ನಟ ದರ್ಶನ್ ಹುಬ್ಬಳ್ಳಿ ಜತೆಗೆ ಧನ್ಯವಾದ ಹೇಳಿದ್ದಾರೆ. ಕಾರ್ಯಕ್ರಮಕ್ಕೆ ಬಂದು ದೊಡ್ಡ ಮಟ್ಟದ ಬೆಂಬಲ ನೀಡಿದ್ದಕ್ಕೆ ನಾನು ಸದಾ ಚಿರಋಣಿ ಅಂದಿದ್ದಾರೆ.
ಗಂಡುಮೆಟ್ಟಿದ ನಾಡು ಹುಬ್ಬಳ್ಳಿ ನಗರಿ ಭಾನುವಾರ (ಫೆ. 28) ದೊಡ್ಡ ಸಿನಿಮಾ ಸಂಭ್ರಮಕ್ಕೆ ಸಾಕ್ಷಿ ಆಯಿತು. ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ “ರಾಬರ್ಟ್ʼ ಫ್ರೀ ರಿಲೀಸ್ ಪ್ರಚಾರ ಕಾರ್ಯಕ್ರಮದ ಭಾಗವಾಗಿಯೇ ನಡೆದ ಟ್ರೇಲರ್ ಹಾಗೂ ಆಡಿಯೋ ಲಾಂಚ್ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿಯೇ ಸಕ್ಸಸ್ ಕಂಡಿತು. ಚಿತ್ರ ತಂಡದ ನಿರೀಕ್ಷೆಗೂ ಮೀರಿ ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ, ರಾಬರ್ಟ್ ಬಿಡುಗಡೆಯ ಕ್ಷಣವನ್ನೇ ಎದುರು ನೋಡುತ್ತಿರುವುದಕ್ಕೆ ಸಾಕ್ಷಿ ಆಯಿತು. ಕನ್ನಡ ಚಿತ್ರರಂಗದ ಮಟ್ಟಿಗೆ ಈಗ ಅತೀ ಹೆಚ್ಚು ಅಭಿಮಾನಿ ಗಳನ್ನು ಹೊಂದಿರುವ ಖ್ಯಾತಿ ದರ್ಶನ್ ಅವರಿಗಿದ್ದು, ಅದು ಕೂಡ ನಿನ್ನೆ ಮತ್ತೊಮ್ಮೆ ಸಾಬೀತು ಆಯಿತು.
ವರ್ಣರಂಜಿತ ಕಾರ್ಯಕ್ರಮದ ವೇದಿಕೆ ದರ್ಶನ್ ಬಂದಾಗ, ಅವರು ಚಿತ್ರದ ಕುರಿತು ಮಾತನಾಡಲು ಶುರು ಮಾಡಿದಾಗ ಅಭಿಮಾನಿಗಳ ಸಿಳ್ಳೆ, ಕೇಕೆ ಮುಗಿಲು ಮುಟ್ಟಿದ್ದು ವಿಶೇಷ. ಹೈದ್ರಾಬಾದ್ ಈವೆಂಟ್ ನಲ್ಲಿ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಅಂತ ಬಣ್ಣಿಸಿದ್ದ ನಟ ದರ್ಶನ್, ಹುಬ್ಬಳ್ಳಿಯ ವೇದಿಕೆ ಮೇಲೂ ಅದನ್ನೇ ಪುನರಾವರ್ತನೆ ಮಾಡಿದರಲ್ಲದೆ, ಮಾತಿನ ಮಧ್ಯೆ ಸಿಳ್ಳೆ-ಕೇಕೆ ಹಾಕುತ್ತಿದ್ದ ಫ್ಯಾನ್ಸ್ ಗೆ ” ಇರು ಚಿನ್ನ, ಇರು ಮಾನೆ… ಸ್ವಲ್ಪ ಸುಮ್ನಿರಿ ಮಾನೆ ಅಂತೆಲ್ಲ ತಾಳ್ಮೆ ಯಿಂದಲೇ ಹೇಳುತ್ತಿದ್ದರಾದರೂ, ಕೂಗಾಟ ಜಾಸ್ತಿ ಆದಾಗ, ಎಯ್ … ಇರಪ್ಪಾ ಸುಮ್ನೆ… ಅಂತ ಗಟ್ಟಿಯಾಗಿಯೇ ಸಿಟ್ಟಾದರು. ತಕ್ಷಣವೇ ಫ್ಯಾನ್ಸ್ ಸುಮ್ಮನಾದಾಗ ನೀವೆಲ್ಲ ಇರುವರೆಗೂ ನನ್ನ ೫೩ ಸಿನಿಮಾಗಳಲ್ಲಿನ ಖರಾಬು ಡ್ಯಾನ್ಸ್ ನೋಡಿಯೂ ನನ್ನನ್ನು ಸಹಿಸಿಕೊಂಡವರು… ನಿಮ್ಮದೇ ಋಣ ನನ್ನ ಮೇಲಿದೆ. ತೀರಿಸುವೆ ಅಂತ ಭಾವುಕರಾಗಿ ಅಭಿಮಾನಗಳ ಮನ ಗೆದ್ದರು.
ಉತ್ತರ ಕರ್ನಾಟಕದ ಜತೆಗಿನ ನಂಟನ್ನು ಎರಡು ಕಾರಣಗಳ ಮೂಲಕ ನೆನಪಿಸಿಕೊಂಡ ದರ್ಶನ್, ” ಕ್ರಾಂತಿವೀರ ಸಂಗೊಳ್ಳಿ ರಾಯಣ್ಣʼ ಚಿತ್ರದ ಪ್ರಚಾರಕ್ಕೆ ಅಂತ ನಾವ್ ಹೊರಟಾಗ ಇಲ್ಲಿ ಸಿಕ್ಕ ಪ್ರತಿಕ್ರಿಯೆ ಅದ್ಬುತವಾಗಿತ್ತು. ನಾವು ರಸ್ತೆಗಳಲ್ಲಿ ಹೊರಟಾಗ ಇಲ್ಲಿನ ಮಹಿಳೆಯರು, ಮಕ್ಕಳು ಚಪ್ಪಲಿ ತೆಗೆದು ನಿಂತು ನಮಗೆ ಸ್ವಾಗತ ಕೋರಿದ್ದರು. ಅದೇ ಕಾರಣಕ್ಕೆ ನಾನಿವತ್ತು ಚಪ್ಪಲಿ ತೆಗೆದು ಈ ವೇದಿಕೆ ಏರಿದ್ದೇನೆ. ಹಾಗೆಯೇ ನನ್ನಪ್ಪ ಒಂದು ಕಾಲದಲ್ಲಿ ಸಿನಿಮಾದಲ್ಲಿ ಅವಕಾಶ ಇಲ್ಲದೆ ಇದ್ದಾಗ ದಿವ್ಯ ದರ್ಶನ ಕಲಾವೃಂದ ಅಂತ ಒಂದು ನಾಟಕ ಕಂಪನಿ ಮೂಲಕ ಉತ್ತರ ಕರ್ನಾಟಕ ಪ್ರವಾಸ ಹೊರಟರು. ಆಗ ಇಲ್ಲಿನ ಜನ ಅವರಿಗೆ ಅದ್ಭುತ ಬೆಂಬಲ ಕೊಟ್ಟರು. ಆಗ ದುಡಿದ ಹಣದಿಂದಲೇ ನನ್ನಪ್ಪ ಮನೆ ಕಟ್ಟಿಸಿದ್ದರು. ಆ ಮನೆ ಇವತ್ತಿಗೂ ನಾವಿರುವ ಮನೆ. ಇದು ಉತ್ತರ ಕರ್ನಾಟಕದ ಜನತೆಗೂ ನನಗೂ ಇರುವ ನಂಟು ಎನ್ನುವ ಹುಬ್ಬಳ್ಳಿ ಜನ ಜೋರಾಗಿ ಕೂಗಿ ಸ್ವಾಗತಿಸಿದರು. ʼರಾಬರ್ಟ್ʼ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಸಿಕ್ಕ ಇಂತಹದೊಂದು ದೊಡ್ಡ ಬೆಂಬಲಕ್ಕೆ ಸೋಮವಾರ ಧನ್ಯವಾದ ಹೇಳಿರುವ ನಟ ದರ್ಶನ್, ನಿಮ್ಮಗಳ ಪ್ರೀತಿ-ಅಭಿಮಾನಕ್ಕೆ ನಾನು ಸದಾ ಚಿರಋಣಿ ಅಂತ ಟ್ವೀಟ್ ಮಾಡಿದ್ದಾರೆ.