ಪಬ್ಲಿಕ್‌ ಟಾಯ್ಲೆಟ್‌ ತೊಳೆದಷ್ಟೂ ಕೊಳೆ- ಹೆಬ್ಬೂರು ಹುಡುಗನ ಮನ ಮಿಡಿಯೋ ಕಿರುಚಿತ್ರ

ಯಾಕಣ್ಣ… ಎಂಬ ಧ್ವನಿ ಹಿಂದಿನ ಗೋಳು!

ಸಾಮಾನ್ಯವಾಗಿ ಸಿನಿಮಾ ಅಂದಾಕ್ಷಣ, ಒಂದು ಕಲ್ಪನೆಯ ಕಥೆಯನ್ನೋ ಅಥವಾ ನೈಜ ಘಟನೆಯುಳ್ಳ ಕಥೆಯನ್ನೋ ಇಟ್ಟುಕೊಂಡು ಮಾಡುವುದು ಸಹಜ. ಅಂತಹ ಅನೇಕ ಸಿನಿಮಾಗಳು ಗೆಲುವು ಕಂಡಿರುವುದೂ ಉಂಟು. ಇನ್ನೂ ಕೆಲವರು ಒಂದಷ್ಟು ಸುದ್ದಿಯಾದ ಘಟನೆಗಳನ್ನೇ ಇಟ್ಟುಕೊಂಡು ತೆರೆಯ ಮೇಲೆ ತಂದಿದ್ದೂ ಉಂಟು. ಈಗ ರಾಜ್ಯಾದ್ಯಂತ ಸಖತ್‌ವೈರಲ್‌ ಆಗಿದ್ದ ಒಂದು ವಿಡಿಯೋ ಒಳಗಿನ ವಿಷಯ ಇಟ್ಟುಕೊಂಡೇ ಒಂದು ಕಿರುಚಿತ್ರ ಮಾಡಲಾಗಿದೆ.  ಫೆಬ್ರವರಿ 6ರಂದು ಆ ಕಿರುಚಿತ್ರ ಭವಾನಿ ಕ್ಯಾಪ್ಚರ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಅದೊಂದು ವಿಶೇಷ ಕಥಾವಸ್ತು ಇರುವ ಕಿರುಚಿತ್ರ. ಆ ಕಾರಣಕ್ಕೆ ಅದು ಸುದ್ದಿಗೆ ಅರ್ಹವಾದ ಕಿರುಚಿತ್ರವೂ ಹೌದು.

ಅಂದಹಾಗೆ, ಆ ಕಿರುಚಿತ್ರಕ್ಕೆ “ಪಬ್ಲಿಕ್‌ ಟಾಯ್ಲೆಟ್‌” ಎಂದು ನಾಮಕರಣ ಮಾಡಲಾಗಿದೆ. ಈ ಶೀರ್ಷಿಕೆಗೆ “ತೊಳೆದಷ್ಟೂ ಕೊಳೆ” ಎಂಬ ಅರ್ಥಪೂರ್ಣ ಅಡಿಬರಹವನ್ನೂ ಕೊಡಲಾಗಿದೆ. ಈ ಟೈಟಲ್‌ನಲ್ಲೇ ಒಂದೊಳ್ಳೆಯ ಕಥೆ ಇದೆ, ವ್ಯಥೆಯೂ ಇದೆ ಅನ್ನೋದು ಗೊತ್ತಾಗುತ್ತೆ. ಈ ಕಿರುಚಿತ್ರಕ್ಕೆ ನಾಗೇಶ್‌ ಹೆಬ್ಬೂರು ನಿರ್ದೇಶಕರು. ಕನ್ನಡ ಚಿತ್ರರಂಗದಲ್ಲಿ ಸರಿಸುಮಾರು ಒಂದು ದಶಕದಿಂದಲೂ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ತಾನೂ ಸ್ವತಂತ್ರ ನಿರ್ದೇಶಕನಾಗಬೇಕು ಎಂಬ ಹಂಬಲದಿಂದಲೇ ಒಂದೊಳ್ಳೆಯ ಕಂಟೆಂಟ್‌ ಇರುವ ಕಿರುಚಿತ್ರ ನಿರ್ದೇಶಿಸಿ, ಆ ಮೂಲಕ ಸೈ ಎನಿಸಿಕೊಂಡು, ನಿರ್ಮಾಪಕರನ್ನು ಹುಡುಕಿ ಸದಭಿರುಚಿಯ ಸಿನಿಮಾ ಮಾಡುವ ಉದ್ದೇಶ ನಾಗೇಶ್‌ ಹೆಬ್ಬೂರು ಅವರಿಗಿದೆ. ಅವರ “ಪಬ್ಲಿಕ್‌ಟಾಯ್ಲೆಟ್”‌ ಕುರಿತು ಸ್ವತಃ ಅವರೇ “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.

ನಾಗೇಶ್‌ ಹೆಬ್ಬೂರು, ನಿರ್ದೇಶಕ

“ಇತ್ತೀಚೆಗೆ ಒಂದು ಹೆಣ್ಣು ಮಗಳ ವಿಡಿಯೋವೊಂದು ಸಾಕಷ್ಟು ವೈರಲ್‌ ಆಗಿತ್ತು. ಅದು ಬೇರೇನೂ ಅಲ್ಲ, ತುಮಕೂರು ಜಿಲ್ಲೆಯಲ್ಲಿ ನಡೆದ ಒಂದು ಘಟನೆಯದು. ಒಂದು ಪಬ್ಲಿಕ್‌ ಟಾಯ್ಲೆಟ್‌ನಲ್ಲಿ ಮಹಿಳೆಯೊಬ್ಬಳು ಪರಪುರುಷನ ಜೊತೆ ಇರುವ ವೇಳೆ ಅಪರಿಚಿತನೊಬ್ಬ ಮೊಬೈಲ್‌ ಮೂಲಕ ವಿಡಿಯೋ ಮಾಡಲು ಮುಂದಾದಾಗ, ಆ ಮಹಿಳೆ, “ಯಾಕಣ್ಣಾ…” ಅಂತ ಮುಗ್ಧತೆಯಿಂದಲೇ ಪ್ರಶ್ನಿಸುತ್ತಾಳೆ. ಆ “ಯಾಕಣ್ಣಾ…” ಅನ್ನುವ ಧ್ವನಿಯಲ್ಲಿ ಒಂದು ಮನವಿ ಇತ್ತು. ಆದರೆ, ಆ ವಿಡಿಯೋ ಮಾಡಿದ ಅಪರಿಚಿತ, ತನ್ನ ಕಲ್ಮಶ ಮನಸ್ಸಲ್ಲೇ ಆ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿಬಿಟ್ಟ. ಗಂಟೆಗಳಲ್ಲೇ ಆ ವಿಡಿಯೋ ತುಂಬಾ ಫೇಮಸ್ ಆಯ್ತು. ಅಷ್ಟೇ ಅಲ್ಲ, ಆ ಮಹಿಳೆ ಹೇಳಿದ “ಯಾಕಣ್ಣಾ..” ಅನ್ನೋ ಪದ ಸಾಕಷ್ಟು ಟಿಕ್‌ಟಾಕ್‌ಗೂ ಬಳಕೆಯಾಯ್ತು. ಆ ಟಿಕ್‌ಟಾಕ್‌ಮೂಲಕ ಹಲವು ಯುವತಿಯರು, ಯುವಕರು ತಮ್ಮ ಖುಷಿಗೆ ಬಳಸಿಕೊಂಡರು.

ಆ ಬಳಿಕ “ಯಾಕಣ್ಣ ರೀಮಿಕ್ಸ್‌ ಸಾಂಗ್‌”, “ಯಾಕಣ್ಣ ಡಿಜೆ ಸೌಂಡ್‌”, “ಯಾಕಣ್ಣ ಅಭಿಮಾನಿಗಳ ಸಂಘ” ಕೂಡ ಆಗುವ ಮೂಲಕ ಆಕೆ ರಾತ್ರೋ ರಾತ್ರಿ ಆಕೆ ಮನೆ ಮಾತಾಗಿಬಿಟ್ಟಳು. ಪಡ್ಡೆಗಳ ಪಾಲಿಗೆ ಆಕೆ ತಮಾಷೆಯ ವಸ್ತುವಾಗಿಬಿಟ್ಟಳು. ಏನಿಲ್ಲವೆಂದರೂ ಆ ವಿಡಿಯೋ ಒಂದು ಕೋಟಿ ವೀಕ್ಷಣೆ ಪಡೆದಿದ್ದೇ ದೊಡ್ಡ ಸುದ್ದಿಯಾಯ್ತು. ಈ ಕಥೆಯ ಹಿಂದೆ ಒಂದು ವ್ಯಥೆಯ ಕಥೆ ಹುಡುಕಿದೆ. ಅಲ್ಲೊಂದು ಮಾನವೀಯತೆಯ ಕಥೆಯ ಎಳೆ ಸಿಕ್ಕಿತು. ಅದನ್ನಿಟ್ಟುಕೊಂಡೇ ಒಂದು ಕಿರುಚಿತ್ರ ಮಾಡಿದ್ದೇನೆ” ಎಂದು ವಿವರ ಕೊಡುತ್ತಾರೆ ನಿರ್ದೇಶಕ ನಾಗೇಶ್‌ ಹೆಬ್ಬೂರು.

ಆ ಶೌಚಾಲಯದೊಳಗೆ ಪರಪುರುಷನ ಜೊತೆ ಇದ್ದ ಆಕೆಯ ವಿಡಿಯೋ ಮಾಡಿ ಹರಿಬಿಟ್ಟ ವ್ಯಕ್ತಿಗೆ ಆ ಕ್ಷಣಕ್ಕೆ ಖುಷಿಯಾಗಿರಬಹುದು. ತಾನು ಮಾಡಿದ ವಿಡಿಯೋ ವೈರಲ್‌ ಆಗಿ, ಟಿಕ್‌ಟಾಕ್‌ ಕೂಡ ಆಗೋಗಿದೆ ಅಂತೆಲ್ಲಾ ಸಂಭ್ರಮ ಪಟ್ಟಿರಬಹುದು. ಆದರೆ, ಆಕೆಯ ಪರಿಸ್ಥಿತಿ ಏನಾಯ್ತು ಎಂಬುದರ ಅರಿವು ಆತನಿಗಿಲ್ಲವಂತಾಯ್ತು. ಆಕೆ ಎಲ್ಲೇ ಸಿಕ್ಕರೂ, ಜನರು ಮಾತನಾಡಿಸಿ, ವಿಡಿಯೋ ಮಾಡುವ ಖಯಾಲಿಗಿಳಿದರು. ಕೊನೆ ಕೊನೆಗೆ ಆಕೆಗೂ ಆ ವಿಡಿಯೋದ ಅರಿವಾಯಿತು. ಆಕೆ ನೊಂದಳು, ಬೆಂದಳು, ಮರುಗಿದಳು, ಕಣ್ಣೀರಾದಳು. ಕಣ್ಣೀರಿಡುತ್ತಲೇ ಆಕೆ ಹೇಳಿದ್ದು, “ನಾನು ಯಾರೋ ಮಾಡದಿರುವ ತಪ್ಪು ಮಾಡಿಲ್ಲ. ಹೊಟ್ಟೆಗಾಗಿ ಮಾಡಿದೆ. ಈಗ ನೋಡಿದರೆ, ಯಾರೋ ವಿಡಿಯೋ ಮಾಡಿ, ತಿನ್ನುವ ಅನ್ನಕ್ಕೂ ಕಲ್ಲುಹಾಕಿದ್ದಾರೆ” ಅಂತ ಮನಕಲಕುವ ಆ ದೃಶ್ಯ ಕೂಡ ವೈರಲ್‌ ಆಗೋಯ್ತು. ನಾನೂ ಅದನ್ನೆಲ್ಲಾ ನೋಡಿದ್ದರಿಂದ ನನ್ನೊಳಗೊಂದು ಕಥೆ ಹುಟ್ಟುಕೊಂಡಿತು.

ಆಕೆಯ ವಿಡಿಯೋ ಮಾಡಿದ ವ್ಯಕ್ತಿ ಆಕೆಯ ಗೋಳು ನೋಡಿದ ಮೇಲೆ ಹೇಗೆಲ್ಲಾ ಪಶ್ಚಾತ್ತಾಪ ಪಟ್ಟಿರಬಹುದು ಅನ್ನುವುದನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಇದು ಆಕೆಯ ಕಥೆಯಂತೂ ಅಲ್ಲ. ಇಡೀ ಕಥೆಯಲ್ಲಿ ಅವಳಿಗೆ ಕ್ಯಾಮೆರಾವನ್ನೂ ಹಿಡಿದಿಲ್ಲ. ಆದರೆ, ಅವಳಿಗೆ ಮೊಬೈಲ್‌ ಕ್ಯಾಮೆರಾ ಹಿಡಿದವನ ಮೇಲೆ ಕ್ಯಾಮೆರಾ ಹಿಡಿಯಲಾಗಿದೆ. ಅವನು ಯಾರೂ ಅನ್ನೋದೇ ಜಗತ್ತಿಗೆ ಗೊತ್ತಿಲ್ಲ. ಅವನು ಯಾಕೆ ಆ ವಿಡಿಯೋ ಮಾಡಿ ಹರಿಬಿಟ್ಟ, ಆ ಕ್ಷಣಕ್ಕೆ ಮಾಡಿದನಾದರೂ ಆಮೇಲೆ ಅವನ ಮನಸ್ಥಿತಿ ಹೇಗಿರಬಹುದು ಅನ್ನೋದು ಕಥೆ. ಎಲ್ಲರಿಗೂ ಗೊತ್ತಿರುವ ಕಥೆಯನ್ನು ಗೊತ್ತಿರದ ದೃಷ್ಟಿಕೋನದಲ್ಲಿ ಮಾಡಲಾಗಿದೆ” ಎಂಬುದು ಅವರ ಮಾತು.

ಇಷ್ಟಕ್ಕೂ ನಾನು ಈ ಕಥೆ ಆಯ್ಕೆ ಮಾಡಿಕೊಳ್ಳೋಕೆ ಕಾರಣ, ನಾನೊಬ್ಬ ನಿರ್ದೇಶಕನಾಗಬೇಕು. ನಾನು ಏನು ಅಂತ ಸಾಬೀತುಪಡಿಸಿಕೊಳ್ಳಬೇಕು ಅನ್ನೋದು. ನಾನೀಗ ಕೈಗೆತ್ತಿಕೊಂಡ ಸಬ್ಜೆಕ್ಟ್‌ ಮೇಲೆ ವಿಶ್ವಾಸವಿದೆ. ಗೊತ್ತಿರುವ ಕಂಟೆಂಟ್‌ ಅನ್ನು ಹೇಗೆ ತೋರಿಸ್ತಾರೆ. ಆಕೆಯನ್ನು ತೋರಿಸದೆ, ಹೇಗೆ ಮಾಡಬಹುದು. ನಾನು ಸಾಬೀತುಪಡಿಸಿಕೊಳ್ಳೋಕೆ ಈ ಕಥೆ ಚೆನ್ನಾಗಿದೆ ಅನಿಸಿತು. ನಾನು ಮೇಕಿಂಗ್‌ನಲ್ಲಿ ಎಲ್ಲೂ ಕಾಂಪ್ರಮೈಸ್‌ ಆಗಲಿಲ್ಲ. ರಿಯಲ್‌ ಪಾತ್ರದಂತೇ ಇರುವ ಒಬ್ಬ ಜೂನಿಯರ್‌ ಅರ್ಟಿಸ್ಟ್‌ ಪವಿ ಎಂಬುವವರನ್ನು ಕರೆಸಿ, ಕ್ಯಾಮೆರಾ ಮುಂದೆ ನಿಲ್ಲಿಸಿ ಚಿತ್ರೀಕರಿಸಲಾಗಿದೆ. ಆಕೆ ಆ ಪಾತ್ರ ಮಾಡುವ ಮುನ್ನ, ರಿಯಲ್‌ ಹೆಣ್ಣುಮಗಳ ಕಥೆ ವ್ಯಥೆ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಕುರಿತು ತೋರಿಸಿದ ಬಳಿಕ ಪವಿ ನಾನು ಮಾಡ್ತೀನಿ ಅಂತ ಒಪ್ಪಿದರು. ಇನ್ನು, ಚಿತ್ರಕ್ಕೆ ಅಭಿಷೇಕ್‌ ಕಾಸರಗೋಡು ಕ್ಯಾಮೆರಾ ಹಿಡಿದಿದ್ದಾರೆ. ಶ್ರೀಕಾಂತ್‌ ಸಂಕಲನ ಮಾಡಿದ್ದಾರೆ.

ಹರ್ಷವರ್ಧನ್‌ ಸಂಗೀತವಿದೆ. ರಘುನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಕಾಣಿ ಸ್ಟುಡಿಯೋದವರು ಪೋಸ್ಟರ್‌ ಡಿಸೈನ್‌ ಮಾಡಿಕೊಟ್ಟಿದ್ದಾರೆ. ಇವರೆಲ್ಲರೂ ನನ್ನ ಪ್ರೀತಿಗಾಗಿ ಕೆಲಸ ಮಾಡಿದ್ದಾರೆ. ಇನ್ನು, ರಂಗಭೂಮಿ ಪ್ರತಿಭೆ ಶ್ವೇತಾ ಇಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ “{ಫ್ರೆಂಚ್‌ ಬಿರಿಯಾನಿ” ಖ್ಯಾತಿಯ ಮಹಾಂತೇಶ, ಸೇರಿದಂತೆ ಇತರರು ಸಾಥ್‌ ನೀಡಿದ್ದಾರೆ. ಇಲ್ಲಿ ಪ್ರಮುಖ ಪಾತ್ರವೊಂದಿದೆ. ಅದನ್ನು ಕಿರುಚಿತ್ರದಲ್ಲೇ ನೋಡಬೇಕು. ಇಡೀ ಕಿರುಚಿತ್ರವನ್ನು ಐದು ದಿನಗಳ ಕಾಲ ಚಿತ್ರೀಕರಿಸಿದ್ದು, ನಾಗರಭಾವಿಯಲ್ಲಿರುವ ಮಾಳಗಾಳ ಗ್ರಾಮದಲ್ಲಿ ಶೂಟಿಂಗ್‌ ನಡೆಸಲಾಗಿದೆ. ಅಲ್ಲೊಂದು ಆಲದ ಮರವಿದೆ. ಬಂಡೆ ಮಾರಮ್ಮ ಬಸ್‌ಸ್ಟಾಪ್‌ ಬಳಿ ಇರುವ ಟಾಯ್ಲೆಟ್‌ನಲ್ಲಿ ಚಿತ್ರೀಕರಿಸಲಾಗಿದೆ. ನಾನು ಈ ಕಿರುಚಿತ್ರ ಮಾಡಲು ಹೊರಟಾಗ ಜೇಬಲ್ಲಿ ಕೇವಲ ನಾಲ್ಕು ಸಾವಿರ ಮಾತ್ರ ಹಣವಿತ್ತು. ನನ್ನ ಕಥೆ ಕೇಳಿದ ರಘುನಿಡುವಳ್ಳಿ, ಒಬ್ಬ ಬಳಿ ಕರೆದುಕೊಂಡು ಹೋದರು. ಅವರು ಕೂಡ ಮಹಿಳಾ ಪ್ರಧಾನ ಕಥೆ ಆಧರಿತ ಕಿರುಚಿತ್ರ ಮಾಡುವ ಉದ್ದೇಶ ಹೊಂದಿದ್ದರು. ಅವರಿಗೆ ಕಥೆ ಇಷ್ಟವಾಯ್ತು.  ಈ ಕಿರುಚಿತ್ರವನ್ನು ಸಿನಿಮಾ ರೇಂಜ್‌ನಲ್ಲೇ ಮಾಡಿದರು. ಒಂದು ಸೂಕ್ಷ್ಮ ವಿಷಯ ಇಟ್ಟುಕೊಂಡೇ ಕಿರುಚಿತ್ರ ಮಾಡಿದ್ದೇನೆ. ಇಷ್ಟರಲ್ಲೇ ಒಂದು ಟೀಸರ್‌ ಬಿಡುಗಡೆಯಾಗಲಿದೆ. ನಂತರ ಕಿರುಚಿತ್ರ ಬಿಡುಗಡೆಯಾಗಲಿದೆ. ಜನರು ಟೀಸರ್‌ ನೋಡಿ ನನ್ನನ್ನು ಬೈಕೋಬಹುದು. ಆದರೆ, ಕಿರುಚಿತ್ರ ನೋಡಿದಾಗ, ನನ್ನ ಪ್ರಯತ್ನ ಏನು, ಯಾವ ವಿಷಯ ಹೇಳಲು ಹೊರಟಿದ್ದೇನೆ ಅನ್ನೋದು ಗೊತ್ತಾಗುತ್ತೆ ಅನ್ನುತ್ತಾರೆ  ನಾಗೇಶ್‌ ಹೆಬ್ಬೂರು.

Related Posts

error: Content is protected !!