ಸಿನಿಮಾ ಕಣ್ಣಿಗೆ ಸಂದ ಅತ್ಯುತ್ತಮ ಪ್ರಶಸ್ತಿ ವರ್ಣಪಟಲ ಚಿತ್ರದ ಛಾಯಾಗ್ರಹಣಕ್ಕೆ ಗಣೇಶ್‌ ಹೆಗ್ಡೆಗೆ ಸಿಕ್ತು ವರ್ಲ್ಡ್‌ ಪ್ರೀಮಿಯರ್‌ ಫಿಲ್ಮ್‌ ಅವಾರ್ಡ್ಸ್

‌ಸಾಮಾನ್ಯವಾಗಿ ತೆರೆಮೇಲೆ ಇರುವ ಸ್ಟಾರ್‌ಗಳಷ್ಟೇ ಜನರಿಗೆ ಹತ್ತಿರವಾಗುತ್ತಾರೆ. ಅವರೆಲ್ಲರೂ ಜೋರು ಸುದ್ದಿ ಕೂಡ ಆಗುತ್ತಾರೆ. ಆದರೆ, ಅವರ ಸ್ಟಾರ್‌ಗಿರಿಗೆ ತೆರೆ ಹಿಂದೆ ಕೆಲಸ ಮಾಡಿದವರ ಶ್ರಮವೂ ಇರುತ್ತೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಇರಲಿ, ಇಲ್ಲೀಗ ಒಂದು ಖುಷಿಯ ವಿಷಯ ಹೇಳಲೇಬೇಕು. ಸಿನಿಮಾದ ಕಣ್ಣು ಅಂದರೆ ಅದು ಛಾಯಾಗ್ರಾಹಕ. ಸುಂದರವಾಗಿ ಸೆರೆ ಹಿಡಿದು, ಕಣ್‌ ತಂಪು ಮಾಡುವ ಕಲೆ ಛಾಯಾಗ್ರಾಹಕರಿಗೆ ಇದ್ದೇ ಇರುತ್ತೆ. ಈಗ ಅಂತಹ ಛಾಯಾಗ್ರಾಹಕರೊಬ್ಬರಿಗೆ ೨೦೨೦ನೇ ಸಾಲಿನ ವರ್ಲ್ಡ್‌ ಪ್ರೀಮಿಯರ್‌ ಫಿಲ್ಮ್‌ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ. ಹೌದು, ಛಾಯಾಗ್ರಾಹಕ ಗಣೇಶ್ ಹೆಗ್ಡೆ‌ ಅವರಿಗೆ ಈ ಪ್ರಶಸ್ತಿ ಸಂದಿದೆ. ಅಂದಹಾಗೆ, ಅವರಿಗೆ ಈ ಪ್ರಶಸ್ತಿ ಬಂದಿರೋದು, “ವರ್ಣಪಟಲ” ಚಿತ್ರದ ಛಾಯಾಗ್ರಹಣಕ್ಕೆ. ಈ ಸಿನಿಮಾಗೆ ಚೇತನ್‌ ಮುಂಡಾಡಿ ನಿರ್ದೇಶಕರು. ಈ ಚಿತ್ರಕ್ಕೆ ಹಲವು ಪ್ರಶಸ್ತಿಗಳೂ ಸಂದಿವೆ.


ಛಾಯಾಗ್ರಾಹಕ ಗಣೇಶ್‌ ಹೆಗ್ಡೆ ಅವರ ಕುರಿತು ಹೇಳುವುದಾದರೆ, ತಮ್ಮ ಕೆಲಸವನ್ನು ಅಪಾರವಾಗಿ ಪ್ರೀತಿಸುವ ವ್ಯಕ್ತಿ. ಅವರು ಛಾಯಾಗ್ರಾಹಕರಾಗಿ ಮೊದಲ ಸಲ ಕೆಲಸ ಮಾಡಿದ “ಮದಿಪು” ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಚೇತನ್ ಮುಂಡಾಡಿ ನಿರ್ದೇಶನ ಮಾಡಿದ್ದರು.“ಮದಿಪು” ಅತ್ಯುತ್ತಮ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿ ಪಡೆದಿತ್ತು. ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಗಣೇಶ್ ಹೆಗ್ಡೆ ಅವರ ಪಾತ್ರ ಕೂಡ ಪ್ರಮುಖವಾಗಿತ್ತು. ಪುನಃ ಚೇತನ್ ಮುಂಡಾಡಿ ನಿರ್ದೇಶನದಲ್ಲೇ ಸಜ್ಜಾದ ‘ಆಟಿಸಂ’ ಕಥಾ ಹಂದರವುಳ್ಳ “ವರ್ಣಪಟಲ” ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ಅವರ ಕೆಲಸ ದೇಶ-ವಿದೇಶಗಳ ಚಿತ್ರ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ನಿರ್ದೇಶಕ ನೀನಾಸಂ ಮಂಜು ನಿರ್ದೇಶನದ ಬುಡಕಟ್ಟು ಜನರ ನೈಜ ಕಥೆಯುಳ್ಳ “ಕನ್ನೇರಿ” ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರೆ.

ಚೇತನ್ ಮುಂಡಾಡಿ ನಿರ್ದೇಶನದಲ್ಲೇ ಸಜ್ಜಾದ ‘ಆಟಿಸಂ’ ಕಥಾ ಹಂದರವುಳ್ಳ “ವರ್ಣಪಟಲ” ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ಅವರ ಕೆಲಸ ದೇಶ-ವಿದೇಶಗಳ ಚಿತ್ರ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ನಿರ್ದೇಶಕ ನೀನಾಸಂ ಮಂಜು ನಿರ್ದೇಶನದ ಬುಡಕಟ್ಟು ಜನರ ನೈಜ ಕಥೆಯುಳ್ಳ “ಕನ್ನೇರಿ” ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರೆ

ಕರ್ನಾಟಕದ ಬುಡಕಟ್ಟು ಜನರ ಜೀವನ ಶೈಲಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಅವರು, ಚಿತ್ರ ವಿಮರ್ಶಕರ ಅತ್ಯುತ್ತಮ ಪ್ರಶಂಸೆಗೂ ಪಾತ್ರರಾಗಿದ್ದರು. ಇತ್ತೀಚೆಗೆ ಚಿತ್ರೀಕರಣಗೊಂಡಿರುವ “ಎಸ್ಐಟಿ”, “ಪ್ರೀತಿ ಕಿತಾಬು”, “ಮಾರೀಚ” ಚಿತ್ರಗಳಿಗೂ ಇವರ ಕ್ಯಾಮೆರಾ ಕೈ ಚಳಕವಿದೆ. ಇದರೊಂದಿಗೆ ಕನ್ನಡದ ಹಲವು ಜನಪ್ರಿಯ ಧಾರಾವಾಹಿಗಳಾದ “ಕುಂಕುಮ ಭಾಗ್ಯ”, “ಕಾದಂಬರಿ”, “ರಾಧಾ ಕಲ್ಯಾಣ”, “ಅರಮನೆ”, “ಹೆಳವನಕಟ್ಟೆ ಗಿರಿಯಮ್ಮ”, “ಕೆಳದಿ ಚನ್ನಮ್ಮ” ಧಾರಾವಾಹಿಗಳಿಗೂ ಇವರ ಛಾಯಾಗ್ರಹಣವಿದೆ.


ಇನ್ನು, ಕುಂಚ ಹಿಡಿದು ಪ್ರಕೃತಿ ಮಡಿಲಲ್ಲಿ ಚಿತ್ರಿಸುತ್ತಿದ್ದ, ಬಣ್ಣದ ಜೊತೆ ಸದಾ ಆಟವಾಡುತ್ತಿದ್ದ ಗಣೇಶ್‌ ಹೆಗ್ಡೆ ಮೂಲತಃ ಶಿರಸಿಯವರು. “ನಮ್ಮೂರ ಮಂದಾರ ಹೂವೆ” ಚಿತ್ರದ ಚಿತ್ರೀಕರಣ ನಡೆದದ್ದು ಶಿರಸಿ ಸುತ್ತಮುತ್ತ. ಅಷ್ಟೇ ಅಲ್ಲ, ಆ ಚಿತ್ರದಲ್ಲಿರುವ ಮನೆ ಗಣೇಶ್ ಹೆಗ್ಡೆ ಅವರದು. ಆ ಮನೆಯಲ್ಲೇ ಗಣೇಶ್‌ ಹೆಗ್ಡೆ ಹುಟ್ಟಿ ಬೆಳೆದದ್ದು. ಚಿತ್ರೀಕರಣದ ವೇಳೆ ಕ್ಯಾಮರಾ ಬಗ್ಗೆ ಕುತುಹಲ ಬೆಳೆಸಿಕೊಂಡು ಚಿತ್ರರಂಗದ ಕಡೆ ಹೊರಟ ಗಣೇಶ್ ಹೆಗ್ಡೆ, ಅನೇಕ ಸಾಕ್ಷ್ಯಚಿತ್ರಗಳು, ಜಾಹಿರಾತುಗಳು, ಧಾರಾವಾಹಿಗಳಲ್ಲಿ ಕೆಲಸ ಮಾಡಿದರು.

ಚಿತ್ರಕಲೆಯಲ್ಲಿ ಪದವಿ ಪಡೆದ ಗಣೇಶ್‌ ಹೆಗ್ಡೆ, ನಂತರದ ದಿನಗಳಲ್ಲಿ ಛಾಯಾಗ್ರಹಣವನ್ನು ಆಯ್ಕೆ ಮಾಡಿಕೊಂಡು, ಮೊದಲ ಸಲ ಸುನೀಲ್ ಕುಮಾರ್ ದೇಸಾಯಿ ಅವರ ಚಿತ್ರಕ್ಕೆ ಪೋಸ್ಟರ್ ವಿನ್ಯಾಸ ಮಾಡುವ ಮೂಲಕ, ನಂತರ ಮೆಲ್ಲನೆ, ಛಾಯಾಗ್ರಾಹಕರಾದ ವೇಣು, ಎಂ.ಕುಮಾರ್, ಕೃಷ್ಣಕುಮಾರ್ ಸೇರಿದಂತೆ ಹಲವರ ಗರಡಿಯಲ್ಲಿ ಗಣೇಶ್ ಹೆಗ್ಡೆ ಪಳಗಿದ್ದಾರೆ. ಸದ್ಯ ಚೇತನ್‌ ಮುಂಡಾಡಿ ಅವರ ನಿರ್ದೇಶನದ “ವರ್ಣಪಟಲ” ಚಿತ್ರದ ಛಾಯಾಗ್ರಹಣಕ್ಕೆ ಗಣೇಶ್‌ ಹೆಗ್ಡೆ ಅವರಿಗೆ 2020ನೇ ಸಾಲಿನ ವರ್ಲ್ಡ್ ಪ್ರೀಮಿಯರ್ ಫಿಲ್ಮ್ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸದ್ಯ ಅವರು ಕೆಲಸ ಮಾಡಿರುವ ಸುಧೀರ್ ಶಾನುಭೋಗ ನಿರ್ದೇಶನದ “ಮಾರೀಚ” ಹಾಗೂ “ಎಸ್ಐಟಿ” ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ.

Related Posts

error: Content is protected !!