Categories
ಸಿನಿ ಸುದ್ದಿ

ಚಿರು ಅಭಿನಯದ ಕೊನೆಯ ಸಿನಿಮಾ ಮಾರ್ಚ್‌ 26ಕ್ಕೆ ರಿಲೀಸ್‌- ರಣಂ ಚಿತ್ರದಲ್ಲಿ ಸರ್ಜಾ ಪೊಲೀಸ್‌ ಅಧಿಕಾರಿ

ನಟ ಚಿರಂಜೀವಿ ಸರ್ಜಾ ಅಭಿನಯದ “ರಣಂ” ಸಿನಿಮಾವೊಂದು ಇದೀಗ ಬಿಡುಗಡೆಗೆ ಸಜ್ಜಾಗಿದೆ. ಹೌದು, “ರಣಂ” ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ‌ ಚೇತನ್‌ (ಆ ದಿನಗಳು) ಹೀರೋ. ಇದರಲ್ಲಿ ವಿಶೇಷ ಪಾತ್ರದ ಮೂಲಕ ಚಿರಂಜೀವಿ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರ ಮಾರ್ಚ್‌ ೨೬ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸುಮಾರು 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ರಣಂ” ತೆರೆ ಕಾಣಲಿದೆ ಎಂಬುದು ವಿಶೇಷ. ಈಗಾಗಲೇ ಕನ್ನಡದಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟಿರುವ ಆರ್. ಎಸ್. ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಆರ್. ಶ್ರೀನಿವಾಸ್ (ಕನಕಪುರ) ಅವರು ನಿರ್ಮಾಣ ಮಾಡಿದ್ದಾರೆ. ಇದು ಅವರ 21ನೇ ಚಿತ್ರ. ಇವರೊಂದಿಗೆ ಕಿರಣ್ ಗೌಡ ಈ ಚಿತ್ರದ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.‌

“ರಣಂ” ಚಿರಂಜೀವಿ ಸರ್ಜಾ‌ ಅವರು ನಟಿಸಿ, ಡಬ್ಬಿಂಗ್ ಮಾಡಿರುವ ಕೊನೆಯ ಚಿತ್ರ. ವಿ.ಸಮುದ್ರ ನಿರ್ದೇಶನದ ಈ ಚಿತ್ರಕ್ಕೆ ರವಿಶಂಕರ್ ಹಾಗೂ ಎಸ್ ಚಿನ್ನ ಸಂಗೀತ ನೀಡಿದ್ದಾರೆ. ನಿರಂಜನ್ ಬಾಬು ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು, ರವಿವರ್ಮ ಹಾಗೂ ವಿಜಯ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಚೇತನ್ ಕುಮಾರ್ ಹಾಗೂ ಎ.ಪಿ.ಅರ್ಜುನ್ ರಚಿಸಿದ್ದಾರೆ. ಸಂಭಾಷಣೆಯನ್ನು ಪಾರ್ವತಿ ಚಂದು ಮತ್ತು ಮೋಹನ್ ಬರೆದಿದ್ದಾರೆ. ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮಧುಸೂದನ್, ಕಾರ್ತಿಕ್, ಅಭಿಲಾಶ್, ಹರೀಶ್, ಪ್ರವೀಣ್, ಬೆಸೆಂಟ್ ರವಿ ಮುಂತಾದವರು ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾದ ಡಿ. ಸತ್ಯ ಪ್ರಕಾಶ್‌ -ಹೊಸಬರ ಸಾಹಸಕ್ಕೆ ನಿರ್ಮಾಪಕ ಮಂಜುನಾಥ್‌ ದಾಸೇಗೌಡ ಸಾಥ್‌ !

ಯುವ ನಿರ್ದೇಶಕ ಡಿ. ಸತ್ಯ ಪ್ರಕಾಶ್‌ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ನಿರ್ದೇಶನದ ಜತೆಗೆಯೇ ಈಗ ಚಿತ್ರ ನಿರ್ಮಾಣಕ್ಕೂ ಕೈ ಹಾಕುತ್ತಿದ್ದಾರೆ. ಚಿತ್ರ ನಿರ್ಮಾಣದ ಅವರ ಸಾಹಸಕ್ಕೀಗ ನಿರ್ಮಾಪಕ ಮಂಜುನಾಥ್‌ ದಾಸೇಗೌಡ ಸಾಥ್‌ ನೀಡಿದ್ದಾರೆ. ʼಸತ್ಯ ಮತ್ತು ಮಯೂರ ಪಿಕ್ಚರ್ಸ್‌ʼ ಬ್ಯಾನರ್‌ ನಲ್ಲಿ ಇಷ್ಟರಲ್ಲಿಯೇ ಹೊಸ ಸಿನಿಮಾ ಶುರುವಾಗಲಿದೆ ಅಂತ ಅವರೇ ರಿವೀಲ್‌ ಮಾಡಿದ್ದಾರೆ. ವಿವಿಧ ವಸ್ತು ವಿಷಯಗಳನ್ನು ಒಳಗೊಂಡಿರುವ ಚಲನಚಿತ್ರ ಹಾಗೂ ಓಟಿಟಿಗೆ ಬೇಕಾದ ಕಥೆಗಳನ್ನು ಪ್ರೇಕ್ಷಕರ ಮುಂದಿಡುವ ಉದ್ದೇಶ ಹೊಂದಲಾಗಿದೆ ಅಂತ ಸತ್ಯ ಪ್ರಕಾಶ್‌ ಹಾಗೂ ನಿರ್ಮಾಪಕ ದಾಸೇಗೌಡ ಅನೌನ್ಸ್‌ ಮಾಡಿದ್ದಾರೆ.

” ರಾಮಾ ರಾಮಾ ರೇʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪರಿಚಯವಾದ ಡಿ.ಸತ್ಯ ಪ್ರಕಾಶ್‌, ಆನಂತರ ” ಒಂದಲ್ಲ ಎರಡಲ್ಲಾ ʼ ಚಿತ್ರ ನಿರ್ದೇಶಿಸಿದ್ದರು. ಆದಾದ ನಂತರ ಪಿಆರ್‌ ಕೆ ಬ್ಯಾನರ್‌ ನಲ್ಲಿ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆಂಬ ಸುದ್ದಿ ಬಹಿರಂಗ ಗೊಂಡಿತ್ತು. ಅದೀಗ ಏನಾಯ್ತೋ ಗೊತ್ತಿಲ್ಲ, ಈಗ ತಾವೇ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅವರಿಗೆ ನಿರ್ಮಾಪಕ ದಾಸೇ ಗೌಡ ಬೆಂಬಲಕ್ಕೆ ನಿಂತಿದ್ದಾರೆ.

ದಾಸೇ ಗೌಡ ಈಗಾಗಲೇ ತಮ್ಮದೇ ‘ಮಯೂರ ಮೋಶನ್ ಪಿಕ್ಚರ್ಸ್ ಮೂಲಕ ‘ಉದ್ಘರ್ಷ’ (ಸಹನಿರ್ಮಾಣ) ಮತ್ತು ‘ವೀಕೆಂಡ್’ ಎಂಬ ಸಿನಿಮಾ ನಿರ್ಮಾಣ ಮಾಡಿದ ಅನುಭವ ಇದೆ. ಈಗ ನಿರ್ದೇಶಕ ಸತ್ಯ ಜತೆಗೆ ಸೇರಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇದನ್ನು ಸತ್ಯ ಪ್ರಕಾಶ್‌ ನಿರ್ದೇಶನ ಮಾಡಲಿದ್ದಾರೆ. ” ರಾಮಾ ರಾಮಾ ರೇʼ ಚಿತ್ರದ ತಾರಾಗಣ ಮತ್ತು ತಾಂತ್ರಿಕ ತಂಡ ಈ ಚಿತ್ರದಲ್ಲೂ ಮುಂದುವರೆಯಲಿದೆ. ಕಥೆ, ಚಿತ್ರಕಥೆ ಮುಗಿಸಿ ಶೂಟಿಂಗಿಗೆ ಸಿದ್ದವಾಗಿರುವ ಈ ಸಿನಿಮಾದ ಇನ್ನಷ್ಟು ವಿವರಗಳು ಸದ್ಯದಲ್ಲೆ ಹೊರಬೀಳಲಿವೆಯಂತೆ.

Categories
ಸಿನಿ ಸುದ್ದಿ

ಇಷ್ಟರಲ್ಲೇ ಸಿಗಲಿದೆ ಮೋಕ್ಷ! ಮಾರ್ಚ್ 27ಕ್ಕೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಟ್ರೇಲರ್ ರಿಲೀಸ್

ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ. ಬರಲು ಸಜ್ಜಾಗಿವೆ ಈಗಲೂ ಒಂದಷ್ಟು ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳು ಸೆಟ್ಟೇರುತ್ತಲೇ ಇವೆ. ಆದರೆ, ಎಲ್ಲಾ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ಕಥಾಹಂದರ ಒಳಗೊಳ್ಳುವ ಮೂಲಕ ಹೊಸತನ ಸೃಷ್ಟಿಸಲು ಬರುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಕೂಡ ಸೇರಿದೆ. ಆ ಚಿತ್ರಕ್ಕೆ “ಮೋಕ್ಷ” ಎಂದು ಹೆಸರಿಡಲಾಗಿದೆ.

ಇದೊಂದು ವಿಭಿನ್ನ ಶೀರ್ಷಿಕೆ ಇರುವ ಸಿನಿಮಾ. ಅಂತೆಯೇ ಚಿತ್ರದ ಕಥೆ ಕೂಡ ಅಷ್ಟೇ ವಿಭಿನ್ನವಾಗಿದೆ. ಅಂದಹಾಗೆ, ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್‌ 27ರಂದು ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.‌ ಈ ಚಿತ್ರಕ್ಕೆ ಸಮರ್ಥ್‌ ನಾಯಕ್‌ ನಿರ್ದೇಶಕರು. ಚಿತ್ರದ ಕಥೆ, ಚಿತ್ರಕಥೆ ಜವಾಬ್ದಾರಿಯೂ ಇವರದೇ. ಇದು ಇವರಿಗೆ ಮೊದಲ ನಿರ್ದೇಶನದ ಸಿನಿಮಾ ಆಗಿದ್ದರೂ, ನಿರ್ದೇಶನದ ಅನುಭವ ಇವರಿಗಿದೆ. ಈಗಾಗಲೇ ಸಾಕಷ್ಟು ಜಾಹೀರಾತು ನಿರ್ಮಿಸಿ ಅನುಭವವಿರುವ ಸಮರ್ಥ್ ನಾಯಕ್, ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

ಇದೊಂದು ಗೊಂದಲಗೊಳಿಸುವ, ರೋಚಕತೆ ಎನಿಸುವ, ಭಯಾನಕ, ನಿಗೂಢ ಕಥೆ ಇರುವಂತಹ ಸಸ್ಪೆನ್ಸ್‌ ಇದರಲ್ಲಿದೆ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಸಮರ್ಥ್‌ ನಾಯಕ್.‌ ಚಿತ್ರದ ಎಲ್ಲಾ ಪಾತ್ರಗಳಲ್ಲೂ ವಿಶೇಷತೆ ಇದೆ. ವಿಶೇಷವಾಗಿ ಮಾಸ್ಕ್ ಮ್ಯಾನ್ ಎಂಬ ಪಾತ್ರ ಚಿತ್ರದ ಮುಖ್ಯ ಆಕರ್ಷಣೆ ಎಂಬುದು ನಿರ್ದೇಶಕರ ಮಾತು.

ಜಯಂತ್ ಕಾಯ್ಕಿಣಿ, ಕುಮಾರ್ ದತ್ ಅವರು ಬರೆದಿರುವ ಎರಡು ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ನೀಡಿದ್ದಾರೆ. ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದರೆ, ವರುಣ್ ಕುಮಾರ್ ಅವರ ಸಂಕಲನ ಚಿತ್ರಕ್ಕಿದೆ. ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಮುಂತಾದ ವರು ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಮ್ಯಾಕ್ಸಿ ಕಂಡು ಕಣ್ಣೀರು ಹಾಕಿದ ಶುಭ ಪೂಂಜಾ – ಅವನಿಲ್ಲದೆ ಇರೋದಿಕ್ಕೆ ಅವರಿಗಾಗುತ್ತಿಲ್ವಂತೆ !

ಬಿಗ್ ಬಾಸ್ ಮನೆಯಲ್ಲಿ ನಿತ್ಯವೂ ಒಂದೊಂದು ರೋಚಕ ಕತೆಗಳು ರಿವೀಲ್‌ ಆಗುತ್ತಿವೆ. ಕಂಟೆಸ್ಟೆಂಟ್‌ ನಡುವೆ ಒಂದೆಡೆ ಪ್ರೀತಿಯ ಪಯಣ ಸಾಗುತ್ತಿದ್ದರೆ, ಇನ್ನೊಂದೆಡೆ, ದ್ವೇಷದ ಛಾಯೆ ಭುಗಿಲೇಳುತ್ತಿದೆ. ವೈಯಕ್ತಿಕ ಭಿನ್ನಾಭಿಪ್ರಾಯಗಳ‌ ನಡುವೆಯೂ ತಮ್ಮ ಮನೆಯವರ ಬಗ್ಗೆ, ತಮ್ಮ ಪ್ರೀತಿಯ ಮೂಖ ಪ್ರಾಣಿಗಳ ಬಗ್ಗೆ ಕಂಟೆಸ್ಟೆಂಟ್‌ ಅವಗಾವಾಗ ನೆನೆಸಿಕೊಂಡು ಕಣ್ಣೀರಿಡುವುದು, ಉಳಿದವರು ಅವರನ್ನು ಸಂತೈಸುವುದು ಕೂಡ ಇದ್ದೇಇದೆ. ಶುಕ್ರವಾರ ಪ್ರಸಾರವಾದ ಎಪಿಸೋಡ್‌ ನಲ್ಲಿ ಹಾಗೆಯೇ ಒಂದು ಘಟನೆಗೆ ಗ್ಲಾಮರಸ್‌ ನಟಿ ಶುಭ ಪೂಂಜಾ ಸಾಕ್ಷಿಯಾದರು.

ಶುಭಾ ಪೂಂಜಾ ಮ್ಯಾಕ್ಸಿ ನೆನಪಿಸಿಕೊಂಡು ಅತ್ತರು. ಉಳಿದವರು ಅವರನ್ನು ಸಂತೈಸಿದರು. ಹಾಗಾದ್ರೆ, ಶುಭ ಪೂಂಜಾ ಅವರ ಕಣ್ಣಲ್ಲಿ ಕಣ್ಣೀರು ತರಿಸಿದ ಆ ಮ್ಯಾಕ್ಸಿ ಯಾರು ? ಇದೊಂದು ಕುತೂಹಲದ ಸಂಗತಿ. ಗಾಬರಿ ಯಾಗ್ಬೇಡಿ, ಮ್ಯಾಕ್ಸಿ ಅಂದ್ರೆ ಶುಭಾ ಪೂಂಜಾ ಅವರು ಸಾಕಿದ ಮುದ್ದಿನ ನಾಯಿ. ಆ ದಿನ ಬಿಗ್‌ ಬಾಸ್‌ ಮನೆಯಲ್ಲಿ ಅವರು ತಮ್ಮ ಮುದ್ದಿನ ನಾಯಿ ಮ್ಯಾಕ್ಸಿಯ ಫೋಟೋ ನೋಡಿ ಕಣ್ಣೀರು ಹಾಕಿದರು.ಸುಮಾರು ಆರು ತಿಂಗಳ ಹಿಂದೆ ತಮ್ಮ ಮುದ್ದಿನ ನಾಯಿ ಮ್ಯಾಕ್ಸಿ ಜತೆಗೆ ಶುಭಾ ಪೂಂಜಾ ತೆಗೆಸಿಕೊಂಡಿದ್ದ ಫೋಟೋವೊಂದನ್ನು ಮೊನ್ನೆ ಬಿಗ್‌ ಬಾಸ್‌ ಮನೆಯ ಸ್ಕ್ರೀನ್‌ ಮೇಲೆ ಹಾಕಿದ್ದರು.

ಶುಭಾಪೂಂಜಾ ಬೇಜಾರಾದಾಗ ತನ್ನ ಮನೆಯ ಬಾಲ್ಕನಿಯಲ್ಲಿ ಕುಳಿತು ತನ್ನ ಮುದ್ದಿನ ಮ್ಯಾಕ್ಸಿಯ ಜೊತೆ ತೆಗೆದ ಫೋಟೋ ಅಂತೆ ಇದು. ಬಿಗ್‌ ಬಾಸ್‌ ಮನೆಯ ಸ್ಕ್ರೀನ್‌ ಮೇಲೆ ಈ ಫೋಟೋ ಕಾಣಸಿಕೊಳ್ಳುತ್ತಿದ್ದಂತೆ ಮನೆಯ ಲಿವಿಂಗ್‌ ಏರಿಯಾದಿಂದ ಓಡೋಡಿ ಬಂದ ಶುಭ ಪೂಂಜಾ, ಭಾವುಕರಾದರು. ಆನಂತರ ಕಣ್ಣೀರು ಹಾಕುತ್ತಾ, ಮ್ಯಾಕ್ಸಿ ಜತೆಗಿನ ತಮ್ಮ ಕಥೆ ತೊಡಿಕೊಂಡರು.” ಮ್ಯಾಕ್ಸಿ ಈಗ ಜೀವಂತವಾಗಿಲ್ಲ. ಆತ ತೀರಿಕೊಂಡು ಹಳೇ ಕಥೆ ಆಗಿದೆ. ಜೀವಕ್ಕಿಂತ ಹೆಚ್ಚು ಪ್ರೀತಿಸುವ ಮ್ಯಾಕ್ಸಿ ಅದು. ಕಳೆದುಕೊಂಡು ನೋವಾಗುತ್ತಿದೆ. ಹಾಗಾಗಿಯೇ ಅದರ ಫೋಟೋ ನೋಡಿದ ಕೂಡಲೇ ಭಾವುಕಳಾದೆ ಅಂತ ಉಳಿದ ಕಂಟೆಸ್ಟೆಂಟ್‌ ಬಳಿ ತೋಡಿಕೊಂಡರು.

Categories
ಸಿನಿ ಸುದ್ದಿ

ಕಲಾಪೋಷಕರ ಮಠಕ್ಕೊಂದು ಭಕ್ತಿಗೀತೆ! ಸಿದ್ಧವಾಗಲಿದೆ ಸಿದ್ಧನಕೊಳ್ಳ ಮಠದ ಭಕ್ತರ ಅರ್ಥ ಪೂರ್ಣ ಹಾಡು !

ಸಿನಿಮಾ ಮಂದಿಗೂ ಮಠಗಳಿಗೂ ಅವಿನಾಭಾವ ಸಂಬಂಧವಿದೆ. ಕೆಲವು ರಾಜಕಾರಣಿಗಳಿಗೂ ಕೂಡ ಮಠಗಳೆಂದರೆ ಅಚ್ಚುಮೆಚ್ಚು ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದಕ್ಕೆ ಕಾರಣ, ಆಯಾ ಮಠಗಳ ಶ್ರೀಗಳ ಆಶೀರ್ವಾದದಿಂದಲೇ ಇಂದು ಉನ್ನತ ಹುದ್ದೆ ಅಲಂಕರಿಸಿರುವ ಅದೆಷ್ಟೋ ರಾಜಕಾರಣಿಗಳಿದ್ದಾರೆ. ಅಂತೆಯೇ, ಕಲಾವಿದರು ಕೂಡ ಗುರುತಿಸಿಕೊಂಡು ಬೆಳೆದಿದ್ದೂ ಇದೆ. ಇಷ್ಟಕ್ಕೂ ಈಗ ಇಲ್ಲೇಕೆ ಮಠಗಳ ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ಈ ಸುದ್ದಿಗೆ ಕಾರಣ, ಸಿದ್ಧನಕೊಳ್ಳ ಮಠದ ಗುರು ಶ್ರೀ ಡಾ.ಶಿವಕುಮಾರ ಶ್ರೀಗಳು. ಹೌದು, ಸಿದ್ಧನಕೊಳ್ಳ ಮಠ ಅಂದರೆ, ಅದೊಂದು ಭಕ್ತಿತಾಣ. ನೆಮ್ಮದಿ ವಾತಾವರಣ ಸೃಷ್ಠಿಸುವ ಜಾಗ. ಸಿದ್ಧನಕೊಳ್ಳ ಮಠ ಈಗ ಸುದ್ದಿಯಲ್ಲಿದೆ. ಇದರ ಇತಿಹಾಸ ದೊಡ್ಡದೇ ಇದೆ. ಈ ಮಠಕ್ಕೂ ಸಿನಿಮಾ ಕಲಾವಿದರಿಗೂ ಸಾಕಷ್ಟು ನಂಟಿದೆ ಅಂದರೆ ನಂಬಲೇಬೇಕು.

ಹೌದು, 1974ರಲ್ಲಿ ಬಂದ “ಸಂಪತ್ತಿಗೆ ಸವಾಲ್‌” ಚಿತ್ರದ ಚಿತ್ರೀಕರಣ ಕೂಡ ಇದೇ ಸಿದ್ಧನಕೊಳ್ಳದಲ್ಲಿ ನಡೆದಿದೆ. ಆ ಸಂದರ್ಭದಲ್ಲಿ ಮಠದ ಶ್ರೀಗಳು ಡಾ.ರಾಜಕುಮಾರ್‌ ಅವರಿಗೆ ಪ್ರೀತಿಯಿಂದಲೇ ಆಶೀರ್ವದಿಸಿ, ನಾಡಿನಲ್ಲಿ ಒಳ್ಳೆಯ ಗಾಯಕರಾಗುತ್ತೀರಿ ಅಂತಾನೂ ಹೇಳಿ ಆಶೀರ್ವದಿಸಿದ್ದರಂತೆ. ಆಮೇಲೆ ಡಾ.ರಾಜಕುಮಾರ್‌ ಯಾವ ಮಟ್ಟದ ಗಾಯಕರಾದರು ಅನ್ನೋದು ಎಲ್ಲರಿಗೂ ಗೊತ್ತು. ಸಿದ್ಧನಕೊಳ್ಳದ ಮಠ ಅಂದರೆ, ಅದು ಕಲಾಪೋಷಕರ ಮಠ ಅಂತ ಕರೆಸಿಕೊಳ್ಳುತ್ತದೆ.

ಅದಕ್ಕೆ ಕಾರಣ, ಪ್ರತಿ ವರ್ಷವೂ ಈ ಮಠ ಸಿದ್ಧಶ್ರೀ ಪ್ರಶಶಸ್ತಿ ಪ್ರದಾನ ಮಾಡಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ. ಈಗ ಕೊರೊನಾ ಹಾವಳಿ ನಂತರವೂ ಮಠ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲು ತಯಾರು ನಡೆಸುತ್ತಿದೆ. ಹಾಗೆ, ನೋಡಿದರೆ, ಉತ್ತರ ಕರ್ನಾಟಕದಲ್ಲಿ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ.
ಇಷ್ಟಕ್ಕೂ ಈ ಸಿದ್ಧನಕೊಳ್ಳ ಮಠದ ಬಗ್ಗೆ ಹೇಳೋಕೆ ಕಾರಣ, “ಸಿದ್ಧನಕೊಳ್ಳ ಭಕ್ತರ ಗೀತೆ” ಎಂಬ ಹೆಸರಿನ ಆಲ್ಬಂ ಸಾಂಗ್‌ ಮಾಡಲು ತಯಾರಿ ನಡೆದಿದೆ.

ಈ ಆಲ್ಬಂ ಸಾಂಗ್‌ಗೆ ನಿರ್ದೇಶಕ ಗೋಪಿ ಕೆರೂರ್‌ ನೇತೃತ್ವ ವಹಿಸುತ್ತಿದ್ದಾರೆ. ಅವರೇ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರ ಶಿಷ್ಯರಾಗಿರುವ ಉದಯ್‌ ಅಂಕೋಲ ಅವರ ಸಂಗೀತವಿದೆ. ಜೊತೆಗೆ ಹಾಡುಗಳಿಗೆ ಅವರೇ ಧ್ವನಿಯಾಗಿದ್ದಾರೆ. ಈ ಆಲ್ಬಂ ವಿಶೇಷವೆಂದರೆ, ಸಿದ್ಧನಕೊಳ್ಳ ಮಠದ ಜೊತೆಗೆ ಮಹಾಕೂಟೇಶ್ವರ ಮತ್ತು ಬಾದಾಮಿ ಬನಶಂಕರಿ ದೇವಿ ಮೇಲೆಯೂ ಹಾಡುಗಳು ರಚಿತವಾಗಿವೆ. ಸಿದ್ಧನಕೊಳ್ಳ ಮಠದ ಗುರುಗಳಾದ ಡಾ. ಶ್ರೀ ಶಿವಕುಮಾರ್ ಸ್ವಾಮೀಜಿಗಳು ಈ ಆಲ್ಬಂನ ಮುಖ್ಯ ಆಕರ್ಷಣೆ. ಹೌದು, ಈ ಆಲ್ಬಂನಲ್ಲಿ ಶ್ರೀಗಳು ಕೂಡ ನಟಿಸುತ್ತಿದ್ದಾರೆ ಎಂಬುದು ವಿಶೇಷ. ಸಹಜವಾಗಿಯೇ ಸಿದ್ಧನಕೊಳ್ಳ ಮಠದ ಭಕ್ತರಿಗೆ ಶ್ರೀಗಳ ನೇತೃತ್ವದಲ್ಲಿ ಸಿದ್ಧಗೊಳ್ಳುತ್ತಿರುವ ಆಲ್ಬಂನಲ್ಲಿ ಶ್ರೀಗಳು ನಟಿಸುತ್ತಿರುವುದು ಕೂಡ ಸಂತೋಷ ತಂದಿದೆ.


ಆಲ್ಬಂನಲ್ಲಿರುವ ನಾಲ್ಕು ಭಕ್ತಿಗೀತೆಗಳು ಸಿನಿಮಾ ಶೈಲಿಯಲ್ಲೇ ಮೂಡಿಬರಲಿದೆ ಎಂಬುದನ್ನು ವಿವರಿಸುತ್ತಾರೆ ನಿರ್ದೇಶಕ ಗೋಪಿ ಕೆರೂರ್. “ಸಿದ್ಧನಕೊಳ್ಳ ಭಕ್ತರ ಗೀತೆʼ ಆಲ್ಬಂ ನಿರ್ದೇಶನದ ಬಗ್ಗೆ ಹೇಳುವ ಗೋಪಿ ಕೆರೂರ್‌, “ಈ ಆಲ್ಬಂಗೆ ಗೀತೆ ಬರೆಯಲು ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ. ದೇವರ ಬಗ್ಗೆ ನಾಲ್ಕು ಪದ ಬರೆಯುವುದು ಖುಷಿ ಕೊಟ್ಟಿದೆ. ಸಿದ್ಧನಕೊಳ್ಳ ಮಠದ ಶ್ರೀಗಳ ಪ್ರೋತ್ಸಾಹವೇ ಇದಕ್ಕೆ ಕಾರಣ. ಮಾರ್ಚ್‌ ಅಂತ್ಯದಲ್ಲಿ ಈ ಆಲ್ಬಂಗೆ ಚಾಲನೆ ಸಿಗಲಿದೆ.
ಅದ್ಧೂರಿಯಾಗಿಯೇ ಆಲ್ಬಂ ಚಿತ್ರೀಕರಿಸುವ ಯೋಜನೆ ಇದೆ. ಎಪಿಕ್‌ ಕ್ಯಾಮೆರಾ ಬಳಸಿ, ಸುಮಾರು ಹದಿನೈದು ದಿನಗಳ ಕಾಲ ಚಿತ್ರೀಕರಿಸಲು ಉದ್ದೇಶಿಸಲಾಗಿದೆ. ಒಟ್ಟು, ಈ ಆಲ್ಬಂಗೆ ಹತ್ತು ಲಕ್ಷಕ್ಕೂ ಹೆಚ್ಚು ವೆಚ್ಚವಾಗಲಿದೆ. ಬನಶಂಕರಿ, ಮಹಾಕೂಟ, ಸಿದ್ಧನಕೊಳ್ಳ, ಹುಲಿಗೆಮ್ಮನ ಕೊಳ್ಳ ಸೇರಿದಂತೆ ಇತರೆ ತಾಣಗಳಲ್ಲಿ ಆಲ್ಬಂ ಚಿತ್ರೀಕರಣ ನಡೆಯಲಿದೆ.

ಇನ್ನು, ಇಲ್ಲಿ ಪ್ರತಿ ದಿನ ಸುಮಾರು 150 ರಿಂದ 200 ಜನ ಜೂನಿಯರ್‌ ಕಲಾವಿದರನ್ನು ಇಟ್ಟುಕೊಂಡು ಹಾಡುಗಳನ್ನು ಚಿತ್ರೀಕರಿಸಲಾಗುವುದು. ಇವರೊಂದಿಗೆ ಇಬ್ಬರು ಜನಪ್ರಿಯ ತಾರೆಯರೂ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ” ಎಂದು ವಿವರಿಸುತ್ತಾರೆ ಗೋಪಿ ಕೆರೂರ್. ಉತ್ತರ ಕರ್ನಾಟಕದ ಇಳಕಲ್‌ ತಾಲೂಕಿನಲ್ಲಿರುವ ಸಿದ್ಧನಕೊಳ್ಳ ಮಠ, ಐಹೊಳೆ-ಪಟ್ಟದಕಲ್ಲು ಸ್ಥಳದಿಂದ ಹತ್ತು ಕಿ.ಮೀ.ದೂರದಲ್ಲಿದೆ. ಈಗಾಗಲೇ ಈ ಮಠಕ್ಕೆ ಹಲವು ರಾಜಕಾರಣಿಗಳು, ಸಿನಿಮಾ ತಾರೆಯುರು ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಕಲಾಪೋಷಕರ ಮಠ ಎಂದೇ ಗುರುತಿಸಿಕೊಂಡಿರುವ ಈ ಮಠದ ಬಗ್ಗೆ ಇದೇ ಮೊದಲ ಸಲ ಆಲ್ಬಂ ಸಾಂಗ್‌ ಚಿತ್ರೀಕರಿಸಲಾಗುತ್ತಿದೆ.

Categories
ಸಿನಿ ಸುದ್ದಿ

ಪಂಚ ರಂಗಿ ನಟಿ ನಿಧಿ ಸುಬ್ಬಯ್ಯ ಮುಖಕ್ಕೆ ಮಸಿ !

ಮಾಡಿದ ತಪ್ಪಿಗೆ ಮುಖಕ್ಕೆ ಮಸಿ ಬಳಿಸಿಕೊಳ್ಳುವುದಂದ್ರೇನು ? ನಟಿ ನಿಧಿ ಸುಬ್ಬಯ್ಯ ಅವರಿಗೆ ಇದು ಬೇಕಿತ್ತಾ? ಕಿರುತೆರೆ ವೀಕ್ಷಕರು ಹಾಗೆಯೇ ಸಿನಿಮಾ ಪ್ರೇಕ್ಷಕರು ಹೀಗೆಲ್ಲ ಹೇಳುತ್ತಿದ್ದಾರೆ. ಹಾಗಾದ್ರೆ ನಿಧಿ ಸುಬ್ಬಯ್ಯ ಮಾಡಿದ ತಪ್ಪೇನು?

ಇದು ಬಿಗ್‌ ಬಾಸ್‌ ಮನೆಯ ಕಥೆ.ಬಿಗ್ ಬಾಸ್ ಸೀಸನ್‌ 8 ದಿನೇ ದಿನೇ ಕುತೂಹಲ ಹುಟ್ಟಿಸುತ್ತಿದೆ. ಬುಧವಾರ ಬಿಗ್‌ ಬಾಸ್‌ ಮನೆಯಲ್ಲಿ ಕೊರೋನಾ ವೈರಸ್‌ ನದ್ದೂ ಹಾವಳಿ ಹೆಚ್ಚಾಗಿತ್ತು. ಅಂದ್ರೆ ಕೊರೋನಾ ವೈರಸ್‌ ಹಾಗೂ ಮನುಷ್ಯರ ಮಧ್ಯೆ ಒಂದು ಯುದ್ಧ ನಡೆದಿತ್ತು.

ನಿಧಿಯಿಂದ ಆಟವೇ ಸ್ಟಾಪ್ !
ಕೊರೋನಾ ವೈರಸ್‌ ಅಲ್ಲಿದ್ದ ಮನುಷ್ಯರ ಮೇಲೆ ದಾಳಿ ಮಾಡುವ ಆಟವದು. ಈ ವೇಳೆ ಅಲ್ಲಿ ಎರಡು ತಂಡಗಳಾಗಿ ರೂಪಿಸಲಾಗಿತ್ತು. ವೈರಸ್‌ ಟೀಮ್‌ನಲ್ಲಿ ನಟಿ ನಿಧಿ ಸುಬ್ಬಯ್ಯ ಇದ್ದರು. ಅವರು ಮನುಷ್ಯರ ಮೇಲೆ ದಾಳಿ ಮಾಡುವಾಗ ಸರಿಯಾಗಿ ಆಡಲಿಲ್ಲ ಅನ್ನೋದು ಅಲ್ಲಿದ್ದವರು ಆರೋಪ. ಕೊನೆಗೆ ಆ ಆಟವೇ ಅಲ್ಲಿ ನಡೆಯಲಿಲ್ಲ. ಅರ್ಧದಲ್ಲಿಯೇ ನಿಂತು ಹೋಯಿತು. ಅದು ಅರ್ಧದಲ್ಲಿಯೇ ನಿಂತು ಹೋಗಿದ್ದರ ಆರೋಪ ನಿಧಿ ಸುಬ್ಬಯ್ಯ ಮೇಲೆ ಬಂತು. ಆ ಕಾರಣಕ್ಕೆ ಸಂಜೆ ಬಿಗ್‌ ಬಾಸ್‌ ಮನೆಯಲ್ಲಿ ಇತರೆ ಕಂಟೆಸ್ಟೆಂಟ್ ಅವರ ಮೇಲೆ ಆರೋಪ ಹೊರಿಸಿ, ಅವರ ಮುಖಕ್ಕೆ ಮಸಿ ಬಳಿದರು. ಬಿಗ್ ಬಾಸ್ ಮನೆಯಲ್ಲಿ ಕೋಪದ ಕಾವು ಹೆಚ್ಚಾಗುತ್ತಿದ್ದು. ಕಂಟೆಸ್ಟೆಂಟ್ ವೈಯಕ್ತಿಕ ದ್ವೇಷದಿಂದ ಟಾಸ್ಕ್ ಗಳಲ್ಲಿ ಎಡವುತ್ತಿದ್ದಾರೆ ಅ‌ನ್ನೋದು ಸದ್ಯದ ಪರಿಸ್ಥಿತಿಯಲ್ಲಿ ಗಮನಿಸಬಹುದು.

Categories
ಸಿನಿ ಸುದ್ದಿ

ನಟ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಕಾಂಗ್ರೆಸ್‌ ಸೇರೋದು ನಿಜವೇ?

ಮಾಜಿ ಸಿಎಂ ಎಸ್‌ ಬಂಗಾರಪ್ಪ ಅವರ ಪುತ್ರ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್‌ ಸೇರ್ಪಡೆ ಆಗುತ್ತಿದ್ದಾರೆ. ಈಗಾಗಲೇ ಸೇರ್ಪಡೆಯ ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ. ಅಧಿಕೃತವಾಗಿ ಕೈ ಹಿಡಿಯುವುದು ಮಾತ್ರ ಬಾಕಿ ಇದೆ. ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ನಂತರ ತಾವು ಮಾನಸಿಕವಾಗಿ ಕಾಂಗ್ರೆಸ್‌ ಸೇರಿದ್ದಾಗಿ ಹೇಳಿದ್ದಾರೆ. ಹಾಗೆಯೇ ತಮ್ಮ ಸಹೋದರಿ ಹಾಗೂ ನಟ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಕೂಡ ಕಾಂಗ್ರೆಸ್‌ ಸೇರ್ಪಡೆ ಆಗುತ್ತಿದ್ದಾರೆಂದು ಹೇಳಿದ್ದಾರೆ. ಅವರು ಇಷ್ಟು ಹೇಳಿದ ಮೇಲೆ ಕುತೂಹಲ ಇರೋದು ಗೀತಾ ಶಿವರಾಜ್‌ ಕುಮಾರ್‌ ಕಾಂಗ್ರೆಸ್‌ ಸೇರುತ್ತಿರುವುದು ನಿಜವಾ ಅಂತ.

ನಟ ಶಿವರಾಜ್‌ ಕುಮಾರ್‌ ಮೊದಲಿನಿಂದಲೂ ರಾಜಕೀಯದಿಂದ ಅಂತರ ಕಾಯ್ದುಕೊಂಡು ಬಂದವರು. ಆದರೆ ಗೀತಾ ಶಿವರಾಜ್‌ ಕುಮಾರ್‌ ಅವರಿಗೆ ರಾಜಕಾರಣ ಹೊಸದಲ್ಲ. ರಾಜಕೀಯ ಹಿನ್ನೆಲೆಯ ಕುಟುಂಬದಿಂದಲೇ ಬಂದವರು. ಹಾಗೆಯೇ ೨೦೧೪ ರಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಜೆಡಿಎಸ್‌ ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಅಲ್ಲಿಂದ ಸಹೋದರ ಮಧು ಬಂಗಾರಪ್ಪನವರ ಜತೆಗೆ ರಾಜಕೀಯ ಮಾಡುತ್ತಲೇ ಬಂದರು. ಮತ್ತೊಂದು ಚುನಾವಣೆಗೆ ಮಧು ಬಂಗಾರಪ್ಪ ಲೋಕಸಭಾ ಚುನಾವಣೆಗೆ ಜೆಡಿಎಸ್‌ -ಕಾಂಗ್ರೆಸ್‌ ಅಭ್ಯರ್ಥಿಯಾದಾಗಲೂ ಅವರ ಪರವಾಗಿ ಗೀತಾ ಶಿವರಾಜ್‌ ಕುಮಾರ್‌ ಚುನಾವಣೆ ಪ್ರಚಾರ ನಡೆಸಿದ್ದರು. ಅದಕ್ಕೂ ಮೊದಲು ಮಧು ಬಂಗಾರಪ್ಪ ಸೊರಬ ವಿಧಾನಸಭಾ ಚುನಾವಣೆ ನಿಂತಾಗಲೂ ಅವರ ಪರವಾಗಿ ಗೀತಾ ಶಿವರಾಜ್‌ ಕುಮಾರ್‌ ಪ್ರಚಾರ ನಡೆಸಿದ್ದರು. ಆ ಚುನಾವಣೆಯಲ್ಲಿ ಮಧು ಬಂಗಾರಪ್ಪ ಗೆಲುವು ಕಂಡಿದ್ದರು.

ಒಟ್ಟಿನಲ್ಲಿ ಸಹೋದರ ಮಧು ಬಂಗಾರಪ್ಪ ಪರವಾಗಿ ಚುನಾವಣಾ ರಾಜಕೀಯದಲ್ಲಿ ಒಂಥರ ಸಕ್ರಿಯವಾಗಿಯೇ ಪಾಲ್ಗೊಳ್ಳುತ್ತಾ ಬಂದಿರುವ ಗೀತಾ ಶಿವರಾಜ್‌ ಕುಮಾರ್‌ ಈಗ ಕಾಂಗ್ರೆಸ್‌ ಸೇರುತ್ತಾರಾ ಎನ್ನುವುದು ಸಹಜವಾದ ಕುತೂಹಲ. ಈಗಾಗಲೇ ಮಧು ಬಂಗಾರಪ್ಪ ಮಾಧ್ಯಮದವರ ಜತೆಗೆ ಮಾತನಾಡುತ್ತಾ, ಅಕ್ಕ ಕಾಂಗ್ರೆಸ್‌ ಗೆ ಸೇರಿದ್ದಾರೆ ಅಂತ ತಿಳಿದುಕೊಳ್ಳಿ ಅಂತಲೂ ಹೇಳಿದ್ದಾರೆ. ಇದು ಒಂದ್ರೀತಿ ಖಚಿತವಾದ ಮಾತೇ. ಮೊದಲಿನಿಂದಲೂ ಸಹೋದರ ಮಧು ಬಂಗಾರಪ್ಪನವರ ರಾಜಕೀಯದ ಭವಿಷ್ಯಕ್ಕಾಗಿ ಶ್ರಮಿಸುತ್ತಲೇ ಬಂದಿರುವ ಗೀತಾ ಶಿವರಾಜ್‌ ಕುಮಾರ್‌ ಈಗಲೂ ಅವರ ನಿರ್ಧಾರವನ್ನು ತಳ್ಳಿ ಹಾಕುವುದಕ್ಕೆ ಸಾಧ್ಯವೇ ಇಲ್ಲ. ಮಧು ಬಂಗಾರಪ್ಪ ಅವರ ಹಾಗೆಯೇ ಗೀತಾ ಶಿವರಾಜ್‌ ಕುಮಾರ್‌ ಕಾಂಗ್ರೆಸ್‌ ಸೇರುವುದನ್ನು ತಳ್ಳಿ ಹಾಕುವಂತಿಲ್ಲ.

Categories
ಸಿನಿ ಸುದ್ದಿ

ಸಿನಿಲಹರಿ ಯೂಟ್ಯೂಬ್‌ ಚಾನೆಲ್ ಅದ್ಧೂರಿ ಲಾಂಚ್‌-ಒಳ್ಳೆಯ ಮನಸುಗಳಿದ್ದಾಗ ಗೆಲ್ಲುವುದೇನು ಕಷ್ಟವಾಗದು ಶುಭಹಾರೈಸಿದರು ಗೆಸ್ಟ್ !

ಸಿನಿಲಹರಿ ತಂಡದ ಬಹುದಿನಗಳ ಪ್ರಯತ್ನ ಕೊನೆಗೂ ಈಡೇರಿದೆ. ಬಹುದಿನಗಳಿಂದ ಸಿನಿಲಹರಿ ಯುಟ್ಯೂಬ್ ಚಾನೆಲ್‌ ಶುರು ಮಾಡಬೇಕೆನ್ನುವ ಕನಸು ಈಗ ನನಸಾಯಿತು. ಸುಸಜ್ಜಿತ ಸ್ಟುಡಿಯೋ ಮೂಲಕವೇ ಒಂದೊಳ್ಳೆಯ ಕಂಟೆಂಟ್ ಆಧರಿತ ಯೂಟ್ಯೂಬ್ ಚಾನೆಲ್ ಮಾಡಲು ಹೊರಟ ನಮ್ಮ ಪ್ರಯತ್ನಕ್ಕೆ ಲವ್ಲೀ ಸ್ಟಾರ್ ಪ್ರೇಮ್, ಕಂಚಿನ ಕಂಠದ ನಟ ವಸಿಷ್ಠ ಸಿಂಹ, “ದಿಯಾʼ ಚಿತ್ರದ ಖ್ಯಾತಿಯ ನಟಿ ಖುಷಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಹಿರಿಯ ಜರ್ನಲಿಸ್ಟ್ ಅನಂತ್ ಚಿನಿವಾರ್ ಚಾಲನೆ ಕೊಟ್ಟರು.ಬುಧವಾರ ಸಂಜೆ ಬೆಂಗಳೂರಿನ ಮಲ್ಲೇಶ್ವರಂ 18 ನೇ ಕ್ರಾಸಿನಲ್ಲಿರುವ ರೇಣುಕಾಂಬಾ ಡಿಜಿಟಲ್ ಸ್ಟುಡಿಯೋದ ಮಿನಿ ಚಿತ್ರಮಂದಿರದಲ್ಲಿಯೇ ಯೂಟ್ಯೂಬ್ ಚಾನೆಲ್‌ ಉದ್ಘಾಟನೆಯ ವರ್ಣರಂಜಿತ ಕಾರ್ಯಕ್ರಮ ನಡೆಯಿತು.

ಸಿನಿಲಹರಿ ಬಹುದೊಡ್ಡ ಸಂಸ್ಥೆಯಾಗಲಿ
ಯೂಟ್ಯೂಬ್ ಚಾನೆಲ್ ನ ಸದಾಶಯ ಹಾಗೂ ಅದಕ್ಕೆ ʼಸಿನಿಲಹರಿʼ ಸಂಸ್ಥೆ ಹೊಂದಿರುವ ಸುಸಜ್ಜಿತ ಸ್ಟುಡಿಯೋ ಕುರಿತ ಪ್ರೊಪೈಲ್ ವಿಡಿಯೋ ಹಾಗೂ ಪ್ರೋಮೋ ಪ್ರದರ್ಶನದ ನಂತರ ವೇದಿಕೆ ಕಾರ್ಯಕ್ರಮ ನಡೆಯಿತು. ಚಿತ್ರೋತ್ಸವ ಸಿದ್ಧತಾ ಕಾರ್ಯಕ್ರಮಗಳ ಒತ್ತಡದ ನಡುವೆಯೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮಾತನಾಡಿ, ಹೋರಾಟದ ಹಿನ್ನೆಲೆಯಿಂದಲೇ ಬಂದ ಇಬ್ಬರು ಗೆಳೆಯರ ಪ್ರಯತ್ನ ಫಲಿಸಲಿ. ಸಿನಿಲಹರಿ ದೊಡ್ಡ ಸಂಸ್ಥೆಯಾಗಿ ಬೆಳೆಯಲಿ ಎಂದರು. ಹಾಗೆಯೇ ಮಾತನಾಡುತ್ತಾ ಡಿಜಿಟಲ್ ಮಾಧ್ಯಮಕ್ಕೂ ಈಗ ಸೆನ್ಸಾರ್ ಅಗತ್ಯವಿದೆ. ಈಗ ಡಿಜಿಟಲ್ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲಾಗುವ ಸುದ್ದಿ ನೋಡಿದರೆ ವಿಚಿತ್ರ ಎನಿಸುತ್ತಿದೆ. ಇದೆಲ್ಲ ಒಂದು ಮಿತಿಯೊಳಗಡೆ ಬರಬೇಕಾದರೆ ಸೆನ್ಸಾರ್ ಮಾದರಿಯಲ್ಲಿ ನೀತಿ- ನಿಯಮಗಳಿಗೆ ಒಳಪಡಬೇಕು ಎಂದರು.

ಸ್ಟುಡಿಯೋ ಉದ್ಘಾಟನೆಯ ನಂತರ ಸಿನಿ ಲಹರಿ ಪ್ರೋಮೋ ವೀಕ್ಷಣೆಗೆ ಚಾಲನೆ ನೀಡಿ ಮಾತನಾಡಿದ ನಟ ನೆನಪಿರಲಿ ಪ್ರೇಮ್‌, ಸಿನಿ ಲಹರಿಯ ವಿಜಯ್‌ ಭರಮಸಾಗರ ಹಾಗೂ ದೇಶಾದ್ರಿ ಹೊಸ್ಮನೆ ಇಬ್ಬರೂ ನನ್ನ ಗೆಳೆಯರು. ತುಂಬಾ ವರ್ಷಗಳಿಂದ ನಾನು ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ. ಅವರಿಗೆ ಬರವಣಿಗೆಯ ದೊಡ್ಡ ಶಕ್ತಿಯಿದೆ. ಅವರಿಗೆ ಗೆಲುವು ಸಿಗುವುದರಲ್ಲಿ ಅನುಮಾನವೇ ಇಲ್ಲʼಎಂದರು.

ನಟ ವಸಿಷ್ಠ ಸಿಂಹ ಮಾತನಾಡಿ, ನಾನು ನಟ ಅಂತ ಗುರುತಿಸಕೊಳ್ಳುವ ಮುನ್ನವೇ ನನ್ನ ಬಗ್ಗೆ ಬರೆದು ಕಲಾವಿದನಾಗಿ ಗುರುತಿಸಿಕೊಳ್ಳಲು ಕಾರಣರಾದ ಗೆಳೆಯರಿವರು. ಒಳ್ಳೆಯ ಮನಸು ಹೊಂದಿದವರು. ಅಂತಹ ಮನಸು ಇದ್ದಾಗ ಗೆಲ್ಲವುದೇನು ಕಷ್ಟ ಆಗದು ಅಂತ ಶುಭ ಹಾರೈಸಿದರು.
ಹಿರಿಯ ಪತ್ರಕರ್ತ ಅನಂತ್‌ ಚಿನಿವಾರ್‌ ಮಾತನಾಡುತ್ತಾ, ಇವತ್ತಿನ ಡಿಜಿಟಲ್‌ ಮಾಧ್ಯಮದ ಸವಾಲುಗಳ ಬಗ್ಗೆ ವಿವರಿಸಿದರು. ನಟಿ ಖುಷಿ ಮಾತನಾಡಿ, ಸಿನಿ ಲಹರಿಗೆ ಶುಭಾಶಯ ಹೇಳಿದರು. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಲಿಂಗದೇವರು ಹಾಗೂ ಹಿರಿಯ ಪತ್ರಕರ್ತ ಮೈಸೂರು ಹರೀಶ್‌ ಮಾತನಾಡಿ, ಸಿನಿ ಲಹರಿ ಜನರ ಲಹರಿ ಆಗಲಿ ಎಂದರು.

ಖ್ಯಾತ ನಟ,ನಟಿಯರು ಭಾಗಿ
ನಟರಾದ ಯಶ್‌ ಶೆಟ್ಟಿ, ಕಾಕ್ರೋಚ್‌ ಸುಧಿ, ವಜ್ರಾಂಗ್ ಶೆಟ್ಟಿ, ಲಿಖಿತ್‌ ಸೂರ್ಯ, ಕುರಿ ರಂಗ, ನಿರಂಜನ್‌ ದಾವಣಗೆರೆ, ನಿರ್ಮಾಪಕರಾದ ನಾಗೇಶ್‌ ಕುಮಾರ್‌, ಚೇತನ್‌ ರಾಜ್‌, ನಿರ್ದೇಶಕರಾದ ಕಿರಣ್‌ ಕುಮಾರ್‌, ರಾಜು ಪಾವಗಡ, ಮಂಜುನಾಥ್‌ ಸಂಗೀತ ನಿರ್ದೇಶಕ ವೀರ್‌ ಸಮರ್ಥ್‌, ನಟಿ ವಿರಾನಿಕಾ ಶೆಟ್ಟಿ, ಲೇಖಕ ಶಿವಕುಮಾರ ಮಾವಲಿ, ದಿ ಫೈಲ್‌ ಪೊರ್ಟಲ್‌ ನ ಮುಖ್ಯಸ್ಥ ಮಹಾಂತೇಶ್‌ ಭದ್ರಾವತಿ, ಪತ್ರಕರ್ತ ಶ್ರೀನಾಥ್‌ ಬೆಳಚುಕನಹಳ್ಳಿ, ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ರಾಜ್ಯ ಅಧಿಕ ಕಾರ್ಯದರ್ಶಿ, ಹುಬ್ಬಳ್ಳಿ ಕಂಪನಿಯ ಕೆಪಿಟಿಸಿಲ್‌ ಹಿರಿಯ ಉಪಾಧ್ಯಕ್ಷ ಎಸ್‌ ಎಸ್‌ ಬಿರಾದಾರ್‌, ನಿರ್ದೇಶಕ ವಿರೇನ್‌ ಸಾಗರ್‌, ನಟ ಮಧು, ಪತ್ರಕರ್ತರಾದ ರಾಘವೇಂದ್ರ ತೊಗರ್ಸಿ, ಪ್ರಸಾದ್‌, ನಿರ್ದೇಶಕ ಮಂಜುನಂದನ್‌, ಹಾಜರಿದ್ದು, ಶುಭ ಹಾರೈಸಿದರು.

Categories
ಸಿನಿ ಸುದ್ದಿ

ಬಾಕ್ಸಾಫೀಸ್‌ ಸುಲ್ತಾನ್‌ ಮತ್ತೆ ಸೌಂಡು- ಗಳಿಕೆಯಲ್ಲಿ ಹೊಸ ದಾಖಲೆ ಬರೆದ ರಾಬರ್ಟ್!

ಕನ್ನಡದ ಬಹುನಿರೀಕ್ಷಿತ ಚಿತ್ರ “ರಾಬರ್ಟ್‌” ಅಬ್ಬರ ಎಲ್ಲೆಡೆ ಜೋರಾಗಿದೆ. ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸ್‌ ಚಿಂದಿ ಉಡಾಯಿಸಿದೆ. ಬಾಕ್ಸ್‌ ಆಫೀಸ್‌ ಸುಲ್ತಾನ್‌ ಎಂದೇ ಕರೆಸಿಕೊಳ್ಳುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ “ರಾಬರ್ಟ್‌” ಗಳಿಕೆಯಲ್ಲಿ ದೊಡ್ಡ ಮೊಟ್ಟದ ದಾಖಲೆ ಬರೆದಿದೆ. ಚಿತ್ರತಂಡ ಅಧಿಕೃತವಾಗಿಯೇ ಮೊದಲ ದಿನದ ಕಲೆಕ್ಷನ್‌ ರಿಪೋರ್ಟ್‌ ಹೊರ ಹಾಕಿದೆ. ಅವರ ಕಲೆಕ್ಷನ್‌ ರಿಪೋರ್ಟ್‌ ಪ್ರಕಾರ, “ರಾಬರ್ಟ್‌” ಚಿತ್ರ ಕರ್ನಾಟಕದಲ್ಲಿ 17.24ಕೋಟಿ ರೂ. ಗಳಿಕೆ ಕಂಡಿದೆ. ಈ ಮೂಲಕ ಅಚ್ಚರಿಯನ್ನೂ ಮೂಡಿಸಿದೆ.

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ “ರಾಬರ್ಟ್” ಮಾರ್ಚ್11ರ ಶಿವರಾತ್ರಿ ಹಬ್ಬದಂದು ಅದ್ದೂರಿಯಾಗಿ ತೆರೆಗೆ ಬಂದಿದ್ದು ಎಲ್ಲರಿಗೂ ಗೊತ್ತಿದೆ. ಕರ್ನಾಟಕ ಸೇರಿದಂತೆ ಇತರೆ ರಾಜ್ಯದಲ್ಲೂ ತೆರೆಕಂಡಿರುವ “ರಾಬರ್ಟ್” ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ “ರಾಬರ್ಟ್” ತನ್ನ ಮೊದಲ ದಿನದ ಕಲೆಕ್ಷನ್ನಲ್ಲಿ ದಾಖಲೆ ಬರೆದು ಬೀಗುತ್ತಿದೆ.
ಕನ್ನಡ ಚಿತ್ರವೊಂದು ಮೊದಲ ದಿನವೇ ದೊಡ್ಡ ಮೊತ್ತದ ಗಳಿಕೆ ಕಂಡಿರವುದು ಕನ್ನಡ ಚಿತ್ರರಂಗದ ವಿಚಾರದಲ್ಲಿ ಖುಷಿಯ ಸಂಗತಿ. ಇನ್ನು ಹೈದರಾಬಾದ್‌ನಲ್ಲೂ “ರಾಬರ್ಟ್” ಉತ್ತಮ ಗಳಿಕೆ ಕಂಡಿದೆ. ಮೊದಲ ದಿನ ಆಂಧ್ರ ಹಾಗು ತೆಲಂಗಾಣದಲ್ಲಿ 3.12 ಕೋಟಿ ರೂ. ಬಾಚಿದ್ದು, ದರ್ಶನ್ ಅವರ ಚಿತ್ರ ಮೊದಲ ಸಲ ತೆಲುಗಿನಲ್ಲಿ ಅದ್ದೂರಿ ಬಿಡುಗಡೆ ಕಂಡಿದೆ.

ಇನ್ನು, ಚಿತ್ರಮಂದಿರಗಳ ವಿಚಾರದಲ್ಲೂ ದಾಖಲೆ ನಿರ್ಮಿಸಿದ್ದ “ರಾಬರ್ಟ್”, ಕನ್ನಡ ಮತ್ತು ತೆಲುಗಿನಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಕರ್ನಾಟಕದಲ್ಲಿ ಏರಿಯಾ ಗಳಿಕೆ ಕುರಿತು ಹೇಳುವುದಾದರೆ, ಬಿಕೆಟಿ ಮತ್ತು ಸೌತ್‌ ಕೆನರಾ 2 ಕೋಟಿ, ಎಂಎಂಸಿಎಚ್‌ 2 ಕೋಟಿ, ಚಿತ್ರದುರ್ಗ ಮತ್ತು ದಾವಣಗೆರೆ 2.24 ಕೋಟಿ, ಶಿವಮೊಬ್ಬ 1 ಕೋಟಿ, ಹೈದರಾಬಾದ್‌ ಕರ್ನಾಟಕ 3 ಕೋಟಿ, ಬಾಂಬೆ ಕರ್ನಾಟಕ 2 ಕೋಟಿ ರೂ.ಗಳಿಕೆ ಕಂಡಿದೆ.

ಇದು ನಿಜಕ್ಕೂ ಹೆಮ್ಮೆಯ ವಿಷಯವೇ. ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಕಂಡಿದೆ ಎಂಬುದನ್ನಿಲ್ಲಿ ಗಮನಿಸಬಹುದು. ಮೊದಲ ಬಾರಿಗೆ ಕನ್ನಡದ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮಾರ್ಚ್11ರ ಬೆಳಗ್ಗೆ 6 ಗಂಟೆಯಿಂದಲೇ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಸಾಲುಗಟ್ಟಿ ನಿಂತು ಚಿತ್ರ ವೀಕ್ಷಿಸಿದ್ದು ವಿಶೇಷ. ಎರಡನೇ ದಿನದಲ್ಲೂ “ರಾಬರ್ಟ್‌” ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವುದು ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ.

Categories
ಸಿನಿ ಸುದ್ದಿ

ಭಜರಂಗಿಯ ಹೊಸ ಅವತಾರವೀಗ ವೇದ !

ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ನಿರ್ದೇಶಕ ಹರ್ಷ ಜೋಡಿಯ ಮತ್ತೊಂದು ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಸಿನಿಮಾ ಪ್ರೇಕ್ಷಕರಲ್ಲಿದ್ದ ಭಾರೀ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಇದು ಶಿವರಾಜ್ ಕುಮಾರ್ ಹಾಗೂ ಹರ್ಷ ಕಾಂಬಿನೇಷನ್ ಮೂರನೇಸಿನಿಮಾ. ಹಾಗೆಯೇ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಅಭಿನಯದ 125ನೇ ಚಿತ್ರ.

‘ ಭಜರಂಗಿ 2 ‘ ಬೆನ್ನಲೇ ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್ ಮೂಲಕ ಮತ್ತೊಂದು ಚಿತ್ರ ಶುರುವಾಗುತ್ತಿದ್ದು, ಅದಕ್ಕೆ ಶಿವರಾಜ್ ಕುಮಾರ್ ಅವರೇ ನಿರ್ಮಾಪಕರು ಎನ್ನುವ ಸುದ್ದಿ ತುಂಬಾ ದಿನಗಳ ಹಿಂದೆಯೇ ಬಹಿರಂಗಗೊಂಡಿತ್ತು. ಹಾಗೆಯೇ ಒಂದಷ್ಟು ದಿನಗಳಾದ ನಂತರ ಅ ಚಿತ್ರ ಸ್ಕ್ರಿಪ್ಟ್ ಪೂಜೆ ಕೂಡ ನೆರವೇರಿತ್ತು.‌ಅಲ್ಲಿಂದೀಗ ನಿರ್ದೇಶಕ ಎ. ಹರ್ಷ ಮಹಾ ಶಿವರಾತ್ರಿ ಹಬ್ಬಕ್ಕೆ ಆ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಲಾಂಚ್ ಮಾಡುವ ಮೂಲಕ ಸ್ಯಾಂಡಲ್ ವುಡ್ ದೊಡ್ಡ ಕ್ರೇಜ್ ಹುಟ್ಟು ಹಾಕಿದ್ದಾರೆ.

ವೇದ ಚಿತ್ರದ ಫಸ್ಟ್ ಲುಕ್ ನೋಡಿದರೆ ಇದು ಭಜರಂಗಿಯ ಇನ್ನೊಂದು ಅವತಾರ ಅನ್ನೋದರಲ್ಲಿ ಯಾವುದೇ ಸಂಶಯ ಇಲ್ಲ. ಶಿವರಾಜ್ ಕುಮಾರ್ ಅವರ ಮತ್ತೊಂದು ಶಿವನ ಅವತಾರ ಇಲ್ಲೂಇರಲಿದೆ ಅಂತಂದುಕೊಳ್ಳಬಹುದು.‌ಗಡ್ಡದಾರಿ ಶಿವರಾಜ್ ಕುಮಾರ್ ಶಿವನ ಮತ್ತೊಂದು ಅವತಾರದಂತೆಯೇ ಕಾಣುತ್ತಾರೆ. ಹಾಗಂತ ಇದು ಭಜರಂಗಿ ೩ ಅಲ್ಲ. ಇದೊಂದು ಪ್ರೆಶ್ ಕತೆ. ಶಿವರಾಜ್ ಕುಮಾರ್ ಅವರ ಸಿನಿ‌ಜರ್ನಿಯಲ್ಲೇ ಹೊಸ ಶೆಡ್ಸ್ಇರುವಂತಹ ಪಾತ್ರವಿದೆ ಎನ್ನುತ್ತಾರೆ ನಿರ್ದೇಶಕ ಹರ್ಷ.

ಸದ್ಯಕ್ಕೆ ಸಿನಿಮಾದ ಮುಖ್ಯ ಆಕರ್ಷಣೆ ಶಿವರಾಜ್ ಕುಮಾರ್ ಅವರ ಪಾತ್ರ.‌ಅದರ ಫಸ್ಟ್ ಲುಕ್ ಈಗ ರಿವೀಲ್ ಆಗಿದೆ. ಉಳಿದಂತೆ ಯಾರೆಲ್ಲ ಇರಲಿದ್ದಾರೆಂಬುದು ಇನ್ನು ನಿಗೂಢ. ಅದರಾಚೆ, ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಸ್ವಾಮಿ ಜಿ. ಗೌಡ ಕ್ಯಾಮೆರಾ, ರಘು ನೀಡುವಳ್ಳಿ ಸಂಭಾಷಣೆಯಿದೆ. ವಿಶೇಷ ಅಂದ್ರೆ ಗೀತಾ ಶಿವರಾಜ್ ಕುಮಾರ್ ಈ ಚಿತ್ರದ ನಿರ್ಮಾಪಕರು.

error: Content is protected !!