ಹುಟ್ಟಿದ ಊರನು ಬಿಟ್ಟು ಬಂದ ಮೇಲೆ… ಹಾಡಿಗೆ ಬಾಲಿವುಡ್‌ ಲೆಜೆಂಡ್ರಿ ರವೀಂದ್ರ ಜೈನ್‌ ಧ್ವನಿ ಹುಟ್ಟುಹಬ್ಬಕ್ಕೆ ಆನಂದ್‌ ಆಡಿಯೋ ಹೊರತಂದ ಜನಪ್ರಿಯ ಗೀತೆ!

“ಹುಟ್ಟಿದ ಊರನು ಬಿಟ್ಟು ಬಂದ ಮೇಲೆ…ಇನ್ನೇನು ಬಿಡುವುದು ಬಾಕಿ ಇದೆ… ಮಾಡೋದೆಲ್ಲಾ ಮಾಡಿ ಅಳಬೇಡ ಪರದೇಸಿ, ಎದ್ದೋಗು ಕೊನೆ ಬಸ್ಸು ಟೈಮಾಗಿದೆ…”
– ಬಹುಶಃ ಈ ಹಾಡನ್ನು ಕೇಳದವರಿಲ್ಲ. ಕರ್ನಾಟಕದ ಕನ್ನಡಿಗರು ಮಾತ್ರವಲ್ಲ, ಸಾಗರದಾಚೆ ಇರುವ ಕನ್ನಡಿಗರೂ ಈ ಹಾಡನ್ನು ಕೇಳಿ, ಕಣ್ತುಂಬಿಕೊಂಡವರಿಗೆ ಲೆಕ್ಕವಿಲ್ಲ. ಎಷ್ಟೋ ಮಂದಿ ಈ ಹಾಡು ಕೇಳಿ ತಮ್ಮೂರಿಗೆ ಹೋಗಿದ್ದುಂಟು. ಇಷ್ಟಕ್ಕೂ ಈ ಹಾಡಿನ ಬಗ್ಗೆ ಈಗ ಯಾಕೆ ಪ್ರಸ್ತಾಪ ಅನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಈ ಹಾಡು ದಿಗಂತ್‌ ಅಭಿನಯದ “ಪರಪಂಚ” ಸಿನಿಮಾದ್ದು. ಕ್ರಿಶ್‌ ಜೋಶಿ ನಿರ್ದೇಶನವಿದೆ. ಇನ್ನು ಈ ಹಾಡಿಗೆ ಯೋಗರಾಜ್‌ ಭಟ್‌ ಸಾಹಿತ್ಯವಿದೆ. ಅವರ ಸಾಹಿತ್ಯಕ್ಕೆ ಅದ್ಭುತ ರಾಗ ಸಂಯೋಜನೆ ಮಾಡಿದ್ದು, ಸಂಗೀತ ನಿರ್ದೇಶಕ ವೀರ್‌ ಸಮರ್ಥ್.‌ ಈ ಹಾಡನ್ನು ಹುಚ್ಚವೆಂಕಟ್‌ ಅವರ ಧ್ವನಿಯಲ್ಲಿ ಬಹುತೇಕ ಮಂದಿ ಕೇಳಿದ್ದುಂಟು. ಆದರೆ, ಅದರ ಹಿಂದೊಂದು ಸತ್ಯವಿದೆ. ಹುಚ್ಚ ವೆಂಕಟ್‌ ಅವರಿಗೂ ಮೊದಲು ವೀರ್‌ ಸಮರ್ಥ್‌ ಅವರು ಬಾಲಿವುಡ್‌ನ ದಂತಕತೆ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮಹಾನ್‌ ವ್ಯಕ್ತಿ ಪದ್ಮಶ್ರೀ ರವೀಂದ್ರ ಜೈನ್‌ ಅವರಿಂದ ಹಾಡಿಸಿದ್ದರು ಅನ್ನುವುದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ಹೌದು, ವೀರ್‌ ಸಮರ್ಥ್‌ ಅವರು “ಹುಟ್ಟಿದ ಊರನು ಬಿಟ್ಟು ಬಂದ ಮೇಲೆ” ಹಾಡನ್ನು ಬಾಲಿವುಡ್‌ನ ಖ್ಯಾತ ಗೀತಸಾಹಿತಿ, ಹಿಂದೂಸ್ತಾನಿ ಸಂಗೀತ ನಿರ್ದೇಶಕ ರವೀಂದ್ರ ಜೈನ್‌ ಅವರಿಂದ ಹಾಡಿಸಿದ್ದರು. ಆದರೆ, ಕಾರಣಾಂತರಗಳಿಂದ “ಪರಪಂಚ” ಚಿತ್ರಕ್ಕೆ ರವೀಂದ್ರ ಜೈನ್‌ ಅವರ ಹಾಡನ್ನು ಬಳಸಿಕೊಳ್ಳಲಾಗಿಲ್ಲ. ಆದರೆ, ರವೀಂದ್ರ ಜೈನ್‌ ಅವರು ಹಾಡಿರುವ ಈ ಹಾಡನ್ನು ಆನಂದ್‌ ಆಡಿಯೋ ಫೆ.೨೮ರಂದು ಬಿಡುಗಡೆ ಮಾಡಿದೆ. ಅದಕ್ಕೆ ಕಾರಣ, ಫೆಬ್ರವರಿ 28ರಂದು ರವೀಂದ್ರ ಜೈನ್‌ ಅವರ ಹುಟ್ಟುಹಬ್ಬ. ಅವರ 77 ನೇ ಹುಟ್ಟುಹಬ್ಬದ ಸವಿನೆನಪಿಗೆ ಆನಂದ್‌ ಆಡಿಯೋ ಅವರನ್ನು ಸ್ಮರಿಸಿ, ರವೀಂದ್ರ ಜೈನ್‌ ಅವರ ಧ್ವನಿಯಲ್ಲಿ ಮೂಡಿಬಂದಿರುವ “ಹುಟ್ಟಿದ ಊರನು ಬಿಟ್ಟು ಬಂದ ಮೇಲೆ…” ಹಾಡನ್ನು ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ.


ಈ ಕುರಿತಂತೆ, ಸಂಗೀತ ನಿರ್ದೇಶಕ ವೀರ್‌ಸಮರ್ಥ್‌ ಅವರು “ಸಿನಿಲಹರಿ” ಜೊತೆ ಮಾತನಾಡಿ, ತಮ್ಮ ಗುರು ರವೀಂದ್ರ ಜೈನ್‌ ಅವರನ್ನು ಗುಣಗಾನ ಮಾಡಿದ್ದಾರೆ. “ನಾನು ಸಂಗೀತ ನಿರ್ದೇಶಕ ಆಗಿದ್ದೇನೆ ಅಂದರೆ ಅದಕ್ಕೆ ನನ್ನ ಗುರು ರವೀಂದ್ರ ಜೈನ್‌ ಅವರೇ ಕಾರಣ. ಅವರು ನನಗೆ ಸಂಗೀತ ಕಲಿಸಿ, ಅವರೊಟ್ಟಿಗೆ ಐದು ವರ್ಷಗಳ ಕಾಲ ಕೆಲಸ ಮಾಡಲು ಅವಕಾಶ ಕಲ್ಪಿಸಿದವರು. ಮೂಲತಃ ಹಿಂದೂಸ್ತಾನಿ ಸಂಗೀತಗಾರರಾಗಿರುವ ಅವರು ಸುಮಾರು 200 ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಗೀತ ಸಾಹಿತಿಯಾಗಿ ದೊಡ್ಡ ಹೆಸರು ಪಡೆದವರು. ನಾನು ಸಂಗೀತ ನಿರ್ದೇಶಕನಾದ ಬಳಿಕ, ಒಂದೊಮ್ಮೆ ಅವರು ನಿನ್ನ ರಾಗ ಸಂಯೋಜನೆಯಲ್ಲೊಂದು ಹಾಡು ಹಾಡ್ತೀನಿ. ಕನ್ನಡದ ಮೊದಲ ಹಾಡು ಅದಾಗಿರಬೇಕು ಅಂದಿದ್ದರು. ಹಾಗಾಗಿ, ನಾನು ಒಳ್ಳೆಯ ಸಾಹಿತ್ಯ, ರಾಗ ಇದ್ದ ಕಾರಣ, “ಹುಟ್ಟಿದ ಊರನು” ಹಾಡನ್ನು ಅವರಿಂದಲೇ ಮುಂಬೈನ ಅವರ ಸ್ಟುಡಿಯೋದಲ್ಲೇ ಹಾಡಿಸಿದ್ದೆ. ತುಂಬಾನೇ ಅದ್ಭುತವಾಗಿ ಹಾಡಿದ್ದರು. ಆದರೆ, ಕಾರಣಾಂತರಗಳಿಂದ ಆ ಹಾಡನ್ನು ಸಿನಿಮಾದಲ್ಲಿ ಬಳಸಿಕೊಳ್ಳಲು ಆಗಿರಲಿಲ್ಲ. ಅವರು ನನ್ನ ಹಾಡು ಹಾಡಿದ ಐದಾರು ತಿಂಗಳ ಬಳಿಕ ನಿಧನರಾದರು. ಅವರ ಹಾಡನ್ನು ಎಲ್ಲೂ ಹೊರತರಲು ಆಗಲಿಲ್ಲವಲ್ಲ ಎಂಬ ಬೇಸರ ನನಗೂ ಇತ್ತು. ಆದರೆ, ಫೆಬ್ರವರಿ ೨೮ರಂದು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆನಂದ್‌ ಆಡಿಯೋ ಅವರ ಧ್ವನಿಯಲ್ಲಿ ಮೂಡಿಬಂದ ಹಾಡನ್ನು ಬಿಡುಗಡೆ ಮಾಡಿದೆ. ಆ ಮೂಲಕ ನಾವೆಲ್ಲ ಅವರನ್ನು ಸ್ಮರಿಸುತ್ತಿದ್ದೇವೆ” ಎಂದಿದ್ದಾರೆ ವೀರ್.

ವೀರ್‌ ಸಮರ್ಥ್‌ ಅವರು ಮುಂಬೈನಲ್ಲಿದ್ದಾಗ, ರವೀಂದ್ರ ಜೈನ್‌ ಬಳಿ ಕೆಲಸ ಮಾಡಿದ್ದರು. ಆರಂಭದ ದಿನಗಳಲ್ಲಿ ಅವರ ಜೊತೆ ಐದು ವರ್ಷ ಸಂಗೀತ ಕೆಲಸ ಕಲಿತು ದುಡಿದವರು. ಒಂದು ರೀತಿ ಅವರ ಮನೆಯಲ್ಲೇ ಇದ್ದು, ಮಗನಂತೆ ಇದ್ದವರು ವೀರ್. ಹಾಗೆ ನೋಡಿದರೆ ವೀರ್‌ ಅವರು‌ ಸಿನಿಮಾ ಸಂಗೀತ ಕಲಿತಿದ್ದು ರವೀಂದ್ರ ಜೈನ್‌ ಅವರಿಂದಲೇ. ಅವರ ಮೂಲಕವೇ ರೆಕಾರ್ಡ್‌ ಮಾಡೋದು ಕಲಿತರು, ಮೈಕ್‌ ಮುಂದೆ ನಿಂತು ಹಾಡೋದನ್ನೂ ಕಲಿತರು. ಬಾಲಿವುಡ್‌ನ ಲೆಜೆಂಡ್ರಿ ಸಂಗೀತ ನಿರ್ದೇಶಕ ಆಗಿದ್ದ ಅವರು, “ರಾಮ್‌ ತೇರಿ ಗಂಗಾ ಮೈಲಿ” ಸೇರಿದಂತೆ ಹಿಟ್‌ ಸಿನಿಮಾಗಳಿಗೆ ಹಾಡು ಕೊಟ್ಟ ಕೀರ್ತಿ ರವೀಂದ್ರ ಜೈನ್‌ ಅವರದು. ವೀರ್‌ ಸಮರ್ಥ್‌ ಅವರು ಯಾವಾಗ ಭೇಟಿ ಮಾಡಿದರೂ, ರವೀಂದ್ರ ಜೈನ್‌ ಅವರು, ನನಗೊಂದು ಹಾಡು ಮಾಡಪ್ಪ, ನಾನು ಕನ್ನಡದಲ್ಲಿ ಹಾಡ್ತೀನಿ ಅಂತ ಹೇಳುತ್ತಿದ್ದರಂತೆ. ಅವರ ಸಲುವಾಗಿ ಹಾಡು ಮಾಡಲು ಒಳ್ಳೆಯ ಸಾಹಿತ್ಯ, ರಾಗ ಎದುರು ನೋಡುತ್ತಿದ್ದ ವೀರ್‌, ದೊಡ್ಡ ಸ್ಕೇಲ್‌ನಲ್ಲೇ ರಾಗ ಸಂಯೋಜನೆ ಮಾಡುವ ಆಸೆ ಇಟ್ಟುಕೊಂಡಿದ್ದರು. ಹೈ ರೇಂಜ್‌ನಲ್ಲೇ ಅವರಿಂದ ಹಾಡಿಸಬೇಕು ಅಂದುಕೊಂಡಿದ್ದ ವೀರ್‌, “ಪರಪಂಚ” ಚಿತ್ರಕ್ಕೆ ಸಂಗೀತ ಮಾಡುವಾಗ, “ಹುಟ್ಟಿದ ಊರನು” ಹಾಡನ್ನು ಅವರಿಂದ ಹಾಡಿಸುವ ಯೋಚನೆ ಮಾಡಿದ್ದಾರೆ. ಬಳಿಕ ನಿರ್ದೇಶಕ ಕ್ರಿಶ್‌ ಜೋಶಿ ಬಳಿ ಮಾತಾಡಿದ ಬಳಿಕ ಯೋಗರಾಜ್‌ಭಟ್‌ ಜೊತೆಯಲ್ಲೂ ಚರ್ಚಿಸಿದ್ದಾರೆ. ಎಲ್ಲವೂ ಓಕೆ ಆದಾಗ, ಮುಂಬೈಗೆ ಹೋಗಿ ರವೀಂದ್ರ ಜೈನ್‌ ಅವರ ಸ್ಟುಡಿಯೋದಲ್ಲೇ ಹಾಡಿಸಿದ್ದಾರೆ. ಆದರೆ, ಕಾರಣಾಂತರ ಆ ಹಾಡು ರಿಲೀಸ್‌ ಆಗಲಿಲ್ಲ.  ಆ ನೋವು ವೀರ್‌ ಅವರಲ್ಲಿತ್ತು. ಇತ್ತೀಚೆಗೆ ಆ ಹಾಡನ್ನು ಬಿಡುಗಡೆ ಮಾಡುವ ಬಗ್ಗೆಯೂ ನಿರ್ದೇಶಕರ ಜೊತೆ ಮಾತಾಡಿದ್ದರು. ಆನಂದ್‌ ಆಡಿಯೋ ಜೊತೆ ಮಾತಾಡಿದಾಗ, ಫೆ.೨೮ರಂದು ಅವರ ಹುಟ್ಟುಹಬ್ಬ ಇದ್ದುರಿಂದ, ಬಿಡುಗಡೆ ಮಾಡಲಾಗಿದೆ. ಸದ್ಯ ಆ ಹಾಡಿಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.

Related Posts

error: Content is protected !!