ಸುಂದರಣ್ಣನಿಗೆ ಎಪ್ಪತ್ತು ತುಂಬಿತು!

ನಟ ಸುಂದರ್ ರಾಜ್ ಅವರಿಗೆ ಇಂದು ಎಪ್ಪತ್ತು ತುಂಬಿತು. ಹವ್ಯಾಸಿ ರಂಗಭೂಮಿಯಿಂದ ನಟನೆ ಆರಂಭಿಸಿದ ಸುಂದರಣ್ಣ ಬೆಳ್ಳಿತೆರೆಗೆಪರಿಚಯವಾಗಿದ್ದು ‘ಕಾಡು’ ಚಿತ್ರದೊಂದಿಗೆ. ಅವರು ಸಿನಿಮಾಗೆ ಪರಿಚಯವಾಗಿ ಬರೋಬ್ಬರಿ ನಲವತ್ನಾಲ್ಕು ವರ್ಷ!

– ಶಶಿಧರ
ಭಾರತೀಯ ರಂಗಭೂಮಿ ಕಂಡ ಶ್ರೇ‍ಷ್ಠ ರಂಗಕರ್ಮಿ ಬಿ.ವಿ.ಕಾರಂತರ ಗರಡಿಯಲ್ಲಿ ಪಳಗಿದ ನಟ ಸುಂದರ್‌ರಾಜ್‌. ಹವ್ಯಾಸಿ ರಂಗಭೂಮಿಯಲ್ಲಿನಟಿಸುತ್ತಿದ್ದ ಅವರು ‘ಕಾಡು’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದರು. ಮುಂದೆ ಸಾಲು, ಸಾಲು ಚಿತ್ರಗಳ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸುತ್ತಾ ಬಂದ ಸುಂದರ್‌ ಹತ್ತಾರು ವಿಶಿಷ್ಠ ಪಾತ್ರಗಳೊಂದಿಗೆ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ.ಚೋಮನದುಡಿ, ತಬ್ಬಲಿಯು ನೀನಾದೆ ಮಗನೆ, ಒಂದಾನೊಂದು ಕಾಲದಲ್ಲಿ, ಅನ್ವೇಷಣೆ, ತಪ್ಪಿದ ತಾಳ, ಸಂಕ್ರಾಂತಿ, ಚಂದನದ ಗೊಂಬೆ, ಪ್ರಾಯ ಪ್ರಾಯ ಪ್ರಾಯ.. ಹೀಗೆ ಹಲವು ಸಿನಿಮಾಗಳಲ್ಲಿ ಸುಂದರ್ ರಾಜ್ ಪಾತ್ರಗಳು ನೆನಪಾಗುತ್ತವೆ.

‘ಲಿಫ್ಟ್‌ಮ್ಯಾನ್‌’ ಅವರ ಇನ್ನೂರನೇ ಸಿನಿಮಾ.

ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಬಹುದಿನಗಳ ನಂತರ ಮೊನ್ನೆ ‘ಸಿರಿ’ ಚಿತ್ರದ ಪಾತ್ರವೊಂದರಲ್ಲಿ ನಟಿಸಿರುವ ಸುಂದರ್‌ರಾಜ್‌ ಮುಂದಿನ ವಾರ ‘ಜೋಕುಮಾರಸ್ವಾಮಿ’ ನಾಟಕದಲ್ಲಿ ಪಾತ್ರ ಮಾಡಲಿದ್ದಾರೆ.
“ಹೀಗೆ ನಟಿಸುತ್ತಲೇ ಇರಬೇಕು. ಮೊದಲು ಎರಡು-ಮೂರು ದಿನಗಳ ಕಾಲ್‌ಶೀಟ್‌ ಪಾತ್ರಗಳಿಗೆ ಕೇಳುತ್ತಿದ್ದರು. ಈಗ ನನ್ನ ವಯಸ್ಸಿಗೆ ಹೊಂದುವಂತಹ ಚಿತ್ರವಿಡೀ ದುಡಿಸಿಕೊಳ್ಳುವ ಪಾತ್ರಗಳು ಬರುತ್ತಿವೆ. ಇದು ಖುಷಿಯ ಸಂಗತಿ” ಎನ್ನುವ ಅವರಿಗೆ ಕಳೆದ ವರ್ಷ ದುಃಖ ತಂದಿತು. ಅಳಿಯ ಚಿರಂಜೀವಿ ಸರ್ಜಾ ಅವರನ್ನುಕಳೆದುಕೊಂಡರು. “ಇದೇ ಬದುಕು. ಕಷ್ಟಗಳು ನಮ್ಮನ್ನು ದೃಢಗೊಳಿಸುತ್ತವೆ” ಎಂದು ಅನುಭಾವಿಯಾಗುತ್ತಾರವರು.

ಸಿನಿಮಾ – ಬದುಕಿನಲ್ಲಿ ಸುಂದರ್ ರಾಜ್‌ ವಿಶಿಷ್ಟ ಅನುಭವಗಳಿಗೆ ಸಾಕ್ಷಿಯಾಗಿದ್ದಾರೆ. ತಮ್ಮ ವೃತ್ತಿ ಬದುಕಿನ ಪ್ರಮುಖ ಪಾತ್ರಗಳಲ್ಲೊಂದಾದ‘ಅನ್ವೇಷಣೆ’ ಪಾತ್ರವನ್ನು ಅವರು ನೆನಪು ಮಾಡಿಕೊಳ್ಳುತ್ತಾರೆ. ಪಾತ್ರ ನಿರ್ವಹಣೆಯಲ್ಲಿನ ನಟನ ಸಂಕಷ್ಟಗಳನ್ನು ಹೇಳುತ್ತಲೇ, ಪಾತ್ರದ ಯಶಸ್ಸು ಹೇಗೆ ನಟನಿಗೆ ಗೌರವ ತಂದುಕೊಡುತ್ತದೆ ಎನ್ನುವುದನ್ನು ಈ ಘಟನೆ ಹೇಳುತ್ತದೆ. ಇದನ್ನು ಅವರ ಮಾತುಗಳಲ್ಲೇ ಕೇಳಿದರೆ ಚೆನ್ನ. ಸುಂದರ್ ರಾಜ್ ಹೇಳುತ್ತಾರೆ –

“ಟಿ.ಎಸ್.ನಾಗಾಭರಣ ನಿರ್ದೇಶನದ `ಅನ್ವೇಷಣೆ’ (1983) ಚಿತ್ರದ ಶೂಟಿಂಗ್‍ನ ಅಚಾತುರ್ಯ ಕಣ್ಣಿಗೆ ಕಟ್ಟಿದಂತಿದೆ.
ಬೆಂಗಳೂರು ಗಾಂಧಿ ಬಜಾರ್‍ನ ರಸ್ತೆಯ ವಠಾರವೊಂದರಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅನಂತನಾಗ್, ಹಿಂದಿ ತಾರೆ ಸ್ಮಿತಾ ಪಾಟೀಲ್, ಗಿರೀಶ್ ಕಾರ್ನಾರ್ಡ್‍ರಂಥ ಮೇರು ಕಲಾವಿದರು ಅಭಿನಯಿಸುತ್ತಿದ್ದ ಚಿತ್ರವಿದು. ಚಿತ್ರದಲ್ಲಿ ನನಗೆ ನಿರುದ್ಯೋಗಿ ಉಡಾಫೆ ಯುವಕನ ಪಾತ್ರ. ಯಾರೂ ಇಲ್ಲದ ಹೊತ್ತಿನಲ್ಲಿ ಮನೆಗಳಿಗೆ ನುಗ್ಗಿ ಐಷಾರಾಮಿ ಬದುಕು ಅನುಭವಿಸುವಂತೆ ಈ ಪಾತ್ರವನ್ನು ಚಿತ್ರಿಸಲಾಗಿತ್ತು.

ಹಾಗೆ ಒಂದು ದಿನ ನಾನು ಅನಂತ್ -ಸ್ಮಿತಾ ಅವರ ವಠಾರದ ಮನೆಗೆ ನುಗ್ಗಿರುತ್ತೇನೆ. ಮತ್ತೊಂದೆಡೆ ಗಿರೀಶ್ ಕಾರ್ನಾಡ್
ಅವರದ್ದು ಚಿತ್ರದಲ್ಲಿ ಪೋಷಕ ಪಾತ್ರ. ನಾನು ಅವರ ಪುತ್ರಿಯನ್ನು ಚುಡಾಯಿಸುತ್ತಿರುತ್ತೇನೆ. ನಾನು ವಠಾರದಲ್ಲಿರುವ ವಿಚಾರ ತಿಳಿಸುತ್ತಿದ್ದಂತೆ, ಕಾರ್ನಾಡ್ ಅಲ್ಲಿಗೆ ಬರುತ್ತಾರೆ. ಮಗಳ ವಿಚಾರಕ್ಕೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆಯುತ್ತದೆ. ಕಾರ್ನಾಡ್ ಲೋಹದ ವಿಗ್ರಹವೊಂದರಿಂದ ನನ್ನ ತಲೆಗೆ ಒಡೆದಾಗ ನಾನು ಅಸುನೀಗುತ್ತೇನೆ! ಅಲ್ಲಿಂದ ಮುಂದೆ ನಾನು ಹೆಣ. ಈ ಶವವನ್ನು ವಠಾರದಿಂದ ಹೇಗೆ ಹೊರತೆಗೆಯುತ್ತಾರೆ ಎನ್ನುವುದೇ ಕಥಾಹಂದರ.

ಹೆಣವಾದ ನನ್ನನ್ನು ಹೊರಗಡೆ ಸಾಗಿಸುವ ಜವಾಬ್ದಾರಿ ಅನಂತ್, ಸ್ಮಿತಾ ಮತ್ತು ಕಾರ್ನಾರ್ಡ್‍ರ ಹೆಗಲೇರುತ್ತದೆ. ಮೂವರೂ ಗೋಣಿಚೀಲದಲ್ಲಿ ನನ್ನನ್ನು (ಹೆಣ) ಹಾಕಿ ಕಟ್ಟುತ್ತಾರೆ. ನಿರ್ದೇಶಕರು ಆ್ಯಕ್ಷನ್ ಹೇಳುತ್ತಿದ್ದಂತೆ ಚೀಲದೊಳಗಿನ ನಾನು ಉಸಿರು ಬಿಗಿಹಿಡಿಯಬೇಕು. ನಿರ್ದೇಶಕರು ಆ್ಯಕ್ಷನ್ ಹೇಳಿದ ಏಳೆಂಟು ಸೆಕೆಂಡ್‍ಗಳಲ್ಲೇ ನನಗೆ ಮೈಯೆಲ್ಲಾ ಚುಚ್ಚಿದ ಅನುಭವ! ಕೂಗಿದರೆ ದೊಡ್ಡ ಕಲಾವಿದರ ಎದುರು ಅವಮಾನವಾಗುತ್ತದೆ ಎನ್ನುವ ಅಳುಕು. ಅಂತೂ ಉಸಿರು ಬಿಗಿಹಿಡಿದು ಎರಡು ನಿಮಿಷಗಳ ಶಾಟ್ ಮುಗಿಸಿದೆ.

ನಿರ್ದೇಶಕ ನಾಗಾಭರಣರು ಕಟ್ ಹೇಳುತ್ತಿದ್ದಂತೆ ಯಾರೋ ಚೀಲ ಬಿಚ್ಚಿದರು. ಎದ್ದೆನೋ, ಬಿದ್ದೆನೋ ಎಂದು ಹೊರಗೆ ಕಾಲಿಟ್ಟರೆ
ನನ್ನ ಮೈತುಂಬಾ ಕೆಂಪು ಇರುವೆಗಳು! ಯಾರೋ ಪುಣ್ಯಾತ್ಮರು ಸಕ್ಕರೆ ಹಾಕಿದ್ದ ಗೋಣಿಚೀಲ ತಂದುಬಿಟ್ಟಿದ್ದರು!
ಕೊನೆಗೆ ರೂಂಗೆ ಓಡಿ ಹೋಗಿ ಬಟ್ಟೆ ಬಿಚ್ಚಿ ಸುಧಾರಿಸಿಕೊಳ್ಳುವ ಹೊತ್ತಿಗೆ ಸಾಕುಬೇಕಾಯಿತು. ನನಗೀಗಲೂ ನೆನಪಿದೆ,
ಈ ಪಾತ್ರಾಭಿಯನಕ್ಕೆ ನನಗೊಂದು ಅದ್ಭುತ ಮೆಚ್ಚುಗೆ ವ್ಯಕ್ತವಾಗಿತ್ತು – ಹೆಣದ ಪಾತ್ರದಲ್ಲಿ ಜೀವಂತ ಅಭಿನಯ!”

Related Posts

error: Content is protected !!