹ ಸಿನಿಮಾ ಬಗ್ಗೆ ತುಂಬಾಬೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಬಿಗ್​ಬಾಸ್ʼ ನಂತರದ ದಿನಗಳಲ್ಲಿ ಸಾಕಷ್ಟು ಕಥೆ ಬಂದಿದ್ದುಂಟು. ಆ ಬಳಿಕ ಈ “ಫ್ಯಾಂಟಸಿ” ಸಿನಿಮಾ ಬಂತು. ಇದು ನನ್ನ ಮೊದಲ ಸಿನಿಮಾ. ಧಾರಾವಾಹಿಯಂತೆ ಇಲ್ಲಿಯು ನೆಗೆಟಿವ್​ ಪಾತ್ರ ಮುಂದುವರಿದಿದೆʼ ಎನ್ನುತ್ತಾರೆ. ಬಾಲನಟ ಅನುರಾಗ್ ಕೂಡ ತನ್ನ ಸಿನಿಮಾ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ನಟ ಹೇಮಂತ್, ಹರಿಣಿ, ಮೂರ್ತಿ, ಗೌರಿ ಇತರರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಮಾತಿಗಿಳಿದ ಮಾರಿಗೋಲ್ಡ್‌ ! ಗೋಲ್ಡ್‌ ಮತ್ತು ಅಂಡರ್‌ವರ್ಲ್ಡ್!!

ದಿಗಂತ್‌ ಸಿನ್ಮಾ ಡಬ್ಬಿಂಗ್‌ನಲ್ಲಿ ಬಿಝಿ

 

 ದಿಗಂತ್‌ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್‌ ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ರಘುವರ್ಧನ್‌ ನಿರ್ಮಾಣ ಮಾಡಿದ್ದಾರೆ. ಇನ್ನು, ರಘುವರ್ಧನ್‌ ಅವರು ಮೂಲತಃ ನಿರ್ದೇಶಕರಾಗಿದ್ದರೂ, ಅವರು ಹೊಸ ಪ್ರತಿಭಾವಂತ ಯುವ ನಿರ್ದೇಶಕ ರಾಘವೇಂದ್ರ ಎಂ.ನಾಯಕ್‌ ಅವರಿಗೆ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಗುಳಿಕೆನ್ನೆ ಹುಡುಗ ದಿಗಂತ್‌ ಅಭಿನಯದ “ಮಾರಿಗೋಲ್ಡ್” ಚಿತ್ರೀಕರಣ ಪೂರ್ಣಗೊಂಡಿದ್ದು ಗೊತ್ತೇ ಇದೆ. ರಾಜ್ಯೋತ್ಸವ ದಿನದಂದ ಚಿತ್ರದ ಶೀರ್ಷಿಕೆಯ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ಹೊರಬಂದು ಸುದ್ದಿಯಾಗಿದ್ದು ಗೊತ್ತು. ಈಗ ಚಿತ್ರತಂಡ “ಮಾರಿಗೋಲ್ಡ್‌” ಚಿತ್ರದ ಡಬ್ಬಿಂಗ್‌ ಕಾರ್ಯಕ್ಕೆ ಮುಂದಾಗಿದೆ. ಹೌದು, ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿರುವ ಚಿತ್ರತಂಡ, ಈಗ ಡಬ್ಬಿಂಗ್ ಕೆಲಸದಲ್ಲಿ ನಿರತಗೊಂಡಿದೆ. ಸೋಮವಾರದಿಂದ ಡಬ್ಬಿಂಗ್‌ಗೆ ಮುಂದಾಗಿರುವ ಚಿತ್ರತಂಡ, ರೇಣು ಸ್ಟುಡಿಯೋದಲ್ಲಿ ಡಬ್ಬಿಂಗ್‌ ನಡೆಸುತ್ತಿದೆ. ಈಗಾಗಲೇ “ಮಾರಿಗೋಲ್ಡ್‌” ಸಾಕಷ್ಟು ಕುತೂಹಲ ಹುಟ್ಟಿಸಿದೆ. ಅದಕ್ಕೆ ಕಾರಣ, ಶೀರ್ಷಿಕೆ ಮತ್ತು ಚಿತ್ರತಂಡ ಬಿಡುಗಡೆ ಮಾಡಿರುವ ಶೀರ್ಷಿಕೆ ಫಸ್ಟ್‌ ಲುಕ್‌.

ಮಾರಿಗೋಲ್ಡ್‌ ಅಂಡರ್‌ವರ್ಲ್ಡ್‌ ಸಿನ್ಮಾನಾ?

ಶೀರ್ಷಿಕೆಯೇ ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆಯೂ ಮೂಡಿಬರುತ್ತೆ. ಅದಕ್ಕೆ ಕಾರಣ, ನಿರ್ದೇಶಕ ರಾಘವೇಂದ್ರ ಎಂ.ನಾಯಕ್‌ ಅವರು ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಒಂದು ಗನ್‌, ಬುಲೆಟ್ಸ್‌ ಹಾಗೂ ಗೋಲ್ಡ್‌ ಬಿಸ್ಕತ್‌ಗಳನ್ನಿಟ್ಟು ಒಂದಷ್ಟು ಕುತೂಹಲ ಮೂಡಿಸಿದ್ದಾರೆ. ಹಾಗಾಗಿ, ಇದೊಂದು “ಮಾರಿಗೋಲ್ಡ್‌” ಅಂಡರ್‌ವರ್ಲ್ಡ್‌ ಸಬ್ಜೆಕ್ಟ್‌ ಇರಬಹುದೇನೋ ಎಂಬ ಪ್ರಶ್ನೆಯನ್ನು ತಳ್ಳಿಹಾಕುವಂತಿಲ್ಲ. ದಿಗಂತ್‌ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್‌ ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿಸಿಕೊಂಡಿರುವ ಈ ಚಿತ್ರವನ್ನು ರಘುವರ್ಧನ್‌ ನಿರ್ಮಾಣ ಮಾಡಿದ್ದಾರೆ. ಇನ್ನು, ರಘುವರ್ಧನ್‌ ಅವರು ಮೂಲತಃ ನಿರ್ದೇಶಕರಾಗಿದ್ದರೂ, ಅವರು ಹೊಸ ಪ್ರತಿಭಾವಂತ ಯುವ ನಿರ್ದೇಶಕ ರಾಘವೇಂದ್ರ ಎಂ.ನಾಯಕ್‌ ಅವರಿಗೆ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ರಘುವರ್ಧನ್‌, ನಿರ್ಮಾಪಕ

ಕಥೆಗಾಗಿ ನಿರ್ಮಾಣಕ್ಕಿಳಿದ ರಘುವರ್ಧನ್

ಅದಕ್ಕೆ ಕಾರಣ, ರಾಘವೇಂದ್ರ ಎಂ.ನಾಯಕ್‌ ಅವರು ಮಾಡಿಕೊಂಡಿದ್ದ ಕಥೆ. ಕಥೆ ಚೆನ್ನಾಗಿದ್ದರಿಂದ, ಆ ಕಥೆಯನ್ನು ರಾಘವೇಂದ್ರ ನಾಯಕ್‌ ಅವರೇ ನಿರ್ದೇಶಿಸಲಿ ಎಂಬ ಮನೋಭಾವದಿಂದಾಗಿ ರಘುವರ್ಧನ್‌, ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇನ್ನು, ಬಹುತೇಕ ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಆ ಕಾರಣಕ್ಕೆ ಇದು ಸಾಕಷ್ಟು ವಿಶೇಷ ಎನಿಸಿಕೊಂಡಿದೆ. ಇದೊಂದು ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಕಥಾಹಂದರ ಹೊಂದಿದ್ದು, ದಿಗಂತ್‌ ಅವರಿಗೆ ಸಂಗೀತಾ ಶೃಂಗೇರಿ ಜೋಡಿಯಾಗಿದ್ದಾರೆ. ಇವರೊಂದಿಗೆ ಸಂಪತ್‌ ಕುಮಾರ್‌, ಕಾಕ್ರೋಚ್‌ ಸುಧಿ, ಯಶ್‌ ಶೆಟ್ಟಿ, ರಾಜ್‌ ಬಲವಾಡಿ, ಗಣೇಶ್‌ರಾವ್‌ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.

ರಾಘವೇಂದ್ರ ಎಂ.ನಾಯಕ್‌, ನಿರ್ದೇಶಕ

 

ಚಿತ್ರಕ್ಕೆ ಕೆ.ಎಸ್.‌ ಚಂದ್ರಶೇಖರ್‌ ಕ್ಯಾಮೆರಾ ಹಿಡಿದರೆ, ವೀರ್‌ಸಮರ್ಥ್‌ ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ. ರಘು ನಿಡುವಳ್ಳಿ ಅವರ ಸಂಭಾಷಣೆ ಬರೆದಿದಾರೆ. ಯೋಗರಾಜ್‌ ಭಟ್‌, ಕವಿರಾಜ್‌, ವಿಜಯ್‌ ಭರಮಸಾಗರ ಸಾಹಿತ್ಯವಿದೆ.‌ ಸದ್ಯಕ್ಕೆ ಡಬ್ಬಿಂಗ್‌ ಕಾರ್ಯದಲ್ಲಿ ನಿರತವಾಗಿರುವ ಚಿತ್ರ, ಒಂದಷ್ಟು ಸುದ್ದಿಯಲ್ಲಂತೂ ಇದೆ. “ಮಾರಿಗೋಲ್ಡ್”‌ ಒಂದು ರೀತಿಯ ಮಾಸ್‌ ಕ್ರೇಜ್‌ ಹುಟ್ಟುಹಾಕಿದ್ದು, ದಿಗಂತ್‌ ಅವರನ್ನೂ ಮಾಸ್‌ ಲುಕ್‌ ನಲ್ಲಿ ತೋರಿಸಿದ್ದಾರಾ ಎಂಬ ಪ್ರಶ್ನೆ ಇದ್ದರೂ, “ಮಾರಿಗೋಲ್ಡ್‌” ಪಕ್ಕಾ ಸಿನಿಪ್ರೇಮಿಗಳಿಗಂತೂ ಒಂದೊಳ್ಳೆಯ ಮನರಂಜನಾತ್ಮಕ ಸಿನಿಮಾ ಆಗಿ ಹೊರಬರಲಿದೆ ಎಂಬ ಗ್ಯಾರಂಟಿ ಕೊಡುತ್ತಾರೆ ನಿರ್ಮಾಪಕ ರಘುವರ್ಧನ್.

error: Content is protected !!