Categories
ಸಿನಿ ಸುದ್ದಿ

ಕೋಟಿಗೊಂದೇ ಕ್ಯಾಲೆಂಡರ್‌! ಕನ್ನಡ ವರ್ಣಮಾಲೆಯಲ್ಲಿ ಅರಳಿದ ಡಾ.ವಿಷ್ಣುವರ್ಧನ್

ಅಭಿಮಾನಿಗಳಿಗಾಗಿ ಅಭಿಮಾನದ ಕ್ಯಾಲೆಂಡರ್‌ ಲೋಕಾರ್ಪಣೆ

 

ಡಾ.ವಿಷ್ಣುವರ್ಧನ್‌ ಅವರ ಕುರಿತ ಅನೇಕ ಪುಸ್ತಕಗಳು ಹೊರಬಂದಿವೆ. ಅಷ್ಟೇ ಯಾಕೆ, ಸರ್ಕಾರ ಅವರ ಭಾವಚಿತ್ರವಿರುದ ಅಂಚೆ ಚೀಟಿಯನ್ನೂ ಹೊರತಂದಿದೆ. ಅವರ ಅಭಿಮಾನಿಗಳಂತೂ ವಿವಿಧ ರೀತಿಯಲ್ಲಿ ವಿಷ್ಣುವರ್ಧನ್‌ ಅವರನ್ನು ಆರಾಧಿಸುತ್ತಲೇ ಬಂದಿದ್ದಾರೆ. ಈಗ ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರು ಡಾ.ವಿಷ್ಣುವರ್ಧನ್‌ ಅವರ ವಿಭಿನ್ನವಾದ ಕ್ಯಾಲೆಂಡರ್‌ವೊಂದನ್ನು ಹೊರತಂದಿದ್ದಾರೆ. ಆ ಕ್ಯಾಲೆಂಡರ್‌ ತುಂಬಾನೇ ವಿಶೇಷವಾಗಿದೆ ಎಂಬುದೇ ಈ ಹೊತ್ತಿನ ಸುದ್ದಿ.
ಅಷ್ಟಕ್ಕೂ ಆ ಕ್ಯಾಲೆಂಡರ್‌ನ ವಿಶೇಷತೆ ಏನು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಸಾಮಾನ್ಯವಾಗಿ ವರ್ಣಮಾಲೆ ಕಲಿಯದ ಕನ್ನಡಿಗರಿಲ್ಲ. ಬಾಲ್ಯದಿಂದಲೂ ಅ-ಅರಸ, ಆ-ಆಕಾಶ ಹೀಗೆ ಒಂದೊಂದು ಅಕ್ಷರದ ಮೂಲಕ ಕನ್ನಡವನ್ನು ಪ್ರೀತಿಯಿಂದ ಕಲಿತಿರುವುದುಂಟು. ಅದನ್ನು ಸದಾ ಕಂಠಪಾಠ ಮಾಡುತ್ತಲೇ ಇಂದಿಗೂ ಕನ್ನಡ ಮೇಲಿನ ಪ್ರೀತಿ ಇಟ್ಟುಕೊಂಡಿದ್ದಾರೆ. ಈಗ ಡಾ.ವಿಷ್ಣು ಅಭಿಮಾನಿಗಳಿಗಾಗಿ ಅದೇ ವರ್ಣಮಾಲೆಯನ್ನು ಬಳಸಕೊಂಡೇ ಸ್ವಲ್ಪ ವಿಭಿನ್ನವಾಗಿ ವಿನೂತನ ರೀತಿಯಲ್ಲಿ ಕ್ಯಾಲೆಂಡರ್‌ ಮಾಡಲಾಗಿದೆ.

ಅ-ಅಸಾಧ್ಯ ಅಳಿಯ, ಆ-ಆಪ್ತಮಿತ್ರ, ಇ-ಇಂದಿನ ರಾಮಾಯಣ, ಈ-ಈ ಜೀವ ನಿನಗಾಗಿ, ಊ-ಊರಿಗೆ ಉಪಕಾರಿ, ಎ-ಎಲ್ಲರಂತಲ್ಲ ನನ್ನ ಗಂಡ, ಏ-ಏಕದಂತ… ಹೀಗೆ ವರ್ಣಮಾಲೆಯ ಮೊದಲ ಅಕ್ಷರದಲ್ಲಿ ಮೂಡಿಬಂದಿರುವ ಸಿನಿಮಾಗಳನ್ನೂ ಹೆಸರಿಸಿ, ರಿಚ್‌ ಆಗಿರುವ ಆಕರ್ಷಣೆ ಎನಿಸುವ ಕ್ಯಾಲೆಂಡರ್‌ ಮಾಡಲಾಗಿದೆ.

 


ಅ-ಅಸಾಧ್ಯ ಅಳಿಯ, ಆ-ಆಪ್ತಮಿತ್ರ, ಇ-ಇಂದಿನ ರಾಮಾಯಣ, ಈ-ಈ ಜೀವ ನಿನಗಾಗಿ, ಊ_ಊರಿಗೆ ಉಪಕಾರಿ, ಎ-ಎಲ್ಲರಂತಲ್ಲ ನನ್ನ ಗಂಡ, ಏ-ಏಕದಂತ… ಹೀಗೆ ವರ್ಣಮಾಲೆಯ ಮೊದಲ ಅಕ್ಷರದಲ್ಲಿ ಮೂಡಿಬಂದಿರುವ ಸಿನಿಮಾಗಳನ್ನೂ ಹೆಸರಿಸಿ, ರಿಚ್‌ ಆಗಿರುವ ಆಕರ್ಷಣೆ ಎನಿಸುವ ಕ್ಯಾಲೆಂಡರ್‌ ಮಾಡಲಾಗಿದೆ.  ಅ ಅಕ್ಷರದಿಂದ ಳ ಅಕ್ಷರದವರೆಗೆ ಇರುವಂತಹ ಎಲ್ಲಾ ಡಾ.ವಿಷ್ಣುವರ್ಧನ್ ಅವರ ಚಿತ್ರಗಳ ಹೆಸರುಗಳನ್ನು ಕನ್ನಡ ವರ್ಣಮಾಲೆಯೊಂದಿಗೆ ಜೋಡಿಸಿ ಮುದ್ರಿಸಿರುವ ವಿಶಿಷ್ಠ ಪ್ರಯತ್ನ ಇದಾಗಿದೆ. ಕೇವಲ ವರ್ಣಮಾಲೆ ಮಾತ್ರವಲ್ಲದೆ ಕನ್ನಡಿಗರ ಹೆಗ್ಗುರುತಾದ ಹಂಪೆಯ ಕಲ್ಲಿನ ರಥವನ್ನು ಈ ಕ್ಯಾಲೆಂಡರ್ ವಿನ್ಯಾಸಕ್ಕೆ ಬಳಸಲಾಗಿದೆ.

ವೀರಕಪುತ್ರ ಶ್ರೀನಿವಾಸ್‌, ವಿಷ್ಣು ಸೇನಾ ಸಮಿತಿ ಅಧ್ಯಕ್ಷ

ಪ್ರತಿ ತಿಂಗಳ ಪುಟದಲ್ಲೂ ಡಾ.ವಿಷ್ಣುವರ್ಧನ್ ಅವರ ಅಪರೂಪದ ಭಾವಚಿತ್ರಗಳಿರುವುದು ಈ ಕ್ಯಾಲೆಂಡರ್‌ನ ವಿಶೇಷತೆ. ಪ್ರತಿ ತಿಂಗಳಿಗೂ ವಿಶೇಷ ಬಣ್ಣಗಳ ಸಂಯೋಜನೆ ಕೂಡ ಆಕರ್ಷಕವಾಗಿದೆ. ಕ್ಯಾಲೆಂಡರ್‌ನಲ್ಲಿ ರಜಾದಿನಗಳು, ಅಮಾವಾಸೆ, ಹುಣ್ಣಿಮೆ, ಹಬ್ಬಗಳು, ಗಣ್ಯರ ಜನ್ಮದಿನ ಒಳಗೊಂಡಿರುವ ಈ ಕ್ಯಾಲೆಂಡರ್ ವೃತಿಪರ ಕ್ಯಾಲೆಂಡರ್‌ಗಳಂತೆಯೇ ಮೂಡಿಬಂದಿದೆ.
ಈ ಕೋಟಿಗೊಬ್ಬ ಕ್ಯಾಲೆಂಡರ್ ಸರಣಿ ಶುರುವಾಗಿ 2021ಕ್ಕೆ ಹತ್ತು ವರ್ಷಗಳಾಗಿವೆ. ದಿ.ಅನಂತಕುಮಾರ್ ಮತ್ತು ಡಾ.ಭಾರತಿ ವಿಷ್ಣುವರ್ಧನ್ ಅವರು ಈ ಕ್ಯಾಲೆಂಡರ್ ಸರಣಿಯ ಮೊದಲನೇ ಸಂಚಿಕೆಯನ್ನು ಬಿಡುಗಡೆಗೊಳಿಸಿದ್ದರು. ಅಂದಿನಿಂದ ಇಂದಿನವರೆಗೆ ಹತ್ತು ವರ್ಷಗಳ ಕಾಲ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳ ಮನೆಮಾತಾಗಿರುವ ಈ 2021ರ ಕೋಟಿಗೊಬ್ಬ ಕ್ಯಾಲೆಂಡರ್ ಈಗಾಗಲೇ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಯಲ್ಲಿ ಲೋಕಾರ್ಪಣೆಗೊಂಡಿದೆ ಎಂದು ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಹೇಳಿದ್ದಾರೆ.

Categories
ಸಿನಿ ಸುದ್ದಿ

ನಿರ್ಮಾಪಕ ಕೆ.ಪಿ. ಶ್ರೀಕಾಂತ್‌, ಹಿಂಬಾಲಕರ ಸಂಖ್ಯೆ 5 ಸಾವಿರ !

ಟ್ವಿಟ್ಟರ್‌ ಖಾತೆಯಲ್ಲಿ ಫುಲ್‌ ಆ್ಯಕ್ಟಿವ್ ಆಗಿರುವ “ಸಲಗʼ ನಿರ್ಮಾಪಕ

ಕನ್ನಡ ಚಿತ್ರರಂಗದ ಮಟ್ಟಿಗೆ ಸೋಷಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್‌ ಆಗಿದ್ದವರು ಯಾರು ಅಂತ ಬಂದಾಗ ಸ್ಟಾರ್‌ಗಳು, ತಂತ್ರಜ್ನರು, ನಿರ್ದೇಶಕರು, ಇಲ್ಲವೆ ಸಂಗೀತ ನಿರ್ದೇಶಕರು ಮುಂಚೂಣಿಯಲ್ಲಿ ಕಾಣುತ್ತಾರೆ. ಅದರಾಚೆ ನಿರ್ಮಾಪಕರು ಇಲ್ಲವೇ ಅಂತ ನೋಡಿದರೆ ಬೆರಳೆಣಿಕೆಯ ಜನ ಇದ್ದಾರೆ. ಆ ಪೈಕಿ ʼಟಗರುʼ ಖ್ಯಾತಿಯ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಕೂಡ ಒಬ್ಬರು. ಫೇಸ್‌ ಬುಕ್‌, ಇನ್ಸಾಸ್ಟಾಗ್ರಾಮ್‌ ಹಾಗೂ ಟ್ಬಿಟರ್‌ ಸೇರಿದಂತೆ ಎಲ್ಲಾ ಪ್ಲಾಟ್‌ ಫಾರ್ಮ್‌ ನಲ್ಲೂ ಅವರು ಫುಲ್‌ ಆಕ್ಟಿವ್.‌ ಸದ್ಯಕ್ಕೆ ಅವರ ಟ್ವಿಟರ್‌ ಅಕೌಂಟ್‌ ಫಾಲೋವರ್ಸ್‌ ಸಂಖ್ಯೆ ಈಗ ೫ ಸಾವಿರ ರಿಚ್‌ ಆಗಿದೆ.

ಕನ್ನಡದ ನಿರ್ಮಾಪಕರ ಪೈಕಿ ಟ್ವಿಟರ್‌ ನಲ್ಲಿ ಇಷ್ಟು ಸಕ್ರಿಯವಾಗಿದ್ದು, ೫ ಸಾವಿರ ಫಾಲೋವರ್ಸ್‌ ಹೊಂದಿರುವ ನಿರ್ಮಾಪಕ ಶ್ರೀಕಾಂತ್‌ ಬಹುಶ: ಮೊದಲಿಗರು ಹೌದು. ಟ್ವಿಟರ್‌ ಫಾಲೋವರ್ಸ್‌ ಸಂಖ್ಯೆ ೫ ಸಾವಿರ ತಲುಪಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ನಿರ್ಮಾಪಕ ಶ್ರೀಕಾಂತ್‌, ಸೋಷಲ್‌ ಮೀಡಿಯಾ ಎನ್ನುವುದು ಈ ಕಾಲದ ಅತೀ ವೇಗದ ಸಂಪರ್ಕ ಮಾಧ್ಯಮ. ಸ್ಟಾರ್‌ ಗಳಂತೂ ಅದೇ ಕಾರಣಕ್ಕೆ ಇಲ್ಲಿ ಹೆಚ್ಚು ಸಕ್ರಿಯವಾಗಿರುವುದು ಎಲ್ಲರಿಗೂ ಗೊತ್ತು. ನಮಗೂ ಕೂಡ ಇದು ಅಗತ್ಯವೇ. ನಮ್ಮ ಸಿನಿಮಾ ಸಂಬಂಧಿತ ಎಲ್ಲಾ ಮಾಹಿತಿಗಳನ್ನು, ಮುಂದಿನ ಯೋಜನೆಗಳನ್ನು ಹಂಚಿಕೊಳ್ಳುವುದಕ್ಕೂ ಇದು ಸೂಕ್ತ ವೇದಿಕೆ ಎನಿಸಿದೆ. ಈಗ ನಾನು ೫ ಸಾವಿರ ಫಾಲೋವರ್ಸ್‌ ಹೊಂದಿರುವುದು ಖುಷಿ ಕೊಟ್ಟಿದೆ. ಅವರಿಗೆಲ್ಲ ಧನ್ಯವಾದʼ ಅಂತ ಶ್ರೀಕಾಂತ್‌ ಟ್ವಿಟ್‌ ಮಾಡಿದ್ದಾರೆ. ಸದ್ಯ ಶ್ರೀಕಾಂತ್‌ ಅವರ ನಿರ್ಮಾಣದಲ್ಲಿ ʼಸಲಗʼ ಚಿತ್ರೀಕರಣ, ಪೋಸ್ಟ್‌ ಪ್ರೊಡಕ್ಷನ್‌ ವರ್ಕ್‌ ಮುಗಿಸಿ, ರಿಲೀಸ್‌ ಗೆ ರೆಡಿಯಾಗಿದೆ.

‘ಟಗರುʼ ಸೇರಿದಂತೆ ಈಗಾಗಲೇ ಹಲವು ಯಶಸ್ವಿ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟ ಖ್ಯಾತಿ ಶ್ರೀಕಾಂತ್‌ ಅವರಿಗಿದೆ. ಅದೇ ಯಶಸ್ಸಿನ ಖುಷಿ ಮತ್ತು ಜವಾಬ್ದಾರಿ ಮೂಲಕ ಸಲಗ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತರಲು ಹೊರಟಿದ್ದಾರೆ. ನಟ ದುನಿಯಾ ವಿಜಯ್‌ ಇದೇ ಮೊದಲು ಆಕ್ಷನ್‌ ಕಟ್‌ ಹೇಳಿದ ಸಿನಿಮಾ ಇದು. ಅವರೇ ಇದರ ನಾಯಕರು ಹೌದು. ಅದನ್ನೀಗ ಜನರ ಬಳಿಗೆ ತೆಗೆದುಕೊಂಡು ಹೋಗಲು ಸೋಷಲ್‌ ಮೀಡಿಯಾವೂ ಒಂದು ಸಂಪರ್ಕ ಮಾಧ್ಯಮ ಎನ್ನುವ ಅಭಿಪ್ರಾಯ ಶ್ರೀಕಾಂತ್‌ ಅವರದ್ದು.

Categories
ಸಿನಿ ಸುದ್ದಿ

ಕೊರೊನಾ ವರ್ಷಕ್ಕೆ ಸ್ಯಾಂಡಲ್‌ವುಡ್‌ ಗುಡ್‌ ಬೈ – ಈ ವರ್ಷ ರಿಲೀಸ್‌ ಆದ ಸಿನಿಮಾಗಳೆಷ್ಟು ಗೊತ್ತಾ?

ರಿಲೀಸ್‌ ಆಗಿದ್ದು 76 ಪ್ಲಸ್-‌ ಒಟಿಟಿಯಲ್ಲೂ 3 ಚಿತ್ರ ಬಿಡುಗಡೆ

ಅಂತೂ ಇಂತೂ  2020 ಮುಗಿಯೋ ಹಂತ ತಲುಪಿದೆ. ಈ ವರ್ಷ ಎಲ್ಲಾ ರಂಗಕ್ಕೂ ಬಿಸಿ ತಟ್ಟಿದೆ. ಅದರಲ್ಲೂ ಸಿನಿಮಾರಂಗದ ವಿಷಯಕ್ಕೆ ಬಂದರೆ, ಈ ವರ್ಷದ ಮನರಂಜನೆ ಪೂರ್ಣ ಪ್ರಮಾಣದಲ್ಲಿ ಕುಸಿದಿದ್ದು ನಿಜ. ಈ ವರ್ಷದ ಜನವರಿಯಿಂದ ಮಾರ್ಚ್‌ ಎರಡನೇ ವಾರದವರೆಗೆ ಮಾತ್ರ ಚಿತ್ರರಂಗ ವೇಗ ಕಂಡುಕೊಂಡಿತ್ತು. ಆಮೇಲೆ ಕೊರೊನಾ ವಕ್ಕರಿಸಿದ ಬಳಿಕ ಮನರಂಜನೆ ಅನ್ನೋದು ಮರೀಚಿಕೆಯಾಗಿದ್ದು ಸುಳ್ಳಲ್ಲ. ಹಾಗೆ ನೋಡಿದರೆ ಈ ವರ್ಷದ ಎಂಟು ತಿಂಗಳ ಕಾಲ ಮನರಂಜನೆಗೆ ಬ್ರೇಕ್‌ ಬಿದ್ದಿದ್ದರೂ, ಕನ್ನಡ ಚಿತ್ರರಂಗದಲ್ಲಿ ಸುಮಾರು 76 ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಕಂಡಿವೆ ಎಂಬುದು ಅಚ್ಚರಿ.

ಹೌದು, ಪ್ರತಿ ವರ್ಷ ಬಿಡುಗಡೆಯಲ್ಲಿ ಸುಮಾರು 120ರ ಗಡಿ ದಾಟುತ್ತಿದ್ದ ಸಿನಿಮಾಗಳು, ಈ ವರ್ಷ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದಂತೂ ಹೌದು. ಅಕ್ಟೋಬರ್‌ 15ರಿಂದ ಚಿತ್ರಮಂದಿರಗಳಿಗೆ ಅವಕಾಶ ದೊರೆತ ನಂತರ ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದವು. ಆದರೆ, ಪ್ರತಿ ವರ್ಷದ ದಾಖಲೆ ಈ ವರ್ಷ ಆಗಿಲ್ಲ ಅನ್ನುವುದು ಅಷ್ಟೇ ಸತ್ಯ. ಅದೆಷ್ಟೋ ವರ್ಷಗಳ ಬಳಿಕ ಅತೀ ಕಡಿಮೆ ಸಂಖ್ಯೆಯಲ್ಲಿ ಬಿಡುಗಡೆ ಕಂಡ ವರ್ಷ ಇದು ಎಂಬುದನ್ನು ಗಮನಿಸಲೇಬೇಕು. ಒಂದು ಲೆಕ್ಕದ ಪ್ರಕಾರ ಈ ವರ್ಷ ಕನ್ನಡ, ತುಳು, ಕೊಂಕಣಿ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಯ ಸಿನಿಮಾಗಳು ಸೇರಿ ಸುಮಾರು ೭೬ ಚಿತ್ರಗಳು ಬಿಡುಗಡೆ ಕಂಡಿವೆ.

ಈ 2020 ವರ್ಷವನ್ನು ಸ್ಯಾಂಡಲ್‌ವುಡ್‌ ಬರಮಾಡಿಕೊಂಡಿದ್ದು, ಮಯೂರ್‌ ಪಟೇಲ್‌ ಅಭಿನಯದ “ರಾಜೀವ ಐಎಎಸ್‌” ಚಿತ್ರ. ಹಾಗೆಯೇ ಅಂತ್ಯಗೊಳಿಸಿದ್ದು, ಇಂದ್ರಜಿತ್‌ ಲಂಕೇಶ್‌ ಅವರ “ಶಕೀಲಾʼ ಸಿನಿಮಾ. ೨೦೨೦ರ ಜನವರಿಯಲ್ಲಿ ಮೂರು ಕನ್ನಡ ಸಿನಿಮಾಗಳು ಪ್ರೇಕ್ಷಕರ ಎದುರು ಬಂದಿದ್ದವು. “ರಾಜೀವ ಐಎಎಸ್”, ಹೊಸಬರ “ವೇಷಧಾರಿ”, “ಗುಡಮನ ಅವಾಂತರ” ಚಿತ್ರಗಳು ಬಿಡುಗಡೆಯಾಗಿದ್ದವು.  ತದನಂತರದಲ್ಲಿ ಬಿಡುಗಡೆಯ ಪರ್ವ ಶುರುವಾಯಿತು.

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ “ಇಂಡಿಯಾ ವರ್ಸಸ್‌ ಇಂಗ್ಲೆಂಡ್”, ಚಿರಂಜೀವಿ ಸರ್ಜಾ ಅಭಿನಯದ “ಖಾಕಿ”, “ಕಾಣದಂತೆ ಮಾಯವಾದನು”, ವಿಜಯರಾಘವೇಂದ್ರ ಅಭಿನಯದ “ಮಾಲ್ಗುಡಿ ಡೇಸ್”, ಮದರಂಗಿ ಕೃಷ್ಣ ಅವರ “ಲವ್ ಮಾಕ್ಟಲ್”, ಪ್ರಜ್ವಲ್‌ ದೇವರಾಜ್‌ ಅವರ “ಜಂಟಲ್‌ ಮನ್‌”, “ದಿಯಾ”, “ಮಾಯಾ ಬಜಾರ್”, “ಪಾಪ್‌ಕಾರ್ನ್ ಮಂಕಿ ಟೈಗರ್”, “ಶಿವಾಜಿ ಸುರತ್ಕಲ್”, “ಫ್ರೆಂಚ್ ಬಿರಿಯಾನಿ”, “ಆಕ್ಟ್ 1978”, “ಅರಿಷಡ್ವರ್ಗ” ಸೇರಿದಂತೆ ಒಂದಷ್ಟು ಸಿನಿಮಾಗಳು ಬಂದವು. ಈ ಪೈಕಿ ಕೊರೊನಾ ಸಮಸ್ಯೆಯಿಂದಾಗಿ ಒಟಿಟಿಯಲ್ಲಿ ಕನ್ನಡದ ಮೂರು ಸಿನಿಮಾಗಳು ಬಿಡುಗಡೆಯಾದದ್ದು ವಿಶೇಷ. ಪುನೀತ್‌ ರಾಜಕುಮಾರ್‌ ಬ್ಯಾನರ್‌ನಲ್ಲಿ ತಯಾರಾದ “ಲಾ”. “ಫ್ರೆಂಚ್ ಬಿರಿಯಾನಿ” ಹಾಗು “ಭೀಮಸೇನ ನಳ ಮಹಾರಾಜ” ಚಿತ್ರಗಳು ಒಟಿಟಿಯಲ್ಲಿ ರಿಲೀಸ್‌ ಆಗಿದ್ದವು.

 

Categories
ಸಿನಿ ಸುದ್ದಿ

ಫ್ಯಾಮಿಲಿ ಫೋಟೋಶೂಟ್ ನಲ್ಲಿ ಶ್ರೀ‌ಮುರಳಿ – ವಿದ್ಯಾ ದಂಪತಿಯ ಕ್ಯೂಟ್ ಲುಕ್

ನಟ ಶ್ರೀ ಮುರಳಿ ಸದ್ಯಕ್ಕೆ ಕನ್ನಡದ ಬಹುಬೇಡಿಕೆಯ ನಟ. ಹಾಗೆಯೇ ಸಖತ್‌ ಬ್ಯುಸಿ ಸ್ಟಾರ್‌ ಕೂಡ. ಅವರಿಗೀಗ ಸಿಗುತ್ತಿರುವ ಆಫರ್‌ ನೋಡಿದ್ರೆ, ಮುಂದಿನ ದಿನಗಳಲ್ಲಿ ಶ್ರೀ ಮುರಳಿ, ಸೌತ್‌ ಇಂಡಿಯಾದ ಬಹು ಬೇಡಿಕೆಯ ನಟ ಆಗುವುದರಲ್ಲೂ ಅನುಮಾನ ಇಲ್ಲ. ಹೊಸ ವರ್ಷಕ್ಕೆ ʼಮದಗಜʼ ಚಿತ್ರದ ತೆಲುಗು ವರ್ಷನ್‌ ಟೀಸರ್‌ ಕೂಡ ಹೊರಬರಲಿದೆ. ಅಲ್ಲಿಂದ ಶುರುವಾಗಲಿದೆ ಶ್ರೀ ಮುರಳಿ ಅವರ ಸೌತ್‌ ಇಂಡಿಯಾದ ಸೆನ್ಸೆಷೇನಲ್ ಎಂಟ್ರಿ. ಅದಿರಲಿ, ಇದಿಷ್ಟು ಸಿನಿಮಾದ ಬ್ಯುಸಿ ಶೆಡ್ಯೂಲ್‌ ನಡುವೆಯೂ ಶ್ರೀ ಮುರಳಿ ಫ್ಯಾಮಿಲಿ ಜತೆಗೊಂದು ಚೆಂದದ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.ಸದ್ಯಕ್ಕೆ ಅದು ಅವರ ಖುಷಿಗಾಗಿ. ಜಸ್ಟ್ ಪ್ರೊಪೈಲ್ ಗೆ. ಆದರೆ ಇಬ್ಬರು ಮಕ್ಕಳ ಜತೆಗೆ ಶ್ರೀಮುರಳಿ ಹಾಗೂ ವಿದ್ಯಾಶ್ರೀ ದಂಪತಿ‌ ಲವ್ ಸ್ಟೋರಿ ಸಿನಿಮಾದ ಲವ್ಲಿ ಸೀನ್ ತರಹ ಕ್ಯಾಮೆರಾಕ್ಕೆ ಪೋಸು ನೀಡಿರುವುದು ವಿಶೇಷವಾಗಿದೆ.


ಮೂರು ದಿನಗಳ ಹಿಂದಷ್ಟೇ ಈ ಪೋಟೋಶೂಟ್ ನಡೆದಿದೆ. ಸದ್ಯಕ್ಕೆ ಅದೇ ಪೋಟೋಶೂಟ್ ನ ಒಂದು ಲುಕ್ ಈಗ ರಿವೀಲ್ ಆಗಿದೆ. ಶುಕ್ರವಾರ ಕ್ರಿಸ್‌ಮಸ್‌ ಹಬ್ಬ ಇತ್ತು. ಈ ಹಬ್ಬಕ್ಕೆ ಶುಭಾಶಯ ಕೋರುವುದಕ್ಕೆ ಶ್ರೀ‌ಮುರಳಿ ಅವರು ತಮ್ಮ ಫ್ಯಾಮಿಲಿ ಜತೆಗೆ ಹೊದ ಫೋಟೋಶೂಟ್ ಒಂದು ಲುಕ್ ಸೋಷಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವುದರ ಜತೆಗೆ ಅದನ್ನೇ ಕ್ರಿಸ್ಮಸ್‌ ವಿಶ್ ಗೆ ವಿಶೇಷವಾಗಿ ಡಿಸೈನ್ ಮಾಡಿದ್ದಾರೆ. ಅದರ ಕ್ರಿಯೇಟಿವಿಟಿ ಚೆನ್ನಾಗಿದೆ‌.

Categories
ಸಿನಿ ಸುದ್ದಿ

ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ

ನಿಹಾರಿಕಾ ಮದುವೆ ಅಕ್ಷಯ್‌ ಜತೆಗೆ ಫಿಕ್ಸ್‌ , ಡಿ.28 ಕ್ಕೆ ಮ್ಯಾರೇಜ್

ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ ಗರಿಗೆದರಿದೆ. ಪುತ್ರಿ ನಿಹಾರಿಕ ಅವರ ಮದುವೆ ಅಕ್ಷಯ್ ಅವರೊಂದಿಗೆ ಡಿಸೆಂಬರ್ 28 ರಂದು ನಡೆಯಲಿದೆ. ‌ನಿಹಾರಿಕ ಹಾಗೂ ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈಗ ನವಜೀವನಕ್ಕೆ ಅಡಿಯಿಡುತ್ತಿದ್ದಾರೆ.ಇವರ ವಿವಾಹ ಮಹೋತ್ಸವ ಎರಡು ಕುಟಂಬಗಳ ಸದಸ್ಯರ ಸಮ್ಮುಖದಲ್ಲಿ ಕೋವಿಡ್ 19 ನಿಯಮಾನುಸಾರ ನಡೆಯಲಿದೆ.

ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಆಯೋಜಿಸಲಾಗಿದ್ದು, ಅಂದು ಚಿತ್ರರಂಗ‌ ಸೇರಿದಂತೆ ಎಲ್ಲಾ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಅದೇ ರೀತಿ,ಕನ್ನಡದ ತಮ್ಮ ಅಭಿಮಾನಿಗಳು ಹಾಗೂ ರಾಜ್ಯದ ಜನತೆಯ ಹಾರೈಕೆ ಬೇಕು ಅಂತಲೂ ರಮೇಶ್‌ ಅರವಿಂದ್‌ ಮನವಿ ಮಾಡಿದ್ದಾರೆ.

Categories
ಸಿನಿ ಸುದ್ದಿ

ಎಂಆರ್‌ ಸಿನಿಮಾ ವಿವಾದ : ಅನುಮತಿ ಪಡೆಯದಿದ್ದರೆ, ಸಿನಿಮಾ ಮಾಡಲು ಬಿಡುವುದಿಲ್ಲ

ನಿರ್ದೇಶಕ ರವಿ ಶ್ರೀವತ್ಸಗೆ ನಿರ್ಮಾಪಕ ಪದ್ಮನಾಭ್‌ ಎಚ್ಚರಿಕೆ 

ರವಿಶ್ರೀವತ್ಸ ನಿರ್ದೇಶನದ “ಎಂಆರ್‌ʼ ಸಿನಿಮಾಕ್ಕೆ ವಿಘ್ನ ಎದುರಾಗುವುದು ಗ್ಯಾರಂಟಿ ಆಗಿದೆ. ನಿರ್ಮಾಪಕ ಪದ್ಮನಾಭ್‌ ಅವರ ಹೇಳಿಕೆ ನಂತರವೂ ನಿರ್ದೇಶಕ ರವಿ ಶ್ರೀವತ್ಸ, ಸಿನಿಮಾ ಮಾಡಿಯೇ ತೀರುತ್ತೇನೆಂದು ಪ್ರತಿಕ್ರಿಯೆ ನೀಡಿದ್ದರೂ, ಮುಂದೆ ಅವರು ಸಿನಿಮಾ ಮಾಡುವುದು ಅಷ್ಟು ಸುಲಭ ಇಲ್ಲ. ಯಾಕಂದ್ರೆ, ಮುತ್ತಪ್ಪ ರೈ ಸ್ಥಾಪಿಸಿದ ʼಜಯ ಕರ್ನಾಟಕʼ ಸಂಘಟನೆ ಈಗ ರವಿ ಶ್ರೀವತ್ಸ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ. ಮತ್ತೊಂದೆಡೆ ಮುತ್ತಪ್ಪ ರೈ ಪುತ್ರರು ಕೂಡ, ತಮ್ಮ ಅನುಮತಿ ಇಲ್ಲದೆ ಮುತ್ತಪ್ಪ ರೈ ಕುರಿತು ಯಾರು ಸಿನಿಮಾ ಮಾಡುವಂತಿಲ್ಲ ಅಂತಲೂ ಹೇಳಿದ್ದಾರಂತೆ.
ಶುಕ್ರವಾರ ಇವೆರೆಡು ಸಂಗತಿಗಳನ್ನು ಸುದ್ದಿಗೋಷ್ಟಿಯಲ್ಲಿ ಬಹಿರಂಗಪಡಿಸಿದ ಮುತ್ತಪ್ಪ ರೈ ಶಿಷ್ಯ ಹಾಗೂ ನಿರ್ಮಾಪಕ ಪದ್ಮನಾಭ್‌ ಮತ್ತು ವಕೀಲ ನಾರಾಯಣ ಸ್ವಾಮಿ, ಅನುಮತಿ ಇಲ್ಲದೆ ಚಿತ್ರೀಕರಣ ಶುರು ಮಾಡಿರುವ ರವಿ ಶ್ರೀವತ್ಸ ಅವರ ʼಎಂಆರ್‌ʼ ಸಿನಿಮಾ ರಿಲೀಸ್‌ ಆಗುವುದಕ್ಕೆ ತಾವು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಮುಂದೆ ಆಗುವ ನಷ್ಟಕ್ಕೂ ತಾವು ಕಾರಣರಲ್ಲ. ಸಿನಿಮಾಕ್ಕೆ ಬಂಡವಾಳ ಹಾಕುತ್ತಿರುವ ನಿರ್ಮಾಪಕ ಶೋಭ ರಾಜಣ್ಣ ಈಗಲೇ ಅರ್ಥ ಮಾಡಿಕೊಂಡು ಸಿನಿಮಾ ನಿಲ್ಲಿಸಿದರೆ ಸೂಕ್ತ ಅಂತಲೂ ಎಚ್ಚರಿಕೆ ನೀಡಿದರು.

ನಿರ್ದೇಶಕ ರವಿ ಶ್ರೀವತ್ಸ ಹೇಳಿದ ಹಾಗೆಯೇ ʼಎಂಆರ್‌ʼ ಎನ್ನುವುದು ಮತ್ತಪ್ಪ ರೈ ಅವರ ಜೀವನ ಚರಿತ್ರೆ ಕುರಿತ ಸಿನಿಮಾ. ಅಲ್ಲಿ ಅವರು ರೈ ಅವರ ಹಳೆಯ ದಿನಗಳ ಕುರಿತು ಸಿನಿಮಾ ಮಾಡಲು ಹೊರಟಿದ್ದಾರೆನ್ನುವ ಮಾಹಿತಿ ಇದೆ. ಅಲ್ಲಿದೆ ಇದು ಮುತ್ತಪ್ಪ ರೈ ಅವರ ಬಯೋಪಿಕ್.‌ ಯಾವುದೇ ಭಾಷೆಯ ಚಿತ್ರೋದ್ಯಮದಲ್ಲಿ ಒಬ್ಬ ನಿರ್ದೇಶಕ ಇನ್ನೊಬ್ಬರ ಜೀವನ ಚರಿತ್ರೆ ಆಧರಿಸಿ ಸಿನಿಮಾ ಮಾಡಲು ಹೊರಟಾಗ ಸಂಬಂಧಪಟ್ಟ ವ್ಯಕ್ತಿ ಅಥವಾ ಅವರಿಗೆ ಸಂಬಂಧಪಟ್ಟವರ ಅನುಮತಿ ಪಡೆಯಲೇಬೇಕು. ಹಾಗೆ ಅನೇಕ ಸಿನಿಮಾಗಳು ಕೂಡ ಬಂದಿವೆ. ಆದರೆ ರವಿ ಶ್ರೀವತ್ಸ ಅದನ್ನು ಮಾಡಿಲ್ಲ. ಇದು ತಪ್ಪು ಅಂತಲೇ ನಾವು ಹೇಳುತ್ತಿದ್ದೇವೆ ಅಂತ ನಿರ್ಮಾಪಕ ಪದ್ಮನಾಭ್‌ ಸ್ಪಷ್ಟಪಡಿಸಿದರು.
ರೈ ಅವರ ಜೀವನ ಬರೀ ಭೂಗತ ಜಗತ್ತು ಮಾತ್ರವಲ್ಲ. ಅವರು ಬೇಕಾದಷ್ಟು ಸಮಾಜ ಸೇವೆ ಮಾಡಿದ್ದಾರೆ. ಜಯ ಕರ್ನಾಟಕ ಸಂಘಟನೆ ಕಟ್ಟಿ ನಾಡಿನ ನೆಲ, ಜಲ ಉಳಿವಿಗೆ ಹೋರಾಡಿದ್ದಾರೆ. ಅದಕ್ಕಿಂತ ಮುಖ್ಯವಾಗಿ ತಮ್ಮ ಜೀವನ ಕುರಿತ ಸಿನಿಮಾವನ್ನು ತಮ್ಮದೇ ಬ್ಯಾನರ್‌ ನಲ್ಲಿಯೇ ಮಾಡುತ್ತೇನೆ, ಬೇರೆಯವರಿಗೆ ಅವಕಾಶ ಕೊಡುವುದಿಲ್ಲ ಅಂತಲೂ ಮಾಧ್ಯಮದವರ ಎದುರೇ ಹೇಳಿಕೆ ನೀಡಿದ್ದಾರೆ. ಇಷ್ಟಾಗಿಯೂ, ರವಿ ಶ್ರೀವತ್ಸ ಇದನ್ನು ಯಾಕೆ ಪರಿಗಣಿಸಿಲ್ಲ? ಇಷ್ಟಕ್ಕೂ ಮುತ್ತಪ್ಪ ರೈ ಕುರಿತು ಸಿನಿಮಾ ಮಾಡಲು ಅವರಿಗೆ ಅವಕಾಶ ಕೊಟಿದ್ದು ಯಾರು? ಇದನ್ನು ನಾವು ಒಪ್ಪುವುದಿಲ್ಲ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಕೆಟ್ಟದಾಗಿ ಚಿತ್ರಿಸಲು ಬಿಡುವುದಿಲ್ಲ ಎಂದು ಮುತ್ತಪ್ಪ ರೈ ಕುಟುಂಬದ ಪರ ವಕೀಲ ನಾರಾಯಣ ಸ್ವಾಮಿ ಹೇಳಿದರು.

Categories
ಸಿನಿ ಸುದ್ದಿ

ವಿಹಾನ ಗಾಯನ – ಎಂಜಿನಿಯರ್‌ ಹುಡುಗನ ಗಾನ ಬಜಾನ

ಮಂಡ್ಯ ಹುಡುಗನ ಮನಸ್ಸೆಲ್ಲಾ ಹಾಡು-ಪಾಡು

ಈ ಸಿನಿಮಾ ಸೆಳೆತವೇ ಹಾಗೆ. ಒಮ್ಮೆ ಇತ್ತ ಒಲವು ಮೂಡಿದರೆ ಮುಗೀತು. ಇಲ್ಲೇ ಗಟ್ಟಿನೆಲೆ ಕಾಣಬೇಕೆಂಬ ಹಂಬಲ ಸಹಜ. ಚಿತ್ರರಂಗಕ್ಕೆ ಈಗಾಗಲೇ ಎಲ್ಲಾ ಕ್ಷೇತ್ರದಿಂದಲೂ ಎಂಟ್ರಿಯಾಗಿದ್ದಾರೆ. ಡಾಕ್ಟರ್‌, ಪೊಲೀಸ್‌, ಎಂಜಿನಿಯರ್‌ ಹೀಗೆ ಹಲವು ಕ್ಷೇತ್ರಗಳಿಂದ ಬಂದವರಿದ್ದಾರೆ. ಆ ಪೈಕಿ ಕೆಲವರು ಸಾಧಿಸಿದ್ದಾರೆ. ಇನ್ನೂ ಕೆಲವರು ಸಾಧನೆಯ ಹಾದಿಯಲ್ಲಿದ್ದಾರೆ. ಅದೇ ಸಾಧಿಸಬೇಕೆಂಬ ಛಲದಲ್ಲಿ ಇಲ್ಲೊಬ್ಬ ಯುವ ಗಾಯಕ ಚಿತ್ರರಂಗವನ್ನು ಸ್ಪರ್ಶಿಸಿದ್ದಾನೆ. ಹೆಸರು ವಿಹಾನ್‌ ಆರ್ಯ. ಹಾಗಂತ ಈ ವಿಹಾನ್‌ ಆರ್ಯ ಹೀರೋ ಆಗಬೇಕು, ನಿರ್ದೇಶಕ ಆಗಬೇಕು ಅಂತ ಬಂದಿಲ್ಲ. ತಾನೊಬ್ಬ ಒಳ್ಳೆಯ ಗಾಯಕನಾಗಿ ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದಾರೆ.

 ನಾನು ನೀನು ಇನ್ನು ಬೇರೆ ಏನು, ನಿನ ಎದೆಯ ಗೂಡಲ್ಲಿ ನನ ಜೀವಾ ಇದೆ.. ನೂರು ನೂರು ನನ ಆಸೆ ನೂರು, ನನ ಜೀವನ ಮುಂದಕೆ ಹೋಗದು ನೀನಿರದೆ,
ಮನಸ್ಸೆಲ್ಲಾ ನೀನೇ… ಮನಸ್ಸೆಲ್ಲಾ ನೀನೆ…” ಎಂಬ ಹಾಡಿಗೆ ಸಿಕ್ಕಾಪಟ್ಟೆ ಮೆಚ್ಚುಗೆಯೂ ಸಿಕ್ಕಿದೆ. ಲಕ್ಷಗಟ್ಟಲೆ ವೀಕ್ಷಣೆಯೂ ಪಡೆದಿದೆ

 

 

ಅಂದಹಾಗೆ, ವಿಹಾನ್‌ ಆರ್ಯ ಮೂಲತಃ ಎಂಜಿನಿಯರ್‌ ಅನ್ನೋದು ವಿಶೇಷ. ಅರೇ, ಎಂಜಿನಿಯರ್‌ ಗಾಯಕರಾಗಿದ್ದಾರಾ? ಈ ಪ್ರಶ್ನೆ ಎದುರಾಗೋದು ಸಹಜವೇ. ಆದರೆ, ವಿಹಾನ್‌ ಆರ್ಯ ಈಗಾಗಲೇ ಸಾಕಷ್ಟು ಹಾಡುಗಳನ್ನು ಹಾಡುವ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ ಅನ್ನೋದ್ದನ್ನೂ ಗಮನಿಸಬೇಕು. ತಮ್ಮ ಈ ಗಾಯನದ ಪಯಣ ಕುರಿತು ವಿಹಾನ್‌ ಆರ್ಯ, “ಸಿನಿ ಲಹರಿ” ಜೊತೆ ಮಾತನಾಡಿದ್ದಿಷ್ಟು.  “ನಾನು ಮಂಡ್ಯ ಜಿಲ್ಲೆಯ ಮಳವಳ್ಳಿ ಸಮೀಪವಿರುವ ಹಾಡ್ಲಿ ಎಂಬ ಊರಿನವನು. ನಾನೊಬ್ಬ ಮೆಕಾನಿಕಲ್‌ ಎಂಜಿನಿಯರ್.‌ ಬಿಇ ಓದು ಮುಗಿಸಿದ ಕೂಡಲೇ ನನಗೆ ಕೆಲಸಕ್ಕೆ ಹೋಗುವ ಆಸಕ್ತಿ ಇರಲಿಲ್ಲ. ಆದರೆ, ಹಾಡಬೇಕೆಂಬ ಆಸಕ್ತಿ ಹೆಚ್ಚಾಗಿತ್ತು. ಗಾಯನದ ಮೇಲೆ ಎಲ್ಲಿಲ್ಲದ ಪ್ರೀತಿ ಇತ್ತು. ಆ ಕಾರಣಕ್ಕೆ ನಾನು ನನ್ನ ಎಜುಕೇಷನ್‌ ಪೂರೈಸಿ, ಹಂಸಲೇಖರ ಬಳಿ ದೇಸಿ ಶಾಲೆಯಲ್ಲಿ ಸಂಗೀತ ಕಲಿತೆ. ಅವರ ಶಿಷ್ಯ ಎನಿಸಿಕೊಂಡೆ. ಈಗ ಶಿವಾನಂದ್‌ ಸಾಲಿಮಠ್‌ ಅವರ ಬಳಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದೇನೆ.

ಕಾಲೇಜು ದಿನಗಳಲ್ಲೇ ನನಗೆ ಹಾಡುವ ಹುಚ್ಚಿತ್ತು. ಆಗ ಅಭ್ಯಾಸ ಮಾಡುತ್ತಿದ್ದೆ. ಹಾಗೆ ಹಾಡುತ್ತಲೇ ವಾಯ್ಸ್‌ ಆಫ್‌ ಬೆಂಗಳೂರು ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗಮನಸೆಳೆದೆ. ಅಲ್ಲಿಂದ ಹಾಡುವ ಅವಕಾಶ ಸಿಕ್ತು. ನಾನು “ವಂದನಾʼ ಚಿತ್ರಕ್ಕೆ ಹಾಡುವ ಮೂಲಕ ಗಾಯಕನಾದೆ. ಇಂಡಸ್ಟ್ರಿಗೆ ಬಂದು ಆರು ವರ್ಷಗಳಾಗಿವೆ. ಈವರೆಗೆ ಸುಮಾರು ೩೫ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದೇನೆ. ಸುಮಾರು ೩೦೦ ಚಿತ್ರಗಳಿಗೆ ಕೋರಸ್‌ ಆಗಿಯೂ ಹಾಡಿದ್ದೇನೆ. ನಾಯಕಿ, ಸರ್ವ ಮಂಗಳ ಮಾಂಗಲ್ಯ, ಮನಸ್ಸೆಲ್ಲಾ ನೀನೇ ಧಾರಾವಾಹಿಗಳಿಗೂ ಹಾಡಿದ್ದೇನೆ. ಸದ್ಯ “ಮನಸ್ಸೆಲ್ಲಾ ನೀನೇ” ಧಾರಾವಾಹಿಯ ಶೀರ್ಷಿಕೆ ಗೀತೆ ” ನಾನು ನೀನು ಇನ್ನು ಬೇರೆ ಏನು, ನಿನ ಎದೆಯ ಗೂಡಲ್ಲಿ ನನ ಜೀವಾ ಇದೆ.. ನೂರು ನೂರು ನನ ಆಸೆ ನೂರು, ನನ ಜೀವನ ಮುಂದಕೆ ಹೋಗದು ನೀನಿರದೆ,
ಮನಸ್ಸೆಲ್ಲಾ ನೀನೇ… ಮನಸ್ಸೆಲ್ಲಾ ನೀನೆ…” ಎಂಬ ಹಾಡಿಗೆ ಸಿಕ್ಕಾಪಟ್ಟೆ ಮೆಚ್ಚುಗೆಯೂ ಸಿಕ್ಕಿದೆ. ಲಕ್ಷಗಟ್ಟಲೆ ವೀಕ್ಷಣೆಯೂ ಪಡೆದಿದೆ” ಎಂಬುದು ಅವರ ಮಾತು.


ಇನ್ನು ಕನ್ನಡ ಚಿತ್ರರಂಗದ ಬಹುತೇಕ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. “ಕೃಷ್ಣ ಟಾಕೀಸ್‌”, “ಪ್ರೇಮಂ ಪೂಜ್ಯಂ”, “ಡಿಯರ್‌ ಸತ್ಯ” ಸಿನಿಮಾಗಳಿಗೆ ಹಾಡಿದ್ದುಂಟು. ನಾನು ಹಾಡಿರುವ ಸುಮಾರು ೨೦ಕ್ಕೂ ಹೆಚ್ಚು ಚಿತ್ರಗಳು ರಿಲೀಸ್‌ ಆಗಬೇಕಿದೆ. ಗಾಯನ ಕ್ಷೇತ್ರದಲ್ಲಿ ಸ್ಪರ್ಧೆ ಇದೆ. ನಾನು ಮೆಲೋಡಿ ಹೆಚ್ಚು ಹಾಡಿದ್ದೇನೆ. ನನ್ನ ವಾಯ್ಸ್‌ಗೆ ಮೆಲೋಡಿ ಹಾಡುಗಳು ಬರುತ್ತಿವೆ. ಮೊದ ಮೊದಲು ಮನೆಯಲ್ಲಿ ಅಷ್ಟೊಂದು ಉತ್ಸಾಹ ಇರಲಿಲ್ಲ. ಈಗ ಗುರುತಿಸಿಕೊಳ್ಳುತ್ತಿರುವುದರಿಂದ ಎಲ್ಲವೂ ಸುಗಮವಾಗುತ್ತಿದೆ. ನನಗೆ‌ ಸಂಗೀತ ನಿರ್ದೇಶಕ ವಿ. ಸಂಭ್ರಮ್‌ ಶ್ರೀಧರ್ ಅವರು ಗುರುವಿದ್ದಂತೆ. ಅವರ ಮಾರ್ಗದರ್ಶನದಲ್ಲೇ ಈಗ ಕೆಲಸ ಮಾಡುತ್ತಿದ್ದೇನೆ. ನನಗೆ ಸಿನಿಮಾದಲ್ಲೇ ಗುರುತಿಸಿಕೊಳ್ಳುವ ಆಸೆ ಇದೆ. ಮುಂದಿನ ದಿನಗಳಲ್ಲಿ ದೊಡ್ಡ ಸ್ಟಾರ್‌ಗಳಿಗೆ ಹಾಡಬೇಕು ಎಂಬುದು ನನ್ನ ಮಹಾದಾಸೆ” ಎನ್ನುತ್ತಾರೆ ವಿಹಾನ್‌ ಆರ್ಯ.

Categories
ಸಿನಿ ಸುದ್ದಿ

ತೆಲುಗಿಗೂ ಕಾಲಿಟ್ಟ ಶ್ರೀಮುರಳಿ – ಮದಗಜನ ಟಾಲಿವುಡ್ ಹೆಜ್ಜೆಗೆ ಭರ್ಜರಿ ಮೆಚ್ಚುಗೆ

ತೆಲುಗು ಟೈಟಲ್ ಪೋಸ್ಟರ್ ಗೆ ಫ್ಯಾನ್ಸ್ ಫಿದಾ

 

ಶ್ರೀಮುರಳಿ ಅಭಿನಯದ “ಮದಗಜ” ಭಾರೀ ಸದ್ದು ಮಾಡಿರೋದು ಗೊತ್ತೇ ಇದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಫಸ್ಟ್ ಲುಕ್ ಟೀಸರ್ ದಾಖಲೆ ಬರೆದಿದೆ.
ಇದೇ ಖುಷಿಯಲ್ಲಿರುವ “ಮದಗಜ” ಚಿತ್ರತಂಡ ಈಗ ಇನ್ನೊಂದು ದೊಡ್ಡ ಹೆಜ್ಜೆ ಇಟ್ಟಿದೆ. ಕನ್ನಡದ ಜೊತೆಗೆ ತೆಲುಗು ಚಿತ್ರರಂಗಕ್ಕೂ “ಮದಗಜ” ಪಾದಾರ್ಪಣೆ ಮಾಡುತ್ತಿದೆ ಎಂಬುದು ಈ ಕ್ಷಣದ ಸುದ್ದಿ.

ಹೌದು, ಕನ್ನಡ “ಮದಗಜ” ಸಿನಿಮಾದ ಫಸ್ಟ್ ಲುಕ್ ಟೀಸರ್ ಮಾಡಿದ ಜೋರು ಸದ್ದಿಗೆ ಪರಭಾ಼ಷಿಗರೂ ತಿರುಗಿ ನೋಡಿದ್ದು ಸುಳ್ಳಲ್ಲ. ಈಗ ತೆಲುಗಿಗೂ “ಮದಗಜ” ಎಂಟ್ರಿಯಾಗಿದೆ ಅನ್ನೋದೇ ಸಂಭ್ರಮದ ಮಾತು.
ಕ್ರಿಸ್ಮಸ್ ಹಬ್ಬಕ್ಕೆ ತೆಲುಗು ಭಾಷೆಗೂ ಕಾಲಿಡುತ್ತಿರುವುದನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ತೆಲುಗಿನಲ್ಲಿ “ರೋರಿಂಗ್ ಮದಗಜ” ಎಂದು ನಾಮಕರಣ ಮಾಡಲಾಗಿದೆ. ಕ್ರಿಸ್ಮಸ್ ಹಬ್ಬಕ್ಕೆ ಗಿಫ್ಟ್ ಎಂಬಂತೆ ತೆಲುಗು ಟೈಟಲ್ ಪೋಸ್ಟರ್ ಹೊರ ತಂದಿರುವ ಚಿತ್ರತಂಡ, ಫ್ಯಾನ್ಸ್ ಗೊಂದು ಸರ್ಪ್ರೈಸ್ ನೀಡಿದೆ.

ಮಹೇಶ್ ಕುಮಾರ್, ನಿರ್ದೇಶಕ

ತೆಲುಗಿನಲ್ಲಿ ತಯಾರಾಗುತ್ತಿರುವ ಚಿತ್ರದ ಟೀಸರ್ ಹೊಸ ವರ್ಷ ಜನವರಿ 1ರಂದು ಬಿಡುಗಡೆಯಾಗಲಿದೆ. ಅಂದು 10.10ಕ್ಕೆ ಆನಂದ್ ಯುಟ್ಯೂಬ್ ಚಾನೆಲ್ ಮೂಲಕ ಟೀಸರ್ ಬಿಡುಗಡೆಯಾಗಲಿದ್ದು, ಶ್ರೀಮುರಳಿ ಅವರೇ ಆ ತೆಲುಗು ಟೀಸರ್ ಗೆ ವಾಯ್ಸ್ ನೀಡಿರುವುದು ಮತ್ತೊಂದು ವಿಶೇಷ.
“ಮದಗಜ” ಚಿತ್ರದ ಇನ್ನೂ ಒಂದು ವಿಶೇಷ ಕಾದಿದ್ದು, ಅದು ಜನವರಿ ಸಂಕ್ರಾಂತಿ ಹಬ್ಬದಂದು ರಿವೀಲ್ ಆಗಲಿದೆ. ಅಲ್ಲಿಗೆ ಇದೇ ಮೊದಲ ಸಲ ಶ್ರೀಮುರಳಿ ಅಭಿನಯದ ಚಿತ್ರವೊಂದು ಬೇರೆ ಭಾಷೆಯಲ್ಲೂ ತಯಾರಾಗಿ ಬಿಡುಗಡೆಯಾಗುತ್ತಿದೆ.

ಉಮಾಪತಿ, ನಿರ್ಮಾಪಕ

ಸದ್ಯಕ್ಕೆ ತೆಲುಗಿನಲ್ಲಿ ಹೊರ ಬಂದಿರುವ ಈ ಟೈಟಲ್ ಪೋಸ್ಟರ್ ಗೆ ಭರಪೂರ ಮೆಚ್ಚುಗೆ ಸಿಕ್ಕಿದೆ.
ಈಗಾಗಲೇ “ಮದಗಜ” ಮೇಲೆ ಸಾಕಷ್ಟು ನಿರೀಕ್ಷೆಯೂ ಹೆಚ್ಚಿದ್ದು, ಜೊತೆಗೆ ಭರವಸೆ ಕೂಡ.
ಚಿತ್ರದ ಮೊದಲ ಟೀಸರ್ ಗೆ ಜನರು ಕೊಟ್ಟ ದೊಡ್ಡ ಯಶಸ್ಸಿನ ಉತ್ಸಾಹದಲ್ಲೇ ಚಿತ್ರತಂಡ ಈ ಮಹತ್ವದ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ.
ಇಷ್ಟೇ ಅಲ್ಲ, “ಮದಗಜ” ಮುಂದಿನ ದಿನಗಳಲ್ಲಿ ಇನ್ನಷ್ಟು ಸರ್ಪ್ರೈಸ್ ಕೊಡಲು ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದೆ.
ಈಗ ಎಚ್. ಎಂ.ಟಿ ಯಲ್ಲಿ ಚಿತ್ರೀಕರಣಕ್ಕೆ ತಂಡ ತಯಾರಿ ನಡೆಸಿದ್ದು, ಡಿಸೆಂಬರ್‌ 28ರಿಂದ ಶೂಟಿಂಗ್ ನಡೆಸಲಿದೆ. ಹಾಗೆ ನೋಡಿದರೆ ಕಳೆದ ಡಿಸೆಂಬರ್ 21ರಿಂದಲೇ ಚಿತ್ರೀಕರಣ ನಡೆಯಬೇಕಿತ್ತು. ಆ ದೃಶ್ಯದ ಚಿತ್ರಣಕ್ಕೆ ಬೇಕಾದ ಲೆನ್ಸ್ ಸಿಗಲಿಲ್ಲ ಎಂಬ ಕಾರಣಕ್ಕೆ ನಿರ್ದೇಶಕರು ಕಾಂಫ್ರಮೈಸ್ ಆಗದೆ ಶೂಟಿಂಗ್ ಮುಂದಕ್ಕೆ ಹಾಕಿದ್ದಾರೆ. ಆ ಲೆನ್ಸ್ ಇಂಡಿಯಾದಲ್ಲಿ ಇರದ ಕಾರಣ, ಶೂಟಿಂಗ್ ಮುಂದೆ ಹೋಗಿತ್ತು. ಡಿಸೆಂಬರ್ 28ರಿಂದ ಯಥಾ ಪ್ರಕಾರ ಶೂಟಿಂಗ್ ನಡೆಯಲಿದೆ ಎಂಬುದು ಚಿತ್ರತಂಡದ ಮಾತು.
ಸದ್ಯ ಶ್ರೀಮುರಳಿ ಈಗ ಫುಲ್ ಬಿಝಿ. “ಮದಗಜ” ಬೆನ್ನಲ್ಲೆ ಅವರು “ಬಘೀರ” ಚಿತ್ರ ಮಾಡುವ ಘೋಷಣೆ ಮಾಡಿದ್ದಾರೆ. ಅದೂ ಕೂಡ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಚಿತ್ರ.
ಡಾ.ಸೂರಿ ಆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
“ಮದಗಜ” ಚಿತ್ರಕ್ಕೆ ಆಶಿಕಾ ನಾಯಕಿ. ಮಹೇಶ್ ಕುಮಾರ್ ನಿರ್ದೇಶನವಿದೆ. ಉಮಾಪತಿ ನಿರ್ಮಾಣವಿದೆ.

Categories
ಸಿನಿ ಸುದ್ದಿ

ಯಶ್ ನಟನೆಯ ರಾಕಿ ಚಿತ್ರಕ್ಕೆ 12ರ ಸಂಭ್ರಮ- ಪೂರ್ಣ ಪ್ರಮಾಣದ ಹೀರೋ ಆಗಿದ್ದ ಸಿನಿಮಾ

ನಾಗೇಂದ್ರ ಅರಸ್ ನಿರ್ದೇಶನದ ಎರಡನೇ‌ ಚಿತ್ರ

ಕನ್ನಡ ಚಿತ್ರರಂಗದಲ್ಲೀಗ ಸ್ಟಾರ್ ನಟರ ಸಾಲಲ್ಲಿ ಎದ್ದು ಕಾಣುವ ನಟ ಯಶ್, ಪೂರ್ಣ ಪ್ರಮಾಣದ ಹೀರೋ ಆಗಿ ನಟಿಸಿದ ಮೊದಲ ಚಿತ್ರ “ರಾಕಿ” ಚಿತ್ರಕ್ಕೆ ಈಗ ಹನ್ನೆರೆಡು ವರ್ಷದ ಸಂಭ್ರಮ.


ಯಶ್ ಅಭಿನಯದ “ರಾಕಿ” ಚಿತ್ರ ಅವರನ್ನು ಕನ್ನಡಕ್ಕೆ ಒಬ್ಬ ಪಕ್ಕಾ ನಟ ಮತ್ತು ಡ್ಯಾನ್ಸರ್ ಅನ್ನುವುದನ್ನು ಸಾಬೀತುಪಡಿಸಿತು. ಡಿಸೆಂಬರ್ 25, 2008ರಲ್ಲಿ “ರಾಕಿ” ಬಿಡುಗಡೆಯಾಗಿತ್ತು. ಇಂದಿಗೆ “ರಾಕಿ” ರಿಲೀಸ್ ಆಗಿ 12 ವರ್ಷಗಳು ಸಂದಿವೆ. ಯಶ್ ಈ ಒಂದು ದಶಕದಲ್ಲಿ ಇಡೀ ಭಾರತೀಯ ಚಿತ್ರರಂಗವೇ ಗುರುತಿಸುವಂತಹ ಚಿತ್ರ ಕೊಡುವ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಗಟ್ಟಿ ನೆಲೆ ಕಂಡಿದ್ದಾರೆ.


ಯಶ್ ಅವರನ್ನು ಪೂರ್ಣ ಪ್ರಮಾಣದ ನಾಯಕರನ್ನಾಗಿಸಿದ ಹೆಮ್ಮೆ ನಿರ್ದೇಶಕ ನಾಗೇಂದ್ರ ಅರಸ್ ಅವರದು. “ರಾಕಿ” ನಾಗೇಂದ್ರ ಅರಸ್ ನಿರ್ದೇಶನದ ಎರಡನೇ ಸಿನಿಮಾ.

ನಾಗೇಂದ್ರ ಅರಸ್

ಕೆಲವು ಸಿನಿಮಾಗಳು ಹೀಗೆ ಸುದ್ದಿಯಾಗುತ್ತವೆ ಅನ್ನುವುದಕ್ಕೆ ಇಂತಹ ಚಿತ್ರಗಳ ಮೂಲಕ ಬೆಳ್ಳಿತೆರೆಯಲ್ಲಿ ಹೆಸರು ಮಾಡಿದ ಹೀರೋಗಳು. ಯಶ್ ಯಶಸ್ವಿ ಚಿತ್ರಗಳ ಮೂಲಕ ನೆಲೆ ನಿಂತಿದ್ದಾರೆ. ಆ ಕಾರಣಕ್ಕೆ ಅವರ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸಿದ “ರಾಕಿ” ಹನ್ನೆರಡು ವರ್ಷಗಳಾದರೂ ಸುದ್ದಿಯಾಗುತ್ತಿದೆ.

Categories
ಸಿನಿ ಸುದ್ದಿ

ಜಟಕಾ ‌ಕುದುರೆ ಹತ್ತಿ ಪ್ಯಾಟೆಗೋಗುಮ ಅಂತ ಗೀತೆ ಬರೆದ ಶ್ರೀರಂಗ ಈಗ ಹೇಗಿದ್ದಾರೆ ಗೋತ್ತಾ?

ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ವಿಜೇತ ನಟ. ರಂಗಭೂಮಿ ,ಸಿನಿಮಾ ನಟನೆಯ ಜತೆಗೆ ಅವರು ಸಾಮಾಜಿಕ ಕಾಳಜಿಗೆ ಮಿಡಿಯುವ ಒರ್ವ ಹೃದಯವಂತ ಕಲಾವಿದ. ಅವರು ಇತ್ತೀಚೆಗೆ ಕೆ.ಆರ್.ಪುರಂ ನಲ್ಲಿನ‌ ಕನ್ನಡ ರಾಜ್ಯೋತ್ಸವಕ್ಕೆ ಅತಿಥಿಯಾಗಿ ಹೋದಾಗ ಅಲ್ಲಿ ಕಂಡ ಶ್ರೀರಂಗ ಅವರ ಬಗ್ಗೆ ಬರೆದ ಬರಹ ಇಲ್ಲಿದೆ. ಅವರ ಅನುಮತಿ ಪಡೆದುಕೊಂಡೆ‌ ‘ ಸಿನಿ‌ಲಹರಿ ‘ ಈ ಬರಹ ಪ್ರಕಟಿಸಿದೆ.

ಶ್ರೀರಂಗ ಅವರನ್ನು ನಟ ವಿಜಯ್ ಕಂಡ ಕ್ಷಣ…

‘ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ’, ‘ರಂಭೆ ನೀ ವಯ್ಯಾರದ ಗೊಂಬೆ’, ‘ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ’, ‘ಸುಮ್ ಸುಮ್ನೆ ಓಳು ಬಿಡೋ ಸುಂದರಿ’….. ಹಾಡುಗಳನ್ನ ಹಾಗು ‘ಜನುಮದ ಜೋಡಿ’, ‘ರಕ್ತ ಕಣ್ಣೀರು’, ‘ಆಕಾಶ್’, ‘ವೀರ ಕನ್ನಡಿಗ’, ‘ಅಪ್ಪಾಜಿ’, ‘ಇನ್ಸ್ಪೆಕ್ಟರ್ ವಿಕ್ರಮ್’, ‘ಗಂಡುಗಲಿ ಕುಮಾರ ರಾಮ’, ‘ಆಸೆಗೊಬ್ಬ ಮೀಸೆಗೊಬ್ಬ’ ಮುಂತಾದ ಚಿತ್ರದ ಹಾಡುಗಳನ್ನು ಪ್ರತಿಯೊಬ್ಬ ಕನ್ನಡಿಗರೂ ಒಂದಲ್ಲ ಒಂದು ಸಾರಿ ಗುನುಗೇ ಗುನುಗಿರುತ್ತೇವೆ.
ಇವರು ಬರೆದು ನಿರ್ದೇಶಿಸಿದ ಹಲವಾರು ನಾಟಕಗಳನ್ನೂ ನೋಡಿರುತ್ತೇವೆ.

ಜೊತೆಗೆ ‘ಅಂಜದ ಗಂಡು’, ‘ಕಿಂದರಿ ಜೋಗಿ’, ‘ಮುತ್ತೈದೆ ಭಾಗ್ಯ’, ‘ಅದೃಷ್ಟ ರೇಖೆ’, ‘ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ’, ‘ಶುಕ್ರ ದೆಶೆ’, ‘ಭೂಲೋಕದಲ್ಲಿ ಯಮರಾಜ’ ಹೀಗೆ ಹಲವಾರು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದನ್ನೂ ಗಮನಿಸಿರುತ್ತೇವೆ ಆದರೆ ಅವರು ಯಾರಿರಬಹುದು ಅನ್ನುವುದು ಕೆಲವೊಮ್ಮೆ ನಮ್ಮ ಗಮನಕ್ಕೆ ಬಂದಿರುವುದೇ ಇಲ್ಲ ಅದಕ್ಕೆ ಕಾರಣವೂ ಇರುವುದಿಲ್ಲ.

ಅವರು ಮತ್ಯಾರು ಅಲ್ಲ ಕನ್ನಡದ ಹಿರಿಯ ಸಾಹಿತಿಗಳು, ಸಂಭಾಷಣೆಗಾರರು, ನಿರ್ದೇಶಕರೂ ಆದ “ಶ್ರೀ ರಂಗ”ರವರು. ಇವರನ್ನು ‘ಭಂಗಿ ರಂಗ’ ಎಂದು ಸಹಾ ಕರೆಯುತ್ತಿದ್ದರೆಂದು ಅವರ ಬಾಯಿಂದಲೇ ಕೇಳಿ ತಿಳಿದೆವು.

ಈಗ್ಗೆ ಒಂದು ವಾರದ ಹಿಂದೆ ಕೆ.ಅರ್.ಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ನಾನು ಕೂಡ ಅತಿಥಿಯಾಗಿ ಹೋಗಿದ್ದಾಗ ಆಕಸ್ಮಿಕವಾಗಿ ಇವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ವೇದಿಕೆಯ ಮುಂಭಾಗದಲ್ಲಿ ಮಗುವಿನಂತೆ ಕುಳಿತು ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಮುಗ್ಧ ನಗುವೊಂದು ನನ್ನನ್ನು ಸೆಳೆಯುತ್ತಿತ್ತು. ವೇದಿಕೆಯ ಮೇಲೆ ಕುಳಿತೇ ಅವರನ್ನು ಮೊಬೈಲಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದೆ. ಪಕ್ಕದಲ್ಲಿ ಕುಳಿತಿದ್ದವರು ಅದನ್ನು ಗಮನಿಸಿ ಕಿವಿಯಲ್ಲಿ ನಿಧಾನವಾಗಿ ‘ಇವರಿಗೆ ಏನಾದರೂ ಸಹಾಯ ಮಾಡಬಹುದಾ? ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ’ ಎಂದರು. ಅವರಾಡಿದ ಮಾತು ಯಾಕೋ ಮನಸಿನೊಳಗೆ ಕೊರೆಯಲು ಶುರುಮಾಡಿತು. ಸರಿ ಕಾರ್ಯಕ್ರಮ ಮುಗಿದಮೇಲೆ ಖುದ್ದಾಗಿ ಇವರನ್ನು ಭೇಟಿಯಾಗಿ ಮಾತನಾಡಿಸಲೇಬೇಕು ಎಂದು ಮನಸ್ಸಿನಲ್ಲೇ ನಿರ್ಧಾರ ಮಾಡಿ ಅವರನ್ನೇ ದಿಟ್ಟಿಸುತ್ತಾ ಕುಳಿತಿದ್ದೆ. ಪಾಪ ಇಳಿ ವಯಸ್ಸು ಬಹಳ ಹೊತ್ತು ಕುಳಿತುಕೊಳ್ಳಲು ಕಷ್ಟವಾಗಿಯೋ ಏನೋ ಶ್ರೀರಂಗರು ಅಲ್ಲಿಂದ ಮನೆಗೆ ಹೊರಟುಬಿಟ್ಟರು. ಕಾರ್ಯಕ್ರಮ ಮುಗಿಯಿತು ಅಲ್ಲಿದ್ದವರೊಬ್ಬರನ್ನು ಕೇಳಿದೆ ‘ ಶ್ರೀರಂಗರನ್ನು ಖುದ್ದು ಭೇಟಿಯಾಗಬಹುದೇ?’ ಅದಕ್ಕವರು ಹಿಂದೂ ಮುಂದೂ ನೋಡದೆ ಅವರದೇ ಕಾರಿನಲ್ಲಿ ಕೂರಿಸಿಕೊಂಡು ಮನೆಯ ಹತ್ತಿರ ಕರೆದುಕೊಂಡು ಹೋದರು.

ಕಾರು ಮನೆಯ ಗೇಟಿನ ಹತ್ತಿರ ಬಂದು ನಿಲ್ಲುತ್ತಿದ್ದಂತೆ ಪುಟ್ಟ ಮಗುವಿನ ಹಾಗೆ ಓಡೋಡಿ ಬಂದ ಶ್ರೀಗಳು ‘ಯಾರು?’ ಎಂದು ಕೇಳಬೇಕೆನ್ನುವ ಸಮಯಕ್ಕೆ ನನ್ನ ಜೊತೆಯಲ್ಲಿದ್ದವರನ್ನು ನೋಡಿ ಗುರುತು ಹಿಡಿದು ‘ಹೋ!!!!ನೀವಾ ಬನ್ನಿ ಬನ್ನಿ’ ಎಂದು ಗೇಟಿನ ಬಾಗಿಲು ತೆಗೆದು ಒಳ ಕರೆದರು.
ನಾನು ಗೇಟಿನ ಒಳಗೆ ನಡೆದವನೇ ಶೂ ಬಿಚ್ಚತೊಡಗಿದೆ ನನ್ನ ಜೊತೆಯಲ್ಲಿದ್ದವರು ತಡೆದು ‘ಮನೆ ಇದಲ್ಲ ಮೊದಲನೇ ಮಹಡಿ ಅಂದ್ರು’.
ವೇದಿಕೆಯ ಮೇಲೆ ನನ್ನ ಪಕ್ಕ ಕುಳಿತಿದ್ದವರು ಹೇಳಿದ ಮಾತು ಕಣ್ಣ ಮುಂದೆ ಹಾದು ಹೋಯಿತು. ಶ್ರೀ ರಂಗರ ಮುಖ ನೋಡಿ ಏನೋ ಸಂಕಟವಾಗೋಕೆ ಶುರುವಾಯ್ತು 86 ವರ್ಷದ ಹಿರಿಯ ಜೀವ ಹೀಗೆ ಸಣ್ಣ ಪುಟ್ಟ ಕೆಲಸಕ್ಕೂ ಹತ್ತಾರು ಬಾರಿ ಮೆಟ್ಟಿಲು ಹತ್ತಿ ಇಳಿಯುವುದೆಂದರೆ ತಮಾಷೆಯ ಮಾತಲ್ಲ ಅಂಥದ್ದರಲ್ಲಿ ಅಷ್ಟು ಚುರುಕಾಗಿ ಪಟ ಪಟ ಅಂತ ಮೆಟ್ಟಿಲು ಹತ್ತಿ ನಮ್ಮನ್ನು ಕರೆದೊಯ್ದು ಬಾಗಿಲು ತೆರೆದು ಮನೆಯೊಳಗೆ ಹೆಜ್ಜೆ ಇಡುತ್ತಲೇ ‘ತುಂಬಾ ಪುಟ್ಟ ಮನೆ ಏನು ಅಂದುಕೊಳ್ಳಬೇಡಿ’ ಅಂತ ಸೌಜನ್ಯದಿಂದ ನುಡಿದರು. ಮರು ಮಾತಾಡಿದರೆ ಅತಿಯಾಗಬಹುದೇನೋ ಅಂದುಕೊಂಡು ಸುಮ್ಮನೆ ಅವರ ಪಕ್ಕದಲ್ಲಿ ಕುಳಿತು ಎಲ್ಲವನ್ನೂ ಗಮನಿಸುತ್ತಿದ್ದೆ. ಪುಟ್ಟ ಗೂಡಿನ ಬಾಡಿಗೆ ಮನೆ ಅಂತ ತಿಳಿದುಕೊಳ್ಳಲು ಹೆಚ್ಚು ಸಮಯವೂ ಬೇಕಾಗಲಿಲ್ಲ. ಹೀಗೆ ಮಾತು ಸಾಗುತ್ತ ಸಾಹಿತ್ಯ,ಬರವಣಿಗೆ,ಸಿನೆಮಾ ಬಗ್ಗೆ ಅವರ ಮಾತುಗಳಲ್ಲೇ ಕೇಳುತ್ತಾ ಕುಳಿತಿದ್ದೆವು.

‘ಸುಮಾರು ಹದಿನೈದು ಇಪ್ಪತ್ತು ವರ್ಷಗಳಾಯ್ತು ಗಾಂಧಿನಗರದ ಕಡೆ ಮುಖಮಾಡಿ ಈಗ ಎಲ್ಲಾ ಬದಲಾಗಿರಬೇಕು,ನಾನು ಒಂದಷ್ಟು ವರ್ಷಗಳ ಕಾಲ ಚಿತ್ರರಂಗಕ್ಕೆ ದುಡಿದೆ ಈಗ ವಯೋ ಸಹಜ ಸಣ್ಣ ಪುಟ್ಟ ಕಾಯಿಲೆಗಳು ಕೆಲಸ ಮಾಡೋದು ಕಷ್ಟ. ಈಗಲೂ ಬರೆಯಬೇಕೆಂಬ ಆಸೆ ಬೆಟ್ಟದಷ್ಟಿದೆ ಆದರೆ ಏನು ಮಾಡೋದು ಕಾಲ ಬದಲಾಗಿದೆ ಈಗಿನವರ ಸಿನಿಮಾ ಅಭಿರುಚಿಯೇ ಬೇರೆ’ ಎಂದು ಹೇಳುತ್ತಾ ತಮ್ಮ ಮತ್ತು ಗಾಂಧಿನಗರದ ನಂಟಿನ ಬಗ್ಗೆ ಮಾತು ಸಾಗುತ್ತಿತ್ತು. ಅದೇ ಸಮಯಕ್ಕೆ ಶ್ರೀರಂಗರ ಧರ್ಮಪತ್ನಿಯವರೂ ಸಹ ನಾವು ಕುಳಿತಿದ್ದ ಜಾಗಕ್ಕೆ ಗೋಡೆಗೆ ಆತುಕೊಂಡಿದ್ದ ಒಬ್ಬರೇ ಓಡಾಡಬಹುದಾದ ಚಿಕ್ಕ ಅಡುಗೆ ಮನೆಯಿಂದ ಹೊರಬಂದು ನಮ್ಮನ್ನು ನೋಡಿ ಸಣ್ಣ ನಗೆಬೀರಿ ಅವರೂ ಮಾತಿಗಿಳಿದು ‘ಇಲ್ಲಿರುವುದು ನಾವಿಬ್ಬರೇ ಸದ್ಯಕ್ಕೆ ನಮ್ಮನ್ನು ನೋಡಿಕೊಳ್ಳುವವರು ಯಾರು ಇಲ್ಲ, ಮಗಳು ಅಲ್ಲಿ ಇಲ್ಲಿ ಆರ್ಕೆಷ್ಟ್ರಾದಲ್ಲಿ ಹಾಡಿ ಜೀವನ ನಡೆಸುತ್ತಿದ್ದಾಳೆ ಅವಳದು ಒಂಥರಾ ಕಷ್ಟ. ಅದರೊಳಗೆ ನಮ್ಮನ್ನು ನೋಡಿಕೊಳ್ಳುವುದಂತೂ ಕಷ್ಟ ಸಾಧ್ಯ ಹಾಗೂ ಹೀಗೂ ಕೊರೊನ ಸಂಕಷ್ಟದಲ್ಲೂ ಬದುಕಿ ಜೀವನ ನಡೆಸುತ್ತಾ ಇದ್ದೀವಿ’. ಅಂದರು.

ಹೀಗೆ ಮಾತು ಮುಂದುವರಿಸಿ ನಮ್ಮ ಜೊತೆಯಲ್ಲಿದ್ದವರಒಬ್ಬರನ್ನು ಕುರಿತು ‘ಇವರು ಇದೆ ಬಡಾವಣೆಯವರು ನಮ್ಮ ಕಷ್ಟಕ್ಕೆ ಮರುಗಿ ಆಗಾಗ ಬಂದು ತಮ್ಮ ಕೈಲಾದ ಸಹಾಯ ಮಾಡುತ್ತಿರುತ್ತಾರೆ. ಇಲ್ಲಿಯವರೆಗೂ ನಮ್ಮನ್ನು ಅವರ ತಂದೆ ತಾಯಿಯಂತೆ ನೋಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅವರೇ ನಮಗೆ ಮಕ್ಕಳು. ನಮಗೂ ತುಂಬಾ ವಯಸ್ಸಾಗಿದೆ ಹೊರಗೆ ಹೋಗಿ ದುಡಿಯುವ ಶಕ್ತಿಯಂತೂ ಇಲ್ಲ ಕೊನೆಯವರೆಗೂ ನಾವು ಇವರುಗಳಿಗೆ ಎಷ್ಟು ಕೃತಘ್ನತೆ ಹೇಳಿದರೂ ಸಾಲದು ‘ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುವಾಗ ದುಃಖ ಒತ್ತರಿಸಿ ಬಂದು ಸೆರಗಿನಿಂದ ನಮಗೆ ಗೊತ್ತಾಗದಂತೆ ಕಣ್ಣೇರು ಒರೆಸಿಕೊಳ್ಳುವ ಪ್ರಯತ್ನ ಮಾಡಿದರು. ನಮ್ಮ ಕಣ್ಣುಗಳೂ ಸಹ ಒದ್ದೆಯಾಗಿದ್ದವು ನಾವೂ ನೋಡಿಯೂ ನೋಡದವರಂತೆ ಭಾರವಾದ ಮನಸ್ಸಿನಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೆವು. ಹೀಗೆ ಮಾತಿನ ನಡುವೆ ಒಂದು ಧೀರ್ಘ ಮೌನ ಆ ನಂತರ ಮಾತು ಬದಲಿಸಲು ನಾನು ಶ್ರೀರಂಗರನ್ನು ‘ಒಂದು ಸೆಲ್ಫಿ ತೆಗೆದುಕೊಳ್ಳಲೇ?’ಎಂದು ಕೇಳಿದೆ. ಅದಕ್ಕವರು ಒಂದೇ ಮಾತಿನಲ್ಲಿ ‘ಬೇಡ’ ಅಂದುಬಿಡಬೇಕೆ. ನನಗೋ ಅವಮಾನವಾದಂತಾಗಿ ಮರುಮಾತಾಡದೆ ‘ಹೊರಡೋಣವೇ?’ ಎಂದು ಎದ್ದು ನಿಂತೆವು.

ಕೊನೆಗೆ ನಮ್ಮನ್ನು ಬೀಳ್ಕೊಡಲು ಬಾಗಿಲ ಬಳಿ ಬಂದ ಹಿರಿಯ ಜೀವಗಳು ನಿಮಗೆ ತಿನ್ನಲು ಕುಡಿಯಲು ಏನು ಮಾಡಿಕೊಡಲಿಲ್ಲವಲ್ಲ’ ಅಂದ್ರು.
ಹೃದಯ ತುಂಬಿ ಬಂತು ಮನೆ ಖಾಲಿಯಿದ್ದರೂ ಮನಸ್ಸು ಎಷ್ಟೊಂದು ತುಂಬಿದೆಯಲ್ಲಾ ಅನ್ನಿಸಿತು. ಈ ವಯಸ್ಸಿನಲ್ಲಿ ಇದೆಂತಹ ಶಿಕ್ಷೆ. ಒಂದು ಕಡೆ ವಯಸ್ಸು ಮಾಗಿ ದುಡಿಯಲಾರದೆ ಮತ್ತೊಬ್ಬರ ಮೇಲೆ ಅವಲಂಬಿತವಾಗಿ ಬದುಕಲಾರದ ಬದುಕು, ಮತ್ತೊಂದು ಕಡೆ ಮಗಳು ಇದ್ದು ಇರುವ ಎರೆಡು ಜೀವಗಳನ್ನು ನೋಡಿಕೊಳ್ಳಲೂ ಆಗದ ಅಸಹಾಯಕ ಸ್ಥಿತಿ. ದೇವರೇ ಮತ್ಯಾರಿಗೂ ಇಂತ ಕಷ್ಟ ಬಾರದಿರಲಿ ಎಂದು ಆ ಕ್ಷಣಕ್ಕೆ ಪ್ರಾರ್ಥಿಸುವುದು ಬಿಟ್ಟು ಬೇರೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ.

ಭಾರವಾದ ಮನಸ್ಸಲ್ಲಿ ಹೊರಬಂದವನೇ ಕುತೂಹಲಕ್ಕೆ ಕೇಳಿದೆ ‘ಯಾಕೆ ಸೆಲ್ಫಿ ಕೇಳಿದರೆ ಒಂದೇ ಮಾತಲ್ಲಿ ಬೇಡ ಅಂದರಲ್ಲ’.
ಅದಕ್ಕವರ ಉತ್ತರ ‘ಶ್ರೀ ರಂಗರು ತುಂಬಾ ಸ್ವಾಭಿಮಾನಿ ಇವತ್ತಿನ ಈ ಕ್ಷಣದವರೆಗೂ ಯಾರಲ್ಲೂ ಕೈಚಾಚಿ ಒಂದು ಸಣ್ಣ ಸಹಾಯವನ್ನೂ ಬೇಡಿದವರಲ್ಲ ನಾವೇ ಅವರಿಗೆ ಒತ್ತಾಯ ಮಾಡಿ ನಾವು ನಿಮ್ಮ ಮಕ್ಕಳಂತೆ ಅಲ್ಲವೇ ಎಂದು ತಿಳಿ ಹೇಳಿ ಸಣ್ಣ ಪುಟ್ಟ ಸಹಾಯ ಮಾಡುತ್ತಿರುತ್ತೇವೆ. ಹೀಗೆ ಯಾರೋ ಹೊರಗಿನಿಂದ ಬಂದು ಸಹಾಯ ಮಾಡುವ ನೆಪದಲ್ಲಿ ಫೋಟೋ ತೆಗೆದುಕೊಂಡು ನಮ್ಮ ಈಗಿನ ಸ್ಥಿತಿಯನ್ನು ಜನಕ್ಕೆ ತೋರಿಸಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದುಬಿಡುತ್ತಾರೋ ಅನ್ನುವ ಭಯ ಅವರಿಗೆ’ ಅಂದರು. ಆ ಕ್ಷಣದಲ್ಲಿ ನನ್ನ ನೆನಪಿಗೆ ಬಂದಿದ್ದು ‘ಕಸ್ತೂರಿ ನಿವಾಸದ’ ಕೊನೆಯ ದೃಶ್ಯ.

ಇಷ್ಟು ಬರೆದು ಶ್ರೀರಂಗ‌ಅವರಿಗೆ ಆತ್ಮೀಯರು ನೆರವಾಗುವಂತೆ ಮನವಿ‌ಮಾಡಿದ್ದಾರೆ. ಹಾಗೆಯೇ ಬ್ಯಾ‌ಂಕ್ ವಿವರ ಕೂಡ ಕೊಟ್ಟಿದ್ದಾರೆ.ಅದರ ವಿವರ ಇಂತಿದೆ.

Name- sree ranga
state bank of india
Chandar layout branch
Ifsc SBIN 0004051

A/c no 64145797446

ಸಪರ್ಕಕ್ಕೆ, ಗಿರೀಶ್ – 98866-40906.

error: Content is protected !!