ಕಳೆದ 24 ವರ್ಷಗಳಿಂದ ಶ್ರೋತೃಗಳಿಗೆ ಕನ್ನಡ ಚಿತ್ರಗಳ ಸುಮಧುರ ಹಾಡುಗಳನ್ನು ತಲುಪಿಸುತ್ತ ಬಂದಿರುವ ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆಗೆ ಮುಂದಿನ ವರ್ಷ ರಜತ ವರ್ಷದ ಸಂಭ್ರಮ. ಈಗ ಆನಂದ್ ಆಡಿಯೋ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ.
ಆನಂದ್ ಆಡಿಯೋ ಯೂಟ್ಯೂಬ್ ಚಾನಲನ್ನು ಒಂದು ಕೋಟಿ ಜನರು ಸಬ್ ಸ್ಕ್ರೈಬ್ ಮಾಡಿಕೊಂಡಿದ್ದಾರೆ. ಹಾಗಾಗಿ ಯೂಟ್ಯೂಬ್ ಸಂಸ್ಥೆಯಿಂದ ಆನಂದ್ ಆಡಿಯೋ ಸಂಸ್ಥೆಗೆ ಯುಟ್ಯೂಬ್ ಡೈಮಂಡ್ ಬಟನ್ ಸಿಕ್ಕಿದೆ.
“ಮೇ 24, ಆನಂದ್ ಆಡಿಯೋ ಮಾಲೀಕರಾದ ಮೋಹನ್ ಚಾಬ್ರಿಯಾ ಅವರ ಹುಟ್ಟುಹಬ್ಬ. ಅದೇ ದಿನ ಡೈಮಂಡ್ ಬಟನ್ ದೊರಕಿರುವುದು ಖುಷಿಯ ವಿಚಾರ.
ಇದಕ್ಕೆ ಕಾರಣರಾದ ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಸಂಗೀತ ನಿರ್ದೇಶಕರಿಗೆ, ಗಾಯಕರಿಗೆ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಚಾಬ್ರಿಯಾ ಮತ್ತು ಆನಂದ್ ಚಾಬ್ರಿಯಾ ಧನ್ಯವಾದ ತಿಳಿಸಿದ್ದಾರೆ
ದೆಹಲಿ ನಿರ್ಭಯ ಹತ್ಯೆ, ಹೈದರಾಬಾದ್ ಮರ್ಡರ್ ಮತ್ತು ಅತ್ಯಾಚಾರ, ಇತ್ತೀಚೆಗೆ ದೆಹಲಿಯಲ್ಲಿ ನಡೆದ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟಿದ ಘಟನೆಗಳು ಸೇರಿದಂತೆ ಇಂತಹ ನೈಜ ಘಟನೆಗಳನ್ನು ಆಧರಿಸಿರುವ ಚಿತ್ರವೆ “ಹತ್ಯ”.
ಈ ಚಿತ್ರದ ನಾಯಕಿ ತನ್ನ ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಆ ನೋವನ್ನು ಯಾರ ಬಳಿ ಹೇಳಿಕೊಳ್ಳಲಾಗದೆ ಮನಸ್ಸಿನಲ್ಲೇ ನೋವು ಅನುಭವಿಸುತ್ತಾಳೆ. ಈ ಘಟನೆಯಿಂದ ಆಕೆಯ ಮನಸ್ಥಿತಿ ಬದಲಾಗುತ್ತದೆ. ಆನಂತರ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಳೆ ಇದೇ ಚಿತ್ರದ ಕಥಾಹಂದರ. ಇದೊಂದು ಮಹಿಳಾ ಪ್ರಧಾನ ಚಿತ್ರ ಎನ್ನುತ್ತಾರೆ ಕಥೆ ಹಾಗೂ ಚಿತ್ರಕಥೆ ಬರೆದಿರುವ ಗಂಗಾಧರ್(ಗಂಗು).
ವರುಣ್ .ಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.
ಸಾಗರಂ ವಲ್ಡ್ ಸಿನಿಮಾ ಲಾಂಛನದಲ್ಲಿ ರಾಮಲಿಂಗಂ, ಶ್ಯಾಮ್ ಹಾಗೂ ಗಂಗಾಧರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಅಲೆನ್ ಕ್ರಿಸ್ಟ ಸಂಗೀತ ನಿರ್ದೇಶನ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ವಿಕಾಸ್ ಗೌಡ, ಕಾಮಿಕಾ ಆಂಚಲ್, ಹ್ಯಾರಿ ಜೋಶ್, ಸಂತೋಷ್ ಮೇದಪ್ಪ, ಶ್ಯಾಮ್, ನಾಗೇಶ್ ಮಯ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.
ಮಕ್ಕಳ ಬೆಳವಣಿಗೆಯಲ್ಲಿ ತಾಯಿಯಷ್ಟೇ ತಂದೆಯ ಪಾತ್ರ ಕೂಡ ದೊಡ್ಡದು. ಇಂತಹ ತಂದೆ – ಮಗನ ಬಾಂಧವ್ಯದ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ “ಪರಂವಃ”.
ಸಂತೋಷ್ ಕೈದಾಳ ನಿರ್ದೇಶಿಸಿರುವ ಈ ಚಿತ್ರಕ್ಕಾಗಿ ನಾಗೇಶ್ ಕುಂದಾಪುರ, ಶ್ರೀ ತಲಗೇರಿ ಹಾಗೂ ಶಿವರಾಜ್ ಸೇರಿ ಬರೆದಿರುವ ” ಭೂರಮೆಲಿ ಮತ್ಯಾರು” ಎಂಬ ತಂದೆ – ಮಗನ ಭಾವನಾತ್ಮಕ ಪಯಣಕ್ಕೆ ಮುನ್ನುಡಿಯಾಗಿರುವ ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಅಪರಾಜಿತ್ ಹಾಗೂ ಜೋಸ್ ಜೋಸ್ಸೆ ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ನಟ ರಾಕ್ಷಸ ಡಾಲಿ ಧನಂಜಯ ಚಿತ್ರದ ಈ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಚಿತ್ರದ ನಾಯಕ ವೀರಗಾಸೆ ಕಲಾವಿದ. ಅವರ ಕುಟಂಬವೇ ವೀರಗಾಸೆ ಕುಟುಂಬ. ನಾಯಕನಿಗೆ ತಂದೆಯಂದರೆ ಪ್ರಾಣ. ತಂದೆಗೆ ಮಗನೇ ಜೀವ. ಇಂತಹ ವಿಭಿನ್ನ ಕಥಾಹಂದರ ಹೊಂದಿರುವ “ಪರಂವಃ” ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಮುಕ್ತಾಯವಾಗಿದೆ. ಜುಲೈನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕ ಸಂತೋಷ್ ಕೈದಾಳ ತಿಳಿಸಿದ್ದಾರೆ.
ಪೀಪಲ್ ವಲ್ಡ್ ಫಿಲಂಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಎ.ಎಸ್ ಶೆಟ್ಟಿ ಛಾಯಾಗ್ರಹಣ, ಅಪರಾಜಿತ್ – ಜೋಸ್ ಜೋಸ್ಸೆ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಹಾಗೂ ವೆಂಕಿ ಯು ಡಿ ವಿ – ವಿಕಾಸ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ.
ಪ್ರೇಮ್ ಸಿಡ್ಗಲ್, ಮೈತ್ರಿ ಜೆ ಕಶ್ಯಪ್, ಗಣೇಶ್ ಹೆಗ್ಗೋಡು, ನಾಜರ್, ಶೃತಿ, ಮುಕುಂದ್, ಅವಿನಾಶ್, ಶಬರೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸದ್ದಿಲ್ಲದೆ “ಫಾರೆಸ್ಟ್ ಕಾರ್” ಎಂಬ ವಿಭಿನ್ನ ಬಗೆಯ ಕಥಾ ಹಂದರದ ಸಿನಿಮಾ ಚಿತ್ರೀಕರಣ ಮುಗಿಸಿದೆ. ಮೆಡ್ಲೇ ಸ್ಟುಡಿಯೋ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಈ ಚಿತ್ರ ಫ್ಯಾಂಟಸಿ ಮತ್ತು ಹಾರರ್ ಕಥಾಹಾಂದರಹೊಂದಿದೆ. ಅತ್ಯಾಧುನಿಕ ಹಾಗೂ ವಿಭಿನ್ನ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಲಾಗಿದೆ.
ಚಿತ್ರ ತಂಡ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ನಿರತವಾಗಿದೆ. ಈ ಚಿತ್ರಕ್ಕೆ ಹರ್ಷಿತ್ ನಿರ್ದೇಶಕರು. ವೆಂಕಟೇಶ್ ನಲ್ಲಿಬಿಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರಕ್ಕೆ ಪ್ರವೀಣ್ ರೆಡ್ಡಿ ನಾಯಕ ನಟರಾಗಿದ್ದು, ಅವರ ಜೊತೆಗೆ ವರ್ಣಿಕ ಶೆಟ್ಟಿ ನಾಯಕಿ.
ಬೆಂಗಳೂರು, ಹೈದ್ರಾಬಾದ್ ಸುತ್ತ ಮುತ್ತ ಚಿತ್ರೀಕರಣ ನಡೆದಿದೆ. ಶೀಘ್ರದಲ್ಲಿ ತೆರೆಗೆ ಅಪ್ಪಳಿಸಲು ಸಿದ್ದವಾಗಲಿರುವ. ಚಿತ್ರವು ಎಲ್ಲಾ ವರ್ಗದವರನ್ನು ಆಕರ್ಷಿಸಲು ಸಜ್ಜಾಗುತ್ತಿದೆ.
ಪ್ರಪಂಚದಾದ್ಯಂತ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಹಾಗೂ ಪ್ರಶಂಸೆ ಎರಡನ್ನು ಪಡೆದಿರುವ “ಪಿಂಕಿ ಎಲ್ಲಿ?” ಚಿತ್ರ ಜೂನ್ 2 ರಂದು ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು.
ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಕಥೆಯಿದು. ಬೆಂಗಳೂರಿನಲ್ಲಿ ನಡೆದ ನೈಜಘಟನೆಯೂ ಹೌದು. ಮಗುವೊಂದು ಕಾಣೆಯಾಗಿರುತ್ತದೆ. ಆದರೆ ಈ ಕಥೆ ಮಗುವಿನ ಸುತ್ತ ಇರುವುದಿಲ್ಲ. ಮಗುವನ್ನು ಕಳೆದುಕೊಂಡವರ ಸುತ್ತ ಇರುತ್ತದೆ. ಕಥೆಯ ಒಂದೆಳೆ ಕೇಳಿ ಮೆಚ್ಚಿಕೊಂಡ ನಿರ್ಮಾಪಕ ಕೃಷ್ಣೇಗೌಡ ಅವರು ನಿರ್ಮಾಣಕ್ಕೆ ಮುಂದಾದರು. ಅಕ್ಷತಾ ಪಾಂಡವಪುರ, ದೀಪಕ್ ಸುಬ್ರಹ್ಮಣ್ಯ, ಪೃಥ್ವಿ, ಗುಂಜಲಮ್ಮ, ಸಂಗಮ್ಮ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಅದರಲ್ಲೂ ಗುಂಜಲಮ್ಮ ಹಾಗೂ ಸಂಗಮ್ಮ ಇಬ್ಬರೂ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಸ್ಲಂ ನಿವಾಸಿಗಳು. ನಟನೆ ಗೊತ್ತಿಲ್ಲದ ಇವರು ಸಹಜವಾಗಿ ಅಭಿನಯಿಸಿರುವುದು ಈ ಚಿತ್ರದ ವಿಶೇಷ . ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಅನೇಕ ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಿದೆ. ಜೂನ್ ಎರಡರಂದು ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಪೃಥ್ವಿ ಕೋಣನೂರು ತಿಳಿಸಿದರು.
ನಿರ್ದೇಶಕರು ಕಥೆ ಹೇಳುವ ರೀತಿಯೆ ವಿಭಿನ್ನ. ನನಗೂ ಅವರು ಕಥೆ ಹೇಳುವ ರೀತಿ ಆಶ್ಚರ್ಯವಾಯಿತು. ಈ ಚಿತ್ರದಲ್ಲಿ ಮಗುವನ್ನು ಕಳೆದುಕೊಂಡಿರುವ ತಾಯಿಯ ಪಾತ್ರ ನನ್ನದು ಎಂದರು ನಟಿ ಅಕ್ಷತಾ ಪಾಂಡವಪುರ.
ನಾನು ಕಥೆ ಕೇಳಲಿಲ್ಲ. ನಿರ್ದೇಶಕರು ಮಗು ಕಳೆದು ಹೋಗಿರುವ ಸುತ್ತಲ್ಲಿನ ಕಥೆ ಎಂದು ಕಥೆಯ ಒಂದೆಳೆ ಹೇಳಿದರು. ನಾನು ಆಗಲೇ ಚೆನ್ನಾಗಿದೆ . ನೀವು ಕೆಲಸ ಶುರು ಮಾಡಿಕೊಳ್ಳಿ ಎಂದು ಹೇಳಿದೆ. ಬೆಂಗಳೂರಿನಲ್ಲಿ ಮಗುವಿನ ಭವಿಷ್ಯಕ್ಕಾಗಿ ತಂದೆ – ತಾಯಿ ಕೆಲಸಕ್ಕಾಗಿ ಮಗುವನ್ನು ನೋಡಿಕೊಳ್ಳಲು ಬಿಟ್ಟು ಕೆಲಸಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಆ ಮಗುವೆ ಇನ್ನೊಬ್ಬರ ಭವಿಷ್ಯಕ್ಕೆ ದಾರಿಯಾಗಿರುತ್ತದೆ. ಇಂತಹ ಅಪರೂಪದ ಕಥೆ ಈ ಚಿತ್ರದಲ್ಲಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಕೃಷ್ಣೇಗೌಡ.
ಚಿತ್ರದಲ್ಲಿ ನಟಿಸಿರುವ ದೀಪಕ್ ಸುಬ್ರಹ್ಮಣ್ಯ, ಗುಂಜಲಮ್ಮ, ಸಂಗಮ್ಮ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ಕೆ.ಮಂಜು ಸಿನಿಮಾಸ್ ಬ್ಯಾನರ್ ನಲ್ಲಿ ಕೆ.ಮಂಜು ನಿರ್ಮಿಸುತ್ತಿರುವ, ಸಬಾಸ್ಟಿನ್ ಡೇವಿಡ್ ನಿರ್ದೇಶನದ ಹಾಗೂ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸಲಿರುವ “ರಾಗಿಣಿ ಐ ಪಿ ಎಸ್ ವರ್ಸಸ್ ಐ ಎ ಎಸ್” ಚಿತ್ರ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ.
ಇದೊಂದು ನೈಜಘಟನೆ ಆಧಾರಿತ ಚಿತ್ರವಾಗಿದ್ದು, ರಾಗಿಣಿ ದ್ವಿವೇದಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಮಾನ”,” ಧ್ವನಿ ” ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಸಬಾಸ್ಟಿನ್ ಡೇವಿಡ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ.
ಜನಪ್ರಿಯ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲಿರುತ್ತಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ಮಾಪಕ ಕೆ.ಮಂಜು ತಿಳಿಸಿದ್ದಾರೆ.
ರೋಮ್ಯಾಂಟಿಕ್ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ನಗುವಿನ ಹೂಗಳ ಮೇಲೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈಗ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚೀಟ್ ಪಡೆದುಕೊಂಡಿದೆ. ಯಾವುದೇ ಕಟ್ ಮತ್ತು ಯಾವುದೇ ದೃಶ್ಯಕ್ಕೆ ಮ್ಯೂಟ್ ಇಲ್ಲದೇ ಯು ಪ್ರಮಾಣ ಪತ್ರ ತನ್ನದಾಗಿಸಿಕೊಂಡಿದೆ.
ಶ್ರೀ ರಂಗ , ಕೆಂಪಿರ್ವೆ ಮತ್ತು ಆಮ್ಲೆಟ್, ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿರುವ ವೆಂಕಟ್ ಭಾರದ್ವಾಜ್ ಆಕ್ಷನ್ ಕಟ್ ಹೇಳಿರುವ ನಗುವಿನ ಹೂಗಳ ಮೇಲೆ ಸಿನಿಮಾದಲ್ಲಿ ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವ ಅಭಿದಾಸ್, ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸುತ್ತಿದ್ದು, ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಇರಲಿ ಬಿಡು ಈ ಜೀವ ನಿನಗಾಗಿ ಎಂಬ ರೋಮ್ಯಾಂಟಿಕ್ ಹಾಡು ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ವೆಂಕಟ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ನಗುವಿನ ಹೂಗಳ ಮೇಲೆ ಸಿನಿಮಾವನ್ನು ಟಾಲಿವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳಾದ
ಬೆಂಗಾಲ್ ಟೈಗರ್, ಪಂಥಂ, ಒರೆ ಬುಜ್ಜುಗ , ಒಡೇಲ ರೈಲ್ವೆ ಸ್ಟೇಷನ್ ಮತ್ತು ಪ್ಯಾರ್ ಮೇ ಪಡೀಪೊಯಾನು ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ. ಕೆ.ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದ ಮೊದಲ ಕನ್ನಡ ಸಿನಿಮಾವಾಗಿದೆ.
ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ, ಟೈಗರ್ ಶಿವು ಸಾಹಸವಿರುವ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರು ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
“ಗುಲ್ಟು”, ” ಹೊಯ್ಸಳ “, ” ಹೊಂದಿಸಿ ಬರೆಯಿರಿ” ಚಿತ್ರಗಳ ಮೂಲಕ ಜನಪ್ರಿಯರಾಗಿರುವ ನವೀನ್ ಶಂಕರ್ ಪ್ರಸ್ತುತ “ಕ್ಷೇತ್ರಪತಿ” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.
ನವೀನ್ ಶಂಕರ್ ಅವರಿಗೆ ಈಗ ಹುಟ್ಟುಹಬ್ಬದ ಸಂಭ್ರಮ. ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ನವೀನ್ ಶಂಕರ್ ಅವರಿಗೆ “ಕ್ಷೇತ್ರಪತಿ” ತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದೆ. ಜುಲೈನಲ್ಲಿ ಚಿತ್ರ ತೆರೆಗೆ ಬರಲಿದೆ. KRG ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ.
ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಶ್ರೀಕಾಂತ್ ಕಟಗಿ ನಿರ್ದೇಶಿಸಿದ್ದಾರೆ. “ಕ್ಷೇತ್ರಪತಿ” ಸೋಶಿಯಲ್ ಪೊಲಿಟಿಕಲ್ ಡ್ರಾಮ ಕಥಾಹಂದರ ಹೊಂದಿದೆ ಎನ್ನುತ್ತಾರೆ ನಿರ್ದೇಶಕರು. ಶ್ರೀಕಾಂತ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯಾಗಿದ್ದು, ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ.
ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೈ ವಿ ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವಾದ “ಹೊಂದಿಸಿ ಬರೆಯಿರಿ” ಚಿತ್ರದಲ್ಲಿ ನಾಯಕ – ನಾಯಕಿಯಾಗಿ ನಟಿಸಿದ್ದ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ “ಕ್ಷೇತ್ರಪತಿ” ಚಿತ್ರದಲ್ಲೂ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳೆ ಹೆಚ್ಚಾಗಿ ಗೆಲ್ಲುತ್ತಿದೆ. ಅಂತಹ ವಿಭಿನ್ನ ಪ್ರೇಮಕಥೆಯ “ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್” ಚಿತ್ರ ಇದೇ ಜೂನ್ 2 ರಂದು ಬಿಡುಗಡೆಯಾಗುತ್ತಿದೆ.
ಕನ್ನಡದಲ್ಲಿ ಸಾಕಷ್ಟು ಪ್ರೇಮಕಥೆಯುಳ್ಳ ಚಿತ್ರಗಳು ಬಂದಿದೆ. ಆದರೆ ಇದು ಸ್ವಲ್ಪ ವಿಭಿನ್ನ ಪ್ರೇಮಕಥೆ ಎನ್ನಬಹುದು. ರಾಧಾ – ರಮಣ ಇಬ್ಬರು ಪ್ರೇಮಿಗಳು. ಒಬ್ಬರನೊಬ್ಬರು ಬಿಟ್ಟಿರದಷ್ಟು. ಕಾರಣಾಂತರದಿಂದ ತಪ್ಪಿಸಿಕೊಂಡಿರುವ ರಮಣನನ್ನು ರಾಧಾ ಹುಡುಕುವುದೆ ಚಿತ್ರದ ಪ್ರಮುಖ ಕಥಾಹಂದರ.
ಸಾನ್ವಿ ಪಿಕ್ಚರ್ಸ್ & ಅನಿಮೇಷನ್ಸ್ ಲಾಂಛನದಲ್ಲಿ ಯಶಸ್ವಿ ಶಂಕರ್ ಹಾಗೂ ಸವಿತಾ ಯಶಸ್ವಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಂ.ಎನ್ ಶ್ರೀಕಾಂತ್ ನಿರ್ದೇಶಿಸಿದ್ದಾರೆ. ನವನೀತ್ ಚರಿ ಸಂಗೀತ ನಿರ್ದೇಶನ ಹಾಗೂ ವಿಶ್ವಜಿತ್ ರಾವ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕೀ ಕ್ರಿಯೇಷನ್ಸ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ.
ರಾಘವ್ ರಮಣನಾಗಿ ಹಾಗೂ ಸಂಜನ ಬುರ್ಲಿ ರಾಧಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೇಖಾ, ಗೋಪಿನಾಥ್ ಭಟ್, ಚಿರಾಗ್, ಪ್ರದೀಪ್ ತಿಪಟೂರು ಗುರು ಹೆಗಡೆ ಹಾಗೂ ಯಶಸ್ವಿ ಶಂಕರ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಪ್ರೈಮ್ ಸ್ಟಾರ್ ಸ್ಟುಡಿಯೋ ಲಾಂಛನದಲ್ಲಿ ಎಂ.ನಂಜುಂಡ ರೆಡ್ಡಿ ಅವರು ನಿರ್ಮಿಸಿರುವ, ಮಂಜು ಕಾರ್ತಿಕ್ ನಿರ್ದೇಶನದ ” ಮೆಲೋಡಿ ಡ್ರಾಮ” ಚಿತ್ರದ ಹಾಡು ಬಿಡುಗಡೆಯಾಗಿದೆ.
“ಮೊಲೋಡಿ ಡ್ರಾಮ” ಮೂಲಕ ಪ್ರೀತಿ ಭಾವನೆಗಳ ಜೊತೆಗೆ ಸಂಬಂಧ ಹೇಗೆ ನಡೆದುಕೊಂಡು ಹೋಗಬೇಕು ಹಾಗೂ ಜೀವನದಲ್ಲಿ ಪ್ರತಿಯೊಬ್ಬರು ತಪ್ಪು ಮಾಡುತ್ತಾರೆ. ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಪ್ರತಿಯೊಬ್ಬರಿಗೂ ಇರುತ್ತದೆ. ನಾವು ತಿದ್ದಿಕೊಳ್ಳಬೇಕು ಎಂಬ ವಿಷಯವನ್ನು ಹೇಳ ಹೊರಟ್ಟಿದ್ದೇವೆ.
“ಮೆಲೋಡಿ ಡ್ರಾಮ” ಚಿತ್ರಕ್ಕೆ “ನಿನ್ನ ಕಥೆ ನನ್ನ ಜೊತೆ” ಎಂಬ ಅಡಿಬರಹವಿದೆ. ಚಿತ್ರದಲ್ಲಿ ಏಳು ಸುಮಧುರ ಹಾಡುಗಳಿವೆ. ಸೋನು ನಿಗಮ್ , ಕೈಲಾಶ್ ಖೇರ್, ಪಲಾಕ್ ಮುಚ್ವಲ್, ಮುಂತಾದ ಖ್ಯಾತ ಗಾಯಕರು ಹಾಡಿದ್ದಾರೆ. ಮನು ಡಿ ಬಿ ಹಳ್ಳಿ ಅವರ ಛಾಯಾಗ್ರಹಣ ಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. “ದ್ವಿಪಾತ್ರ” ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಸತ್ಯ ಈ ಚಿತ್ರದ ನಾಯಕನಾಗಿ, “ಸೀತಾವಲ್ಲಭ” ಹಾಗೂ “ಸರಸು” ಧಾರಾವಾಹಿ ಮೂಲಕ ಮನೆಮಾತಾಗಿರುವ ಸುಪ್ರೀತ ಸತ್ಯನಾರಾಯಣ ಅವರು ನಾಯಕಿಯಾಗಿ ನಟಿಸಿದ್ದಾರೆ.
ರಂಗಾಯಣ ರಘು, ಅನು ಪ್ರಭಾಕರ್, ರಾಜೇಶ್ ನಟರಂಗ, ಬಾಲು ರಾಜವಾಡಿ, ಲಕ್ಷ್ಮೀ ಸಿದ್ದಯ್ಯ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಚಿತ್ರವನ್ನು ಸೆನ್ಸಾರ್ ಮಂಡಳಿ ನೋಡಿ ಮೆಚ್ಚುಕೊಂಡಿದ್ದು, ಜೂನ್ ನಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಹದಿನೈದು ವರ್ಷಗಳಿಂದ ವಿವಿಧ ನಿರ್ದೇಶಕರ ಬಳಿ ಕೆಲಸ ಮಾಡಿರುವ ನನ್ನ ನಿರ್ದೇಶನದ ಮೊದಲ ಚಿತ್ರವಿದು ಎಂದು ಮಂಜು ಕಾರ್ತಿಕ್ ತಿಳಿಸಿದರು.
“ದಿಪಾತ್ರ” ನನ್ನ ಮೊದಲ ಚಿತ್ರ. ಇದು ಎರಡನೆಯದು. ಕಾರ್ತಿಕ್ ನನ್ನ ಪಾತ್ರದ ಹೆಸರು. ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ ಎಂದರು ನಾಯಕ ಸತ್ಯ.
ಈ ಹಿಂದೆ ಕೆಲವು ಜನಪ್ರಿಯ ಧಾರಾವಾಹಿ ಹಾಗೂ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. “ಮೆಲೋಡಿ ಡ್ರಾಮ” ದಲ್ಲಿ ಹಿತ ಎಂಬುದು ನನ್ನ ಪಾತ್ರದ ಹೆಸರು. ಬ್ಯಾಂಕ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿರುತ್ತೇನೆ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಸುಪ್ರೀತ ಸತ್ಯನಾರಾಯಣ ತಿಳಿಸಿದರು.
ನನಗೆ ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹವ್ಯಾಸ. ಮೂವತ್ತೈದು ವರ್ಷಗಳಿಂದ ತಪ್ಪದೆ ವಾರಕ್ಕೊಂದು ಸಿನಿಮಾ ನೊಡಿಕೊಂಡು ಬರುತ್ತಿದ್ದೇನೆ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ಒಳ್ಳೆಯ ಚಿತ್ರ ಮಾಡಿದ ಖುಷಿಯಿದೆ ಎಂದರು ನಿರ್ಮಾಪಕ ನಂಜುಂಡ ರೆಡ್ಡಿ.
ಚಿತ್ರದಲ್ಲಿ ಏಳು ಹಾಡುಗಳಿದೆ. ಜಯಂತ್ ಕಾಯ್ಕಿಣಿ, ವಿ ನಾಗೇಂದ್ರ ಪ್ರಸಾದ್, ಧನಂಜಯ್ ರಂಜನ್ ಹಾಡುಗಳನ್ನು ಬರೆದಿದ್ದಾರೆ ಎಂದು ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಮಾಹಿತಿ ನೀಡಿದರು. ಛಾಯಾಗ್ರಹಕ ಮನು ಡಿ.ಬಿ ಹಳ್ಳಿ, ಸಂಕಲನಕಾರ ಆರ್ ಮಂಜು ಹಾಗೂ ಚಿತ್ರದಲ್ಲಿ ನಟಿಸಿರುವ ಅಶ್ವಿನ್ ಹಾಸನ್, ವೈಭವ್ ನಾಗರಾಜ್, ವಿನೋದ್ ಗೊಬ್ಬರಗಾಲ ಮುಂತಾದವರು “ಮೆಲೋಡಿ ಡ್ರಾಮ” ಬಗ್ಗೆ ಮಾತನಾಡಿದರು.