ʼಪೊಗರುʼ ನಂತರ ಕನ್ನಡದಲ್ಲಿ ನಟಿ ರಶ್ಮಿಕಾ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಯಾವುದು?

ಆಗಸ್ಟ್‌ ವರೆಗೂ ಕನ್ನಡದವರಿಗೆ ಸಿಗಲ್ಲ ಅಂದ್ರು ʼಕಿರಿಕ್‌ ಪಾರ್ಟಿʼ ಚೆಲುವೆ ರಶ್ಮಿಕಾ ಮಂದಣ್ಣ

ʼಕಿರಿಕ್‌ ಪಾರ್ಟಿʼ ಚಿತ್ರದ ಖ್ಯಾತಿಯ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿ ಆಗಿ ಅಭಿನಯಿಸಿರುವ “ಪೊಗರುʼ ಚಿತ್ರ ಇದೇ ತಿಂಗಳು ೧೯ ರಂದು ಭರ್ಜರಿಯಾಗಿ ತೆರೆ ಕಾಣುತ್ತಿದೆ. “ಯಜಮಾನʼ ಚಿತ್ರದ ನಂತರ ರಶ್ಮಿಕಾ ಇದೇ ಮೊದಲು ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೀಗ ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌ ಅಂತೆಲ್ಲ ಬ್ಯುಸಿ ಇರುವ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಮತ್ತೆ ಯಾವ ಸ್ಟಾರ್‌ ಜತೆಗೆ ಕಾಣಸಿಕೊಳ್ಳಬಹುದು? ಅವರ ಮುಂದಿನ ಸಿನಿಮಾ ಯಾವುದು ? ಸಿನಿ ಪ್ರೇಕ್ಷಕರಿಗೆ ಇಂತಹ ಕುತೂಹಲ ಇರುವುದು ಸಹಜವೇ. ಆದರೆ ಮುಂದಿನ ಆರು ತಿಂಗಳ ಕಾಲ ಅವರು ಕನ್ನಡಕ್ಕೆ ಲಭ್ಯ ಇಲ್ಲ. ಹಾಗೊಂದು ವೇಳೆ ಅವರು ಕನ್ನಡದಲ್ಲಿ ಯಾವುದಾದರೂ ಸಿನಿಮಾ ಒಪ್ಪಿಕೊಂಡು ಮತ್ತೆ ಇಲ್ಲಿ ಕಾಣಸಿಕೊಳ್ಳುವುದಾದರೆ ಅದು ಆಗಸ್ಟ್‌ ತಿಂಗಳ ನಂತರವೇ ಅಂತೆ. ಅಂತಹದೊಂದು ಸಂಗತಿಯನ್ನು ನಟಿ ರಶ್ಮಿಕಾ ಮಂದಣ್ಣ ಅವರೇ ರಿವೀಲ್‌ ಮಾಡಿದ್ದಾರೆ.

“ಪೊಗರುʼ ಚಿತ್ರದ ರಿಲೀಸ್‌ ಪ್ರಮೋಷನ್‌ ಹಿನ್ನೆಲೆಯಲ್ಲಿ ಶನಿವಾರ “ಮೀಟ್‌ ದಿ ಮೀಡಿಯಾʼ ಕಾರ್ಯಕ್ರಮದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದರು. ʼಪೊಗರುʼ ನಂತರ ಕನ್ನಡದಲ್ಲಿ ನಿಮ್ಮ ಮುಂದಿನ ಪ್ರಾಜೆಕ್ಟ್‌ ಯಾವುದು ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ಸದ್ಯಕ್ಕೆ ನಾನು ಒಪ್ಪಿಕೊಂಡ ಪ್ರಾಜೆಕ್ಟ್ ಶೆಡ್ಯೂಲ್‌ ಪ್ರಕಾರ ಜುಲೈ – ಆಗಸ್ಟ್‌ ತಿಂಗಳವರೆಗೂ ಯಾವುದೇ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಸಮಯ ಇಲ್ಲ. ಅದುವರೆಗೂ ನಾನು ಶೂಟಿಂಗ್‌ ಜಾಮ್‌ ಪ್ಯಾಕ್.‌ ಅವೆಲ್ಲ ಮುಗಿಯೋದಿಕ್ಕೆ ಕನಿಷ್ಟ ಆರು ತಿಂಗಳು ಬೇಕೇ ಬೇಕು. ಆಮೇಲೆ ಸಮಯ ಸಿಕ್ಕಾಗ ಕನ್ನಡದಲ್ಲಿ ಕಥೆ ಕೇಳಿ, ಹೊಸ ಪ್ರಾಜೆಕ್ಟ್‌ ಒಪ್ಪಿಕೊಳ್ಳೋಣ ಅಂದುಕೊಂಡಿದ್ದೇನೆʼ ಎನ್ನುತ್ತಾರೆ ರಶ್ಮಿಕಾ.

ಹಾಗಾದ್ರೆ ಕನ್ನಡಕ್ಕೆ ನೀವು ʼದುಬಾರಿʼಯಾದ್ರಾ ಎನ್ನುವ ಮತ್ತೊಂದು ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ ರೀತಿಯೇ ಅದ್ಭುತ. ” ಅಯ್ಯೋ, ನಾನು ಕನ್ನಡತಿ. ಇಲ್ಲಿಯೇ ನಂಗೆ ನೇಮ್-ಫೇಮ್‌ ಸಿಕ್ಕಿದ್ದು. ಇಲ್ಲಿ ನಾನು ಅಭಿನಯಿಸುವುದಿಲ್ಲ ಎನ್ನುತ್ತೇನಾ? ಸದ್ಯಕ್ಕೀಗ ಬೇರೆ ಬೇರೆ ಭಾಷೆಯ ಸಿನಿಮಾಗಳ ಅವಕಾಶ ಬಂದಿವೆ. ಆ ಸಿನಿಮಾಗಳ ಶೂಟಿಂಗ್‌ ಶೆಡ್ಯೂಲ್‌ ಕೊಟ್ಟಿದ್ದೇನೆ. ಹಾಗಾಗಿ ಕನ್ನಡದಲ್ಲಿನ ಆಫರ್ ಗಳ ಬಗ್ಗೆ ಹೆಚ್ಚು ಗಮನ ನೀಡಲು ಆಗುತ್ತಿಲ್ಲವಷ್ಟೇ. ಮುಂದೆ ಅದಕ್ಕಾಗಿಯೇ ಒಂದಷ್ಟು ಸಮಯ ಫಿಕ್ಸ್‌ ಮಾಡಿಕೊಳ್ಳುತ್ತಿದ್ದೇನೆ. ಆಗ ಯಾವುದಾದರೂ ಒಳ್ಳೆಯ ಕತೆ ಸಿಕ್ಕರೆ ಖಂಡಿತಾ ಇಲ್ಲಿ ನಟಿಸುತ್ತೇನೆʼ ಎನ್ನುತ್ತಾರೆ ರಶ್ಮಿಕಾ ಮಂದಣ್ಣ.

Related Posts

error: Content is protected !!