Categories
ಸಿನಿ ಸುದ್ದಿ

ಮೆಜೆಸ್ಟಿಕ್ ಎಂಬ ಮಾಯಾಜಾಲದಲ್ಲೊಮ್ಮೆ ಸಂಚಾರಿಯ ಸಂಚಾರ ! ನಟ ಸಂಚಾರಿ ವಿಜಯ್ ಹೇಳಿದ ಬಟ್ಟೆ ಪ್ರಸಂಗ !!


ಬೆಂಗಳೂರು ಅಂದ್ರೇನೆ ಹಾಗೆ. ಅದೊಂದು ಕಲರ್ ಫುಲ್ ನಗರ. ಶ್ರಮ ಜೀವಿಗಳ ಸಲಹುವ ಸಿಟಿ. ಇಲ್ಲಿ ಕರುಣೆಯೂ ಇದೆ, ಕಣ್ಣೀರು ಇದೆ. ಕಷ್ಟವೂ ಇದೆ, ಸುಖವೂ ಇದೆ. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಮೋಸ ಉಂಟು, ದ್ವೇಷವೂ ಉಂಟು. ಬಡವ, ಶ್ರೀಮಂತ ಎಂಬ ಭೇದ-ಭಾವ ಇಲ್ಲದ ರಾಜಧಾನಿ ಇದು. ಎಲ್ಲೆಲ್ಲಿಂದಲೋ ಬಂದವರು ಇಲ್ಲಿ ನಾನಾ ರೀತಿ ಕಷ್ಟ ಅನುಭವಿಸಿದ್ದಾರೆ. ಮೋಸ ಹೋಗಿದ್ದಾರೆ. ಅದಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕೂಡ ಹೊರತಲ್ಲ. ಆ ಅನುಭವ ಏನು ಅನ್ನೋದನ್ನು ಸ್ವತಃ ಸಂಚಾರಿ ವಿಜಯ್ ಹೇಳಿಕೊಂಡಿದ್ದಾರೆ…

ಓವರ್ ಟು ಸಂಚಾರಿ ವಿಜಯ್…

‘ವರುಷಗಳ ಹಿಂದೆ ನಮ್ಮ ಮನೆಯಲ್ಲಿ ನನ್ನ ಕೈಗೆ ಒಂದಿಷ್ಟು ಹಣ ಸಿಕ್ಕರೆ ಮುಗಿಯಿತು. ಹೇಳಿ ಕೇಳಿ ಶೋಕಿವಾಲನ ಬ್ರೀಡಿನಂತಿದ್ದ ನಾನು ಬೆಳ್ಳಂಬೆಳಗ್ಗೆ ಎದ್ದು ರೆಡಿಯಾಗಿ ಮುರುಕು ಮಸುಕು ಕನ್ನಡಿ ಮುಂದೆ ನಿಂತು ಕನ್ನಡಿಯ ಮೇಲಿನ ಧೂಳ್ಯಾವುದೂ ಪೌಡರ್ ಯಾವುದು ಗೊತ್ತಾಗದೆ ಅಳತೆ ಮೀರಿ ಮುಖದ ತುಂಬಾ ಪಾಂಡ್ಸ್ ಪೌಡರ್ ಮೆತ್ತಿಕೊಂಡು, ತಲೆಗೆ ಕೊಬ್ಬರಿ ಎಣ್ಣೆ ಸುರಿದು ಸೈಡಿನಿಂದ ಕ್ರಾಪು ತೆಗೆದು ಮೂವತ್ತು ರೂಪಾಯಿಯ ಕನ್ನಡಕ ಕಣ್ಣಿಗೆ ಬಿತ್ತೆಂದರೆ ಆಹ!!! ಜಗತ್ತೇ ಕಲರ್ಫುಲ್. ನಮ್ಮ ತಂದೆಯ ಶೂ ನನಗೂ ಮುಕ್ಕಾಲು ಭಾಗ ಸೈಜ್ ಆಗುತ್ತಿದ್ದರಿಂದ ಸ್ವಲ್ಪ ಬಟ್ಟೆಯನ್ನು ಹಿಮ್ಮಡಿಯ ಜಾಗಕ್ಕೆ ತುರುಕಿ ಬಿಗಿ ಮಾಡಿ ನೀರಿನಿಂದ ಅದರ ಮೇಲ್ಮೈ ಎಲ್ಲ ಒರೆಸಿ ಎರೆಡೂ ಪಾದಗಳಿಗೆ ಕೂರಿಸಿ ಊರಲ್ಲಿ ಟಾರ್ರೋಡು ಇರುತ್ತಿರಲಿಲ್ಲವಾದ್ದರಿಂದ ಶೂಗೆ ಮಣ್ಣು ಮೆತ್ತಿಕೊಳ್ಳಬಾರದೆಂದು ತುದಿಗಾಲಿನಲ್ಲೇ ಸೂಕ್ಷ್ಮವಾಗಿ ನಡೆಯುತ್ತಾ ದಾರಿಯಲ್ಲಿ ಎದುರು ಸಿಗುತ್ತಿದ್ದ ಶನಿ ಮಹಾತ್ಮನ ಗುಡಿಗೆ ಡೈ ಹೊಡೆದು ಬಸ್ ಸ್ಟಾಂಡ್ ಗೆ ಬಂದರೆ ಊರಿಗೆ ಊರೇ ಈ ನವರಂಗಿಯ ಅವತಾರ ನೋಡಿ ಮೂರ್ಛೆ ಹೋಗದೆ ಉಳಿದರೆ ಪುಣ್ಯ…

ಇಂಥಾ ಈ ನವರಂಗಿ ನಮ್ಮೂರಿಂದ ಹೊರಡುವ ಬೆಂಗಳೂರು-ಚಿಕ್ಕಮಗಳೂರಿನ ಬಸ್ಸು ಹತ್ತಿದವನೇ ಮೊದಲು ಜೋಪಾನ ಮಾಡುತ್ತಿದ್ದುದು ಪ್ಯಾಂಟ್ ಒಳಗಿನ ಸುರಂಗದೋಪಾದಿಯಲ್ಲಿದ್ದ ಚಡ್ಡಿಯ ಜೇಬಿನ ಹೇರ್ ಪಿನ್ನನ್ನು. ಕಾರಣ ಇವನ ಹತ್ತಿರ ಇರುವ ಹಣವನ್ನು ಎಲ್ಲಿ ಯಾರು ಕದ್ದುಬಿಡುತ್ತಾರೋ ಎಂದು ಜೋಪಾನ ಮಾಡುತ್ತಿದ್ದುದು ದೊಗಳೆಯ ಪ್ಯಾಂಟ್ ಒಳಗಿನ ಚಡ್ಡಿ ಅದರ ಮೇಲೊಂದು ಜಗದಗಲದ ಜೇಬು ಅಲ್ಲಿ ಮನೆಯಿಂದ ತಂದ ಹಣನಿಧಿ. ಅದನ್ನು ಒಂದರಮೇಲೊಂದು ಸುರುಳಿಯಾಕಾರದಲ್ಲಿ ಸುತ್ತಿ ಅದಕ್ಕೊಂದು ರಬ್ಬರ್ ಬ್ಯಾಂಡ್ ಬಿಗಿದು, ಆ ಜೇಬನ್ನು ಸೀಲ್ ಮಾಡಲೆಂಬಂತೆ ಒಂದಷ್ಟು ಹೇರ್ ಪಿನ್ ಸಿಕ್ಕಿಸಿ ಎಂಥ ಚತುರ ಕಳ್ಳ ಕಾಕನೇ ಬಂದರೂ ಈ ಭದ್ರವಾದ ಕೋಟೆಯ ಒಂದು ಪಿನ್ನನ್ನೂ ಅಲುಗಾಡಿಲಸಧ್ಯವಾದಷ್ಟು ಸೇಫ್ಟಿ ಪಿನ್ನಿನ ಸೇಫ್ಟಿ…

ಭದ್ರವಾಗಿರುವುದು ಖಾತ್ರಿಯಾದ ಮೇಲೆ ಆಟ ಶುರು, ಅವರಿವರ ಜೊತೆ ಕಿತ್ತಾಡಿ ನೂಕಾಡಿ ತಳ್ಳಾಡಿ ಹಿಮಾಲಯ ಪರ್ವತದ ನೆತ್ತಿಯನ್ನೇ ಮುಟ್ಟಿದವನಂತೆ ಹೆಮ್ಮೆಯಿಂದ ಬೀಗುತ್ತಾ ಕೊನೆಗೂ ಡ್ರೈವರ್ ನ ಎಡ ಪಕ್ಕದಲ್ಲಿರುವ ಉದ್ದನೆಯ ಸೀಟನ್ನು ಗಿಟ್ಟಿಸಿಕೊಂಡೆ ತೀರಬೇಕು. ಅಷ್ಟು ಸಾಲದೆಂಬಂತೆ ನಾವು ಕೂರುವ ಜಾಗ ಡ್ರೈವರ್ ಸೀಟಿಗಿಂತ ತುಸು ಮುಂದೆಯೇ ಇರಬೇಕು ಹಾಗಿದ್ದರೆ ನಾವು ಡ್ರೈವರಿಗಿಂತ ಮುಂದಿದ್ದೇವೆ ಎಂಬ ಮಂಕು ಗರ್ವ ಬೇರೆ ಅಲ್ಲದೆ ನಮ್ಮ ಎಡ ಭುಜ ಭುಜ ಆನಿಸಿಕೊಂಡೇ ಕೂರಬೇಕು. ಅಪ್ಪಿ ತಪ್ಪಿ ಒಮ್ಮೆಲೇ ಬ್ರೇಕ್ ಏನಾದರೂ ಒತ್ತಿದರೆ ಗ್ಲಾಸು ಒಡೆದು ಬಸ್ಸಿನಾಚೆಗೆ ಮೊದಲನೇ ಪಲ್ಟಿ ಇವನೇ ಆಗಬೇಕು. ಹೇಗೆ ಮಂಗನಾಟ ಆಡುತ್ತ ಅಡ್ಡ ಕೂತು ಡ್ರೈವರ್ ಗೆ ಸರಿಯಾಗಿ ಹಿಂದಿನ ಮಿರರ್ ಕಾಣದೆ ಹತ್ತಾರು ಸಲ ಒರಟು ಲಾಲಿ ಹಾಡಿಸಿ ಕೊಳ್ಳದಿದ್ದರೆ ತಿಂದದ್ದು ಅರಗುವುದು ಎಲ್ಲಿಂದ…

ಅದರಲ್ಲೂ ಚಳಿಗಾಲವೋ ಅಥವಾ ಮಳೆಗಾಲವೇನಾದರೂ ಆಗಿದ್ದರಂತೂ ಮುಚ್ಚಿದ ಕಿಟಕಿಯ ಸಂದಿಯಿಂದ ಸಿಡಿಯುವ ಇರುಚಲು ನೀರನ್ನು ಪಕ್ಕದಲ್ಲಿ ಕುಳಿತಿದ್ದವರ ಮೇಲೆ ಸಿಡಿಯಲು ಬಿಟ್ಟು ಬೀಗುವುದೊಂದು ಖಯಾಲಿ. ಸ್ವಲ್ಪ ಥಂಡಿಯಾಯಿತೆಂದರೆ ಸಾಕು ಎರೆಡು ಮೊಣಕಾಲನ್ನು ಮತ್ತು ಅಂಗೈಯ್ಯನ್ನು ಬಾನೆಟ್ ಗೆ ಒದ್ದುಕೊಂಡು ಕೂರುವುದು ಅದು ಬಿಸಿಯಾಗಿ ಅದರ ಶಾಖ ಮೊಣಕಾಲಿಗೋ ಅಂಗೈಗೋ ತಾಕಿದರೆ ಮನೆಯಲ್ಲಿ ಅಮ್ಮನ ಅಡುಗೆಯ ಒಲೆಯ ಮುಂದೆ ಕೂತು ಬಿಸಿ ಕಾಯಿಸಿದಷ್ಟೇ ಹಿತವಾದ ಅನುಭವ ನೀಡುವಂತೆ ಅನುಭವಿಸುವುದು. ಹೀಗೆ ಹಿಂದಿನ ಸೀಟಿನಲ್ಲಿ ಕೂರುವವರಿಗೆ ಯಾರಿಗಾದರು ಉಂಟೆ ಈ ಸ್ವರ್ಗ ಸುಖ. ಜೊತೆಗೆ ಮುಂದೆ ಕೂತರೆ ಆ ಗ್ಲಾಸಿನ ಮೂಲಕ ಕಾಣುವ ಎಲ್ಲ ಹಳ್ಳಿಗಳನ್ನು ನೋಡುತ್ತಾ ಚುನಾವಣೆಯಲ್ಲಿ ಏನೋ ಭಾರಿ ಅಂತರದಲ್ಲಿ ಗೆದ್ದುಬಂದ ಕ್ಯಾಂಡಿಡೇಟ್ ನಂತೆ ಚಿಳ್ಳೆಪಿಳ್ಳೆಗಳಿಂದ ಹಿಡಿದು ಕಂಡ ಕಂಡವರಿಗೆಲ್ಲಾ ಕೈ ಬೀಸಿದ್ದೇ ಬೀಸಿದ್ದು, ಏಕೆಂದರೆ ಎಲ್ಲಾ ಊರಿನ ಮುಂದಿನ ಉಸಾಬರಿ ಯೆಲ್ಲಾ ಮುಂದೆ ಕೂತ ಇವನದೇ ಅಲ್ಲವೇ? ಅದೂ ಅಲ್ಲದೆ ನಮ್ಮ ಬಸ್ಸು ಇರೋ ಬಾರೋ ವಾಹನಗಳನ್ನೆಲ್ಲಾ ಹಿಂದಿಕ್ಕಿ ಎಲ್ಲರಿಗಿಂತ ಮುಂದಿರಬೇಕು ಅಷ್ಟೇ ಯಾಕಂದ್ರೆ ಇದು ನಮ್ಮಪ್ಪ ಕೊಡಿಸಿದ್ದಲ್ಲವೇ?

ಆದರೆ ಇದೋ ಎಪ್ಪತ್ತು ಎಂಭತ್ತು ಸ್ಪೀಡ್ ಮುಟ್ಟಿದ ತಕ್ಷಣ ಲೇಯ್ ಯಾಕೋ ಹಿಂಗ್ ತುಳೀತಿಯ ನನ್ನಾ ಅಂತ ಬುಸುಗುಡುತ್ತಾ ಬಾನೆಟ್ ಒಳಗಿಂದ ಬಿಸಿ ನೀರ ಬುಗ್ಗೆಗಳ ತೆಗೆದು ನಮ್ಮ ಕಾಲುಗಳ ಮೇಲೆ ಸಿಡಿಸಿ ಆಗಾಗ ಸೇಡು ತೀರಿಸಿಕೊಳ್ಳುತ್ತಿತ್ತು. ಅಂಥದ್ರಲ್ಲಿ ನಮ್ಮ ಬಸ್ಸು ಯಾವುದಾದರೊಂದು ವಾಹನವನ್ನು ಹಿಂದಿಕ್ಕಿದರೆ ಮುಗಿಯಿತು ಫಾರ್ಮುಲಾ ಒನ್ ನಾವೇ ಗೆದ್ದಂತೆ ಕಿರುಚಿದ್ದೇ ಕಿರುಚಿದ್ದು. ನಮ್ಮ ಡ್ರೈವರ್ಗೋ ಚಿಯರ್ ಗರ್ಲೆ ಚಿಯರ್ ಮಾಡುತ್ತಿರಬೇಕು ಎಂದೆನಿಸಿ ಮೈಮೇಲೆ ದೇವರ ಬರಿಸಿಕೊಂಡವನಂತೆ ಮುದ್ದೆ ಕೋಲು ತಿರುಗಿಸುವಂತೆ ಎಡಗೈ ನಿಂದ ಘಡ್ರ ಘಡ್ರ ಅಂತ ಗೇರ್ ತಿರುಗಿಸಿ ಹಾಕಿದವನೇ, ಮಳೆಗೆ ನೆಂದು ಬಿಸಿಲಿಗೆ ಒಣಗಿ ಕೊರಡಿನಂತಾಗಿರುತ್ತಿದ್ದ ಹಾರನ್ನನ್ನು ಅಂಬೋ ಅಂತ ಕಿರುಚಿಸಿ ಬರ್ರೋ ಅನ್ನಿಸಿಬಿಡುತ್ತಿದ್ದರೂ ಅದರ ವೇಗ ಮಾತ್ರ ಅರವತ್ತೇ ಆಗಿರುತ್ತಿತ್ತು…

ಹೀಗೆ ಆಗರ್ಭ ತುಂಬಿರುತ್ತಿದ್ದ ನಮ್ಮ ಬಸ್ಸು ಯಾವುದಕ್ಕೂ ಜಗ್ಗದೆ ಕುಗ್ಗದೆ ಯಾರ ಮಾತಿಗೂ ಕಿವಿಗೊಡದೆ ಅಲ್ಲೊಂದು ಸಣ್ಣ ಗುಂಡಿಗೆ ನಮ್ಮನ್ನು ಅಲುಗಾಡಿಸಿ ಇಲ್ಲೊಂದು ದೊಡ್ಡ ಗುಂಡಿಗೆ ತನ್ನ ಎದೆ ಗೂಡನ್ನು ಕುಕ್ಕಿ ಎಡಗಡೆ ಇದ್ದವರನ್ನು ಬಲಕ್ಕೆ ಎಸೆದು ಬಲಗಡೆ ಇದ್ದವರನ್ನು ಎಡಕ್ಕೆ ನೂಕಿ, ತಳ್ಳಾಡಿಸಿ ಕಿರುಚಾಡಿಸಿ ಅರಚಾಡಿಸಿ ತನ್ನೊಡಲೊಳಗೊಂದು ಮಿನಿ ಕುರುಕ್ಷೇತ್ರ ಮಾಡಿಸಿ ತಾನು ಮಾತ್ರ ಏನು ಮಾಡದ ಗುಮ್ಮನಂತೆ ಮಧ್ಯಾಹ್ನದ ಊಟದ ಹೊತ್ತಿಗೆ ಬೆಂಗಳೂರಿನ ಮೆಜೆಸ್ಟಿಕ್ಕಿಗೆ ತಂದು ಬಿಡುತ್ತಿತ್ತು…

ಬೆಂಗಳೂರಿನ ಹೃದಯ ಭಾಗಕ್ಕೆ ಬಂದು ಇಳಿದವನಿಗೆ ಖುಷಿಯೋ ಖುಷಿ ಸಾಗರದಂತೆ ತುಂಬಿ ತುಳುಕುವ ಜನಸಾಗರ, ಅಲ್ಲಲ್ಲಿ ಕಾಣುವ ಎತ್ತರದ ಬಿಲ್ಡಿಂಗು, ಹೊಟ್ಟೆ ತುಂಬಾ ಉಂಡು ಹೊರಳಾಡುವಂತೆ ಆಡುವ VOLVO ಬಸ್ಸುಗಳು. ಮೆಜಸ್ಟಿಕ್ ಬ್ರಿಜ್ ಹತ್ತಿ ಎಡಕ್ಕೆ ನೋಡಿದರೆ ಬೆಂಗಳೂರಿನ ಮೂಲೆ ಮೂಲೆ ತಲುಪಿಸಲು ಸಾಲುಗಟ್ಟಿ ನಿಂತ BMTC ಬಸ್ಸುಗಳು ಅಲ್ಲೊಂದಷ್ಟು ಕಿಕ್ಕಿರಿದ ಜನಗಳು ಅವಕ್ಕೊಂದಷ್ಟು ಮಾರ್ಗದ ನಂಬರ್ಗಳು. ಬಲಕ್ಕೆ ತಿರುಗಿದರೆ ನಮ್ಮನ್ನು ಊರುಗಳಿಗೆ ಹೊತ್ತೊಯ್ಯಲು ನಿಂತ ಕಡುಗೆಂಪು ಬಸ್ಸುಗಳು ಮತ್ತವುಗಳ ಮುಂದೆ ತಮಿಳುನಾಡು, ಆಂಧ್ರ, ಕಡಪ, ಶಿಮೊಗ್ಗ, ಮಂಗಳೂರು,ಉಡುಪಿ, ಕುಂದಾಪುರ, ಮಂಡ್ಯ, ಕೋಲಾರ, ರಾಯಚೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಅಂತ ಒಂದೇ ಸಮನೆ ಕಂಡಕ್ಟರುಗಳ ಕೂಗು. ಈ ಮಧ್ಯೆ ಪ್ರೈವೇಟ್ ಬಸ್ಸುಗಳ ಕಂಡಕ್ಟರ್ ಗಳು ತಾವೇನು ಕಡಿಮೆ ಎನ್ನುವಂತೆ ಬರೀ ಕೂಗುವುದಷ್ಟೇ ಅಲ್ಲ ಜೊತೆಗೆ ವಿಷಲ್ ಊದುತ್ತ ಊರುಗಳ ಹೆಸರು ಹೇಳುತ್ತಾ ಬಸ್ಸಿನ ಡೋರನ್ನು ಗುದ್ದಿದ್ದೇ ಗುದ್ದಿದ್ದು ಸದ್ಯ ಅವು ತಿಂದ ಹೊಡೆತಕ್ಕೆ ಉದುರಿ ಹೋಗದೆ ಉಳಿದದ್ದೇ ಹೆಚ್ಚು…

ಎರೆಡು ಬಸ್ಸು ನಿಲ್ದಾಣಗಳನ್ನು ಸೀಳಿಕೊಂಡ ಮೆಜೆಸ್ಟಿಕ್ ಸೇತುವೆ ದಾಟಿ ದಾರಿಯನ್ನು ಬಳಸಿ ಕೆಳಗಿಳಿದರೆ ತರೇವಾರಿ ಕೊಳ್ಳುವ ವಸ್ತುಗಳು, ಆಹಾ!!! ಎರೆಡು ಕಣ್ಣು ಸಾಲದು ಕಿವಿಗಳಂತೂ ಸಾಧ್ಯವೇ ಇಲ್ಲ ಬಿಡಿ ಒಬ್ಬರಿಗಿಂತ ಒಬ್ಬರು ನಾಮೇಲು ತಾಮೇಲು ಅಂತ ಕೂಗಿದ್ದೇ ಕೂಗಿದ್ದು. ಅಲ್ಲಿಂದ ಸಾಗಿ ಮುಂದೆ ಬಂದು ಗಾಂಧಿನಗರದ ಸಂದಿಗೊಂದಿಗಳಲ್ಲಿ ಬಿರಿಯಾನಿ,ಪೂರಿ,ಇಡ್ಲಿ,ವಡೆಯ ಪರಿಮಳ ಹೀರಿ ಹೊರಬಂದರೆ ಅಲ್ಲಿ ಕಣ್ಣಿಗೆ ಬೇಕಾದ, ಬಡವರಿಗೆ ಸಾಮಾನ್ಯರಿಗೆ ಕೈಗೆಟುಕುವ ಸಸ್ತಾ ಬಟ್ಟೆಗಳನ್ನು ಮೈತುಂಬ ಹೊದ್ದುಕೊಂಡು ನಿಂತಿರುವ ಬಜಾರುಗಳು ಕಾಣಿಸುತ್ತವೆ. ಒಮ್ಮೆ ನಮ್ಮಂತ ಆಸೆಗಣ್ಣಿನ ಕಮಂಗಿಗಳು ಈ ಬಜಾರಿನ ಒಳ ಹೊಕ್ಕರೆ ಮುಗಿಯಿತು ಒಂದಾ ಮೈತುಂಬ ಬಟ್ಟೆಗಳು ಇರುತ್ತವೆ ಇಲ್ಲ ಮೈಮೇಲೆ ಇರುವ ಬಟ್ಟೆಗಳೂ ಮಾಯವಾಗಿಬಿಟ್ಟಿರುತ್ತವೆ…

ಹೀಗೆ ಬಜಾರಿನಲ್ಲಿ ಕಣ್ಣಿಗೆ ರಂಗು ರಂಗಾಗಿ ಕಾಣುವ ಬಟ್ಟೆಗಳನ್ನು ಕೊಂಡುಕೊಂಡು ವಾಪಸ್ಸು ಊರಿಗೆ ಹೋಗಿ ಬಸ್ ನಿಲ್ದಾಣದಲ್ಲಿ ಇಳಿದರೆ ಹೃತಿಕ್,ಸಲ್ಮಾನ್,ಶಾರುಖ್ ಎಂದು ಪೋಸು ಕೊಡುತ್ತಿದ್ದುದರಲ್ಲಿ ನನಗೇ ಆಗ್ರಸ್ಥಾನ. ಏಕೆಂದರೆ ನಮ್ಮಂತ ಸಾಮಾನ್ಯ ಅಥವಾ ಬಡ ಕುಟುಂಬದವರಿಗೆ ಬ್ರಾಂಡೆಡ್ ವಸ್ತುಗಳು ಅಥವಾ ಬಟ್ಟೆಗಳು ಶ್ರೀಮಂತರಿಗೆ ಮಾತ್ರ ಮೀಸಲು ಎಂದುಕೊಳ್ಳುತ್ತಿದ್ದ ಕಾಲವದು. ಹೀಗೆ ನಮ್ಮಂಥವರ ಕೈಗೆಟುಕುವ ಬಡವರ ಬಟ್ಟೆಯ ಬಜಾರಿನೊಳಕ್ಕೆ ಹೋದವನೇ ನನ್ನ ಅವತಾರವನ್ನು ಅಲ್ಲಿದ್ದವನೊಬ್ಬ ಗಮಿನಿಸಿ ಕೇಳಿಯೇಬಿಟ್ಟ….

‘ಬಾ ಗುರು ಇಲ್ಲಿ ಯಾವ ಥರ ಬಟ್ಟೆ ಬೇಕು ಹೇಳು ತೋರಿಸುತ್ತೀನಿ ಇಲ್ಲಿ ಸಿಗೋ ಬಟ್ಟೆ ಸಿಂಗಾಪುರದಲ್ಲೂ ಸಿಗಲ್ಲ ನಿಂಗೆ’ ಎಂದು ಕೈಹಿಡಿದು ಎಳೆದುಕೊಂಡು ಬಂದು ಅಲ್ಲಿದ್ದ ಎಲ್ಲ ಟೀಶರ್ಟ್ ಪ್ಯಾಂಟ್ ಗಳನ್ನೂ ನನ್ನ ಮುಂದೆ ಹರವಿಬಿಟ್ಟ. ನಾನು ಇವನನ್ನು ಏನು ಕೇಳೇ ಇಲ್ಲವಲ್ಲ ಎಂದು ಮನಸಿನೊಳಗೆ ಚಿಂತಿಸುತ್ತಿರುವಾಗಲೇ ಮತ್ತೊಂದಷ್ಟು ಬಟ್ಟೆಗಳ ತಂದು ಸುರುವಿಬಿಟ್ಟ. ಅದೇಕೋ ಏನೋ ಯಾವೊಂದು ಶರ್ಟ್ ಪ್ಯಾಂಟು ನನಗೆ ಇಷ್ಟವಾಗಲಿಲ್ಲ. ‘ಇಲ್ಲ ನನಗೆ ಇಷ್ಟ ಆಗಲಿಲ್ಲ’ ಅಂದಿದ್ದೆ ತಡ ಪಕ್ಕದ ಅಂಗಡಿಯಿಂದ ಮತ್ತೊಂದು ಲಾಟು ಬಂದು ಬಿತ್ತು. ಇದು ಯಾಕೋ ಸರಿ ಹೋಗುತ್ತಿಲ್ಲ ಎಂದವನೇ ‘ಯಾವುದು ಇಷ್ಟ ಆಗ್ತಾ ಇಲ್ಲ ಗುರು ನನ್ನ ಬಿಟ್ಬಿಡು’ ಎಂದು ಗರಮ್ಮಾಗಿ ಹೇಳಿ ಹೊರಟವನ ಕೈಯ್ಯನ್ನು ಯಾರೋ ಹಿಡಿದು ಎಳೆದಂತಾಯ್ತು, ಹೊರಳಿ ನೋಡಿದರೆ ಅದೇ ಆಸಾಮಿ ‘ಇಷ್ಟು ಬಟ್ಟೆ ತೋರಿಸಿದ್ದೀನಿ, ನೋಡಿದಮೇಲೆ ತಗೊಳ್ಳೇ ಬೇಕು, ಏನು ಆಟ ಆಡ್ತೀಯ’ ಅಂದ. ‘ಅಲ್ಲಾ ಗುರು ಮೊದಲನೇದಾಗಿ ನಾನು ನಿನ್ನನ್ನು ಮಾತನಾಡಿಸಲೇ ಇಲ್ಲ, ನೀನಾಗೆ ಕೈ ಹಿಡಿದು ಕರೆದುಕೊಂಡು ಬಂದು ಎಲ್ಲಾ ಸುರಿದೆ, ನೋಡು ಅಂದೆ, ಈಗ ನೋಡಿದರೆ ತಗೊಳ್ದೆ ಹೋಗೋ ಹಾಗೆ ಇಲ್ಲ ಅಂತ ಬೆದರಿಕೆ ಹಾಕ್ತಾ ಇದ್ದೀಯ, ಯಾವ ನ್ಯಾಯ’ ಎಂದೆ. ಅಷ್ಟು ಹೊತ್ತಿಗೆ ಅಲ್ಲಿದ್ದ ಅಕ್ಕ ಪಕ್ಕದ ನಾಲ್ಕು ಜನ ಸೇರಿಕೊಂಡರು. ಸ್ವಲ್ಪ ಧೈರ್ಯ ಬಂತು ‘ಅಬ್ಬಾ ಸದ್ಯ ಇವನಿಂದ ಬಚಾವಾದೆ’ ಎಂದು ನಿಟ್ಟುಸಿರು ಬಿಡುವ ಹೊತ್ತಿಗೆ ಅದರಲ್ಲಿದ್ದವನೊಬ್ಬ ಕೇಳಿದ ‘ಯಾಕೆ ಗುರು ಒತ್ತಾಯ ಮಾಡ್ತಿಯಾ? ಅವನು ಇಲ್ಲೇ ತಗೋಳ್ತಾನೆ ಸುಮ್ನೆ ಇರು’ ಎಂದು ನನಗೆ ಮೃದುವಾಗಿ ಒತ್ತಾಯ ಮಾಡಲು ಶುರು ಮಾಡಿದ, ಅದರ ಜೊತೆಗೆ ಉಳಿದವರೂ ನನಗೆ ಮೆಲ್ಲಗೆ ಗದರುವ ಧಾಟಿಯಲ್ಲಿ ಮಾತನಾಡಿದರು, ಆಗ ನನಗೆ ಅರಿವಾಯಿತು ಇವರೆಲ್ಲ ಒಬ್ಬರಿಗೊಬ್ಬರು ಗೊತ್ತಿರುವವರೇ ಅಂತ. ನಾನು ಅವರ ಮಾತಿನ ಹೊಡೆತದಿಂದ ಸುಧಾರಿಸುವಷ್ಟರಲ್ಲಿ ನನ್ನನ್ನು ಅವರ ಅಂಗಡಿಯ ಒಳಕ್ಕೆ ಕರೆದುಕೊಂಡು ಹೋದವರೇ ಬಟ್ಟೆಯನ್ನು ತೆಗೆದುಕೊಳ್ಳುವವರೆಗೆ ಬಿಡದೆ ಹಿಂಸಿಸಿ ನನ್ನ ಬಳಿಯಿದ್ದ ಅಷ್ಟೂ ಹಣವನ್ನು ಪೀಕಿ ನನಗೆ ಇಷ್ಟವಿಲ್ಲದ ಬಟ್ಟೆಗಳನ್ನು ಕೈಗೆ ತುರುಕಿ ಹೊರ ಕಳುಹಿಸಿದರು…

ಜೋಲು ಮುಖ ಹಾಕಿ ಸೀದಾ ಮೆಜೆಸ್ಟಿಕ್ ಕಡೆ ನಡೆದವನೇ, ಕಲ್ಲು ಬೆಂಚಿನ ಮೇಲೆ ಕೂತು ಬಟ್ಟೆ ಅಂಗಡಿಯವನಿಗೂ ಮತ್ತು ನನ್ನಿಂದ ಹಣವನ್ನು ಕಿತ್ತ ಅವನ ಜೊತೆಯವರಿಗೆ ಮನಸ್ಸಿನಲ್ಲಿ ಹಿಡಿ ಶಾಪ ಹಾಕಿ ಕುಳಿತಿದ್ದೆ. ಅಷ್ಟರಲ್ಲಿ ನಮ್ಮೂರ ಬಸ್ಸು ಬಂದು ನಿಂತಿತು ಅದಾಗಲೇ ಹೆಚ್ಚು ಕಡಿಮೆ ಭರ್ತಿಯಾಗಿದ್ದ ಬಸ್ಸಿನಲ್ಲಿ ಸಿಕ್ಕಿದ್ದು ಕೊನೆಯ ಸಾಲಿನ ಕೊನೆಯ ಸೀಟು, ಇನ್ನು ನನಗೆ ಯಾರ ಊರಿನ ಯಾರ ಉಸಾಬರಿಯು ಇಲ್ಲ ಎಂದು ಯಾರಿಗೂ ಕೈಬೀಸದೆ ಅವರು ಕೊಟ್ಟ ಬಟ್ಟೆಯ ಬ್ಯಾಗನ್ನು ಅವಚಿ ಹಿಡಿದು ಹಾಗೆಯೇ ಅದರ ಮೇಲೆ ತಲೆಯೂರಿದ್ದಷ್ಟೇ, ಗೊತ್ತಿಲ್ಲದೇ ಗಾಢವಾದ ನಿದ್ರೆಗೆ ಜಾರಿದ್ದೆ. ಕಣ್ಣು ಬಿಟ್ಟು ನೋಡುವಾಗ ಊರ ಬಸ್ಸು ನಿಲ್ದಾಣದ ಹೆಬ್ಬಾಗಿಲ ಮುಂದೆ ನಿಂತು ಮಳೆಗೆ ತೊಯ್ದಿತ್ತು. ನಾನು ಯಾರಿಗೂ ಕಾಣದಂತೆ ಬಸ್ಸು ಇಳಿದವನೇ ನಸುಗತ್ತಲಿನಲ್ಲಿ ಮನೆ ಸೇರಿದೆ. ಹೀಗೆ ಮುಗಿದಿತ್ತು ಬಟ್ಟೆಯ ಪ್ರಸಂಗವೊಂದು.

Categories
ಸಿನಿ ಸುದ್ದಿ

ಭಾರತ ಸಿಂಧೂರಿ ಸಿನಿಮಾ ವಿಚಾರ ಬಹಿರಂಗವಾದ ಬೆನ್ನಲೇ, ಡಿ.ಕೆ. ರವಿ ಕುರಿತು ಚಿತ್ರ ಮಾಡುವೆ ಅಂತ ಶಾಸಕ ಸಾ.ರಾ. ಮಹೇಶ್‌ ಹೇಳಿದ್ದೇಕೆ?


ಇದೆಲ್ಲ ನಿಜವಾ ? ಜನಕ್ಕೆ ಹಿಗೊಂದು ಅಚ್ಚರಿ. ಯಾಕಂದ್ರೆ, ಯಾರೋ ಅಧಿಕಾರಿಗಳು, ರಾಜಕಾರಣಿಗಳು ಇಲ್ಲವೇ ವಿವಾದಿತ ವ್ಯಕ್ತಿಗಳು ದೊಡ್ಡ ಪ್ರಚಾರಕ್ಕೆ ಬಂದಾಗ ಅವರ ಕುರಿತು ಸಿನಿಮಾ ಮಾಡುವ ಸುದ್ದಿಗಳು ಚಾಲ್ತಿಗೆ ಬರುವುದು ಅಷ್ಟೇ ಸಹಜ. ಈಗ ಅದೇ ಸಾಲಿನಲ್ಲಿ ಮಹಿಳಾ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ದಿವಂಗತ ಡಿ.ಕೆ. ರವಿ ಅವರ ಕುರಿತು ಸಿನಿಮಾ ಮಾಡುವ ವಿಚಾರಗಳು ಹೆಚ್ಚು ಸುದ್ದಿಯಲ್ಲಿವೆ. ಇದೇನು ಹೊಸದಲ್ಲ, ಹಾಗೆಯೇ ವಿಶೇಷವೂ ಅಲ್ಲ. ಕನ್ನಡ ಸಿನಿಮಾದ ಇತಿಹಾಸದಲ್ಲಿ ಹೀಗೆಲ್ಲ ಎಷ್ಟು ವ್ಯಕ್ತಿಗಳ ಬಗ್ಗೆ ಗಾಂಧಿನಗರದಲ್ಲಿ ಸುದ್ದಿ ಆಗಿಲ್ಲ ಹೇಳಿ ? ಮೊನ್ನೆ ಮೊನ್ನೆಯಷ್ಟೇ ಮಾಜಿ ಭೂಗತ ದೊರೆ ಮತ್ತಪ್ಪ ರೈ ಕುರಿತು ಸಿನಿಮಾ ಮಾಡುವ ವಿಚಾರವೂ ಕೊನೆಗೆ ಏನಾಯಿತು ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ಅಷ್ಟೇ ಯಾಕೆ, ಸುನಾಮಿ ಹೆಸರಲ್ಲೋ, ಕೊರೋನಾ ಅಂತಲೋ, ಡ್ರಗ್ಸ್‌ ಮಾಫಿಯೋ ಜಾಡು ಹಿಡಿದೋ ಪ್ರಚಲಿತ ವಿಷಯದ ಬೆನ್ನು ಹತ್ತಿ ಅದೇ ಹೆಸರಲ್ಲೊಂದು ಸಿನಿಮಾ ಮಾಡುತ್ತೇವೆಂದು ಸುದ್ದಿ ಮಾಡಿಕೊಂಡವರ ಕಥೆಗಳೂ ಇಲ್ಲಿ ಬೇಕಾದಷ್ಟಿವೆ.

ಕೆಲವರಿಗೆ ಇದೊಂಥರ ಖಾಯಲಿ. ಪ್ರಚಾರದಲ್ಲಿರುವ ವ್ಯಕ್ತಿ ಅಥವಾ ವಸ್ತು, ವಿಷಯಗಳಿಗೆ ರಾತ್ರೋರಾತ್ರಿ ಕಥೆ ಹೆಣೆದು ಸಿನಿಮಾ ಮಾಡುತ್ತೇನೆ ಅಂತ ಸುದ್ದಿ ಮಾಡಿಕೊಂಡವರು ಇಲ್ಲಿ ತುಂಬಾ ಜನರಿದ್ದಾರೆ. ಅವರಾರು ಸದಭಿರುಚಿಯ ಸಿನಿಮಾ ಮಾಡಿದವರಲ್ಲ. ಹಾಗೆಯೇ ಸ್ಟಾರ್‌ ಸಿನಿಮಾಗಳನ್ನು ಮಾಡಿಯೂ ಅನುಭವ ಇಲ್ಲ. ಹಾಗೋ ಹೀಗೋ ಯಾವುದೋ ಒಂದು ವಿಷಯ ದೊಡ್ಡದಾಗಿ ಸುದ್ದಿಯಾದಾಗ ಆ ವಿಷಯದ ಮೇಲೆ ಸಿನಿಮಾ ಮಾಡುತ್ತೇನೆಂದು ಹೇಳಿಕೊಂಡು ಸುದ್ದಿ ಮಾಡಿಕೊಂಡವರು. ಕೊನೆಗೆ ಹಾಗೆ ಸುದ್ದಿ ಆದ ವ್ಯಕ್ತಿ, ವಸ್ತು, ವಿಷಯಗಳ ಪೈಕಿ ಕೆಲವೇ ಕೆಲವು ಸಿನಿಮಾ ಆಗಿವೆ. ಆ ಸಿನಿಮಾ ಮಾಡಿದವರೆಲ್ಲರೂ ಪ್ರೊಪೆಷನಲ್‌ ಸಿನಿಮಾ ಮೇಕರ್ಸ್.ಅವರು ಹೇಳಿದ್ದಕ್ಕೆ ಬದ್ಧತೆ ಹೊಂದಿದವರು. ಮಾತು ಉಳಿಸಿಕೊಳ್ಳುವುದಕ್ಕಾಗಿಯೇ ಕೊನೆಗೆ ಸಿನಿಮಾ ಮಾಡಿದವರು. ಗಾಂಧಿನಗರದ ವಾಸ್ತವದ ಪರಿಸ್ಥಿತಿ ಹೀಗಿದ್ದೂ ಕೂಡ ಈಗ ಎರಡು ವ್ಯಕ್ತಿಗಳ ಕುರಿತು ಸಿನಿಮಾ ಮಾಡುತ್ತೇವೆಂದು ಹೊರಟವರ ಬಗ್ಗೆಯೂ ಈಗ ಸಖತ್‌ ಸುದ್ದಿ ಆಗಿದೆ.

ಒನ್ಸ್‌ ಎಗೇನ್‌ ಇವರು ಕೂಡ ಸಿನಿಮಾ ಮಾಡಲು ಹೊರಟಿದ್ದು ರಾಜ್ಯದಲ್ಲಿ ಹೆಚ್ಚು ಸುದ್ದಿಯಲ್ಲಿರುವ ವ್ಯಕ್ತಿ ಹಾಗೂ ವಿಷಯಗಳ ಬಗ್ಗೆ. ರಾಜ್ಯದಲ್ಲಿ ಈಗ ಹೆಚ್ಚು ಸುದ್ದಿಯಲ್ಲಿರುವ ಮಹಿಳಾ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕುರಿತು ಪತ್ರಕರ್ತ ಕೃಷ್ಣಸ್ವರ್ಣ ಚಂದ್ರ ಎನ್ನುವವರು ಸಿನಿಮಾ ಮಾಡಲು ಹೊರಟಿದ್ದಾರಂತೆ. ಅವರ ಪ್ರಕಾರ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಭಾರತ ಸಿಂಧೂರಿ ಎನ್ನುವ ಚಿತ್ರದ ಟೈಟಲ್‌ ಕೂಡ ರಿಜಿಸ್ಟ್ರಾರ್‌ ಆಗಿದೆಯಂತೆ. ಅಚ್ಚರಿ ಅಂದ್ರೆ ಈ ಸುದ್ದಿ ಬಹಿರಂಗ ಗೊಂಡ ಬೆನ್ನಲೇ ಅತ್ತ ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಕೂಡ ದಿವಂಗತ ಡಿ.ಕೆ.ರವಿ ಕುರಿತು ಸಿನಿಮಾ ಮಾಡುವುದಾಗಿ ಹೇಳಿದ್ದಾರೆನ್ನುವ ಸುದ್ದಿ ಹರಡಿದೆ. ಇದೆಲ್ಲ ಎಷ್ಟು ಸತ್ಯ? ಮಹಿಳಾ ಐಎಎಸ್‌ ಆಧಿಕಾರಿ ರೋಹಿಣಿ ಸಿಂಧೂರಿ ಕುರಿತು ಸಿನಿಮಾ ಮಾಡುತ್ತೇನೆಂದು ಕೃಷ್ಣಸ್ವರ್ಣ ಚಂದ್ರ ಎನ್ನುವವರು ಸುದ್ದಿ ಬಹಿರಂಗ ಪಡಿಸಿದ ಬೆನ್ನಲೇ ಶಾಸಕ ಸಾ.ರಾ. ಮಹೇಶ್‌ ತಾವು ಕೂಡ ದಿವಂಗತ ಡಿ.ಕೆ. ರವಿ ಕುರಿತು ಸಿನಿಮಾ ಮಾಡುತ್ತೇನೆ ಅಂಹ ಹೇಳಿದ್ದೇಕೆ? ಡಿ.ಕೆ. ರವಿ ಕುರಿತು ಸಿನಿಮಾ ಮಾಡಲು ಸಾ.ರಾ. ಮಹೇಶ್‌ ಹೋರಟಿದ್ದಾರೆ?

ಇತ್ತ ಕೃಷ್ಣ ಸ್ವರ್ಣ ಚಂದ್ರ ನಿರ್ದೇಶಿಸುವ ಭಾರತ ಸಿಂಧೂರಿ ಸಿನಿಮಾದಲ್ಲಿ ಇರುವ ಪಾತ್ರಗಳಾದರು ಯಾವು? ಸೋಷಲ್‌ ಮೀಡಿಯಾದಲ್ಲಿ ಈಗ ಈ ಸಿನಿಮಾ ಸುದ್ದಿಗಳ ಸುತ್ತ ಇತ್ಯಾದಿ ಪ್ರಶ್ನೆಗಳು ವೈರಲ್‌ ಆಗಿವೆ.
ಆ ಕತೆ ಇರಲಿ ಬಿಡಿ, ಅವರ ಬಯಸಿದಂತೆ ಸಿನಿಮಾ ಮಾಡಲಿ. ಆದರೆ ಇವರೀಗ ಸಿನಿಮಾ ಮಾಡುತ್ತೇವೆಂದು ಹೇಳಿಕೊಂಡ ಸಂದರ್ಭವಾದರೂ ಹೇಗಿದೆ ಗೊತ್ತಾ? ಸಿನಿಮಾ ಚಟುವಟಿಕೆಗಳೇ ಕಂಪ್ಲೀಟ್‌ ಸ್ಥಬ್ದವಾಗಿರೋ ಈ ಸಂದರ್ಭದಲ್ಲಿ ಇವರೆಲ್ಲ ಸಿನಿಮಾ ಮಾಡ್ತೀವಿ ಅನ್ನೋದು ಎಷ್ಟು ಸತ್ಯ?

ಇವರು ಸಿನಿಮಾ ಮಾಡುವ ಉತ್ಸಾಹ, ಉಮೇದು, ಕೆಚ್ಚು, ಕಿಚ್ಚು ಇನ್ನೆಷ್ಟು ದಿನ ಇರಬಹುದು? ಬರೀ ಇದೆಲ್ಲ ಪ್ರಚಾರದ ಗೀಳಾ ? ಇಂತಹ ಪ್ರಶ್ನೆಗಳು ಕೂಡ ಈಗ ಹೆಚ್ಚು ಚರ್ಚೆಯಲ್ಲಿವೆ. ಐಎಎಸ್‌ ಆಧಿಕಾರಿ ರೋಹಿಣಿ ಸಿಂಧೂರಿ ಅವರ ಕುರಿತು ಸಿನಿಮಾ ಬರುವುದೇ ನಿಜವಾಗಿದ್ದರೆ, ಅತ್ತ ಶಾಸಕ ಸಾ.ರಾ. ಮಹೇಶ್‌ ಅವರು ದಿವಂಗತ ಡಿ.ಕೆ. ರವಿ ಕುರಿತು ಸಿನಿಮಾ ಮಾಡುವುದು ನಿಜವಾ? ಆ ಸಿನಿಮಾ ಬರುವುದದಾರೂ ಯಾವಾಗ? ಉತ್ತರಕ್ಕೆ ಕಾಲವೇ ನಿರ್ಧರಿಸಲಿದೆ.

Categories
ಸಿನಿ ಸುದ್ದಿ

ಕಲಾವಿದರ ಕತ್ತಲ ಬದುಕನ್ನು ಅನಾವರಣಗೊಳಿಸಿದ ಅಣ್ತಮ್ಮ ; ಯತಿರಾಜ್ ನಿರ್ದೇಶನದ ನೈಜ ಘಟನೆಯ ಕಿರುಚಿತ್ರ

ಕನ್ನಡ ಚಿತ್ರರಂಗದ ಸಾವಿರಾರು ಸಿನಿಮಾಗಳ ಪತ್ರಿಕಾ ಪ್ರಚಾರಕರ್ತರಾಗಿ ಕೆಲಸ ಮಾಡುತ್ತಾ ಮುಂಚೂಣಿಯಲ್ಲಿರುವವರು ಸುಧೀಂದ್ರ ವೆಂಕಟೇಶ್ ಇದೇ ಮೊದಲ ಬಾರಿಗೆ ಅವರೂ ಸಹ ಅಣ್ತಮ್ಮ ಕಿರುಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ

ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದಾಕ್ಷಣ, ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಈ ಕ್ಷೇತ್ರದಲ್ಲಿ ಇವತ್ತಲ್ಲಾ ನಾಳೆ ಗೆಲ್ಲುತ್ತೇವೆ, ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತದೆ ಎಂಬ ಭರವಸೆಯಿಂದ ಕಾದಿರುವ ಅದೆಷ್ಟೋ ಜನ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಇಲ್ಲಿದ್ದಾರೆ. ಕೊರೊನಾ ಎನ್ನುವ ದುಷ್ಟ ವೈರಸ್ಸು ಅಂಥ ಎಲ್ಲರ ಬದುಕನ್ನೂ ಅಕ್ಷರಶಃ ನರಕವನ್ನಾಗಿಸಿದೆ.

ಸಿನಿಮಾ ರಂಗಕ್ಕೆ ಸಂಬಂಧಿಸಿದ ಸಾಕಷ್ಟು ಜನ ಬಡ ಕಲಾವಿದರ ಮನೆಯ ಗೋಡೆಯನ್ನು ಶ್ರೀಮಂತವಾಗಿರಿಸಿರುವುದು ಅವರು ದೊಡ್ಡ ಕಲಾವಿದರ ಜೊತೆಗೆ ತೆಗೆಸಿಕೊಂಡ ಫೋಟೋಗಳು ಮಾತ್ರ. ಮಿಕ್ಕಂತೆ, ಬಡತನ ಅವರ ಬದುಕನ್ನು ಇಂಚಿಂಚಾಗಿ ಕಿತ್ತು ತಿನ್ನುತ್ತಿದೆ. ಸದ್ಯ ಕೊರೊನಾ ಸಂಕಷ್ಟದಿಂದ ಹೆತ್ತ ಮಕ್ಕಳಿಗೆ ಹೊಟ್ಟೆ ತುಂಬ ಊಟ ಹೊಂಚುವುದೂ ಕಷ್ಟಕರವಾಗಿದೆ. ಮಡದಿಯ ತಾಳಿಯನ್ನೂ ಅಡವಿಟ್ಟು ದಿನಸಿ ತಂದವರು ಅದೆಷ್ಟೋ ಮಂದಿ. ಮನೆ ಬಾಡಿಗೆ ಕಟ್ಟಲು ಕೂಡಾ ಹಣವಿಲ್ಲದೆ ಹೆಣಗಾಡುತ್ತಿದ್ದಾರೆ ಇನ್ನಷ್ಟು ಜನ.

ಇಂಥ ಎಷ್ಟೋ ಜನರ ಬಾಳಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಬೆಳಕು ಮೂಡಿಸಿದ್ದಾರೆ. ಮೂರು ಸಾವಿರದ ಇನ್ನೂರು ಜನ ಕಾರ್ಮಿಕರು, ಕಲಾವಿದರು, ತಂತ್ರಜ್ಞರಿಗೆ ಯಶ್ ಸಂದಾಯ ಮಾಡಿರುವ ತಲಾ ಐದು ಸಾವಿರ ರುಪಾಯಿಗಳು ಹಸಿದ ಹೊಟ್ಟೆಗೆ ಅನ್ನದ ದಾರಿ ಮಾಡಿರುವುದರ ಜೊತೆಗೆ ನೊಂದ ಮನಸ್ಸುಗಳಿಗೆ ಸಮಾಧಾನ ನೀಡಿದೆ.


ಈ ವಿಚಾರಕ್ಕೆ ಸಂಬಂಧಿಸಿದಂತೆ ನೈಜ ಘಟನೆಯನ್ನು ಆಧರಿಸಿ ನಟ, ಪತ್ರಕರ್ತ ಯತಿರಾಜ್ ತಮ್ಮ ಕಲಾವಿದ ಫಿಲ್ಮ್ ಅಕಾಡೆಮಿ ಮೂಲಕ ʻಅಣ್ತಮ್ಮʼ ಎನ್ನುವ ಚೊಕ್ಕದಾದ ಕಿರುಚಿತ್ರವೊಂದನ್ನು ರೂಪಿಸಿದ್ದಾರೆ. ಈ ಚಿತ್ರದ ಕಥಾವಸ್ತು ಎಂಥವರ ಮನಸ್ಸನ್ನೂ ಭಾರವಾಗಿಸುತ್ತದೆ. ಜೊತೆಗೆ, ರಾಕಿಭಾಯ್ ಯಶ್ ಅವರ ಬಗೆಗಿನ ಅಭಿಮಾನ ನೂರ್ಮಡಿಗೊಳಿಸುತ್ತದೆ.
ಯತಿರಾಜ್ ನಟಿಸಿ, ನಿರ್ದೇಶಿಸಿರುವ ಈ ಕಿರುಚಿತ್ರದಲ್ಲಿ, ಭಾರತಿ, ಗುರು, ಅಜಯ್ ಗೌಡ, ತ್ರಿಷಿಕಾ, ನಮ್ರತ, ಸ್ಮೃತಿ ಮುಂತಾದವರು ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಸಾವಿರಾರು ಸಿನಿಮಾಗಳ ಪತ್ರಿಕಾ ಪ್ರಚಾರಕರ್ತರಾಗಿ ಕೆಲಸ ಮಾಡುತ್ತಾ ಮುಂಚೂಣಿಯಲ್ಲಿರುವವರು ಸುಧೀಂದ್ರ ವೆಂಕಟೇಶ್. ಇದೇ ಮೊದಲ ಬಾರಿಗೆ ಅವರೂ ಸಹ ಅಣ್ತಮ್ಮ ಕಿರುಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ.


ಮಾರುತಿ ಮೀರಜ್ಕರ್ ಸಂಗೀತವಿರುವ ಅಣ್ತಮ್ಮ ಕಿರುಚಿತ್ರಕ್ಕೆ ಸೋನು ಸಾಗರ್ ಛಾಯಾಗ್ರಹಣದ ಜೊತೆಗೆ ಸಂಕಲನ ಕೂಡಾ ಮಾಡಿದ್ದಾರೆ.

Categories
ಸಿನಿ ಸುದ್ದಿ

ಚಿತ್ರೋದ್ಯಮದ ಕಾರ್ಮಿಕರಿಗೆ ಉಚಿತ ಅಕ್ಕಿ ವಿತರಣೆಗೆ ಸುನೀಲ್ ಪುರಾಣಿಕ್ ಸರ್ಕಾರಕ್ಕೆ ಮನವಿ

ಕೋವಿಡ್ 19 ಎರಡನೇ ಅಲೆಯ ಸಾಂಕ್ರಾಮಿಕ ರೋಗದಿಂದ ತೀವ್ರ ಸಂಕಷ್ಟದಲ್ಲಿರುವ ಕನ್ನಡ ಚಿತ್ರೋದ್ಯಮದ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರಿಗೆ ಸರ್ಕಾರದಿಂದ ಉಚಿತ ಅಕ್ಕಿ ವಿತರಿಸುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಚಿತ್ರರಂಗದ ಇತರ ಗಣ್ಯರೊಂದಿಗೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಹಾಗೂ ವಾರ್ತಾ ಮತ್ತು ಸಣ್ಣ ಕೈಗಾರಿಕೆ ಸಚಿವ ಸಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕೋವಿಡ್ ಸಾಂಕ್ರಾಮಿಕದಿಂದ
ಕೋವಿಡ್19 ಎರಡನೇ ಅಲೆಯ ಸಾಂಕ್ರಾಮಿಕದಿಂದ ತೀವ್ರ ಸಂಕಷ್ಟದಲ್ಲಿದ್ದ ಕನ್ನಡ ಚಿತ್ರೋದ್ಯಮದವರಿಗೆ ಸರ್ಕಾರದ ವತಿಯಿಂದ ಆರ್ಥಿಕ ನೆರವು ಹಾಗೂ ರೋಗನಿರೋದಕ ಚುಚ್ಚುಮದ್ದು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿದ್ದನ್ನು ಕನ್ನಡ ಚಿತ್ರರಂಗ ಸ್ಮರಿಸುತ್ತದೆ. ತಮಗೇ ತಿಳಿದಿರುವಂತೆ ಲಾಕ್ ಡೌನ್ ನಿಂದಾಗಿ ಚಿತ್ರೋದ್ಯಮದ ಚಟುವಟಿಕೆಗಳು ಸ್ಥಗಿತವಾಗಿರುವುದರಿಂದ ಇಡೀ ಚಿತ್ರೋದ್ಯಮ ಸಂಕಷ್ಟಕ್ಕೆ ಸಿಲುಕಿದೆ.
ಚಿತ್ರೋದ್ಯಮದ ಎಷ್ಟೋ ಕಾರ್ಮಿಕರು, ತಂತ್ರಜ್ಞರು ಪಡಿತರ ಕಾರ್ಡುಗಳನ್ನೂ ಸಹ ಹೊಂದಿರುವುದಿಲ್ಲ.
ಆದ್ದರಿಂದ ಪ್ರತಿ ಕುಟುಂಬಕ್ಕೆ 25ಕೆಜಿಯ ಒಂದು ಚೀಲದಂತೆ ಕನಿಷ್ಟ 5000ಚೀಲ ಅಕ್ಕಿಯನ್ನು ಉಚಿತವಾಗಿ ವಿತರಿಸಿದರೆ ಅವರ ಕುಟುಂಬಗಳಿಗೆ ನೆರವಾಗಲಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.

ಅಲ್ಲದೆ ಸರ್ಕಾರದಿಂದ ನೀಡಲಾಗುತ್ತಿರುವ ಆರ್ಥಿಕ ನೆರವಿನ ಸದುಪಯೋಗ ಪಡೆದುಕೊಳ್ಳಲು ಚಿತ್ರೋದ್ಯಮಕ್ಕೆ ಪ್ರತ್ಯೇಕವಾಗಿ ಎರಡು ಸೇವಾಸಿಂಧು ಕೌಂಟರ್ ಗಳನ್ನು ತೆರೆಯುವಂತೆ ವಾರ್ತಾ ಸಚಿವ ಸಿ.ಸಿ.ಪಾಟೀಲ್ ಅವರಲ್ಲಿ ಅವರು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್, ನಿರ್ದೇಶಕಿ ಹಾಗೂ ನಟಿ ರೂಪ ಅಯ್ಯರ್ ಇದ್ದರು.

Categories
ಸಿನಿ ಸುದ್ದಿ

ಮಾಜಿ ಸಚಿವ ಸಿ.ಎಂ.ಉದಾಸಿ ನಿಧನಕ್ಕೆ ಸುನೀಲ್ ಪುರಾಣಿಕ್ ಸಂತಾಪ

ಮಾಜಿ ಸಚಿವರು, ಹಾನಗಲ್ ಕ್ಷೇತ್ರದ ಶಾಸಕರಾದ ಸಿ.ಎಂ. ಉದಾಸಿ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಸಂತಾಪ ಸೂಚಿಸಿದ್ದಾರೆ.
ಹಿರಿಯ ರಾಜಕೀಯ ಮುತ್ಸದ್ದಿ ಸಿ.ಎಂ.ಉದಾಸಿ ಅವರು ಅತ್ಯಂತ ಸರಳ ಸಜ್ಜನ ರಾಜಕಾರಣಿ. ಬಡವರು, ಜನ ಸಾಮಾನ್ಯರ ಬಗ್ಗೆ ಅಪಾರ ಕಾಳಜಿ ಇದ್ದ ಸಹೃದಯ ರಾಜಕಾರಣಿ. ಉದಾಸಿ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ. ಸಾಕಷ್ಟು ಯುವಕರಿಗೆ ಅವರು ಮಾದರಿಯಾಗಿದ್ದರು. ಉದಾಸಿಯವರ ನಿಧನದಿಂದ ಅವರ ಅಪಾರ ಅಭಿಮಾನಿ ಬಳಗ ದುಃಖದಲ್ಲಿ ಮುಳುಗಿದೆ.

ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಭಗವಂತ ಕರುಣಿಸಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

Categories
ಸಿನಿ ಸುದ್ದಿ

ಭರವಸೆಯ ಬದುಕು ವಿಡಿಯೋ ಸಾಂಗ್ ರಿಲೀಸ್: ಹಾಡಲ್ಲಿ ಮಿಂಚಿದ ಸ್ಟಾರ್ಸ್‌

‘ಸಾಕು ಇನ್ನು ಸಾಕು ಬರಿ ದೋಷಣೆಯ ನಿಲ್ಲಿಸಿರಿ ಸಾಕು’ ಗೀತೆಯ ಮೂಲಕ ಜನರಲ್ಲಿ ಭರವಸೆ ಮೂಡಿಸಲು ಹಾಗು ಸಕಾರಾತ್ಮಕ ಮನದಾಳವನ್ನು ಹೊರಹೊಮ್ಮಿಸಲು ಇಲ್ಲೊಂದು‌ತಂಡ ರೆಡಿಯಾಗಿದೆ. ಹೌದು, ಅದು ಆಲಾಪ್ ಕ್ರಿಯೇಷನ್ಸ್‌ ಮೂಲಕ. ವಿಶೇಷ ಅಂದರೆ, ‘ಫಾರ್ ರಿಜಿಸ್ಟ್ರೇಷನ್’ ನಿರ್ದೇಶಕರಾದ ನವೀನ್ ದ್ವಾರಕನಾಥ್ ಆಲಾಪ್ ಕ್ರಿಯೇಷನ್ಸ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ‘ಭರವಸೆಯ ಬದುಕು’ ಎಂಬ ಶೀರ್ಷಿಕೆಯ ಗೀತೆಯನ್ನು ಹೊರ ತಂದಿದ್ದಾರೆ. ಇವರು ನಿರ್ದೇಶನ ಮಾಡಿರೋ, ಈ ಹಾಡಿಗೆ ಚಂದನವನ ಹಾಗೂ ರಂಗಭೂಮಿ ಕಲಾವಿದರು, ಸಾಥ್ ನೀಡಿದ್ದಾರೆ.


ಈಗಾಗಲೇ ಅದೆಷ್ಟೋ ಮನಸ್ಸುಗಳು ನಕಾರಾತ್ಮಕ ಆಲೋಚನೆಯಲ್ಲಿ ಭರವಸೆಯನ್ನು ಕಳೆದುಕೊಂಡಿದ್ದು, ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ.

ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವು ಹದೆಗೆಟ್ಟಿರುವುದರಿಂದ ಜನರಲ್ಲಿನ ಆತ್ಮ ವಿಶ್ವಾಸ ಕುಂದುತ್ತಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಪಾಸಿಟಿವ್ ಆಲೋಚನೆ ಬೆಳೆಸಲು, ಆತ್ಮ ವಿಶ್ವಾಸ ತುಂಬಲು ಹಾಗೂ ಭರವಸೆ ಮೂಡಿಸಲೆಂದೇ ಈ ಗೀತೆಯನ್ನು ನಿರ್ದೇಶಿಸಲು ಮುಂದಾದೆ ಎನ್ನುತ್ತಾರೆ ನಿರ್ದೇಶಕರಾದ ನವೀನ್ ದ್ವಾರಕನಾಥ್.

ಜೂನ್ 9ರ ಬುಧವಾರ ಸಂಜೆ 5 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದ್ದು, ಈ ಹಾಡಿನಲ್ಲಿ ಅನಿರುದ್ಧ ಜಟ್ಕರ್, ಚಂದನ್ ಶರ್ಮಾ, ಪ್ರಥ್ವಿ ಅಂಬಾರ್ , ಸಿಂಪಲ್ ಸುನಿ, ವಸಿಷ್ಠ ಸಿಂಹ, ಸೋನು ಗೌಡ, ನಾಗೇಂದ್ರ ಪ್ರಸಾದ್, ಪಿ.ಡಿ.ಸತೀಶ್ ಚಂದ್ರ, ಕೃಷಿ ತಾಪಂಡಾ, ಹರ್ಷಿಕಾ ಪೂಣಚ್ಛ, ರಂಜಿನಿ ರಾಘವನ್, ರಘು ರಾಮನಕೊಪ್ಪ, ರೆಮೋ, ಜೈ ರಾಮ್ ಕಾರ್ತಿಕ್, ಕಿಶನ್ ಬೆಳಗಲಿ, ನವೀನ್ ಶಂಕರ್, ಮಯೂರ ರಾಘವೇಂದ್ರ, ಆರ್.ಜೆ. ಸೌಜನ್ಯ, ವರ್ಷಿಣಿ ಜಾನಕೀರಾಮ್,ಆರ್ ಅಭಿಲಾಷ್, ಯಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಇನ್ನು ಗಾಯಕರಾದ ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಹಿನ್ನಲೆ ಗಾಯಕರಾಗಿದ್ದು, ತಮ್ಮ ಬಹುಮುಖ ಪ್ರತಿಭೆಯನ್ನು ಬಳಸಿಕೊಂಡು ಸಂಗೀತ ನಿರ್ದೇಶಕ ಹರೀಶ್ ಆರ್ .ಕೆ ಹಾಗೂ ಸಿದ್ಧಾರ್ಥ್ ಹಾಡಿನ ಸಂಯೋಜನೆ ಮಾಡಿ, ಹರೀಶ್.ಆರ್.ಕೆ ಈ ಹಾಡಿಗೆ ಸಾಹಿತ್ಯವನ್ನು ನೀಡಿದ್ದಾರೆ. ಹಾಗೆ ಮನು ಸೆಡ್‌ಗಾರ್ ವಿಡಿಯೋ ಸಂಕಲನ ಮಾಡಿದ್ದಾರೆ.

Categories
ಸಿನಿ ಸುದ್ದಿ

ಕೊರೊನಾ ಸಂಕಷ್ಟ ಸಮಯದಲ್ಲಿ ಹುಟ್ಟೂರಿನ ಜನರಿಗೆ ನೆರವಾದ ನಿರ್ದೇಶಕ ಆರ್. ಚಂದ್ರು

ಎಷ್ಟೋ ಜನ‌ ತಾವು ಹುಟ್ಟಿ ಬೆಳೆದ ಊರನ್ನು ಬೆಳೆದ ಮೇಲೆ ಮರೆಯುವುದುಂಟು. ಆದರೆ, ಕೆಲವರು ಮಾತ್ರ ತಮ್ಮೂರಿನ ಜನರ ಕಷ್ಟಕ್ಕೆ ಸ್ಪಂದಿಸುವ ಗುಣವಿರುತ್ತದೆ.
ಕನ್ನಡ ಹಾಗು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಹೆಸರು ಮಾಡಿರುವ ನಿರ್ದೇಶಕ ಆರ್. ಚಂದ್ರು ಕೊರೊನಾ ಸಂಕಷ್ಟ ಸಮಯದಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ.

ಚಲನಚಿತ್ರ ಕ್ಷೇತ್ರವಲ್ಲದೇ ತಾವು ಹುಟ್ಟಿ ಬೆಳೆದ ಚಿಕ್ಕಬಳ್ಳಾಪುರ ಕೇಶಾವರ ಗ್ರಾಮದ ಸುಮಾರು ಸಾವಿರ ಮನೆಗಳಿಗೆ 25 ಕೆಜಿಯ ಅಕ್ಕಿ ಮೂಟೆ ನೀಡಿದ್ದಾರೆ.

‘ನಾನು ರೈತನ ಮಗ. ಕೊರೊನಾ
ಸಂಕಷ್ಟದ ಕಾಲದಲ್ಲಿ ನನ್ನೂರಿನವರಿಗೆ ನೆರವಾಗುವುದು ನನ್ನ ಧರ್ಮ.
ಇಂದು ಮತ್ತು ಎಂದೆಂದಿಗೂ ನಾನು ಮಣ್ಣಿನ ಋಣ ತೀರಿಸಲು ಮುಂದಾಗಿರುತ್ತೇನೆ ಎನ್ನುತ್ತಾರೆ ಆರ್ ಚಂದ್ರು.

Categories
ಸಿನಿ ಸುದ್ದಿ

ನೀವೇ ರಾಜಕುಮಾರ… ಸದ್ದಿಲ್ಲದೆ ಸಂಕಷ್ಟದಲ್ಲಿರೋ ಜನರ ನೆರವಿಗೆ ನಿಂತ ನಿರ್ಮಾಪಕ ವಿಜಯ್‌ ಕಿರಗಂದೂರು

ಕೆಜಿಎಫ್‌ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲೆ ದೊಡ್ಡ ಸದ್ದು ಮಾಡಿದ ಖ್ಯಾತಿ ನಿರ್ಮಾಪಕ ವಿಜಯ್‌ ಕಿರಗಂದೂರು ಅವರದ್ದು. ಆ ಚಿತ್ರದ ಮೂಲಕ ಅವರು ನಿರೀಕ್ಷೆ ಮೀರಿ ಗಳಿಕೆ ಕಂಡಡು ಅನ್ನೋದು ಕೂಡ ಅಷ್ಟೇ ಸುದ್ದಿ ಆಗಿದ್ದು ನಿಮಗೂ ಗೊತ್ತು. ಆದರೆ ಅದೇ ಬಂಡವಾಳದ ಮೂಲಕವೇ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವ ಹಾಗೆ ಅದ್ದೂರಿ ವೆಚ್ಚದ ಸಿನಿಮಾಗಳ ನಿರ್ಮಾಣದಲ್ಲಿ ಅವರು ಬ್ಯುಸಿ ಆಗಿದ್ದಾರೆನ್ನುವುದು ಒಂದೆಡೆಯಾದರೆ, ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸದ್ದಿಲ್ಲದೆ ಸುದ್ದಿ ಮಾಡದೆ ತೆರೆಮರೆಯಲ್ಲಿದ್ದೇ ದೊಡ್ಡ ಪ್ರಮಾಣದಲ್ಲಿ ಸಹಾಯಕ್ಕೆ ನಿಂತಿದ್ದಾರೆನ್ನುವುದು ಇನ್ನೊಂದು ವಿಶೇಷ.

ಹೌದು, ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಸಂಸ್ಥೆಯ ಮಾಲೀಕರಾದ ವಿಜಯ್‌ ಕಿರಗಂದೂರು, ತಮ್ಮ ಹುಟ್ಟೂರಿನ ಜನರ ಸಹಾಯಕ್ಕೆ ನಿಂತಿದ್ದಾರೆ. ತಮ್ಮ ತವರು ಜಿಲ್ಲೆ ಮಂಡ್ಯ ಆಸ್ಪತ್ರೆಗೆ ಎರಡು ಆಕ್ಸಿಜನ್ ಪ್ಲಾಂಟ್ ಹಾಗೂ ಇಪ್ಪತ್ತು ಆಕ್ಸಿಜನ್ ಸೇರಿದಂತೆ ಉತ್ತಮ ಸೌಲಭ್ಯವುಳ್ಳ ಹಾಸಿಗೆ ನೀಡಿದ್ದಾರೆ. ಹಾಗೆಯೇ ಸಂಕಷ್ಟದಲ್ಲಿದ್ದ ಜನರಿಗೂ ಆರ್ಥಿಕ ನೆರವಿನ ಜತೆಗೆ ಅಗತ್ಯ ಸೌಕರ್ಯ ಕಲ್ಪಿಸಿದ್ದಾರೆ. ಇದು ಅಲ್ಲಿನ ಜನರಿಗೆ ಸಾಕಷ್ಟು ಮೆಚ್ಚುಗೆ ಆಗಿದೆ. ಯಾವುದೇ ಪ್ರಚಾರವಿಲ್ಲದೆ ಅವರು ಈ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಹಾಗೆಯೇ ಕನ್ನಡ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ ಹಾಗೂ ಕಲಾವಿದರ ಒಕ್ಕೂಟದ ಸುಮಾರು 3200ಕ್ಕೂ ಅಧಿಕ ಮಂದಿಗೆ ಧನಸಹಾಯ ಮಾಡಿದ್ದಾರೆ.


ಎಲ್ಲಕ್ಕಿಂತಲೂ ಮಿಗಿಲಾಗಿ ಹೊಂಬಾಳೆ ಸಂಸ್ಥೆಯಲ್ಲಿ ಕೆಲಸ ಮಾಡುವ 600 ಕ್ಕೂ ಅಧಿಕ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ಕೊರೋನ ಲಸಿಕೆ ಹಾಕಿಸಿದ್ದಾರೆ. ಜತೆಗೆ ಅವರ ಎಲ್ಲಾ ಕಷ್ಟಗಳಿಗೂ ಸ್ಪಂದಿಸಿದ್ದಾರೆ. ಅವರ ಸಹಾಯ ಹಸ್ತ ಬರೀ ಕರ್ನಾಟಕಕಷ್ಟೇ ಸೀಮಿತವಾಗಿಲ್ಲ. ತಮ್ಮ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ತೆಲುಗಿನ “ಸಲಾರ್” ಚಿತ್ರಕ್ಕೆ ಕಾರ್ಯನಿರ್ವಹಿಸುತ್ತಿರುವ ಸುಮಾರು 150ಕ್ಕೂ ಅಧಿಕ ಮಂದಿ ಚಿತ್ರತಂಡದ ಸದಸ್ಯರಿಗೂ ಅಗತ್ಯ ನೆರವು ನೀಡಿ, ಅಪತ್ಪಾಂದವ ಎನಿಸಿಕೊಂಡಿದ್ದಾರೆ. ಸಿನಿಮಾ ಕಾರ್ಮಿಕರು ಹಾಗೂ ಮಾಧ್ಯಮದ ಮಿತ್ರರಿಗೂ ಗೊತ್ತಾಗದಂತೆ ನೆರವಿ ಹಸ್ತ ನೀಡಿದ್ದಾರೆ.


ಇದ್ಯಾವುದೇ ಕೆಲಸವನ್ನು ಅವರು ಯಾವುದೇ ಪ್ರಚಾರವಿಲ್ಲದೆ ನಡೆಸಿಕೊಂಡು ಬಂದಿದ್ದಾರೆ.
ಕಳೆದ ವರ್ಷ ಕೊರೋನಾದಿಂದ ಸಿನಿಮಾ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗಲೂ, ನಿರ್ಮಾಪಕ ವಿಜಯ್ ಕಿರಗಂದೂರು ಅವರ ನೆರವಿಗೆ ಬಂದಿದ್ದರು. ತಮ್ಮ ನಿರ್ಮಾಣದ ಕೆ.ಜಿ.ಎಫ್ ಹಾಗೂ ಯುವರತ್ನ ಚಿತ್ರತಂಡದ ಸದಸ್ಯರ ಖಾತೆಗೆ ಉತ್ತಮ ಮೊತ್ತವನ್ನು ಎರಡು ತಿಂಗಳು ವರ್ಗಾಯಿಸಿದ್ದರು. ಹಾಗೆಯೇ ಕನ್ನಡ ಚಲನಚಿತ್ರ ಕಾರ್ಮಿಕರ‌ ಸಂಕಷ್ಟ ಕ್ಕೂ ನರೆವಾಗಿದ್ದರು. ಕೊರೋನ ಸಂದರ್ಭದಲ್ಲಿ ಅವರು ಯಾವುದೇ ಪ್ರಚಾರವಿಲ್ಲದೇ ಮಾಡಿರುವ ಸತ್ಕಾರ್ಯಗಳು ನಿಜಕ್ಕೂ ಆದರ್ಶನೀಯವಾಗಿವೆ. ಸದ್ದಿಲ್ಲದೆ ಮಾಡುತ್ತಿರುವ ಅವರ ನೆರವಿನ ಕಾರ್ಯಗಳ ಬಗ್ಗೆ ಕೇಳಿದರೆ, ಇದಕ್ಕೆಲ್ಲ ಪ್ರಚಾರ ಬೇಕಾ? ಪ್ರಚಾರಕ್ಕಾಗಿ ಸಂಕಷ್ಟದಲ್ಲಿದ್ದವರ ನೆರವಿಗೆ ನಿಲ್ಲಬೇಕಾ? ಬದಲಿಗೆ ಇದು ನಮ್ಮ ಕರ್ತವ್ಯ. ದೇವರು ಕೊಡುವ ಶಕ್ತಿ ಕೊಟ್ಟಿದ್ದಾನೆ ಅಂದಾಗ, ನಮ್ಮಿಂದಾದಷ್ಟು ಕೆಲಸ ಮಾಡಬೇಕು. ಅದೇ ನಿಜವಾದ ಧರ್ಮ ಅಂತಾರೆ ನಿರ್ಮಾಪಕ ವಿಜಯ್‌ ಕಿರಗಂದೂರು.

Categories
ಸಿನಿ ಸುದ್ದಿ

ಸಿನಿ ಮಂದಿ ನೆರವಿಗೆ ರೆಡಿಯಾದ ನಟ ನೀನಾಸಂ ಸತೀಶ್ : ದಿನಸಿ ಕಿಟ್ ವಿತರಣೆಗೆ ಸಂಚಾರಿ ವಿಜಯ್ ಮತ್ತು ಗೆಳೆಯರು ಸಾಥ್

ಕೊರೊನಾ ಸಮಸ್ಯೆಗೆ ಇಡೀ ಜಗತ್ತು ತತ್ತರಿಸಿದ್ದು ಗೊತ್ತೇ ಇದೆ. ಲೆಕ್ಕವಿಲ್ಲದಷ್ಟು ಮಂದಿ ಜೀವ ಬಿಟ್ಟಿದ್ದಾರೆ. ಹಲವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕೆಲಸವಿಲ್ಲದೆ ಜನ ಕಂಗಾಲಾಗಿದ್ದಾರೆ. ಇದಕ್ಕೆ ಸಿನಿಮಾರಂಗದ ಮಂದಿಯೂ ಹೊರತಲ್ಲ. ಬದುಕು ನಡೆಸಲು ಕಷ್ಟ ಪಡುತ್ತಿರುವ, ಸಂಕಷ್ಟಕ್ಕೆ ಸಿಲುಕಿರುವ ಸಿನಿ ಮಂದಿಯ ನೋವಿಗೆ ಈಗಾಗಲೇ ಕನ್ನಡದ ಅನೇಕ ಸ್ಟಾರ್ ನಟರು ಸ್ಪಂದಿಸಿದ್ದಾರೆ. ಈಗ ನಟ ನೀನಾಸಂ ಸತೀಶ್ ಮತ್ತು ಸಂಚಾರಿ ವಿಜಯ್ ಮತ್ತು ಗೆಳೆಯರು ಕೂಡ ಸಿನಿಮಾ ಕಾರ್ಮಿಕರ ನೋವಿಗೆ ಸ್ಪಂದಿಸಲು ಮುಂದಾಗಿದ್ದಾರೆ.

ನಟ ಸಂಚಾರಿ ವಿಜಯ್, ಪತ್ರಕರ್ತ ಶರಣ್ ಹುಲ್ಲೂರು, ನಟಿಯರಾದ ಶರ್ಮಿಳಾ‌ ಮಾಂಡ್ರೆ ಹಾಗೂ ಕಾರುಣ್ಯ ರಾಮ್ ಅವರನ್ನೊಳಗೊಂಡ ಒಂದು ತಂಡದ ಮೂಲಕ ಅಗತ್ಯ ಇರುವ ಸಿನಿಮಾ ಕಾರ್ಮಿಕರಿಗೆ ಫುಡ್ ಕಿಟ್ ನೀಡಲು ಸನೀನಾಸಂ ಸತೀಶ್ ಸಿದ್ಧತೆ ನಡೆಸಿದ್ದಾರೆ.

ಇದೆಲ್ಲ ಆ ತಂಡದ ತಯಾರಿ.‌ ನಟ ಸತೀಸ್ ನೀನಾಸಂ ಕಚೇರಿಯಲ್ಲಿ ಎಲ್ಲಾ ಸಿದ್ದತೆ ನಡೆಯುತ್ತಿದೆ. ಅಕ್ಕಿ, ಬೆಳೆ, ಸಕ್ಕರೆ, ತರಕಾರಿ ಸೇರಿದಂತೆ ಅಗತ್ಯವಾಗಿ ಬೇಕಾದ ಆಹಾರ ಪದಾರ್ಥಗಳನ್ನು ತಂಡ ರೆಡಿ ಮಾಡುತ್ತಿದೆ. ಸದ್ಯಕ್ಕೆ ಇದರ ವಿತರಣೆಯೆಲ್ಲ ಹೇಗೆ, ಎಂತೂ ಗೊತ್ತಿಲ್ಲ. ಆದರೆ, ಇದೆಲ್ಲ ಹೇಗೆ ಶುರುವಾಯ್ತು‌..? ಆ ಬಗ್ಗೆ ನಟ ಸತೀಸ್ ನೀನಾಸಂ ಹೇಳುವುದು ಹೀಗೆ‌‌…

ಸತೀಶ್ ಮಾತು.
‘ಈಗಾಗಲೇ ಸಿನಿಮಾ ರಂಗದಲ್ಲಿ‌ ನಟರಾದ ಸುದೀಪ್, ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್‌, ನಟಿಯರಾದ ರಾಗಿಣಿ, ಸಂಜನಾ ಸೇರಿದಂತೆ ಹಲವರು ಸಿನಿಮಾ ಕಾರ್ಮಿಕರ ನೆರವಿಗೆ ನಿಂತಿದ್ದಾರೆ. ಈ ಪೈಕಿ ಯಶ್ ಆಂಗ್ರಪಂಕ್ತಿಯಲ್ಲಿ ನಿಂತಿದ್ದಾರೆ.

ಹಾಗೆಯೇ ನಟ ಸಂಚಾರಿ ವಿಜಯ್ ಕೂಡ ಮೊದಲಿನಿಂದಲೂ ತಮ್ಮ ಕೈಲಾದ ಸಹಾಯ‌ ಮಾಡುತ್ತಾ ಬರುತ್ತಿದ್ದಾರೆ.

ಇವರ ಜೊತೆ ನಾನು ಸಮಾನ‌ ಮನಸ್ಕ ತಂಡದೊಂದಿಗೆ ಫುಡ್ ಕಿಟ್ ವಿತರಣೆಗೆ ರೆಡಿಯಾಗುತ್ತಿದ್ದೇನೆ’ ಎಂದಿದ್ದಾರೆ.

Categories
ಸಿನಿ ಸುದ್ದಿ

ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಬಿ.ಜಯಾ ನಿಧನ

ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಬಿ.ಜಯಾ (77) ಇಂದು (ಜೂನ್ 3) ನಿಧನರಾಗಿದ್ದಾರೆ. ತಿಂಗಳ ಹಿಂದಷ್ಟೇ ಅವರು ಪಾರ್ಶ್ವವಾಯುಗೆ ತುತ್ತಾಗಿ, ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಬಿ.ಜಯಾ ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಜನಪ್ರಿಯ ಹಾಸ್ಯನಟಿ. ನರಸಿಂಹರಾಜು ಮತ್ತು ದ್ವಾರಕೀಶ್ ಜೋಡಿಯಾಗಿ ಅವರ ಪಾತ್ರಗಳು ಬಹು ಜನಪ್ರಿಯಗೊಂಡಿದ್ದವು.
ಜಯಾ ಅವರು ಮೂರು ತಲೆಮಾರಿನ ನಟ, ನಟಿಯರೊಂದಿಗೆ ಅಭಿನಯಿಸಿದ್ದರು ಎಂಬುದು ವಿಶೇಷ.

ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಗೆ ಬಗೆಯ ಪಾತ್ರಗಳಲ್ಲಿ ನಟಿಸಿದ್ದರು., ಹತ್ತಾರು ಧಾರಾವಾಹಿಗಳಲ್ಲೂ ಅವರು ಕಾಣಿಸಿಕೊಂಡಿದ್ದರು

ಜಯಾ ಅವರ ತಂದೆ ಬಸಪ್ಪನವರು ರಂಗಭೂಮಿ ಕಲಾವಿದರು. ಪುತ್ರಿಯನ್ನು ನಟಿಯಾಗಿ ರೂಪಿಸಬೇಕೆನ್ನುವ ಇರಾದೆ ಅವರದಾಗಿತ್ತು. ತಂದೆಯ ಒತ್ತಾಸೆಯಂತೆ ಜಯಾ ರಂಗಭೂಮಿ ಪ್ರವೇಶಿಸಿದರು. ಆಗ ಅವರಿಗೆ ಹತ್ತು ವರ್ಷ. ‘ಚಾಮುಂಡೇಶ್ವರಿ ನಾಟಕ ಮಂಡಳಿ’ಯಲ್ಲಿ ಪ್ರಹ್ಲಾದ, ಬಾಲಭೋಜ, ಕೃಷ್ಣ, ಋಷಿಕೇಶ, ಸನಕಾದಿಗಳ ಪಾತ್ರಗಳಲ್ಲಿ ನಟಿಸುತ್ತಿದ್ದ ಅವರು ನಟನೆ ಜೊತೆಗೆ ಸಂಗೀತ, ನೃತ್ಯ ಕಲಿತರು.

‘ಭಕ್ತ ಪ್ರಹ್ಲಾದ’ (1958) ಚಿತ್ರದ ಪುಟ್ಟ ಪಾತ್ರದೊಂದಿಗೆ ಅವರ ಬೆಳ್ಳಿತೆರೆ ಪ್ರವೇಶವಾಯ್ತು. ಮುಂದೆ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿದ ಅವರು ಮದರಾಸಿನಲ್ಲಿದ್ದಾಗ ಹಲವಾರು ರೇಡಿಯೋ ನಾಟಕಗಳಲ್ಲೂ ಪಾಲ್ಗೊಂಡಿದ್ದರು. ಆಗ ಬೆರಳೆಣಿಕೆಯಷ್ಟೇ ಕನ್ನಡ ಚಿತ್ರಗಳು ತಯಾರಾಗುತ್ತಿದ್ದುದು. ಕನ್ನಡ ಚಿತ್ರ ತಾರೆಯರು ಜೀವನೋಪಾಯಕ್ಕಾಗಿ ‘ಕನ್ನಡ ಚಲನಚಿತ್ರ ಕಲಾವಿದರ ಸಂಘ’ ಕಟ್ಟಿದ್ದರು. ಬಿ.ಜಯಾ ಅವರು ಕೂಡ ಈ ತಂಡದ ಕಲಾವಿದೆಯಾಗಿ ರಾಜ್ಯದ ಹಲವೆಡೆ ನಾಟಕಗಳ ಪ್ರದರ್ಶನ ನೀಡಿದ್ದರು.

1983ರಲ್ಲಿ ‘ಕುಮಾರೇಶ್ವರ ನಾಟಕ ಸಂಘ’ ಕಟ್ಟಿದ ಬಿ.ಜಯಾ ಅವರು 1992ರವರೆಗೆ ಕಂಪನಿ ನಡೆಸಿದರು.

ದೈವಲೀಲೆ, ವಿಧಿ ವಿಲಾಸ, ಬೆಳ್ಳಿಮೋಡ, ನ್ಯಾಯವೇ ದೇವರು, ಚಿನ್ನದ ಗೊಂಬೆ, ಪ್ರತಿಜ್ಞೆ, ಮಹದೇಶ್ವರ ಪೂಜಾಫಲ, ಮಣ್ಣಿನ ಮಗ, ಶ್ರೀಕೃಷ್ಣ ದೇವರಾಯ, ಕುಲಗೌರವ, ಪೂರ್ಣಿಮಾ, ನಗುವ ಹೂವು, ಮುಕ್ತಿ, ಜೀವನ ಜೋಕಾಲಿ, ದೇವರು ಕೊಟ್ಟ ತಂಗಿ, ಗಂಧದ ಗುಡಿ, ಶುಭಮಂಗಳ, ದಾರಿತಪ್ಪಿದ ಮಗ, ಪ್ರೇಮದ ಕಾಣಿಕೆ… ಜಯಾ ಅವರ ಕೆಲವು ಪ್ರಮುಖ ಚಿತ್ರಗಳು. ‘ಮಹಾನ್‌ ಮರೆಗುಳಿಗಳು’ ಸರಣಿಯಿಂದ ಶುರುವಾದ ಅವರ ಕಿರುತೆರೆ ನಂಟು ಇತ್ತೀಚಿನವರೆಗೂ ಜಾರಿಯಲ್ಲಿತ್ತು.

‘ಗೌಡ್ರು’ ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ (2012), ಚಿತ್ರಪ್ರೇಮಿಗಳ ಸಂಘ, ಕನ್ನಡ ಟೆಲಿವಿಷನ್ ಅಸೋಸಿಯೇಷನ್ ಗೌರವ ಸೇರಿದಂತೆ ಹತ್ತಾರು ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

‘ಕುಲಗೌರವ’ ಚಿತ್ರದಲ್ಲಿ ರಾಜಕುಮಾರ್, ನರಸಿಂಹರಾಜು ಅವರೊಂದಿಗೆ
‘ಚಿನ್ನದ ಗೊಂಬೆ’ ಚಿತ್ರದಲ್ಲಿ ಕಲ್ಪನಾ ಜೊತೆ
‘ಮಹದೇಶ್ವರ ಪೂಜಾಫಲ’ದಲ್ಲಿ ದ್ವಾರಕೀಶ್ ಜೊತೆ ಕಾಣಿಸಿಕೊಂಡಿದ್ದರು

error: Content is protected !!