ಕಲಾಪೋಷಕರ ಮಠಕ್ಕೊಂದು ಭಕ್ತಿಗೀತೆ! ಸಿದ್ಧವಾಗಲಿದೆ ಸಿದ್ಧನಕೊಳ್ಳ ಮಠದ ಭಕ್ತರ ಅರ್ಥ ಪೂರ್ಣ ಹಾಡು !

ಸಿನಿಮಾ ಮಂದಿಗೂ ಮಠಗಳಿಗೂ ಅವಿನಾಭಾವ ಸಂಬಂಧವಿದೆ. ಕೆಲವು ರಾಜಕಾರಣಿಗಳಿಗೂ ಕೂಡ ಮಠಗಳೆಂದರೆ ಅಚ್ಚುಮೆಚ್ಚು ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದಕ್ಕೆ ಕಾರಣ, ಆಯಾ ಮಠಗಳ ಶ್ರೀಗಳ ಆಶೀರ್ವಾದದಿಂದಲೇ ಇಂದು ಉನ್ನತ ಹುದ್ದೆ ಅಲಂಕರಿಸಿರುವ ಅದೆಷ್ಟೋ ರಾಜಕಾರಣಿಗಳಿದ್ದಾರೆ. ಅಂತೆಯೇ, ಕಲಾವಿದರು ಕೂಡ ಗುರುತಿಸಿಕೊಂಡು ಬೆಳೆದಿದ್ದೂ ಇದೆ. ಇಷ್ಟಕ್ಕೂ ಈಗ ಇಲ್ಲೇಕೆ ಮಠಗಳ ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ಈ ಸುದ್ದಿಗೆ ಕಾರಣ, ಸಿದ್ಧನಕೊಳ್ಳ ಮಠದ ಗುರು ಶ್ರೀ ಡಾ.ಶಿವಕುಮಾರ ಶ್ರೀಗಳು. ಹೌದು, ಸಿದ್ಧನಕೊಳ್ಳ ಮಠ ಅಂದರೆ, ಅದೊಂದು ಭಕ್ತಿತಾಣ. ನೆಮ್ಮದಿ ವಾತಾವರಣ ಸೃಷ್ಠಿಸುವ ಜಾಗ. ಸಿದ್ಧನಕೊಳ್ಳ ಮಠ ಈಗ ಸುದ್ದಿಯಲ್ಲಿದೆ. ಇದರ ಇತಿಹಾಸ ದೊಡ್ಡದೇ ಇದೆ. ಈ ಮಠಕ್ಕೂ ಸಿನಿಮಾ ಕಲಾವಿದರಿಗೂ ಸಾಕಷ್ಟು ನಂಟಿದೆ ಅಂದರೆ ನಂಬಲೇಬೇಕು.

ಹೌದು, 1974ರಲ್ಲಿ ಬಂದ “ಸಂಪತ್ತಿಗೆ ಸವಾಲ್‌” ಚಿತ್ರದ ಚಿತ್ರೀಕರಣ ಕೂಡ ಇದೇ ಸಿದ್ಧನಕೊಳ್ಳದಲ್ಲಿ ನಡೆದಿದೆ. ಆ ಸಂದರ್ಭದಲ್ಲಿ ಮಠದ ಶ್ರೀಗಳು ಡಾ.ರಾಜಕುಮಾರ್‌ ಅವರಿಗೆ ಪ್ರೀತಿಯಿಂದಲೇ ಆಶೀರ್ವದಿಸಿ, ನಾಡಿನಲ್ಲಿ ಒಳ್ಳೆಯ ಗಾಯಕರಾಗುತ್ತೀರಿ ಅಂತಾನೂ ಹೇಳಿ ಆಶೀರ್ವದಿಸಿದ್ದರಂತೆ. ಆಮೇಲೆ ಡಾ.ರಾಜಕುಮಾರ್‌ ಯಾವ ಮಟ್ಟದ ಗಾಯಕರಾದರು ಅನ್ನೋದು ಎಲ್ಲರಿಗೂ ಗೊತ್ತು. ಸಿದ್ಧನಕೊಳ್ಳದ ಮಠ ಅಂದರೆ, ಅದು ಕಲಾಪೋಷಕರ ಮಠ ಅಂತ ಕರೆಸಿಕೊಳ್ಳುತ್ತದೆ.

ಅದಕ್ಕೆ ಕಾರಣ, ಪ್ರತಿ ವರ್ಷವೂ ಈ ಮಠ ಸಿದ್ಧಶ್ರೀ ಪ್ರಶಶಸ್ತಿ ಪ್ರದಾನ ಮಾಡಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ. ಈಗ ಕೊರೊನಾ ಹಾವಳಿ ನಂತರವೂ ಮಠ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲು ತಯಾರು ನಡೆಸುತ್ತಿದೆ. ಹಾಗೆ, ನೋಡಿದರೆ, ಉತ್ತರ ಕರ್ನಾಟಕದಲ್ಲಿ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ.
ಇಷ್ಟಕ್ಕೂ ಈ ಸಿದ್ಧನಕೊಳ್ಳ ಮಠದ ಬಗ್ಗೆ ಹೇಳೋಕೆ ಕಾರಣ, “ಸಿದ್ಧನಕೊಳ್ಳ ಭಕ್ತರ ಗೀತೆ” ಎಂಬ ಹೆಸರಿನ ಆಲ್ಬಂ ಸಾಂಗ್‌ ಮಾಡಲು ತಯಾರಿ ನಡೆದಿದೆ.

ಈ ಆಲ್ಬಂ ಸಾಂಗ್‌ಗೆ ನಿರ್ದೇಶಕ ಗೋಪಿ ಕೆರೂರ್‌ ನೇತೃತ್ವ ವಹಿಸುತ್ತಿದ್ದಾರೆ. ಅವರೇ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರ ಶಿಷ್ಯರಾಗಿರುವ ಉದಯ್‌ ಅಂಕೋಲ ಅವರ ಸಂಗೀತವಿದೆ. ಜೊತೆಗೆ ಹಾಡುಗಳಿಗೆ ಅವರೇ ಧ್ವನಿಯಾಗಿದ್ದಾರೆ. ಈ ಆಲ್ಬಂ ವಿಶೇಷವೆಂದರೆ, ಸಿದ್ಧನಕೊಳ್ಳ ಮಠದ ಜೊತೆಗೆ ಮಹಾಕೂಟೇಶ್ವರ ಮತ್ತು ಬಾದಾಮಿ ಬನಶಂಕರಿ ದೇವಿ ಮೇಲೆಯೂ ಹಾಡುಗಳು ರಚಿತವಾಗಿವೆ. ಸಿದ್ಧನಕೊಳ್ಳ ಮಠದ ಗುರುಗಳಾದ ಡಾ. ಶ್ರೀ ಶಿವಕುಮಾರ್ ಸ್ವಾಮೀಜಿಗಳು ಈ ಆಲ್ಬಂನ ಮುಖ್ಯ ಆಕರ್ಷಣೆ. ಹೌದು, ಈ ಆಲ್ಬಂನಲ್ಲಿ ಶ್ರೀಗಳು ಕೂಡ ನಟಿಸುತ್ತಿದ್ದಾರೆ ಎಂಬುದು ವಿಶೇಷ. ಸಹಜವಾಗಿಯೇ ಸಿದ್ಧನಕೊಳ್ಳ ಮಠದ ಭಕ್ತರಿಗೆ ಶ್ರೀಗಳ ನೇತೃತ್ವದಲ್ಲಿ ಸಿದ್ಧಗೊಳ್ಳುತ್ತಿರುವ ಆಲ್ಬಂನಲ್ಲಿ ಶ್ರೀಗಳು ನಟಿಸುತ್ತಿರುವುದು ಕೂಡ ಸಂತೋಷ ತಂದಿದೆ.


ಆಲ್ಬಂನಲ್ಲಿರುವ ನಾಲ್ಕು ಭಕ್ತಿಗೀತೆಗಳು ಸಿನಿಮಾ ಶೈಲಿಯಲ್ಲೇ ಮೂಡಿಬರಲಿದೆ ಎಂಬುದನ್ನು ವಿವರಿಸುತ್ತಾರೆ ನಿರ್ದೇಶಕ ಗೋಪಿ ಕೆರೂರ್. “ಸಿದ್ಧನಕೊಳ್ಳ ಭಕ್ತರ ಗೀತೆʼ ಆಲ್ಬಂ ನಿರ್ದೇಶನದ ಬಗ್ಗೆ ಹೇಳುವ ಗೋಪಿ ಕೆರೂರ್‌, “ಈ ಆಲ್ಬಂಗೆ ಗೀತೆ ಬರೆಯಲು ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ. ದೇವರ ಬಗ್ಗೆ ನಾಲ್ಕು ಪದ ಬರೆಯುವುದು ಖುಷಿ ಕೊಟ್ಟಿದೆ. ಸಿದ್ಧನಕೊಳ್ಳ ಮಠದ ಶ್ರೀಗಳ ಪ್ರೋತ್ಸಾಹವೇ ಇದಕ್ಕೆ ಕಾರಣ. ಮಾರ್ಚ್‌ ಅಂತ್ಯದಲ್ಲಿ ಈ ಆಲ್ಬಂಗೆ ಚಾಲನೆ ಸಿಗಲಿದೆ.
ಅದ್ಧೂರಿಯಾಗಿಯೇ ಆಲ್ಬಂ ಚಿತ್ರೀಕರಿಸುವ ಯೋಜನೆ ಇದೆ. ಎಪಿಕ್‌ ಕ್ಯಾಮೆರಾ ಬಳಸಿ, ಸುಮಾರು ಹದಿನೈದು ದಿನಗಳ ಕಾಲ ಚಿತ್ರೀಕರಿಸಲು ಉದ್ದೇಶಿಸಲಾಗಿದೆ. ಒಟ್ಟು, ಈ ಆಲ್ಬಂಗೆ ಹತ್ತು ಲಕ್ಷಕ್ಕೂ ಹೆಚ್ಚು ವೆಚ್ಚವಾಗಲಿದೆ. ಬನಶಂಕರಿ, ಮಹಾಕೂಟ, ಸಿದ್ಧನಕೊಳ್ಳ, ಹುಲಿಗೆಮ್ಮನ ಕೊಳ್ಳ ಸೇರಿದಂತೆ ಇತರೆ ತಾಣಗಳಲ್ಲಿ ಆಲ್ಬಂ ಚಿತ್ರೀಕರಣ ನಡೆಯಲಿದೆ.

ಇನ್ನು, ಇಲ್ಲಿ ಪ್ರತಿ ದಿನ ಸುಮಾರು 150 ರಿಂದ 200 ಜನ ಜೂನಿಯರ್‌ ಕಲಾವಿದರನ್ನು ಇಟ್ಟುಕೊಂಡು ಹಾಡುಗಳನ್ನು ಚಿತ್ರೀಕರಿಸಲಾಗುವುದು. ಇವರೊಂದಿಗೆ ಇಬ್ಬರು ಜನಪ್ರಿಯ ತಾರೆಯರೂ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ” ಎಂದು ವಿವರಿಸುತ್ತಾರೆ ಗೋಪಿ ಕೆರೂರ್. ಉತ್ತರ ಕರ್ನಾಟಕದ ಇಳಕಲ್‌ ತಾಲೂಕಿನಲ್ಲಿರುವ ಸಿದ್ಧನಕೊಳ್ಳ ಮಠ, ಐಹೊಳೆ-ಪಟ್ಟದಕಲ್ಲು ಸ್ಥಳದಿಂದ ಹತ್ತು ಕಿ.ಮೀ.ದೂರದಲ್ಲಿದೆ. ಈಗಾಗಲೇ ಈ ಮಠಕ್ಕೆ ಹಲವು ರಾಜಕಾರಣಿಗಳು, ಸಿನಿಮಾ ತಾರೆಯುರು ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಕಲಾಪೋಷಕರ ಮಠ ಎಂದೇ ಗುರುತಿಸಿಕೊಂಡಿರುವ ಈ ಮಠದ ಬಗ್ಗೆ ಇದೇ ಮೊದಲ ಸಲ ಆಲ್ಬಂ ಸಾಂಗ್‌ ಚಿತ್ರೀಕರಿಸಲಾಗುತ್ತಿದೆ.

Related Posts

error: Content is protected !!