ಪತ್ರಕರ್ತ ಹಾಗೂ ನಟ ಯತಿರಾಜ್ ನಿರ್ದೇಶನದ ‘ಆರಾಧ್ಯ ‘ಕಿರುಚಿತ್ರ’ ಈಗ ಕನ್ನಡದಿಂದ ಬಂಜಾರ ಭಾಷೆಗೆ ತರ್ಜುಮೆಗೊಂಡು, ರಿಲೀಸ್ ಆಗುತ್ತಿದೆ. ನಾಳೆ ಅಧಿಕೃತವಾಗಿ ಕಲಾವಿದ ಯುಟ್ಯೂಬ್ ಚಾನೆಲ್ ಮೂಲಕ ಆರಾಧ್ಯ ಕಿರುಚಿತ್ರದ ಬಂಜಾರ ಭಾಷೆಯ ಅವತರಣಿಕೆಯನ್ನು ರಿಲೀಸ್ ಮಾಡಲು ಚಿತ್ರ ತಂಡ ಸಿದ್ದತೆ ನಡೆಸಿದೆ. ಲಾಕ್ ಡೌನ್ ಸಮಯದಲ್ಲಿ ನಟ ಯತಿರಾಜ್ ನಿರ್ದೇಶಿಸಿ, ನಟಿಸಿ ಹೊರ ತಂದ 18 ಕ್ಕೂ ಹೆಚ್ಚು ಕಿರುಚಿತ್ರಗಳ ಪೈಕಿ ಬಂಜಾರ ಭಾಷೆಯಲ್ಲಿ ಬರುತ್ತಿರುವ ಏಕೈಕ ಕಿರುಚಿತ್ರ ‘ಆರಾಧ್ಯ’. ಚಿತ್ರ ತಂಡ ಅಂದುಕೊಂಡಂತೆ ಈಗಾಗಲೇ ಅದರ ಡಬ್ಬಿಂಗ್ ಕೆಲಸಗಳು ಕೂಡ ಮುಗಿದು ಹೋಗಿವೆ. ರಿಲೀಸ್ ಮಾತ್ರ ಬಾಕಿಯಿದೆ.
ನಿರ್ದೇಶಕ ಯತಿರಾಜ್ ಅವರೇ ಈ ಕಿರುಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಅವರೇ ಈಗ ಬಂಜಾರ ಭಾಷೆಗೆ ವಾಯ್ಸ್ ಡಬ್ ಮಾಡಿದ್ದಾರೆ. ಹಾಗೆಯೇ ಚಿತ್ರದಲ್ಲಿನ ಟೀಚರ್ ಪಾತ್ರಧಾರಿ ಅಂಜಲಿ ಅವರಿಗೆ ಕಂಠದಾನ ಕಲಾವಿದೆ ರಾಜುವೇಣಿ ಧ್ವನಿ ನೀಡಿದ್ದಾರೆ. ಇನ್ನು ಚಿತ್ರದ ಪ್ರಮುಖ ಪಾತ್ರಧಾರಿ ಆರಾಧ್ಯ ಪಾತ್ರದ ಸಂಭಾಷಣೆಗೆ ಪುಟಾಣಿ ಅವಿಕಾ ರಾಥೋಡ್ ಧ್ವನಿ ನೀಡಿದ್ದಾರೆ. ಕುಮಾರ್ ರಾಥೋಡ್ ಅವರು ಸಂಭಾಷಣೆಯನ್ನು ಕನ್ನಡದಿಂದ ಬಜಾರ ಭಾಷೆಗೆ ತರ್ಜುಮೆ ಮಾಡಿದ್ದು, ಅವರಿಗೆ ಕನಕಪುರದ ಶಿವು ನಾಯ್ಕ ಸಾಥ್ ನೀಡಿದ್ದಾರೆ. ಕನ್ನಡದಲ್ಲಿ ಹಾಡಿದ್ದ ಶಿವಾನಂದ್ ಸಾಲಿಮಠ್ ಅವರೇ ಬಂಜಾರ ಭಾಷೆಯಲ್ಲಿ ಹಾಡಿರುವುದು ಈ ಕಿರುಚಿತ್ರದ ಇನ್ನೊಂದು ವಿಶೇಷ.ಈಗಾಗಲೇ ಕನ್ನಡದಲ್ಲಿ ರಿಲೀಸ್ ಆಗಿ ಸಾಕಷ್ಟು ಮೆಚ್ಚುಗೆ ಪಡೆದಿದ್ದ ‘ಆರಾಧ್ಯ’ ಕಿರುಚಿತ್ರವು ಈಗ ಬಂಜಾರ ಭಾಷೆಯಲ್ಲಿ ಬರುತ್ತಿರುವುದು ವಿಶೇಷ. ಈ ಪ್ರಯತ್ನವನ್ನು ಕಲಾವಿದ, ಪತ್ರಕರ್ತ ಯತಿರಾಜ್ ಅವರೇ ಖುದ್ದು ಆಸಕ್ತಿ ತೆಗೆದುಕೊಂಡು ಮಾಡಿದ್ದಾರೆ. ಹಾಗಾದರೆ ಯಾಕೆ?
‘ ಕನ್ನಡದ ಜತೆಗೆ ಇದನ್ನು ತೆಲುಗು, ತಮಿಳು ಭಾಷೆಯಲ್ಲಿ ತರಬೇಕೆನ್ನುವ ಉದ್ದೇಶ ಇತ್ತು. ಆದರೆ ತೆಲುಗು ಹಾಗೂ ತಮಿಳು ತರ್ಜುಮೆಯ ಪ್ರಕ್ರಿಯೆಗಳು ಸಕಾಲಿಕವಾಗಿ ಆಗಲಿಲ್ಲ. ಆಗ ಗೆಳೆಯರು ಬಂಜಾರ ಭಾಷೆಗೆ ಯಾಕೆ ತರಬಾರದು ಅಂತ ಸಲಹೆ ಕೊಟ್ಟರು. ಅದು ಸರಿಯೂ ಎನಿಸಿತು. ಯಾಕಂದ್ರೆ ಬಂಜಾರ ಭಾಷೆಯೂ ನನ್ನ ಮನೆ ಭಾಷೆ. ಅಲ್ಲಿಗೆ ನನ್ನ ಕೊಡುಗೆ ಏನಾದರೂ ಇರಲಿ ಅಂತೆನಿಸಿತು. ತಕ್ಷಣವೇ ಕೆಲಸಗಳು ಶುರುವಾದವು. ಒಂದೇ ದಿನದಲ್ಲಿ ಡಬ್ಬಿಂಗ್ ಕೆಲಸಗಳು ಮುಗಿದು ಹೋದವು. ಈಗ ಕಿರುಚಿತ್ರ ರಿಲೀಸ್ ಗೆ ರೆಡಿ ಇದೆ ಎನ್ನುತ್ತಾರೆ ನಿರ್ದೇಶಕ, ನಟ ಯತಿರಾಜ್. ಅದೆಲ್ಲಕ್ಕಿಂತ ಮುಖ್ಯವಾಗಿ ಇನ್ನೊಂದು ಕಾರಣ ಇದೆ ಯತಿರಾಜ್, ‘ ಬಂಜಾರ ಸಮಾಜದಲ್ಲಿ ಕುಡಿತ ಸಹಜ ಎನ್ನುವಷ್ಟಿದೆ. ನಾನು ನಿರ್ದೇಶಿಸಿದ ಈ ಕಿರುಚಿತ್ರದಲ್ಲಿ ಬರುವ ಕುಡುಕ ತಂದೆ, ಅದರಿಂದ ನೊಂದುಕೊಳ್ಳುವ ಅಮಾಯಕ ಮಗಳು ಅದೆಷ್ಟು ಜನರಿದ್ದಾರೋ ಗೊತ್ತಿಲ್ಲ. ಅಲ್ಲಿ ಒಂದಷ್ಟು ಜಾಗೃತಿ ತರುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯೋಗ ಅಂತಂದುಕೊಂಡು ಇದನ್ನು ಕನ್ನಡದಿಂದ ಬಂಜಾರ ಭಾಷೆಗೂ ತಂದಿದ್ದೇನೆ ಎನ್ನುತ್ತಾರೆ.
- ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿ ಲಹರಿ