ಆರ್.ಚಂದ್ರುಗೆ ಉಪೇಂದ್ರ ಫೇಮ್‌ ಕಮ್ಮಿ ಎನಿಸಿತಾ?

ಸುದೀಪ್‌ ಎಂಟ್ರಿಯ ರಹಸ್ಯವೇನು?

ಕನ್ನಡ ಚಿತ್ರರಂಗ ಈಗ ಮತ್ತಷ್ಟು ರಂಗೇರಿದೆ. ಈಗಂತೂ ಕನ್ನಡದಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳದ್ದೇ ಅಬ್ಬರ! ಹೌದು, ಕನ್ನಡದಲ್ಲಿ ಬರುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾಗಳ ಪೈಕಿ “ಕಬ್ಜ” ಚಿತ್ರವೂ ಸೇರಿದೆ. ನಿರ್ದೇಶಕ ಆರ್.ಚಂದ್ರು ಅದ್ಧೂರಿ ವೆಚ್ಚದಲ್ಲೇ ತಮ್ಮ ಕನಸಿನ “ಕಬ್ಜ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಉದ್ಯಮಿ ಹಾಗೂ ಹಾಲಿ ಮಿನಿಸ್ಟರ್‌ ಎಂಟಿಬಿ ನಾಗರಾಜ್‌ ಅವರು ಈ ಚಿತ್ರಕ್ಕೆ ಸಾಥ್‌ ನೀಡಿರುವುದು, ಇನ್ನೂ ಒಂದು ಹಂತಕ್ಕೆ ಹೋಗಲು ಕಾರಣ. ಹೀಗಾಗಿ “ಕಬ್ಜ” ದೊಡ್ಡ ಮಟ್ಟಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಹಜವಾಗಿಯೇ ಕನ್ನಡದ “ಕಬ್ಜ” ಮೇಲೆ ಹೆಮ್ಮೆಯೂ ಇದೆ. ಉಪೇಂದ್ರ ಅಭಿಮಾನಿಗಳಿಗೂ ಇದು ಖುಷಿಯ ವಿಷಯವೇ. ಅದೆಲ್ಲಾ ಸರಿ, ಆದರೆ, ನಿರ್ದೇಶಕ ಆರ್.ಚಂದ್ರು ಮಾತ್ರ ತಮ್ಮ “ಕಬ್ಜ” ಚಿತ್ರದ ಕೆಲವು ವಿಚಾರಗಳಲ್ಲಿ ತೆಗೆದುಕೊಂಡಿರುವ ನಿರ್ಧಾರಗಳು ಅವರ ಫ್ಯಾನ್ಸ್‌ಗೆ, ಉಪೇಂದ್ರ ಫ್ಯಾನ್ಸ್‌ಗೂ ಗೊಂದಲ ಮತ್ತು ಅನುಮಾನಕ್ಕೆ ಕಾರಣವಾಗಿವೆ.

ಆರ್.ಚಂದ್ರು, ನಿರ್ದೇಶಕ

ಇಷ್ಟಕ್ಕೂ ಆ ಅನುಮಾನ, ಗೊಂದಲಕ್ಕೆ ಕಾರಣದ ಬಗ್ಗೆ ಹೇಳುವುದಾದರೆ, ಉಪೇಂದ್ರ ಅವರು ಸ್ಟಾರ್‌ ನಟ. ಇದರಲ್ಲಿ ಎರಡು ಮಾತಿಲ್ಲ. ಅವರಿಗೇ ಆದ ಒಂದು ಛಾಪು ಇದೆ. ತೆಲುಗಿನಲ್ಲು ದೊಡ್ಡ ಹೆಸರು ಇರುವ ನಟ. ಇಂದಿಗೂ ತೆಲುಗಿನಲ್ಲಿ ಉಪೇಂದ್ರ ಅಂದಾಕ್ಷಣ, ಒಂದು ಹೊಸ ಕ್ರೇಜ್‌ ಶುರುವಾಗುತ್ತೆ. ಈ ನಿಟ್ಟಿನಲ್ಲಿ ಅವರೀಗ “ಕಬ್ಜ” ಮೂಲಕ ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ತೆಲುಗಿಗೆ ಮೊದಲು ಎಂಟ್ರಿಕೊಟ್ಟವವರು ಉಪೇಂದ್ರ . ಈ ಹಿಂದೆಯೇ ಅವರನ್ನು ಸೌತ್‌ ಸ್ಟಾರ್‌ ಅಂತ ಕರೆಯಲಾಗಿದೆ. ತೆಲುಗು ಫ್ಯಾನ್ಸ್‌ಗೆ ಉಪೇಂದ್ರ ಅವರ “ಎ” ಸಿನಿಮಾ ಅಂದರೆ, ಇವತ್ತಿಗೂ ಕ್ರೇಜ್‌ ಇದೆ. ಅಂತಹ ನೇಮು, ಫೇಮು ಇರುವ ನಟರನ್ನು ಇಟ್ಟುಕೊಂಡು ಪ್ಯಾನ್‌ ಇಂಡಿಯಾ ಚಿತ್ರ ಮಾಡಲು ಹೊರಟಿರುವ ಆರ್.ಚಂದ್ರು, ತಮ್ಮ ಚಿತ್ರಕ್ಕೆ ಸುದೀಪ್‌ ಅವರನ್ನೂ ಕರೆತಂದಿದ್ದಾರೆ.

“ಕಬ್ಜ”ದ ಮಾರ್ಕೆಟ್‌ ಇದರಿಂದ ಇನ್ನೂ ಹೆಚ್ಚಾಗಿದ್ದು ಸುಳ್ಳಲ್ಲ. ಆದರೆ, ಉಪೇಂದ್ರ ಅವರ ಫೇಮ್‌ ಕಮ್ಮಿ ಇದೆಯಾ? ಎಂಬ ಪ್ರಶ್ನೆ ಕೂಡ ಎದುರಾಗುತ್ತೆ. ಉಪೇಂದ್ರ ಒಬ್ಬರನ್ನಿಟ್ಟುಕೊಂಡು ಚಿತ್ರ ಮಾಡಿದರೆ, “ಕಬ್ಜ” ಮಾರ್ಕೆಟ್‌ಗೆ ಪೆಟ್ಟು ಬೀಳಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡರಾ ಎಂಬ ಪ್ರಶ್ನೆಯೂ ಈಗ ಗಾಂಧಿನಗರದಲ್ಲಿ ಓಡಾಡುತ್ತಿದೆ. ಆರಂಭದಲ್ಲೆಲ್ಲೂ ಇನ್ನೊಬ್ಬ ಸ್ಟಾರ್‌ ನಟರು ಇಲ್ಲಿರುತ್ತಾರೆ ಎಂದು ಸುಳಿವು ಕೊಡದ ಆರ್.ಚಂದ್ರು, ಸುದೀಪ್‌ಗಾಗಿಯೇ ಹೊಸ ಪಾತ್ರ ಸೃಷ್ಠಿ ಮಾಡಿಬಿಟ್ಟರಾ ಎಂಬ ಮತ್ತೊಂದು ಪ್ರಶ್ನೆಯೂ ಗಿರಕಿಹೊಡೆಯುತ್ತಿದೆ. ಯಾಕೆಂದರೆ, ಇದ್ದಕ್ಕಿದ್ದಂತೆಯೇ ಸುದೀಪ್‌ ಎಂಟ್ರಿಯಾಗಿದ್ದೇ ಈ ಪ್ರಶ್ನೆಗಳಿಗೆ ಕಾರಣ.


ಇನ್ನು, ಸುದೀಪ್‌ ಬಂದರೆ, “ಕಬ್ಜ” ಇನ್ನಷ್ಟು ಚೆನ್ನಾಗಿರುತ್ತೆ ಅಂತ ಅನಿಸಿದ್ದರಿಂದಲೇ ಆರ್.ಚಂದ್ರು ಈ ನಿರ್ಧಾರ ಮಾಡಿದ್ದಾರೆ. ಅದು ತಪ್ಪಲ್ಲ. ಆದರೆ, ಉಪೇಂದ್ರ ಅವರ ಬಹುಭಾಗದ ಚಿತ್ರೀಕರಣ ಮುಗಿಸಿದ ನಂತರ, ಈಗ ಸುದೀಪ್‌ ಅವರನ್ನು ಈ ಹಂತದಲ್ಲಿ ಕರೆತಂದಿದ್ದರ ಹಿಂದೆ ಒಂದಷ್ಟು ಮಾತುಗಳು ಕೇಳಿಬರುತ್ತಿವೆ. ಉಪೇಂದ್ರ ಅವರೊಬ್ಬರೇ ಇದ್ದರೆ, “ಕಬ್ಜ” ಮಾರ್ಕೆಟ್‌ ಕಡಿಮೆಯಾಗಬಹುದು ಅಥವಾ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವುದರಿಂದ ಇನ್ನೊಬ್ಬ ಸ್ಟಾರ್‌ ಬೇಕು ಎಂಬ ಕಾರಣಕ್ಕೆ ಸ್ವತಃ ಚಂದ್ರು ಹೀಗೊಂದು ನಿರ್ಧಾರ ಮಾಡಿ, ಸುದೀಪ್‌ ಅವರಿಗೊಂದು ಪಾತ್ರವನ್ನು ಕ್ರಿಯೇಟ್‌ ಮಾಡಿ ಕರೆತಂದಿದ್ದಾರಾ ಅನ್ನೋದು ಕೂಡ ಪ್ರಶ್ನೆಯಾಗಿಯೇ ಉಳಿದಿದೆ. ಮೂಲಗಳ ಪ್ರಕಾರ ಸುದೀಪ್‌ ಅವರ ಪಾತ್ರದ ಮೂಲಕವೇ “ಕಬ್ಜ” ಚಿತ್ರದ ಕಥೆ ಓಪನ್‌ ಆಗಲಿದೆಯಂತೆ. ಹೆಚ್ಚು ಕಡಿಮೆ ಅದು ಒಂದೆರೆಡು ದಿನಗಳ ಚಿತ್ರೀಕರಣದ ಅವಧಿ ಎನ್ನಲಾಗುತ್ತಿದೆ. ಆರಂಭದಲ್ಲಿ ಕತೆ ನಿರೂಪಣೆ ಮಾಡುವ ಪಾತ್ರವದು ಎಂಬುದು ಸುದ್ದಿ.


ಅದೇನೆ ಇದ್ದರೂ, ಆರ್.ಚಂದ್ರು ಅವರನ್ನು ಮೊದಲಿನಿಂದಲೂ ಸೂಕ್ಷ್ಮವಾಗಿ ಗಮನಿಸುತ್ತಾ ಬಂದರೆ, ಮೊದಲ ನಿರ್ದೇಶನದಿಂದ ಹಿಡಿದು, ಇಲ್ಲಿಯವರೆಗೆ ಮಾಡಿಕೊಂಡು ಬಂದ ಎಲ್ಲಾ ಚಿತ್ರಗಳ ಹಿಂದೆಯೂ ಒಂದೊಂದು ಕಥೆ ಇದೆ, ಅಲ್ಲಿ ಶ್ರಮವಿದೆ, ಜಯವಿದೆ. ಈಗಲು ಸಹ “ಕಬ್ಜ”ದಲ್ಲಿ ಅಂಥದ್ದೊಂದು ಕಥೆ ಇದೆ ಎಂಬ ಕಾರಣಕ್ಕೆ ಉಪೇಂದ್ರ ಅವರ ಜೊತೆ ಸುದೀಪ್‌ ಅವರನ್ನೂ ಕರೆತಂದು, ತಮ್ಮ ಎಂದಿನ ಫೇಮ್‌ ಕಾಪಾಡಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ ಚಂದ್ರು.

ಪ್ಯಾನ್‌ ಇಂಡಿಯಾ ಎಂಬ ಪ್ಯಾಷನ್‌ ಟಾಕ್
ಕನ್ನಡದಲ್ಲಿ “ಕೆಜಿಎಫ್‌” ಬಳಿಕ ಪ್ಯಾನ್‌ ಇಂಡಿಯಾ ಚಿತ್ರಗಳ ಹವಾ ಕೊಂಚ ಜಾಸ್ತಿಯೇ ಆಯ್ತು. ಈಗಂತೂ ಯಾವುದೇ ಸ್ಟಾರ್‌ ಸಿನಿಮಾ ಮಾಡಿದರೂ, ಅದು ಪ್ಯಾನ್‌ ಇಂಡಿಯಾ ಚಿತ್ರವಾಗುತ್ತಿದೆ. ಎಲ್ಲರೂ ನಮ್ಮದೂ ಪ್ಯಾನ್‌ ಇಂಡಿಯಾ ಚಿತ್ರ ಅಂತಾನೇ ಹೇಳಿಕೊಳ್ಳುತ್ತಿದ್ದಾರೆ. “ಕಬ್ಜʼ ಕೂಡ ಪ್ಯಾನ್‌ ಇಂಡಿಯಾ ಚಿತ್ರವೇ. ಯಾವುದೇ ಒಂದು ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ತಯಾರಾದರೆ, ಅದು ಪ್ಯಾನ್‌ ಇಂಡಿಯಾ ಸಿನಿಮಾನೇ ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಒಂದು ರೀತಿ ಹೇಳಿಕೊಳ್ಳೋರಿಗೆ “ಪ್ಯಾನ್‌ ಇಂಡಿಯಾ ಸಿನಿಮಾ” ಅನ್ನುವುದು ಪ್ಯಾಷನ್‌ ಆಗಿಬಿಟ್ಟಿದೆ.‌

“ಕಬ್ಜ” ಕೂಡ ಪ್ಯಾನ್‌ ಇಂಡಿಯಾ ಸಿನಿಮಾನೇ. ಇದಕ್ಕೂ ಮೊದಲೇ ಉಪೇಂದ್ರ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡು ಪ್ಯಾನ್‌ ಇಂಡಿಯಾ ಸಿನಿಮಾ ಹೀರೋ ಆಗಿದ್ದವರು. ಅದೇನೆ ಇರಲಿ, ನಿರ್ದೇಶಕ ಆರ್.ಚಂದ್ರು ಈಗ “ಕಬ್ಜʼ ಜಪ ಮಾಡುತ್ತಿದ್ದಾರೆ. ಅದರಲ್ಲೂ “ಕೆಜಿಎಫ್‌” ಲೆವೆಲ್‌ನಲ್ಲೇ ಈ ಸಿನಿಮಾ ಮಾಡಬೇಕು ಎನ್ನುವುದಕ್ಕಿಂತ, ತಮ್ಮ ಚಿತ್ರ ಸುದ್ದಿಯಾಗಬೇಕು ಎಂಬ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕನ್ನಡದಲ್ಲಿ “ಕೆಜಿಎಫ್‌” ಆಗದೇ ಹೋಗಿದ್ದರೆ, ಬೇರೆ ಚಿತ್ರಗಳ ಹೆಸರು ಹೇಳುವ ಮೂಲಕ ತಮ್ಮ ಸಿನಿಮಾ ಆ ಸಿನಿಮಾ ರೇಂಜ್‌ನಲ್ಲಿ ಮಾಡುವ ಬಗ್ಗೆಯೇ ಒಂದಷ್ಟು ಹೇಳಿಕೊಳ್ಳುತ್ತಿದ್ದರೇನೋ? ಒಂದು ಖುಷಿಯ ವಿಷಯವೆಂದರೆ, ಕನ್ನಡ ಚಿತ್ರರಂಗ ಈಗ ಗರಿಗೆದರಿದೆ. ಹೀಗಾಗಿ, ಎಲ್ಲರೂ ತಮ್ಮ ಸಿನಿಮಾಗಳನ್ನು ಬೇರೆ ಲೆವೆಲ್‌ಗೆ ಕೊಂಡೊಯ್ಯಬೇಕು ಎಂಬ ಹಠದಲ್ಲೇ ಕೆಲಸ ಮಾಡುತ್ತಿದ್ದಾರೆ. ಚಂದ್ರು ಕೂಡ “ಕಬ್ಜ” ಚಿತ್ರವನ್ನು ದೊಡ್ಡ ಮಟ್ಟದಲ್ಲೇ ತಯಾರಿಸಿ, ಜೋರು ಸದ್ದಿನೊಂದಿಗೆ ಬರುವ ಯೋಚನೆಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದು, “ಕಬ್ಜ” ಹೊರಬಂದಾಗಷ್ಟೇ, ಅದರೊಳಗಿನ ವಿಶೇಷತೆಗಳು ನೋಡುಗರಿಗೆ ಗೊತ್ತಾಗುತ್ತವೆ. ಅಲ್ಲಿಯವರೆಗೆ ಕಾಯಲೇಬೇಕು.

Related Posts

error: Content is protected !!