ಡಾಕ್ಟರ್‌ ಅಭಿಗೆ ಧ್ರುವ ಹಾರೈಕೆ

ಹೊಸಬರ ಹೊಸ ಚಿತ್ರದ ಫಸ್ಟ್‌ಲುಕ್‌ ರಿಲೀಸ್

ದಿನ ಕಳೆದಂತೆ ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಆ ಪೈಕಿ “ಡಾ. |ಅಭಿ ೦೦7” ಚಿತ್ರವೂ ಸೇರಿದೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್‌ ಅನ್ನು, ಧ್ರುವ ಸರ್ಜಾ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ಅಂದಹಾಗೆ, ಈ ಚಿತ್ರಕ್ಕೆ ವಿಷ್ಣು ಹೀರೋ. ಈ ಚಿತ್ರದ ಮೂಲಕ ವಿಷ್ಣು ಅವರು ಪೂರ್ಣ ಪ್ರಮಾಣದ ಹೀರೋ ಆಗಿ ಸಿನಿರಂಗ ಪ್ರವೇಶಿಸಿದ್ದಾರೆ. ‌ಈ ಹಿಂದೆ ದರ್ಶನ್‌ ಅಭಿನಯದ “ಜಗ್ಗುದಾದಾ” ಚಿತ್ರದಲ್ಲಿ ವಿಷ್ಣು ಕಾಣಿಸಿಕೊಂಡಿದ್ದರು. ಡಾಕ್ಟರ್‌ ಆಗಿರುವ ವೆಂಕಟೇಶ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಹಿಂದಿ ಹಾಗೂ ಇಂಗ್ಲೀಷ್ ಭಾಷೆಯ ಕೆಲವು ವೆಬ್‌ಸೀರಿಸ್ ಹಾಗೂ ಧಾರಾವಾಹಿಗಳಿಗೆ ಸಹಾಯಕ‌‌‌ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಇವರಿಗಿದೆ.‌‌ ಇದು ವೆಂಕಟೇಶ್ ಪ್ರಸಾದ್‌ಅವರ ಮೊದಲ ನಿರ್ದೇಶನದ ಚಿತ್ರ.

ಅಂದಹಾಗೆ, ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಮೂರು ‌ಹಾಡುಗಳಿಗೆ ಯು.ವಿ. ಸ್ಟೆವೆನ್‌ ಸತೀಶ್ ಸಂಗೀತ ನೀಡಲಿದ್ದಾರೆ. ಚೇತನ್ ಕುಮಾರ್ ಸಾಹಿತ್ಯವಿದೆ. ಇನ್ ಫೆಂಟ್ ಭರತ್ ಕ್ಯಾಮೆರಾ ಹಿಡಿದರೆ, ಅರುಣ್ ರೈ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ಅರ್ಜುನ್ ರಾಜ್, ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.‌

ವಿಷ್ಣು ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾ ಬಳಗದಲ್ಲಿ ವರ್ಧನ್, ಅದ್ವಿತಿ ಶೆಟ್ಟಿ, ಪ್ರಿಯಾಂಕ ಅರೋರ, ವೀಣಾ ಸುಂದರ್, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್, ನಾಗೇಂದ್ರ ಅರಸ್, ಬಲ ರಾಜವಾಡಿ, ಐಶ್ವರ್ಯ, ಶರ್ಮಿಳಾ, ಸುಚಿತ್, ಕುರಿ ರಂಗ, ಡಾ. ಸುಮಿತ್ ತಲ್ವಾರ್ ಇತರರು ಇದ್ದಾರೆ. ಈಗಾಗಲೇ 35 ದಿನಗಳ ಕಾಲ‌ ಬೆಂಗಳೂರು, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಇನ್ನೂ 15‌ ದಿನಗಳ‌ ಚಿತ್ರೀಕರಣ ಬಾಕಿಯಿದೆ.

Related Posts

error: Content is protected !!