ಸಿನಿಮಾ ಅಂದ್ರೆ ಈಗ ಬರೀ ಮನರಂಜನೆ ಅಂತಾರೆ. ಬಹುತೇಕ ಈಗಿನ ತಲೆಮಾರು ಅದನ್ನು ಹಾಗೆಯೇ ಸ್ವೀಕರಿಸಿದೆ. ಆದರೆ ಒಂದಷ್ಟು ವರ್ಷಗಳಿಗೆ ಹಿಂದಕ್ಕೆ ಹೋದರೆ ಸಿನಿಮಾ ಅನ್ನೋದು ಅನೇಕ ರೀತಿಯಲ್ಲಿ ಒಬ್ಬೊಬ್ಬರಿಗೆ ಪ್ರೇರಣೆ ನೀಡಿದೆ. ಹಾಗೆಯೇ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಬದುಕಲ್ಲೂ ಕೂಡ. ಯಾಕಂದ್ರೆ, ಅಶೋಕ್ ಕುಮಾರ್ ಪೊಲೀಸ್ ಅಧಿಕಾರಿ ಆಗ್ಬೇಕೆಂದು ಕನಸು ಕಂಡಿದ್ದೇ ಹಿಂದಿಯ ʼಝಂಜೀರ್ʼ ಸಿನಿಮಾ ನೋಡಿದ ನಂತರವಂತೆ.
ಅಂದ ಹಾಗೆ, “ಝಂಜೀರ್ʼ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಚಿತ್ರ. ಇದು ತೆರೆಗೆ ಬಂದಿದ್ದ 1973 ರಲ್ಲಿ. ಆಗ ಅಶೋಕ್ ಕುಮಾರ್ ಕಾಲೇಜು ಸ್ಟುಡೆಂಟ್. ಯಾವುದೋ ಕಾಲೇಜ್ ಸ್ಟ್ರೈಕ್ ನಲ್ಲಿ ಪೊಲೀಸರು ಹಾಗೂ ಸ್ಟುಡೆಂಟ್ ನಡುವೆ ಘರ್ಷಣೆ ಆದಾಗ ಅಶೋಕ್ ಕುಮಾರ್ ಅವರಿಗೆ ಪೊಲೀಸರು ಹಿಗ್ಗಾಮುಗ್ಗಾ ಹೊಡೆದರಂತೆ. ಅವರ ಜೀವನದಲ್ಲಿ ವೈರಿ ಅಂತ ಇದ್ರೆ ಪೊಲೀಸರೇ ಅಂತ ಡಿಸೈಡ್ ಮಾಡಿಕೊಂಡಿದ್ದರಂತೆ. ಕೊನೆಗೊಂದು ದಿನ ಅಮಿತಾಬ್ ಬಚ್ಚನ್ ಅಭಿನಯದ “ಝಂಜೀರ್ʼ ಚಿತ್ರ ನೋಡಿದಾಗ ಪೊಲೀಸ್ ಅಧಿಕಾರಿ ಆಗ್ಬೇಕೆಂದು ಕನಸು ಕಂಡ್ರಂತೆ. ಮುಂದೆ ಆ ಕನಸು ನನಸೂ ಆಯಿತು ಎನ್ನುವ ಅವರು, ಜೀವನ ನಾವಂದುಕೊಂಡಂತೆ ಅಲ್ಲ. ನಂಗೆ ಪೊಲೀಸ್ ಇಲಾಖೆ ಅಂದ್ರೆನೆ ಆಗುತ್ತಿರಲಿಲ್ಲ. ಕೊನೆಗೆ ಹಣೆಬರಹ ಅದೇ ಇಲಾಖೆಗೆ ಇಷ್ಟಪಟ್ಟು ಬಂದೆ ಅಂತ ಹಳೆದ್ದನ್ನು ನೆನಪಿಸಿಕೊಂಡರು.
ಹೊಸಬರ ರೈಮ್ಸ್ ಹೆಸರಿನ ಚಿತ್ರದ ಪೋಸ್ಟರ್ ಲಾಂಚ್ ಸಂದರ್ಭದಲ್ಲಿ ಟೈಗರ್ ಅಶೋಕ್ ಕುಮಾರ್ ಅವರು ತಾವು ಪೊಲೀಸ್ ಇಲಾಖೆಗೆ ಸೇರ್ಪಡೆ ಆಗಿದ್ದಕ್ಕೂ, ತಾವಂದುಕೊಂಡಂತೆ ಆಗದ್ದಕ್ಕೂ, ಅವೆಲ್ಲವನ್ನು ಹೇಳಿಕೊಂಡಿದ್ದಕ್ಕೂ ಕಾರಣ ರೈಮ್ಸ್ ಚಿತ್ರದಲ್ಲಿನ ನಾಯಕ ಅಜಿತ್ ಜೈರಾಜ್ ಪೊಲೀಸ್ ಅಧಿಕಾರಿ ಬಣ್ಣ ಹಚ್ಚಿದ್ದು. ಅಂದ್ರೆ, ಈ ಅಜಿತ್ ಜೈರಾಜ್ ಬೇರಾರು ಅಲ್ಲ ಬೆಂಗಳೂರಿನ ಒಂದು ಕಾಲದ ಡಾನ್ ಜೈರಾಜ್ ಪುತ್ರ. ಜೈರಾಜ್ ಆಗ ಪೊಲೀಸ್ ವಿರೋಧಿ. ಖಾಕಿ ಕಂಡ್ರೆ ಅವರಿಗೆ ಆಗುತ್ತಿರಲಿಲ್ವಂತೆ. ಅಂತಹ ವ್ಯಕ್ತಿಯ ಮಗ ಈಗ ಪೊಲೀಸ್ ಅಧಿಕಾರಿಯಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂದರೆ, ಅದೇ ಅಲ್ವ ಬದುಕು, ಹಣೆಬರಹ ಅನ್ನೋದು ಅಶೋಕ್ ಕುಮಾರ್ ಮಾತು. ತಾವು ಕೂಡ ಪೊಲೀಸ್ ವಿರೋಧಿ ಆಗಿದ್ದವರೂ, ಕಾಲಚಕ್ರದಲ್ಲಿ ಅದೇ ಇಲಾಖೆಗೆ ಬರಬೇಕಾಯಿತು ಅಂತ ವಿವರಿಸಿದರು.
ಇನ್ನು ತೆರೆ ಮೇಲೆ ಪೊಲೀಸರ ನಿಜ ಬದುಕನ್ನು ತೋರಿಸದ ಚಿತ್ರ ರಂಗದ ಬಗ್ಗೆ ಅವರಲ್ಲಿ ತೀರಾ ಬೇಸರ ಇದೆ. ” ಪೊಲೀಸರು ಮನುಷ್ಯರೆ. ನಮಗೂ ಭಾವನೆಗಳಿವೆ. ಆದರೂ, ಇದುರವರೆಗೂ ನಮ್ಮ ಭಾವನೆಗಳು ತೆರೆ ಮೇಲೆ ಕಂಡಿದ್ದು ನಾನು ನೋಡಿಲ್ಲ. ಬದಲಿಗೆ ಪೊಲೀಸ್ ಅಂದ್ರೆ ಟೆರರ್, ಹಿಂಸೆ ನೀಡುವವರು, ವಿಕೃತಿಗಳು ಅಂತಲೇ ತೋರಿಸಲಾಗುತ್ತದೆ. ಅದು ಬಿಡಿ, ಪೊಲೀಸ್ ಬಟ್ಟೆಗೂ ಒಂದು ಶಿಸ್ತು ಇದೆ. ಅದು ಹೀಗೆ ಇರಬೇಕು, ಆ ಬಟ್ಟೆಗಳ ಮೇಲಿನ ಬಣ್ಣದ ಹೀಗೆ ಬರಬೇಕು ಅಂತ ನಿಯಮ ಇದೆ. ಆದರೆ ಸಿನಿಮಾ ಮಂದಿ ಪೊಲೀಸ್ ಬಟ್ಟೆ ತೋರಿಸುವಾಗ ಹೇಗೆಗೋ ತೋರಿಸುತ್ತಾರೆ. ಏನಾದ್ರೂ ಮಾಡುವಾಗ ಅನುಭವಿಗಳನ್ನು ಸಂಪರ್ಕಿಸಿ ಅಂತ ಕಿವಿ ಮಾತು ಹೇಳುತ್ತಾರೆ ಟೈಗರ್ ಅಶೋಕ್ ಕುಮಾರ್.