ಸಿನಿಲಹರಿ ತಂಡದ ಬಹುದಿನಗಳ ಪ್ರಯತ್ನ ಕೊನೆಗೂ ಈಡೇರಿದೆ. ಬಹುದಿನಗಳಿಂದ ಸಿನಿಲಹರಿ ಯುಟ್ಯೂಬ್ ಚಾನೆಲ್ ಶುರು ಮಾಡಬೇಕೆನ್ನುವ ಕನಸು ಈಗ ನನಸಾಯಿತು. ಸುಸಜ್ಜಿತ ಸ್ಟುಡಿಯೋ ಮೂಲಕವೇ ಒಂದೊಳ್ಳೆಯ ಕಂಟೆಂಟ್ ಆಧರಿತ ಯೂಟ್ಯೂಬ್ ಚಾನೆಲ್ ಮಾಡಲು ಹೊರಟ ನಮ್ಮ ಪ್ರಯತ್ನಕ್ಕೆ ಲವ್ಲೀ ಸ್ಟಾರ್ ಪ್ರೇಮ್, ಕಂಚಿನ ಕಂಠದ ನಟ ವಸಿಷ್ಠ ಸಿಂಹ, “ದಿಯಾʼ ಚಿತ್ರದ ಖ್ಯಾತಿಯ ನಟಿ ಖುಷಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಹಿರಿಯ ಜರ್ನಲಿಸ್ಟ್ ಅನಂತ್ ಚಿನಿವಾರ್ ಚಾಲನೆ ಕೊಟ್ಟರು.ಬುಧವಾರ ಸಂಜೆ ಬೆಂಗಳೂರಿನ ಮಲ್ಲೇಶ್ವರಂ 18 ನೇ ಕ್ರಾಸಿನಲ್ಲಿರುವ ರೇಣುಕಾಂಬಾ ಡಿಜಿಟಲ್ ಸ್ಟುಡಿಯೋದ ಮಿನಿ ಚಿತ್ರಮಂದಿರದಲ್ಲಿಯೇ ಯೂಟ್ಯೂಬ್ ಚಾನೆಲ್ ಉದ್ಘಾಟನೆಯ ವರ್ಣರಂಜಿತ ಕಾರ್ಯಕ್ರಮ ನಡೆಯಿತು.
ಸಿನಿಲಹರಿ ಬಹುದೊಡ್ಡ ಸಂಸ್ಥೆಯಾಗಲಿ
ಯೂಟ್ಯೂಬ್ ಚಾನೆಲ್ ನ ಸದಾಶಯ ಹಾಗೂ ಅದಕ್ಕೆ ʼಸಿನಿಲಹರಿʼ ಸಂಸ್ಥೆ ಹೊಂದಿರುವ ಸುಸಜ್ಜಿತ ಸ್ಟುಡಿಯೋ ಕುರಿತ ಪ್ರೊಪೈಲ್ ವಿಡಿಯೋ ಹಾಗೂ ಪ್ರೋಮೋ ಪ್ರದರ್ಶನದ ನಂತರ ವೇದಿಕೆ ಕಾರ್ಯಕ್ರಮ ನಡೆಯಿತು. ಚಿತ್ರೋತ್ಸವ ಸಿದ್ಧತಾ ಕಾರ್ಯಕ್ರಮಗಳ ಒತ್ತಡದ ನಡುವೆಯೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮಾತನಾಡಿ, ಹೋರಾಟದ ಹಿನ್ನೆಲೆಯಿಂದಲೇ ಬಂದ ಇಬ್ಬರು ಗೆಳೆಯರ ಪ್ರಯತ್ನ ಫಲಿಸಲಿ. ಸಿನಿಲಹರಿ ದೊಡ್ಡ ಸಂಸ್ಥೆಯಾಗಿ ಬೆಳೆಯಲಿ ಎಂದರು. ಹಾಗೆಯೇ ಮಾತನಾಡುತ್ತಾ ಡಿಜಿಟಲ್ ಮಾಧ್ಯಮಕ್ಕೂ ಈಗ ಸೆನ್ಸಾರ್ ಅಗತ್ಯವಿದೆ. ಈಗ ಡಿಜಿಟಲ್ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲಾಗುವ ಸುದ್ದಿ ನೋಡಿದರೆ ವಿಚಿತ್ರ ಎನಿಸುತ್ತಿದೆ. ಇದೆಲ್ಲ ಒಂದು ಮಿತಿಯೊಳಗಡೆ ಬರಬೇಕಾದರೆ ಸೆನ್ಸಾರ್ ಮಾದರಿಯಲ್ಲಿ ನೀತಿ- ನಿಯಮಗಳಿಗೆ ಒಳಪಡಬೇಕು ಎಂದರು.
ಸ್ಟುಡಿಯೋ ಉದ್ಘಾಟನೆಯ ನಂತರ ಸಿನಿ ಲಹರಿ ಪ್ರೋಮೋ ವೀಕ್ಷಣೆಗೆ ಚಾಲನೆ ನೀಡಿ ಮಾತನಾಡಿದ ನಟ ನೆನಪಿರಲಿ ಪ್ರೇಮ್, ಸಿನಿ ಲಹರಿಯ ವಿಜಯ್ ಭರಮಸಾಗರ ಹಾಗೂ ದೇಶಾದ್ರಿ ಹೊಸ್ಮನೆ ಇಬ್ಬರೂ ನನ್ನ ಗೆಳೆಯರು. ತುಂಬಾ ವರ್ಷಗಳಿಂದ ನಾನು ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ. ಅವರಿಗೆ ಬರವಣಿಗೆಯ ದೊಡ್ಡ ಶಕ್ತಿಯಿದೆ. ಅವರಿಗೆ ಗೆಲುವು ಸಿಗುವುದರಲ್ಲಿ ಅನುಮಾನವೇ ಇಲ್ಲʼಎಂದರು.
ನಟ ವಸಿಷ್ಠ ಸಿಂಹ ಮಾತನಾಡಿ, ನಾನು ನಟ ಅಂತ ಗುರುತಿಸಕೊಳ್ಳುವ ಮುನ್ನವೇ ನನ್ನ ಬಗ್ಗೆ ಬರೆದು ಕಲಾವಿದನಾಗಿ ಗುರುತಿಸಿಕೊಳ್ಳಲು ಕಾರಣರಾದ ಗೆಳೆಯರಿವರು. ಒಳ್ಳೆಯ ಮನಸು ಹೊಂದಿದವರು. ಅಂತಹ ಮನಸು ಇದ್ದಾಗ ಗೆಲ್ಲವುದೇನು ಕಷ್ಟ ಆಗದು ಅಂತ ಶುಭ ಹಾರೈಸಿದರು.
ಹಿರಿಯ ಪತ್ರಕರ್ತ ಅನಂತ್ ಚಿನಿವಾರ್ ಮಾತನಾಡುತ್ತಾ, ಇವತ್ತಿನ ಡಿಜಿಟಲ್ ಮಾಧ್ಯಮದ ಸವಾಲುಗಳ ಬಗ್ಗೆ ವಿವರಿಸಿದರು. ನಟಿ ಖುಷಿ ಮಾತನಾಡಿ, ಸಿನಿ ಲಹರಿಗೆ ಶುಭಾಶಯ ಹೇಳಿದರು. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಲಿಂಗದೇವರು ಹಾಗೂ ಹಿರಿಯ ಪತ್ರಕರ್ತ ಮೈಸೂರು ಹರೀಶ್ ಮಾತನಾಡಿ, ಸಿನಿ ಲಹರಿ ಜನರ ಲಹರಿ ಆಗಲಿ ಎಂದರು.
ಖ್ಯಾತ ನಟ,ನಟಿಯರು ಭಾಗಿ
ನಟರಾದ ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ವಜ್ರಾಂಗ್ ಶೆಟ್ಟಿ, ಲಿಖಿತ್ ಸೂರ್ಯ, ಕುರಿ ರಂಗ, ನಿರಂಜನ್ ದಾವಣಗೆರೆ, ನಿರ್ಮಾಪಕರಾದ ನಾಗೇಶ್ ಕುಮಾರ್, ಚೇತನ್ ರಾಜ್, ನಿರ್ದೇಶಕರಾದ ಕಿರಣ್ ಕುಮಾರ್, ರಾಜು ಪಾವಗಡ, ಮಂಜುನಾಥ್ ಸಂಗೀತ ನಿರ್ದೇಶಕ ವೀರ್ ಸಮರ್ಥ್, ನಟಿ ವಿರಾನಿಕಾ ಶೆಟ್ಟಿ, ಲೇಖಕ ಶಿವಕುಮಾರ ಮಾವಲಿ, ದಿ ಫೈಲ್ ಪೊರ್ಟಲ್ ನ ಮುಖ್ಯಸ್ಥ ಮಹಾಂತೇಶ್ ಭದ್ರಾವತಿ, ಪತ್ರಕರ್ತ ಶ್ರೀನಾಥ್ ಬೆಳಚುಕನಹಳ್ಳಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ರಾಜ್ಯ ಅಧಿಕ ಕಾರ್ಯದರ್ಶಿ, ಹುಬ್ಬಳ್ಳಿ ಕಂಪನಿಯ ಕೆಪಿಟಿಸಿಲ್ ಹಿರಿಯ ಉಪಾಧ್ಯಕ್ಷ ಎಸ್ ಎಸ್ ಬಿರಾದಾರ್, ನಿರ್ದೇಶಕ ವಿರೇನ್ ಸಾಗರ್, ನಟ ಮಧು, ಪತ್ರಕರ್ತರಾದ ರಾಘವೇಂದ್ರ ತೊಗರ್ಸಿ, ಪ್ರಸಾದ್, ನಿರ್ದೇಶಕ ಮಂಜುನಂದನ್, ಹಾಜರಿದ್ದು, ಶುಭ ಹಾರೈಸಿದರು.