ಸರ್ಕಾರ 100 ಪರ್ಸೆಂಟ್ ಅಕ್ಯೂಪೆನ್ಸಿ ನೀಡಿದ ಬೆನ್ನಲ್ಲೇ ಸ್ಟಾರ್ ವಾರ್ ಶುರುವಾಗಿದೆ. ನಾ ಮುಂದು ತಾ ಮುಂದು ಎನ್ನುತ್ತಲೇ ನಿರ್ಮಾಪಕರು ಸಿನಿಮಾ ಬಿಡುಗಡೆ ಸಜ್ಜಾಗ್ತಿದ್ದಾರೆ. ಸ್ಟಾರ್ ನಟರುಗಳ ಸಿನಿಮಾಗಳು ಏಕಕಾಲಕ್ಕೆ ತೆರೆಗೆ ಅಪ್ಪಳಿಸುತ್ತಿರುವುದರಿಂದ ಪೈಪೋಟಿ ಜೋರಾಗಿದೆ. ಈ ಮಧ್ಯೆ ಮಹಾತ್ಮ ಗಾಂಧೀಜಿಯವರ ಲೈಫ್ ಸ್ಟೋರಿ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡ್ತಿದೆ.
ಅಕ್ಟೋಬರ್ 1 ರಿಂದ ಸರ್ಕಾರ 100 ಪರ್ಸೆಂಟ್ ಆಸನ ಭರ್ತಿಗೆ ಅವಕಾಶ ನೀಡಿದೆ. ಹೀಗಾಗಿ, ಕಳೆದ ಒಂದೂವರೆ ವರ್ಷದಿಂದ ಡಬ್ಬದಲ್ಲೇ ಕುಳಿತಿದ್ದ ಸಿನಿಮಾಗಳು ಬಿಡುಗಡೆಗೆ ತುದಿಗಾಲಿನಲ್ಲಿ ನಿಂತಿವೆ. ಆ ಪೈಕಿ ಪಿ. ಶೇಷಾದ್ರಿ ನಿರ್ದೇಶನದ ‘ಮೋಹನದಾಸ’ ಸಿನಿಮಾ ಕೂಡ ಒಂದು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬಾಲ್ಯವನ್ನು ಬೆಳ್ಳಿತೆರೆ ಮೇಲೆ ತೋರಿಸಿದ್ದಾರೆ.ಮೋಹನದಾಸ ಹೆಸರಲ್ಲಿ ಸಿನಿಮಾ ಮಾಡಿ ಮುಗಿಸಿದ್ದು, ಗಾಂಧಿಜಯಂತಿ ಪ್ರಯುಕ್ತ ರಾಜ್ಯಾದ್ಯಂತ ತೆರೆಗೆ ತರಲಾಗುತ್ತಿದೆ.
‘ಮೋಹನದಾಸ’ ಕರಮಚಂದ್ರ ಗಾಂಧೀಜೀಯವರು ಮಹಾತ್ಮರಾದ ಕಥೆಯನ್ನು ಕೆಲವರು ಹಲವು ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಆದರೆ, ಮಹಾತ್ಮರೆನಿಸಿಕೊಳ್ಳುವುದಕ್ಕೂ ಮೊದಲಿನ ಕಥೆ ಅಂದರೆ ಬಾಲ್ಯದ ಕಥೆಯನ್ನು ಪುಸ್ತಕಗಳಲ್ಲಿ ದಾಖಲಿಸಿದ್ದಾರೆ ಹೊರೆತು ಬಿಗ್ ಸ್ಕ್ರೀನ್ ನಲ್ಲಿ ತೆರೆಗೆ ತಂದಿಲ್ಲ. ಇದೇ, ಮೊದಲ ಬಾರಿಗೆ ಕನ್ನಡ- ಇಂಗ್ಲೀಷ್- ಹಿಂದಿ ಮೂರು ಭಾಷೆಯಲ್ಲಿ ಒಂಭತ್ತು ಭಾರಿ ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡಿರುವ ನಿರ್ದೇಶಕ ಪಿ. ಶೇಷಾದ್ರಿಯವರು ಸಿನೆಮಾ ಮಾಡಿದ್ದಾರೆ. ಏಳು ವರ್ಷದಿಂದ ಹದಿನಾಲ್ಕು ವರ್ಷದ ಗಾಂಧೀಜೀಯವರ ಬಾಲ್ಯದ ಕಥೆಯನ್ನು ಒಂದು ಗಂಟೆ ಅವಧಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಸಂಚಾರಿ ಥಿಯೇಟರ್ ನಲ್ಲಿ ಪಳಗುತ್ತಿರುವ ಸಮರ್ಥ್ 14 ವರ್ಷದ ಮೋಹನದಾಸ್ ಪಾತ್ರಕ್ಕೆ ಬಣ್ಣ ಹಚ್ಚಿದರೆ, 7 ವರ್ಷದ ಮೋಹನ್ ದಾಸ್ ಪಾತ್ರದಲ್ಲಿ ಪರಮ್ ಸ್ವಾಮಿ ಮಿಂಚಿದ್ದಾರೆ. ಮೋಹನ್ ದಾಸ್ ತಾಯಿ ಪುತಲಿಬಾಯಿಯಾಗಿ ಹಿರಿಯ ನಟಿ ಶ್ರುತಿ, ತಂದೆ ಕರಮ್ ಚಂದ್ರ ಗಾಂಧಿಯಾಗಿ ಅನಂತ್ ಮಹಾದೇವನ್ ಅಭಿನಯಿಸಿದ್ದಾರೆ. ದತ್ತಣ್ಣ ಬಯೋಸ್ಕೋಪ್ ವಾಲಾ ಆಗಿ ನಟಿಸಿದ್ದಾರೆ.
ಗಾಂಧೀಜಿ ಹುಟ್ಟಿಬೆಳೆದ ಗುಜರಾತ್ ನ ಪೋರಬಂದರಿನ ಮನೆ ಹಾಗೂ ರಾಜ್ ಕೋಟ್ ನ ಮನೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ಅವರು ಶಿಕ್ಷಣ ಕಲಿತ ಆಲ್ ಫ್ರೆಡ್ ಹೈಸ್ಕೂಲ್ ನಲ್ಲೂ ಶೂಟಿಂಗ್ ಮಾಡಿದ್ದಾರೆ. ಬೆಂಗಳೂರಿನಲ್ಲೂ ಚಿತ್ರೀಕರಣ ನಡೆದಿದ್ದು, ಸ್ವಾತಂತ್ರ್ಯ ಪೂರ್ವದ ಚಿತ್ರಣ ಕಟ್ಟಿಕೊಡಲು ಗ್ರಾಫಿಕ್ಸ್ ಮೊರೆ ಹೋಗಿದ್ದಾರೆ. ಮಹಾತ್ಮ ಗಾಂಧೀಜಿಯವರ ಬಾಲ್ಯದ ಕಥೆಯನ್ನು ಬೆಳ್ಳಿತೆರೆ ಮೇಲೆ ಕಟ್ಟಿಕೊಡಬೇಕು ಎನ್ನುವುದು ನಿರ್ದೇಶಕ ಪಿ. ಶೇಷಾದ್ರಿಯವರ ಕನಸಾಗಿತ್ತು ಕೊನೆಗೂ ಈಡೇರಿದೆ. 100 ಚಿತ್ರಮಂದಿರಗಳಲ್ಲಿ ಮೋಹನದಾಸ ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವುದು ನಿರ್ದೇಶಕರ ಅಭಿಲಾಷೆ. ಅವರಂತೇ ಆಗಲಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ,ಮಾರ್ಕ್ಸ್ ಸುರೇಶ್ ಅವರು ರಾಜ್ಯದ್ಯಂತ ಸಿನಿಮಾ ವಿತರಣೆ ಮಾಡ್ತಿದ್ದಾರೆ.
ಮಿತ್ರ ಚಿತ್ರ ಲಾಂಛನದಡಿ ಮೋಹನದಾಸ ನಿರ್ಮಾಣವಾಗಿದೆ.12 ಮಂದಿ ನಿರ್ಮಾಪಕರು ಬಂಡವಾಳ ಹೂಡಿದ್ದಾರೆ. ಜಿ.ಎಸ್. ಭಾಸ್ಕರ್ ಛಾಯಾಗ್ರಹಣ, ಕೆಂಪರಾಜು ಅವರ ಸಂಕಲನ, ಪ್ರವೀಣ್ ಗೋಡ್ಕಿಂಡಿಯವರ ಸಂಗೀತ ಚಿತ್ರಕ್ಕಿದೆ. ಇದೇ ಅಕ್ಟೋಬರ್ ೨ರಂದು ಚಿತ್ರ ಬಿಡುಗಡೆಯಾಗ್ತಿದೆ. ಈ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ, ಬರೀ ಸ್ಟಾರ್ ಸಿನಿಮಾ ಪ್ರಮೋಟ್ ಮಾಡಬೇಡಿ, ನಮ್ಮ ಸಿನಿಮಾ ಕಡೆ ನೋಡಿ ಎಂದು ನಿರ್ದೇಶಕ ನಿರ್ದೇಶಕರು ಮನವಿ ಮಾಡಿಕೊಂಡರು. ಈ ಮಧ್ಯೆ ಮಾತನಾಡಿದ ಹಿರಿಯ ನಟಿ ಶ್ರುತಿ ನಾಡಿನಾದ್ಯಂತ ಶಾಲಾ ಮಕ್ಕಳಿಗೆ ಸಿನಿಮಾ ತೋರಿಸುವ ನಿಮ್ಮ ಪ್ರಯತ್ನಕ್ಕೆ ಸರ್ಕಾರದ ಜೊತೆ ಮಾತನಾಡುವ ಭರವಸೆ ಕೊಟ್ಟರು. ಹಿರಿಯ ನಟ ದತ್ತಣ್ಣ ಸೇರಿದಂತೆ ಮೋಹನದಾಸ ಸಿನಿಮಾ ಟೀಂ ಹಾಜರಿತ್ತು.
- ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ