ನಟಿ ರಶ್ಮಿಕಾ ಮಂದಣ್ಣ ಅವರಿಗೆ ವಯಸ್ಸಾಗ್ತಿದೆ. ಹಾಗಂತ ಹೇಳ್ತಿರೋದು ನಾವಲ್ಲ. ಖುದ್ದು ರಶ್ಮಿಕಾ ಅವರೇ ತಮಗೆ ವಯಸ್ಸಾಗ್ತಿದೆ ಅಂತ ಹೇಳಿಕೊಂಡಿದ್ದಾರೆ. ಅದು ʼಪೊಗರುʼ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ತಮ್ಮ ನಡುವೆ ನಿಜಕ್ಕೂ ಅಗಿದ್ದೇನು? ಮದುವೆ ಬಗ್ಗೆ ನಿಮ್ಮ ಪ್ಲಾನ್ ಏನು? ಅಂತ ತಮಗೆ ಎದುರಾದ ಪ್ರಶ್ನೆಗಳಿಗೆ ಕೊಂಚ ಇರುಸು ಮುರುಸು ಮಾಡಿಕೊಂಡೆ ಉತ್ತರಿಸಿದ ಅವರು, ನಂಗೂ ಗೊತ್ತಾಗ್ತಿದೆ, ವಯಸ್ಸಾಗ್ತಿದೆ ಅಂತʼ ನಕ್ಕರು.
ಅನಿರೀಕ್ಷಿತವಾಗಿ ಎದುರಾದ ಪ್ರಶ್ನೆಗಳಿಗೆ ಉತ್ತರಿಸಬೇಕೋ ಅಥವಾ ಬೇಡವೋ ಎನ್ನುವ ಮೂಡ್ ನಲ್ಲಿಯೇ ಮಾತಿಗೆ ಮುಂದಾದ ರಶ್ಮಿಕಾ, ಅದೆಲ್ಲ ಈಗ ಬೇಕಾ? ಎಂದು ಮರು ಪ್ರಶ್ಮೆ ಹಾಕಿದರು. ” ಕಿರಿಕ್ ಪಾರ್ಟಿʼ ನನ್ನ ಮೊದಲ ಸಿನಿಮಾ. ಆ ಸಿನಿಮಾ ದೊಡ್ಡ ಸಕ್ಸಸ್ ಕಂಡಿತು. ಅಲ್ಲಿಂದ ನನಗೆ ನನ್ನ ಕೆರಿಯರ್ ಮುಖ್ಯ ಎನಿಸಿತು. ಮೇಲಾಗಿ ನನಗೇನು ಆಗ ಮದುವೆ ಆಗುವ ವಯಸ್ಸಲ್ಲ ಎಂದರು. ಅದು ಸರಿ, ಮದುವೆ ಪ್ಲಾನ್ ಏನು? ಎನ್ನುವ ಮರು ಪ್ರಶ್ನೆಗೆ ” ನಂಗೂ ಗೊತ್ತಾಗ್ತಿದೆ, ವಯಸ್ಸಾಗ್ತಿದೆ ಅಂತ, ನೋಡೋಣ ಮುಂದೆʼ ಎಂದರು. ಸದ್ಯ ಅವರೀಗ ʼಪೊಗರುʼ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದಾರೆ.
ಹಾಲಿವುಡ್ ನಟಿ, ಸಾಮಾಜಿಕ ಹೋರಾಟಗಾರ್ತಿ ಜಮೀಲಾ ಬಿಚ್ಚಿಟ್ಟ ಸತ್ಯ
ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟದ ವಿಚಾರವಾಗಿ ಬಹಳಷ್ಟು ನಟಿಮಣಿಯರು ಸ್ಟೇಟ್ ಮೆಂಟ್ ಗಳನ್ನು ನೀಡಿದ್ದು ಗೊತ್ತೇಇದೆ. ಆ ಕುರಿತಂತೆ ಸಾಕಷ್ಟು ಸ್ಟಾರ್‌ಗಳು ಸಹ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಕನ್ನಡದ ನಟಿ ಪ್ರಣೀತಾ ಟ್ವೀಟ್ ಮಾಡಿದ್ದರು. ಈಗ ಹಾಲಿವುಡ್ ನಟಿ ಮತ್ತು ಸಾಮಾಜಿಕ ಹೋರಾಟಗಾರ್ತಿ ಎಂದೇ ಗುರುತಿಸಿಕೊಂಡಿರುವ ಜಮೀಲಾ ಹಾಗೊಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಟ್ವೀಟ್ ಮಾಡಿದ ನಂತರ ಕರಾಳ ಸತ್ಯವೊಂದನ್ನೂ ಬಿಚ್ಚಿಟ್ಟಿದ್ದಾರೆ.
ಹೌದು, ಭಾರತದ ರೈತರ ಬಗ್ಗೆ ಮಾತನಾಡಿದ ನಟಿ ಜಮೀಲಾ ಅವರಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬಂದಿವೆಯಂತೆ. ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಜಮೀಲಾ, ” ನಾನೂ ಮನುಷ್ಯಳು” ಎಂದು ಟ್ವೀಟರ್ ನಲ್ಲಿ ಹಾಕಿಕೊಂಡಿದ್ದಾರೆ.
ಆಗಸ್ಟ್ ವರೆಗೂ ಕನ್ನಡದವರಿಗೆ ಸಿಗಲ್ಲ ಅಂದ್ರು ʼಕಿರಿಕ್ ಪಾರ್ಟಿʼ ಚೆಲುವೆ ರಶ್ಮಿಕಾ ಮಂದಣ್ಣ
ʼಕಿರಿಕ್ ಪಾರ್ಟಿʼ ಚಿತ್ರದ ಖ್ಯಾತಿಯ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿ ಆಗಿ ಅಭಿನಯಿಸಿರುವ “ಪೊಗರುʼ ಚಿತ್ರ ಇದೇ ತಿಂಗಳು ೧೯ ರಂದು ಭರ್ಜರಿಯಾಗಿ ತೆರೆ ಕಾಣುತ್ತಿದೆ. “ಯಜಮಾನʼ ಚಿತ್ರದ ನಂತರ ರಶ್ಮಿಕಾ ಇದೇ ಮೊದಲು ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೀಗ ಟಾಲಿವುಡ್, ಕಾಲಿವುಡ್, ಬಾಲಿವುಡ್ ಅಂತೆಲ್ಲ ಬ್ಯುಸಿ ಇರುವ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಮತ್ತೆ ಯಾವ ಸ್ಟಾರ್ ಜತೆಗೆ ಕಾಣಸಿಕೊಳ್ಳಬಹುದು? ಅವರ ಮುಂದಿನ ಸಿನಿಮಾ ಯಾವುದು ? ಸಿನಿ ಪ್ರೇಕ್ಷಕರಿಗೆ ಇಂತಹ ಕುತೂಹಲ ಇರುವುದು ಸಹಜವೇ. ಆದರೆ ಮುಂದಿನ ಆರು ತಿಂಗಳ ಕಾಲ ಅವರು ಕನ್ನಡಕ್ಕೆ ಲಭ್ಯ ಇಲ್ಲ. ಹಾಗೊಂದು ವೇಳೆ ಅವರು ಕನ್ನಡದಲ್ಲಿ ಯಾವುದಾದರೂ ಸಿನಿಮಾ ಒಪ್ಪಿಕೊಂಡು ಮತ್ತೆ ಇಲ್ಲಿ ಕಾಣಸಿಕೊಳ್ಳುವುದಾದರೆ ಅದು ಆಗಸ್ಟ್ ತಿಂಗಳ ನಂತರವೇ ಅಂತೆ. ಅಂತಹದೊಂದು ಸಂಗತಿಯನ್ನು ನಟಿ ರಶ್ಮಿಕಾ ಮಂದಣ್ಣ ಅವರೇ ರಿವೀಲ್ ಮಾಡಿದ್ದಾರೆ.
“ಪೊಗರುʼ ಚಿತ್ರದ ರಿಲೀಸ್ ಪ್ರಮೋಷನ್ ಹಿನ್ನೆಲೆಯಲ್ಲಿ ಶನಿವಾರ “ಮೀಟ್ ದಿ ಮೀಡಿಯಾʼ ಕಾರ್ಯಕ್ರಮದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದರು. ʼಪೊಗರುʼ ನಂತರ ಕನ್ನಡದಲ್ಲಿ ನಿಮ್ಮ ಮುಂದಿನ ಪ್ರಾಜೆಕ್ಟ್ ಯಾವುದು ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ಸದ್ಯಕ್ಕೆ ನಾನು ಒಪ್ಪಿಕೊಂಡ ಪ್ರಾಜೆಕ್ಟ್ ಶೆಡ್ಯೂಲ್ ಪ್ರಕಾರ ಜುಲೈ – ಆಗಸ್ಟ್ ತಿಂಗಳವರೆಗೂ ಯಾವುದೇ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಸಮಯ ಇಲ್ಲ. ಅದುವರೆಗೂ ನಾನು ಶೂಟಿಂಗ್ ಜಾಮ್ ಪ್ಯಾಕ್. ಅವೆಲ್ಲ ಮುಗಿಯೋದಿಕ್ಕೆ ಕನಿಷ್ಟ ಆರು ತಿಂಗಳು ಬೇಕೇ ಬೇಕು. ಆಮೇಲೆ ಸಮಯ ಸಿಕ್ಕಾಗ ಕನ್ನಡದಲ್ಲಿ ಕಥೆ ಕೇಳಿ, ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳೋಣ ಅಂದುಕೊಂಡಿದ್ದೇನೆʼ ಎನ್ನುತ್ತಾರೆ ರಶ್ಮಿಕಾ.
ಹಾಗಾದ್ರೆ ಕನ್ನಡಕ್ಕೆ ನೀವು ʼದುಬಾರಿʼಯಾದ್ರಾ ಎನ್ನುವ ಮತ್ತೊಂದು ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ ರೀತಿಯೇ ಅದ್ಭುತ. ” ಅಯ್ಯೋ, ನಾನು ಕನ್ನಡತಿ. ಇಲ್ಲಿಯೇ ನಂಗೆ ನೇಮ್-ಫೇಮ್ ಸಿಕ್ಕಿದ್ದು. ಇಲ್ಲಿ ನಾನು ಅಭಿನಯಿಸುವುದಿಲ್ಲ ಎನ್ನುತ್ತೇನಾ? ಸದ್ಯಕ್ಕೀಗ ಬೇರೆ ಬೇರೆ ಭಾಷೆಯ ಸಿನಿಮಾಗಳ ಅವಕಾಶ ಬಂದಿವೆ. ಆ ಸಿನಿಮಾಗಳ ಶೂಟಿಂಗ್ ಶೆಡ್ಯೂಲ್ ಕೊಟ್ಟಿದ್ದೇನೆ. ಹಾಗಾಗಿ ಕನ್ನಡದಲ್ಲಿನ ಆಫರ್ ಗಳ ಬಗ್ಗೆ ಹೆಚ್ಚು ಗಮನ ನೀಡಲು ಆಗುತ್ತಿಲ್ಲವಷ್ಟೇ. ಮುಂದೆ ಅದಕ್ಕಾಗಿಯೇ ಒಂದಷ್ಟು ಸಮಯ ಫಿಕ್ಸ್ ಮಾಡಿಕೊಳ್ಳುತ್ತಿದ್ದೇನೆ. ಆಗ ಯಾವುದಾದರೂ ಒಳ್ಳೆಯ ಕತೆ ಸಿಕ್ಕರೆ ಖಂಡಿತಾ ಇಲ್ಲಿ ನಟಿಸುತ್ತೇನೆʼ ಎನ್ನುತ್ತಾರೆ ರಶ್ಮಿಕಾ ಮಂದಣ್ಣ.
ಕನ್ನಡದಲ್ಲಿ “ದಿಯಾ” ಅನ್ನುವ ಸಿನಿಮಾ ಹೊಸದೊಂದು ಕ್ರೇಜ್ ಹುಟ್ಟಿಸಿದ್ದು ಎಲ್ಲರಿಗೂ ಗೊತ್ತು. ವಿಷಯ ಏನೆಂದರೆ, “ದಿಯಾ” ಸಿನಿಮಾ ನಾಯಕಿ ಖುಷಿ ಆ ಸಿನಿಮಾ ಬಳಿಕ ಸಾಕಷ್ಟು ಖುಷಿಯಲ್ಲಿರೋದಂತು ನಿಜ.
ಅದಾದ ಮೇಲೆ ಒಂದೊಂದೇ ಸಿನಿಮಾಗಳು ಅವರನ್ನು ಹುಡುಕಿ ಬಂದಿದ್ದು ನಿಜ. “ದಿಯಾ” ಕನ್ನಡದ ಮಟ್ಟಿಗೆ ವಿಶೇಷವಾದ ಚಿತ್ರ. ಈಗೇಕೆ “ದಿಯಾʼ ಕುರಿತ ಸುದ್ದಿ ಅಂದರೆ, ಆ ಸಿನಿಮಾದ ನಾಯಕಿ ಸದ್ಯ ಸಿಕ್ಕಾಪಟ್ಟೆ ಖುಷಿಯಲ್ಲಿರುವುದಷ್ಟೇ ಅಲ್ಲ, ಅವರೀಗ ಕೇರಳದ ರೆಸಾರ್ಟ್‌ವೊಂದರಲ್ಲಿ ಬೀಡು ಬಿಟ್ಟಿದ್ದಾರೆ. ಆಲ್ ಓಕೆ (ಅಲೋಕ್) ಅವರ ಹೊಸ ಆಲ್ಬಂ ಸಾಂಗ್‌ವೊಂದರಲ್ಲಿ ತೊಡಗಿಕೊಂಡಿದ್ದು, ಚಿತ್ರೀಕರಣ ಅಲ್ಲೀಗ ಜೋರಾಗಿ ನಡೆಯುತ್ತಿದೆ. ಅದು ವ್ಯಾಲೆಂಟೈನ್ಸ್ ಡೇ ಗಾಗಿಯೇ ಮಾಡುತ್ತಿರುವ ಹಾಡು ಎಂದು ಹೇಳಿದ್ದಾರೆ ಖುಷಿ. ಆ ಹಾಡಿನ ಕೆಲ ಫೋಟೋಗಳನ್ನು ಅವರು ಟ್ವೀಟ್ ಮಾಡಿದ್ದಾರೆ.
ಆಲ್ಬಂ ಸಾಂಗ್‌ಗಾಗಿ ಅವರು ಸದ್ಯ ಕೇರಳದಲ್ಲಿದ್ದಾರೆ. ಬಿಡುವಿನ ಸಮಯ ನೋಡಿಕೊಂಡು, ಹಾಡಿನ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಫ್ಯಾನ್ಸ್ ಸದ್ಯಕ್ಕೆ ಅವರ ಕಲರ್‌ಫುಲ್ ಫೋಟೋಗಳನ್ನು ನೋಡಿ ಖುಷ್ ಖುಷಿಯಾಗಿದ್ದಾರೆ. ದಿ ಕೇಕ್ ಎನ್ನುವುದು ಆ ಆಲ್ಬಂ ಸಾಂಗ್ ಹೆಸರು. ಅಲೋಕ್ ಹಾಗೂ ಖುಷಿ ಅವರೊಂದಿಗೆ “ಕೆಜಿಎಫ್ʼ ಖ್ಯಾತಿಯ ಜಾನ್ ಕೊಕೆನ್ ಇಲ್ಲಿ ಗೆಸ್ಟ್ ಆಫಿರಿಯನ್ಸ್ ಮಾಡಿದ್ದಾರೆ. ಇದು ವ್ಯಾಲೆಂಟೈನ್ಸ್ ಡೇ ಗೆ ರಿಲೀಸ್ ಆಗಲಿದೆ.ಸದ್ಯ ಈ ಸಾಂಗ್ ಗೆ ಕೇರಳದ ವಯನಾಡ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮೂರು ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳಿನಲ್ಲಿ ಮೂಡಿಬರಲಿದೆ. ಚಿತ್ರೀಕರಣದ ಅನುಭವ ಹೇಳಿಕೊಂಡಿರುವ ನಟಿ ಖುಷಿ, ಬೇರೆ ಬೇರೆ ಭಾಷೆಯ ನಟರನ್ನು ಭೇಟಿಯಾಗುವ ಅವಕಾಶ ದೊರಕಿತು. ರೆಸಾರ್ಟ್ ತುಂಬಾ ಬ್ಯೂಟಿಫುಲ್ ಎಂದು ಖುಷಿ ಖುಷಿ ವ್ಯಕ್ತಪಡಿಸಿದರು.
ನ್ಯಾಷನಲ್ ಕ್ರಷ್ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹೀಗೇಕೆ ಹೇಳಿದ್ರು….
ನಟಿ ರಶ್ಮಿಕಾ ಮಂದಣ್ಣಗೆ ಈಗ ಕಾಂಟ್ರೋವರ್ಸಿ ಬೇಕೇ ಬೇಕು. ಅದಿಲ್ಲ ಅಂದ್ರೆ ಅವರಿಗೆ ಬೇಜಾರಾಗುತ್ತಂತೆ. ಹೀಗಂತ ಹೇಳಿದ್ದು ಬೇರಾರೂ ಅಲ್ಲ, ಖುದ್ದು ಅವರೇ ಇದನ್ನು ಹೇಳಿಕೊಂಡು ನಗೆ ಬೀರಿದ್ದು ವಿಚಿತ್ರ ಎನಿಸಿತು.
ಇಷ್ಟಕ್ಕೂ ಅವರು ಈ ರೀತಿ ಹೇಳಿದ್ದು ಶನಿವಾರ ʼಪೊಗರುʼ ಚಿತ್ರದ ಮೀಟ್ ದಿ ಮೀಡಿಯಾ ಕಾರ್ಯಕ್ರಮದಲ್ಲಿ. ಸೋಷಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ದಿನನಿತ್ಯ ಕಾಣಿಸಿಕೊಳ್ಳುವ ಕಾಂಟ್ರೋವರ್ಸಿಗಳ ಕುರಿತ ಪ್ರಶ್ನೆಗೆ ನಗುತ್ತಲೇ ಪ್ರತಿಕಿಯಿಸಿದ ನಟಿ ರಶ್ಮಿಕಾ ಮಂದಣ್ಣ, ಅವುಗಳಿಗೆಲ್ಲ ನಾನು ಹೆಚ್ಚು ತಲೆ ಕಡೆಸಿಕೊಳ್ಳುವುದಿಲ್ಲ. ದಿನಿ ನಿತ್ಯ ಮಾಡೋದಿಕ್ಕೆ ಸಾಕಷ್ಟು ಕೆಲಸ ಇರುತ್ತದೆ ಎಂದರು.
” ಮೊದಲೆಲ್ಲ ಅಂದ್ರೆ ಕಿರಿಕ್ ಪಾರ್ಟಿ ಬಂದು ಹೋದ ನಂತರದ ದಿನಗಳಲ್ಲಿ ನನ್ನ ಬಗೆಗಿನ ಯಾವುದಾದರೂ ಕಾಂಟ್ರೋವರ್ಸಿ ವಿಷಯ ಕಿವಿ ಬಿದ್ದರೆ ಸಿಕ್ಕಾಪಟ್ಟೆ ಬೇಸರ ಆಗುತ್ತಿತ್ತು. ಇದ್ಯಾಕೆ ಹೀಗೆ ಜನ ಏನೇನು ಗಾಸಿಪ್ ಹಬ್ಬಿಸುತ್ತಿದ್ದಾರೆ, ಇವರಿಗೇನು ಕೆಲಸ ಇಲ್ಲವೇ ಅಂತೆಲ್ಲ ತಲೆಕೆಡಿಸಿಕೊಂಡು, ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೆ. ಆದ್ರೆ ಈಗ ಅದೆಲ್ಲವನ್ನು ಪಾಸಿಟಿವ್ ಆಗಿಯೇ ತೆಗೆದುಕೊಂಡಿದ್ದೇನೆ. ದಿನ ಸುದ್ದಿಯಲ್ಲಿರಬೇಕಾದ್ರೆ ಅಂತಹ ಕಾಂಟ್ರೋವರ್ಸಿ ಇರಬೇಕು ಅಂತೆನಿಸುತ್ತದೆ. ಅದೂ ಇದ್ದಾಗಲೇ ನಾವು ಕೂಡ ಇಲ್ಲಿ ಸಕ್ರಿಯವಾಗಿದ್ದೇವೆ ಅಂತೆನಿಸುತ್ತದೆ ʼ ಅಂತ ನಟಿ ರಶ್ಮಿಕಾ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಹಾಗಾದ್ರೆ ಕಾಂಟ್ರೋವರ್ಸಿಗಳನ್ನ ಪಾಸಿಟಿವ್ ತೆಗೆದುಕೊಳ್ಳುತ್ತಿದ್ದೀರಿ ಅಂತನಾ ಎನ್ನುವ ಮರು ಪ್ರಶ್ನೆಗೆ, ರಶ್ಮಿಕಾ ಉತ್ತರ ಅಷ್ಟೇ ಬುದ್ಧಿವಂತಿಕೆಯಿಂದಲೇ ಉತ್ತರಿಸಿದರು.” ಪಾಸಿಟಿವ್ ಅಂತಲ್ಲ. ಸೋಷಲ್ ಮೀಡಿಯಾದಲ್ಲಿ ಅದನ್ನೇ ಕಿಯೇಟ್ ಮಾಡೋದಿಕ್ಕೆ ಒಂದಷ್ಟು ಜನರು ಇರುವಾಗ ನಾವು ಅವರಿಗೆ ಏನೇ ಉತ್ತರ ಕೊಟ್ಟರು ಕೂಡ ಅದು ಕಾಂಟ್ರೋವರ್ಸಿಯಾಗಿಯೇ ಇರುತ್ತದೆ. ಹಾಗಾಗಿ ಅವರಿಗೆ ಪ್ರತಿಕ್ರಿಯಿಸಿ ನಾವು ಸಣ್ಣರಾಗುವುದಕ್ಕಿಂತ ಸುಮ್ಮನಿರುವುದೇ ಉತ್ತಮ ಅಲ್ಲವೇ ಎನ್ನುವ ಮೂಲಕ ರಶ್ಮಿಕಾ ತುಂಬಾ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ಟಾಲಿವುಡ್ ನಲ್ಲಿ ರಶ್ಮಿಕಾಗೆ 2 ಕೋಟಿ ಸಂಭಾವನೆಯಂತೆ ಎನ್ನುವ ಪ್ರಶ್ನೆಗೆ ಅಚ್ಚರಿಪಟ್ಟಿದ್ದು ಯಾರು ಗೊತ್ತಾ?
ನ್ಯಾಷನಲ್ ಕ್ರಷ್ ಅಂತಲೇ ಜನಪ್ರಿಯತೆ ಪಡೆದಿರುವ ಕಿರಿಕ್ ಪಾರ್ಟಿ ಚಿತ್ರದ ಖ್ಯಾತಿಯ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಹುಭಾಷೆಗಳಲ್ಲಿ ಬಹು ಬೇಡಿಕೆಯ ನಟಿ. ವಿಶೇಷವಾಗಿ ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ಮನೆ ಮಾತಾದ ಜನಪ್ರಿಯ ತಾರೆ. ಈಗ ಅಲ್ಲಿ ಅವರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟು? ಒಂದು ಸಿನಿಮಾಕ್ಕೆ ಅಲ್ಲಿ ಅವರು ಪಡೆಯುತ್ತಿರುವ ಸಂಭಾವನೆ ಎರಡು ಕೋಟಿ ಎನ್ನುವುದು ನಿಜವೇ?
ಅಧಿಕೃತವಾಗಿ ಅದು ಯಾರಿಗೂ ಗೊತ್ತಿಲ್ಲ. ಆದರೆ ಸೋಷಲ್ ಮೀಡಿಯಾದಲ್ಲಿ ಅವರ ಸಂಭಾವನೆ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಪ್ರಕಾರ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ನಲ್ಲಿ ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ೨ ಕೋಟಿ. ಹಾಗಾದ್ರೆ ಇದು ನಿಜವೇ? ಇದಕ್ಕೆ ಖುದ್ದು ನಟಿ ರಶ್ಮಿಕಾ ಮಂದಣ್ಣ ಅವರು ಹೇಳುವುದೇನು?
ಶನಿವಾರ ʼಪೊಗರುʼ ಚಿತ್ರದ ಮೀಟ್ ದಿ ಮೀಡಿಯಾ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಅವರಿಗೆ ಈ ಪ್ರಶ್ನೆ ಎದುರಾಯಿತು. ಟಾಲಿವುಡ್ ನಲ್ಲಿ ನೀವು ಒಂದು ಸಿನಿಮಾಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು? ಎರಡು ಕೋಟಿ ಇದೆ ಎನ್ನುವುದು ನಿಜವೇ ? ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವ ಮುನ್ನ ನಟಿ ರಶ್ಮಿಕಾ ಮಂದಣ್ಣ ಜೋರಾಗಿ ನಕ್ಕರು.
“ಅಯ್ಯೋ,, ಅಷ್ಟೊಂದು ಸಂಭಾವನೆ ಸಿಕ್ಕರೆ ನಂಗೂ ಖುಷಿ ಅಲ್ವೇ? ಹಾಗೆಲ್ಲ ಹೇಳಿದರು, ಹೇಳುತ್ತಿರುವವರು ಯಾರೋ ನಂಗೆ ಗೊತ್ತಿಲ್ಲ. ಆದ್ರೆ ನನ್ನ ಪ್ರಕಾರ ಅದೆಲ್ಲ ಸುಳ್ಳು. ವಾಸ್ತವದಲ್ಲಿ ಅಷ್ಟೊಂದು ಸಂಭಾವನೆ ಪಡೆಯುತ್ತಿರುವ ನಟಿ ನಾನಲ್ಲ. ಒಂದು ವೇಳೆ ಅಷ್ಟು ಸಂಭಾವನೆ ಸಿಕ್ಕಿದ್ದರೆ ನಿಜಕ್ಕೂ ಅದು ನಂಗೂ ಖುಷಿ ನೀಡುತ್ತಿತ್ತು.
ಆದರೆ ಅದೆಲ್ಲ ಅಪಪ್ರಚಾರ ಮಾತ್ರ. ಅದರಿಂದಲೇ ಅಲ್ವೇ, ನಮ್ಮ ಮನೆ ಮೇಲೆ ಐಟಿ ದಾಳಿ ನಡೆದಿದ್ದು. ಇದೆಲ್ಲದ್ದಕ್ಕೂ ನಾನು ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಿಲ್ಲ. ಆದರೆ ಅಷ್ಟೊಂದು ಸಂಭಾವನೆ ಬೇಕೆಂದು ಅಲ್ಲಿ ನಾವೇ ಡಿಮ್ಯಾಂಡ್ ಮಾಡಿದರೂ ಅಲ್ಲಿ ಕೊಡುವವರು ಇಲ್ಲ. ಅವರಿಗೂ ಗೊತ್ತು, ಯಾರಿಗೆ ಎಷ್ಟೇಲ್ಲ ಡಿಮ್ಯಾಂಡ್ ಇದೆ, ಎಷ್ಟು ಕೊಡಬೇಕು ಅಂತ. ನಾವು ಕೇಳಿದಷ್ಟನ್ನೇ ಕೊಡುವುದಕ್ಕೂ ಕೂಡ ಬೇರೆ, ಬೇರೆ ನಟಿಯರನ್ನು ಮಾದರಿಯಾಗಿ ತೋರಿಸುತ್ತಾರೆ. ಅವರೇ ಅಷ್ಟೊಂದು ಕಡಿಮೆ ಸಂಭಾವನೆ ಪಡೆಯುವಾಗ, ನೀವ್ಯಾಕೆ ಇಷ್ಟೊಂದು ಕೇಳ್ತೀರಾ ಅಂತಾರೆʼ ಎನ್ನುವ ಮಾತುಗಳ ಮೂಲಕ ಸಂಭಾವನೆ ಹಿಂದಿನ ಗುಟ್ಟು ರಟ್ಟು ಮಾಡಲು ನಿರಾಕರಿಸಿದರು.
ಸಾಮಾನ್ಯವಾಗಿ ಸಿನಿಮಾ ಅಂದಾಕ್ಷಣ, ಒಂದು ಕಲ್ಪನೆಯ ಕಥೆಯನ್ನೋ ಅಥವಾ ನೈಜ ಘಟನೆಯುಳ್ಳ ಕಥೆಯನ್ನೋ ಇಟ್ಟುಕೊಂಡು ಮಾಡುವುದು ಸಹಜ. ಅಂತಹ ಅನೇಕ ಸಿನಿಮಾಗಳು ಗೆಲುವು ಕಂಡಿರುವುದೂ ಉಂಟು. ಇನ್ನೂ ಕೆಲವರು ಒಂದಷ್ಟು ಸುದ್ದಿಯಾದ ಘಟನೆಗಳನ್ನೇ ಇಟ್ಟುಕೊಂಡು ತೆರೆಯ ಮೇಲೆ ತಂದಿದ್ದೂ ಉಂಟು. ಈಗ ರಾಜ್ಯಾದ್ಯಂತ ಸಖತ್‌ವೈರಲ್ ಆಗಿದ್ದ ಒಂದು ವಿಡಿಯೋ ಒಳಗಿನ ವಿಷಯ ಇಟ್ಟುಕೊಂಡೇ ಒಂದು ಕಿರುಚಿತ್ರ ಮಾಡಲಾಗಿದೆ. ಫೆಬ್ರವರಿ 6ರಂದು ಆ ಕಿರುಚಿತ್ರ ಭವಾನಿ ಕ್ಯಾಪ್ಚರ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಅದೊಂದು ವಿಶೇಷ ಕಥಾವಸ್ತು ಇರುವ ಕಿರುಚಿತ್ರ. ಆ ಕಾರಣಕ್ಕೆ ಅದು ಸುದ್ದಿಗೆ ಅರ್ಹವಾದ ಕಿರುಚಿತ್ರವೂ ಹೌದು.
ಅಂದಹಾಗೆ, ಆ ಕಿರುಚಿತ್ರಕ್ಕೆ “ಪಬ್ಲಿಕ್ ಟಾಯ್ಲೆಟ್” ಎಂದು ನಾಮಕರಣ ಮಾಡಲಾಗಿದೆ. ಈ ಶೀರ್ಷಿಕೆಗೆ “ತೊಳೆದಷ್ಟೂ ಕೊಳೆ” ಎಂಬ ಅರ್ಥಪೂರ್ಣ ಅಡಿಬರಹವನ್ನೂ ಕೊಡಲಾಗಿದೆ. ಈ ಟೈಟಲ್‌ನಲ್ಲೇ ಒಂದೊಳ್ಳೆಯ ಕಥೆ ಇದೆ, ವ್ಯಥೆಯೂ ಇದೆ ಅನ್ನೋದು ಗೊತ್ತಾಗುತ್ತೆ. ಈ ಕಿರುಚಿತ್ರಕ್ಕೆ ನಾಗೇಶ್ ಹೆಬ್ಬೂರು ನಿರ್ದೇಶಕರು. ಕನ್ನಡ ಚಿತ್ರರಂಗದಲ್ಲಿ ಸರಿಸುಮಾರು ಒಂದು ದಶಕದಿಂದಲೂ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ತಾನೂ ಸ್ವತಂತ್ರ ನಿರ್ದೇಶಕನಾಗಬೇಕು ಎಂಬ ಹಂಬಲದಿಂದಲೇ ಒಂದೊಳ್ಳೆಯ ಕಂಟೆಂಟ್ ಇರುವ ಕಿರುಚಿತ್ರ ನಿರ್ದೇಶಿಸಿ, ಆ ಮೂಲಕ ಸೈ ಎನಿಸಿಕೊಂಡು, ನಿರ್ಮಾಪಕರನ್ನು ಹುಡುಕಿ ಸದಭಿರುಚಿಯ ಸಿನಿಮಾ ಮಾಡುವ ಉದ್ದೇಶ ನಾಗೇಶ್ ಹೆಬ್ಬೂರು ಅವರಿಗಿದೆ. ಅವರ “ಪಬ್ಲಿಕ್‌ಟಾಯ್ಲೆಟ್” ಕುರಿತು ಸ್ವತಃ ಅವರೇ “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.
ನಾಗೇಶ್ ಹೆಬ್ಬೂರು, ನಿರ್ದೇಶಕ
“ಇತ್ತೀಚೆಗೆ ಒಂದು ಹೆಣ್ಣು ಮಗಳ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಅದು ಬೇರೇನೂ ಅಲ್ಲ, ತುಮಕೂರು ಜಿಲ್ಲೆಯಲ್ಲಿ ನಡೆದ ಒಂದು ಘಟನೆಯದು. ಒಂದು ಪಬ್ಲಿಕ್ ಟಾಯ್ಲೆಟ್‌ನಲ್ಲಿ ಮಹಿಳೆಯೊಬ್ಬಳು ಪರಪುರುಷನ ಜೊತೆ ಇರುವ ವೇಳೆ ಅಪರಿಚಿತನೊಬ್ಬ ಮೊಬೈಲ್ ಮೂಲಕ ವಿಡಿಯೋ ಮಾಡಲು ಮುಂದಾದಾಗ, ಆ ಮಹಿಳೆ, “ಯಾಕಣ್ಣಾ…” ಅಂತ ಮುಗ್ಧತೆಯಿಂದಲೇ ಪ್ರಶ್ನಿಸುತ್ತಾಳೆ. ಆ “ಯಾಕಣ್ಣಾ…” ಅನ್ನುವ ಧ್ವನಿಯಲ್ಲಿ ಒಂದು ಮನವಿ ಇತ್ತು. ಆದರೆ, ಆ ವಿಡಿಯೋ ಮಾಡಿದ ಅಪರಿಚಿತ, ತನ್ನ ಕಲ್ಮಶ ಮನಸ್ಸಲ್ಲೇ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿಬಿಟ್ಟ. ಗಂಟೆಗಳಲ್ಲೇ ಆ ವಿಡಿಯೋ ತುಂಬಾ ಫೇಮಸ್ ಆಯ್ತು. ಅಷ್ಟೇ ಅಲ್ಲ, ಆ ಮಹಿಳೆ ಹೇಳಿದ “ಯಾಕಣ್ಣಾ..” ಅನ್ನೋ ಪದ ಸಾಕಷ್ಟು ಟಿಕ್‌ಟಾಕ್‌ಗೂ ಬಳಕೆಯಾಯ್ತು. ಆ ಟಿಕ್‌ಟಾಕ್‌ಮೂಲಕ ಹಲವು ಯುವತಿಯರು, ಯುವಕರು ತಮ್ಮ ಖುಷಿಗೆ ಬಳಸಿಕೊಂಡರು.
ಆ ಬಳಿಕ “ಯಾಕಣ್ಣ ರೀಮಿಕ್ಸ್ ಸಾಂಗ್”, “ಯಾಕಣ್ಣ ಡಿಜೆ ಸೌಂಡ್”, “ಯಾಕಣ್ಣ ಅಭಿಮಾನಿಗಳ ಸಂಘ” ಕೂಡ ಆಗುವ ಮೂಲಕ ಆಕೆ ರಾತ್ರೋ ರಾತ್ರಿ ಆಕೆ ಮನೆ ಮಾತಾಗಿಬಿಟ್ಟಳು. ಪಡ್ಡೆಗಳ ಪಾಲಿಗೆ ಆಕೆ ತಮಾಷೆಯ ವಸ್ತುವಾಗಿಬಿಟ್ಟಳು. ಏನಿಲ್ಲವೆಂದರೂ ಆ ವಿಡಿಯೋ ಒಂದು ಕೋಟಿ ವೀಕ್ಷಣೆ ಪಡೆದಿದ್ದೇ ದೊಡ್ಡ ಸುದ್ದಿಯಾಯ್ತು. ಈ ಕಥೆಯ ಹಿಂದೆ ಒಂದು ವ್ಯಥೆಯ ಕಥೆ ಹುಡುಕಿದೆ. ಅಲ್ಲೊಂದು ಮಾನವೀಯತೆಯ ಕಥೆಯ ಎಳೆ ಸಿಕ್ಕಿತು. ಅದನ್ನಿಟ್ಟುಕೊಂಡೇ ಒಂದು ಕಿರುಚಿತ್ರ ಮಾಡಿದ್ದೇನೆ” ಎಂದು ವಿವರ ಕೊಡುತ್ತಾರೆ ನಿರ್ದೇಶಕ ನಾಗೇಶ್ ಹೆಬ್ಬೂರು.
ಆ ಶೌಚಾಲಯದೊಳಗೆ ಪರಪುರುಷನ ಜೊತೆ ಇದ್ದ ಆಕೆಯ ವಿಡಿಯೋ ಮಾಡಿ ಹರಿಬಿಟ್ಟ ವ್ಯಕ್ತಿಗೆ ಆ ಕ್ಷಣಕ್ಕೆ ಖುಷಿಯಾಗಿರಬಹುದು. ತಾನು ಮಾಡಿದ ವಿಡಿಯೋ ವೈರಲ್ ಆಗಿ, ಟಿಕ್‌ಟಾಕ್ ಕೂಡ ಆಗೋಗಿದೆ ಅಂತೆಲ್ಲಾ ಸಂಭ್ರಮ ಪಟ್ಟಿರಬಹುದು. ಆದರೆ, ಆಕೆಯ ಪರಿಸ್ಥಿತಿ ಏನಾಯ್ತು ಎಂಬುದರ ಅರಿವು ಆತನಿಗಿಲ್ಲವಂತಾಯ್ತು. ಆಕೆ ಎಲ್ಲೇ ಸಿಕ್ಕರೂ, ಜನರು ಮಾತನಾಡಿಸಿ, ವಿಡಿಯೋ ಮಾಡುವ ಖಯಾಲಿಗಿಳಿದರು. ಕೊನೆ ಕೊನೆಗೆ ಆಕೆಗೂ ಆ ವಿಡಿಯೋದ ಅರಿವಾಯಿತು. ಆಕೆ ನೊಂದಳು, ಬೆಂದಳು, ಮರುಗಿದಳು, ಕಣ್ಣೀರಾದಳು. ಕಣ್ಣೀರಿಡುತ್ತಲೇ ಆಕೆ ಹೇಳಿದ್ದು, “ನಾನು ಯಾರೋ ಮಾಡದಿರುವ ತಪ್ಪು ಮಾಡಿಲ್ಲ. ಹೊಟ್ಟೆಗಾಗಿ ಮಾಡಿದೆ. ಈಗ ನೋಡಿದರೆ, ಯಾರೋ ವಿಡಿಯೋ ಮಾಡಿ, ತಿನ್ನುವ ಅನ್ನಕ್ಕೂ ಕಲ್ಲುಹಾಕಿದ್ದಾರೆ” ಅಂತ ಮನಕಲಕುವ ಆ ದೃಶ್ಯ ಕೂಡ ವೈರಲ್ ಆಗೋಯ್ತು. ನಾನೂ ಅದನ್ನೆಲ್ಲಾ ನೋಡಿದ್ದರಿಂದ ನನ್ನೊಳಗೊಂದು ಕಥೆ ಹುಟ್ಟುಕೊಂಡಿತು.
ಆಕೆಯ ವಿಡಿಯೋ ಮಾಡಿದ ವ್ಯಕ್ತಿ ಆಕೆಯ ಗೋಳು ನೋಡಿದ ಮೇಲೆ ಹೇಗೆಲ್ಲಾ ಪಶ್ಚಾತ್ತಾಪ ಪಟ್ಟಿರಬಹುದು ಅನ್ನುವುದನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಇದು ಆಕೆಯ ಕಥೆಯಂತೂ ಅಲ್ಲ. ಇಡೀ ಕಥೆಯಲ್ಲಿ ಅವಳಿಗೆ ಕ್ಯಾಮೆರಾವನ್ನೂ ಹಿಡಿದಿಲ್ಲ. ಆದರೆ, ಅವಳಿಗೆ ಮೊಬೈಲ್ ಕ್ಯಾಮೆರಾ ಹಿಡಿದವನ ಮೇಲೆ ಕ್ಯಾಮೆರಾ ಹಿಡಿಯಲಾಗಿದೆ. ಅವನು ಯಾರೂ ಅನ್ನೋದೇ ಜಗತ್ತಿಗೆ ಗೊತ್ತಿಲ್ಲ. ಅವನು ಯಾಕೆ ಆ ವಿಡಿಯೋ ಮಾಡಿ ಹರಿಬಿಟ್ಟ, ಆ ಕ್ಷಣಕ್ಕೆ ಮಾಡಿದನಾದರೂ ಆಮೇಲೆ ಅವನ ಮನಸ್ಥಿತಿ ಹೇಗಿರಬಹುದು ಅನ್ನೋದು ಕಥೆ. ಎಲ್ಲರಿಗೂ ಗೊತ್ತಿರುವ ಕಥೆಯನ್ನು ಗೊತ್ತಿರದ ದೃಷ್ಟಿಕೋನದಲ್ಲಿ ಮಾಡಲಾಗಿದೆ” ಎಂಬುದು ಅವರ ಮಾತು.
ಇಷ್ಟಕ್ಕೂ ನಾನು ಈ ಕಥೆ ಆಯ್ಕೆ ಮಾಡಿಕೊಳ್ಳೋಕೆ ಕಾರಣ, ನಾನೊಬ್ಬ ನಿರ್ದೇಶಕನಾಗಬೇಕು. ನಾನು ಏನು ಅಂತ ಸಾಬೀತುಪಡಿಸಿಕೊಳ್ಳಬೇಕು ಅನ್ನೋದು. ನಾನೀಗ ಕೈಗೆತ್ತಿಕೊಂಡ ಸಬ್ಜೆಕ್ಟ್ ಮೇಲೆ ವಿಶ್ವಾಸವಿದೆ. ಗೊತ್ತಿರುವ ಕಂಟೆಂಟ್ ಅನ್ನು ಹೇಗೆ ತೋರಿಸ್ತಾರೆ. ಆಕೆಯನ್ನು ತೋರಿಸದೆ, ಹೇಗೆ ಮಾಡಬಹುದು. ನಾನು ಸಾಬೀತುಪಡಿಸಿಕೊಳ್ಳೋಕೆ ಈ ಕಥೆ ಚೆನ್ನಾಗಿದೆ ಅನಿಸಿತು. ನಾನು ಮೇಕಿಂಗ್‌ನಲ್ಲಿ ಎಲ್ಲೂ ಕಾಂಪ್ರಮೈಸ್ ಆಗಲಿಲ್ಲ. ರಿಯಲ್ ಪಾತ್ರದಂತೇ ಇರುವ ಒಬ್ಬ ಜೂನಿಯರ್ ಅರ್ಟಿಸ್ಟ್ ಪವಿ ಎಂಬುವವರನ್ನು ಕರೆಸಿ, ಕ್ಯಾಮೆರಾ ಮುಂದೆ ನಿಲ್ಲಿಸಿ ಚಿತ್ರೀಕರಿಸಲಾಗಿದೆ. ಆಕೆ ಆ ಪಾತ್ರ ಮಾಡುವ ಮುನ್ನ, ರಿಯಲ್ ಹೆಣ್ಣುಮಗಳ ಕಥೆ ವ್ಯಥೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕುರಿತು ತೋರಿಸಿದ ಬಳಿಕ ಪವಿ ನಾನು ಮಾಡ್ತೀನಿ ಅಂತ ಒಪ್ಪಿದರು. ಇನ್ನು, ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಕ್ಯಾಮೆರಾ ಹಿಡಿದಿದ್ದಾರೆ. ಶ್ರೀಕಾಂತ್ ಸಂಕಲನ ಮಾಡಿದ್ದಾರೆ.
ಹರ್ಷವರ್ಧನ್ ಸಂಗೀತವಿದೆ. ರಘುನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಕಾಣಿ ಸ್ಟುಡಿಯೋದವರು ಪೋಸ್ಟರ್ ಡಿಸೈನ್ ಮಾಡಿಕೊಟ್ಟಿದ್ದಾರೆ. ಇವರೆಲ್ಲರೂ ನನ್ನ ಪ್ರೀತಿಗಾಗಿ ಕೆಲಸ ಮಾಡಿದ್ದಾರೆ. ಇನ್ನು, ರಂಗಭೂಮಿ ಪ್ರತಿಭೆ ಶ್ವೇತಾ ಇಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ “{ಫ್ರೆಂಚ್ ಬಿರಿಯಾನಿ” ಖ್ಯಾತಿಯ ಮಹಾಂತೇಶ, ಸೇರಿದಂತೆ ಇತರರು ಸಾಥ್ ನೀಡಿದ್ದಾರೆ. ಇಲ್ಲಿ ಪ್ರಮುಖ ಪಾತ್ರವೊಂದಿದೆ. ಅದನ್ನು ಕಿರುಚಿತ್ರದಲ್ಲೇ ನೋಡಬೇಕು. ಇಡೀ ಕಿರುಚಿತ್ರವನ್ನು ಐದು ದಿನಗಳ ಕಾಲ ಚಿತ್ರೀಕರಿಸಿದ್ದು, ನಾಗರಭಾವಿಯಲ್ಲಿರುವ ಮಾಳಗಾಳ ಗ್ರಾಮದಲ್ಲಿ ಶೂಟಿಂಗ್ ನಡೆಸಲಾಗಿದೆ. ಅಲ್ಲೊಂದು ಆಲದ ಮರವಿದೆ. ಬಂಡೆ ಮಾರಮ್ಮ ಬಸ್‌ಸ್ಟಾಪ್ ಬಳಿ ಇರುವ ಟಾಯ್ಲೆಟ್‌ನಲ್ಲಿ ಚಿತ್ರೀಕರಿಸಲಾಗಿದೆ. ನಾನು ಈ ಕಿರುಚಿತ್ರ ಮಾಡಲು ಹೊರಟಾಗ ಜೇಬಲ್ಲಿ ಕೇವಲ ನಾಲ್ಕು ಸಾವಿರ ಮಾತ್ರ ಹಣವಿತ್ತು. ನನ್ನ ಕಥೆ ಕೇಳಿದ ರಘುನಿಡುವಳ್ಳಿ, ಒಬ್ಬ ಬಳಿ ಕರೆದುಕೊಂಡು ಹೋದರು. ಅವರು ಕೂಡ ಮಹಿಳಾ ಪ್ರಧಾನ ಕಥೆ ಆಧರಿತ ಕಿರುಚಿತ್ರ ಮಾಡುವ ಉದ್ದೇಶ ಹೊಂದಿದ್ದರು. ಅವರಿಗೆ ಕಥೆ ಇಷ್ಟವಾಯ್ತು. ಈ ಕಿರುಚಿತ್ರವನ್ನು ಸಿನಿಮಾ ರೇಂಜ್‌ನಲ್ಲೇ ಮಾಡಿದರು. ಒಂದು ಸೂಕ್ಷ್ಮ ವಿಷಯ ಇಟ್ಟುಕೊಂಡೇ ಕಿರುಚಿತ್ರ ಮಾಡಿದ್ದೇನೆ. ಇಷ್ಟರಲ್ಲೇ ಒಂದು ಟೀಸರ್ ಬಿಡುಗಡೆಯಾಗಲಿದೆ. ನಂತರ ಕಿರುಚಿತ್ರ ಬಿಡುಗಡೆಯಾಗಲಿದೆ. ಜನರು ಟೀಸರ್ ನೋಡಿ ನನ್ನನ್ನು ಬೈಕೋಬಹುದು. ಆದರೆ, ಕಿರುಚಿತ್ರ ನೋಡಿದಾಗ, ನನ್ನ ಪ್ರಯತ್ನ ಏನು, ಯಾವ ವಿಷಯ ಹೇಳಲು ಹೊರಟಿದ್ದೇನೆ ಅನ್ನೋದು ಗೊತ್ತಾಗುತ್ತೆ ಅನ್ನುತ್ತಾರೆ ನಾಗೇಶ್ ಹೆಬ್ಬೂರು.
ಡಾ.ರಾಜಕುಮಾರ್ ಕಲಾ ಬದುಕಿನ ಮುಖ್ಯ ವಿನ್ಯಾಸಕಾರರೊಲ್ಲಬ್ಬರು ಅಂದರೆ ಅದು ಅವರ ಪ್ರೀತಿಯ ಸಹೋದರ ಎಸ್.ಪಿ.ವರದರಾಜು. ಅವರೊಬ್ಬ ನಿರ್ಮಾಪಕರೂ ಹೌದು. ವೃತ್ತಿರಂಗಭೂಮಿ ಪ್ರತಿಭೆಯಾದ ಅವರಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಸಂದಿದೆ. ವರದಪ್ಪನವರ ಅಗಲಿಕೆಯ ನಂತರ ಅವರ ಹೆಸರಿನಲ್ಲಿ ಪ್ರತೀ ವರ್ಷ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಇಬ್ಬರು ಸಾಧಕರಿಗೆ ಪ್ರಶಸ್ತಿ ಕೊಡಲಾಗುತ್ತಿದೆ.
ಫೋಟೋ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ
ಅಂತೆಯೇ ಈ ಬಾರಿಯೂ ಕೂಡ ರಂಗಭೂಮಿಯಿಂದ ಕುಕನೂರು ಬಾಬಣ್ಣ ಮತ್ತು ಸಿನಿಮಾ ಕ್ಷೇತ್ರದಿಂದ ಸುರೇಖಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಫೆಬ್ರವರಿ 13ರ ಶನಿವಾರದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ನಟರಾದ ಶಿವರಾಜ್‌ಕುಮಾರ್, ಪುನೀತ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಸಾಹಿತಿ ಮತ್ತು ಚಿತ್ರನಿರ್ದೇಶಕ ಬರಗೂರು ರಾಮಚಂದ್ರಪ್ಪ ಆಶಯ ಮಾತುಗಳನ್ನಾಡಲಿದ್ದಾರೆ. ನಟ ದೊಡ್ಡಣ್ಣ ಮತ್ತು ನಟಿ ಸುಧಾರಾಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂಬುದು ವಿಶೇಷ.
ಕುಕನೂರು ಬಾಬಣ್ಣ – ಸುರೇಖಾ
ಡಾ.ರಾಜ್‌ಕುಮಾರ್ ಅವರ ಕಿರಿಯ ಸಹೋದರ ವರದರಾಜು ಅವರಿಗೆ ಸಿನಿಮಾದ ವಿವಿಧ ವಿಭಾಗಗಳಲ್ಲಿ ಅಪಾರ ಪರಿಣತಿಯಿತ್ತು. ರಾಜ್ ಅವರಂತೆಯೇ ಅವರು ಕೂಡ ವೃತ್ತಿರಂಗಭೂಮಿಯ ಬದುಕಲ್ಲಿ ಬೆರೆತು ಬೆಳೆದವರು. ರಂಗಭೂಮಿ ಮೇಲೆ ಮತ್ತು ತೆರೆಯ ಹಿಂದೆ ಸಮಾನ ಕ್ರಿಯಾಶೀಲತೆ ಮೂಲಕವೇ ಸದಭಿರುಚಿಯನ್ನು ಕಟ್ಟುವ ಪ್ರಬುದ್ಧ ಸಾಂಸ್ಕೃತಿಕ ಪ್ರೇರಕರಾದರು ವರದಪ್ಪ. ಡಾ.ರಾಜ್ ಚಿತ್ರರಂಗ ಪ್ರವೇಶ ಮಾಡಿ ಪ್ರಸಿದ್ಧರಾದ ಮೇಲೆ ಕಥೆ ಆಯ್ಕೆ, ಚಿತ್ರಕಥೆಯ ಚರ್ಚೆ ಮತ್ತು ಚಿತ್ರದ ಒಟ್ಟು ವಿನ್ಯಾಸಕ್ಕೆ ಒತ್ತಾಸೆಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ನೇಪಥ್ಯದ ನೆರವು ನೀಡಿದರು.
ಪಾರ್ವತಮ್ಮನವರು ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪಿಸಿದ ಮೇಲೆ ಆ ಸಂಸ್ಥೆಯಿಂದ ನಿರ್ಮಾಣಗೊಂಡ ಎಲ್ಲ ಚಿತ್ರಗಳ ವಸ್ತು ವಿನ್ಯಾಸದ ಪ್ರಮುಖ ಶಕ್ತಿಯಾಗಿದ್ದರು ವರದಪ್ಪ. ವರದಪ್ಪ ಪಾಲುದಾರಿಕೆಯಲ್ಲಿ ನಿರ್ಮಿಸಿದ ಚಿತ್ರಗಳು ಸಹ ಕನ್ನಡ ಚಿತ್ರರಂಗದ ಮೌಲ್ಯಕ್ಕೆ ಕಾರಣವಾಗಿವೆ. ವರದಪ್ಪ 2006ರ ಫೆಬ್ರವರಿ 8ರಂದು ಅಗಲಿದರು. ಅಲ್ಲಿಂದ ಪ್ರತೀ ವರ್ಷ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಇಬ್ಬರು ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 28 ಸಾಧಕರಿಗೆ ಎಸ್.ಪಿ.ವರದರಾಜು ಪ್ರಶಸ್ತಿ ಸಂದಿದೆ ಎಂಬುದು ವಿಶೇಷತೆಗಳಲ್ಲೊಂದು.
ರಶ್ಮಿಕಾ ಮಂದಣ್ಣ ಸದ್ಯಕ್ಕೆ ಸುದ್ದಿಯಲ್ಲಿರುವ ಹುಡುಗಿ. ಕನ್ನಡದ ಈ ಹುಡುಗಿ ಕನ್ನಡ ಚಿತ್ರರಂಗದ ಮೂಲಕ ಇದೀಗ ಇಡೀ ಭಾರತ ಚಿತ್ರರಂಗದಲ್ಲೇ ಒಂದು ರೌಂಡ್ ಸುತ್ತಿದ್ದಾರೆ. ಹೌದು, ಕೇವಲ ಸ್ಯಾಂಡಲ್‌ವುಡ್ ಮಾತ್ರವಲ್ಲ, ಟಾಲಿವುಡ್, ಕಾಲಿವುಡ್ ಜೊತೆಗೆ ಬಾಲಿವುಡ್‌ನಲ್ಲೂ ರಶ್ಮಿಕಾ ಮಂದಣ್ಣ ಸಖತ್ ಸೌಂಡ್ ಮಾಡುತ್ತಿದ್ದಾರೆ. “ಕಿರಿಕ್ ಪಾರ್ಟಿ” ಚಿತ್ರದ ಮೂಲಕ ಕನ್ನಡ ಸಿನಿಲೋಕಕ್ಕೆ ಎಂಟ್ರಿಯಾದ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಕ್ರಶ್ ಅಂದರೆ ತಪ್ಪಿಲ್ಲ. ಇವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ.
ಅದರಲ್ಲೂ ಪಡ್ಡೆಗಳಿಗೆ ಹಾಟ್ ಫೇವರೇಟ್ ಈ ಕೊಡಗಿನ ಬೆಡಗಿ. ಗೀತಾ, ಸಾನ್ವಿ, ಖುಷಿ… ಹೀಗೆ ಇವರ ಪಾತ್ರಗಳು ತಮ್ಮ ಸಿನಿಬದುಕಿನ ದಿಕ್ಕನ್ನೇ ಬದಲಿಸಿದ್ದು ನಿಜ. ಮೆಲ್ಲನೆ, ಸ್ಟಾರ್ ನಟರ ಜೊತೆಯಲ್ಲೇ ಪರದೆ ಮೇಲೆ ರಾರಾಜಿಸುವ ಅವಕಾಶ ಪಡೆದು ಸೈ ಎನಿಸಿಕೊಂಡಿರುವ ರಶ್ಮಿಕಾ ಈಗ ಬಾಲಿವುಡ್‌ನಲ್ಲೂ ಒಂದಷ್ಟು ಸೌಂಡು ಮಾಡೋಕೆ ಹೊರಟಿದ್ದಾರೆ. ಅಂದಹಾಗೆ, ಫೆಬ್ರವರಿ ೧೯ರಂದು ಧ್ರುವಸರ್ಜಾ ಅಭಿನಯದ “ಪೊಗರು” ರಿಲೀಸ್ ಆಗುತ್ತಿದೆ.
ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಹಾಗೆ ನೋಡಿದರೆ, ಈ ಚಿತ್ರ, ಲಾಕ್ ಡೌನ್ ಮುಂಚೆಯೇ ಬಿಡುಗಡೆಯಾಗಬೇಕಿತ್ತು. ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಚಿತ್ರ ತಡವಾಗಿದ್ದು, ಈಗ ಬಿಡುಗಡೆಗೆ ದಿನ ಎಣಿಸುತ್ತಿದೆ ಚಿತ್ರತಂಡ. ಅಂದಹಾಗೆ, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಟೀಚರ್ ಪಾತ್ರ ಮಾಡಿದ್ದಾರೆ. ಅದೊಂದು ಹಳ್ಳಿ ಹುಡುಗಿಯಾಗಿ, ಟ್ರೆಡಿಶನಲ್ ಲುಕ್ನಲ್ಲಿ ತೆರೆ ಮೇಲೆ ಕಾಣಿಸ್ಕೊತಿದ್ದಾರೆ.
ಪುರೋಹಿತರ ಮಗಳಾಗಿ ನಟಿಸುತ್ತಿರುವ ಅವರು, ಒಂದು ಪ್ರೀತಿಗೆ ಸಿಲುಕುತ್ತಾರೆ. ನಂತರ ಅವರಿಗೆ ಆಗುವಂತಹ ಸಮಸ್ಯೆ ಏನು ಎಂಬುದೇ ಚಿತ್ರದ ಕಥಾಹಂದರ. ಸದ್ಯಕ್ಕೆ ಜೋರು ಸುದ್ದಿಯಲ್ಲಿರುವ ರಶ್ಮಿಕಾ ಅವರಿಗೂ “ಪೊಗರು” ಮೇಲೆ ಎಲ್ಲಿಲ್ಲದ ಭರವಸೆ ಇದೆ. ಸಿನಿಮಾ ದೊಡ್ಡ ಹಿಟ್ ಕೊಡುತ್ತದೆ ಎಂಬ ವಿಶ್ವಾಸವೂ ಅವರಿಗಿದೆ. ಇನ್ನು, ಅವರಿಗೆ ಹೊಸ ತಂಡದವರ ಜೊತೆ ಕೆಲಸ ಮಾಡುವುದು ಸಿಕ್ಕಾಪಟ್ಟೆ ಖುಷಿಯಂತೆ. “ಪೊಗರು” ಚಿತ್ರದಲ್ಲಿ ಸಾಕಷ್ಟು ಕಲಿತ ಬಗ್ಗೆ ಹೇಳುವ ರಶ್ಮಿಕಾ ಮಂದಣ್ಣ, ಒಂದೊಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ಹೆಮ್ಮೆ ನನ್ನದು ಎನ್ನುತ್ತಾರೆ.
ದಿನ ಕಳೆದಂತೆ ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಆ ಪೈಕಿ “ಡಾ. |ಅಭಿ ೦೦7” ಚಿತ್ರವೂ ಸೇರಿದೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅನ್ನು, ಧ್ರುವ ಸರ್ಜಾ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ಅಂದಹಾಗೆ, ಈ ಚಿತ್ರಕ್ಕೆ ವಿಷ್ಣು ಹೀರೋ. ಈ ಚಿತ್ರದ ಮೂಲಕ ವಿಷ್ಣು ಅವರು ಪೂರ್ಣ ಪ್ರಮಾಣದ ಹೀರೋ ಆಗಿ ಸಿನಿರಂಗ ಪ್ರವೇಶಿಸಿದ್ದಾರೆ. ಈ ಹಿಂದೆ ದರ್ಶನ್ ಅಭಿನಯದ “ಜಗ್ಗುದಾದಾ” ಚಿತ್ರದಲ್ಲಿ ವಿಷ್ಣು ಕಾಣಿಸಿಕೊಂಡಿದ್ದರು. ಡಾಕ್ಟರ್ ಆಗಿರುವ ವೆಂಕಟೇಶ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಹಿಂದಿ ಹಾಗೂ ಇಂಗ್ಲೀಷ್ ಭಾಷೆಯ ಕೆಲವು ವೆಬ್‌ಸೀರಿಸ್ ಹಾಗೂ ಧಾರಾವಾಹಿಗಳಿಗೆ ಸಹಾಯಕನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಇವರಿಗಿದೆ. ಇದು ವೆಂಕಟೇಶ್ ಪ್ರಸಾದ್‌ಅವರ ಮೊದಲ ನಿರ್ದೇಶನದ ಚಿತ್ರ.
ಅಂದಹಾಗೆ, ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಯು.ವಿ. ಸ್ಟೆವೆನ್ ಸತೀಶ್ ಸಂಗೀತ ನೀಡಲಿದ್ದಾರೆ. ಚೇತನ್ ಕುಮಾರ್ ಸಾಹಿತ್ಯವಿದೆ. ಇನ್ ಫೆಂಟ್ ಭರತ್ ಕ್ಯಾಮೆರಾ ಹಿಡಿದರೆ, ಅರುಣ್ ರೈ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ಅರ್ಜುನ್ ರಾಜ್, ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
https://youtu.be/D_HaTi_z_y8
ವಿಷ್ಣು ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾ ಬಳಗದಲ್ಲಿ ವರ್ಧನ್, ಅದ್ವಿತಿ ಶೆಟ್ಟಿ, ಪ್ರಿಯಾಂಕ ಅರೋರ, ವೀಣಾ ಸುಂದರ್, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್, ನಾಗೇಂದ್ರ ಅರಸ್, ಬಲ ರಾಜವಾಡಿ, ಐಶ್ವರ್ಯ, ಶರ್ಮಿಳಾ, ಸುಚಿತ್, ಕುರಿ ರಂಗ, ಡಾ. ಸುಮಿತ್ ತಲ್ವಾರ್ ಇತರರು ಇದ್ದಾರೆ. ಈಗಾಗಲೇ 35 ದಿನಗಳ ಕಾಲ ಬೆಂಗಳೂರು, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಇನ್ನೂ 15 ದಿನಗಳ ಚಿತ್ರೀಕರಣ ಬಾಕಿಯಿದೆ.