ಕಾರ್ಟೂನಿಸ್ಟ್ ಮೇಲೆಯೇ ಒಂದು ಸಿನಿಮಾ, ಫೆ. 12 ಕ್ಕೆ ತೆರೆ ಮೇಲೆ ಕಲಾವಿದ
ಸಿನಿಮಾ ಮಟ್ಟಿಗೆ ಕಲಾವಿದ ಅಂದ್ರೆ ನೆನಪಾಗುವುದೇ ಕ್ರೇಜಿಸ್ಟಾರ್ ರವಿಚಂದ್ರನ್. ಯಾಕಂದ್ರೆ, ಅವರು ಅದೇ ಹೆಸರಲ್ಲೊಂದು ಸಿನಿಮಾ ಮಾಡಿದ್ದರು. ಆ ಹೊತ್ತಿಗೆ ಆ ಸಿನಿಮಾ ಸಾಕಷ್ಟು ಸದ್ದು ಮಾಡಿದ್ದು ನಿಮಗೆ ಗೊತ್ತು. ಈಗ ಅದೇ ಹೆಸರಲ್ಲೊಂದು ಸಿನಿಮಾ ಬರುತ್ತಿದೆ. ಇದು ಹೊಸಬರ ಸಿನಿಮಾ.
ರವಿಚಂದ್ರನ್ ಅವರ ಸಿನಿಮಾಕ್ಕೂ ಇದಕ್ಕೂ ಯಾವುದೇ ಕನೆಕ್ಷನ್ ಇಲ್ಲ. ಇದು ಒಬ್ಬ ವ್ಯಂಗ್ಯ ಚಿತ್ರಕಾರನ ಕುರಿತ ಸಿನಿಮಾ. ಪದ್ಮರಾಜ್ ಫಿಲಂಸ್ ಮೂಲಕ ಪ್ರದೀಪ್ ಕುಮಾರ್ ನಿರ್ಮಾಣಮಾಡಿದ ಚಿತ್ರ. ಶಿವಾನಂದ್ ಇದರ ನಿರ್ದೇಶಕ. ಫೆ. 12 ಕ್ಕೆ ತೆರೆಗೆ ಬರುತ್ತಿರುವ ಈ ಚಿತ್ರ ಇದೀಗ ಟ್ರೇಲರ್ ಲಾಂಚ್ ಮೂಲಕ ಸದ್ದು ಮಾಡಿದೆ. ಟ್ರೇಲರ್ ಲಾಂಚ್ ಮೂಲಕ ಸೋಮವಾರ ಚಿತ್ರ ತಂಡ ಮಾಧ್ಯಮದ ಮುಂದೆ ಬಂದಿತ್ತು.
” ನಾನು ಈ ಮೈಕ್ ಹಿಡಿಯಬೇಕೆಂದು ತುಂಬಾ ದಿನಗಳ ಹಿಂದೆ ಕನಸು ಕಂಡವನು. ಆ ಕನಸು ಈಗ ನನಸಾಗಿದೆ. ನನ್ನ ಕನಸಿಗೆ ಜೀವ ತುಂಬಿದ್ದು ನಿರ್ಮಾಪಕ ಕಮ್ ನಾಯಕ ನಟ ಪ್ರದೀಪ್ ಕುಮಾರ್. ಅವರಿಗೆ ನಾನು ಚಿರಕಾಲ ಅಭಾರಿʼ ಎನ್ನುವ ಮೂಲಕ ಸಿನಿಮಾದ ಹಿಂದಿನ ಕನಸು ತೆರೆದಿಟ್ಟರು ನಿರ್ದೇಶಕ ಶಿವಾನಂದ್.ನಿರ್ದೇಶಕ ಶಿವಾನಂದ್ ಅವರ ಕತೆ ಇದಾದರೆ, ಇನ್ನು ನಿರ್ಮಾಪಕ ಹಾಗೂ ನಾಯಕ ನಟ ಪ್ರದೀಪ್ ಕುಮಾರ್ ಅವರದ್ದು ಮತ್ತೊಂದು ಕಥೆ. ಯಾಕಂದ್ರೆ ಇವರು ವೃತ್ತಿಯಲ್ಲಿ ಇಂಜಿನಿಯರ್. ಅಲ್ಲಿಂದ ” ರಂಗ್ ದೇ ಬಸಂತಿʼ ಎನ್ನುವ ಹೆಸರಲ್ಲಿ ಹೋಟೆಲ್ ತೆಗೆದು ಹೋಟೆಲ್ ಉದ್ಯಮಕ್ಕೂ ಬಂದವರು. ಅಲ್ಲಿಂದೀಗ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ.
” ನಾನಿನ್ನು ಇಂಜಿಯರಿಂಗ್ ವೃತ್ತಿ ಬಿಟ್ಟಿಲ್ಲ. ಸಿನಿಮಾ ನನಗೆ ಹವ್ಯಾಸ. ಬಾಲ್ಯದಿಂದಲೂ ಅಂತಹದೊಂದು ಆಸೆ ಇತ್ತು. ಅದಕ್ಕಾಗಿ ಇಲ್ಲಿಗೆ ಬಂದೆ. ವಿಚಿತ್ರ ಅಂದ್ರೆ ನಿರ್ಮಾಪಕನಾಗುವ ನನ್ನ ಬಳಿ ನೂರು ರೂಪಾಯಿ ಕೂಡ ಇರಲಿಲ್ಲ. ಮೊದಲು ಹೊಟೇಲ್ ಶುರು ಮಾಡಿದೆ. ಅಲ್ಲಿಂದ ಬಂದ ನಂತರ ಈ ಚಿತ್ರ ನಿರ್ಮಾಣ ಮಾಡಿದೆ ʼ ಎನ್ನುವ ಮೂಲಕ ತಾವು ಚಿತ್ರ ನಿರ್ಮಾಣಕ್ಕೆ ಬಂದ ಬಗೆಯನ್ನು ವಿವರಿಸುತ್ತಾರೆ ಪ್ರದೀಪ್ ಕುಮಾರ್.
ಈ ಚಿತ್ರಕ್ಕೆ ನಾಯಕಿ ಸಂಭ್ರಮ. ಈ ಹಿಂದೆ ರಣಕಣಕ ಚಿತ್ರಕ್ಕೆ ನಾಯಕಿ ಆಗಿದ್ದರು. ಉಳಿದಂತೆ ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಮೂ ಗು ಸುರೇಶ್, ವರ್ಷ ಮಲ್ಲೇಶ್ ಮತ್ತಿತರರು ಚಿತ್ರದಲ್ಲಿದ್ದಾರೆ.ವಿವೇಕ್ ಚಕ್ರವರ್ತಿ ಹಾಗೂ ಪೂರ್ಣ ಚಂದ್ರ ತೇಜಸ್ವಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.ಮೂರು ಹಾಡುಗಳಿಗೆ ಸಂಗೀತ ನೀಡಿರುವ ವಿವೇಕ್ ಚಕ್ರವರ್ತಿ ಅವರು ಸಹ ಸಂಗೀತದ ಬಗ್ಗೆ ತಮ್ಮ ಮಾತುಗಳನಾಡಿದರು. ಯುವ ಗಾಯಕ ರುಮಿತ್ ಅವರು ಹಾಡಿರುವ ಹಾಡಿನ ಲಿರಿಕಲ್ ವಿಡಿಯೋ ಪ್ರದರ್ಶಿಸಲಾಯಿತು.