ಯುವ ನಿರ್ದೇಶಕ ಡಿ. ಸತ್ಯ ಪ್ರಕಾಶ್ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ನಿರ್ದೇಶನದ ಜತೆಗೆಯೇ ಈಗ ಚಿತ್ರ ನಿರ್ಮಾಣಕ್ಕೂ ಕೈ ಹಾಕುತ್ತಿದ್ದಾರೆ. ಚಿತ್ರ ನಿರ್ಮಾಣದ ಅವರ ಸಾಹಸಕ್ಕೀಗ ನಿರ್ಮಾಪಕ ಮಂಜುನಾಥ್ ದಾಸೇಗೌಡ ಸಾಥ್ ನೀಡಿದ್ದಾರೆ. ʼಸತ್ಯ ಮತ್ತು ಮಯೂರ ಪಿಕ್ಚರ್ಸ್ʼ ಬ್ಯಾನರ್ ನಲ್ಲಿ ಇಷ್ಟರಲ್ಲಿಯೇ ಹೊಸ ಸಿನಿಮಾ ಶುರುವಾಗಲಿದೆ ಅಂತ ಅವರೇ ರಿವೀಲ್ ಮಾಡಿದ್ದಾರೆ. ವಿವಿಧ ವಸ್ತು ವಿಷಯಗಳನ್ನು ಒಳಗೊಂಡಿರುವ ಚಲನಚಿತ್ರ ಹಾಗೂ ಓಟಿಟಿಗೆ ಬೇಕಾದ ಕಥೆಗಳನ್ನು ಪ್ರೇಕ್ಷಕರ ಮುಂದಿಡುವ ಉದ್ದೇಶ ಹೊಂದಲಾಗಿದೆ ಅಂತ ಸತ್ಯ ಪ್ರಕಾಶ್ ಹಾಗೂ ನಿರ್ಮಾಪಕ ದಾಸೇಗೌಡ ಅನೌನ್ಸ್ ಮಾಡಿದ್ದಾರೆ.
” ರಾಮಾ ರಾಮಾ ರೇʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪರಿಚಯವಾದ ಡಿ.ಸತ್ಯ ಪ್ರಕಾಶ್, ಆನಂತರ ” ಒಂದಲ್ಲ ಎರಡಲ್ಲಾ ʼ ಚಿತ್ರ ನಿರ್ದೇಶಿಸಿದ್ದರು. ಆದಾದ ನಂತರ ಪಿಆರ್ ಕೆ ಬ್ಯಾನರ್ ನಲ್ಲಿ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆಂಬ ಸುದ್ದಿ ಬಹಿರಂಗ ಗೊಂಡಿತ್ತು. ಅದೀಗ ಏನಾಯ್ತೋ ಗೊತ್ತಿಲ್ಲ, ಈಗ ತಾವೇ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅವರಿಗೆ ನಿರ್ಮಾಪಕ ದಾಸೇ ಗೌಡ ಬೆಂಬಲಕ್ಕೆ ನಿಂತಿದ್ದಾರೆ.
ದಾಸೇ ಗೌಡ ಈಗಾಗಲೇ ತಮ್ಮದೇ ‘ಮಯೂರ ಮೋಶನ್ ಪಿಕ್ಚರ್ಸ್ ಮೂಲಕ ‘ಉದ್ಘರ್ಷ’ (ಸಹನಿರ್ಮಾಣ) ಮತ್ತು ‘ವೀಕೆಂಡ್’ ಎಂಬ ಸಿನಿಮಾ ನಿರ್ಮಾಣ ಮಾಡಿದ ಅನುಭವ ಇದೆ. ಈಗ ನಿರ್ದೇಶಕ ಸತ್ಯ ಜತೆಗೆ ಸೇರಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇದನ್ನು ಸತ್ಯ ಪ್ರಕಾಶ್ ನಿರ್ದೇಶನ ಮಾಡಲಿದ್ದಾರೆ. ” ರಾಮಾ ರಾಮಾ ರೇʼ ಚಿತ್ರದ ತಾರಾಗಣ ಮತ್ತು ತಾಂತ್ರಿಕ ತಂಡ ಈ ಚಿತ್ರದಲ್ಲೂ ಮುಂದುವರೆಯಲಿದೆ. ಕಥೆ, ಚಿತ್ರಕಥೆ ಮುಗಿಸಿ ಶೂಟಿಂಗಿಗೆ ಸಿದ್ದವಾಗಿರುವ ಈ ಸಿನಿಮಾದ ಇನ್ನಷ್ಟು ವಿವರಗಳು ಸದ್ಯದಲ್ಲೆ ಹೊರಬೀಳಲಿವೆಯಂತೆ.