ಹುಡುಗಿಯ ಅಪಹರಣದ ಹಿಂದೆ ರೋಚಕತೆ! ಹಾಫ್‌ ಮೊದಲ ಹಂತದ ಚಿತ್ರೀಕರಣ ಪೂರ್ಣ

ಹೊಸ ಕಥಾಹಂದರದ ಮೇಲೆ ಭವ್ಯ ಭರವಸೆ

 

ಕೆಲವು ಸಿನಿಮಾಗಳೇ ಹಾಗೆ. ಒಮ್ಮೆ ಶುರುವಾದರೆ, ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ಚಿತ್ರೀಕರಣಗೊಳ್ಳುತ್ತವೆ. ಆ ಸಾಲಿಗೆ “ಹಾಫ್”‌ ಚಿತ್ರವೂ ಸೇರಿದೆ. ಹೌದು, ಈ ಹಿಂದೆ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಸಿನಿಮಾ ಮೂಲಕ ಸುದ್ದಿಯಾಗಿದ್ದ ನಿರ್ದೇಶಕ ಕಮ್‌ ಹೀರೋ ಲೋಕೇಂದ್ರ ಸೂರ್ಯ ಈಗ “ಹಾಫ್‌” ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ.

ಹೌದು, ಈಗಾಗಲೇ ಅದ್ಧೂರಿ ಫೋಟೋ ಶೂಟ್ ನಂತರ ಶೂಟಿಂಗ್ ನಡೆಸಿದ್ದ “ಹಾಫ್” ತಂಡ, ಈಗ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಈ ಹಂತದ ಚಿತ್ರೀಕರಣದಲ್ಲಿ ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆಯಲ್ಲಿ ಒಂದು ಫೈಟ್ ಕೂಡಾ ಚಿತ್ರೀಕರಣಗೊಂಡಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಹದಿನೈದು ದಿನಗಳ ಚಿತ್ರೀಕರಣದಲ್ಲಿ ಹಲವಾರು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಶೂಟಿಂಗ್‌ ವೇಳೆ ಹೀರೋ ಜೊತೆಗಿದ್ದ ಬೇಗಂ ಎಂಬ ಹುಡುಗಿಯನ್ನು ಅಪಹರಿಸಿದಾಗ, ನಂತರ ನಡೆಯುವ ಚೇಸಿಂಗ್‌ ದೃಶ್ಯವನ್ನು ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಅವರು, ಚಿತ್ರೀಕರಿಸಿದ್ದಾರೆ. ಅಂದಹಾಗೆ, ಈ ದೃಶ್ಯದಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು.


ಆ ಸಾಹಸ ದೃಶ್ಯ ಕುರಿತು ಮಾತನಾಡುವ ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು, “ಇದುವರೆಗೆ ಹೊಸಬರ ನೂರಾರು ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ್ದೇನೆ. ಆದರೆ ಲೋಕೇಂದ್ರ ಅವರ ತಂಡವನ್ನು ನೋಡಿದರೆ ನಿಜಕ್ಕೂ ಇವರೆಲ್ಲಾ ಹೊಸಬರಾ ಎನ್ನುವ ಅನುಮಾನ ಮೂಡುತ್ತದೆ. ಸಾಹಸದ ದೃಶ್ಯಗಳನ್ನು ಚಿತ್ರೀಕರಿಸುವುದು ಕಷ್ಟದ ಕೆಲಸ. ಅನುಭವಿಗಳಿದ್ದರೆ ಮಾತ್ರ ಸರಾಗವಾಗಿ ಮತ್ತು ಅಂದುಕೊಂಡಂತೆ ಶಾಟ್ಸ್ ಕಂಪೋಸ್ ಮಾಡಲು ಸಾಧ್ಯ. ಹೊಸಬರು ಅಂದ ಕೂಡಲೇ ಅವರಿಗೆ ಎಲ್ಲವನ್ನೂ ಹೇಳಿಕೊಟ್ಟು, ಸಮಯ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಲೋಕೇಂದ್ರ ಮತ್ತವರ ತಂಡದ ಕಾರ್ಯ ವೈಖರಿ ಕಂಡು ಇವರೆಲ್ಲ ಹತ್ತಾರು ಸಿನಿಮಾಗಳಲ್ಲಿ ಕೆಲಸ ಮಾಡಿ ಬಂದಿದ್ದಾರೇನೋ ಅನ್ನಿಸಿಬಿಟ್ಟಿತು. ಒಂದು ದಿನಕ್ಕೆ ಐವತ್ತೆರಡು ಓಕೆ ಟೇಕ್‌ ಶೂಟ್ ಮಾಡಿದ್ದೇನೆ. ಹೊಸದಾಗಿ ಚಿತ್ರರಂಗಕ್ಕೆ ಬಂದಿರುವವರಿಂದ ಈ ಮಟ್ಟಿಗಿನ ಕೆಲಸ ತೆಗೆಸಿಕೊಳ್ಳುವುದು ನಿಜಕ್ಕೂ ದಾಖಲೆʼ ಎಂಬುದು ಥ್ರಿಲ್ಲರ್ ಮಂಜು ಮಾತು.


ವರ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ʻರೆಡ್ ಅಂಡ್ ವೈಟ್ ಮ್ಯಾನ್ʼ ಎಂದು ದಾಖಲೆ ನಿರ್ಮಿಸಿರುವ ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಮೂಲಕ ಡಾ. ಪವಿತ್ರ ಆರ್. ಪ್ರಭಾಕರ್ ರೆಡ್ಡಿ ನಿರ್ಮಿಸುತ್ತಿರುವ ʻಹಾಫ್ʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕನಟನಾಗಿ ನಟಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಬಿ.ಆರ್. ಕ್ಯಾಮೆರಾ ಹಿಡಿದರೆ, ಯುಡಿವಿ ವೆಂಕಿ ಸಂಕಲನವಿದೆ. ರಾಕಿ ಸೋನು ಸಂಗೀತ, ಹಿನ್ನೆಲೆ ಸಂಗೀತ, ಡಾ. ಥ್ರಿಲ್ಲರ್ ಮಂಜು ಸಾಹಸ, ಋತು ಚೈತ್ರ ಅವರ ವಸ್ತ್ರಾಲಂಕಾರ ಹಾಫ್ ಚಿತ್ರಕ್ಕಿದೆ. ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಪವಿತ್ರಾ ಆರ್. ಪ್ರಭಾಕರ್ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್, ಮೋಹನ್ ನೆನಪಿರಲಿ ಇತರರು ನಟಿಸಿದ್ದಾರೆ. ಕೃಷ್ಣ ಸಹ ನಿರ್ದೇಶನ, ಶ್ರೀವತ್ಸ, ಭರತ್, ಧೃವಿನ್, ಶಂಕರ್, ನವೀನ್ ಚಲ, ಮನೋಜ್ ಆರ್, ಪುನೀತ್ ಎಲ್, ವಿಜಯ್ ಚಂದ್ರ ಸಹಾಯಕ ನಿರ್ದೇಶನವಿದೆ. ಶಿವಕಾಂತ್ ಕಲಾ ನಿರ್ದೇಶನವಿದೆ. ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಇತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.

Related Posts

error: Content is protected !!