Categories
ಸಿನಿ ಸುದ್ದಿ

ಕಿಟ್ಟಿ ಜೊತೆ ಸಿದ್ಧಾರ್ಥ್ ಮಹೇಶ್ ಪಾರ್ಟಿ! ಗರುಡನಿಗೆ ಗಣ್ಯರ ಸಾಥ್…

“ಸಿಪಾಯಿ” ಚಿತ್ರದ ಮೂಲಕ ಬಂದ ಸಿದ್ದಾರ್ಥ್ ಮಹೇಶ್ ಅಭಿನಯದ “ಗರುಡ” ಚಿತ್ರದ ಹಾಡು ಬಿಡುಗಡೆಯಾಗಿದೆ. ಶಾಸಕ ಅರವಿಂದ್ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್ , ನಟ ವಿನೋದ್ ಪ್ರಭಾಕರ್, ನಿರ್ದೇಶಕರಾದ ಮಹೇಶ್ ಬಾಬು, ಮಹೇಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ನೃತ್ಯ ನಿರ್ದೇಶಕನಾಗಿ‌ ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದೀನಿ. ನಿರ್ದೇಶನ ಮಾಡುವ ಆಸೆಯಿತ್ತುm. ಅವಕಾಶ ಮಾಡಿಕೊಟ್ಟ ಸಿದ್ದಾರ್ಥ್ ಮಹೇಶ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ಚಿತ್ರತಂಡಕ್ಕೆ ಧನ್ಯವಾದವೆಂದರು ನಿರ್ದೇಶಕ ಧನು ಕುಮಾರ್ .

ನಾನು ಹಾಗೂ ಧನು ಮಾಸ್ಟರ್ ಚರ್ಚೆ ಮಾಡಿ ಈ ಚಿತ್ರದ ಕಥೆ ಸಿದ್ದ ಮಾಡಿಕೊಂಡೆವು. ನಂತರ ನಿರ್ಮಾಪಕರಿಗಾಗಿ ಕಾಯುತ್ತಿದ್ದಾಗ, ನಮ್ಮ ತಂದೆ ರಾಜಾ ರೆಡ್ಡಿ ಅವರು ನಿರ್ಮಾಣ ಮಾಡಲು ಮುಂದಾದರು. ಅವರ ಸಹಾಯ ಮರೆಯಲು ಸಾಧ್ಯವಿಲ್ಲ. ಸಮೀಕ್ಷೆಯ ಪ್ರಕಾರ “ಗರುಡ” ಸಾವಿರಾರು ವರುಷ ಬದಕುವ ಪಕ್ಷಿ. ವಯಸ್ಸಾದ ಮೇಲೂ ತಾನೆ, ಮತ್ತೆ ಪುಟ್ಟಿದೇಳುವ ಪಕ್ಷಿ ಕೂಡ. ಹಾಗಾಗಿ ನಮ್ಮ ಸಿನಿಮಾಗೆ ಈ ಹೆಸರು ಸೂಕ್ತ ಅನಿಸಿತು. ಕಥೆ ಮಾಡುವಾಗಲೇ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ಅಭಿನಯಿಸಬೇಕೆಂದು ತೀರ್ಮಾನ‌ಮಾಡಿಕೊಂಡಿದ್ದೆವು. ಕಿಟ್ಟಪ್ಪ ಅಭಿನಯಿಸಲು ಒಪ್ಪಿದರು. ಐಂದ್ರಿತಾ, ಆಶಿಕಾ ರಂಗನಾಥ್, ರಂಗಾಯಣ ರಘು ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಂತ್ರಜ್ಞರ ಕೆಲಸವೂ ಉತ್ತಮವಾಗಿದೆ. ಇದೇ ಇಪ್ಪತ್ತರಂದು ತೆರೆಗೆ ಬರುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ಸಿದ್ದಾರ್ಥ್ ಮಹೇಶ್.

ಶೀನಗರ ಕಿಟ್ಟಿ, ಆಶಿಕಾ ರಂಗನಾಥ್, ಐಂದ್ರಿತಾ ರೆ, ರಂಗಾಯಣ ರಘು ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿ, ಸಿದ್ದಾರ್ಥ್ ಮಹೇಶ್ ಅವರಿಗೆ ಶುಭ ಕೋರಿದರು.

ಜೈ ಆನಂದ್ ಛಾಯಾಗ್ರಹಣದ ಬಗ್ಗೆ ಮಾತನಾಡಿದರು. ಹಾಡಗಳ ಹಾಗು ಹಾಡಿದವರ ಬಗ್ಗೆ ತಿಳಿಸಿದ ಸಂಗೀತ ನಿರ್ದೇಶಕ ರಘು ದೀಕ್ಷಿತ್, ತಾವು ಈ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು.

Categories
ಸಿನಿ ಸುದ್ದಿ

ಕ್ರೇಜಿ ಪುತ್ರನ ಕ್ರೇಜ್ ಪ್ರಾರಂಭ: ಮನೋರಂಜನಗೆ ತಂಡ ರೆಡಿ…

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ಅಭಿನಯದ ” ಪ್ರಾರಂಭ ” ಚಿತ್ರ‌ ಇದೇ ಇಪ್ಪತ್ತರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಮೂರು ವರ್ಷಗಳ ಹಿಂದೆ “ಪ್ರಾರಂಭ” ಶುರುವಾಯಿತು. ಎರಡು ವರ್ಷ ಕೋವಿಡ್ ನಿಂದ ವಿಳಂಬವಾಯಿತು. ಇದೇ ಇಪ್ಪತ್ತರಂದು ಬಿಡುಗಡೆಗೆ ದಿನಾಂಕ ನಿಗದಿಯಾಯಿತು.‌ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಮನು ಕಲ್ಯಾಡಿ.

ಇದು ನನ್ನ ಅಭಿನಯದ ನಾಲ್ಕನೇ ಚಿತ್ರ. ಪ್ರೀತಿ ಕೈ ಕೊಟ್ಡರೆ, ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಆದರೆ ಅದು ತಪ್ಪು. ನಮಗೂ ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ ಹೀಗೆ ಕುಟುಂಬ ಇರುತ್ತದೆ ಎಂಬುದನ್ನು ಯೋಚಿಸಿ ಮುನ್ನಡೆಯಬೇಕು. ಇಂತಹ ಕಥೆ “ಪ್ರಾರಂಭ” ದಲ್ಲಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನೋಡಿ ಹರಸಿ ಎನ್ನುತ್ತಾರೆ ನಾಯಕ ಮನುರಂಜನ್ ರವಿಚಂದ್ರನ್.

ನನ್ನ ಪಾತ್ರ ಚೆನ್ನಾಗಿದೆ. ಬಿಡುಗಡೆಗೆ ಕಾತುರದಿಂದ ಕಾಯುತ್ತಿರುವುದಾಗಿ ನಾಯಕಿ ಕೀರ್ತಿ ಕಲ್ಕೇರಿ ತಿಳಿಸಿದರು.

ಇನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ಪ್ರಾರಂಭ” ಚಿತ್ರವನ್ನು ಬಿಡುಗಡೆ ಮಾಡುವುದಾಗಿ ವಿತರಕ ವೆಂಕಟ್ ತಿಳಿಸಿದರು.

ಸುಂದರಸ್ಥಳಗಳಲ್ಲಿ ಚಿತ್ರೀಕರಿಸಿರುವಿದಾಗಿ ಛಾಯಾಗ್ರಾಹಕ ಸುರೇಶ್ ಬಾಬು ಹೇಳಿದರು.

ಚಿತ್ರ ಇದೇ ಇಪ್ಪತ್ತರಂದು ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಜಗದೀಶ್ ಕಲ್ಯಾಡಿ .

ಅನೇಕ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು “ಪ್ರಾರಂಭ”ದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಕಿರಣ್ ರಾಜ್ ಅಭಿನಯದ ಬಡ್ಡೀಸ್ ಜೂನ್ 24ಕ್ಕೆ ರಿಲೀಸ್…

“ಕನ್ನಡತಿ” ಧಾರಾವಾಹಿ ಮೂಲಕ ಹರ್ಷ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ಕಿರಣ್ ರಾಜ್ ಅಭಿನಯದ “ಬಡ್ಡೀಸ್” ಚಿತ್ರ ಜೂನ್ 24 ರಂದು ಬಿಡುಗಡೆಯಾಗುತ್ತಿದೆ. ಕಿರಣ್ ರಾಜ್ ಅವರ ತಂದೆ, ತಾಯಿ ಹಾಗೂ ಅಭಿಮಾನಿ ಸಮರ್ಥ್ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿದರು.


ಕಥೆ ಸಿದ್ದಮಾಡಿಕೊಂಡು, ನಿರ್ಮಾಪಕರ ಹುಡುಕಾಟದಲ್ಲಿದ್ದಾಗ, ಸ್ನೇಹಿತರ ಮೂಲಕ ದುಬೈ ನಿವಾಸಿ ಭಾರತಿ ಶೆಟ್ಟಿ ಅವರ ಪರಿಚಯವಾಯಿತು. ಕಥೆ ಮೆಚ್ಚಿದ ಅವರು ನಿರ್ಮಾಣಕ್ಕೆ ಮುಂದಾದರು. ಇದೊಂದು ಸ್ನೇಹದ ಮಹತ್ವ ಸಾರುವ ಚಿತ್ರ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಕಥಾಹಂದರ. “ಬಡ್ಡೀಸ್” ಎಂದರೆ ಕಾಲೇಜಿನಲ್ಲಿ ಈಗಿನ ಹುಡುಗರು ಸ್ನೇಹಿತರನ್ನು ಕರೆಯುವ ಪದ. ಕಿರಣ್ ರಾಜ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಎಲ್ಲಾ ತಂದೆ ಸಾಮಾನ್ಯವಾಗಿ ಮಗನಿಗೆ ಕಾರು, ಬೈಕು ಮುಂತಾದವುಗಳನ್ನು ನೀಡುತ್ತಾರೆ. ಆದರೆ ನಮ್ಮ ಚಿತ್ರದಲ್ಲಿ ಶ್ರೀಮಂತ ತಂದೆ, ಮಗನಿಗೆ ಸ್ನೇಹಿತರನ್ನೇ ಉಡುಗೊರೆ ನೀಡುತ್ತಾನೆ. ನಾಯಕ ಹಾಗೂ ಮೂವರು ಸ್ನೇಹಿತರ ಜೊತೆ ನಡೆಯುವ ಕಥಾಹಂದರವಿದು. ಪ್ರೇಮಕಥೆಯೊಂದಿಗೆ, ಸೆಂಟಿಮೆಂಟ್ ಸನ್ನಿವೇಶಗಳು ಸಹ ನಮ್ಮ ಚಿತ್ರದಲ್ಲಿ ನೋಡುಗರ ಮನಸ್ಸಿಗೆ ಹತ್ತಿರವಾಗಲಿದೆ. ಜೂನ್ 24 ರಂದು ಚಿತ್ರ ಬಿಡುಗಡೆಯಾಗಲಿದೆ ನೋಡಿ ಹಾರೈಸಿ ಎಂದರು ನಿರ್ದೇಶಕ ಗುರುತೇಜ್ ಶೆಟ್ಟಿ.

ನಾನು ಮೂಲತಃ ಬೆಂಗಳೂರಿನವಳು. ಕಳೆದ ಕೆಲವು ವರ್ಷಗಳಿಂದ ದುಬೈನಲ್ಲಿದ್ದೀನಿ. ಜಾಹೀರಾತು ಸಂಸ್ಥೆ ನಡೆಸುತ್ತಿದ್ದೇನೆ. ಚಿಕ್ಕಂದಿನಿಂದಲೇ ಸಿನಿಮಾ ಮಾಡಬೇಕೆಂಬ ಹಂಬಲ. ಅಪ್ಪ, ಅಮ್ಮ ರಾಜಕುಮಾರ್ ಮುಂತಾದವರ ಚಿತ್ರಗಳನ್ನು ‌ನೋಡಿಕೊಂಡು ಬಂದು ಕಥೆ ಹೇಳುತ್ತಿದ್ದರು. ಆಗಿನಿಂದಲೂ ನನಗೆ ಸಿನಿಮಾ ಆಸಕ್ತಿ. ಗುರುತೇಜ್ ಶೆಟ್ಟಿ ಗೆಳೆಯರೊಬ್ಬರ ಮೂಲಕ ಪರಿಚಯವಾಗಿ, ಕಥೆ ಕಳುಹಿಸಿದ್ದರು. ಕಥೆ ಹಿಡಿಸಿತು. ಸಿನಿಮಾ ನಿರ್ಮಾಣಕ್ಕೆ ಮುಂದಾದೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಾಯದಿಂದ ಚಿತ್ರ ಉತ್ತಮವಾಗಿ ಬಂದಿದೆ. ಮುಂದಿನ ತಿಂಗಳು 24 ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕಿ ಭಾರತಿ ಶೆಟ್ಟಿ.

ನಾನು ಈ ಹಿಂದೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ಆದರೆ ನನಗೆ ಹೆಸರು ತಂದುಕೊಟ್ಟದ್ದು “ಕನ್ನಡತಿ”.
ಆನಂತರ ಒಳ್ಳೆಯ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿದ್ದ ನನಗೆ ಗುರುತೇಜ್ ಶೆಟ್ಟಿ ಅವರು ಹೇಳಿದ್ದ ಕಥೆ ಹಿಡಿಸಿತು. ಹಿಂದೆ “ಮಾರ್ಚ್ 22″ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ನಾಯಕನಾಗಿ ಇದು ಮೊದಲ ಚಿತ್ರ. ಸ್ನೇಹದ ಮಹತ್ವ ಸಾರುವ ಈ ಚಿತ್ರದಲ್ಲಿ ಮನೋರಂಜನೆಗೆ ಬೇಕಾದ ಎಲ್ಲಾ ಅಂಶಗಳು ಇದೆ. ನನ್ನ ಅಭಿಮಾನಿ ಸಮರ್ಥ್ ಮತ್ತು ನನ್ನ ತಂದೆ, ತಾಯಿ ಹಾಡು ಬಿಡುಗಡೆ ಮಾಡಿದ್ದು ಸಂತಸ ತಂದಿದೆ ಎಂದರು ನಾಯಕ ಕಿರಣ್ ರಾಜ್.

ತಮ್ಮ ಅಭಿನಯದ ಬಗ್ಗೆ ನಟ ಗೋಪಾಲ್ ದೇಶಪಾಂಡೆ ಮಾಹಿತಿ ನೀಡಿದರು. ಒಂದೇ ಟೇಕ್ ನಲ್ಲಿ ಈ ಚಿತ್ರದ ಹಾಡೊಂದರ ನೃತ್ಯ ನಿರ್ದೇಶನ ಮಾಡಿರುವುದಾಗಿ ನೃತ್ಯ ನಿರ್ದೇಶ ಧನಂಜಯ್ ತಿಳಿಸಿದರು.

ಜ್ಯೂಡಿ ಸ್ಯಾಂಡಿ ” ಬಡ್ಡೀಸ್ ” ಹಾಡುಗಳಿಗೆ ಸಂಗೀತ ನೀಡಿದ್ದು, ಯು ಎಸ್ ಎ ನಿವಾಸಿ ನಿಭಾ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ಉತ್ತರ ಭಾರತ ಕಡೆ ವಿಕ್ರಾಂತ್ ರೋಣಗೆ ಸಲ್ಮಾನ್ ಖಾನ್ ಫಿಲ್ಮ್ಸ್ ಸಾಥ್…

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಅದರ ರಿಲೀಸ್ ಡೇಟ್ ಟೀಸರ್ ಬಿಡುಗಡೆಯಾದ ನಂತರ, ಪ್ರೇಕ್ಷಕರು ಮತ್ತು ವಿಮರ್ಶಕರು ಜುಲೈ 28 ರಂದು ಪ್ರಪಂಚದಾದ್ಯಂತದ ರಿಲೀಸ್ ಆಗುವ ಬಗ್ಗೆ ಅದ್ಭುತ ಪ್ರತಿಕ್ರಿಯೆ ನೀಡಿದ್ದಾರೆ ಮತ್ತು ಸಿನಿಪ್ರಿಯರು ಉತ್ಸುಕರಾಗಿದ್ದರು.

ಈ ವೈಭವವನ್ನು ಹೆಚ್ಚಿಸಲು, ‘ ವಿಕ್ರಾಂತ್ ರೋಣ ‘ ಚಿತ್ರವನ್ನು ಈಗ ಉತ್ತರ ಭಾರತದಲ್ಲಿ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆ SKF ಪ್ರಸ್ತುತಪಡಿಸುತ್ತದೆ. ನಿರ್ದೇಶಕ ಅನುಪ್ ಭಂಡಾರಿಯವರ ಅದ್ಭುತ ದೃಷ್ಟಿಕೋನದಲ್ಲಿ ತೆಗೆದಿರುವ ಈ ಚಿತ್ರವು ಜನರಿಗೆ ಆಸನದ ಅಂಚಿನ ಅನುಭವವನ್ನು ಕೊಡಲು ಸಜ್ಜಾಗಿದೆ.

ಪ್ಯಾನ್ ವರ್ಲ್ಡ್ 3D ಚಿತ್ರವು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್, ಇಂಗ್ಲಿಷ್, ಇತ್ಯಾದಿಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಅನುಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವಾದ್ಯಂತ 3D ನಲ್ಲಿ ಬಿಡುಗಡೆಯಾಗಲಿದೆ, ಇದರಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಝೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿದ್ದು, ಜಾಕ್ ಮಂಜುನಾಥ್ ಅವರು ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಇನ್ವೆನಿಯೊ ಒರಿಜಿನ್ಸ್‌ನ ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ನೊಂದ ಹೆಣ್ಣಿನ ಕಥೆ ಸಾರಾ ವಜ್ರ ಈವಾರ ಬಿಡುಗಡೆ…

ಶ್ವೇತಾ ಶೆಟ್ಟಿ (ಆರ‍್ನಾ ಸಾಧ್ಯ)ಅವರ ನಿರ್ದೇಶನದ, ಸಾರಾ ಅಬೂಬಕ್ಕರ್ ಬರೆದ ಕಾದಂಬರಿ ಆಧಾರಿತ ಚಿತ್ರ “ಸಾರಾ ವಜ್ರ” ಈ ಶುಕ್ರವಾರ ತೆರೆಕಾಣುತ್ತಿದೆ

ಚಿತ್ರದ ಕಥೆ 19890ರಿಂದ ಆರಂಭವಾಗಿ ಪ್ರಸ್ತುತ ಕಾಲಘಟ್ಟದವರೆಗೆ ಬಂದು ನಿಲ್ಲುತ್ತದೆ. ತ್ರಿವಳಿ ತಲಾಖ್ ಪರಿಣಾಮವಾಗಿ ಹೆಣ್ಣು ಮಗಳೊಬ್ಬಳು ಅನುಭವಿಸುವ ಕಷ್ಟ, ನೋವುಗಳ ಚಿತ್ರಣವಿದು. ನಾಯಕಿ ಅನು ಪ್ರಭಾಕರ್ ಬ್ಯಾರಿ ಸಮಾಜದ ಹೆಣ್ಣುಮಗಳಾಗಿ ನಟಿಸಿದ್ದಾರೆ. 20ನೇ ವಯಸ್ಸಿನಿಂದ 60 ವರ್ಷದ ಮಹಿಳೆಯಾಗಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ಮಾಪಕ ದೇವೇಂದ್ರರೆಡ್ಡಿ, ನಿರ್ದೇಶಕರು ಬಂದು ಈ ಕಾದಂಬರಿ ಬಗ್ಗೆ ಹೇಳಿದರು. ನಾನು ಮೊದಲು ಒಪ್ಪಲಿಲ್ಲ. ಮತ್ತೆ ಬಂದು ಕೇಳಿದಾಗ, ಅನು ಪ್ರಭಾಕರ್ ಅವರು ನಾಯಕಿ ಅಂದಮೇಲೆ ಒಪ್ಪಿದೆ. ಬಡ ಕುಟುಂಬದ ಹೆಣ್ಣು ಮಕ್ಕಳು ಅನುಭವಿಸುವ ಕಷ್ಟದ ಕಥೆಯಿದು ಎಂದು ಹೇಳಿದರು.

ನಂತರ ಚಿತ್ರಕ್ಕೆ ಸಾಹಿತ್ಯ ರಚಿಸಿದ ಪತ್ರಕರ್ತ ಬಿಎಂ ಹನೀಫ್ ಅವರು, 40 ವರ್ಷಗಳ ಹಿಂದಿನ ಕಥೆ ಆದರೂ ಈಗಲೂ ಅನ್ವಯವಾಗುತ್ತದೆ. ಬೇರೆ ಸಮುದಾಯದ ಹೆಣ್ಣು ಮಕ್ಕಳು ಏನು ತೊಂದರೆ ಅನುಭವಿಸುತ್ತಿದ್ದಾರೆಂದು ಈ ಚಿತ್ರದಲ್ಲಿ ಹೇಳಲಾಗಿದೆ. ಅನು ಪ್ರಭಾಕರ್, ಸುಹಾನಾ ಸಯ್ಯದ್, ರೆಹಮಾನ್ ನೈಜವಾಗಿ ಅಭಿನಯಿಸಿದ್ದಾರೆ ಎಂದರು.

ನಾಯಕಿ ಅನು ಪ್ರಭಾಕರ ನಫೀಜಾ ಎಂಬ ಮಹಿಳೆಯ ಕಥೆಯಿದು. ಈ ಥರದ ಸಿನಿಮಾಗಳನ್ನು ಅವಾರ್ಡ್, ಫಿಲಂ ಫೆಸ್ಟಿವಲ್‌ಗಳಿಗೆ ಮಾಡುತ್ತಾರೆ, ಆದರೆ ನಿರ್ಮಾಪಕರು ಕಮರ್ಷಿಯಲ್ ಆಗಿ ಥಿಯೇಟರ್
ಗಳಲ್ಲೇ ರಿಲೀಸ್ ಮಾಡುತ್ತಿದ್ದಾರೆ, ಎಲ್ಲಾ ಹೆಣ್ಣು ಮಕ್ಕಳಿಗೂ ನಾಟುವಂಥ ಯೂನಿವರ್ಸಲ್ ಸಿನಿಮಾ. ಈ ಚಿತ್ರದಿಂದ ಹತ್ತು ಹೆಣ್ಣು ಮಕ್ಕಳಿಗಾದ್ರೂ ಧೈರ್ಯ ಬರಲಿ ಅನ್ನೋದೇ ನಮ್ಮ ಆಶಯ. ಸಿನಿಮಾ ನೋಡಿ ಹೊರ ಬಂದಮೇಲೆ ಒಂದು ನಗು ಇರುತ್ತದೆ. ಮಹಿಳೆ ಬರೆದ ಮಹಿಳಾ ಪ್ರದಾನ ಕಥೆ, ನಿರ್ದೇಶನವನ್ನೂ ಮಹಿಳೆಯೇ ಮಾಡಿರುವುದು ವಿಶೇಷ.

ಪುನೀತ್ ಅವರು ನಮ್ಮ ಚಿತ್ರಕ್ಕೆ ತುಂಬಾ ಸಪೋರ್ಟ್ ಮಾಡಿದ್ದರು. ಕಾಸರಗೋಡು ಕೇರಳದಲ್ಲಿ ಬ್ಯಾರಿ ಸಮುದಾಯ ವಾಸವಿರುವ ಜಾಗದಲ್ಲೇ ಚಿತ್ರೀಕರಣ ಮಾಡಿದ್ದೇವೆ. ಅವರು ಕನ್ನಡ, ಬ್ಯಾರಿ ಮಿಕ್ಸ್ ಮಾಡಿ ಮಾತಾಡ್ತಾರೆ. ನಫೀಜಾಗೆ ಚಿಕ್ಕ ವಯಸಿನಲ್ಲೇ ಮದುವೆಯಾಗಿ 60 ವರ್ಷದವವಳಾಗುವವರೆಗೆ ಕಥೆ ಸಾಗುತ್ತದೆ ಎಂದು ಹೇಳಿದರು.

ಗಾಯಕಿ ಸುಹಾನಾ ಇಲ್ಲಿ ನಾಯಕಿಯ ಸ್ನೇಹಿತೆಯಾಗಿ ನಟಿಸಿದ್ದಾರೆ. ರೆಹಮಾನ್ ಹಾಸನ್ ಗಂಡನಾಗಿ, ಸುಧಾ ಬೆಳವಾಡಿ, ರಮೇಶ್ `ಭಟ್ ತಂದೆ, ತಾಯಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕತೆ-ಸಂಭಾಷಣೆಯನ್ನು ನರೇಂದ್ರಬಾಬು ರಚಿಸಿದ್ದಾರೆ. ಛಾಯಾಗ್ರಹಣ ಪರಮೇಶ್.ಸಿ.ಎಂ, ನೃತ್ಯ ಮದನ್-ಹರಿಣಿ ಅವರದಾಗಿದೆ. ಸಂಭ್ರಮ ಡ್ರೀಮ್ ಹೌಸ್ ಮತ್ತು ಎಂ.ದೇವೇಂದ್ರ ರೆಡ್ಡಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ಆ ನಾಕು ಮಂದಿ ಪತ್ರಕರ್ತರಿಗೆ ಗುಂಡು ಹೊಡೆದಂತೆ ಮಾತಾಡಿದ್ದರು ಆನೇಕಲ್ ಬಾಲರಾಜ್: ಚಕ್ರವರ್ತಿ ಚಂದ್ರಚೂಡ್ ಹೇಳಿದ ಸತ್ಯ…

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ನಿಧನರಾಗಿದ್ದಾರೆ. ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಸರು ಸಂಪಾದಿಸಿದ್ದ ಅವರು ತಮ್ಮ ಪುತ್ರ ಸಂತೋಷ್ ನನ್ನು ಹೀರೋ ಮಾಡುವ ಸಲುವಾಗಿ ಅನೇಕ ಹೊಸ ನಿರ್ದೇಶಕರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಅವರಿಲ್ಲ ಎಂಬ ಮಾತು ಕೇಳಿದ ಅದೆಷ್ಟೋ ಕಲಾವಿದರು, ನಿರ್ದೇಶಕರು ನಿರ್ಮಾಪಕರು ಅಷ್ಟೆ ಯಾಕೆ ಪತ್ರಕರ್ತರು ಕೂಡ ಹಳೆಯ ದಿನಗಳನ್ನು ಮೆಲುಕು ಹಾಕಿದ್ದು ನಿಜ. ಅವರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ನಿರ್ಮಾಣದ ಸಿನಿಮಾಗಳಿವೆ. ಬಿಟ್ಟು ಹೋದ ನೆನಪುಗಳಿವೆ. ಆ ಕುರಿತು ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಬರಹ ರೂಪದಲ್ಲಿ‌ ನೆನಪಿಸಿಕೊಂಡಿದ್ದಾರೆ…

ಓವರ್ ಟು ಚಕ್ರವರ್ತಿ ಚಂದ್ರಚೂಡ…

ಆನೇಕಲ್ ಬಾಲಣ್ಣ ….
ಅದೊಂದು ನಂಬರ್ ಗೆ ಕರೆ ಮಾಡಿದರೆ ಸಾಕು ಕುತ್ತಿಗೆ ತನಕ ಏನೇ ಬಂದಿದ್ರೂ ಚಕ್ರಿ ಫೋರ್ತ್ ಬ್ಲಾಕ್ ಬಾ ಅನ್ನುವ ಜೀವ.,.
ನಾಲ್ಕು ಮಂದಿ ಪತ್ರಕರ್ತರು ಬಾಲಣ್ಣನಿಗೆ ಯಾವುದೇ ಕಾರಣಕ್ಕೂ ಚಕ್ರವರ್ತಿ ಎಂಬ ಚಂದ್ರಚೂಡ್ ಗೆ ಸಿನಿಮಾ ಕೊಡಬಾರದು ಡೈರೆಕ್ಟರ್ ಆಗಿಬಿಡ್ತಾನಾ ಅಂತ ತಿದಿ ಒತ್ತಿಕೊಂಡು ಕುಳಿತಿದ್ದರೂ – ನಂಗೊತ್ತು ಚಕ್ರಿ ಯಾರತ್ರನೂ ಸಹಾಯಕನ ಕೆಲಸನೂ ಮಾಡಿಲ್ಲ.ಯಾವ ಸಿನಿಮಾದಲ್ಲೂ ಕೆಲಸ ಮಾಡಿಲ್ಲ.ಆದರೆ ಮಾತು ಕೊಟ್ಟಿದೀನಿ ಸಿನಿಮಾ ಕೊಡ್ತೀನಿ ರಾಜಕುಮಾರರು ತೀರ್ಕೊಂಡ ಒಂದೇವಾರಕ್ಕೆ ಎಂತ ಕಥೆ ಹೇಳಿದಾನೆ ಅಂತ ಆ ನಾಕು ಮಂದಿ ಪತ್ರಕರ್ತರಿಗೆ ಗುಂಡುಹೊಡೆದಂತೆ ಮಾತಾಡಿ ಗುಂಡು ಹೊಡೆಸಿ ಹೇಳಿ ಕಳಿಸಿದ್ಥರು.( ಈಗೀ ಪತ್ರಕರ್ತರು ನನಗೆ ಪರಮಾಪ್ತರು)
3ಸಿ ಕ್ಯಾಮರಾ ನೆಗೆಟಿವ್ ಕಾಲವದು ಅದ್ಧೂರಿ ಕಾರ್ಯಕ್ರಮಗಳು ಚೆನ್ಯೈಲಿ ನಡೆವ ಕಥೆ ಅವರ ಮಗ ಸಂತೋಷ್ ಹೀರೋ …


ಸಿತಾರಾ ಪೊನ್ನಾಂಬಲಂ ತಲೈವಾಸಲ್ ವಿಜಯ್ ಅನುರಾಧ ಬುಲೆಟ್ ಪ್ರಕಾಶ್ ಶಕೀಲಾ ಮುಂತಾದವರ ತಾರಾಗಣದ ಸಿನಿಮಾ ಅದು ಜನ್ಮ.ಕನ್ನಡ ತಮಿಳು ಎರಡು ಭಾಶೆಗಳಲ್ಲಿ ಚಿತ್ರೀಕರಿಸಿದ್ದೆ.
ಬಾಲಣ್ಣನದೊಂದೇ ಸಮಸ್ಯೆ ಬೇರೆ ನಿರ್ಮಾಪಕರ ಥರ ಬೇಗ ಬೇಗ ಸಿನಿಮಾ ಮುಗಿಸಲ್ಲ .ಒಂದು ಸಿನಿಮಾ ಅಂದರೆ ಗರಿಷ್ಠ ನಾಕು ವರುಶ .ಉದಯ ಟೀವಿಗೆ ಸಿನಿಮಾ ಸೇಲಾಯ್ತು ಬಿಡುಗಡೆಯೂ ಆಗಿ ನಾಕುವಾರ ದ ಕಲೆಕ್ಷನ್ನು….
ಈಗಿನ sunext ಆಗಿನ ಉದಯ ಟೀವಿಯವರು ಜಯಲಲಿತಾ ಹೋಲುವ ಅನುರಾಧ ಪಾತ್ರ ಮತ್ತು ಕರುಣಾನಿಧಿ ಹೋಲುವ ಪೊನ್ನಾಂಬಲಂ ನ ಮೂರು ದೃಶ್ಯಗಳು .ನಾಯಕ ಗಾಜನೂರಿನಿಂದ ರಜನೀಕಾಂತ್ ರ ಚೆನ್ನೈನ ಮನೆಗೆ ಹೋಗುವ ದೃಶ್ಯಗಳ ತೆಗೆಯಿರಿ ಅಂದರು.
ಉದಯದ ಮಾಲೀಕರಿಗೆ ಆಪ್ತರಾಗಿದ್ದ ಬಾಲಣ್ಣ ಚಕ್ರಿ ತೆಗಿತೀಯ ಅಂದರು ಬಾಲಣ್ಣ ಸಿನಿಮಾದ ಆತ್ಮವೇ ಹೋಗುತ್ತೆ ಅಣ್ಣಾವ್ರ ಸಾವಿನ ದಿನ,ನಡೆಯುವ ಘಟನೆಗಳಿಗೆ ಲಿಂಕಿರಲ್ಲ ಅಂದುಬಿಟ್ಟೆ.


ಸೀದಾ ಸೆಲ್ವಂ ರಿಗೆ ಫೋನು ಮಾಡಿ ನಮ್ ಡೈರೆಕ್ಟರ್ ಬೇಡ ಅಂತಿದಾನೆ.ಜನ್ಮದ ವ್ಯವಹಾರ ನಾ ಬೇರೆ ಥರ ಮಾಡ್ತೀನಿ ಬಿಡಿ ಅಂದು ಬಿಟ್ಟರು .ಬಹುತೇಕ ಸಿನಿಮಾಗೆ ಹಾಕಿದ ಹಣನೇ ಕೊಡ್ತೀನಿ ಅಂದರೂ ಬೇಡ ಅನ್ನುವ ನಿರ್ಮಾಪಕ ಅವರು.
ಅದಾದ ಮೇಲೆ ನೀ ಯಾವಾಗ ಡೈರಕ್ಟ್ ಮಾಡ್ತೀಯ ಹೇಳು ಆಗ ಬಾ ಕಥೆನೂ ಹೇಳಬೇಡ ಸಿನಿಮಾ ಶುರುಮಾಡೋಣ ಅನ್ನುತ್ತಿದ್ದರು.


ತುಂಬಿದ ಪತ್ರಿಕಾಗೋಷ್ಠಿಯಲಿ ಸೋತರೆ ನಾನು ಹೊಣೆ ಗೆದ್ದರೆ ಚಕ್ರಿ ಹೊಣೆ ಅಂತ ಘೋಷಿಸಿದ್ದು ಪತ್ರಿಕೆಗಳ ತಲೆ ಬರಹ .ಜನ್ಮ ಟೈಟಲ್ ಟ್ರಾಕ್ ಹಾಡಿನ ಅಷ್ಟೂ ಸಾಹಿತ್ಯ ವಿಜಯಕರ್ನಾಟಕ ಪತ್ರಿಕೆಯಲ್ಲಿ ದೇವಶೆಟ್ಟಿ ಮಹೇಶ್ ಅವರ ಪ್ರೀತಿಗೆ ಅಚ್ಚಾಗಿತ್ತು.
“ನಿನ್ನ ತಲೇನಾ ನಿನಗೋಸ್ಕರ ಬಳಸಿಕೋ ಒಂದು ರೌಂಡ್ ಬರ್ತೀಯ “ಅನ್ನುತ್ತಿದ್ದ ಬಾಲಣ್ಣ ಬೆಳಗಿನ ಜಾವದ ವಾಕಿಂಗ್ ಮುಗಿಸಿ ಬರುವಾಗ ಬೈಕೊಂದು ಗುದ್ದಿದ ಅಪಘಾತದಲಿ ಅಸುನೀಗಿದ್ದಾರೆ.ಅವರಿಲ್ಲದಿರುತ್ತಿದ್ದರೆ ನಾನು ಪತ್ರಕರ್ತನಾಗಿಯೇ ಉಳಿದುಬಿಡುತ್ತಿದ್ದೆ .
ಬಾಲಣ್ಣ ತುಂಬಾ ಜನರಿಗೆ ಮೆಟ್ಟಿಲಾದ ನಿರ್ಮಾಪಕ. ಹೋಗಿಬನ್ನಿ…
ನಮಸ್ಕಾರಗಳು…

Categories
ಸಿನಿ ಸುದ್ದಿ

ಫಿಲಂ ಚೇಂಬರ್ ಚುನಾವಣೆಗೆ ಸಾ.ರಾ.ಗೋವಿಂದು ತಂಡ ನಾಮಪತ್ರ ಸಲ್ಲಿಕೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೇ 28ರಂದು ಚುನಾವಣೆ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಇಂದು ಹಿರಿಯ ನಿರ್ಮಾಪಕ, ಹೋರಾಟಗಾರ ಸಾ.ರಾ.ಗೋವಿಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.


ಅಧ್ಯಕ್ಷನಾಗಿದ್ದಾಗ ನಾನು ಮಾಡಿದ ಕೆಲಸ ಎಲ್ಲರಿಗೂ ಗೊತ್ತಿದೆ. ಸ್ನೇಹಿತರ ಒತ್ತಾಯದ ಮೇರೆಗೆ ಚುನಾವಣೆಗೆ ನಿಂತಿದ್ದೇನೆ. ಚುನಾವಣೆಯನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳೋಣ. ಗೆದ್ದವರು ಕೆಲಸ ಮಾಡೋಣ. ಸೋತವರು ಗೆದ್ದವರಿಗೆ ಬೆನ್ನೆಲುಬಾಗಿ ನಿಲ್ಲೋಣ ಎಂಬ ಕ್ರೀಡಾ ಮನೋಭಾವ ಪ್ರದರ್ಶಿಸಿದರು.


ಸಾ.ರಾ.ಗೋವಿಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದರೆ, ಅವರ ತಂಡದಲ್ಲಿರುವ ಚಿತ್ರಲೋಕ ವೀರೇಶ್ ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಕರಿಸುಬ್ಬು (ವಿ.ಸುಬ್ರಮಣಿ)ನಿರ್ಮಾಪಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ.

ವಿತರಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಎಸ್.ಜ್ಞಾನೇಶ್ವರ ಐತಾಳ್, ಪ್ರದರ್ಶಕರ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಪಿ.ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
ಕೆ.ಸಿ.ಎನ್. ಕುಮಾರ್ (ಎಂ.ಎನ್.ಕುಮಾರ್) ವಿತರಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ, ಪ್ರದರ್ಶಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಎಲ್.ಸಿ.ಕುಶಾಲ್ ಹಾಗೂ ಗೌರವ ಖಜಾಂಚಿ ಸ್ಥಾನಕ್ಕೆ ಬಿ.ಕೆ.ಜಯಸಿಂಹ ಮುಸರಿ ನಾಮಪತ್ರ ಸಲ್ಲಿಸಿದ್ದಾರೆ.


ಮೇ 28ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

Categories
ಸಿನಿ ಸುದ್ದಿ

ಮೇ 28ಕ್ಕೆ ಫಿಲ್ಮ್ ಚೇಂಬರ್ ಚುನಾವಣೆ…ನಾಮಪತ್ರ ಸಲ್ಲಿಸಿದ ಭಾ.ಮಾ.ಹರೀಶ್

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಇದೇ ಮೇ 28ರಂದು ಚುನಾವಣೆ ನಡೆಯಲಿದ್ದು, ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಭಾ.ಮ. ಹರೀಶ್​ ನಾಮಪತ್ರ ಸಲ್ಲಿಸಿದ್ದಾರೆ.

ಎರಡು ವರ್ಷಕ್ಕೊಮ್ಮೆ ವಾಣಿಜ್ಯ ಮಂಡಳಿ ಚುನಾವಣೆ ನಡೆಯುತ್ತದೆ. ಆದರೆ ಕೊರೋನಾ ಕಾರಣದಿಂದ ಚುನಾವಣೆ ಮುಂದೂಡಲಾಗಿತ್ತು.


ಹೀಗಾಗಿ ಅಧ್ಯಕ್ಷರ ಸ್ಥಾನದಲ್ಲಿ ಜೈರಾಜ್​ ಅವರೇ ಮುಂದುವರಿದಿದ್ದರು. ಈಗ ಮುಂದಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆಗಾಗಿ ಮತ್ತೆ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿ ಭಾ.ಮ.ಹರೀಶ್ ಹೆಸರು ಕೇಳಿಬರುತ್ತಿದೆ.

Categories
ಸಿನಿ ಸುದ್ದಿ

ಚಿತ್ರರಂಗಕ್ಕೆ ಬರಲು ಚಂದದ ಬೆಡಗಿ ರೆಡಿ; ಈ ಬ್ಯೂಟಿ ಹೆಸರು ಆರ್ತಿ ಬೇಡಿ…

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಹೈ ಸ್ಕೋರ್ ಪಂದ್ಯ ಅಭಿಮಾನಿಗಳನ್ನು ಸೀಟಿನ ತುದಿಗೆ ತಂದು ಕುರಿಸಿತ್ತು. ಈ ಪಂದ್ಯದ ಮಧ್ಯೆ ಎಲ್ಲರ ಗಮನಸೆಳೆದಿದ್ದು ಆ ಬ್ಯೂಟಿ. ಅವ್ರೇ ಆರ್ತಿ ಬೇಡಿ. ಈ ಪಂದ್ಯದಲ್ಲಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದ ಆರ್ತಿ ಬೇಡಿ ರಾತ್ರೋ ರಾತ್ರಿ ಸೆನ್ಸೇಷನಲ್ ಸ್ಟಾರ್ ಆಗಿಬಿಟ್ಟರು‌. ಇಂಟರ್ ನೆಟ್ ಜಗತ್ತಿನಲ್ಲಿ ಎಲ್ಲೆಡೆ ಆರ್ತಿ ಬೇಡಿ ಪಟಗಳು ವೈರಲ್ ಆದ ನಂತ್ರ ಈಕೆ ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಆಗಿಬಿಟ್ಟರು.

ಆರ್ತಿ ಬೇಡಿ ಖ್ಯಾತಿ ಈಗ ದುಪ್ಪಟ್ಟಾಗಿದೆ. ಈ ನಡುವೆ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡಲು ಈ ಬ್ಯೂಟಿ ತಯಾರಾಗ್ತಿದ್ದಾಳೆ. ಹಲವು ನಿರ್ಮಾಪಕರು, ನಿರ್ದೇಶಕರನ್ನು ಅಪ್ರೋಚ್ ಆಗಿರುವ ಆರ್ತಿ ಕಂಟೆಂಟ್ ಹಾಗೂ ಕ್ವಾಲಿಟಿ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದು, ಈಗಾಗಲೇ ಕೆಲ ಕಥೆಗಳನ್ನು ಓದುತ್ತಿದ್ದು, ಆ ಕಥೆಗಳು ಇಷ್ಟವಾದಲ್ಲಿ ಬಣ್ಣ ಹಚ್ಚಿ ಕ್ಯಾಮೆರಾ ಎದುರು ಹಾಜರಾಗಲಿದ್ದಾರೆ.

ಆರ್ತಿ ಬೇಡಿ ಹಿಮಾಲಯ, ಒಲಾ, ಐಸಿಐಸಿಐ ಬ್ಯಾಂಕ್, ವೈಲ್ಡ್ ಸ್ಟೋನ್ ನಂತಹ 35-40ಕ್ಕೂ ಜಾಹೀರಾತುಗಳಲ್ಲಿ ನಟಿಸ್ತಿದ್ದಾರೆ. ಸದ್ಯ ಆರ್ತಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಯಾಗಲು ಅಖಾಡ ಸಿದ್ಧ ಮಾಡಿಕೊಳ್ತಿದ್ದು, ಯಾವ ರೀತಿ ಸಿನಿಮಾವನ್ನು ಆಯ್ಕೆ ಮಾಡ್ತಾರೆ ಅನ್ನೋದು ಸದ್ಯದ ಕುತೂಹಲ.

Categories
ಸಿನಿ ಸುದ್ದಿ

ಮ್ಯಾನ್ ಆಫ್ ದ ಮ್ಯಾಚ್ ಪ್ರತಿಷ್ಠಿತ ನ್ಯೂಯಾರ್ಕ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್‍ಗೆ ಆಯ್ಕೆ: ಇದು ಸತ್ಯಪ್ರಕಾಶ್ ಸಿನಿಮಾ

ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಡಿ ಸತ್ಯ ಪ್ರಕಾಶ್ ಅವರ ಹೊಸ ಸಿನಿಮಾ, ಮ್ಯಾನ್ ಆಫ್ ದ ಮ್ಯಾಚ್ ಪ್ರತಿಷ್ಠಿತ ನ್ಯೂಯಾರ್ಕ್ ಇಂಡಿಪೆಂಡೆಂಮಟ್ ಪಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾಗಿದೆ. ಫೆಸ್ಟಿವಲ್ ಆಫ್ ಸಿನಿಮಾ, ತನ್ನ ಆರನೇ ವರ್ಷಕ್ಕೆ ಪ್ರವೇಶಿಸುತ್ತಿದ್ದು, ಆಗಸ್ಟ್ 5 ರಿಂದ 14, 2022 ರಿಂದ ನಡೆಯಲಿದೆ. ಕೊರೋನಾ ನಂತರ ಮೊದಲ ಬಾರಿಗೆ, ಫಿಸಿಕಲ್ ಆಗಿ ನಡೆಯಲಿರುವ ಫೆಸ್ಟಿವಲ್, ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿರುವ ರೀಗಲ್ ಯೂಎ ಮಿಡ್‌ವೇ ಥಿಯೇಟರನಲ್ಲಿ ಚಿತ್ರೋತ್ಸವ ನಡೆಯಲಿದೆ.

ಚಲನಚಿತ್ರವನ್ನು ನೋಡಿದ ವಿಮರ್ಶಕ, ಲಾರೆನ್ಸ್ ವೈಟ್ನರ್, ನಿರ್ದೇಶಕರನ್ನ ಅಭಿನಂದಿಸಿ ಟ್ವೀಟ್ ಮಾಡಿ ‘ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್‍ಗಾಗಿ ನೋಡಿದ ಒಂದು ಅದ್ಭುತವಾದ ಭಾರತೀಯ ವ್ಯಂಗ್ಯಭರಿತ ಚಿತ್ರ. … ನಾನು ಅದಕ್ಕೆ 10/10 ನೀಡಿದ್ದೇನೆ’ ಎಂದು ಟ್ವೇಟ್ ಮಾಡಿದ್ದಾರೆ.

ರಾಮಾ ರಾಮಾ ರೇ ಮತ್ತು ಒಂದಲ್ಲಾ ಎರಡಲ್ಲಾ ಸಿನಿಮಾಗಳ ಯಶಸ್ಸಿನ ನಂತರ ಸತ್ಯ ಪ್ರಕಾಶ್ ನಿರ್ದೇಶಿಸಿರುವ ಮೂರನೇ ಚಿತ್ರ, ಮ್ಯಾನ್ ಆಫ್ ದಿ ಮ್ಯಾಚ್ . ಸತ್ಯ ಮತ್ತು ಮಯೂರ ಪಿಕ್ಚರ್ಸ್ ಸಹಯೋಗದಲ್ಲಿ ಪಿಆರ್‌ಕೆ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ.

ಆಡಿಷನ್‌ಗೆ ಕರೆದ ನಿರ್ದೇಶಕ, ಆಡಿಷನ್‌ಗೆ ಹಾಜರಾಗುವ ಕಲಾವಿದರ ನಡುವೆ ಘರ್ಷಣೆಯನ್ನು ಸೃಷ್ಟಿಸುವ ಮೂಲಕ ಚಲನಚಿತ್ರವನ್ನು ಮಾಡುತ್ತಾರೆ. ದೊಡ್ಡ ಪಾತ್ರವರ್ಗ ಹೊಂದಿರುವ ಮತ್ತು ಪ್ರಸ್ತುತ ಸಾಮಾಜಿಕ ಸಂಘರ್ಷಗಳನ್ನು ಹಾಸ್ಯಮಯ ಮತ್ತು ವಿಡಂಬನಾತ್ಮಕ ರೀತಿಯಲ್ಲಿ ಸ್ಪರ್ಶಿಸುವ ಚಿತ್ರವಾಗಿದೆ.

ನಟರಾಜ್ ಎಸ್ ಭಟ್ ಮತ್ತು ಧರ್ಮಣ್ಣ ಕಡೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ, ಇಬ್ಬರೂ ರಾಮಾ ರಾಮಾ ರೇ ನಂತರ ಸತ್ಯ ಪ್ರಕಾಶ್ ಅವರೊಂದಿಗೆ ಒಟ್ಟಿಗೆ ಬರುತ್ತಿದ್ದಾರೆ. ಅಥರ್ವ ಪ್ರಕಾಶ್ ಮತ್ತು ಮಯೂರಿ ನಟರಾಜ್ ಅವರಂತಹ ಹೊಸಬರೊಂದಿಗೆ ವೀಣಾ ಮತ್ತು ಸುಂದರ್ ಕೂಡ ಈ ಚಿತ್ರದಲ್ಲಿ ತಮ್ಮ ನಿಜ ಜೀವನದ ಪಾತ್ರವನ್ನು ನಿರ್ವಹಿಸಿದ್ದಾರೆ.
ವಾಸುಕಿ ವೈಭವ್ ಸಂಗೀತ ಸಂಯೋಜಿಸುವುದರ ಜೊತೆಗೆ, ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರವು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ.
ಮೇ 2 ರಂದು ಟ್ರೇಲರ್ ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತ್ತು.