ಬಿಟೌನ್‌ಲ್ಲಿ ಹವಾ ಎಬ್ಬಿಸ್ತಾರಾ ಕಿರಿಕ್‌ ಹುಡುಗಿ

 ಟೀಚರಮ್ಮನ ಹೊಸ ಕ್ಲಾಸು ಶುರು ಗುರು…

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಸುದ್ದಿಯಲ್ಲಿರುವ ಹುಡುಗಿ. ಕನ್ನಡದ ಈ ಹುಡುಗಿ ಕನ್ನಡ ಚಿತ್ರರಂಗದ ಮೂಲಕ ಇದೀಗ ಇಡೀ ಭಾರತ ಚಿತ್ರರಂಗದಲ್ಲೇ ಒಂದು ರೌಂಡ್‌ ಸುತ್ತಿದ್ದಾರೆ. ಹೌದು, ಕೇವಲ ಸ್ಯಾಂಡಲ್‌ವುಡ್‌ ಮಾತ್ರವಲ್ಲ, ಟಾಲಿವುಡ್‌, ಕಾಲಿವುಡ್‌ ಜೊತೆಗೆ ಬಾಲಿವುಡ್‌ನಲ್ಲೂ ರಶ್ಮಿಕಾ ಮಂದಣ್ಣ ಸಖತ್‌ ಸೌಂಡ್‌ ಮಾಡುತ್ತಿದ್ದಾರೆ. “ಕಿರಿಕ್‌ ಪಾರ್ಟಿ” ಚಿತ್ರದ ಮೂಲಕ ಕನ್ನಡ ಸಿನಿಲೋಕಕ್ಕೆ ಎಂಟ್ರಿಯಾದ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್‌ ಕ್ರಶ್‌ ಅಂದರೆ ತಪ್ಪಿಲ್ಲ. ಇವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ.

ಅದರಲ್ಲೂ ಪಡ್ಡೆಗಳಿಗೆ ಹಾಟ್‌ ಫೇವರೇಟ್‌ ಈ ಕೊಡಗಿನ ಬೆಡಗಿ. ಗೀತಾ, ಸಾನ್ವಿ, ಖುಷಿ… ಹೀಗೆ ಇವರ ಪಾತ್ರಗಳು ತಮ್ಮ ಸಿನಿಬದುಕಿನ ದಿಕ್ಕನ್ನೇ ಬದಲಿಸಿದ್ದು ನಿಜ. ಮೆಲ್ಲನೆ, ಸ್ಟಾರ್‌ ನಟರ ಜೊತೆಯಲ್ಲೇ ಪರದೆ ಮೇಲೆ ರಾರಾಜಿಸುವ ಅವಕಾಶ ಪಡೆದು ಸೈ ಎನಿಸಿಕೊಂಡಿರುವ ರಶ್ಮಿಕಾ ಈಗ ಬಾಲಿವುಡ್‌ನಲ್ಲೂ ಒಂದಷ್ಟು ಸೌಂಡು ಮಾಡೋಕೆ ಹೊರಟಿದ್ದಾರೆ. ಅಂದಹಾಗೆ, ಫೆಬ್ರವರಿ ೧೯ರಂದು ಧ್ರುವಸರ್ಜಾ ಅಭಿನಯದ “ಪೊಗರು” ರಿಲೀಸ್‌ ಆಗುತ್ತಿದೆ.

ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಹಾಗೆ ನೋಡಿದರೆ, ಈ ಚಿತ್ರ, ಲಾಕ್ ಡೌನ್ ಮುಂಚೆಯೇ ಬಿಡುಗಡೆಯಾಗಬೇಕಿತ್ತು. ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಚಿತ್ರ ತಡವಾಗಿದ್ದು, ಈಗ ಬಿಡುಗಡೆಗೆ ದಿನ ಎಣಿಸುತ್ತಿದೆ ಚಿತ್ರತಂಡ. ಅಂದಹಾಗೆ, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಟೀಚರ್ ಪಾತ್ರ ಮಾಡಿದ್ದಾರೆ. ಅದೊಂದು ಹಳ್ಳಿ ಹುಡುಗಿಯಾಗಿ, ಟ್ರೆಡಿಶನಲ್ ಲುಕ್ನಲ್ಲಿ ತೆರೆ ಮೇಲೆ ಕಾಣಿಸ್ಕೊತಿದ್ದಾರೆ.

ಪುರೋಹಿತರ ಮಗಳಾಗಿ ನಟಿಸುತ್ತಿರುವ ಅವರು, ಒಂದು ಪ್ರೀತಿಗೆ ಸಿಲುಕುತ್ತಾರೆ. ನಂತರ ಅವರಿಗೆ ಆಗುವಂತಹ ಸಮಸ್ಯೆ ಏನು ಎಂಬುದೇ ಚಿತ್ರದ ಕಥಾಹಂದರ. ಸದ್ಯಕ್ಕೆ ಜೋರು ಸುದ್ದಿಯಲ್ಲಿರುವ ರಶ್ಮಿಕಾ ಅವರಿಗೂ “ಪೊಗರು” ಮೇಲೆ ಎಲ್ಲಿಲ್ಲದ ಭರವಸೆ ಇದೆ. ಸಿನಿಮಾ ದೊಡ್ಡ ಹಿಟ್‌ ಕೊಡುತ್ತದೆ ಎಂಬ ವಿಶ್ವಾಸವೂ ಅವರಿಗಿದೆ. ಇನ್ನು, ಅವರಿಗೆ ಹೊಸ ತಂಡದವರ ಜೊತೆ ಕೆಲಸ ಮಾಡುವುದು ಸಿಕ್ಕಾಪಟ್ಟೆ ಖುಷಿಯಂತೆ. “ಪೊಗರು” ಚಿತ್ರದಲ್ಲಿ ಸಾಕಷ್ಟು ಕಲಿತ ಬಗ್ಗೆ ಹೇಳುವ ರಶ್ಮಿಕಾ ಮಂದಣ್ಣ, ಒಂದೊಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ಹೆಮ್ಮೆ ನನ್ನದು ಎನ್ನುತ್ತಾರೆ.

Related Posts

error: Content is protected !!