ಲಂಕಾಸುರನ ಆರ್ಭಟ ಶುರು -ವಿನೋದ್‌ ಪ್ರಭಾಕರ್‌ ಹೊಸ ಚಿತ್ರಕ್ಕೆ ಭರಪೂರ ಮೆಚ್ಚುಗೆ

ಮಾಸ್‌ ಟೈಟಲ್‌ – ಮಾಸ್‌ ಹೀರೋ!

ವಿನೋದ್‌ ಪ್ರಭಾಕರ್‌ ಸದ್ಯಕ್ಕೆ ಸುದ್ದಿಯಲ್ಲಿರುವ ಹೀರೋ..!
-ಹೌದು, ಈ ಮಾತು ಹೇಳೋಕೆ ಕಾರಣ, ದರ್ಶನ್‌ ಅಭಿನಯದ “ರಾಬರ್ಟ್‌” ಸಿನಿಮಾದಲ್ಲಿ ವಿನೋದ್‌ ಪ್ರಭಾಕರ್‌ ಕೂಡ ಮುಖ್ಯ ಆಕರ್ಷಣೆ. ಈ ಚಿತ್ರ ಒಂದಷ್ಟು ನಿರೀಕ್ಷೆ ಕೂಡ ಮೂಡಿಸಿದೆ. “ನವಗ್ರಹ” ಸಿನಿಮಾದಲ್ಲಿ ವಿನೋದ್‌ ಪ್ರಭಾಕರ್‌ ಅವರು ದರ್ಶನ್‌ ಜೊತೆ ನಟಿಸಿದ್ದರು. ಅದಾದ ಬಳಿಕ ಈಗ ತರುಣ್‌ ಸುಧೀರ್‌ ನಿರ್ದೇಶನದ, ಉಮಾಪತಿ ನಿರ್ಮಾಣದ “ರಾಬರ್ಟ್”‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮುನ್ನವೇ ವಿನೋದ್‌ ಪ್ರಭಾಕರ್‌ ಅವರು, “ಲಂಕಾಸುರ” ಎಂಬ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಅವರ ಹುಟ್ಟುಹಬ್ಬವಿತ್ತು. ಕೊರೊನಾ ಹಿನ್ನೆಲೆಯಲ್ಲಿ ವಿನೋದ್‌ ಪ್ರಭಾಕರ್‌ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ, ತಮ್ಮ ಅಭಿಮಾನಿಗಳಿಗೂ ಕೇಕ್‌, ಹಾರ, ಇತ್ಯಾದಿ ಯಾವುದನ್ನೂ ತರಬಾರದು. ಸರಳವಾಗಿಯೇ ಸಂಭ್ರಮಿಸಬೇಕು ಎಂದು ಮನವಿ ಮಾಡಿದ್ದರು. ಅವರ ಮನವಿಗೆ ಓಗೊಟ್ಟ ಅಭಿಮಾನಿಗಳು ಇದ್ದಲ್ಲಿಯೇ ಸರಳವಾಗಿ ವಿನೋದ್‌ ಪ್ರಭಾಕರ್‌ ಹುಟ್ಟುಹಬ್ಬ ಆಚರಿಸಿ, ಶುಭಕೋರಿದ್ದರು.
ಇನ್ನು, ವಿನೋದ್‌ ಪ್ರಭಾಕರ್‌ ಹುಟ್ಟುಹಬ್ಬದಂದು ಹೊಸ ಸಿನಿಮಾ ಕೂಡ ಅನೌನ್ಸ್‌ ಮಾಡಿದ್ದು ವಿಶೇಷ.


“ಲಂಕಾಸುರ” ಇದು ವಿನೋದ್‌ ಪ್ರಭಾಕರ್‌ ಅವರ ಹೊಸ ಚಿತ್ರದ ಹೆಸರು. ಬರ್ತ್‌ಡೇಗೆ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬದಂದು ಚಿತ್ರೀಕರಣ ಶುರುವಾಗಲಿದೆ. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ಕಾಣಿಸಿಕೊಳ್ಳುತ್ತಿದ್ದಾರೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಹೇಮಾವತಿ ಮುನಿಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ “ಮೂರ್ಕಲ್ ಎಸ್ಟೇಟ್” ಚಿತ್ರವನ್ನು ನಿರ್ದೇಶಿಸಿದ್ದ, ಪ್ರಮೋದ್ ಕುಮಾರ್ ಅವರು ಈಗ ವಿನೋದ್‌ ಪ್ರಭಾಕರ್‌ ಅವರಿಗೆ “ಲಂಕಾಸುರ” ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‌ಇತ್ತೀಚೆಗೆ “ಎ೨” ಚಾನೆಲ್‌ ಮೂಲಕ “ಲಂಕಾಸುರ” ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ವಿಶೇಷವೆಂದರೆ, ಬಿಡುಗಡೆಗೊಂಡ ಕೇವಲ ಮೂರು ದಿನಗಳಲ್ಲಿ ೧೫೦ಕೆ ವೀಕ್ಷಣೆಗೊಂಡಿರುವುದು ಚಿತ್ರತಂಡಕ್ಕೆ ಮತ್ತಷ್ಟು ಹೆಮ್ಮೆ ಎನಿಸಿದೆ. ವಿಜೇತ್ ಕೃಷ್ಣ ಸಂಗೀತ ನೀಡಲಿರುವ ಈ ಚಿತ್ರಕ್ಕೆ ಸುಜ್ಞಾನ್ ಕ್ಯಾಮೆರಾ ಹಿಡಿಯಲಿದ್ದಾರೆ.

Related Posts

error: Content is protected !!