ಚಿರು ಅಭಿನಯದ ಕೊನೆಯ ಸಿನಿಮಾ ಮಾರ್ಚ್‌ 26ಕ್ಕೆ ರಿಲೀಸ್‌- ರಣಂ ಚಿತ್ರದಲ್ಲಿ ಸರ್ಜಾ ಪೊಲೀಸ್‌ ಅಧಿಕಾರಿ

ನಟ ಚಿರಂಜೀವಿ ಸರ್ಜಾ ಅಭಿನಯದ “ರಣಂ” ಸಿನಿಮಾವೊಂದು ಇದೀಗ ಬಿಡುಗಡೆಗೆ ಸಜ್ಜಾಗಿದೆ. ಹೌದು, “ರಣಂ” ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ‌ ಚೇತನ್‌ (ಆ ದಿನಗಳು) ಹೀರೋ. ಇದರಲ್ಲಿ ವಿಶೇಷ ಪಾತ್ರದ ಮೂಲಕ ಚಿರಂಜೀವಿ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರ ಮಾರ್ಚ್‌ ೨೬ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸುಮಾರು 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ರಣಂ” ತೆರೆ ಕಾಣಲಿದೆ ಎಂಬುದು ವಿಶೇಷ. ಈಗಾಗಲೇ ಕನ್ನಡದಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟಿರುವ ಆರ್. ಎಸ್. ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಆರ್. ಶ್ರೀನಿವಾಸ್ (ಕನಕಪುರ) ಅವರು ನಿರ್ಮಾಣ ಮಾಡಿದ್ದಾರೆ. ಇದು ಅವರ 21ನೇ ಚಿತ್ರ. ಇವರೊಂದಿಗೆ ಕಿರಣ್ ಗೌಡ ಈ ಚಿತ್ರದ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.‌

“ರಣಂ” ಚಿರಂಜೀವಿ ಸರ್ಜಾ‌ ಅವರು ನಟಿಸಿ, ಡಬ್ಬಿಂಗ್ ಮಾಡಿರುವ ಕೊನೆಯ ಚಿತ್ರ. ವಿ.ಸಮುದ್ರ ನಿರ್ದೇಶನದ ಈ ಚಿತ್ರಕ್ಕೆ ರವಿಶಂಕರ್ ಹಾಗೂ ಎಸ್ ಚಿನ್ನ ಸಂಗೀತ ನೀಡಿದ್ದಾರೆ. ನಿರಂಜನ್ ಬಾಬು ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು, ರವಿವರ್ಮ ಹಾಗೂ ವಿಜಯ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಚೇತನ್ ಕುಮಾರ್ ಹಾಗೂ ಎ.ಪಿ.ಅರ್ಜುನ್ ರಚಿಸಿದ್ದಾರೆ. ಸಂಭಾಷಣೆಯನ್ನು ಪಾರ್ವತಿ ಚಂದು ಮತ್ತು ಮೋಹನ್ ಬರೆದಿದ್ದಾರೆ. ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮಧುಸೂದನ್, ಕಾರ್ತಿಕ್, ಅಭಿಲಾಶ್, ಹರೀಶ್, ಪ್ರವೀಣ್, ಬೆಸೆಂಟ್ ರವಿ ಮುಂತಾದವರು ಚಿತ್ರದಲ್ಲಿದ್ದಾರೆ.

Related Posts

error: Content is protected !!