ನ್ಯಾಯಕ್ಕಾಗಿ ಪೊಲೀಸ್‌ ಅಧಿಕಾರಿಯಾಗಿ ಬಂದರು ಶ್ರುತಿ ಹರಿಹರನ್‌ !

ದಕ್ಷಿಣ ಭಾರತದ ನಟಿ ಶ್ರುತಿ ಹರಿಹರನ್‌ ನಟನೆಯ ‘ವಧಂ’ ವೆಬ್‌ ಸರಣಿ ಗಮನ ಸೆಳೆಯುತ್ತಿದೆ. ಸಿನಿಮಾಗಳ ವಿಶಿಷ್ಟ ಪಾತ್ರಗಳಲ್ಲಿ ಅವರನ್ನು ನೋಡಿದ್ದ ಅಭಿಮಾನಿಗಳು ತಮಿಳು ವೆಬ್‌ ಸರಣಿಯಲ್ಲಿ ಅವರನ್ನು ಪೊಲೀಸ್‌ ಅಧಿಕಾರಿಯನ್ನಾಗಿ ಕಂಡು ಥ್ರಿಲ್ಲಾಗಿದ್ದಾರೆ. ವೆಂಕಟೇಶ್ ಬಾಬು ನಿರ್ದೇಶನದ ಸರಣಿ ಮೊನ್ನೆ ಎಂಎಕ್ಸ್‌ ಪ್ಲೇಯರ್‌ನಲ್ಲಿ ಪ್ರೀಮಿಯರ್ ಆಗಿದ್ದು, ಥ್ರಿಲ್ಲರ್‌ ಕಥಾನಕದಿಂದ ಸರಣಿ ನೋಡುಗರನ್ನು ಸೆಳೆಯುತ್ತಿದೆ. ಶ್ರುತಿ ಇಲ್ಲಿ ಪೊಲೀಸ್ ಅಧಿಕಾರಿ ‘ಶಕ್ತಿ ಪಾಂಡಿಯನ್‌’ ಪಾತ್ರದಲ್ಲಿ ನಟಿಸುತ್ತಿದ್ದಾರೆ.

“ನಟಿಯಾಗಿ ನಾನು ಸದಾ ಸವಾಲಿನ ಪಾತ್ರಗಳನ್ನು ಎದುರುನೋಡುತ್ತೇನೆ. ಸಾಂಪ್ರದಾಯಿಕ ಪಾತ್ರಗಳಲ್ಲಷ್ಟೇ ನಟಿಸುವುದು ಬೇಜಾರು. ನ್ಯಾಯಕ್ಕಾಗಿ ಹೋರಾಟ ನಡೆಸುವ, ಪ್ರಭಾವಿ ಕೊಲೆಗಾರ ರಾಜಕಾರಣಿಯನ್ನು ಎದುರು ಹಾಕಿಕೊಂಡು ಸವಾಲು ಸ್ವೀಕರಿಸುವ ಶಕ್ತಿ ಪಾತ್ರದಲ್ಲಿ ನಾನು ತಲ್ಲೀನಳಾಗಿದ್ದೇನೆ” ಎನ್ನುತ್ತಾರೆ ಶ್ರುತಿ. ಸರಣಿಯಲ್ಲಿ ಭರ್ಜರಿ ಆಕ್ಷನ್ ಸನ್ನಿವೇಶಗಳಿವೆ. ಇಂತಹ ಪಾತ್ರವನ್ನು ನಿಭಾಯಿಸುವಲ್ಲಿ ತಮಗೆ ನೆರವಾಗುತ್ತಿರುವ ನಿರ್ದೇಶಕರನ್ನು ಶ್ರುತಿ ಸ್ಮರಿಸುತ್ತಾರೆ.

ಐಪಿಎಸ್ ಅಧಿಕಾರಿ ಶಕ್ತಿ ಪಾಂಡಿಯನ್‌ ತಮ್ಮ ಮಹಿಳಾ ಸಹೋದ್ಯೋಗಿಗಳೊಂದಿಗೆ ಪ್ರಭಾವಿ ರಾಜಕಾರಣಿಯೊಬ್ಬರು ನಡೆಸಿದ ಕೊಲೆಯನ್ನು ಭೇದಿಸಲು ಹೊರಡುತ್ತಾರೆ. ಮಹಿಳಾ ಅಧಿಕಾರಿಯಾಗಿ ಅವರಿಗೆ ಸಾಕಷ್ಟು ತೊಡಕುಗಳು ಎದುರಾಗುತ್ತವೆ. ಈ ಎಲ್ಲಾ ಬೆದರಿಕೆ, ತೊಡಕುಗಳನ್ನು ಮೆಟ್ಟಿನಿಂತು ಅವರು ಹೇಗೆ ಕೊಲೆಗಾರನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ ಎನ್ನುವುದು ಸರಣಿಯ ಕಥಾವಸ್ತು. “ಇದು ಸೂಪರ್‌ ಥ್ರಿಲ್ಲರ್ – ಡ್ರಾಮಾ. ನಟಿ ಶ್ರುತಿ ಪಾತ್ರವನ್ನು ಜೀವಿಸಿದ್ದಾರೆ” ಎನ್ನುತ್ತಾರೆ ನಿರ್ದೇಶಕ ವೆಂಕಟೇಶ್ ಬಾಬು. ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ಅಶ್ವಥಿ ವಾರಿಯರ್‌, ಸೆಮ್ಮಲಾರ್ ಅನ್ನನ್‌, ಪ್ರಿತೀಷಾ ಪ್ರೇಮಕುಮಾರನ್‌, ವಿವೇಕ್ ರಾಜಗೋಪಾಲ್‌ ನಟಿಸಿದ್ದಾರೆ.

Related Posts

error: Content is protected !!