“ರಾ” ಗಿಣಿ ಪರಾರಿ! ದೂರದ ದುಬೈನಲ್ಲಿ ಅವರಿಗೇನು ಕೆಲಸ?

ಅವರೇಕೆ ಹೀಗೆ ಮಾಡಿದರು?

ಆ ರಾಗಿಣಿ ಬೇರೆ… ಈ “ರಾ” ಗಿಣಿ ಬೇರೆ…

“ರಾ”… ಗಿಣಿ ಈಗ ಪರಾರಿ…!
ಅರೇ, ಇದೇನಪ್ಪಾ, ಡ್ರಗ್ಸ್‌ ಕೇಸ್‌ನಲ್ಲಿ ರಾಗಿಣಿ ಜೈಲುವಾಸ ಅನುಭವಿಸುತ್ತಿದ್ದಾರೆ. ಅವರು ಯಾವಾಗ ಜೈಲಿಂದ ಪರಾರಿಯಾದರು ಎಂಬ ಪ್ರಶ್ನೆ ಮತ್ತು ಅಚ್ಚರಿ ಎರಡೂ ಆಗಬಹುದು. ವಿಷಯವಿಷ್ಟೇ, ಇಲ್ಲಿ ಹೇಳುತ್ತಿರುವ ವಿಷಯ ನಟಿ ರಾಗಿಣಿ ವಿಷಯವಲ್ಲ. “ರಾ” ಎಂಬ ಹೊಸಬರ ಚಿತ್ರದ ನಾಯಕಿಯೊಬ್ಬರ ವಿಷಯ.

ಹೌದು, ನವ ನಿರ್ದೇಶಕ ರಾಜೇಶ್‌ಗೌಡ ಅವರು ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ “ರಾʼ ಚಿತ್ರದ ನಾಯಕಿ ಸನಾನೈಕ್‌ ಎಂಬುವವರು ಚಿತ್ರದ ಪ್ರಚಾರಕ್ಕೆ ಬಾರದೆ, ಎಲ್ಲೂ ಕಾಣಿಸುತ್ತಿಲ್ಲ. ಸರಿಯಾಗಿ ಚಿತ್ರತಂಡಕ್ಕೆ ಸ್ಪಂದಿಸುತ್ತಿಲ್ಲ ಎಂದು ಚಿತ್ರತಂಡ ಆರೋಪಿಸಿದೆ. ಅಷ್ಟೇ ಅಲ್ಲ, ಸ್ವತಃ ನಿರ್ದೇಶಕ ರಾಜೇಶ್‌ಗೌಡ ಅವರೇ, ನಾಯಕಿ ಸನಾನೈಕ್‌ ಫೋನ್‌ಗೂ ಸಿಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸನಾ‌ ನೈಕ್

ವಿಷಯವೇನು…?
ಕನ್ನಡದಲ್ಲಿ “ರಾ” ಹೆಸರಿನ ಸಿನಿಮಾವೊಂದು ರೆಡಿಯಾಗಿರುವುದು ಗೊತ್ತೇ ಇದೆ. ಚಿತ್ರಕ್ಕೆ ಸೆನ್ಸಾರ್‌ ಕೂಡ ಆಗಿದೆ. ಈಗ ಪ್ರೇಕ್ಷಕರ ಎದುರು ಬರಲು ಚಿತ್ರ ರೆಡಿಯಾಗಿದೆ. ವಾಹಿನಿಯಲ್ಲಿ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ್ದ ರಾಜೇಶ್‌ಗೌಡ, ಸುಮಾರು ವರ್ಷಗಳ ಅನುಭವದ ಮೇಲೆ “ರಾ” ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂ ಇವರದೇ. ಈ ಸಿನಿಮಾಗೆ, ಸನಾ ನೈಕ್‌ ನಾಯಕಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿರುವ ರಾಜೇಶ್‌ಗೌಡ, ಈಗ ಪ್ರಚಾರಕ್ಕೆ ನಾಯಕಿಯನ್ನು ಕರೆತರಲು ಹರಸಾಹಸ ಪಡುತ್ತಿದ್ದಾರೆ. ಆದರೆ, ನಾಯಕಿ ಮಾತ್ರ, ಇವರ ಫೋನ್‌ ಕಾಲ್‌ಗೆ ಸರಿಯಾಗಿ ಸ್ಪಂದಿಸುತ್ತಿಲ್ಲವಂತೆ. ಸಿನಿಮಾ ಕೆಲಸಗಳು ಕೊರೊನಾ ಮುನ್ನವೇ ಮುಗಿದಿದ್ದವು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿನಿಮಾ ಚಟುವಟಿಕೆ ಸ್ಥಗಿತಗೊಂಡಿತ್ತು. ಈಗ ಎಲ್ಲವೂ ಮೆಲ್ಲನೆ ಓಪನ್‌ ಆಗಿರುವುದರಿಂದ “ರಾ” ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.

ಇದಕ್ಕೂ ಮುನ್ನ, ರಾಜೇಶ್‌ಗೌಡ ಅವರು, ೨೦೧೯ರಲ್ಲಿ ದುಬೈನಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದರು. ಆಗ ನಾಯಕಿ ಸನಾನೈಕ್‌ ಅವರು ದುಬೈನಲ್ಲೇ ಇದ್ದರೂ, ಅವರ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಿಲ್ಲ. ಉಡುಪಿಯಲ್ಲೂ ಒಂದು ದೊಡ್ಡ ಈವೆಂಟ್‌ನಲ್ಲೂ ಭಾಗವಹಿಸಲಿಲ್ಲ. ಎಂಬ ಬೇಸರದ ಮಾತುಗಳನ್ನು ನಿರ್ದೇಶಕ ರಾಜೇಶ್‌ಗೌಡ ಹೊರಹಾಕುತ್ತಾರೆ. ಸದ್ಯಕ್ಕೆ ದುಬೈನಲ್ಲೇ ಬೀಡುಬಿಟ್ಟಿರುವ ನಾಯಕಿ ಸನಾನೈಕ್‌, ಚಿತ್ರದ ಪ್ರಚಾರ ಸಲುವಾಗಿ ಚಿತ್ರತಂಡ ಫೋನ್‌ ಮಾಡಿದರೂ ಯಾವುದೇ ರೀತಿಯಲ್ಲೂ ಉತ್ತರ ಕೊಡುತ್ತಿಲ್ಲ. ಆದರೆ, ಫೆಬ್ರವರಿಯಲ್ಲಿ ಬರ್ತೀನಿ ಅಂತಿದ್ದಾರೆ ವಿನಃ, ಬೇರೇನೂ ಹೇಳುತ್ತಿಲ್ಲ ಎನ್ನುತ್ತಿದ್ದಾರೆ ಎಂಬುದು ನಿರ್ದೇಶಕರ ಹೇಳಿಕೆ.


ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ನಾಯಕಿ ಸನಾನೈಕ್‌ ನಿರ್ದೇಶಕರಿಗೆ ಕಾಣುತ್ತಿಲ್ಲ, ಮಾತಿಗೂ ಸಿಗುತ್ತಿಲ್ಲ. ಉಡುಪಿಯೊಲ್ಲೊಂದು ಈವೆಂಟ್‌ ಮಾಡಿದ್ದರೂ ಬಂದಿಲ್ಲ. ಹೊಸಬರು ಎಂಬ ಕಾರಣಕ್ಕೆ ಅವರಿಗೆ ನಾವು ಅವಕಾಶ ಕೊಟ್ಟೆವು. ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಈಗ ನೋಡಿದರೆ, ಪ್ರಚಾರಕ್ಕೆ ಬಾರದೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾನು ದುಬೈನಲ್ಲಿದ್ದೇನೆ ಅಂತಾರೆ. ಆದರೆ, ಅಲ್ಲೇನ್‌ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಸಿನಿಮಾದಲ್ಲಿ ಅವಕಾಶ ಸಿಗುವುದೇ ಕಷ್ಟ. ಆದರೆ, ಅವಕಾಶ ಸಿಕ್ಕರೂ ಈ ನಾಯಕಿ ಚಿತ್ರತಂಡಕ್ಕೆ ಹೀಗೆಲ್ಲಾ ಬೇಜಾರು ಮಾಡುತ್ತಿದ್ದಾರೆ. ಒಂದು ಸಿನಮಾ ಮಾಡಿ ಮುಗಿಸುವುದು ಸುಲಭದ ಕೆಲಸವಲ್ಲ. ನಿರ್ಮಾಪಕರು ನಂಬಿ ಹಣ ಹಾಕಿರುತ್ತಾರೆ. ಅವರಿಗೆ ಹಣ ಹಿಂದಿರುಗಬೇಕಾದರೆ, ಸಿನಿಮಾ ರಿಲೀಸ್‌ ಆಗಬೇಕು, ರಿಲೀಸ್‌ ಮಾಡಬೇಕಾದರೆ, ಅದಕ್ಕೂ ಮೊದಲು ಜನರಿಗೆ ಸಿನಿಮಾ ಬಗ್ಗೆ ಗೊತ್ತಾಗಬೇಕು, ಗೊತ್ತಾಗಬೇಕಾದರೆ, ಸರಿಯಾಗಿಯೇ ಸಿನಿಮಾ ಪ್ರಚಾರ ಮಾಡಬೇಕು. ಆದರೆ, ಪ್ರಚಾರ ಮಾಡಲು ಹೊರಟರೆ, ನಾಯಕಿಯೇ ಸಿಗುತ್ತಿಲ್ಲ. ಏನು ಮಾಡಬೇಕು ಎಂಬುದು ನಿರ್ದೇಶಕರ ಅಳಲು.

ನಿರ್ದೇಶಕ ರಾಜೇಶ್‌ಗೌಡ

ಅದೇನೆ ಇರಲಿ, ಒಂದು ಕನ್ನಡ ಸಿನಿಮಾದ ಕನ್ನಡದ ನಾಯಕಿಯಾಗಿರುವ ಸನಾನೈಕ್‌, ತಮ್ಮ ಸಿನಿಮಾದ ಪ್ರಚಾರಕ್ಕೆ ಬಾರದೆ ದೂರದ ದುಬೈನಲ್ಲಿ ಕುಳಿತರೆ, ಇಲ್ಲಿ ಸಿನಮಾಗೆ ಹಣ ಹಾಕಿರುವ ನಿರ್ಮಾಪಕರ ಗತಿ ಏನು? ಹತ್ತಾರು ಕನಸು ಕಟ್ಟಿಕೊಂಡಿರುವ ನಿರ್ದೇಶಕರ ಪಾಡೇನು? ಈಗಲಾದರೂ ನಾಯಕಿ ಸನಾನೈಕ್‌ ಇಂಡಿಯಾಗೆ ಬಂದು, ತಮ್ಮ “ರಾ” ಸಿನಿಮಾದ ಪ್ರಚಾರಕ್ಕೆ ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Related Posts

error: Content is protected !!