Categories
ಸಿನಿ ಸುದ್ದಿ

ನಾಲ್ಕು ರಾಜ್ಯದಲ್ಲೂ ರೋಣನ ಪ್ರಚಾರದ ಸಂಚಾರ: ಜುಲೈ 28ಕ್ಕೆ ರಿಲೀಸ್

ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ತನ್ನ ಟ್ರೇಲರ್ ಮೂಲಕವೇ ವೀಕ್ಷಕರನ್ನು ಹೊಸದೊಂದು ಪ್ರಪಂಚಕ್ಕೆ ಕರೆದುಕೊಂಡು ಹೋಗಿರುವ ಚಿತ್ರ ವಿಕ್ರಾಂತ್ ರೋಣ, ಕಿಚ್ಚ ಸುದೀಪ್ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿರುವ ಈ ಚಿತ್ರ ಕನ್ನಡ,ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಪ್ಯಾನ್ ಇಂಡಿಯಾ ಸಿನಿಮಾ.

ಜುಲೈ 28ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿರುವ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ರಿಲೀಸ್ ಇವೆಂಟ್ ಇದೀಗ ದಕ್ಷಿಣ ಭಾರತದ 4 ರಾಜ್ಯಗಳಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ.

ಬುಧವಾರ ಬೆಂಗಳೂರಿನ ಒರಾಯನ್ ಮಾಲ್ ಹಾಗೂ ಗುರುವಾರ ಮುಂಬೈನ ಜಹುವಿನ ಪಿವಿಆರ್ ಥೇಟರಿನಲ್ಲಿ ಮಾದ್ಯಮ ಸಂವಾದ ಹಾಗೂ ಟ್ರೇಲರ್ ಇವೆಂಟ್ ನಡೆದಿದೆ. ಶುಕ್ರವಾರ ಚೆನ್ನೈನ ಸತ್ಯಂ ಸಿನಿಮಾಸ್ ನಲ್ಲಿ ಹಾಗೂ ಕೊಚ್ಚಿಯ ಲುಲು ಮಾಲ್ ನಲ್ಲಿ ಇದೇ ಕಾರ್ಯಕ್ರಮ ನಡೆಯಲಿದೆ.

ಶನಿವಾರ ಹೈದರಾಬಾದ್‌ನ ಬಂಜಾರ ಹಿಲ್ಸ್ ನ ಆರ್.ಕೆ. ಸಿನಿಮಾಸ್ ನಲ್ಲಿ ಟ್ರೇಲರ್ ರಿಲೀಸ್ ಹಾಗೂ ಪ್ರೆಸ್ ಮೀಟ್ ನಡೆಯಲಿದೆ. ಈ ನಾಲ್ಕೂ ರಾಜ್ಯಗಳಲ್ಲಿ ಸುದೀಪ್ ಹಾಗೂ ಜಾಕ್ವೆಲಿನ್ ಸಿನಿರಸಿಕರನ್ನು ಭೇಟಿಯಾಗುವ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Categories
ಸಿನಿ ಸುದ್ದಿ

ಶಿವಣ್ಣನ ಹೊಸ ಸಿನಿಮಾಗೆ ಚಾಲನೆ: ರಾಕ್ ಲೈನ್ ನಿರ್ಮಾಣದಲ್ಲಿ‌ ಭಟ್ಟರ ನಿರ್ದೇಶನ…

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ರಾಕ್ ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿರುವ “ಪ್ರೊಡಕ್ಷನ್ ನಂ 47” ಚಿತ್ರದ ಮುಹೂರ್ತ ಸಮಾರಂಭ ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆಯಿತು.

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅವರು ನಟಿಸುತ್ತಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ.

ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಗೀತಾ ಶಿವರಾಜಕುಮಾರ್ ಅವರು ಆರಂಭಫಲಕ ತೋರಿದರು. ಪುಷ್ಪಕುಮಾರಿ ವೆಂಕಟೇಶ್ ಕ್ಯಾಮೆರಾ ಚಾಲನೆ ಮಾಡಿದರು.

ರಾಕ್ ಲೈನ್ ವೆಂಕಟೇಶ್ ಅವರ ಸಂಸ್ಥೆ ಅಂದರೆ ನನಗೆ ನಮ್ಮ ಮನೆಯ ಸಂಸ್ಥೆ ಇದ್ದ ಹಾಗೆ. ನನ್ನ ಅವರ ಸ್ನೇಹ ಮೂವತ್ತು ವರ್ಷಕ್ಕೂ ಹಳೆಯದು. ಸ್ನೇಹಿತರಾಗಿ ಬಂದು ನಿರ್ಮಾಪಕರಾದರು. ಇಂತಹ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದು ಹಾಗೂ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಅಭಿನಯಿಸುತ್ತಿರುವುದು ಸಂತಸವಾಗಿದೆ.
ಇನ್ನು ಭಾರತದ ಖ್ಯಾತ ನೃತ್ಯಗಾರ, ನಟ ಪ್ರಭುದೇವ್ ಅವರ ಜೊತೆ ಅಭಿನಯಿಸುತ್ತಿರುವುದು ಖುಷಿ ತಂದಿದೆ. ಜುಲೈ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಯೋಗರಾಜ್ ಭಟ್ ಉತ್ತಮ ಕಥೆ ಸಿದ್ದಮಾಡಿಕೊಂಡಿದ್ದಾರೆ.‌ ಫನ್, ಎಮೋಷನ್ ಹಾಗೂ ಆಕ್ಷನ್ ಡ್ರಾಮ ಎಲ್ಲಾ ರೀತಿಯ ಅಂಶಗಳಿರುವ ಕಥೆಯಿದು.
ಎಲ್ಲರ ಮನಸ್ಸಿಗೂ ಚಿತ್ರ ಹತ್ತಿರವಾಗುತ್ತದೆ ಎಂದು ಶಿವರಾಜಕುಮಾರ್ ತಿಳಿಸಿದರು.

ಇವತ್ತು ನನಗೆ ತುಂಬಾ ಸಂತೋಷವಾಗಿದೆ.‌ ಸಿನಿಮಾ ನಿರ್ಮಾಣ ಮಾಡಿ ತುಂಬಾ ವರ್ಷವಾಗಿತ್ತು. ಕೊರೋನ ನಂತರ ನಮ್ಮ‌ ಸಂಸ್ಥೆಯ ಮೊದಲ ಚಿತ್ರವಿದು. ಅದರಲ್ಲೂ ಶಿವಣ್ಣ ಅವರ ಜೊತೆ ಮಾಡುತ್ತಿರುವುದು ಖುಷಿಯ ವಿಚಾರ. ಅವರ ಚಿತ್ರ ಮಾಡಲು ಒಳ್ಳೆಯ ಕಥೆ ಬೇಕಿತ್ತು. ಯೋಗರಾಜ್ ಭಟ್ ಇವತ್ತಿನ ಜನರಿಗೆ ಬೇಕಾದಂತಹ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಹೊಟ್ಟೆ ತುಂಬಾ ನಕ್ಕುನಗಿಸುವ ಚಿತ್ರವಿದು. ಕೊನೆಗೆ ಉತ್ತಮ ಸಂದೇಶ ನೀಡುವ ಚಿತ್ರವೂ ಹೌದು.


ಇಂತಹ ಒಳ್ಳೆಯ ಕಥೆ ನನಗೆ ಸಿಕ್ಕಿರುವುದು ಸಂತೋಷ. ಪ್ರಭುದೇವ ನಮ್ಮ ಚಿತ್ರದಲ್ಲಿ ನಟಿಸುತ್ತಿರುವುದು‌ ಕೂಡ ಸಂತಸ ತಂದಿದೆ. ಎಲ್ಲಾ ಕೂಡಿ ಬರಬೇಕು ಅಂತರಲ್ಲಾ ಹಾಗೆ. ಯೋಗರಾಜ್ ಭಟ್ ಅವರ ನಿರ್ದೇಶನ, ವಿ.ಹರಿಕೃಷ್ಣ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಶಿವರಾಜಕುಮಾರ್ – ಪ್ರಭುದೇವ ಅವರ ನಟನೆ ಮತ್ತು ನೃತ್ಯ ಇಷ್ಟೆಲ್ಲ ಉತ್ತಮ ಅಂಶಗಳಿರುವ ಈ ಚಿತ್ರ ಜನರ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು, ನಾನು ಒಬ್ಬ ಪ್ರೇಕ್ಷಕನಾಗಿ ಈ ಚಿತ್ರಕ್ಕಾಗಿ ಕಾಯುತ್ತಿರುವೆ ಎಂದರು.

ನಾನು, ನಿರ್ಮಾಪಕರಿಗೆ ಕಥೆ ಹೇಳುವಾಗ, ನಾವು ಯಾವಾಗ ನೀರು ಕುಡಿಯುತ್ತೇವೊ, ಆಗೆಲ್ಲಾ ಈ ಚಿತ್ರ ನೆನಪಿಗೆ ಬರಬೇಕು ಅಂತಹ ಕಥೆ ಇದು ಎಂದು ಹೇಳಿದ್ದೆ. ಆ ನಂತರ ಇನ್ನೊಂದು ಕಥೆ ಕೂಡ ಮಾಡಿಕೊಂಡಿದ್ದೆ‌. ಆದರೆ ರಾಕ್ ಲೈನ್ ಅವರು , ಅವತ್ತು ನೀರಿನ ಕಥೆ ಹೇಳಿದ್ದಿರಲ್ಲಾ ಅದೇ ಕಥೆ ಸಿನಿಮಾ ಮಾಡಿ ಎಂದರು.


ನಾನು ಮೊದಲಿನಿಂದಲೂ ಶಿವಣ್ಣನ ಅಭಿಮಾನಿ. ಆನವಟ್ಟಿಯಲ್ಲಿ ರಥಸಪ್ತಮಿ ಚಿತ್ರವನ್ನು ಜನಜಂಗುಳಿಯಲ್ಲಿ ನೋಡಿದ್ದು ಈಗಲೂ ನೆನಪಿದೆ‌.
ಶಿವಣ್ಣ ಅವರಿಗೆ ಎರಡು ವರ್ಷಗಳಿಂದ ಕಥೆ ಹೇಳುತ್ತಾ ಬಂದಿದ್ದೀನಿ. ಬರೆಯುವುದು ಬದಲಾವಣೆ ಮಾಡುವುದು ಹೀಗೆ. ಎರಡು ವರ್ಷದ ನಂತರ ಗಟ್ಟಿ ಕಥೆ ಸಿದ್ದ ಮಾಡಿಕೊಂಡಿದ್ದೇವೆ. ಫನ್, ಎಮೋಷನ್ ಜೊತೆಗೆ ತುಂಬಾ ಬ್ರಿಲಿಯೆಂಟ್ ಆದ ಆಕ್ಷನ್ ಡ್ರಾಮ ಎನ್ನಬಹುದು. ನಾನು ಈ ಚಿತ್ರದಲ್ಲಿ ತಂತ್ರಜ್ಞನಿಗಿಂತ ಹೆಚ್ಚಾಗಿ ಪ್ರೇಕ್ಷಕನಾಗಿ ಕೆಲಸ ಮಾಡುತ್ತಿದ್ದೀನಿ. ನನ್ನ ಹೆಮ್ಮೆಯ ಕ್ಷಣ ಇದು.
ಶಿವರಾಜಕುಮಾರ್ ಹಾಗೂ ಪ್ರಭುದೇವ ಇಬ್ಬರೂ ಉತ್ತಮ ನಟರು. ಅವರಿಬ್ಬರು ನಮ್ಮ ಚಿತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹ ಅಪಾರ. ಇಂತಹ ದಿಗ್ಗಜರ ಜೊತೆ ಕೆಲಸ ಮಾಡಿ ನಾನು ಏನಾದರೂ ಕಲಿಯುತ್ತೀನಿ ಎಂದರು ನಿರ್ದೇಶಕ ಯೋಗರಾಜ್ ಭಟ್.

Categories
ಸಿನಿ ಸುದ್ದಿ

ಆರ್ಕೇಸ್ಟ್ರಾದಲ್ಲಿ ಡಾಲಿಯ ಹಾಡು-ಪಾಡು! ಸಿನಿಮಾ ಟ್ರೇಲರ್ ರಿಲೀಸ್…

ಗಣೇಶನ ಹಬ್ಬ, ಕನ್ನಡ ರಾಜ್ಯೋತ್ಸವ, ಅಣ್ಣಮ್ಮ, ಮದುವೆ ಹೀಗೆ ಯಾವುದೇ ಕಾರ್ಯಕ್ರಮಗಳಲ್ಲಿ ಜನಪ್ರಿಯ ಕಾರ್ಯಕ್ರಮ “ಆರ್ಕೇಸ್ಟ್ರಾ” ಇದ್ದೆ ಇರುತ್ತದೆ.

ಇಂತಹ “ಆರ್ಕೇಸ್ಟ್ರಾ” ಕುರಿತಾಗಿ ಚಿತ್ರವೊಂದು ನಿರ್ಮಾಣವಾಗಿ, ತೆರೆಗೆ ಬರಲು ಸಿದ್ದವಾಗಿದೆ. ಮೈಸೂರು ಎಂಬ ಅಡಿಬರಹ ಈ ಚಿತ್ರಕ್ಕಿದೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದ್ದು, ನೋಡಿದವರು ಸೂಪರ್ ಎನ್ನುತ್ತಿದ್ದಾರೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ನಟನಾಗಿ ಜನರ ಮನಗೆದ್ದಿರುವ ಡಾಲಿ ಧನಂಜಯ, ರಘು ದೀಕ್ಷಿತ್ ಸಂಗೀತ ನೀಡಿರುವ ಈ ಚಿತ್ರದ ಎಂಟು ಹಾಡುಗಳನ್ನು ಬರೆದಿದ್ದಾರೆ. ಮೊದಲ ಬಾರಿಗೆ ಒಂದು ಚಿತ್ರದ ಅಷ್ಟು ಹಾಡುಗಳನ್ನು ಡಾಲಿ ರಚಿಸಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಮೈಸೂರಿನ ಹುಡುಗರೆಲ್ಲಾ ಸೇರಿ ನಿರ್ಮಾಣ ಮಾಡಿದ್ದ “ಬಾರಿಸು ಕನ್ನಡ ಡಿಂಡಿಮವ” ಹಾಡು ತುಂಬಾ ಜನಪ್ರಿಯವಾಯಿತು. ಈಗ ಅದೇ ತಂಡ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ನಾನು ಮೊದಲು ಮೈಸೂರಿನ ನೇತ್ರಣ್ಣ ಹಾಗೂ ಕೃಪಾಕರ್, ಸೇನಾನಿ ಅವರನ್ನು ನೆನೆದು ಮಾತು ಆರಂಭಿಸುತ್ತೇನೆ. ಮೈಸೂರಿನಲ್ಲಿ ನಮ್ಮದೊಂದು ತಂಡ. ಗೆಳೆಯರಿಗೆಲ್ಲಾ ರಂಗಭೂಮಿಯಲ್ಲಿ ಆಸಕ್ತಿ. ‌ಧನಂಜಯ ನನಗೆ ಕಾಲೇಜಿನಲ್ಲಿ ಸೀನಿಯರ್. ಆಗಿನಿಂದಲೂ ಗೆಳೆಯ ಮತ್ತು ಸಹಕಾರ ನೀಡಿದವ. “ಮೈಸೂರು” ಆರ್ಕೇಸ್ಟ್ರಾ ತುಂಬಾ ಜನಪ್ರಿಯ. ಈ ಕುರಿತು ಕಥೆ ಮಾಡಿ‌ ಸಿನಿಮಾ ಮಾಡಬೇಕೆಂದು ಕನಸು. ಕೆಲವು ಗೆಳೆಯರ ಸಹಾಯದಿಂದ ಚಿತ್ರ ಆರಂಭಿಸಿದ್ದೆವು.‌ ಬೆಂಗಳೂರಿನ ಗಾಂಧಿನಗರ ಸಿನಿಮಾದವರಿಗೆ ಹೆಸರುವಾಸಿ. ಹಾಗೆ, ಮೈಸೂರಿನ ಗಾಂಧಿನಗರ “ಆರ್ಕೆಸ್ಟ್ರಾ” ದವರಿಗೆ ಹೆಸರುವಾಸಿ. ಅಲ್ಲಿ ಸಂಪರ್ಕ ಮಾಡಿ ಎಲ್ಲೆಲ್ಲಿ “ಆರ್ಕೇಸ್ಟ್ರಾ” ನಡೆಯುತ್ತದೆ? ಎಂಬ ಮಾಹಿತಿ ಪಡೆದು, ಅಲ್ಲೇ ಹೋಗಿ ನೈಜವಾಗಿ ಚಿತ್ರೀಕರಣ ಮಾಡುತ್ತಿದ್ದೆವು. ಒಂದು ನೈಜತೆಗಾಗಿ, ಮತ್ತೊಂದು ಸೆಟ್ ಹಾಕುವಷ್ಟು ಹಣವಿರಲಿಲ್ಲ. “ಆರ್ಕೇಸ್ಟ್ರಾ” ಹಾಡುಗಾರನಾಗಬೇಕೆಂಬ ಆಸೆಹೊತ್ತ ಹುಡುಗನೊಬ್ಬನ ಸುತ್ತ ಹೆಣೆದಿರುವ ಕಥೆಯಿದು. ಪೂರ್ಣ ಈ ಚಿತ್ರದ ನಾಯಕ. ರಾಜಲಕ್ಷ್ಮೀ ನಾಯಕಿ. ದಿಲೀಪ್ ರಾಜ್,
ನಾಗಭೂಷಣ್, ಮಹೇಶ್ ಮುಂತಾದ ರಂಗಭೂಮಿ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಜೋಸಫ್ ಛಾಯಾಗ್ರಹಣ ಮಾಡಿದ್ದಾರೆ. ಡಾಲಿ ಎಲ್ಲಾ ಹಾಡುಗಳನ್ನು ಬರೆದಿದ್ದಾರೆ. ರಘು ದೀಕ್ಷಿತ್ ಸಂಗೀತ ನೀಡಿದ್ದಾರೆ. Krg ಸ್ಟುಡಿಯೋಸ್ ಹಾಗೂ ಡಾಲಿ ಪಿಕ್ಚರ್ಸ್ ನಮ್ಮ ಚಿತ್ರವನ್ನು ಅರ್ಪಿಸುತ್ತಿದ್ದಾರೆ ಎಂದು ನಿರ್ದೇಶಕ ಸುನೀಲ್ ಮಾಹಿತಿ ನೀಡಿದರು.

ಮೈಸೂರಿನ ಕಲಾಮಂದಿರ ಹಾಗೂ ರಂಗಾಯಣದ ಸುತ್ತ ನಾವು ಕಥೆಯ ಬಗ್ಗೆ ಮಾತನಾಡುತ್ತಾ ತಿರುಗುತ್ತಿದಾಗ, ಅದನ್ನು ಗಮನಿಸಿದ ಕೃಪಾಕರ್, ಸೇನಾನಿ ಅವರು ತಮ್ಮದೇ ಕ್ಯಾಮೆರಾ ಹಾಗೂ ಎಡಿಟಿಂಗ್ ಸೆಟಪ್ ಹಾಗೂ ಜೋಸೆಫ್ ಎಂಬ ಛಾಯಾಗ್ರಾಹಕನನ್ನು ನೀಡಿ ನಮಗೆ ಸಹಾಯ ಮಾಡಿದರು. ಚಿತ್ರೀಕರಣ ತಡವಾದರೆ ಧನಂಜಯ ಬೇಗ ಶುರುಮಾಡುವಂತೆ ಹುರಿದುಂಬಿಸುತ್ತಿದ್ದರು. ಸಂಗೀತ ನಿರ್ದೇಶಕ ರಘದೀಕ್ಷಿತ್ ನಮ್ಮ ಸಹಾಯಕ್ಕೆ ನಿಂತರು. ಈಗ ಕೆ.ಆರ್.ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಬಿಡುಗಡೆಗೆ ಬೇಕಾದ ಅನುಕೂಲ ಮಾಡಿಕೊಡುತ್ತಿದ್ದಾರೆ. ಎಲ್ಲರಿಗೂ ಧನ್ಯವಾದ.

ನಾನು ಮೂಲತಃ ರಂಗಭೂಮಿಯವನು. “ಆರ್ಕೇಸ್ಟ್ರಾ” ಸಿನಿಮಾ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ. ಯುವಕರ ತಂಡದ ಶ್ರಮದಿಂದ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನನ್ನ ಪಾತ್ರಕೂಡ ಚೆನ್ನಾಗಿದೆ ಎಂದರು ನಟ ದಿಲೀಪ್ ರಾಜ್.

ನಾನು ಮೈಸೂರಿನವನು. ನಟ ನಾಗಭೂಷಣ್ ಮೂಲಕ ಈ ತಂಡದ ಪರಿಚಯವಾಯಿತು. ನಿರ್ದೇಶಕ ಸುನೀಲ್ ಪೆನ್ ಡ್ರೈವ್ ಮೂಲಕ ಈ ಚಿತ್ರದ ಕಥೆ ಕಳಿಸಿದ್ದರು. ನೋಡಿ ಕೆಲಸ ಶುರು ಮಾಡಿದೆ. ಮೈಸೂರಿನ ನೇತ್ರಣ್ಣ ಅವರ ಜಾಗವೇ ನಮ್ಮ ಆಫೀಸ್. ಡಾಲಿ ಬರೆದ ಎರಡು ಸಾಲುಗಳು ನನಗೆ ಇಷ್ಟವಾಯಿತು. ವಿಶೇಷವೆಂದರೆ ಈ ಚಿತ್ರದ ಎಂಟು ಹಾಡುಗಳನ್ನು ಡಾಲಿ ಅವರೆ ಬರೆದಿದ್ದಾರೆ. ಹಣ ಪಡೆಯದೆ
ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತು ಕೊಂಡಿದ್ದೇನೆ. ಹಾಗಾಗಿ ನನ್ನನ್ನು ನಿರ್ಮಾಪಕ ಅಂತ ನಿರ್ಧರಿಸಿದ್ದಾರೆ ಎಂದರು ರಘು ದೀಕ್ಷಿತ್.

ನಾವೆಲ್ಲಾ ಮೈಸೂರಿನ ಕಾಲೇಜ್ ನಲ್ಲಿ ನಾಟಕ ಮಾಡಬೇಕಾದರೆ, ಬೀಳುತ್ತಿದ್ದ ವಿಸಿಲ್ ಗೆ ನಮ್ಮ ತಲೆ ತಿರುಗುತ್ತಿತ್ತು. ಆಮೇಲೆ ಸಿನಿಮಾ ನಟನೆಗೆ ಬಂದ ಮೇಲೆ ವಾಸ್ತವ ಅರ್ಥವಾಯಿತು. ಆನಂತರ ಮತ್ತೆ ಜನ ಕೈ ಹಿಡಿದರು. ನನ್ನ ಮೊದಲ ದಿನಗಳಿಂದಲೂ ನನ್ನ ಸ್ನೇಹಿತರು ನನ್ನ ಜೊತೆ ಇದ್ದಾರೆ. ನಾನು ಅವರ ಜೊತೆ ಇರುತ್ತೇನೆ . ನಮ್ಮೊಂದಿಗೆ ಕೆ.ಆರ್.ಜಿ ಸ್ಟುಡಿಯೋಸ್ ಅವರು ಇದ್ದಾರೆ ಎಂದರು ಡಾಲಿ ಧನಂಜಯ.

ಸಿನಿಮಾ ಚೆನ್ನಾಗಿದೆ. ಆತುರ ಪಟ್ಟು ಬಿಡುಗಡೆ ಮಾಡುವುದಿಲ್ಲ. ಗಣೇಶನ ಹಬ್ಬದಿಂದ ರಾಜ್ಯೋತ್ಸವದ ತನಕ
” ಆರ್ಕೇಸ್ಟ್ರಾ ” ಸೀಸನ್ ಆ ಸಮಯದಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದರು ಕೆ.ಆರ್.ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ. ಯೋಗಿ.ಜಿ.ರಾಜ್ ಸಹ ಚಿತ್ರತಂಡಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ವಿಕ್ರಾಂತ್ ರೋಣ ತ್ರೀಡಿ ಟ್ರೇಲರ್ ರಿಲೀಸ್ ಮಾಡಿದ ಸ್ಟಾರ್ಸ್: ಜಾಕ್ಲಿನ್ ಜೊತೆ ಸ್ಟೆಪ್ ಹಾಕಿದ ಕ್ರೇಜಿಸ್ಟಾರ್ ಮತ್ತು ಸೆಂಚುರಿ ಸ್ಟಾರ್…

ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಜುಲೈ 28ಕ್ಕೆ ಪ್ರಪಂಚಾದ್ಯಂತ ರಿಲೀಸ್ ಆಗಲಿದೆ.

ಅದಕ್ಕೂ ಮೊದಲು ಸಿನಿಮಾದ 3 ಡಿ ಮಾಧ್ಯಮ ಮಿತ್ರರಿಗೆ ಟ್ರೇಲರ್ ಅನ್ನು ಚಿತ್ರತಂಡ ತೋರಿಸಿದೆ.
ಮಾಧ್ಯಮ ಎದುರು 3ಡಿ ಟ್ರೇಲರ್ ಜೊತೆಗೆ ರಾ ರಾ ರಕ್ಕಮ್ಮ 3 ಡಿ ಸಾಂಗ್ ಕೂಡ ಪ್ರದರ್ಶನವಾಯಿತು. ಈ ವೇಳೆ ರವಿಚಂದ್ರನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಡಾಲಿ ಧನಂಜಯ್, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಬಿ.ಶೆಟ್ಟಿ ಅವರುಗಳು ಟ್ರೇಲರ್ ಲಾಂಚ್ ಮಾಡಿ ಶುಭ ಹಾರೈಸಿದರು.

ಈ ವೇಳೆ ಎಲ್ರೂ ಮಾತಿಗಿಳಿದು ವಿಕ್ರಾಂತ್ ರೋಣನ ಗುಣಗಾನ ಮಾಡಿದರು. ಮೊದಲು ಮಾತಿಗಿಳಿದದ್ದು, ಶಿವರಾಜ ಕುಮಾರ್.

ಸುದೀಪ್ ನನಗೆ ಸಹೋದರ. ಅವರು ಪ್ಯಾಷನೆಟ್ ಮೇಕರ್ . ಸಿನಿಮಾ‌ ಮೇಲೆ ಇಂಟ್ರೆಸ್ಟ್ ಇರುವ ನಟ. ನಿರ್ದೇಶಕ ಅನೂಪ್ ಅವರು ಒಳ್ಳೆಯ ನಿರ್ದೇಶಕ. ಕೊರೊನಾ ವೇಳೆ ಸುದೀಪ್ ಶುರು ಮಾಡಿದ್ದು, ಎಲ್ಲರಿಗೂ ಧೈರ್ಯ ಬಂತು. ಇನ್ನು ಎಲ್ಲರಿಗೂ ಈ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. ಇನ್ನು ಟ್ರೇಲರ್ ನೋಡಿದೆ. 3 ಡಿ ಟ್ರೇಲರ್ ನೋಡಿದೆ ಖುಷಿಯಾಯ್ತು. ಸಿನಿಮಾ ನೋಡೋಕೆ ಆತುರನಾಗಿದ್ದೇನೆ ಎಂದರು ಶಿವರಾಜಕುಮಾರ್.

ರವಿಚಂದ್ರನ್ ಮಾತನಾಡಿ, ಅನೂಪ್‌ ಭಂಡಾರಿ ಎಲ್ಲಿ? ಭಯ ಅಂತ ಹೇಳಿದ್ದೀರಿ. ನನ್ ಮಗ ಸುದೀಪ್ ಅವನಿಗೆ ಭಯ ಎಲ್ರಿ. ವಿ.ಆರ್. ಅಂದರೆ ವಿಕ್ರಾಂತ್ ರೋಣ ಅಷ್ಟೇ ಅಲ್ಲ, ವಿ.ರವಿಚಂದ್ರನ್ ಅಂತ. ಈ ಚಿತ್ರ ಪ್ರಪಂಚಕ್ಕೆ ರೀಚ್ ಮಾಡುವ ಉದ್ದೇಶವಿದೆ. ಕನಸುಗಾರ ಅಂತ ನನಗೆ ಹೇಳ್ತಾ ಇದ್ರಿ. ಈಗ ಬಹಳಷ್ಟು ಜನ ಕನಸುಗಾರರಿದ್ದಾರೆ.ಈ ವಿಕ್ರಾಂತ್ ರೋಣ ಬೇರೆ ಲೆವೆಲ್ ಸಿನಿಮಾ ಆಗಲಿದೆ ಅಂದರು ರವಿಚಂದ್ರನ್.

ರಮೇಶ್ ಅರವಿಂದ್ ಮಾತನಾಡಿ, 3 ಡಿ ನೋಡಿದೆ ಬೇರೆ ಲೆವೆಲ್ ನಲ್ಲಿದೆ. ಒಳ್ಳೆಯ ಫ್ಯಾಂಟಸಿ ಕ್ರಿಯೇಟ್ ಮಾಡಿದ್ದಾರೆ. ಅನೂಪ್ ಒಳ್ಳೇ ಕೆಲಸವಾಗಿದೆ. ಇಂದು ರವಿ ಸರ್, ಶಿವಣ್ಣ, ಡಾಲಿ, ರಕ್ಷಿತ್ ಎಲ್ಲರೂ ಈ ಚಿತ್ರಕ್ಕೆ ಶುಭ ಹಾರೈಸಿದ್ದಾರೆ ಎಂದರು ರಮೇಶ್.
ಧನಂಜಯ್, ರಿಷಭ್,‌ರಾಜ.ಬಿ.ಶೆಟ್ಟಿ, ಸೃಜನ್ ಲೋಕೇಶ್ ಟ್ರೇಲರ್ ಕುರಿತು ಮಾತನಾಡಿದರು.

ನಿರ್ದೇಶಕ ಅನೂಪ್‌ ಭಂಡಾರಿ, ಸುದೀಪ್, ಜಾಕ್ ಮಂಜು, ಇಂದ್ರಜಿತ್ ಇತರರು ಮಾತನಾಡಿದರು.

Categories
ಸಿನಿ ಸುದ್ದಿ

ದಿಗಂತ್ ಆಸ್ಪತ್ರೆಗೆ ದಾಖಲು: ಶಸ್ತ್ರಚಿಕಿತ್ಸೆಗೆ ಮುಂದಾದ ವೈದ್ಯರು

ದೂದ್ ಪೇಡ ದಿಗಂತ್ ಈಗ ಗಂಭೀರ ಪೆಟ್ಟಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಅವರು ಮುಂಬೈನಲ್ಲಿ ಫೈಟ್ ಮಾಡುವಾಗ ಕಣ್ಣಿಗೆ ಪೆಟ್ಟು ಬಿದ್ದಿತ್ತು. ಅದಾದ ಮೇಲೂ ಅವರು ಸಾಹಸ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದರು. ಈಗ ಪುನಃ ಕುತ್ತಿಗೆ ಹಾಗೂ ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ.

ಗೋವಾ ಪ್ರವಾಸದಲ್ಲಿದ್ದ ಅವರು ಈ ಅವಘಡಕ್ಕೀಡಾಗಿದ್ದಾರೆ.

ದಿಗಂತ್ ಅವರುಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ತುರ್ತು ವಿಮಾನದ ಮೂಲಕ ಬೆಂಗಳೂರಿಗೆ ಕರೆ ತರಲಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಗುರಿಪಡಿಸಲಾಗಿದೆ.

ದಿಗಂತ್ ಆದಷ್ಟು ಬೇಗ ಗುಣ ಮುಖರಾಗಲಿ ಎಂಬುದೇ ಎಲ್ಲರ ಆಶಯ.

Categories
ಸಿನಿ ಸುದ್ದಿ

ಶ್ರೀರಂಗನ ಫಸ್ಟ್ ಲುಕ್ ರಿಲೀಸ್…

ಕನ್ನಡ ಚಿತ್ರರಂಗದಲ್ಲಿ ರಂಗ ಅಂದಾಕ್ಷಣ ನೆನಪಾಗುವುದೇ ಹಾಲು ಜೇನು ಚಿತ್ರದ ಡಾ.ರಾಜ್ ಪಾತ್ರ ರಂಗ, ಹಾಗೇಯೇ ಮನೆದೇವ್ರು ಸಿನಿಮಾದಲ್ಲಿ ರವಿಚಂದ್ರನ್ ಶ್ರೀರಂಗ, ಇತ್ತೀಚೆಗೆ ಉಪೇಂದ್ರ ನಟನೆಯ ಸಿನಿಮಾ ಸೂಪರ್ ರಂಗ..ಇದೀಗ ವೆಂಕಟ್ ಭಾರದ್ವಾಜ್ ಶ್ರೀರಂಗ ಟೈಟಲ್ ಮೂಲಕ ಹೊಸದೊಂದು ಕಥೆ ಹೇಳಲು ಬರ್ತಿದ್ದು, ಸದ್ಯ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

ಶ್ರೀರಂಗ ಕಾಮಿಡಿ ಜೊತೆಗೆ ಕ್ರೈ ಥ್ರಿಲ್ಲರ್ ಸಿನಿಮಾವಾಗಿದ್ದು, ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ನಾಯಕನಾಗಿ ಶಿನವ್, ನಾಯಕಿಯರಾಗಿ ರಚನಾ ರಾಯ್, ರೂಪ ರಾಯಪ್ಪ ಹಾಗೂ ವಂದನಾ ಶೆಟ್ಟಿ ನಟಿಸಿದ್ದು, ಉಳಿದಂತೆ ಗುರುರಾಜ್ ಹೊಸಕೋಟೆ, ಯಮುನಾ ಶ್ರೀನಿಧಿ, ಸಾಗರ್ ಜಯರಾಮ್, ಚಿಪ್ಸ್ ಬಾಬು, ಗಿರೀಶ್, ಮಣಿ ಮಾರನ್ ಅಭಿನಯಿಸಿದ್ದಾರೆ. ಇವರ ಜೊತೆಗೆ ಪುಟಾಣಿಗಳ ದಂಡೇ ಇದೆ. ಮಾಸ್ಡರ್ ಚಿರಾಯು ಚಕ್ರವರ್ತಿ, ತ್ರಿಧಾರ ಲಕ್ಷ್ಮಣ್, ಪುಶ್ಕಲ್ ಪ್ರೀತ್, ರಜತ್ ರಿತಿಕ್, ಐಶಾನಿ ನಟಿಸಿದ್ದಾರೆ.

ಮಿಥುನ್ ಛಾಯಾಗ್ರಾಹಣ, ಚಂದನ್ ಸಂಕಲನ, ಶಂಕರ್ ರಾಮನ್ ಸಂಭಾಷಣೆ, ಸಮೀರ್ ಕುಲಕರ್ಣಿ ಸಂಗೀತ, ಕನ್ನಡದ ಟಾಪ್ ರಪೆರ್ ವಿರಾಜಕನ್ನಡಿಗ, ಅವಿನಾಶ್ ಛೆಬ್ಬಿ, ಚೈತ್ರಾ ನಾಣಯ್ಯ ಹಾಡುಗಳಿಗೆ ಧ್ವನಿಯಾಗಿದ್ದಾರೆ. ರುತು ಕ್ರಿಯೇಷನ್ ನಡಿ ಸುಮಾ ಸಿಆರ್ ನಿರ್ಮಾಣ ಮಾಡಿದ್ದು, ಬಿಎಂ ದಿಲೀಪ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸೆನ್ಸಾರ್ ಮುಗಿಸಿರುವ ಸಿನಿಮಾ ಶೀರ್ಘದಲ್ಲಿಯೇ ಥಿಯೇಟರ್ ಗೆ ಲಗ್ಗೆ ಇಡಲಿದೆ.

Categories
ಸಿನಿ ಸುದ್ದಿ

ಜೀವನ ಸುತ್ತ ಹೊಸ ರಂಗು; ರಂಗಿನ ರಾಟೆಯಲ್ಲಿ ದುನಿಯಾ ರಶ್ಮಿ…

ಎಲ್ಲರ ಜೀವನ ರಾಟೆಯಂತೆ. ಅದು ಸದಾ ಸುತ್ತುತ್ತಿರುತ್ತದೆ. ಈ ವಿಷಯವನ್ನು ಕೇಂದ್ರವಾಗಿಟ್ಟಿಕೊಂಡು ” ರಂಗಿನ ರಾಟೆ” ಚಿತ್ರ ಸಿದ್ದವಾಗುತ್ತಿದೆ. ಸದ್ಯ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ. ಚಿತ್ರತಂಡ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದೆ.

ನಾನು ಮುರಳಿ ಮೋಹನ್ ಅವರ ಬಳಿ ಕೆಲಸ ಮಾಡುತ್ತಿದ್ದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಎಲ್ಲರ ಜೀವನವೇ ಒಂದು ಸುತ್ತಾಟ. ರಾಟೆ ತಿರುಗಿದ ಹಾಗೆ. ಹಾಗಾಗಿ ನಾನು ಚಿತ್ರಕ್ಕೆ ಈ ಶೀರ್ಷಿಕೆ ಇಟ್ಟಿದ್ದೀನಿ. ಚಿತ್ರೀಕರಣ ಮುಕ್ತಾಯವಾಗಿದೆ. ಆಗರ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ರಾಜೀವ್ ರಾಥೋಡ್, ದುನಿಯಾ ರಶ್ಮಿ, ಭವ್ಯ ಹಾಗೂ ಸಂತೋಷ್ ನಾಲ್ಕು ಜನರ ಸುತ್ತ ಕಥೆ ಸಾಗುತ್ತದೆ. ಸಂತೋಷ್ ಮಳವಳ್ಳಿ ಅವರ ಮೂಲಕ ನಿರ್ಮಾಪಕಿ ಕವಿತಾ ಅರುಣ್ ಕುಮಾರ್ ಅವರ ಪರಿಚಯವಾಯಿತು. ಅವರು ನಿರ್ಮಾಣಕ್ಕೆ ಮುಂದಾದರು. ಚಿತ್ರೀಕರಣ ಮುಗಿದಿದೆ. ಸದ್ಯದಲ್ಲೇ ಮಾತಿನ ಜೋಡಣೆ ಆರಂಭವಾಗಲಿದೆ ಎಂದು ನಿರ್ದೇಶಕ ಆರ್ಮುಗಂ ಮಾಹಿತಿ ನೀಡಿದರು.

“ಯವರಾಜ” ಚಿತ್ರದಿಂದ ನನ್ನ ಸಿನಿ ಜರ್ನಿ ಆರಂಭವಾಗಿದೆ. ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ಇದು ಮೂರನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ನಿರ್ದೇಶಕರು ಕಥೆ ಹೇಳಿದ ಕೂಡಲೆ ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದೆ. ಅನಿರೀಕ್ಷಿತ ಘಟನೆಯಲ್ಲಿ ನಾನು ಸಿಕ್ಕಿಹಾಕಿಕೊಳ್ಳುತ್ತೇನೆ. ಅದರಿಂದ ಹೇಗೆ ಪಾರಾಗುತ್ತೇನೆ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕು ಎಂದರು ರಾಜೀವ್ ರಾಥೋಡ್.

ನನಗೆ ಸಿನಿಮಾ ಮಾಡಲು ಇಷ್ಟವಿರಲಿಲ್ಲ. ಸಂತೋಷ್ ಅವರು ನಿರ್ದೇಶಕರ ಪರಿಚಯ‌ ಮಾಡಿಸಿದರು. ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದೆ. ಮೊದಲ ಪ್ರಯತ್ನ.‌ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕಿ ಕವಿತಾ ಅರುಣ್ ಕುಮಾರ್.

ಇದು ನನ್ನ ಮೊದಲ ಚಿತ್ರ. ನಟಿಸುವ ಆಸೆಯಿತ್ತು. ಈಡೇರಿದೆ. ಕಥೆಯೇ ಈ ಚಿತ್ರದ ನಾಯಕ, ನಾಯಕಿ. ರಾಜೀವ್ ರಾಥೋಡ್, ದುನಿಯಾ ರಶ್ಮಿ ಹಾಗೂ ನಾನು ಮುಖ್ಯಪಾತ್ರದಲ್ಲಿ ನಟಿಸಿದ್ದೇವೆ. ನಮ್ಮ ಚೊಚ್ಚಲ ಪ್ರಯತ್ನಕ್ಕೆ ನಿಮ್ಮ‌ ಹಾರೈಕೆಯಿರಲಿ ಎಂದರು ನಟಿ ಭವ್ಯ.

ಹಾಡು ಬರೆದು ನಟನೆ ಮಾಡರುವ ಸಂತೋಷ್ ಮಳವಳ್ಳಿ, ಸಂಗೀತ ನಿರ್ದೇಶಕ ಚಂದ್ರು ಒಬ್ಬಯ್ಯ, ಛಾಯಾಗ್ರಾಹಕ ರವಿ ಸುವರ್ಣ ಹಾಗೂ ಸಂಕಲನಕಾರ ದಾಮೋದರ ನಾಯ್ಡು “ರಂಗಿನ ರಾಟೆ” ಯ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ವಿನೋದ್ ಪ್ರಭಾಕರ್ ಈಗ ಮಾದೇವ! ಖಾಕಿ ನಿರ್ದೇಶಕನ ಸಾರಥ್ಯದಲ್ಲಿ ಹೊಸ ಸಿನಿಮಾ…

ಮರಿ ಟೈಗರ್ ವಿನೋದ್ ಪ್ರಭಾಕರ್ ವಿಭಿನ್ನ ಪಾತ್ರಗಳ ಮೂಲಕ, ಹೊಸತನದ ಕಥೆಗಳ ಮೂಲಕ ಚಿತ್ರಪ್ರೇಮಿಗಳನ್ನು ರಂಜಿಸುತ್ತಾ ಬರ್ತಿದ್ದಾರೆ. ಇದೀಗ ವಿನೋದ್ ಅಂತಹದ್ದೇ ಮತ್ತೊಂದು ಹೊಸತನದ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಈ ಹಿಂದೆ ಚಿರಂಜೀವಿ ಸರ್ಜಾ ನಟನೆಯ ಖಾಕಿ ಚಿತ್ರ ಮೂಲಕ ನಿರ್ದೇಶದ ಅಖಾಡಕ್ಕಿಳಿದಿದ್ದ ನವೀನ್ ಬಿ ರೆಡ್ಡಿ ಈಗ ವಿನೋದ್ ಪ್ರಭಾಕರ್ ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಸಿನಿಮಾಗೆ ಮಾದೇವ ಎಂಬ ಕ್ಯಾಚಿ ಟೈಟಲ್ ಇಡಲಾಗಿದ್ದು, ಇವತ್ತು ಬೆಂಗಳೂರಿನ ಬಂಡೀಮಹಾಕಾಳಿ ದೇಗುಲದಲ್ಲಿ ಮುಹೂರ್ತ ನೆರವೇರಿದೆ.

80 ದಶಕದ ಎಮೋಷನಲ್ ಹಾಗೂ ಮಾಸ್ ಎಲಿಮೆಂಟ್ ಕಂಟೆಂಟ್ ಹೊಂದಿರುವ ಮಾದೇವ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸುತ್ತಿದ್ದಾರೆ. ಮುಂದಿನ ತಿಂಗಳು ಜುಲೈ ಕೊನೆಯ ವಾರದಲ್ಲಿ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದೆ ಎಂದು ನಿರ್ದೇಶಕ ನವೀನ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಶೃತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಸೇರಿದಂತೆ ಒಂದಷ್ಟು ತಾರಾಬಳಗ ಫೈನಲ್ ಆಗಿದೆ.

ಸದ್ಯದಲ್ಲಿಯೇ ನಾಯಕಿ ಹಾಗೂ ವಿಲನ್ ಪಾತ್ರಗಳ ಆಯ್ಕೆ ನಡೆಯಲಿದೆ. ನಿರ್ಮಾಪಕಿ ಗಾಯತ್ರಿ ಆರ್ ಹಳಲೆ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರದ್ದ್ಯೋತ್ತನ್ ಸಂಗೀತ ನೀಡಲಿದ್ದು, ಬಾಲಕೃಷ್ಣ ತೋಟ ಛಾಯಾಗ್ರಹಣವಿದ್ದು, ಸಹ ನಿರ್ಮಾಣದ ಜವಾಬ್ದಾರಿಯನ್ನು ಲವ್ ಗುರು ಸುಮಂತ್ ಹೊತ್ತುಕೊಂಡಿದ್ದಾರೆ.

Categories
ಸಿನಿ ಸುದ್ದಿ

ಮತ್ತೆ ಒಂದೇ ಸಿನ್ಮಾದಲ್ಲಿ ಒಂದಾದ ಶಿವಣ್ಣ-ಡಾಲಿ-ಚಿಟ್ಟೆ..!

ಬೈರಾಗಿಯಲ್ಲಿ ಟಗರು ಡಾಲಿ ಜತೆ ಚಿಟ್ಟೆ
ಬೈರಾಗಿ ಟಗರು ಪಾರ್ಟ್ 2…?
ಟಗರು ಡಾಲಿ ಚಿಟ್ಟೆ ಕಾಂಬೋ
ಬೈರಾಗಿಯಲ್ಲಿ ಮತ್ತೆ ಆರ್ಭಟ
ಬೈರಾಗಿ ಹಾಡಿಗೆ ವಸಿಷ್ಠ ಸಿಂಹ ಗಾಯನ
ಟಗರು,ಡಾಲಿಗೆ ಮತ್ತೆ ಚಿಟ್ಟೆ ಸಾಥ್

ಶಿವಣ್ಣನ ಟಗರಿನೇಟಿಗೆ ತರಗೆಲೆ ಥರಾ ಉದುರೋಗ್ತಾರೆ ಡಾಲಿ-ಚಿಟ್ಟೆ ಜೋಡಿ. ಆದ್ರೂ ಶಿವಣ್ಣ-ಡಾಲಿ-ಚಿಟ್ಟೆ ಕಾಂಬಿನೇಷನ್ ಗೆ ಭಯಂಕರ ಫ್ಯಾನ್ ಫಾಲೋಯಿಂಗ್ ಇದೆ. ಈ ತ್ರಿವಳಿ ಜೋಡಿ ಮತ್ತೆ ಒಂದಾಗ್ತಾ ಇದೆ.

ಹೌದು, ಶಿವಣ್ಣ ಜೊತೆ ಡಾಲಿ ಧನಂಜಯ ಹಾಗೂ ಚಿಟ್ಟೆ ವಸಿಷ್ಠ ಸಿಂಹ ಮತ್ತೆ ಜೋಡಿಯಾಗ್ತಾ ಇದ್ದಾರೆ. ಆದ್ರೆ ಇಲ್ಲಿ ವಸಿಷ್ಠ ತೆರೆ ಮೇಲೆ ಜೋಡಿಯಾಗೋ ಬದಲು ಹಾಡು ಹಾಡಿ, ಧ್ವನಿಯಲ್ಲಿ ಒಂದಾಗ್ತಾ ಇದ್ದಾರೆ. ಇದೇ ಜು.1ಕ್ಕೆ ತೆರೆಗೆ ಬರ್ತಿರೋ ಡಾಲಿ ಧನಂಜಯ-ಶಿವಣ್ಣ ಒಟ್ಟಾಗಿ ನಟಿಸಿರುವ ಬೈರಾಗಿ ಸಿನಿಮಾದ ಒಂದು ಪವರ್ ಫುಲ್ ಹಾಡಿಗೆ ಚಿಟ್ಟೆ ವಸಿಷ್ಠ ದನಿಯಾಗಿದ್ದಾರೆ.

ಈಗಾಗ್ಲೆ ಹಾಡೊಂದಕ್ಕೆ ಶಿವಣ್ಣ ಜೊತೆ ಶರಣ್ ದನಿಯಾಗಿದ್ದು. ಈಗ ಮತ್ತೊಂದು ಹಾಡಿನಲ್ಲಿ ವಸಿಷ್ಠ ಹಾಡುವ ಮೂಲಕ ಶಿವಣ್ಣ ಡಾಲಿಯ ಸಿನಿಮಾದಲ್ಲಿ ಮತ್ತೆ ಒಂದಾಗ್ತಾ ಇದ್ದಾರೆ.
ಅನೂಪ್ ಸಿಳೀನ್ ಸಂಗೀತ ಸಂಯೋಜನೆ ಮಾಡಿರೋ ಈ ಹಾಡಿನಲ್ಲಿ ವರಿಷ್ಠ ರಿಗೆ ಕೆ.ಜಿ.ಎಫ್ ಅನನ್ಯ ಭಟ್ ಸಾಥ್ ಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ಯಾವ ಮೋಹನ ಮುರಳಿ ಕರೆಯಿತು: ಹಾಡು ಸಿನಿಮಾ ಆದಾಗ…

ಕವಿ ಗೋಪಾಲಕೃಷ್ಣ ಅಡಿಗರ “ಯಾವ ಮೋಹನ ಮುರಳಿ ಕರೆಯಿತು” ಹಾಡನ್ನು ಕೇಳದ ಕಿವಿಗಳೇ ಇಲ್ಲ ಅನಿಸುತ್ತದೆ. ಈಗಲೂ ಈ ಹಾಡು ಎಲ್ಲೋ ಕೇಳಿ ಬಂದರೂ, ಅದರೊಟ್ಟಿಗೆ ಗುನಗುವ ಗೀತೆ ಅದು. ಈಗ ಆ ಹಾಡಿನ ಸಾಲೇ ಚಿತ್ರದ ಶೀರ್ಷಿಕೆಯಾಗಿದೆ. “ಯಾವ ಮೋಹನ ಮುರಳಿ ಕರೆಯಿತು” ಚಿತ್ರದ ಮುಹೂರ್ತ ಸಮಾರಂಭ ಜೆ.ಪಿ.ನಗರದ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ನೆರವೇರಿದೆ…

ನಿರ್ಮಾಪಕ ಟಿ.ಪಿ.ಸಿದ್ದರಾಜು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ, ಶುಭ ಕೋರಿದರೆ, ನಾಗೇಂದ್ರ ರೆಡ್ಡಿ ಹಾಗೂ ಲಕ್ಕಿ ಕ್ಯಾಮೆರಾ ಚಾಲನೆ ಮಾಡಿದರು. ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.

ಪ್ರಕೃತಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶರಣಪ್ಪ ಗೌರಮ್ಮ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ವಿಶ್ವಾಸ್ ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಕನ್ನಡದ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ವಿಶ್ವಾಸ್ ಕೃಷ್ಣ ಅವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಜೋಗದ ಬಳಿಯ ಕಾರ್ಗಲ್ ಹಾಗೂ ಭಟ್ಕಳದಲ್ಲಿ ಚಿತ್ರೀಕರಣ ನಡೆಯಲಿದೆ.

ಕೌಟುಂಬಿಕ ಕಥಾಹಂದರದ ಈ ಚಿತ್ರಕ್ಕೆ ನಿರ್ದೇಶಕರೆ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ನೀಡಲಿದ್ದಾರೆ ಹಾಗೂ ಕೀರ್ತನ್ ಪೂಜಾರಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಮಾಧವ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ. ಸ್ವಪ್ನ ಶೆಟ್ಟಿಗಾರ್. ಬೇಬಿ ಪ್ರಕೃತಿ, ಪಟೇಲ್ ವರುಣ್ ರಾಜು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ನಾಯಿ ರಾಕಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.