ನಿರ್ದೇಶಕ ಸಂತೋಷ್ ಆನಂದ್ ರಾಮ್ ಗೆ ಅವಮಾನ; ‘ಅಗ್ರಜ’ ಸೆಟ್ ನಲ್ಲಿ ಆನಂದ್ ಭವಿಷ್ಯ ನಿರ್ಧಾರ ಜಗ್ಗೇಶ್ ನುಡಿದ ಮಾತು ನಿಜವಾಯ್ತು !

ಸಂತೋಷ್ ಆನಂದ್ ರಾಮ್ ಇವತ್ತು ಸ್ಯಾಂಡಲ್ ವುಡ್ನ ಸ್ಟಾರ್ ಡೈರೆಕ್ಟರ್. ಸೌತ್ ಸಿನಿಮಾ ಇಂಡಸ್ಟ್ರಿ ತಿರುಗಿ ನೋಡುವಂತಹ ಸಿನಿಮಾ ಕೊಟ್ಟಿದ್ದಾರೆ. ಗಂಧದಗುಡಿಯ ಇಬ್ಬರು ಸ್ಟಾರ್ ನಟರಿಗೆ ಬಿಗ್ ಬ್ರೇಕ್ ಕೊಟ್ಟಿದ್ದಾರೆ. ತಮ್ಮ ಸಿನಿಕರಿಯರ್ ನ ಮೈಲೇಜ್ ಹೆಚ್ಚಿಸಿಕೊಂಡಿದ್ದಾರೆ. ಯುವನಟರಿಂದ ಹಿಡಿದು ಸ್ಟಾರ್ ನಟರು ಕೂಡ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಅಭಿನಯಿಸೋಕೆ ಕಾತರಿಸುತ್ತಿದ್ದಾರೆ. ಇಂತಿಪ್ಪ ಜನಪ್ರಿಯ ಹಾಗೂ ಬಹುಬೇಡಿಕೆಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಭಾರೀ ಅವಮಾನ ಎದುರಿಸಿದ್ದಾರೆ. ಅವತ್ತು ಸ್ಟಾರ್ ನಿರ್ದೇಶಕರೊಬ್ಬರಿಂದ ಬಾಯಿಗೆ ಬಂದ ಹಾಗೇ ತೆಗಳಿಸಿಕೊಂಡ ಸಂತೋಷ್ ಆನಂದ್ ರಾಮ್ ಇವತ್ತು ಆ ನಿರ್ದೇಶಕರಿಗೆ ಸೆಡ್ಡು ಹೊಡೆಯುವ ರೇಂಜ್ಗೆ ಬೆಳೆದು ನಿಂತಿದ್ದಾರೆ.

ಅವಮಾನ- ಅಪಮಾನ- ನಿಂದನೆ-ನೋವು- ಕಷ್ಟ-ದುಃಖ- ಸೋಲು-ತುಳಿತ ಇದ್ಯಾವುದನ್ನು ನೋಡದೇ ಯಶಸ್ಸಿನ ಉತ್ತುಂಗಕ್ಕೇರುವುದಕ್ಕೆ ಸಾಧ್ಯವಿಲ್ಲ. ಗೆಲುವಿನ ಗದ್ದುಗೆ ಏರಿ ಗಹಗಹಿಸೋದಕ್ಕೆ ಅವಕಾಶ ಸಿಕ್ಕುವುದಿಲ್ಲ. ಒಂದ್ವೇಳೆ ಸಿಕ್ಕರೂ ಕೂಡ ಅದು ಅವರುಗಳ ಸಕ್ಸಸ್ ಆಗಿರುವುದಿಲ್ಲ‌ ಬದಲಾಗಿ ಗಾಡ್ ಫಾದರ್ ಗಳ ಯಶಸ್ಸಾಗಿರುತ್ತೆ. ಯಾಕಂದ್ರೆ, ಇವರುಗಳು ಬೆನ್ನೆಲುಬಾಗಿ ನಿಂತಿದ್ದರಿಂದಲೇ ಅವಮಾನ ಎದುರಿಸದೇ ಕೆಲವರು ಮೇಲಕ್ಕೇರುತ್ತಾರೆ ಬಿಡಿ. ಅವರನ್ನು ಪಕ್ಕಕಿಡೋಣ ನಾವು ಮಾತನಾಡ್ತಿರುವುದು ಕಷ್ಟಜೀವಿಗಳ ಬಗ್ಗೆ, ಹೋರಾಡಿ ಗೆದ್ದವರ ಬಗ್ಗೆ.

ಸಂತೋಷ್ ಆನಂದ್ ರಾಮ್ ಚಂದನವನದ ಸ್ಟಾರ್ ಡೈರೆಕ್ಟರ್. ಕನ್ನಡ ಚಿತ್ರರಂಗ ಹೆಮ್ಮೆ ಪಡುವಂತಹ ನಿರ್ದೇಶಕ. ರಾಕಿಂಗ್ ಸ್ಟಾರ್ ಹಾಗೂ ಪವರ್ ಸ್ಟಾರ್ ಗೆ ಬಿಗ್ ಬ್ರೇಕ್ ಕೊಟ್ಟಂತಹ ಚಿತ್ರಬ್ರಹ್ಮ. ಯುವನಿರ್ದೇಶಕನನ್ನು ನಂಬಿ ಅವಕಾಶ ಕೊಟ್ಟ ಆ ಇಬ್ಬರು ಸ್ಟಾರ್ ಗಳು ಸಂತೋಷ್ ಆನಂದ್ ರಾಮ್ ಪಾಲಿಗೆ ರಿಯಲ್ ಗಾಡ್ ಫಾದರ್ ಗಳು. ಅಪಾರವಾದ ಪ್ರತಿಭೆ, ಸಿನಿಮಾನ ಪ್ರೀತ್ಸೋ ರೀತಿಗೆ ರಾಕಿ ಹಾಗೂ ಅಪ್ಪು ಇಬ್ಬರು ಕ್ಲೀನ್ ಬೋಲ್ಡ್. ಹೀಗಾಗಿಯೇ, ಸಂತೋಷ್ ಆನಂದ್ ರಾಮ್ ಗೆ ಕಾಲ್ ಶೀಟ್ ಕೊಟ್ಟರು. ಇಬ್ಬರು ಸ್ಟಾರ್ ನಟರುಗಳು ತನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಆನಂದ್ ರಾಮ್ ಉಳಿಸಿಕೊಂಡರು. ಇದೆಲ್ಲಾ ನಿಮಗೆ ಗೊತ್ತಿರುವ ವಿಚಾರವೇ. ಆದರೆ, ಸಂತೋಷ್ ಆನಂದ್ ರಾಮ್ ಗೆ ಸೆಟ್ನಲ್ಲಿ ಅವಮಾನ ಮಾಡಿ, ಮನಬಂದಂತೆ ಮಾತನಾಡಿ ನಿಂದಿಸುತ್ತಿದ್ದ ಆ ನಿರ್ದೇಶಕರ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ. ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ ಜಗ್ಗೇಶ್ ಬಿಚ್ಚಿಟ್ಟಿದ್ದೇನು ಹೇಳ್ತೀವಿ‌ ನೋಡಿ.

ನವರಸನಾಯಕ ಜಗ್ಗೇಶ್ ಗೆ ಸಂತೋಷ್ ಆನಂದ್ ರಾಮ್ ಡೈರೆಕ್ಟ್ ಮಾಡ್ತಿರುವ ವಿಷ್ಯ ಈಗಾಗಲೇ ತಿಳಿದೇ ಇದೆ. ರಾಘವೇಂದ್ರ ಸ್ಟೋರ್ಸ್ ಚಿತ್ರದ ಮೂಲಕ ಇಬ್ಬರು ಒಂದಾಗ್ತಿದ್ದಾರೆ. ಹೊಂಬಾಳೆ ಸಂಸ್ಥೆ ಬಂಡವಾಳ ಹೂಡ್ತಿದೆ. ಈ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಡದ ಜಗ್ಗಣ್ಣ, ಮಗ ಗುರುರಾಜ್ ನಟನೆಯ ಕಾಗೆಮೊಟ್ಟೆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಸಂತೋಷ್ ಆನಂದ್ ರಾಮ್ ಎದುರಿಸಿದ ಅವಮಾನ ಹಾಗೂ ಬೆಳೆದುನಿಂತ ಪರಿಯ ಬಗ್ಗೆ ಹೆಮ್ಮೆಪಟ್ಟರು. ಸಂತೋಷ್ ಆನಂದ್ ರಾಮ್ ದೊಡ್ಡ ಮಟ್ಟಕ್ಕೆ ಎದ್ದುನಿಲ್ತಾನೆ ಎಂದು ಅವತ್ತೇ ನಾನು ಹೇಳಿದ್ದೆ, ನನ್ನ ಮಾತು ಸತ್ಯವಾಗಿದೆ ಎನ್ನುತ್ತಾ ಖುಷಿಪಟ್ಟರು.

ಹೌದು, ಜಗ್ಗಣ್ಣ ನುಡಿದ ಭವಿಷ್ಯ ನಿಜವಾಗಿದೆ. ಸಂತೋಷ್ ಆನಂದ್ ರಾಮ್ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೇರಿದ್ದಾರೆ. ಇದಕ್ಕೆ ಕಾರಣ ಸಂತೋಷ್ ಮೆದುಳೊಳಗೆ ಉದುಗಿರುವ ಅಘಾದವಾದ ಪ್ರತಿಭೆ. ಆದರೆ, ಆ ಪ್ರತಿಭೆಯ ಬಗ್ಗೆ ಅರಿಯದೇ ‘ ಅಗ್ರಜ’ ಸಿನಿಮಾ ಸೆಟ್ ನಲ್ಲಿ ನಿರ್ದೇಶಕ ಮನಬಂದಂತೆ ಮಾತನಾಡುತ್ತಿದ್ದರಂತೆ. ಇದನ್ನು ಖುದ್ದು ಕೇಳಿಸಿಕೊಂಡು ಮರುಗಿದ ಜಗ್ಗಣ್ಣ, ಎಲ್ಲರ ಮುಂದೆ ಸಂತೋಷ್ ಆನಂದ್ ರಾಮ್ ನ ನಿಲ್ಲಿಸಿ ಮುಂದೊಂದು ದಿನ ಯಾವ್ ಮಟ್ಟಕ್ಕೆ ಬೆಳೆದು ನಿಲ್ತಾನೆ‌ ನೋಡ್ತಾಯಿರಿ ಎಂದಿದ್ದರಂತೆ.

ಮೊದಲು ಅವಮಾನ ನಂತರ ಸನ್ಮಾನ ಎನ್ನುವ ಮಾತಿದೆ. ಸೋತ ಜಾಗದಲ್ಲೇ ಗೆಲ್ಲಬೇಕು, ಬಿದ್ದ ಜಾಗದಲ್ಲೇ ಎದ್ದು ನಿಲ್ಲಬೇಕು ಎನ್ನುವ ವಾಕ್ಯವಿದೆ. ಅದರಂತೇ, ಅವಮಾನಗೊಂಡ ಜಾಗದಲ್ಲೇ ಸಂತೋಷ್ ಸನ್ಮಾನ ಮಾಡಿಸಿಕೊಳ್ತಿದ್ದಾರೆ. ಸವಾಲುಗಳಿಗೆ ಸೆಡ್ಡುಹೊಡೆದು ಗಟ್ಟಿಯಾಗಿ ನಿಂತುಕೊಂಡಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ, ಕಾಲೆಳೆದು ಹೀಯಾಳಿಸಿದವರು ಕೂಡ ಸಂತೋಷ್ ಆನಂದ್ ರಾಮ್ ಪೋಟೋನ ಡಿಪಿಯಾಗಿಸಿಕೊಳ್ಳುವಷ್ಟು

ಗೆಲ್ಲಬೇಕು ನೀ ನಿಲ್ಲೋವರೆಗೂ, ನಿಲ್ಲಬೇಕು ನೀ ಗೆಲ್ಲೋವರೆಗೂ, ಛಲದಿಂದ ನಿಲ್ಲು, ನಗುವಲ್ಲೇ ಕೊಲ್ಲು, ಅವಮಾನ ಮಾಡಿದವರ ಪವರ್ ಆಫ್ ಯೂತ್ ಅಂತ ಯುವರತ್ನ ಚಿತ್ರದ ಹಾಡೊಂದಕ್ಕೆ ಲಿರಿಕ್ಸ್ ಬರೆದಿದ್ದಾರೆ. ಆ ಲಿರಿಕ್ಸ್ ನಂತೆಯೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ರಾಕಿ ಚಿತ್ರಕ್ಕೆ ಲಿರಿಕ್ಸ್ ಬರೆಯೋ ಮೂಲಕ ಸಿನಿಕರಿಯರ್ ಶುರುಮಾಡಿದರು. ಭಜರಂಗಿ ಹರ್ಷ ಅವರೊಟ್ಟಿಗೆ ಸಹಾಯಕ ನಿರ್ದೇಶಕರಾಗಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿಂಗಾರಿ ಚಿತ್ರಕ್ಕೆ ಡೈಲಾಗ್ ಬರೆದುಕೊಟ್ಟರು ಜೊತೆಗೆ ಡೈರೆಕ್ಷನ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡಿದರು. ಅಗ್ರಜ ಹಾಗೂ ಗಜಕೇಸರಿಗೆ ಮತ್ತೆ ಡೈಲಾಗ್ ಬಾಣಬಿಟ್ಟರು. ಸಂತೋಷ್ ಸಾಹಿತ್ಯಕ್ಕೆ ಮತ್ತು ಸಂಭಾಷಣೆಗೆ ಇದ್ದ ಪವರ್ ನ ಗುರ್ತಿಸಿದ ರಾಕಿಭಾಯ್ ಅವಕಾಶ ಕೊಟ್ಟರು.

ಯಸ್, ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿಗೆ ಸಂತೋಷ್ ಡೈರೆಕ್ಟರ್ ಹ್ಯಾಟ್ ತೊಟ್ಟರು. ಮೊದಲ ಪ್ರಯತ್ನದಲ್ಲೇ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡರು. ರಾಕಿಂಗ್ ಜೋಡಿಗೆ ಬಿಗ್ ಬ್ರೇಕ್ ಸಿಕ್ಕಂತೆ ಸಂತೋಷ್ ಕರಿಯರ್ ನೇ ಚೇಂಜ್ ಮಾಡ್ತು. ಅಲ್ಲಿಂದ, ದೊಡ್ಮನೆ ರಾಜಕುಮಾರನಿಗೆ ಆಕ್ಷನ್ ಕಟ್ ಹೇಳಿ ಗೆಲುವಿನ ಕೇಕೆ ಹಾಕಿದರು. ಯುವರತ್ನ ಚಿತ್ರದ ಮೂಲಕ ಗಡಿದಾಟಿದರು. ಈಗ ಮತ್ತೊಮ್ಮೆ ಪವರ್ ಸ್ಟಾರ್ ಗೆ ಆಕ್ಷನ್ ಕಟ್ ಹೇಳುವ ಚಾನ್ಸ್ ಸಿಕ್ಕಿದೆ. ಅದಕ್ಕೂ ಮುನ್ನನವರಸನಾಯಕನನ್ನು ನಿರ್ದೇಶನ ಮಾಡಲಿದ್ದಾರೆ.ಒಟ್ನಲ್ಲಿ ಸಂತೋಷ್ ಆನಂದವಾಗಿದ್ದಾರೆ. ವೃತ್ತಿಬದುಕು ಹಾಗೂ ವೈಯಕ್ತಿಕ ಬದುಕಿನಲ್ಲಿ ಸಂತೋಷ‌ ಕಂಡಿರುವ ಆನಂದ್ ರಾಮ್, ಗಡಿದಾಟಿ ಘರ್ಜಿಸಲಿ, ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಹೊರಹೊಮ್ಮಲಿ ಎನ್ನುವುದೇ ಸಿನಿಲಹರಿ ಆಶಯ

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ‌ಸಿನಿಲಹರಿ

Related Posts

error: Content is protected !!