ಉತ್ಸಾಹದಲ್ಲಿ ಹೊಸಬರು
ಕಳೆದ ಜನವರಿಯಲ್ಲಿ ಮಹೂರ್ತ ಕಂಡಿದ್ದ “ಧೀರ ಸಾಮ್ರಾಟ್” ಈಗ ಚಿತ್ರೀಕರಣ ಮುಗಿಸಿದ ಖುಷಿಯಲ್ಲಿದೆ.
ಹೌದು, ಬಹುತೇಕ ಹೊಸಬರೇ ಸೇರಿ ಮಾಡಿದ ಈ ಚಿತ್ರ ಇತ್ತೀಚೆಗೆ ಕುಂಬಳಕಾಯಿ ಒಡೆದಿದೆ.
ಅಂದಹಾಗೆ, ಖಾಸಗಿ ವಾಹಿನಿಯಲ್ಲಿ ನಿರೂಪಕನಾಗಿ ಸಾಕಷ್ಟು ಅನುಭವ ಹೊಂದಿರುವ ಪವನ್ ಕುಮಾರ್ (ಪಚ್ಚಿ ) ಈ ಸಿನಿಮಾಗೆ ನಿರ್ದೇಶಕರು.
ಸುಮಾರು 45 ದಿನಗಳ ಚಿತ್ರೀಕರಣ ನಡೆಸಿದ ಚಿತ್ರತಂಡ, ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿದೆ. ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನದಲ್ಲಿ ಸಾಹಸಮಯ ದೃಶ್ಯಗಳ ಚಿತ್ರೀಕರಣ ನಡೆಸಿದ ಚಿತ್ರತಂಡ, ನಗರದ ಹೊರ ಭಾಗದಲ್ಲಿ ನಡೆದ ಕೊನೆ ದಿನದ ಚಿತ್ರೀಕರಣದಲ್ಲಿ ಸಿನೆಮಾದ ನಾಯಕನ ತಂಡ ಮತ್ತು ಖಳನಾಯಕನ ಮಧ್ಯೆ ಜಿದ್ದಾಜಿದ್ದಿನ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವ ಮೂಲಕ ಚಿತ್ರೀಕರಣ ಮುಗಿಸಿದೆ. ತನ್ವಿ ಪ್ರೊಡಕ್ಷನ್ ಬ್ಯಾನರ್ ನಡಿಯಲ್ಲಿ ಉತ್ತರ ಕರ್ನಾಟಕದ ಗುರು ಬಂಡಿ ಚಿತ್ರದ ನಿರ್ಮಾಪಕರು.
ಒಳ್ಳೆಯ ಸಿನಿಮಾ ಕೊಡಬೇಕು ಎಂಬ ಉದ್ದೇಶದಿಂದ ಹೊಸಬರ ತಂಡದ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಹಾಡುಗಳಿಗೆ ಮುರಳಿ ಮಾಸ್ಟರ್ ಮತ್ತು ಕಿಶೋರ್ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಮೊದಲ ಭಾಗದ ಚಿತ್ರೀಕರಣದಲ್ಲಿ ವೀರೇಶ್ ಎನ್ ಟಿ ಎ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದರೆ, ಎರಡನೇ ಭಾಗದ ಚಿತ್ರೀಕರಣಕ್ಕೆ ಅರುಣ್ ಸುರೇಶ್ ಕ್ಯಾಮೆರಾ ಹಿಡಿದಿದ್ದಾರೆ. ಎ. ಆರ್. ಸಾಯಿರಾಂ ಸಂಭಾಷಣೆ ಬರೆದಿರೋ ಈ ಸಿನಿಮಾದಲ್ಲಿ ನಿರ್ದೇಶಕ ಪವನ್ ಕುಮಾರ್ ಕೂಡ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.
ಆರಂಭದಲ್ಲಿ ಆಕ್ಷನ್ ಪ್ರಿನ್ಸ್ ಧೃವ ಸರ್ಜಾಅವರು ಚಿತ್ರಕ್ಕೆ ಕ್ಲಾಪ್ ಮಾಡಿದ್ದರು. ವಿ.ನಾಗೇಂದ್ರ ಪ್ರಸಾದ್ ಮತ್ತು “ಭರ್ಜರಿ” ಚೇತನ್ ಕುಮಾರ್ ಹಾಡುಗಳನ್ನು ಬರೆದಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.
ರಾಕೇಶ್ ಬಿರಾದರ್ ಮತ್ತು ಅದ್ವಿತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ.
ಉಳಿದಂತೆ ಬಲರಾಜ್ ವಾಡಿ, ನಾಗೇಂದ್ರ ಅರಸ್, ಶೋಭರಾಜ್, ಶಂಕರ್ ಭಟ್, ರವೀಂದ್ರನಾಥ್, ರಮೇಶ್ ಭಟ್, ಮಂಡ್ಯ ಚಂದ್ರು, ಮನಮೋಹನ್ ರೈ, ಯತಿರಾಜ್ , ಸಂಕಲ್ಪ್, ರವಿ, ಗಿರಿಧರ್, ಹರೀಶ್ ಅರಸು, ಇಂಚರ, ಜ್ಯೋತಿ ಮುರೂರ್ ಅಭಿನಯಿಸಿದ್ದಾರೆ. ರಾಘವ್ ಸುಭಾಷ್ ಸಂಗೀತ ನೀಡಿದ್ದು, ಸತೀಶ್ ಚಂದ್ರಯ್ಯ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.