ರಾಜ್‌ ಸಹೋದರ ವರದರಾಜು ನೆನಪು

ಫೆ.13ಕ್ಕೆ ವರದಪ್ಪ ಪ್ರಶಸ್ತಿ

ಡಾ.ರಾಜಕುಮಾರ್‌ ಕಲಾ ಬದುಕಿನ ಮುಖ್ಯ ವಿನ್ಯಾಸಕಾರರೊಲ್ಲಬ್ಬರು ಅಂದರೆ ಅದು ಅವರ ಪ್ರೀತಿಯ ಸಹೋದರ ಎಸ್‌.ಪಿ.ವರದರಾಜು. ಅವರೊಬ್ಬ ನಿರ್ಮಾಪಕರೂ ಹೌದು. ವೃತ್ತಿರಂಗಭೂಮಿ ಪ್ರತಿಭೆಯಾದ ಅವರಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಸಂದಿದೆ. ವರದಪ್ಪನವರ ಅಗಲಿಕೆಯ ನಂತರ ಅವರ ಹೆಸರಿನಲ್ಲಿ ಪ್ರತೀ ವರ್ಷ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಇಬ್ಬರು ಸಾಧಕರಿಗೆ ಪ್ರಶಸ್ತಿ ಕೊಡಲಾಗುತ್ತಿದೆ.

ಫೋಟೋ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ

ಅಂತೆಯೇ ಈ ಬಾರಿಯೂ ಕೂಡ ರಂಗಭೂಮಿಯಿಂದ ಕುಕನೂರು ಬಾಬಣ್ಣ ಮತ್ತು ಸಿನಿಮಾ ಕ್ಷೇತ್ರದಿಂದ ಸುರೇಖಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಫೆಬ್ರವರಿ 13ರ ಶನಿವಾರದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ನಟರಾದ ಶಿವರಾಜ್‌ಕುಮಾರ್, ಪುನೀತ್‌ ಮತ್ತು ರಾಘವೇಂದ್ರ ರಾಜ್‌ಕುಮಾರ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಸಾಹಿತಿ ಮತ್ತು ಚಿತ್ರನಿರ್ದೇಶಕ ಬರಗೂರು ರಾಮಚಂದ್ರಪ್ಪ ಆಶಯ ಮಾತುಗಳನ್ನಾಡಲಿದ್ದಾರೆ. ನಟ ದೊಡ್ಡಣ್ಣ ಮತ್ತು ನಟಿ ಸುಧಾರಾಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂಬುದು ವಿಶೇಷ.

ಕುಕನೂರು ಬಾಬಣ್ಣ – ಸುರೇಖಾ

ಡಾ.ರಾಜ್‌ಕುಮಾರ್‌ ಅವರ ಕಿರಿಯ ಸಹೋದರ ವರದರಾಜು ಅವರಿಗೆ ಸಿನಿಮಾದ ವಿವಿಧ ವಿಭಾಗಗಳಲ್ಲಿ ಅಪಾರ ಪರಿಣತಿಯಿತ್ತು. ರಾಜ್ ಅವರಂತೆಯೇ ಅವರು ಕೂಡ ವೃತ್ತಿರಂಗಭೂಮಿಯ ಬದುಕಲ್ಲಿ ಬೆರೆತು ಬೆಳೆದವರು. ರಂಗಭೂಮಿ ಮೇಲೆ ಮತ್ತು ತೆರೆಯ ಹಿಂದೆ ಸಮಾನ ಕ್ರಿಯಾಶೀಲತೆ ಮೂಲಕವೇ ಸದಭಿರುಚಿಯನ್ನು ಕಟ್ಟುವ ಪ್ರಬುದ್ಧ ಸಾಂಸ್ಕೃತಿಕ ಪ್ರೇರಕರಾದರು ವರದಪ್ಪ. ಡಾ.ರಾಜ್‌ ಚಿತ್ರರಂಗ ಪ್ರವೇಶ ಮಾಡಿ ಪ್ರಸಿದ್ಧರಾದ ಮೇಲೆ ಕಥೆ ಆಯ್ಕೆ, ಚಿತ್ರಕಥೆಯ ಚರ್ಚೆ ಮತ್ತು ಚಿತ್ರದ ಒಟ್ಟು ವಿನ್ಯಾಸಕ್ಕೆ ಒತ್ತಾಸೆಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ನೇಪಥ್ಯದ ನೆರವು ನೀಡಿದರು.

ಪಾರ್ವತಮ್ಮನವರು ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪಿಸಿದ ಮೇಲೆ ಆ ಸಂಸ್ಥೆಯಿಂದ ನಿರ್ಮಾಣಗೊಂಡ ಎಲ್ಲ ಚಿತ್ರಗಳ ವಸ್ತು ವಿನ್ಯಾಸದ ಪ್ರಮುಖ ಶಕ್ತಿಯಾಗಿದ್ದರು ವರದಪ್ಪ. ವರದಪ್ಪ ಪಾಲುದಾರಿಕೆಯಲ್ಲಿ ನಿರ್ಮಿಸಿದ ಚಿತ್ರಗಳು ಸಹ ಕನ್ನಡ ಚಿತ್ರರಂಗದ ಮೌಲ್ಯಕ್ಕೆ ಕಾರಣವಾಗಿವೆ. ವರದಪ್ಪ 2006ರ ಫೆಬ್ರವರಿ 8ರಂದು ಅಗಲಿದರು. ಅಲ್ಲಿಂದ ಪ್ರತೀ ವರ್ಷ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಇಬ್ಬರು ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 28 ಸಾಧಕರಿಗೆ ಎಸ್‌.ಪಿ.ವರದರಾಜು ಪ್ರಶಸ್ತಿ ಸಂದಿದೆ ಎಂಬುದು ವಿಶೇಷತೆಗಳಲ್ಲೊಂದು.

 

Related Posts

error: Content is protected !!