ಬಿಗ್‌ಬಾಸ್‌ ಸೀಸನ್ 8; ಇವರೇ ನೋಡಿ 17 ಸ್ಪರ್ಧಿಗಳು

ಕನ್ನಡ ಕಿರುತೆರೆಯಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋಗೆ ದೊಡ್ಡ ವೀಕ್ಷಕ ಬಳಗವಿದೆ. ವಿವಿಧ ಕ್ಷೇತ್ರಗಳ, ವಿಭಿನ್ನ ವ್ಯಕ್ತಿತ್ವ – ಅಭಿರುಚಿಯ ಸ್ಪರ್ಧಿಗಳು ಮನೆಯಲ್ಲಿ ಸ್ಪರ್ಧಿಗಳಾಗಿ ಪಾಲ್ಗೊಳ್ಳುತ್ತಾರೆ. ನಿನ್ನೆ ಬಿಗ್‌ಬಾಸ್‌ 8ನೇ ಸೀಸನ್‌ಗೆ ಚಾಲನೆ ಸಿಕ್ಕಿದೆ. ಈ ಬಾರಿಯ ಹದಿನೇಳು ಸ್ಪರ್ಧಿಗಳನ್ನು ಸ್ಟಾರ್ ನಿರೂಪಕ ಸುದೀಪ್‌ ಅವರು ವೇದಿಕೆಗೆ ಆಹ್ವಾನಿಸಿ, ವೀಕ್ಷಕರಿಗೆ ಪರಿಚಯಿಸಿ ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿಕೊಟ್ಟಿದ್ದಾರೆ. ಈ ಅಭ್ಯರ್ಥಿಗಳು ಯಾರು, ಅವರ ಹಿನ್ನೆಲೆ ಏನು ಎನ್ನುವುದನ್ನು ಪರಿಚಯಿಸಿಕೊಳ್ಳೋಣ.

ಧನುಶ್ರೀ: ಇಪ್ಪತ್ತು ವರ್ಷದ ಧನುಶ್ರೀ ಹಾಸನದ ಹುಡುಗಿ. ಟಿಕ್‌ಟಾಕ್ ವೀಡಿಯೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾರೆ. ಅವರ ಟಿಕ್‌ಟಾಕ್ ವೀಡಿಯೋಗಳು ಮಿಲಿಯನ್‌ಗಟ್ಟಲೆ ವೀವ್ಸ್ ಕಂಡಿವೆ. ಉತ್ತಮ ಡ್ಯಾನ್ಸರ್ ಕೂಡ ಹೌದು.

ಶುಭಾ ಪೂಂಜಾ: ಮಾಡಲಿಂಗ್‌, ಟೀವಿ ಜಾಹೀರಾತುಗಳ ಮೂಲಕ ಕ್ಯಾಮೆರಾ ಎದುರಿಸಿದ ಶುಭಾ ಪೂಂಜಾ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಮೊಗ್ಗಿನ ಮನಸು’ ಚಿತ್ರದ ನಟನೆಗೆ ಅವರಿಗೆ ಫಿಲ್ಮ್‌ಫೇರ್‌ ಪುರಸ್ಕಾರ ಸಂದಿದೆ. ಸಾಲು, ಸಾಲು ಚಿತ್ರಗಳಲ್ಲಿ ನಟಿಸಿದರೂ ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ‘ಬಿಗ್‌ಬಾಸ್‌’ ಅವರ ಅದೃಷ್ಟ ಬದಲಿಸಲಿದೆಯೇ ಎಂದು ನೋಡಬೇಕು.

ಶಂಕರ್ ಅಶ್ವಥ್‌: ಕನ್ನಡ ಚಿತ್ರರಂಗದ ಮೇರು ನಟ ಕೆ.ಎಸ್‌.ಅಶ್ವಥ್ ಅವರ ಪುತ್ರ ಶಂಕರ್‌ ಅಶ್ವಥ್‌ ಕಿರುತೆರೆ, ಸಿನಿಮಾ ನಟ. ಸೂಕ್ತ ಅವಕಾಶಗಳಿಲ್ಲದೆ ಬದುಕಿನಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡವರು. ಜೀವನೋಪಾಯಕ್ಕಾಗಿ ನಟನೆ ಜೊತೆ ಕ್ಯಾಬ್ ಡ್ರೈವರ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ ಶಂಕರ್‌ ಅಶ್ವಥ್‌.

ವಿಶ್ವನಾಥ್‌: ಧಾರವಾಡದ ವಿಶ್ವನಾಥ್‌ ‘ಹಾಡು ಕರ್ನಾಟಕ’ ಸಂಗೀತ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಪರಿಚಯವಾದವರು. ಹತ್ತನ್ನೆರೆಡರ ಹರೆಯದಲ್ಲೇ ಶಾಸ್ತ್ರೀಯ ಸಂಗೀತ ಕಲಿಕೆಯಲ್ಲಿ ತೊಡಗಿಸಿಕೊಂಡ ಅವರಿಗೆ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ಇರಾದೆ.

ವೈಷ್ಣವಿ ಗೌಡ: ‘ಅಗ್ನಿಸಾಕ್ಷಿ’ ಕನ್ನಡ ಧಾರಾವಾಹಿಯೊಂದಿಗೆ ಜನಪ್ರಿಯತೆ ಗಳಿಸಿದವರು ವೈಷ್ಣವಿ. ಮೂಲತಃ ಭರತನಾಟ್ಯ ಕಲಾವಿದೆ. ಧಾರಾವಾಹಿ ಯಶಸ್ಸು ಅವರನ್ನು ಬೆಳ್ಳಿತೆರೆಗೆ ಕರೆದೊಯ್ದಿತು. ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅವರು ಚಿತ್ರರಂಗದಲ್ಲಿ ಗಮನಾರ್ಹ ಬ್ರೇಕ್‌ನ ನಿರೀಕ್ಷೆಯಲ್ಲಿದ್ದಾರೆ.

ಕೆ.ವಿ.ಅರವಿಂದ್: ವೃತ್ತಿಪರ ಬೈಕ್‌ ರೇಸರ್‌. ಸಾಹಸ ಪ್ರವೃತ್ತಿಯ ಅರವಿಂದ್ ಹಲವಾರು ಸಿನಿಮಾ ಮತ್ತು ಟೀವಿ ಜಾಹೀರಾತುಗಳಲ್ಲಿ ಸಾಹಸ ಕಲಾವಿದರಾಗಿ ಕೆಲಸ ಮಾಡಿದ್ದಾರೆ. ‘ಬೆಂಗಳೂರು ಡೇಸ್‌’ ಮಲಯಾಳಂ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ಬಿಗ್‌ಬಾಸ್ ಮನೆಯಲ್ಲಿ ವಿಶೇಷ ಸ್ಪರ್ಧಿ.

ನಿಧಿ ಸುಬ್ಬಯ್ಯ: ‘ಅಭಿಮಾನಿ’ ಕನ್ನಡ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ನಿಧಿ ಸುಬ್ಬಯ್ಯ ಮೂಲತಃ ರೂಪದರ್ಶಿ. ‘ಪಂಚರಂಗಿ’ ಸಿನಿಮಾ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಬಾಲಿವುಡ್‌ಗೆ ಹಾರಿದ ಅವರು ನಾಲ್ಕು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಸದ್ಯ ಗ್ಲಾಮರ್‌ ತಾರೆ.

ಶಮಂತ್‌: ಜನ್ಮನಾಮ ಶಮಂತ್ ಎಂದಿದ್ದರೂ ‘ಬ್ರೋ ಗೌಡ’ ಎನ್ನುವ ವಿಚಿತ್ರ ಹೆಸರಿನೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸುತ್ತಾರೆ. ಅದು ವೆಬ್‌ ಸರಣಿಯೊಂದರಲ್ಲಿನ ಅವರ ಪಾತ್ರದ ಹೆಸರು. ಸಂಗೀತದಲ್ಲಿ ಆಸಕ್ತಿ ಇರುವ ಅವರು ಗಾಯಕರೂ ಹೌದು. ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸುವುದು ಅವರ ಗುರಿ.

ಗೀತಾ ಭಾರತಿ ಭಟ್‌: ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಿತರಾಗಿದ್ದಾರೆ ಗೀತಾ ಭಟ್‌. ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿತ್ತು. ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲವೆಂದು ಅಲವತ್ತುಕೊಂಡಿದ್ದ ಅವರು ‘ಬಿಗ್‌ಬಾಸ್‌’ ಮನೆಯಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಮಂಜು ಪಾವಗಡ: ‘ಮಜಾಭಾರತ’ ಕನ್ನಡ ಕಿರುತೆರೆ ರಿಯಾಲಿಟಿ ಶೋನಲ್ಲಿ ಪರಿಚಯವಾದವರು ಮಂಜು. ಕಳೆದ ಏಳೆಂಟು ವರ್ಷಗಳಿಂದ ನಾಟಕಗಳಲ್ಲಿ ನಟಿಸುತ್ತಾ ಬಂದಿರುವ ಮಂಜುಗೆ ‘ಮಜಾಭಾರತ’ ಒಂದೊಳ್ಳೆಯ ತಿರುವು ನೀಡಿತು. ಅವರೀಗ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

ದಿವ್ಯಾ ಸುರೇಶ್‌: ‘ಮಿಸ್‌ ಸೌತ್ ಇಂಡಿಯಾ’ ಕಿರೀಟದೊಂದಿಗೆ ಲೈಮ್‌ಲೈಟ್‌ಗೆ ಬಂದ ದಿವ್ಯಾ ಕನ್ನಡ, ತೆಲುಗು ಸಿನಿಮಾಗಳು ಮತ್ತು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಮಿಲ್ಟನ್ ಹೌಸ್‌’ ಕನ್ನಡ ಚಿತ್ರದೊಂದಿಗೆ ಅವರ ಬೆಳ್ಳಿತೆರೆ ಅಭಿಯಾನ ಶುರುವಾಯ್ತು. ‘ನನ್‌ ಹೆಂಡ್ತಿ ಎಂಬಿಬಿಎಸ್‌’, ‘ಜೋಡಿಹಕ್ಕಿ’ ಕಿರುತೆರೆ ಸರಣಿಗಳೊಂದಿಗೆ ಕನ್ನಡಿಗರಿಗೆ ಪರಿಚಿತರು.

ಚಂದ್ರಕಲಾ ಮೋಹನ್‌: ಚಿಕ್ಕ ವಯಸ್ಸಿನಲ್ಲೇ ವೃತ್ತಿ ರಂಗಭೂಮಿ ಪ್ರವೇಶಿಸಿದ ಚಂದ್ರಕಲಾ ಬದುಕಿನಲ್ಲಿ ಸಾಕಷ್ಟು ಏಳುಬೀಳು ಕಂಡವರು. ‘ಪುಟ್ಟಗೌರಿ ಮದುವೆ’ ಸರಣಿ ಕಿರುತೆರೆಯಲ್ಲಿ ಅವರಿಗೆ ಬಹುದೊಡ್ಡ ತಿರುವು. ಪ್ರಸ್ತುತ ಸಿನಿಮಾ, ಕಿರುತೆರೆ ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಬಿಗ್‌ಬಾಸ್‌’ ಮನೆಯಲ್ಲಿರುವವರ ಪೈಕಿ ಹಿರಿಯ ಮಹಿಳೆ.

ರಘು ಗೌಡ: ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ರಘು ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕೆಂದು ಕೆಲಸ ತೊರೆದು ಬಂದರು. ‘ವೈನ್ ಸ್ಟೋರ್‌’ ಯೂಟ್ಯೂಬ್ ಚಾನೆಲ್‌ ರೂಪಿಸಿ ವೈವಿಧ್ಯಮಯ ವೀಡಿಯೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್‌ ಹೊಂದಿದ್ದಾರೆ.

ಪ್ರಶಾಂತ್ ಸಂಬರ್ಗಿ: ವರ್ಣರಂಜಿತ ವ್ಯಕ್ತಿತ್ವದ ಪ್ರಶಾಂತ್ ಸಂಬರ್ಗಿ ಅವರು ಬಿಗ್‌ಬಾಸ್ ಮನೆಯಲ್ಲಿ ಗಮನಸೆಳೆಯುವಂತಹ ಸ್ಪರ್ಧಿ. ತಮ್ಮನ್ನು ‘ಸಾಮಾಜಿಕ ಕಾರ್ಯಕರ್ತ’ ಎಂದು ಗುರುತಿಸಿಕೊಳ್ಳುವ ಪ್ರಶಾಂತ್‌ ಸಿನಿಮಾ ಮಂದಿಗೆ ಆಪ್ತರು. ರಾಜಕಾರಣಿಯೂ ಹೌದು. ಇತ್ತೀಚಿನ ಡ್ರಗ್ಸ್ ಪ್ರಕರಣದಲ್ಲಿ ಸಿನಿ ತಾರೆಯರ ಮೇಲಿನ ಆರೋಪಗಳಿಂದ ಸುದ್ದಿಯಾಗಿದ್ದರು.

ದಿವ್ಯಾ ಉರುಡುಗ: ತೀರ್ಥಹಳ್ಳಿ ಮೂಲದ ದಿವ್ಯಾ ಉರುಡುಗ ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಮಲ್ಟಿಮೀಡಿಯಾದಲ್ಲಿ ಪದವಿ ಪಡೆದಿರುವ ಅವರು ಧಾರಾವಾಹಿ ನಟಿಯಾದದ್ದು ಆಕಸ್ಮಿಕ. ಚಿಟ್ಟೆ ಹೆಜ್ಜೆ, ಅಂಬಾರಿ, ಖುಷಿ, ಓಂ ಶಕ್ತಿ ಓಂ ಶಾಂತಿ ಸರಣಿಗಳಲ್ಲಿ ನಟಿಸಿರುವ ಅವರು ‘ಸೂಪರ್ ಕಬಡ್ಡಿ’ ರಿಯಾಲಿಟಿ ಶೋನಲ್ಲಿ ಗಮನ ಸೆಳೆದಿದ್ದರು. ‘ಹುಲಿರಾಯ’ ಚಿತ್ರದೊಂದಿಗೆ ಸಿನಿಮಾಗೆ ಪರಿಚಯವಾದ ದಿವ್ಯಾ ‘ಧ್ವಜ’ ಮತ್ತು ‘ಫೇಸ್‌ 2 ಫೇಸ್‌’ ಚಿತ್ರಗಳಲ್ಲೂ ನಟಿಸಿದ್ದಾರೆ.

ರಾಜೀವ್‌: ನಟನಾಗುವ ಇರಾದೆ ಹೊಂದಿರುವ ರಾಜೀವ್ ಅತ್ಯುತ್ತಮ ಕ್ರಿಕೆಟ್ ಆಟಗಾರ. ನಟ ಸುದೀಪ್ ನೇತೃತ್ವದಲ್ಲಿ ಆರಂಭವಾದ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಆಕರ್ಷಕ ಬ್ಯಾಟ್ಸ್‌ಮನ್‌ ಆಗಿ ಹೆಸರು ಮಾಡಿದ್ದರು. ವೃತ್ತಿಪರ ಕ್ರಿಕೆಟರ್ ಆಗಿ ರೂಪುಗೊಳ್ಳುವುದರ ಜೊತೆಗೆ ನಟನಾಗಿಯೂ ಗುರುತಿಸಿಕೊಳ್ಳಬೇಕು ಎನ್ನುವುದು ಅವರ ಆಸೆ.

ನಿರ್ಮಲಾ ಚೆನ್ನಪ್ಪ: ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಿರ್ಮಲಾ ಚೆನ್ನಪ್ಪ ನಟಿ, ಡಬ್ಬಿಂಗ್ ಕಲಾವಿದೆ, ನಿರ್ಮಾಪಕಿ. ಮುಂದಿನ ದಿನಗಳಲ್ಲಿ ನಿರ್ದೇಶಕಿಯಾಗುವುದು ಅವರ ಗುರಿ. ಓದುವ ಅಭಿರುಚಿ ಇರುವ ನಿರ್ಮಲಾ ಫಿಲಾಸಫಿ ಬಗ್ಗೆ ಸೊಗಸಾಗಿ ಮಾತನಾಡುತ್ತಿದ್ದಾರೆ. ಕನ್ನಡ ಸಿನಿಮಾ ನಟ ಸರ್ದಾರ್ ಸತ್ಯ ಅವರು ನಿರ್ಮಲಾರ ಪತಿ.

Related Posts

error: Content is protected !!