ದಿಗಂತ್‌ ಮಾರಿಗೋಲ್ಡ್‌ ಪೂರ್ಣ – ಮಾಸ್‌ ಕ್ರೇಜ್‌ ಸೃಷ್ಟಿಸಿರುವ ಚಿತ್ರ

ಹಾಡಿನ ಮೂಲಕ ಸಿನಿಮಾಗೆ ಕುಂಬಳಕಾಯಿ

ಗುಳಿಕೆನ್ನೆ ಹುಡುಗ ದಿಗಂತ್‌ ಅಭಿನಯದ “ಮಾರಿಗೋಲ್ಡ್” ಚಿತ್ರ ಪೂರ್ಣಗೊಂಡಿದೆ. ಇತ್ತೀಚೆಗೆ ಹಾಡೊಂದನ್ನು ಚಿತ್ರೀಕರಿಸುವ ಮೂಲಕ ಚಿತ್ರತಂಡ ಕುಂಬಳಕಾಯಿ ಒಡೆಯುವ ಮೂಲಕ ಶೂಟಿಂಗ್‌ ಮುಗಿಸಿದೆ. ಈಗಾಗಲೇ ಫಸ್ಟ್‌ಲುಕ್‌ ಪೋಸ್ಟರ್‌ ಕೂಡ ಬಿಡುಗಡೆಯಾಗಿ, ಸಾಕಷ್ಟು ಕುತೂಹಲ ಮೂಡಿಸಿದೆ.

ಇನ್ನು, ಚಿತ್ರತಂಡ “ಮಾರಿಗೋಲ್ಡ್‌” ಚಿತ್ರದ ಡಬ್ಬಿಂಗ್‌ ಕಾರ್ಯವನ್ನೂ ಬಹುತೇಕ ಮುಗಿಸಿದ್ದು, ನಾಯಕ ದಿಗಂತ್‌ ಭಾಗವಷ್ಟೇ ಬಾಕಿ ಉಳಿದಿದೆ. “ಮಾರಿಗೋಲ್ಡ್‌” ಕುತೂಹಲ ಹುಟ್ಟಿಸಿರುವುದಕ್ಕೆ ಕಾರಣ, ಶೀರ್ಷಿಕೆ ಮತ್ತು ಚಿತ್ರತಂಡ ಬಿಡುಗಡೆ ಮಾಡಿರುವ ಶೀರ್ಷಿಕೆ ಫಸ್ಟ್‌ಲುಕ್‌. ಶೀರ್ಷಿಕೆ ಕೇಳಿದವರಿಗೆ ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಅದು ಅಂಡರ್‌ವರ್ಲ್ಡ್‌ ಸಿನಿಮಾನಾ ಅಥವಾ ರೌಡಿಸಂ ಕುರಿತಾದ ಕಥೆಯೇ ಎಂಬುದಕ್ಕೆ ಸಿನಿಮಾ ಬರುವ ತನಕ ಕಾಯಬೇಕು.


ಇನ್ನು, ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌ ನಿರ್ದೇಶನ ಮಾಡಿದ್ದಾರೆ. ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಹಾಗಂತ, ಅವರಿಗೆ ಅನುಭವ ಇಲ್ಲವೆಂದಲ್ಲ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕೆಲಸ ಮಾಡಿದ ಅನುಭವದ ಮೇಲೆ ಈಗ “ಮಾರಿಗೋಲ್ಡ್‌” ಹಿಂದೆ ನಿಂತಿದ್ದಾರೆ. ಇನ್ನು, ಚಿತ್ರವನ್ನು ರಘುವರ್ಧನ್‌ನಿರ್ಮಾಣ ಮಾಡಿದ್ದಾರೆ. ಇನ್ನು, ರಘುವರ್ಧನ್‌ಅವರು ಮೂಲತಃ ನಿರ್ದೇಶಕರಾಗಿದ್ದರೂ, ಅವರು ಹೊಸ ಪ್ರತಿಭಾವಂತ ಯುವ ನಿರ್ದೇಶಕ ರಾಘವೇಂದ್ರ ಎಂ.ನಾಯಕ್‌ಅವರಿಗೆ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕೆ ಕಾರಣ, ರಾಘವೇಂದ್ರ ಎಂ.ನಾಯಕ್‌ಅವರು ಮಾಡಿಕೊಂಡಿದ್ದ ಕಥೆ. ಕಥೆ ಚೆನ್ನಾಗಿದ್ದರಿಂದ, ಆ ಕಥೆಯನ್ನು ರಾಘವೇಂದ್ರ ನಾಯಕ್‌ಅವರೇ ನಿರ್ದೇಶಿಸಲಿ ಎಂಬ ಮನೋಭಾವದಿಂದಾಗಿ ರಘುವರ್ಧನ್‌, ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಿಸಿ, ಈಗ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ.


ಸದ್ಯಕ್ಕೆ “ಮಾರಿಗೋಲ್ಡ್‌” ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದಕ್ಕೆ ಕಾರಣ, ಎಲ್ಲೆಡೆ “ಮಾರಿಗೋಲ್ಡ್‌” ಕುರಿತು ಸಿಗುತ್ತಿರುವ ಮೆಚ್ಚುಗೆ. ಈ ಚಿತ್ರದ ಹೀರೋ ದಿಗಂತ್‌ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್‌ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ .ಇನ್ನು, ಬೆಂಗಳೂರು, ಸಕಲೇಶಪುರ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಇದೊಂದು ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಸಿನಿಮಾ ಆಗಿದ್ದು, ಸಂಗೀತಾ ಶೃಂಗೇರಿ ಚಿತ್ರದ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಸಂಪತ್‌ಕುಮಾರ್‌, ಕಾಕ್ರೋಚ್‌ ಸುಧಿ, ಯಶ್‌ಶೆಟ್ಟಿ, ರಾಜ್‌ ಬಲವಾಡಿ, ಗಣೇಶ್‌ರಾವ್‌ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕೆ.ಎಸ್.‌ಚಂದ್ರಶೇಖರ್‌ ಕ್ಯಾಮೆರಾ ಹಿಡಿದರೆ, ವೀರ್‌ ಸಮರ್ಥ್‌ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ. ರಘು ನಿಡುವಳ್ಳಿ ಅವರ ಸಂಭಾಷಣೆ ಬರೆದಿದಾರೆ. ಯೋಗರಾಜ್‌ಭಟ್‌, ವಿಜಯ್‌ ಭರಮಸಾಗರ ಸಾಹಿತ್ಯವಿದೆ.‌ ಸದ್ಯಕ್ಕೆ ಬಿಡುಗಡೆ ತಯಾರಿಯಲ್ಲಿ ಚಿತ್ರವಿದೆ. “ಮಾರಿಗೋಲ್ಡ್”‌ ಒಂದು ರೀತಿಯ ಮಾಸ್‌ ಕ್ರೇಜ್‌ ಹುಟ್ಟುಹಾಕಲು ಕಾರಣ, ಈ ಚಿತ್ರದ ಶೀರ್ಷಿಕೆ ಪೋಸ್ಟರ್.‌ ಇನ್ನು, ಈ ಶೀರ್ಷಿಕೆಯಡಿ ದಿಗಂತ್‌ ನಡೆಸುತ್ತಿರುವುದರಿಂದ ಅವರನ್ನಿಲ್ಲಿ ಬೇರೆ ರೀತಿಯಲ್ಲೇ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂಬುದು ನಿರ್ದೇಶಕರ ಮಾತು. ಒಟ್ಟಾರೆ, “ಮಾರಿಗೋಲ್ಡ್‌” ಪಕ್ಕಾ ಸಿನಿಪ್ರೇಮಿಗಳಿಗಂತೂ ಒಂದೊಳ್ಳೆಯ ಮನರಂಜನಾತ್ಮಕ ಸಿನಿಮಾ ಆಗಿ ಹೊರಬರಲಿದೆ ಎಂಬ ಗ್ಯಾರಂಟಿ ಕೊಡುತ್ತಾರೆ ನಿರ್ಮಾಪಕ ರಘುವರ್ಧನ್.

Related Posts

error: Content is protected !!