ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ಪುತ್ರ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಈಗಾಗಲೇ ಸೇರ್ಪಡೆಯ ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ. ಅಧಿಕೃತವಾಗಿ ಕೈ ಹಿಡಿಯುವುದು ಮಾತ್ರ ಬಾಕಿ ಇದೆ. ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ತಾವು ಮಾನಸಿಕವಾಗಿ ಕಾಂಗ್ರೆಸ್ ಸೇರಿದ್ದಾಗಿ ಹೇಳಿದ್ದಾರೆ. ಹಾಗೆಯೇ ತಮ್ಮ ಸಹೋದರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆಂದು ಹೇಳಿದ್ದಾರೆ. ಅವರು ಇಷ್ಟು ಹೇಳಿದ ಮೇಲೆ ಕುತೂಹಲ ಇರೋದು ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರುತ್ತಿರುವುದು ನಿಜವಾ ಅಂತ.
ನಟ ಶಿವರಾಜ್ ಕುಮಾರ್ ಮೊದಲಿನಿಂದಲೂ ರಾಜಕೀಯದಿಂದ ಅಂತರ ಕಾಯ್ದುಕೊಂಡು ಬಂದವರು. ಆದರೆ ಗೀತಾ ಶಿವರಾಜ್ ಕುಮಾರ್ ಅವರಿಗೆ ರಾಜಕಾರಣ ಹೊಸದಲ್ಲ. ರಾಜಕೀಯ ಹಿನ್ನೆಲೆಯ ಕುಟುಂಬದಿಂದಲೇ ಬಂದವರು. ಹಾಗೆಯೇ ೨೦೧೪ ರಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಅಲ್ಲಿಂದ ಸಹೋದರ ಮಧು ಬಂಗಾರಪ್ಪನವರ ಜತೆಗೆ ರಾಜಕೀಯ ಮಾಡುತ್ತಲೇ ಬಂದರು. ಮತ್ತೊಂದು ಚುನಾವಣೆಗೆ ಮಧು ಬಂಗಾರಪ್ಪ ಲೋಕಸಭಾ ಚುನಾವಣೆಗೆ ಜೆಡಿಎಸ್ -ಕಾಂಗ್ರೆಸ್ ಅಭ್ಯರ್ಥಿಯಾದಾಗಲೂ ಅವರ ಪರವಾಗಿ ಗೀತಾ ಶಿವರಾಜ್ ಕುಮಾರ್ ಚುನಾವಣೆ ಪ್ರಚಾರ ನಡೆಸಿದ್ದರು. ಅದಕ್ಕೂ ಮೊದಲು ಮಧು ಬಂಗಾರಪ್ಪ ಸೊರಬ ವಿಧಾನಸಭಾ ಚುನಾವಣೆ ನಿಂತಾಗಲೂ ಅವರ ಪರವಾಗಿ ಗೀತಾ ಶಿವರಾಜ್ ಕುಮಾರ್ ಪ್ರಚಾರ ನಡೆಸಿದ್ದರು. ಆ ಚುನಾವಣೆಯಲ್ಲಿ ಮಧು ಬಂಗಾರಪ್ಪ ಗೆಲುವು ಕಂಡಿದ್ದರು.
ಒಟ್ಟಿನಲ್ಲಿ ಸಹೋದರ ಮಧು ಬಂಗಾರಪ್ಪ ಪರವಾಗಿ ಚುನಾವಣಾ ರಾಜಕೀಯದಲ್ಲಿ ಒಂಥರ ಸಕ್ರಿಯವಾಗಿಯೇ ಪಾಲ್ಗೊಳ್ಳುತ್ತಾ ಬಂದಿರುವ ಗೀತಾ ಶಿವರಾಜ್ ಕುಮಾರ್ ಈಗ ಕಾಂಗ್ರೆಸ್ ಸೇರುತ್ತಾರಾ ಎನ್ನುವುದು ಸಹಜವಾದ ಕುತೂಹಲ. ಈಗಾಗಲೇ ಮಧು ಬಂಗಾರಪ್ಪ ಮಾಧ್ಯಮದವರ ಜತೆಗೆ ಮಾತನಾಡುತ್ತಾ, ಅಕ್ಕ ಕಾಂಗ್ರೆಸ್ ಗೆ ಸೇರಿದ್ದಾರೆ ಅಂತ ತಿಳಿದುಕೊಳ್ಳಿ ಅಂತಲೂ ಹೇಳಿದ್ದಾರೆ. ಇದು ಒಂದ್ರೀತಿ ಖಚಿತವಾದ ಮಾತೇ. ಮೊದಲಿನಿಂದಲೂ ಸಹೋದರ ಮಧು ಬಂಗಾರಪ್ಪನವರ ರಾಜಕೀಯದ ಭವಿಷ್ಯಕ್ಕಾಗಿ ಶ್ರಮಿಸುತ್ತಲೇ ಬಂದಿರುವ ಗೀತಾ ಶಿವರಾಜ್ ಕುಮಾರ್ ಈಗಲೂ ಅವರ ನಿರ್ಧಾರವನ್ನು ತಳ್ಳಿ ಹಾಕುವುದಕ್ಕೆ ಸಾಧ್ಯವೇ ಇಲ್ಲ. ಮಧು ಬಂಗಾರಪ್ಪ ಅವರ ಹಾಗೆಯೇ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರುವುದನ್ನು ತಳ್ಳಿ ಹಾಕುವಂತಿಲ್ಲ.