ಇಷ್ಟರಲ್ಲೇ ಸಿಗಲಿದೆ ಮೋಕ್ಷ! ಮಾರ್ಚ್ 27ಕ್ಕೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಟ್ರೇಲರ್ ರಿಲೀಸ್

ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ. ಬರಲು ಸಜ್ಜಾಗಿವೆ ಈಗಲೂ ಒಂದಷ್ಟು ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳು ಸೆಟ್ಟೇರುತ್ತಲೇ ಇವೆ. ಆದರೆ, ಎಲ್ಲಾ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ಕಥಾಹಂದರ ಒಳಗೊಳ್ಳುವ ಮೂಲಕ ಹೊಸತನ ಸೃಷ್ಟಿಸಲು ಬರುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಕೂಡ ಸೇರಿದೆ. ಆ ಚಿತ್ರಕ್ಕೆ “ಮೋಕ್ಷ” ಎಂದು ಹೆಸರಿಡಲಾಗಿದೆ.

ಇದೊಂದು ವಿಭಿನ್ನ ಶೀರ್ಷಿಕೆ ಇರುವ ಸಿನಿಮಾ. ಅಂತೆಯೇ ಚಿತ್ರದ ಕಥೆ ಕೂಡ ಅಷ್ಟೇ ವಿಭಿನ್ನವಾಗಿದೆ. ಅಂದಹಾಗೆ, ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್‌ 27ರಂದು ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.‌ ಈ ಚಿತ್ರಕ್ಕೆ ಸಮರ್ಥ್‌ ನಾಯಕ್‌ ನಿರ್ದೇಶಕರು. ಚಿತ್ರದ ಕಥೆ, ಚಿತ್ರಕಥೆ ಜವಾಬ್ದಾರಿಯೂ ಇವರದೇ. ಇದು ಇವರಿಗೆ ಮೊದಲ ನಿರ್ದೇಶನದ ಸಿನಿಮಾ ಆಗಿದ್ದರೂ, ನಿರ್ದೇಶನದ ಅನುಭವ ಇವರಿಗಿದೆ. ಈಗಾಗಲೇ ಸಾಕಷ್ಟು ಜಾಹೀರಾತು ನಿರ್ಮಿಸಿ ಅನುಭವವಿರುವ ಸಮರ್ಥ್ ನಾಯಕ್, ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

ಇದೊಂದು ಗೊಂದಲಗೊಳಿಸುವ, ರೋಚಕತೆ ಎನಿಸುವ, ಭಯಾನಕ, ನಿಗೂಢ ಕಥೆ ಇರುವಂತಹ ಸಸ್ಪೆನ್ಸ್‌ ಇದರಲ್ಲಿದೆ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಸಮರ್ಥ್‌ ನಾಯಕ್.‌ ಚಿತ್ರದ ಎಲ್ಲಾ ಪಾತ್ರಗಳಲ್ಲೂ ವಿಶೇಷತೆ ಇದೆ. ವಿಶೇಷವಾಗಿ ಮಾಸ್ಕ್ ಮ್ಯಾನ್ ಎಂಬ ಪಾತ್ರ ಚಿತ್ರದ ಮುಖ್ಯ ಆಕರ್ಷಣೆ ಎಂಬುದು ನಿರ್ದೇಶಕರ ಮಾತು.

ಜಯಂತ್ ಕಾಯ್ಕಿಣಿ, ಕುಮಾರ್ ದತ್ ಅವರು ಬರೆದಿರುವ ಎರಡು ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ನೀಡಿದ್ದಾರೆ. ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದರೆ, ವರುಣ್ ಕುಮಾರ್ ಅವರ ಸಂಕಲನ ಚಿತ್ರಕ್ಕಿದೆ. ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಮುಂತಾದ ವರು ಚಿತ್ರದಲ್ಲಿದ್ದಾರೆ.

Related Posts

error: Content is protected !!