ನಮಗೂ ನೂರರಷ್ಟು ಭರ್ತಿಗೆ ಅವಕಾಶ ಸಿಗಲಿ

ಸರ್ಕಾರಕ್ಕೆ ಚಿತ್ರರಂಗದ ಟ್ವೀಟ್‌ ಅಭಿಯಾನ

ಮಾರ್ಕೆಟ್‌ನಲ್ಲಿ ಗಿಜಿಗಿಜಿ ಜನ… ಬಸ್‌ನಲ್ಲೂ ಫುಲ್‌ ರಶ್…‌. ಚಿತ್ರಮಂದಿರಕ್ಕೆ ಮಾತ್ರ ಏಕೆ ೫೦% ನಿರ್ಬಂಧ…?
– ಇದು ಕನ್ನಡ ಚಿತ್ರರಂಗ ಶುರು ಮಾಡಿರುವ ಅಭಿಯಾನ. ಹೌದು, ಕೇಂದ್ರ ಸರ್ಕಾರ ಈಗಾಗಲೇ ಫೆಬ್ರವರಿಯಿಂದ ಚಿತ್ರಮಂದಿರಗಳ ಪೂರ್ಣ ಪ್ರಮಾಣದ ಪ್ರದರ್ಶನಕ್ಕೆ ಅನುಮತಿ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಮಾತ್ರ ಅನುಮತಿ ನೀಡದೆ, ಶೇ.೫೦ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ಕೊಡಬೇಕು ಎಂದು ಹೇಳಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬೇಸತ್ತಿರುವ ಕನ್ನಡ ಚಿತ್ರೋದ್ಯಮ ಈಗ ಸರ್ಕಾರವನ್ನು ಒತ್ತಾಯಿಸುತ್ತಿದೆ. ಅದಕ್ಕೆಂದೇ ಕನ್ನಡ ಚಿತ್ರರಂಗದ ಸ್ಟಾರ್‌ ನಟರು, ನಿರ್ಮಾಪಕರು, ನಿರ್ದೇಶಕರು ಈಗ ಸರ್ಕಾರಕ್ಕೆ ಮನವಿ ಮಾಡುತ್ತಿದ್ದು, ನಮಗೂ ಶೇ.೧೦೦ರಷ್ಟು ಅವಕಾಶ ಮಾಡಿಕೊಡಬೇಕು ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಬಹುತೇಕ ಸ್ಟಾರ್‌ ನಟರೆಲ್ಲರೂ ತಮ್ಮ ಟ್ವೀಟ್‌ ಮೂಲಕ ಹೀಗೊಂದು ಅಭಿಯಾನವನ್ನೂ ಶುರುಮಾಡಿದ್ದಾರೆ.


ಶಿವರಾಜಕುಮಾರ್‌ ತಮ್ಮ ಟ್ವೀಟ್‌ ಮೂಲಕ ವಿಡಿಯೊವೊಂದನ್ನು ಹರಿಬಿಟ್ಟಿದ್ದು, ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆ ವಿಡಿಯೋದಲ್ಲಿ ” ಎಲ್ಲರಿಗೂ ೧೦೦ರಷ್ಟು ಸೀಟು ಭರ್ತಿಗೆ ಅವಕಾಶ ಕೊಟ್ಟಿರಬೇಕಾದರೆ, ನಮಗೆ ಮಾತ್ರ ಶೇ.೫೦ ಯಾಕೆ? ನಮಗೂ ೧೦೦% ಭರ್ತಿ ಬೇಕೇ ಬೇಕು. ಇಂಡಸ್ಟ್ರಿಗೋಸ್ಕರ ನಾವೆಲ್ಲಾ ಜೊತೆಗಿದ್ದೇವೆ. ಸರ್ಕಾರದ ನಿರ್ಧಾರ ಬದಲಾಗಬೇಕು. ಜೈ ಹಿಂದ್‌ ಜೈ ಕರ್ನಾಟಕ ಮಾತೆ” ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಇನ್ನು, ನಟ ಧನಂಜಯ್‌ ಕೂಡ ಟ್ವೀಟ್‌ ಮಾಡಿದ್ದು, ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ “ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ ? ಊರೆಲ್ಲ ಜನಜಂಗುಳಿ ತುಂಬಿ ತುಳುಕುತಿರಲು, ಥಿಯೇಟರ್‌ ಒಳಗೆ ಮಾತ್ರ ಕೊರೋನಾಗೆ ಅಂಜಿದೊಡೆಂತಯ್ಯ? ಎಂದು ಬರೆದುಕೊಳ್ಳುವ ಮೂಲಕ ಸರ್ಕಾರ ಕೂಡಲೇ ಶೇ>೧೦೦ಭರ್ತಿಗೆ ಅವಕಾಶ ಮಾಡಿಕೊಡಬೇಕು” ಎಂದು ಮನವಿ ಮಾಡಿದ್ದಾರೆ. ನಿರ್ದೇಶಕ ಸುನಿ ಕೂಡ ತಮ್ಮ ಟ್ವಿಟ್ಟರ್‌ನಲ್ಲಿ ” ವಿಮಾನದೊಳಗೆ ಭುಜಕ್ಕೆ ಭುಜ ತಾಕಿ ಕೂರಬಹುದು.. ದೇವಸ್ಥಾನದಲ್ಲಿ ಎಲ್ಲರ ಕೈಗಳು ಒಂದೇ ಗಂಟೆ ಬಾರಿಸಬಹುದು.. ಮಾರ್ಕೆಟ್ ನಲ್ಲಿ ಮಾಮುಲಿ ವ್ಯಾಪಾರ, ರಾಜಕೀಯ ರ಼್ಯಾಲಿಗೆ ಜನಸಾಗರ.
ಪಬ್ ಹೋಟೆಲ್ ನಲ್ಲಿ ಎಲ್ಲರ ವಿಹಾರ, ಚಿತ್ರಮಂದಿರಕೆ ಮಾತ್ರ ಯಾಕೆ ಕಟ್ಟೆಚ್ಚರ?” ಎಂದು ಬರೆದಿದ್ದಾರೆ. ಉಳಿದಂತೆ ಪುನೀತ್‌ರಾಜಕುಮಾರ್‌, ಪ್ರಶಾಂತ್‌ ನೀಲ್, ಧ್ರುವಸರ್ಜಾ, ದುನಿಯಾ ವಿಜಯ್‌, ಶಶಾಂಕ್‌, ಪವನ್‌ ಒಡೆಯರ್ ಸೇರಿದಂತೆ ಹಲವರು ಟ್ವೀಟ್‌ ಅಭಿಯಾನ ಶುರುಮಾಡಿದ್ದಾರೆ.

Related Posts

error: Content is protected !!