Categories
ಸಿನಿ ಸುದ್ದಿ

ಹನಿಮೂನ್‌ಗೆ ರೆಡಿನಾ?‌ ಶಿವಣ್ಣ ಪುತ್ರಿ ನಿವೇದಿತಾರ ವೆಬ್‌ಸೀರೀಸ್‌ ರೆಡಿ

ಸಕ್ಕತ್‌ ಮಜಾ ಉಂಟು ಟ್ರೇಲರ್

ಕನ್ನಡದಲ್ಲಿ ವೆಬ್‌ಸೀರೀಸ್‌ಗಳು ಹೊಸದೇನಲ್ಲ. ಈಗಾಗಲೇ ಸಾಕಷ್ಟು ವೆಬ್‌ಸೀರೀಸ್‌ ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ “ಹನಿಮೂನ್‌” ಕೂಡ ಸೇರಿದೆ. ಈ ಹೆಸರಲ್ಲೇ ಒಂಥರಾ ಮಜವಿದೆ. ಇನ್ನು, ವೆಬ್‌ಸೀರೀಸ್‌ ಒಳಗಿರುವ ಕಂಟೆಂಟ್‌ ಹೇಗಿರಬೇಡ. ಆ ಕಂಟೆಂಟ್‌ ಹೇಗಿದೆ ಅನ್ನೋದ್ದಕ್ಕೆ ವೆಬ್‌ಸೀರೀಸ್‌ ತಂಡ ಟ್ರೇಲರ್‌ ಬಿಡುಗಡೆ ಮಾಡಿದೆ.


ಹೌದು, ಡಾ.ಶಿವರಾಜ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಅವರು ದೊಡ್ಡ ಬಜೆಟ್ ನಲ್ಲಿ ವೆಬ್ ಸೀರೀಸ್ ಶುರು ಮಾಡಿದ್ದ ವಿಷಯ ಎಲ್ಲರಿಗೂ ಗೊತ್ತಿದೆ. ಅದೇ “ಹನಿಮೂನ್” . ಈಗಾಗಲೇ ಈ ವೆಬ್ ಸೀರೀಸ್, ಪೂರ್ಣಗೊಂಡಿದ್ದು ಇಷ್ಟರಲ್ಲೇ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ.

ಅದಕ್ಕೂ ಮುನ್ನ “ಹನಿಮೂನ್” ವೆಬ್ ಸೀರೀಸ್‌ ಟ್ರೇಲರ್ ಬಿಡುಗಡೆಯಾಗಿದ್ದು, ಸಖತ್ ಮಜಬೂತಾಗಿದೆ. ಆಗಷ್ಟೇ ಮದುವೆಯಾದ ಜೋಡಿಯೊಂದು ಹನಿಮೂನ್ ಗೆ ಕೇರಳ ಕಡೆ ಹೋದಾಗ, ಅಲ್ಲಿ ನಡೆಯುವ ಒಂದಷ್ಟು ಫಜೀತಿ, ಅಯಾಸ ಇತ್ಯಾದಿ ಕುರಿತ ರಸವತ್ತಾದ ವಿಷಯಗಳಿರುವ ತುಣುಕು ಟ್ರೇಲರ್ ನಲ್ಲಿ ಕಾಣಬಹುದು. ಸದ್ಯಕ್ಕೆ ಆ ಟ್ರೇಲರ್ ಗೆ ಭರ್ಜರಿ ಮೆಚ್ಚುಗೆ ಸಿಗುತ್ತಿದೆ.


ನಿವೇದಿತಾ ಶಿವರಾಜಕುಮಾರ್ ಅವರ ಜೊತೆ ಸಕ್ಕತ್ ಸ್ಟುಡಿಯೊ ಸಹ‌ ನಿರ್ಮಾಣ ಈ ಹನಿಮೂನ್ ವೆಬ್ ಸೀರೀಸ್ ಗಿದೆ.
ಇದು ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲೂ ಬಿಡುಗಡೆಯಾಗುತ್ತಿರುವುದು ವಿಶೇಷ. ಅಂದಹಾಗೆ, ಈ “ಹನಿಮೂನ್” ತೆಲುಗು ಅವತರಣಿಕೆ ವೆಬ್ ಸೀರೀಸ್ ನವೆಂಬರ್ 27ರಂದು ಬಿಡುಗಡೆಯಾಗುತ್ತಿದೆ ಎಂಬುದು ವಿಶೇಷ.
ಸಕ್ಕತ್ ಸ್ಟುಡಿಯೋ ಕ್ರಿಯೇಟಿವ್ ಟೀಮ್, ಈ ವೆಬ್ ಸರಣಿಯ ನಿರ್ದೇಶನದ ಜವಾಬ್ದಾರಿ ಹೊತ್ತಿದೆ. ಕ್ರಿಯೇಟಿವ್ ಡೈರೆಕ್ಟರ್ ಆಗಿ ತೇಜೇಶ್ ಗಣೇಶ್, ನಾಗಭೂಷಣ್ ಕೆಲಸ ಮಾಡಿದರೆ, ನಾಗಭೂಷಣ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ವಾಸುಕಿ ವೈಭವ್ ಸಂಗೀತವಿದೆ. ಶ್ರೀಷ ಕೂದುವಳ್ಳಿ ಹಾಗು ರಾಹುಲ್ ರಾಯ್ ಛಾಯಾಗ್ರಹಣವಿದೆ.


ಆರ್.ಜೆ.ಪ್ರದೀಪ್‌ ಮತ್ತು ತಂಡ ಈ “ಹನಿಮೂನ್‌” ಹಿಂದೆ ನಿಂತಿದೆ. ಒಂದೊಳ್ಳೆಯ ಈಗಿನ ಟ್ರೆಂಡ್‌ಗೆ ಬೇಕಾದ ಕಥಾವಸ್ತು ಇಟ್ಟುಕೊಂಡು ಹಾಸ್ಯಭರಿತದೊಂದಿಗೆ ಒಂದಷ್ಟು ಸಂದೇಶ ಸಾರುವ ಈ ವೆಬ್‌ಸರಣಿ, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.
ಶಿವರಾಜಕುಮಾರ್‌ ಅವರ ಪುತ್ರಿ ನಿವೇದಿತಾ ಅವರಿಗೆ ನಿರ್ಮಾಣದ ಕಡೆ ಆಸಕ್ತಿ ಬಂದಿದ್ದೇ ತಡ,ಅವರು ತಮ್ಮ ಬ್ಯಾನರ್‌ನಡಿ ಹೊಸ ಬಗೆಯ ವೆಬ್‌ಸರಣಿ ಮಾಡಬೇಕು ನಿರ್ಧರಿಸಿದ ಹಿನ್ನೆಲೆಯಲ್ಲಿ ಸಿಕ್ಕಿದ್ದೇ, “ಹನಿಮೂನ್‌” ಕಥಾಹಂದರ.

ಟ್ರೇಲರ್‌ ನೋಡುವುದಕ್ಕೇ ಒಂದು ಮಜವೆನಿಸಿದರೆ, ಇಡೀ ವೆಬ್‌ಸರಣಿ ಇನ್ನುಹೇಗೆಲ್ಲಾ ಇರಬೇಡ. ಸದ್ಯಕ್ಕೆ, ಟ್ರೇಲರ್‌ ಟ್ರೆಂಡಿಂಗ್‌ನಲ್ಲಿದೆ. ಈಗಿನ ಯೂಥ್‌ಗೊಂದು ಹೇಳಿಮಾಡಿಸಿದ “ಹನಿಮೂನ್‌” ವೆಬ್‌ಸರಣಿ ಇದಾಗಿದ್ದು, ಹೊಸತನಕ್ಕೊಂದು ಸಾಕ್ಷಿಯಾಗಲಿದೆ ಎಂಬ ನಂಬಿಕೆ ಹುಟ್ಟಿಸಿದೆ.

Categories
ಸಿನಿ ಸುದ್ದಿ

ಆಕ್ಟ್ ತಂಡಕ್ಕೆ ದರ್ಶನ್‌‌ ಸಾಥ್-‌ ಶುಭಕೋರಿದ ದಚ್ಚು

 

ನಿಮ್ಮ ಚಿತ್ರಕ್ಕೆ ಒಳ್ಳೆಯದಾಗಲಿ-ದರ್ಶನ್‌

ಕನ್ನಡ ಸಿನಿಮಾರಂಗದಲ್ಲಿ ಯಾವುದೇ ಸಿನಿಮಾ ಗೆಲುವು ಕೊಡಲಿ. ಅದು ಹೊಸಬರಾಗಿರಲಿ, ಹಳಬರಾಗಿರಲಿ ಆ ಚಿತ್ರತಂಡದವರನ್ನು ಪ್ರೀತಿಯಿಂದಲೇ ಗೌರವಿಸಿ, ಸಹಕಾರ ಕೊಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈಗ ಕೊರೊನಾ ಹಾವಳಿಯಿಂದ ತತ್ತರಿಸಿ ಹೋಗಿದ್ದ ಸಿನಿಮಾ ರಂಗದಲ್ಲಿ ಧೈರ್ಯವಾಗಿಯೇ ತಮ್ಮ ಚಿತ್ರವನ್ನು ಬಿಡುಗಡೆ ಮಾಡಿ, ಗೆಲುವು ಕಂಡಿರುವ “ಆಕ್ಟ್‌ -1978” ಚಿತ್ರತಂಡಕ್ಕೆ ನಟ ದರ್ಶನ್‌ ಅವರು ಬೆಂಬಲ ನೀಡಿದ್ದಾರೆ.

ಅಷ್ಟೇ ಅಲ್ಲ, ನಿಮ್ಮೊಂದಿಗೆ ನಾವಿರುವುದಾಗಿಯೂ ಧೈರ್ಯ ತುಂಬಿದ್ದಾರೆ. “ಆಕ್ಟ್-1978″ ಚಿತ್ರದ ಬಗ್ಗೆ ಪ್ರೇಕ್ಷಕರು, ಅಭಿಮಾನಿಗಳ ಮೆಚ್ಚುಗೆಯು ಒಂದು ಕಡೆಯಾದರೆ, ಮಾಧ್ಯಮ, ಪತ್ರಿಕೆಗಳಲ್ಲಿ ಬಂದ ಒಳ್ಳೆಯ ವಿಮರ್ಶೆಗಳು ಇನ್ನೊಂದು ಕಡೆ. ಇದನ್ನು ಕೇಳಿಸಿಕೊಂಡ ನಟ ದರ್ಶನ್ ಅವರು, ಎಲ್ಲೆಡೆ ಒಳ್ಳೆಯ ಅಭಿಪ್ರಾಯಕ್ಕೆ ಕಾರಣವಾಗಿರುವ ” ಆಕ್ಟ್-1978″ ಚಿತ್ರ ತಂಡದ ಸದಸ್ಯರನ್ನು ತಮ್ಮ ಮನೆಗೆ ಆಹ್ವಾನಿಸಿ, ಅವರೊಂದಿಗೆ ಕೆಲಕಾಲ ಮಾತನಾಡಿ, ಚಿತ್ರದ ಬಗ್ಗೆ ಒಂದಷ್ಟು ಚರ್ಚಿಸಿ,ತಾವು ನಿಮ್ಮ ಸಿನಿಮಾ ಬೆಂಬಲಕ್ಕೆ ನಿಲ್ಲುವುದಾಗಿ ಧೈರ್ಯ ತುಂಬಿದ್ದಾರೆ.

ದರ್ಶನ್‌ ಅವರ ಈ ಮಾತಿಗೆ ಖುಷಿಗೊಂಡಿರುವ “ಆಕ್ಟ್-‌೧೯೭೮” ಚಿತ್ರತಂಡ, ಅವರಿಗೆ ಧನ್ಯವಾದ ಅರ್ಪಿಸಿದೆ. ಈ ಸಂದರ್ಭದಲ್ಲಿ ನಿರ್ದೇಶಕ ಮಂಸೋರೆ, ಛಾಯಾಗ್ರಾಹಕ ಸತ್ಯಹೆಗಡೆ, ನಟ ಸಂಚಾರಿ ವಿಜಯ್‌, ನಿರ್ಮಾಪಕ ದೇವರಾಜ್‌, ವೀರೇಶ್‌ ಇತರರು ಇದ್ದರು.

 

 

Categories
ಸಿನಿ ಸುದ್ದಿ

ಆ ಒಂದು ಕಾಯ್ದೆ ಇಷ್ಟೆಲ್ಲಾ ಮಾಡ್ತು ನೋಡಿ! ಇನ್ನು, ಸ್ಟಾರ್ಸ್‌ ಸಲೀಸಾಗಿ ಬರಬಹುದು!!

ಜನ ಬರ್ತಾರೆ ಅಂತ ತೋರಿಸಾಗಿದೆ- ದೊಡ್ಡ ಸಿನ್ಮಾಗಳು ಬರಬೇಕಿದೆ

ಕೊರೊನಾ ಹೊಡೆತಕ್ಕೆ ಇಡೀ ಜಗತ್ತೇ ಸ್ತಬ್ಧಗೊಂಡಿದ್ದು ಗೊತ್ತೇ ಇದೆ. ಈಗಲೂ ಆ ಹೊಡೆತದಿಂದ ಚೇತರಿಸಿಕೊಳ್ಳಲು ಹೆಣಗಾಡಬೇಕಾಗಿದೆ. ಈ ಕೊರೊನಾ ಹಾವಳಿಗೆ ಮನರಂಜನೆ ಕ್ಷೇತ್ರ ಸಿನಿಮಾರಂಗವೂ ಹೊರತಲ್ಲ ಬಿಡಿ. ಚಿತ್ರರಂಗದವರ ಪಾಲಿಗಂತೂ ಕೊರೊನಾ ತಂದಿಟ್ಟ ಅವಾಂತರ ಅಷ್ಟಿಷ್ಟಲ್ಲ. ಮೊದಲೇ ಬಣ್ಣದ ಲೋಕ ಹಾವು-ಏಣಿ ಆಟದಂತೆ. ಇಲ್ಲಿ ಗೆಲುವು-ಸೋಲು ಸಹಜ. ಹಾಗಂತ ಮರಳಿ ಪ್ರಯತ್ನ ಮಾಡುವವರ ಸಂಖ್ಯೆಗೇನೂ ಕಮ್ಮಿ ಇಲ್ಲ. ನೂರಾರು ಆಸೆ-ಅಕಾಂಕ್ಷೆಗಳನ್ನು ಹೊತ್ತುಕೊಂಡಿದ್ದ ಅದೆಷ್ಟೋ ಸಿನಿಮಾ ಕನಸುಗಾರರು ಕೊರೊನಾ ಸಮಸ್ಯೆಗೆ ಸಿಲುಕಿ ದಿಕ್ಕೇ ತೋಚದಂತೆ ಆಗಿ ಕುಳಿತಿದ್ದು ನಿಜ. ಇನ್ನೇನು ಲಾಕ್‌ಡೌನ್‌ ಸಡಿಲಗೊಂಡ ಬಳಿಕವೂ ಚಿತ್ರರಂಗದ ಚಲನೆ ಕೂಡ ಆಮೆ ನಡಿಗೆಯಂತೇ ಇತ್ತು. ಅದೇನೇ ಆದರೂ ಪರವಾಗಿಲ್ಲ. ಮನರಂಜಿಸೋಕೆ ನಾವ್‌ ರೆಡಿ ಅಂತ ಒಂದಷ್ಟು ಮಂದಿ ಧೈರ್ಯವಾಗಿ ಮುನ್ನುಗ್ಗೇ ಬಿಟ್ಟರು.

ಆಕ್ಟ್‌ಗೆ ಬಿದ್ದ ಹೌಸ್‌ಫುಲ್‌ ಬೋರ್ಡ್

ಜನರ ಕರೆಸಿಕೊಂಡ ಕಂಟೆಂಟ್

ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಹೆಜ್ಜೆ ಇಟ್ಟವರ ಮೊಗದಲ್ಲಿ ಒಂದು ಅಶಾಭಾವ. ಈ ಹೊತ್ತಲ್ಲೇ ಚಿತ್ರಮಂದಿರಗಳೂ ಬಾಗಿಲು ತೆರೆದುಬಿಟ್ಟವು. ಹಾಗಂತ, ಸಿನಿಮಾಗಳು ತೆರೆಗೆ ಬಂದವಾ? ಬಂದರೂ, ಜನರು ಧೈರ್ಯ ಮಾಡಲಿಲ್ಲ. ಯಾಕೆಂದರೆ, ಚಿತ್ರಮಂದಿರಕ್ಕೆ ಬಂದ ಸಿನಿಮಾಗಳೆಲ್ಲವೂ ಮರುಬಿಡುಗಡೆ ಕಂಡಿದ್ದು. ಹಾಗಾಗಿ, ಪದೇ ಪದೇ ನೋಡಿದ ಸಿನಿಮಾಗಳನ್ನೇ ನೋಡೋಕೂ ಪ್ರೇಕ್ಷಕನಿಗೆ ಬೇಸರವಿರಬೇಕೇನೋ? ಲಾಕ್‌ಡೌನ್‌ ಸಮಯದಲ್ಲಿ ಇದ್ದಬದ್ದ ಸಿನಿಮಾಗಳೆಲ್ಲವನ್ನೂ ಪ್ರೇಕ್ಷಕ ನೋಡಿಯಾಗಿತ್ತು. ಪುನಃ ಚಿತ್ರಮಂದಿರಗಳಿಗೆ ಮತ್ತದೇ ಚಿತ್ರಗಳು ಬಂದಿದ್ದರಿಂದ ಪ್ರೇಕ್ಷಕ ಒಲ್ಲದ ಮನಸ್ಸಲ್ಲೇ ಚಿತ್ರಮಂದಿರದತ್ತ ಮುಖಮಾಡಿದನಾದರೂ, ಹೇಳಿಕೊಳ್ಳುವಷ್ಟು ಸಂಖ್ಯೆ ಕಾಣಲಿಲ್ಲ. ಯಾರಾದರೂ ಹೊಸ ಸಿನಿಮಾ ರಿಲೀಸ್‌ ಮಾಡಬಹುದಾ ಎಂಬ ಲೆಕ್ಕಾಚಾರದಲ್ಲೇ ಇದ್ದ ಪ್ರೇಕ್ಷಕನಿಗೊಂದು ಭರವಸೆ ಮೂಡಿಸಿದ್ದು, “ಆಕ್ಟ್‌ -೧೯೭೮” ಈ ಚಿತ್ರ ಯಾವಾಗ ಚಿತ್ರಮಂದಿರಕ್ಕೆ ಬರುವ ದಿನಾಂಕ ಘೋಷಣೆ ಮಾಡಿತೋ, ಅಂದಿನಿಂದಲೇ ಗಾಂಧಿನಗರದ ಕೆಲವು ಮಂದಿ ಕೂಡ ಕಾದು ನೋಡುವ ತಂತ್ರ ಮಾಡಿದರು.

ಒಳ್ಳೇ ಸಿನ್ಮಾನ ಪ್ರೇಕ್ಷಕ ಕೈ ಬಿಡಲ್ಲ

ಇನ್ನೂ ಕೆಲವರು ಚಿತ್ರಮಂದಿರದಲ್ಲಿ ಈ ಚಿತ್ರ ಬಂದ ಮೇಲೆ ನಾವ್‌ ಬರೋಣ ಅಂದುಕೊಂಡು ಸುಮ್ಮನಾದರು. ಅಂತೂ ಇಂತೂ “ಆಕ್ಟ್‌-೧೯೭೮” ಚಿತ್ರ ಚಿತ್ರಮಂದಿರಕ್ಕೆ ಬಲಗಾಲಿಟ್ಟೇ ಬಂತು. ಮೊದಲ ಪ್ರದರ್ಶನ ನೋಡಿ ಹೊರಬಂದ ಪ್ರೇಕ್ಷಕ ಫುಲ್‌ ಫಿದಾ ಆಗಿಬಿಟ್ಟ. ಮೆಲ್ಲನೆ ಮಾತಿಗೆ ಮಾತು ಹರಿಬಿಟ್ಟಿದ್ದೇ ತಡ, ಒಂದೇ ದಿನದಲ್ಲಿ “ಆಕ್ಟ್‌-೧೯೭೮” ಚಿತ್ರ ಮನೆಮಾತಾಯಿತು. ಜನರು ಚಿತ್ರಮಂದಿರ ಕಡೆ ಹುಡುಕಿ ಬಂದರು. ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ಚಿತ್ರದೊಳಗಿನ ಕಂಟೆಂಟ್.‌
ಹೌದು, ನಿರ್ದೇಶಕ ಮಂಸೋರೆ ಅವರು ಕಟ್ಟಿಕೊಟ್ಟ ಚಿತ್ರಣ ಆ ರೀತಿ ಇತ್ತು. ಕಥೆ, ಚಿತ್ರಕಥೆ ಎಲ್ಲವೂ ಮನಸ್ಸಿಗೆ ಹತ್ತಿರವಾಗಿದ್ದರಿಂದ ಜನರು ಸಿನಿಮಾ ಥಿಯೇಟರ್‌ ಕಡೆ ಮುಖ ಮಾಡಿದರು. ದೊಡ್ಡ ಮಟ್ಟದಲ್ಲೇ ಈ ಚಿತ್ರವನ್ನು ಬರಮಾಡಿಕೊಂಡ ಪ್ರೇಕ್ಷಕ, ರಾಜ್ಯಾದ್ಯಂತ ಹಬ್ಬದಂತೆ ಆಚರಣೆಯಾಗಿದ್ದು ಸುಳ್ಳಲ್ಲ. ಒಂದು ಸಿನಿಮಾ ಸಾಬೀತಿಗೆ ಮತ್ತದೇ ಕಂಟೆಂಟ್‌ ಚಿತ್ರ ಬರಬೇಕಾಯಿತು ಅನ್ನೋದು ಅಕ್ಷರಶಃ ಸುಳ್ಳಲ್ಲ. ಒಂದು ಸಿನಮಾ ಚಿತ್ರಮಂದಿರಕ್ಕೆ ಬಂದು ಸದ್ದು ಮಾಡಿದ್ದಲ್ಲದೆ, ಒಳ್ಳೆಯ ಸಿನಿಮಾ ಬಂದರೆ, ಕನ್ನಡ ಪ್ರೇಕ್ಷಕ ಎಂದಿಗೂ ಕೈ ಬಿಡಲ್ಲ ಅನ್ನೋದನ್ನು ಪುನಃ ಸಾಬೀತುಪಡಿಸಿತು. ಇಡೀ ಚಿತ್ರರಂಗಕ್ಕೆ ಚಲನಶೀಲತೆಗೆ ಈ ಚಿತ್ರ ಸಾಕ್ಷಿಯಾಗಿದ್ದಂತೂ ನಿಜ.

ಆಕ್ಟ್‌ ಕೊಟ್ಟ ಧೈರ್ಯ
ಲಾಕ್‌ಡೌನ್‌ ಬಳಿಕ ಚಿತ್ರಮಂದಿರ ಬಾಗಿಲು ತೆರೆದರೂ, ಯಾರಾದರೂ ಮೊದಲು ಬರಲಿ ಅಂತ ಕಾದು ಕುಳಿತಿದ್ದ ಅದೆಷ್ಟೋ ಸಿನಿಮಾಗಳು ಈಗ ಬಿಡುಗಡೆಗೆ ತನ್ನ ಉತ್ಸಾಹ ತೋರಿಸುತ್ತಿವೆ. ಹಾಗೆ ನೋಡಿದರೆ, ಕನ್ನಡ ಚಿತ್ರರಂಗಕ್ಕೆಈ ರೀತಿಯ ಅದ್ಭುತ ಚಾಲನೆಗೆ ಮುಂದಾಗಬೇಕಿದ್ದು, ಸ್ಟಾರ್ಸ್‌ ಸಿನಿಮಾಗಳು. ಆದರೆ, ಅದೇಕೋ ಏನೋ, ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದ್ದರೂ, ಸ್ಟಾರ್ಸ್‌ ಸಿನಿಮಾಗಳು ಮಾತ್ರ ಬಿಡುಗಡೆಗೆ ಮನಸ್ಸು ಮಾಡಲೇ ಇಲ್ಲ. ಸ್ಟಾರ್ಸ್‌ ಚಿತ್ರಗಳಿಗೆ ಅಭಿಮಾನಿಗಳ ದಂಡು ದೊಡ್ಡದೇ ಇರುತ್ತೆ. ಸ್ಟಾರ್ಸ್‌ ಚಿತ್ರಗಳು ಬಿಡುಗಡೆಯಾದರೆ, ಚಿತ್ರರಂಗ ತನ್ನ ಕಾರ್ಯಚಟುವಟಿಕೆಯಲ್ಲಿ ನಿರತವಾಗುತ್ತೆ. ದೊಡ್ಡ ಸ್ಟಾರ್‌ ನಟರ ಚಿತ್ರಗಳು ಬಂದ ಬಳಿಕ, ಅದೆಷ್ಟೋ ಹೊಸಬರ ಚಿತ್ರಗಳೂ ಕೂಡ ಮೆಲ್ಲನೆ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತವೆ. ಇದರಿಂದ ಚಿತ್ರೋದ್ಯಮ ಕೂಡ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತೆ. ಆದರೆ, ಸ್ಟಾರ್ಸ್‌ ಸಿನಿಮಾಗಳಿಗೂ ಮೊದಲು, ಧೈರ್ಯ ಮಾಡಿ ಚಿತ್ರಮಂದಿರಕ್ಕೆ ಬಂದ “ಆಕ್ಟ್-‌೧೯೭೮” ಚಿತ್ರ ದೊಡ್ಡ ಮಟ್ಟದ ಗೆಲುವು ಪಡೆದಿದೆ. ಪ್ರಶಂಸೆಯನ್ನೂ ಗಿಟ್ಟಿಸಿಕೊಂಡಿದೆ.

ಬಿಡುಗಡೆಗೆ ಅನುಮಾನ ಬೇಡ

ಈಗ ಸ್ಟಾರ್ಸ್‌ ಸಿನಿಮಾಗಳಷ್ಟೇ ಅಲ್ಲ, ಬಿಡುಗಡೆಗೆ ರೆಡಿಯಾಗಿರುವ ಎಲ್ಲಾ ಸಿನಿಮಾಗಳೂ ಒಂದೊಂದಾಗಿಯೇ ಚಿತ್ರಮಂದಿರದತ್ತ ದಾಪುಗಾಲು ಇಡಲು ಯಾವುದೇ ಅನುಮಾನ ಬೇಡ.
“ಆಕ್ಟ್‌ -೧೯೭೮” ಚಿತ್ರ ಕೂಡ ಮುಂಜಾಗ್ರತಾ ಕ್ರಮ ಕೈಗೊಂಡೇ ಬಿಡುಗಡೆಯಾಗಿತ್ತು. ಚಿತ್ರಮಂದಿರಗಳ ಪ್ರದರ್ಶಕರು ಅಂಥದ್ದೊಂದು ಧೈರ್ಯ ಮಾಡಿ ಬಿಡುಗಡೆಗೆ ಅನುವು ಮಾಡಿಕೊಟ್ಟಿದ್ದರಿಂದ ಇಷ್ಟೆಲ್ಲಾ ಸಾಧ್ಯವಾಗಿದೆ. ಒಂದೊಳ್ಳೆಯ ಕಂಟೆಂಟ್‌ ಸಿನಿಮಾ ಬಂದರೆ, ಅದಕ್ಕೆ ಯಾವತ್ತೂ ಬೆಲೆ ಇದ್ದೇ ಇರುತ್ತೆ ಎಂದು ಸಾಬೀತುಪಡಿಸಿರುವ ಮಂಸೋರೆ ನಿರ್ದೇಶನದ “ಆಕ್ಟ್‌ -೧೯೭೮” ಸದ್ಯ ಇತರೆ ಚಿತ್ರಗಳ ಬಿಡುಗಡೆಗೆ ಉತ್ಸಾಹ ತುಂಬಿರುವುದಂತೂ ದಿಟ.

ಸ್ಟಾರ್ಸ್‌ ಸಿನ್ಮಾ ಬರಬೇಕಿದೆ
ಹೊಸಬರು ಈಗ ಬಿಡುಗಡೆಗೆ ಸಜ್ಜಾಗಿವೆ. ಒಂದಷ್ಟು ಸಿನಿಮಾಗಳೂ ಕೂಡ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಘೋಷಿಸಿಕೊಂಡಿವೆ. ಅವುಗಳಿಗೂ ಪ್ರೇಕ್ಷಕ ಬೆನ್ನುತಟ್ಟುವಂತಾಗಲಿ. ಇಷ್ಟು ದಿನ ಬೇಸತ್ತು, ಎಲ್ಲವೂ ಮುಗಿದೇ ಹೋಯ್ತು ಅಂದುಕೊಂಡಿದ್ದ ಸಿನಿಮಾ ಮಂದಿ ಮೊಗದಲ್ಲೀಗ ಸಣ್ಣದ್ದೊಂದು ಆಶಾಭಾವನೆ ಇದೆ. ಎಲ್ಲವೂ ಮೊದಲಿನಂತೆ ಆಗುತ್ತದೆ. ಅದಕ್ಕೆ ಮಾಡಬೇಕಿರೋದು ಇಷ್ಟೇ, ಈಗಾದರೂ, ಬಿಡುಗಡೆಗೆ ರೆಡಿಯಾಗಿರುವ ಸ್ಟಾರ್ಸ್‌ ಚಿತ್ರಗಳು ಚಿತ್ರಮಂದಿರಕ್ಕೆ ಬಂದರೆ, ಖಂಡಿತವಾಗಿಯೂ, ಕನ್ನಡ ಚಿತ್ರರಂಗ ಶೈನ್‌ ಆಗಲಿದೆ. ಅಂಥದ್ದೊಂದು ಪ್ರಯತ್ನಕ್ಕೆ ನಿರ್ಮಾಪಕರೂ ಮನಸ್ಸು ಮಾಡಬೇಕಿದೆ.

ಆತಂಕ ದೂರಾಗಲಿ

ಕನ್ನಡ ಪ್ರೇಕ್ಷಕ ಕನ್ನಡ ಚಿತ್ರವನ್ನು ಎಂದಿಗೂ ಕೈ ಬಿಟ್ಟಿಲ್ಲ. ಬಿಡುವುದೂ ಇಲ್ಲ. ಆ ನಂಬಿಕೆ ಮೇಲೆ, ಸ್ಟಾರ್ಸ್‌ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದರೆ, ಚಿತ್ರರಂಗದ ಪಾಲಿಗೆ ಮತ್ತೆ ಒಳ್ಳೆಯ ದಿನಗಳು ಬರುವುದು ದೂರವಿಲ್ಲ. ಸದ್ಯ ಪ್ರೇಕ್ಷಕರು, ಆಯಾ ಸ್ಟಾರ್‌ ನಟರ ಅಭಿಮಾನಿಗಳು ತಮ್ಮ ನಾಯಕನ ಸಿನಮಾ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ. ಅವರು ತೋರುವ ಪ್ರೀತಿಯ ಮುಂದೆ, ಎಲ್ಲವೂ ಶೂನ್ಯ. ಒಂದಷ್ಟು ಸುರಕ್ಷಿತ ಕ್ರಮ ಅನುಸರಿಸಿ, ಚಿತ್ರಮಂದಿರಕ್ಕೆ ಬರುವ ಧೈರ್ಯ ಮಾಡಬೇಕಿದೆ. ಚಿತ್ರರಂಗದಲ್ಲಿರುವ ಆತಂಕ ದೂರ ಮಾಡಬೇಕಿದೆ.

Categories
ಸಿನಿ ಸುದ್ದಿ

ನವರಸ ನಟನ ಅಕಾಡೆಮಿಯ ಮಂದಹಾಸ-ಯಶಸ್ವಿಯತ್ತ ಮಾಲೂರು ನಟನಾ ಸಂಸ್ಥೆ

ಡಿ.6ರಿಂದ ಹೊಸ ಬ್ಯಾಚ್ ಶುರು ಗುರು

ಮಾಲೂರು ಶ್ರೀನಿವಾಸ್‌, ವ್ಯವಸ್ಥಾಪಕ ನಿರ್ದೇಶಕ

ಮಾಲೂರು ಶ್ರೀನಿವಾಸ್…‌

ಬಹುಶಃ ಕನ್ನಡ ಚಿತ್ರರಂಗದಲ್ಲಿ ಈ ಹೆಸರು ಚಿರಪರಿಚಿತ. ಹಿರಿಯ ನೃತ್ಯ ನಿರ್ದೇಶಕರಾಗಿರುವ ಮಾಲೂರು ಶ್ರೀನಿವಾಸ್‌, ಕಳೆದ ಎರಡು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿಕೊಂಡವರು. ನೂರಾರು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ದುಡಿದಿರುವ, ಈಗಲೂ ದುಡಿಯುತ್ತಿರುವ ಮಾಲೂರು ಶ್ರೀನಿವಾಸ್‌, ಕಳೆದ ಮೂರ್ನಾಲ್ಕು ವರ್ಷಗಳಿಂದ ತಮ್ಮ ನೇತೃತ್ವದಲ್ಲಿ “ನವರಸ ನಟನ ಆಕಾಡೆಮಿ” ಸ್ಥಾಪಿಸಿದವರು.

ಅ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮಾಲೂರು ಈಗಾಗಲೇ ಈ ಅಕಾಡೆಮಿ ಮೂಲಕ ನೂರಾರು ಹೊಸ ಪ್ರತಿಭೆಗಳನ್ನು ತಯಾರು ಮಾಡಿದ ಕೀರ್ತಿಗೆ ಪಾತ್ರರಾದವರು. ಕೊರೊನಾ ಹೊಡೆತದಿಂದ ಇಡೀ ಜಗತ್ತೇ ಸ್ತಬ್ಧವಾಗಿತ್ತು. ಕನ್ನಡ ಚಿತ್ರರಂಗವೂ ಇದಕ್ಕೆ ಹೊರತಲ್ಲ. ಹಾಗೆಯೇ ಚಿತ್ರೀಕರಣದ ಚಟುವಟಿಕೆಗಳು, ಮನರಂಜನೆಯ ಕಾರ್ಯಕ್ರಮಗಳಿಗೂ ಬ್ರೇಕ್‌ ಬಿದ್ದಿತ್ತು. ಹಾಗೆಯೇ, ಮಾಲೂರು ಶ್ರೀನಿವಾಸ್‌ ಕೂಡ ತಮ್ಮ ಸಂಸ್ಥೆಯನ್ನು ಸ್ಥಗಿತಗೊಳಿಸಿದ್ದರು. ಈಗ ಪುನಃ ತಮ್ಮ ಅಕಾಡೆಮಿಯನ್ನು ಶುರುಮಾಡುತ್ತಿದ್ದಾರೆ.

ಎಸ್.ನಾರಾಯಣ್‌, ಪ್ರಾಂಶುಪಾಲರು

ಮಾಲೂರು ಶ್ರೀನಿವಾಸ್‌ ಅವರ “ನವರಸ ನಟನ ಅಕಾಡೆಮಿ”ಯಲ್ಲಿ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಅವರು ಪ್ರಾಂಶುಪಾಲರು. ಡಿಸೆಂಬರ್ 6ರಿಂದ ಈ ವರ್ಷದ ಎರಡನೇ ಬ್ಯಾಚ್ ಶುರು ಮಾಡಲಾಗುತ್ತಿದೆ. ಈಗ ಲಾಕ್‌ ಡೌನ್‌ ಸಡಿಲಗೊಳ್ಳುತ್ತಿರುವುದರಿಂದ ಈಗಾಗಲೇ ಸುರಕ್ಷತೆಯೊಂದಿಗೆ ಈ ವರ್ಷದ ಮೊದಲ ಬ್ಯಾಚ್ ಯಶಸ್ವಿಯಾಗಿ ಮುಗಿಸಿದ್ದು, ಡಿ.6ರಿಂದ ಹೊಸ ತರಗತಿಗಳು ಆರಂಭವಾಗಲಿವೆ. ಈಗಲೂ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಅಳವಡಿಸಿಕೊಂಡು ತರಗತಿ ಪ್ರಾರಂಭಿಸಲಾಗುತ್ತಿರುವುದು ವಿಶೇಷ. ಇನ್ನು ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಂಡು, ಒಂದು ಬ್ಯಾಚ್’ಗೆ ನಿಯಮಿತ ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಂಡು ತರಗತಿ ಪ್ರಾರಂಭಿಸುವ ಉದ್ದೇಶ ಈ ಸಂಸ್ಥೆಯದ್ದು.

ನವರಸ ವಿದ್ಯಾರ್ಥಿಗಳ ಅಭಿನಯದ ದೃಶ್ಯ

ಮೊದಲಿನಿಂದಲೂ ನಡೆದುಕೊಂಡು ಬರುತ್ತಿರುವ 4 ಮತ್ತು 6 ತಿಂಗಳ ಹಾಗೂ ವಾರಾಂತ್ಯದ ನಟನೆ-ನಿರ್ದೇಶನ ತರಗತಿಗಳು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ನಡೆಯಲಿವೆ. ಎಲ್ಲಾ ವಿದ್ಯಾರ್ಥಿಗಳಿಗೂ ನಟನೆ, ನಿರ್ದೇಶನ, ಡಾನ್ಸಿಂಗ್, ಫೈಟಿಂಗ್, ಮೂಖಾಭಿನಯ, ಮೇಕಪ್, ಸಂಕಲನ ಮತ್ತು ಡಬ್ಬಿಂಗ್ ಸೇರಿದಂತೆ ಚಿತ್ರೀಕರಣದ ಅನುಭವ, ಪೋಸ್ಟ್ ಪ್ರೊಡಕ್ಷನ್ ಬಗ್ಗೆ ಮಾಹಿತಿ ನೀಡುತ್ತಾ ಬಂದಿರುವ ಈ ಸಂಸ್ಥೆ, ಈ ಬಾರಿಯೂ ಅವೆಲ್ಲವನ್ನೂ ಮುಂದುವರೆಸಿಕೊಂಡು ಹೋಗುವ ಉತ್ಸಾಹದಲ್ಲಿದೆ. ಮಾಲೂರು ಶ್ರೀನಿವಾಸ್ ಸ್ವತಃ ಅಕಾಡೆಮಿ ವಿದ್ಯಾರ್ಥಿಗಳಿಗೆ ನೃತ್ಯ ಕಲಿಸಿಕೊಡುತ್ತಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ‘ನವರಸ ನಟನ ಅಕಾಡೆಮಿ’ ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುವ ಮೂಲಕ ತಮ್ಮದ್ದೊಂದು ಹೊಸ ಬದುಕು ಕಟ್ಟಿಕೊಂಡು ಬಿಝಿಯಾಗುತ್ತಿದ್ದಾರೆ. ಕೆಲವರು ಸ್ವತಂತ್ರ ನಿರ್ದೇಶಕರಾಗಿ, ಕಲಾವಿದರಾಗಿ ಗುರುತಿಸಿಕೊಂಡಿರುವುದು ಈ ಅಕಾಡೆಮಿಯ ಹೆಮ್ಮೆ.

ಪ್ರಾಂಶುಪಾಲರಾದ ಎಸ್.ನಾರಾಯಣ್ ಸೇರಿದಂತೆ ನಿರ್ದೇಶಕರಾದ ವಿ.ಮನೋಹರ್, ಲಕ್ಕಿ ಶಂಕರ್, ಹಿರಿಯ ನಟರಾದ ಶಿವರಾಮ್, ಸುಂದರ್ ರಾಜ್ ಸೇರಿದಂತೆ ಚಿತ್ರರಂಗದ ಹಿರಿಯರು ಮತ್ತು ಎನ್.ಎಸ್.ಡಿ, ನೀನಾಸಂ ಬಳಗದವರು ನಟನೆ, ನಿರ್ದೇಶನ, ಡೈಲಾಗ್ ಡೆಲಿವರಿ ಹಾಗೂ ಕ್ಯಾಮೆರಾ ಮುಂದೆ ನಟಿಸುವ ಕುರಿತಂತೆ ಹಲವು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವ ಮೂಲಕ ಅವರಿಂದ ಕಿರುಚಿತ್ರ ತಯಾರಿಸಿ, ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಇವೆಲ್ಲದರ ಜೊತೆಗೆ ಅರ್ಹತಾ ಪತ್ರ ವಿತರಿಸಿ, ಬೆನ್ನುತಟ್ಟಿ ಕಳುಹಿಸಿಕೊಡುತ್ತಿದೆ.

ಜಗ್ಗೇಶ್ ಅವರ ಸಹಕಾರದೊಂದಿಗೆ ಈ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತಿರುವ ಕುರಿತು ಸ್ವತಃ ವ್ಯವಸ್ಥಾಪಕ ನಿರ್ದೇಶಕ ಮಾಲೂರು ಶ್ರೀನಿವಾಸ್‌ ಖುಷಿ ವ್ಯಕ್ತಪಡಿಸುತ್ತಾರೆ. ಇನ್ನು, ಮಹಿಳೆಯರಿಗಾಗಿ ವಿಶೇಷ ರಿಯಾಯಿತಿ ಸೌಲಭ್ಯ ಕೂಡ ಇಲ್ಲಿದ್ದು, ಹೆಚ್ಚಿನ ಮಾಹಿತಿಗೆ ನವರಸ ನಟನ ಅಕಾಡೆಮಿ, ಮೊಬೈಲ್ ಸಂಖ್ಯೆ; 98802 19666 / 98804 19666 ಸಂಪರ್ಕಿಸಬಹುದಾಗಿದೆ. ಹೆಚ್ಚಿನ ವಿಷಯಕ್ಕೆ ಅಕಾಡಮಿಯ
ವೆಬ್ಸೈಟ್: www.navarasanatana.com ಸಂಪರ್ಕಿಸಬಹುದು.

Categories
ಸಿನಿ ಸುದ್ದಿ

ಇದು ಹಾಫ್‌ ಲೋಕ! ಅದ್ಧೂರಿ ಸಿನಿಮಾಗೆ ಲೋಕೇಂದ್ರ ತಯಾರಿ

ಕಲರ್‌ಫುಲ್‌ ಫೋಟೋ ಶೂಟ್ ಮೂಲಕ ಸದ್ದು

ಕನ್ನಡದಲ್ಲಿ ವಿಭಿನ್ನ ಸಿನಿಮಾ ಮೂಲಕ ಸುದ್ದಿಯಾಗಿದ್ದ ನಿರ್ದೇಶಕ ಕಮ್‌ ನಿರ್ಮಾಪಕ ಲೋಕೇಂದ್ರ ಸೂರ್ಯ ಇದೀಗ ಸದ್ದಿಲ್ಲದೆಯೇ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಹೌದು, ಈ ಹಿಂದೆ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಸಿನಿಮಾ ಮೂಲಕ ಜೋರು ಸುದ್ದಿಯಾಗಿದ್ದ ಲೋಕೇಂದ್ರ ಅವರೀಗ “ಹಾಫ್”‌ ಎಂಬ ಹೊಸ ಚಿತ್ರ ಶುರುಮಾಡಿದ್ದಾರೆ. ಅವರ ಮೊದಲ ಚಿತ್ರ. “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಸಿನಿಮಾ ಕಳೆದ 2018ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿ, ಜನಮನ್ನಣೆ ಗಳಿಸಿತ್ತು. ಅಷ್ಟೇ ಅಲ್ಲ, ಮಾಧ್ಯಮಗಳ ಹೊಗಳಿಕೆಗೂ ಕಾರಣವಾಗಿತ್ತು. ಅದಾದ ಬಳಿಕ ಲೋಕೇಂದ್ರ ಸೂರ್ಯ ಅವರು, ʼಚಡ್ಡಿ ದೋಸ್ತ್‌ʼ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈಗ ಅವರು “ಹಾಫ್”‌ ಚಿತ್ರದ ಮೂಲಕ ಹೊಸ ಸುದ್ದಿಗೆ ಕಾರಣವಾಗಲು ತಯಾರಿ ನಡೆಸಿದ್ದಾರೆ.


ಅಂದಹಾಗೆ, ಲೋಕೇಂದ್ರ ಸೂರ್ಯ ಅವರು ಈ ಹಿಂದೆಯೇ, “ಹಾಫ್”‌ ಚಿತ್ರ ಮಾಡುವ ಕುರಿತು “ಸಿನಿಲಹರಿ”ಯಲ್ಲಿ ಹೇಳಿಕೊಂಡಿದ್ದರು. ಅದಕ್ಕೀಗ ಚಾಲನೆ ದೊರೆತಿದ್ದು, ಒಂದೊಳ್ಳೆಯ ಫೋಟೋ ಶೂಟ್‌ ಕೂಡ ನಡೆಸಿದ್ದಾರೆ. ಇನ್ನು, ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ನಡಿ ಡಾ.ಆರ್. ಪವಿತ್ರ ರೆಡ್ಡಿ ನಿರ್ಮಿಸುತ್ತಿರುವ ʻಹಾಫ್ʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ.

ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣವಿದೆ. ಯುಡಿವಿ ವೆಂಕಿ ಸಂಕಲನ, ರಾಕಿ ಸೋನು ಸಂಗೀತ ನೀಡಲಿದ್ದಾರೆ. ಡಾ. ಥ್ರಿಲ್ಲರ್ ಮಂಜು ಸಾಹಸ, ಋತು ಚೈತ್ರ ಅವರ ವಸ್ತ್ರಾಲಂಕಾರ ಚಿತ್ರಕ್ಕಿದೆ. ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಆರ್. ಪವಿತ್ರಾ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೃಷ್ಣ ಸಹ ನಿರ್ದೇಶನ, ಶ್ರೀವತ್ಸ, ಭರತ್, ಧೃವಿನ್, ಶಂಕರ್, ನವೀನ್ ಚಲ, ಮನೋಜ್ ಆರ್, ಪುನೀತ್ ಎಲ್, ವಿಜಯ್ ಚಂದ್ರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಇತರ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.


ಭಾರತೀಯ ಚಿತ್ರರಂಗದಲ್ಲೇ ಒಂದು ವಿಶೇಷ ಎನಿಸುವ ಕಥೆಯನ್ನು ಈ ʻಹಾಫ್ʼ ಚಿತ್ರದ ಮೂಲಕ ಹೇಳಹೊರಟಿದ್ದಾರೆ ಲೋಕೇಂದ್ರ ಸೂರ್ಯ. ಈ ಹಿಂದೆ ನಿರ್ದೇಶಕ ಕಮ್‌ ಹೀರೋ ಲೋಕೇಂದ್ರ ಸೂರ್ಯ ಅವರು ತಮ್ಮ ಚಂದ್ರ ಮೆಲೋಡೀಸ್ ತಂಡ ಕಟ್ಟಿಕೊಂಡು ಆರ್ಕೆಸ್ಟ್ರಾ ನಡೆಸುತ್ತಿದ್ದರು. ಸಿನಿಮಾ ಪ್ರೀತಿ ಇಟ್ಟುಕೊಂಡಿರುವ ಲೋಕೇಂದ್ರ ಸೂರ್ಯ ಅವರಿಗೆ ಮೊದಲ ಚಿತ್ರವೇ ಅಂತಾರಾಷ್ಟ್ರೀಯ ಚಿತ್ತೋತ್ಸವಕ್ಕೆ ಆಯ್ಕೆ ಆಗಿದ್ದರಿಂದ ಇನ್ನೂ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಉದ್ದೇಶದಿಂದ ಅವರು, ಈಗ ʻಹಾಫ್ʼ ಸಿನಿಮಾವನ್ನು ಆರಂಭಿಸಿದ್ದಾಗಿ ಹೇಳುತ್ತಾರೆ.


ಅದೇನೆ ಇರಲಿ, ಅವರ ಈ “ಹಾಫ್” ಚಿತ್ರದ ಕಥಾವಸ್ತು ಏನು? ಈ ಚಿತ್ರದಲ್ಲಿ ವಿಶೇಷತೆ ಏನಿದೆ ಎಂಬ ಇತ್ಯಾದಿ ವಿಷಯಗಳನ್ನು ಸಿನಿಮಾದಲ್ಲೇ ನೋಡಬೇಕು ಎನ್ನುವ ಅವರು, ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಇನ್ನು, ಈ ಚಿತ್ರ ಒಂದು ದೊಡ್ಡ ಬಜೆಟ್‌ನಲ್ಲೇ ತಯಾರಾಗಲಿದೆ. ಸಿನಿಮಾಗೆ ಏನೆಲ್ಲಾ ಬೇಕೋ ಎಲ್ಲವನ್ನೂ ಪೂರ್ಣಗೊಳಿಸುವ ಮೂಲಕ ಪಕ್ಕಾ ಕಮರ್ಷಿಯಲ್ ಅಂಶಗಳೊಂದಿಗೆ ಚಿತ್ರ ಮಾಡುವುದಾಗಿ ಹೇಳುತ್ತಾರೆ ಲೋಕೇಂದ್ರ ಸೂರ್ಯ.

Categories
ಸಿನಿ ಸುದ್ದಿ

ಯೆಲ್ಲೋ ಗ್ಯಾಂಗ್ಸ್‌ ಫಸ್ಟ್‌ ಲುಕ್‌ ಹೊರಬಂತು

ಡಾಲಿ ಧನಂಜಯ್‌ ರಿಲೀಸ್‌ ಮಾಡಿ ಶುಭ ಹಾರೈಕೆ

ಕನ್ನಡದಲ್ಲಿ ಇತ್ತೀಚೆಗೆ ಕ್ರೈಮ್‌ ಥ್ರಿಲ್ಲರ್‌ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ಆ ಸಾಲಿಗೆ “ಯೆಲ್ಲೋ ಗ್ಯಾಂಗ್ಸ್‌” ಚಿತ್ರವೂ ಸೇರಿದೆ. ಈಗಾಗಲೇ ಎರಡು ಹಂತಗಳಲ್ಲಿ ೨೫ ದಿನಗಳ ಕಾಲ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ ಮಾಡಿದೆ. ನಟ “ಡಾಲಿ” ಧನಂಜಯ್‌ ಅವರು ಚಿತ್ರಗಳ ಪಾತ್ರ ಪರಿಚಯಿಸುವ ಫಸ್ಟ್‌ ಲುಕ್‌ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ. ಪ್ರವೀಣ್‌ ಮೇಗಳಮನಿ ಅವರ ವಿನ್ಯಾಸದ ಆ ಫಸ್ಟ್‌ ಲುಕ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ. ವಿಭಿನ್ನ ಸ್ಟುಡಿಯೊಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ರವೀಂದ್ರ ಪರಮೇಶ್ವರಪ್ಪ ರಚಿಸಿ ನಿರ್ದೇಶಿಸಿದ್ದಾರೆ. ಬಹುತೇಕ ಬೆಂಗಳೂರಲ್ಲಿ ಚಿತ್ರೀಕರಣ ನಡೆದಿದೆ. ಸುಜ್ಞಾನ್ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ರೋಹಿತ್ ಸೋವರ್ ಅವರ ಸಂಗೀತವಿದೆ. ಸುರೇಶ್ ಆರ್ಮುಗಂ ಅವರ ಸಂಕಲನವಿದೆ. ರವೀಂದ್ರ ಪರಮೇಶ್ವರಪ್ಪ ಹಾಗೂ ಪ್ರವೀಣ್ ಕುಮಾರ್ ಜಿ ಅವರ ಸಂಭಾಷಣೆ ಚಿತ್ರಕ್ಕಿದೆ. ಚಿತ್ರಕ್ಕೆ ಮನೋಜ್ ಪಿ, ಜಿ.ಎಂ.ಆರ್ ಕುಮಾರ್ (ಕೆವಿಜಿ), ಡಿ.ಎಸ್ ಪ್ರವೀಣ್ ಹಾಗೂ ಜೆ.ಎನ್.ವಿ, ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.
ಲೋಕೇಶ್ ಹಿತ್ತಲಕೊಪ್ಪ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಷಣ್ಮುಖ ಹಿರೇಮಧುರೆ ಮತ್ತು ಸುಪ್ರೀತ್ ಅವರ ಕಲಾ ನಿರ್ದೇಶನವಿದೆ. ಚಿತ್ರಕ್ಕೆ ಚೇತನ್ ಡಿಸೋಜಾ ಅವರ ಸಾಹಸ ಸಂಯೋಜನೆ ಮತ್ತು ದಿಲೀಪ್ ಶಿವಾನಂದ ಅವರ ವಸ್ತ್ರವಿನ್ಯಾಸವಿದೆ. ತಾರಾಗಣದಲ್ಲಿ ಬಲರಾಜ್ವಾಡಿ, ನಾಟ್ಯ ರಂಗ, ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಸತ್ಯ ಉಮ್ಮತ್ತಾಲ್, ಪ್ರದೀಪ್ ಪೂಜಾರಿ, ವಿನೀತ್ ಕಟ್ಟಿ, ಮಲ್ಲಿಕಾರ್ಜುನ ದೇವರಮನೆ, ನಂದಗೋಪಾಲ್, ರವಿ ಗಜ ಜಿಗಣಿ, ನೀನಾಸಂ ದಯಾನಂದ್, ಸತ್ಯ ಬಿ.ಜಿ, ವಿಠ್ಠಲ್ ಪರೀಟ, ಅರುಣ್ ಕುಮಾರ್, ಶ್ರೀಹರ್ಷ, ಸಂಚಾರಿ ಮಧು, ಪ್ರವೀಣ್ ಕೆ.ಬಿ, ಪವನ್ ಕುಮಾರ್ ಇತರರಿದ್ದಾರೆ. ಇತ್ತೀಚೆಗಷ್ಟೇ ಯೋಗರಾಜ್ ಭಟ್ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದರು. ಈಗ ಧನಂಜಯ್‌ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದಾರೆ.

Categories
ಸಿನಿ ಸುದ್ದಿ

ಶುಗರ್ ಲೆಸ್ ಶೂಟಿಂಗ್ ಮುಗೀತು

ಚೊಚ್ಚಲ ನಿರ್ದೇಶನದ ಚಿತ್ರವನ್ನು ಯಶಸ್ವಿಯಾಗಿ ಮುಗಿಸಿದ ಶಶಿಧರ್

‘ಡಾಟರ್‌ ಆಫ್ ಪಾರ್ವತಮ್ಮ’ ಮೂಲಕ ನಿರ್ಮಾಪಕರಾದ ಶಶಿಧರ್‌ ಕೆ.ಎಂ.ಅವರು ಹೊಸದೊಂದು ಕಥೆ ಬರೆದು, ಅದಕ್ಕೆ ‘ಶುಗರ್ ಲೆಸ್’ ಎಂಬ ಹೆಸರಿಟ್ಟು ನಿರ್ದೇಶನ ಮಾಡಲು ಹೊರಟಿದ್ದು ಎಲ್ಲರಿಗೂ ಗೊತ್ತು. ಈಗ. ಆ ಚಿತ್ರದ ಹೊಸ ಸುದ್ದಿ ಅಂದರೆ, ಆ ಚಿತ್ರವನ್ನು ಶಶಿಧರ್ ತಮ್ಮ ಚಿತ್ರತಂಡದೊಂದಿಗೆ ಯಶಸ್ವಿಯಾಗಿ ಮುಗಿಸಿದ್ದಾರೆ.


ಹೌದು, ‘ಶುಗರ್ ಲೆಸ್’ ಇತ್ತೀಚೆಗಷ್ಟೆ ಸೆಟ್ಟೇರಿತ್ತು. ಈಗ ನೋಡಿದರೆ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ.
ಅವರ ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನದ ಜರ್ನಿ ಶುರು ಮಾಡಿದ ಶಶಿಧರ್, ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆಯ ಸಂದೇಶ ಇರುವ ಸಿನಿಮಾ‌ ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ‘ಶುಗರ್ ಲೆಸ್’ ಶುರು ಮಾಡಿದ್ದರು.

ಪುಷ್ಕರ್ ಮಲ್ಲಿಕಾರ್ಜುನ, ಶಶಿಧರ್

ಪುಷ್ಕರ್ ಫಿಲ್ಮ್ಸ್ ಸಹಯೋಗದಲ್ಲಿ ‘ಶುಗರ್ ಲೆಸ್’ ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಶಿಧರ್, ಈ ಮೂಲಕ ಡಯಾಬಿಟಿಸ್‌ ಕುರಿತ ಕಥೆ ಹೇಳಿದ್ದಾರೆ. ಈ ಕಥೆ ಜೊತೆ ಒಂದು ಬ್ಲಾಕ್‌ ಕಾಮಿಡಿಯಲ್ಲೇ ಗಂಭೀರ ವಿಷಯ ಹೇಳಲು ಮುಂದಾಗಿರುವ ಅವರು,
ಇಂದು ಡಯಾಬಿಟಿಕ್‌ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾ ಬಿಟಿಸ್‌ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಬದುಕಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ.

ಸಮಾಜದಲ್ಲಿ ಆ ವಿಷಯವನ್ನು ಹೇಳಿಕೊಳ್ಳಲೂ ಆಗದ ವ್ಯಕ್ತಿಗಳು ಎಷ್ಟೆಲ್ಲಾ ಯಾತನೆ ಅನುಭವಿಸುತ್ತಾರೆ ಎಂಬುದನ್ನು ಹೇಳುವ ಪ್ರಯತ್ನಕ್ಕೆ ಮುಂದಾಗಿದ್ದಾರಂತೆ ನಿರ್ದೇಶಕರು.
ಇನ್ನು ಇದೇ ಮೊದಲ‌ ಸಲ ಯಾವ ಭಾಷೆಯಲ್ಲೂ ಈ ರೀತಿಯ ಕಂಟೆಂಟ್‌ ಇರದ ಕಾರಣ, ಅವರು ಇದನ್ನೇ ಇಟ್ಟು ಕೊಂಡು ಹೊಸ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾಗಿ ಹೇಳುತ್ತಾರೆ.


ತಮ್ಮ ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದು, ಶಶಿಧರ್‌ ಗೆ ನಿರ್ಮಾಪಕ ಪುಷ್ಕರ್‌ ಕೈ ಜೋಡಿಸಿದ್ದು, ಈಗ ಯಶಸ್ವಿಯಾಗಿ ಸಿನಿಮಾ ಮುಗಿಸಿರುವ ಶಶಿಧರ್, ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಸಿನಿಮಾ ತರುವ ತಯಾರಿಯಲ್ಲಿದ್ದಾರೆ.

 

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ವಸಿಷ್ಠ ಈಗ ವಿಶಿಷ್ಟ..! ಚೊಚ್ಚಲ ತೆಲುಗು ಚಿತ್ರದ ಫಸ್ಟ್‌ ಲುಕ್‌ ರಿಲೀಸ್

ನೋಡಿರದ, ಮಾಡಿರದ ಒಂದು ಅದ್ಭುತ ಪಾತ್ರ ಎಂದ ಸಿಂಹ

ಕಂಚಿನ ಕಂಠದ ನಟ ವಸಿಷ್ಠ ಸಿಂಹ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೊಸ ಛಾಪು ಮೂಡಿಸಿರುವುದು ಗೊತ್ತೇ ಇದೆ. ತಮ್ಮ ಕಂಠದಿಂದ, ಅದ್ಭುತ ನಟನೆಯಿಂದ ಅವರು ಈಗಾಗಲೇ ಒಂದಷ್ಟು ಅಭಿಮಾನಿ ಬಳಗವನ್ನು ಹೊಂದಿರುವುದೂ ಗೊತ್ತಿದೆ. ಅವರು ಕನ್ನಡಕ್ಕಷ್ಟೇ ಸೀಮಿತ ಅಂದುಕೊಂಡರೆ ಆ ಊಹೆ ಶುದ್ಧ ತಪ್ಪು. ಅವರು ಈಗಾಗಲೇ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದ್ದು ಗೊತ್ತಿದೆ. ಅವರು ತೆಲುಗಿನ “ಓದೆಲ ರೈಲ್ವೇ ಸ್ಟೇಷನ್” ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹಳೆಯ ಸುದ್ದಿಯೇನೋ ನಿಜ. ಆದರೆ, ತಮ್ಮ ಮೊದಲ ತೆಲುಗು ಸಿನಿಮಾದಿಂದ ಹೀಗೊಂದು ಫಸ್ಟ್‌ ಲುಕ್‌ ಹೊರಬಂದಿದೆ. ಅದೇ ಈ ಹೊತ್ತಿನ ವಿಶೇಷ.


ಹೌದು, ವಸಿಷ್ಠ ಸಿಂಹ ಅವರು “ಓದೆಲ ರೈಲ್ವೇ ಸ್ಟೇಷನ್” ಚಿತ್ರದಲ್ಲಿ ಹೀರೋ. ಅದೊಂದು ವಿಶಿಷ್ಠ , ವಿಭಿನ್ನ ಕಥೆ, ಪಾತ್ರ ಹೊಂದಿರುವ ಸಿನಿಮಾ. ಈ ಚಿತ್ರದ ಫಸ್ಟ್ ಲುಕ್ ಬಿಡುಗೆಡಯಾಗಿದೆ. ಇನ್ನು, ಆ ಚಿತ್ರದಲ್ಲಿ ನಟ ವಸಿಷ್ಠ ಸಿಂಹ ಅವರು ತಿರುಪತಿ ಎನ್ನುವ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅವರ ಫಸ್ಟ್‌ ಲುಕ್‌ ಪೋಸ್ಟರ್‌ ನೋಡಿದವರಿಗೆ ವಸಿಷ್ಠ ಸಿಂಹ ಒಬ್ಬ ಧೋಬಿ ಪಾತ್ರದಾರಿ ಎಂಬುದು ಗೊತ್ತಾಗುತ್ತದೆ. ಇನ್ನು, ವಸಿಷ್ಠ ಅವರು ತಮ್ಮ ಚೊಚ್ಚಲ ತೆಲುಗು ಚಿತ್ರವಾಗಿರುವ “ಓದೆಲ ರೈಲ್ವೇ ಸ್ಟೇಷನ್” ಚಿತ್ರದ ಫಸ್ಟ್‌ ಶೇರ್ ಮಾಡುವ ಮೂಲಕ, “ಇದುವರೆಗೂ ನೋಡಿರದ, ಮಾಡಿರದ, ಒಂದು ಅದ್ಭುತ ಪಾತ್ರ..” ಎಂದು ಹೇಳಿಕೊಂಡಿದ್ದಾರೆ.


‘ತಿರುಪತಿ ಎಂಬ ಮೃದು ಮನಸ್ಸಿನ ಸಾಧಾರಣ ಯುವಕ, ಹಳ್ಳಿ ಹೈದ, ಓರ್ವ ಧೋಬಿ. ಇದು ನನ್ನ ಚೊಚ್ಚಲ ತೆಲುಗು ಸಿನೆಮಾ “ಓದೆಲ ರೈಲ್ವೇ ಸ್ಟೇಷನ್”ನ ಪಾತ್ರದ ಪರಿಚಯ ಎಂದಿರುವ ಅವರು, ನಾನು ಈವರೆಗೂ ನೋಡಿರದ, ಮಾಡಿರದ, ಒಂದು ಅದ್ಭುತ ಪಾತ್ರ’ ಎಂದಿದ್ದಾರೆ. ಸದ್ಯಕ್ಕೆ ವಸಿಷ್ಠ ಸಿಂಹ ಅವರು ಶೇರ್‌ ಮಾಡಿರುವ ಆ ಫಸ್ಟ್‌ ಲುಕ್‌ ಪೋಸ್ಟರ್‌ಗೆ ಎಲ್ಲಡೆಯಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. “ಓದೆಲ ರೈಲ್ವೆ ಸ್ಟೇಷನ್” ಒಂದು ನೈಜ ಘಟನೆ ಆಧಾರಿತ ಚಿತ್ರವಂತೆ. ಖರೀಮ್ ನಗರದಲ್ಲಿ ನಡೆದ ಒಂದು ಘಟನೆ ಇಟ್ಟುಕೊಂಡು ಚಿತ್ರ ಮಾಡಲಾಗುತ್ತಿದ್ದು, ಕಥೆ, ಪಾತ್ರ ಕೇಳಿಯೇ ವಸಿಷ್ಠ ಸಿನಿಮಾ ಬಿಡಬಾರದು ಅಂತ ಒಪ್ಪಿ, ಅಪ್ಪಿಕೊಂಡು ಚಿತ್ರ ಮಾಡುತ್ತಿದ್ದಾರೆ.


ಇನ್ನು, ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಹೆಬಾ ಪಟೇಲ್ ಮತ್ತು ಪೂಜಿತಾ ಪೊನ್ನಡ ವಸಿಷ್ಠಗೆ ಜೋಡಿ. ಈಗಾಗಲೇ ಹೆಬಾ ಪಟೇಲ್ ಅವರ ಫಸ್ಟ್‌ ಲುಕ್‌ ಕೂಡ ರಿಲೀಸ್ ಮಾಡಲಾಗಿದೆ. ಹೆಬಾ ಪಟೇಲ್ ಈಗಾಗಲೇ ಕನ್ನಡದ “ಅಧ್ಯಕ್ಷ” ಚಿತ್ರದಲ್ಲಿ ಟಿಸಿದ್ದಾರೆ. ಅಶೋಕ್ ತೇಜ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ
ವಸಿಷ್ಠ ಅವರು ಫುಲ್‌ ಬಿಝಿಯಾಗಿದ್ದಾರೆ. ಅವರ ಕೈಯಲ್ಲಿ ಒಂದಷ್ಟು ಸಾಲು ಸಾಲು ಚಿತ್ರಗಳಿವೆ. “ಕಾಲಚಕ್ರ”, “ಪಂತ”, “ಯುವರತ್ನ” ಸೇರಿದಂತೆ ಸಾಕಷ್ಟು ಸಿನಿಮಾಗಳಿವೆ. ಇತ್ತೀಚೆಗೆ “ತಲ್ವಾರ್”‌ ಚಿತ್ರವೂ ಸೆಟ್ಟೇರಿದೆ. ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ವಸಿಷ್ಠ ಸಿಂಹ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂಬುದು ವಿಶೇಷ.

 

 

Categories
ಸಿನಿ ಸುದ್ದಿ

ಧ್ರುವ ಸರ್ಜಾ ಕೂದಲಿಗೆ ಕತ್ತರಿ! ಕ್ಯಾನ್ಸರ್‌ ಪೀಡಿತರಿಗೆ ಕೂದಲು ದಾನ

ಪೊಗರು ಶೂಟಿಂಗ್‌ ಮುಗಿಸಿದ ಆಕ್ಷನ್ ಪ್ರಿನ್ಸ್‌‌

 

ನಟ ಧ್ರುವ ಸರ್ಜಾ ಹೊಸ ಗೆಟಪ್‌ನಲ್ಲಿದ್ದಾರೆ!
ಹಾಗಂತ ಅವರೇನು ಹೊಸ ಸಿನಿಮಾಗೆ ಈ ಗೆಟಪ್‌ನಲ್ಲಿದ್ದಾರಾ ಅನ್ನುವ ಪ್ರಶ್ನೆ ಸಹಜ. ವಿಷಯವಿಷ್ಟೇ, ಅವರು, “ಪೊಗರು” ಚಿತ್ರಕ್ಕಾಗಿ ವರ್ಷಗಟ್ಟಲೇ ಬೆಳೆಸಿದ್ದ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದಾರೆ. ಅದೇ ಈ ಹೊಸ ಗೆಟಪ್‌ನ ಸುದ್ದಿ. ಹೌದು, “ಪೊಗರು” ಚಿತ್ರದ ಚಿತ್ರೀಕರಣ ಈಗ ಪೂರ್ಣಗೊಂಡಿದೆ. ಹೀಗಾಗಿ, ಅವರು ತಮ್ಮ ಕೂದಲಿಗೆ ಕತ್ತರಿ ಹಾಕಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಧ್ರುವ ಸರ್ಜಾ ಅವರು ತಮ್ಮ ಕೂದಲನ್ನು ಬೆಳೆಸಿದ್ದರು. ಈಗ ಕತ್ತರಿ ಹಾಕಿಸಿದ್ದರೂ, ಆ ಕೂದಲನ್ನು ವಿಶೇಷವಾಗಿ ದಾನ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಧ್ರುವ ಅವರು ತಮ್ಮ ಕೂದಲನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ದಾನ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಅವರು ತಮ್ಮ ಕೂದಲಿಗೆ ಕತ್ತರಿ ಹಾಕುವ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಪೊಗರು ಶೂಟಿಂಗ್ ಮುಗಿದಿದೆ. ನನ್ನ ಸ್ನೇಹಿತರೆಲ್ಲ ಕೂದಲು ದಾನ ಮಾಡುವಂತೆ ಹೇಳಿದರು. ಹಾಗಾಗಿ ಈ ನಿರ್ಧಾರ ಮಾಡಿದ್ದೇನೆ ಎಂಬುದು ಅವರ ಹೇಳಿಕೆ. ಸಮಾರು 10 ಇಂಚು ಉದ್ದ ಇರುವ ಕೂದಲನ್ನು ದಾನ ಮಾಡಬಹುದು. ಸಾಕಷ್ಟು ಜನ ಕೂಡ ಈಗಾಗಲೇ ದಾನ ಮಾಡಿದ್ದಾರೆ. ಕ್ಯಾನ್ಸರ್ ಬಂದು ಕೂದಲು ಉದುರುವ 15 ವರ್ಷದ ಒಳಗಿನ ಮಕ್ಕಳಿಗೆ ಕೂದಲು ಉಪಯೋಗವಾಗುತ್ತೆ. ಅವರಿಗೆ ಸಹಾಯವಾಗಲಿ ಎಂದು ಹೀಗೆ ಮಾಡುತ್ತಿದ್ದೇನೆ. ಕೂದಲು ಕತ್ತರಿಸುವ ಎಲ್ಲರೂ ಹೀಗೆ ಮಾಡಿದರೆ ಸಾಕಷ್ಟು ಜನರಿಗೆ ಒಳ್ಳೆಯದಾಗುತ್ತೆ.’ ಎಂದು ಧ್ರುವ ಸರ್ಜಾ ಮನವಿ ಮಾಡಿದ್ದಾರೆ.

 

 

Categories
ಸಿನಿ ಸುದ್ದಿ

2020…! ಈ ಸಲ ಗೆಲುವು ನಮ್ದೇ ಅಂತಾರೆ ಕೋಮಲ್

 ಕಾಮಿಡಿ ಸಿನ್ಮಾ ಮೂಲಕ ಕೋಮಲ್‌ ಹೊಸ ಇನ್ನಿಂಗ್ಸ್‌ ಶುರು

ನವೆಂಬರ್‌ ಅಂತ್ಯದಿಂದ ಶೂಟಿಂಗ್‌ 

ನಟ ಕೋಮಲ್‌ ಮತ್ತೆ ಸುದ್ದಿಯಲ್ಲಿದ್ದಾರೆ…

ಹೌದು, ಈ “2020” ಜಗತ್ತಿನಾದ್ಯಂತ ಸಾಕಷ್ಟು ಸಮಸ್ಯೆ ತಂದೊಡ್ಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಅದೇ “2020” ಮೂಲಕ ಸಮಸ್ಯೆ ಬದಿಗಿಟ್ಟು, ಒಂದೊಳ್ಳೆಯ ಯಶಸ್ಸನ್ನು ಕೊಡುವ ಹುಮ್ಮಸ್ಸಿನಲ್ಲಿದ್ದಾರೆ ಕೋಮಲ್.‌ ಹೀಗಂದಾಕ್ಷಣ, ನಟ ಕೋಮಲ್‌ ಹೊಸ ಚಿತ್ರ ಒಪ್ಪಿಕೊಂಡಿರುವುದು ನೆನಪಾಗುತ್ತದೆ. ಈಗಾಗಲೇ ಕೋಮಲ್‌ “2020” ಸಿನಿಮಾ ಒಪ್ಪಿಕೊಂಡಿರೋದು ಗೊತ್ತೇ ಇದೆ. ಆರಂಭದಲ್ಲೇ ಟೈಟಲ್‌ ಮೂಲಕ ಗಮನಸೆಳೆದಿರುವ “2020” ಈಗ ಒಂದಷ್ಟು ನಿರೀಕ್ಷೆಯನ್ನೂ ಹುಟ್ಟಿಸಿದೆ. ಅದಕ್ಕೆ ಕಾರಣ, ಕೋಮಲ್‌ ಚಿತ್ರದ ಹೈಲೈಟ್‌ ಆಗಿರುವುದು. ಅಷ್ಟೇ ಅಲ್ಲ, ಈ ಸಿನಿಮಾ ಮೂಲಕ ನಿರ್ದೇಶನ ಪಟ್ಟವನ್ನು ಅಲಂಕರಿಸುತ್ತಿರುವ ಕೆ.ಎಲ್.ರಾಜಶೇಖರ್.‌

ಹೌದು, ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಮಾತುಗಳನ್ನು ಪೋಣಿಸುವ ಮಾತುಗಾರ ಎಂದೇ ಹೆಸರಾಗಿರುವ ಕೆ.ಎಲ್.ರಾಜಶೇಖರ, ದರ್ಶನ್‌ ಅಭಿನಯದ “ರಾಬರ್ಟ್‌”, ಶರಣ್‌ ನಟನೆಯ “ವಿಕ್ಟರಿ -2”, ಚಿರಂಜೀವಿ ಅಭಿನಯಿಸಿದ “ಅಮ್ಮ ಐ ಲವ್ ಯು”, ಗಣೇಶ್‌ ಅಭಿನಯಿಸುತ್ತಿರುವ “ತ್ರಿಬಲ್ ರೈಡಿಂಗ್”, ಚಿಕ್ಕಣ್ಣ ಅವರ “ಉಪಾಧ್ಯಕ್ಷ” ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳಿಗೆ  ಸಂಭಾಷಣೆ ಬರೆದಿದ್ದದಾರೆ ಈ  ಕೆ.ಎಲ್.ರಾಜಶೇಖರ್.

ಕೆ.ಎಲ್.‌ ರಾಜಶೇಖರ್‌,‌ ನಿರ್ದೇಶಕ

ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿರುವ ರಾಜಶೇಖರ್‌, ಇದೇ ಮೊದಲ ಬಾರಿಗೆ “2020” ಮ್ಯಾಚ್‌ ಆಡುವ ಧೈರ್ಯ ಮಾಡಿದ್ದಾರೆ. ಅವರ ಈ “2020” ಸಿನಿಮಾಗೆ, ಕೋಮಲ್‌ ಕೂಡ ಸಾಥ್‌ ನೀಡಿದ್ದು, ಈ ಬಾರಿ ಕಪ್‌ ನಮ್ಮದೇ ಎನ್ನುವಂತೆ ಈ ಸಲ ಸಿನಿಮಾದ ಗೆಲುವು ನಮ್ಮದೇ ಎನ್ನುವ ರೀತಿ ಕೋಮಲ್‌ ಕೂಡ ಪಕ್ಕಾ ತಯಾರಿಯಾಗಿದ್ದಾರೆ. ಇನ್ನು,  ಕಳೆದ ವಿಜಯದಶಮಿ ಹಬ್ಬದ ದಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಪಂಚಮುಖಿ ಗಣಪತಿ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು.

ಈ ಚಿತ್ರವನ್ನು ಟಿ. ಆರ್. ಚಂದ್ರಶೇಖರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡ ಸಿನಿಮಾರಂಗಕ್ಕೆ ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ಟಿ.ಆರ್.‌ ಚಂದ್ರಶೇಖರ್‌ ಅವರು ತಮ್ಮ ಕ್ರಿಸ್ಟಲ್‌ ಪಾರ್ಕ್‌ ಬ್ಯಾನರ್‌ನಡಿ ಈಗ “2020” ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಚಂದ್ರಶೇಖರ್‌, ನಿರ್ಮಾಪಕ

ಇದೊಂದು ಒಳ್ಳೆಯ ಸಂದೇಶ ಇರುವ ಸಿನಿಮಾ ಆಗಿದ್ದು, ಹಲವು ತಿರುವುಗಳ ಜೊತೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಧನ್ಯಾ ಬಾಲಕೃಷ್ಣ,ಕುರಿ ಪ್ರತಾಪ್ ತಬಲಾ ನಾಣಿ, ಗಿರಿ, ಅಪೂರ್ವ ಹಾಗೂ ಇತರರೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ  ಟಿ.ಆರ್.ಚಂದ್ರ ಶೇಖರ್ ಪುತ್ರ ನಂದ ಕಿಶೋರ್ ಚಿತ್ರಕ್ಕೆ  ಕ್ಲಾಪ್ ಮಾಡಿದರೆ, ಟಿ.ಆರ್.ಚಂದ್ರ ಶೇಖರ್  ಕ್ಯಾಮರಾಗೆ ಚಾಲನೆ ನೀಡಿದ್ದಾರೆ. ಇನ್ನು, ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ.

ಧನ್ಯಾ, ನಾಯಕಿ

ಅಂದಹಾಗೆ, ನವಂಬರ್ ಕೊನೆ ವಾರದಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಶುರುವಾಗಲಿದೆ . ಪಕ್ಕಾ ಹಾಸ್ಯ ಕುರಿತ ಕಥೆ ಹೊಂದಿರುವ  ಈ ಚಿತ್ರಕ್ಕೆ ನವೀನ್ ಕುಮಾರ್ .ಎಸ್ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನವಿದೆ.

error: Content is protected !!