Categories
ಸಿನಿ ಸುದ್ದಿ

ಶಂಭೋ ಶಿವ ಶಂಕರ ಜೊತೆ ಶಶಿಕುಮಾರ್‌ – ಖಡಕ್‌ ಪೊಲೀಸ್‌ ಲುಕ್‌ನಲ್ಲಿ ಸುಪ್ರೀಂ ಹೀರೋ

ಹೊಸಬರ ಜೊತೆ ಎವರ್‌ಗ್ರೀನ್‌ ಸ್ಟಾರ್‌

ಸುಪ್ರೀಂ ಹೀರೋ ಶಶಿಕುಮಾರ್‌, ಕನ್ನಡ ಚಿತ್ರರಂಗ ಕಂಡ ಸ್ಪುರದ್ರೂಪಿ ನಟ. ತೊಂಬತ್ತರ ದಶಕದಲ್ಲಿ ಶಶಿಕುಮಾರ್‌ ಅವರ ಡೇಟ್‌ ಸುಲಭವಾಗಿ ಸಿಗುತ್ತಿರಲಿಲ್ಲ. ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನ ಗೆದ್ದಿರುವ ಶಶಿಕುಮಾರ್‌, ಹಲವು ಹೊಸಬರ ಚಿತ್ರಗಳಲ್ಲಿ ಅತಿಥಿ ನಟರಾಗಿ ಕಾಣಿಸಿಕೊಂಡಿರುವುದುಂಟು. ಕೆಲವೊಮ್ಮೆ ಕಥೆ, ಪಾತ್ರ ಕೇಳಿ ಪ್ರೀತಿಯಿಂದಲೇ ನಟಿಸುವ ಉತ್ಸಾಹ ತೋರಿಸುವ ಅಪರೂಪದ ನಟ ಶಶಿಕುಮಾರ್.‌ ಅಷ್ಟೇ ಅಲ್ಲ, ಗೆಳೆತನಕ್ಕಾಗಿಯೂ ಅವರು ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವುದುಂಟು. ಚಿತ್ರದಲ್ಲಿ ಒಂದೊಳ್ಳೆಯ ವಿಶೇಷ ಪಾತ್ರವಿದೆ ಅಂದಾಕ್ಷಣ, ಬಹುತೇಕ ನಿರ್ದೇಶಕರಿಗೆ ಈ ಶಶಿಕುಮಾರ್‌ ಅವರು ನೆನಪಾಗುತ್ತಾರೆ. ಈಗ ಶಶಿಕುಮಾರ್‌, “ಶಂಭೋ ಶಿವ ಶಂಕರ” ಎಂಬ ಹೊಸಬರ ಚಿತ್ರದಲ್ಲಿ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.


ಹೌದು, ತುಂಬಾ ದಿನಗಳ ಬಳಿಕ ಶಶಿಕುಮಾರ್‌ ಅವರು “ಶಂಭೋ ಶಿವ ಶಂಕರ” ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಅಂದಹಾಗೆ, ಶಶಿಕುಮಾರ್‌ ಅವರ ಪಾಲಿಗೆ ಈ ಬಾರಿ ಒಲಿದು ಬಂದಿರುವ ಪಾತ್ರ, ಖಡಕ್‌ ಪೊಲೀಸ್‌ ಅಧಿಕಾರಿ. ಈಗಾಗಲೇ ಹಲವು ಚಿತ್ರಗಳಲ್ಲಿ ಶಶಿಕುಮಾರ್‌, ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವುದುಂಟು. ಈಗ ಮತ್ತೊಮ್ಮೆ ಪೊಲೀಸ್‌ ಅಧಿಕಾರಿಯಾಗಿ ರಾರಾಜಿಸಲಿದ್ದಾರೆ. ಅಂದಹಾಗೆ, ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಡಿಸೆಂಬರ್ 9 ರಿಂದ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಂತದ ಚಿತ್ರೀಕರಣದಲ್ಲಿ ಶಶಿಕುಮಾರ್ ಸೇರಿದಂತೆ ಇತರೆ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ, ಅಘನ್ಯ ಪಿಕ್ಚರ್ಸ್ ಬ್ಯಾನರ್ ಮೂಲಕ ವರ್ತೂರ್ ಮಂಜು ಅವರು ಚಿತ್ರವನ್ನು ನಿರ್ಮಿಸುತ್ತಿದ್ದು, ಶಂಕರ್ ಕೋನಮಾನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್ ಕೋನಮಾನಹಳ್ಳಿ ಅವರಿಗೆ ಇದು ಮೊದಲ ಚಿತ್ರ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ಒಪ್ಪಿಕೊಂಡಿದ್ದಾರೆ. ಇನ್ನು, ಗೌಸ್ ಪೀರ್‌, ಹಿತನ್ ಹಾಸನ್ ಹಾಡುಗಳನ್ನು ಬರೆದಿದ್ದು, ಹಿತನ್ ಹಾಸನ್ ಸಂಗೀತವಿದೆ. ನಟರಾಜ್ ಮುದ್ದಾಲ ಛಾಯಾಗ್ರಹಣ ಮಾಡಿದರೆ, ಕಲೈ ನೃತ್ಯ ನಿರ್ದೇಶನವಿದೆ. ವೆಂಕಟೇಶ್ ಯುಡಿವಿ ಸಂಕಲನವಿದೆ. ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಮಾಡಿದ್ದಾರೆ.
ಇನ್ನು, “ಶಂಭೋ ಶಿವ ಶಂಕರ” ಅನ್ನೋದು ಮೂವರು ಹೀರೋಗಳ ಹೆಸರು. ಆ ಒಂದೊಂದು ಹೆಸರಲ್ಲಿ ಅಭಯ್ ಪುನೀತ್, ರೋಹಿತ್ ಮತ್ತು ರಕ್ಷಕ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸೋನಾಲ್ ಮಾಂತೆರೊ ಈ ಚಿತ್ರದ ನಾಯಕಿ.

Categories
ಸಿನಿ ಸುದ್ದಿ

ರವಿಶಂಕರ್ ಈಗ ಡುಬಾಕ್ ಸೈಂಟಿಸ್ಟ್! ಮತ್ತೆ ಕಿರುತೆರೆಗೆ ರಂಜಿಸಲು ಬಂದ ಡಾ. ವಿಠಲ್ ರಾವ್

ಮಜಾ ಟಾಕೀಸ್ ನಲ್ಲಿ ಸೃಜನ್ ಜೊತೆ ಮಸ್ತ್ ಮಜ…

ಕನ್ನಡ ಕಿರುತೆರೆಯಲ್ಲಿ ‘ಸಿಲ್ಲಿ ಲಲ್ಲಿ’ ಧಾರಾವಾಹಿ ಅತ್ಯಂತ ‌ಜನಪ್ರಿಯ. ಇದು ಬಹುತೇಕ ಎಲ್ಲಾ ಕನ್ನಡಿಗರಿಗೂ ಗೊತ್ತು. ಈ ಧಾರಾವಾಹಿ ಮೂಲಕ ರವಿಶಂಕರ್ ಗೌಡ ಪರಿಚಯವಾಗಿದ್ದು ಇತಿಹಾಸ. ಹೌದು, ಡಾ.ವಿಠಲ್ ರಾವ್ ಪಾತ್ರದ ಮೂಲಕ ಕನ್ನಡಿಗರ ಪ್ರೀತಿ ಪಾತ್ರರಾದ ರವಿಶಂಕರ್ ಹದಿಮೂರು ವರ್ಷಗಳ ನಂತರ ಪುನಃ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಇಷ್ಟು ವರ್ಷಗಳ ಕಾಲ ಸಿನಿಮಾಗಳಲ್ಲಿ ಬಿಝಿಯಾಗಿದ್ದ ರವಿಶಂಕರ್ ಗೌಡ, ತಮ್ಮ ಸಿನಿಮಾಗಳ ಜೊತೆ ಜೊತೆಯಲ್ಲೇ ಅವರು, ಮತ್ತೆ ಕಿರುತೆರೆಗೆ ಕಾಲಿಡುತ್ತಿರುವುದು ಕಿರುತೆರೆ ಪ್ರೇಕ್ಷಕರಿಗೆ ಸಖತ್ ‘ಮಜ’ ಅನ್ನೋದು ಗ್ಯಾರಂಟಿ.

ಹಾಗಂತ ಅವರು ಹೊಸ ಧಾರಾವಾಹಿ ಒಪ್ಪಿಕೊಂಡರಾ ಎಂಬ ಪ್ರಶ್ನೆ ಸಹಜ. ಆದರೆ, ರವಿಶಂಕರ್ ಗೌಡ ಕಾಣಿಸಿಕೊಳ್ಳುತ್ತಿರೋದು, ಜನಪ್ರಿಯ ಶೋ ‘ಮಜಾ ಟಾಕೀಸ್’ ನಲ್ಲಿ. ನಟಿಸುತ್ತಿದ್ದಾರೆ.


ಡಾ.ವಿಠಲ್ ರಾವ್ ಪಾತ್ರದ ಮೂಲಕ ಗಮನ ಸೆಳೆದಿದ್ದ ರವಿಶಂಕರ್ ಗೌಡ, ಸಿಕ್ಕಾಪಟ್ಟೆ ಬಿಝಿ ಆಗಿದ್ದರು. 1020 ಎಪಿಸೋಡ್ ಪ್ರಸಾರಗೊಂಡ ‘ಸಿಲ್ಲಿ ಲಲ್ಲಿ’, ಯಶಸ್ವಿಯಾಗಿದ್ದೇ ತಡ, ರವಿಶಂಕರ್ ಅವರ ಬೇಡಿಕೆ ಹೆಚ್ಚಾಯ್ತು. ಸತತ ನಾಲ್ಕು ವರ್ಷಗಳ ಕಾಲ ಪ್ರಸಾರವಾದ ಬಳಿಕ ರವಿಶಂಕರ್ ಸಿನಿಮಾ ಕಡೆ ಮುಖ ಮಾಡಿದರು.

ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ರವಿಶಂಕರ್ ಅಲ್ಲೂ ಒಂದಷ್ಟು ಅಭಿಮಾನಿ ವರ್ಗವನ್ನು ಕಟ್ಟಿಕೊಂಡರು.‌ ಸಿನಿಮಾ ರಂಗದಲ್ಲಿ ದೊಡ್ಡ ಗೆಳೆಯರ ಬಳಗವನ್ನೇ ಸಂಪಾದಿಸಿದ ರವಿಶಂಕರ್ ಅವರನ್ನು ಸೃಜನ್ ಲೋಕೇಶ್ ಅವರು ತಮ್ಮ ‘ ಮಜಾ‌ ಟಾಕೀಸ್’ ನಲ್ಲಿ ಪಾಲ್ಗೊಳ್ಳುವಂತೆ ಹೇಳುತ್ತಿದ್ದರಾದರೂ, ರವಿಶಂಕರ್ ಬಿಡುವಿಲ್ಲದಂತೆ ಸಿನಿಮಾಗಳಲ್ಲಿ ನಟಿಸುವ‌ ಮೂಲಕ ಬಿಝಿಯಾಗಿದ್ದರು.

ಆದರೆ, ಈಗ ಸೃಜನ್ ಲೋಕೇಶ್, ಈ ಬಾರಿಯ ‘ ಮಜಾ ಟಾಕೀಸ್’ನಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದಹಾಗೆ, ರವಿಶಂಕರ್ ಮಜಾ ಟಾಕೀಸ್ ನಲ್ಲಿ ಡುಬಾಕ್ ಸೈಂಟಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಪಾತ್ರ ಕೆಲಸಕ್ಕೆ ಬಾರದ್ದನ್ನು ಕಂಡು ಹಿಡಿದು, ಅಲ್ಲಿ ಬರುವ ಅತಿಥಿಗಳನ್ನು ರಂಜಿಸುವ ಕೆಲಸಕ್ಕಿಳಿಯಲ್ಲಿದ್ದಾರೆ.

ಸದಾ ಮರೆಯುವ ಪಾತ್ರ ಅದಾಗಿರುವುದರಿಂದ ಪ್ರತಿ ವಾರ ಪ್ರೇಕ್ಷಕರಿಗೂ ಅದೊಂದು ನಗೆಯ ಹೂರಣ ಎಂಬುದು ರವಿಶಂಕರ್ ಮಾತು.
ಸದ್ಯ ಸಿನಿಮಾಗಳಲ್ಲೂ ಬಿಝಿ ಇರುವ ರವಿಶಂಕರ್ ಗೌಡ ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’ ಸಿನಿಮಾ ಸೇರಿದಂತೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಲಾಕ್ ಡೌನ್ ವೇಳೆ ತಮ್ಮ ಫೇಸ್ ಬುಕ್ ಮೂಲಕ ಸಾಕಷ್ಟು ಕನ್ನಡ ಗೀತೆಗಳನ್ನು ಹಾಡುವ ಮೂಲಕ ರಂಜನೆ ಕೊಟ್ಟು ಕನ್ನಡಿಗರ ಮನ ಗೆದ್ದೆದ್ದ ರವಿಶಂಕರ್ ಈಗ ಮತ್ತೆ ಕನ್ನಡಿಗರನ್ನು ನಗಿಸಲು ಬಂದಿದ್ದಾರೆ. ಇವರ ಎಂಟ್ರಿಯಿಂದ ಮಜಾ ಟಾಕೀಸ್ ಮತ್ತಷ್ಟು ರಂಗೇರಲಿದೆ ಎಂಬುದಂತೂ ದಿಟ.

Categories
ಸಿನಿ ಸುದ್ದಿ

ಪಲ್ಲಕ್ಕಿಯ ಮದಕರಿಪುರ ರೆಡಿ – ಡಿಸೆಂಬರ್‌ಗೆ ಕಿಚ್ಚ ಮಾತಾಡುವ ಸಿನಿಮಾ

ಕಾದಂಬರಿ ನಾಟಕ ಆಧಾರಿತ ಚಿತ್ರ

 

ಪಲ್ಲಕ್ಕಿ ರಾಧಾಕೃಷ್ಣ ನಿರ್ದೇಶಿಸಿ, ನಿರ್ಮಿಸಿರುವ “ಮದಕರಿಪುರ” ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗ ಈ ಸಿನಿಮಾಗೆ ಸೆನ್ಸಾರ್‌ ಮಂಡಳಿ ವೀಕ್ಷಿಸಿ, “ಯು/ಎ” ಪ್ರಮಾಣ ಪತ್ರ ನೀಡಿದೆ. ತಾತಾ ಪ್ರೊಡಕ್ಷನ್ಸ್‌ನಲ್ಲಿ ಪಲ್ಲಕ್ಕಿ ನಿರ್ಮಿಸಿರುವ ನಾಲ್ಕನೇ ಸಿನಿಮಾ ಇದು. ಅಂದಹಾಗೆ, ಈ ಸಿನಿಮಾದ ಶೀರ್ಷಿಕೆಗೆ “ಕಿಚ್ಚ ಮಾತಾಡ್ತಾನೆ” ಎಂಬ ಅಡಿಬರಹವಿದೆ.

ಸದ್ಯ ಚಿತ್ರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ನಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಹಾಡುಗಳನ್ನೂ ಬರೆದು ನಿರ್ದೇಶಿಸಿರುವ ಪಲ್ಲಕ್ಕಿ, “ಗಿಡ್ಡೋಬಾ ಮಾತಾಡ್ತಾನೆ” ಕಾದಂಬರಿ ನಾಟಕ ಆಧರಿಸಿ ಚಿತ್ರ ಮಾಡಿದ್ದಾರೆ. ಇದು ವಾಲ್ಮೀಕಿ ರಾಮಾಯಣದ ಎಳೆಯೊಂದನ್ನು ಆಧರಿಸಿ, ಕಾಮಿಡಿ, ಮರ್ಡರ್‌ ಮಿಸ್ಟ್ರಿ ಜೊತೆ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿದ ʼಗಿಡ್ಡೋಬಾ ಮಾತಾಡ್ತಾನೆ” ಕಾದಂಬರಿ ನಾಟಕ ಚಿತ್ರಕ್ಕೆ ರಾಜಾಶಿವಶಂಕರ್‌ ಅವರು ಛಾಯಾಗ್ರಹಣ ಮಾಡಿದರೆ, ಸ್ಯಾಮ್‌ ಸಂಗೀತವಿದೆ. ಗೌತಮ್‌ ಪಲ್ಲಕ್ಕಿ ಸಂಕಲನ ಮಾಡಿದ್ದಾರೆ.

ಡಿಫರೆಂಟ್‌ ಡ್ಯಾನಿ ಸಾಹಸವಿದೆ. ತ್ರಿಭುವನ್‌ ಅವರ ನೃತ್ಯ ನಿರ್ದೇಶನವಿದೆ. ಬಹುತೇಕ ಬೆಂಗಳೂರು, ಹಿರಿಯೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ನಂದಿಗ್ರಾಮ, ಕೈವಾರ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಡಾ.ರಾಧಾಕೃಷ್ಣ ಪಲ್ಲಕ್ಕಿ, ಪ್ರಕಾಶ್‌ ಅರಸ್‌, ಎಂ.ಕೆ.ಮಠ, ಶ್ರೀನಿವಾಸ ಗುರೂಜಿ, ನೈರುತ್ಯ, ಸೀನೂ ಮಾರ್ಕಾಳಿ, ವಿನಯ್‌ ಬಲರಾಮ್‌, ಅರ್ಗವಿ ರಾಯ್‌, ರೆಡ್ಡಿ ಹಿರಿಯೂರ್‌, ಸವಿತಾ ಚಿನ್ಮಯಿ, ವೆಂಕಟಾಚಲ ಸೇರಿದಂತೆ ಪಲ್ಲಕ್ಕಿ ಫಿಲಂ ಇನ್ಸ್‌ಟಿಟ್ಯೂಟ್‌ ವಿದ್ಯಾರ್ಥಿಗಳು ನಟಿಸಿದ್ದಾರೆ.

 

Categories
ಸಿನಿ ಸುದ್ದಿ

ಮತ್ತೊಂದು ಮೂಕಿ ಚಿತ್ರ ಪುಷ್ಕಕ್‌ ತೆರೆಗೆ ಬರಲು ಸಜ್ಜು

ಡಿಸೆಂಬರ್‌ 4 ರಂದು ಓಟಿಟಿಯಲ್ಲಿ ಬಿಡುಗಡೆ

ಹಲವು ದಶಕಗಳ ಹಿಂದೆ “ಪುಷ್ಪಕ ವಿಮಾನ” ಎಂಬ ಮೂಕಿ ಚಿತ್ರ ಬಂದಿದ್ದು ಬಹುತೇಕರಿಗೆ ಗೊತ್ತೇ ಇದೆ. ಆ ನಂತರವೂ ಕನ್ನಡದಲ್ಲಿ ಮೂಕಿ ಚಿತ್ರಗಳು ಬಂದಿವೆ. ಈಗ ಆ ಸಾಲಿಗೆ “ಪುಷ್ಪಕ್”‌ ಎಂಬ ಮತ್ತೊಂದು ಮೂಕಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, “ಪುಷ್ಪಕ್” ಸಿನಿಮಾವನ್ನು ಓಂ ಪ್ರಕಾಶ್‌ ನಾಯಕ್‌ ನಿರ್ದೇಶಿಸಿದ್ದಾರೆ. ಇಲ್ಲಿ ಬರೀ ಹಾವ-ಭಾವಗಳಲ್ಲೇ ಅರ್ಥವಾಗುವಂತಹ ದೃಶ್ಯಗಳನ್ನ ಸೆರೆಹಿಡಿದಿದ್ದಾರೆ ನಿರ್ದೇಶಕರು. ಕಥೆಯ ಬಗ್ಗೆ ಹೇಳುವುದಾದರೆ, ಚಿತ್ರದ ಹೀರೋ ಒಬ್ಬ ಫೋಟೋಗ್ರಾಫರ್, ಬೇರೆ ಊರಿನಿಂದ ಬಂದ ಒಬ್ಬ ಶ್ರೀಮಂತ ಯುವತಿಯನ್ನು ನೋಡಿದ ಮರುಕ್ಷಣ ತನ್ನ ಮನದಲ್ಲೇ ಪ್ರೀತಿಸಲು ತೊಡಗುತ್ತಾನೆ. ಆದರೆ ತನ್ನ ಪ್ರೀತಿಯನ್ನು ಅವಳಿಗೆ ಹೇಳಿಕೊಳ್ಳಲು ಹಿಂಜರಿದು, ತನಗೆ ಚಹಾ ಕೊಡಲು ಬರುವ ಹೋಟೆಲ್ ಹುಡುಗನ ಕೈಲಿ ಲವ್‍ಲೆಟರ್ ಬರೆದು ಕೊಟ್ಟು ಕಳುಹಿಸುತ್ತಾನೆ. ಹೋಟೆಲ್ ಹುಡುಗ ಅವರ ಪ್ರೀತಿಗೆ ರಾಯಭಾರಿಯಾಗುತ್ತಾನೆ. ಹಾಗೆಯೇ ಅವನೂ ಸಹ ನಾಯಕಿಯನ್ನು ಪ್ರೀತಿಸಲು ಮುಂದಾಗುತ್ತಾನೆ. ನಂತರ ದಿನಗಳಲ್ಲಿ ದಾರಿಗೆ ನಾಯಕ ಅಡ್ಡಿಯಾದಂತೆ ಭಾವಿಸಿ ನಾಯಕನನ್ನೇ ಕೊಲ್ಲಲು ಆತ ಸಂಚು ಹೂಡುತ್ತಾನೆ. ಮುಂದೇನಾಗುತ್ತೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು ಚಿತ್ರತಂಡದ ಹೇಳಿಕೆ.


ಇನ್ನು, ಈ ಚಿತ್ರ ಮಹದೇಶ್ವರ ಎಂಟರ್‌ಪ್ರೈಸಸ್‌ ಬ್ಯಾನರಡಿಯಲ್ಲಿ ನಿರ್ಮಾಣವಾಗಿದೆ. ಓಂಪ್ರಕಾಶ್‌ನಾಯಕ್ ಕಥೆ, ಚಿತ್ರಕಥೆ‌ ಬರೆದು, ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ನಾಯಕನಾಗಿಯೂ ನಟಿಸಿದ್ದಾರೆ. ವಿಶ್ವನಾಥ್ ಅವರ ಛಾಯಾಗ್ರಹಣವಿದೆ. ಶಂಕರ್ ಹಾಗೂ ರಾವಣ ಅವರ ಸಹ ನಿರ್ದೇಶನವಿದೆ. ಕುಮಾರ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಕೃತಿಕಾ, ಚಂದ್ರು, ಅವಿನಾಶ್ ಭಾರಧ್ವಜ್‌, ನಾಗೇಂದ್ರರಾವ್ ಆರ್.ಎಂ, ಸವಿತಾ ಇತರರು ನಟಿಸಿದ್ದಾರೆ. ಡಿಸೆಂಬರ್‌ 4 ರಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ಹೊಂಬಾಳೆ ಫಿಲಂಸ್‌ ಮತ್ತೊಂದು ದೊಡ್ಡ ಹೆಜ್ಜೆ- ಏಕಕಾಲದಲ್ಲಿ ಹಲವು ಭಾಷೆಯ ಸಿನಿಮಾ ಮಾಡಲು ರೆಡಿ

ಡಿ. 2 ರಂದು ಹೊರಬೀಳಲಿದೆ ಬಹುದೊಡ್ಡ ಘೋಷಣೆ

ಏಳು ವರ್ಷ… ಏಳು ಸಿನಿಮಾ.. ಸೋಲಿಗಿಂತ ದೊಡ್ಡ ಗೆಲುವಿನ ಪಾಲೇ ಹೆಚ್ಚು..!
-ಇದು ಹೊಂಬಾಳೆ ಫಿಲಂಸ್‌ ನಿರ್ಮಾಣದ ಚಿತ್ರಗಳ ಸುದ್ದಿ. ಹೌದು, ಹೊಂಬಾಳೇ ಫಿಲಂಸ್‌ ಕಳೆದ ಏಳು ವರ್ಷಗಳಲ್ಲಿ ಏಳು ಚಿತ್ರಗಳನ್ನು ನಿರ್ಮಾಣ ಮಾಡಿದೆ. ಈ ಪೈಕಿ ಮೂರು ಚಿತ್ರಗಳು ಪ್ಯಾನ್‌ ಇಂಡಿಯಾ ಸಿನಿಮಾಗಳು ಅನ್ನುವುದು ಖುಷಿ. ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್​ ಇದೀಗ ಹೊಸ ಸಾಹಸಕ್ಕೆ ಹೆಜ್ಜೆ ಇಡುತ್ತಿದೆ. ಆ ಸಾಹಸವೂ ಸಿನಿಮಾ ನಿರ್ಮಾಣದ್ದೇ ಅನ್ನುವುದು ವಿಶೇಷ. ಹೌದು, ಈ ವರ್ಷಗಳ ಅವಧಿಯಲ್ಲಿ ಭಾರತ ಮಾತ್ರವಲ್ಲ, ವಿದೇಶಗಳೂ ಇತ್ತ ಒಮ್ಮೆ ತಿರುಗಿ ನೋಡುವಂತಹ ಸಿನಿಮಾಗಳನ್ನು ಕಟ್ಟುಕೊಟ್ಟಿರುವುದು ಈ ಸಂಸ್ಥೆಯ ಹೆಮ್ಮೆ. ಈಗ ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಸಂಸ್ಥೆ ಮುಂದಾಗಿದೆ. ಡಿಸೆಂಬರ್​ 2ರ ಮಧ್ಯಾಹ್ನ ಹೊಸ ಚಿತ್ರದ ಬಗ್ಗೆ ಹೊಂಬಾಳೆ ಸಂಸ್ಥೆ ಮಾಹಿತಿ ಹಂಚಿಕೊಳ್ಳಲಿದೆ.

ವಿಜಯ್‌ ಕಿರಗಂದೂರು, ನಿರ್ಮಾಪಕ

ಕಳೆದ 2014ರಲ್ಲಿ “ನಿನ್ನಿಂದಲೇ” ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ವಿಜಯ್‌ ಕಿರಗಂದೂರು ಅವರ ಹೊಂಬಾಳೆ ಫಿಲಂಸ್​ನ ನಿರ್ಮಾಣದ ಪಯಣ ಇಲ್ಲಿಯವರೆಗೆ ಯಶಸ್ಸಿನ ಮೆಟ್ಟಿಲ್ಲನ್ನು ಹತ್ತಿಕೊಂಡೇ ಬಂದಿದೆ. “ಮಾಸ್ಟರ್ ಪೀಸ್”​,” ರಾಜಕುಮಾರ”, “ಕೆಜಿಎಫ್”, “ಕೆಜಿಎಫ್​ 2”, “ಯುವರತ್ನ” ಚಿತ್ರದವರೆಗೂ ಹೊಂಬಾಳೆ ತನ್ನ ಅದ್ಧೂರಿ ನಿರ್ಮಾಣ ಚಿತ್ರಗಳನ್ನು ನೀಡುತ್ತ ಬಂದಿದೆ. ಏಳು ವರ್ಷಗಳಲ್ಲಿ ಏಳು ಸಿನಿಮಾ ನೀಡುವ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ಈ ಏಳು ಸಿನಿಮಾಗಳ ಪೈಕಿ ಮೂರು ಪ್ಯಾನ್​ ಇಂಡಿಯಾ ಚಿತ್ರಗಳು. ಈಗ ಈ ಎಲ್ಲಾ ಸಿನಿಮಾಗಳಿಗಿಂತಲೂ ಮತ್ತೊಂದು ದೊಡ್ಡ ಸಿನಿಮಾ ಘೋಷಣೆ ಮಾಡಲು ಹೊಂಬಾಳೆ ಸಂಸ್ಥೆ ರೆಡಿಯಾಗಿದೆ.

ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಇಂಡಿಯನ್ ಚಿತ್ರ ನಿರ್ಮಿಸುವ ಗುರಿ ಹೊಂದಿರುವ ಸಂಸ್ಥೆ, ಡಿ.೨ರಂದು ಆ ಕುರಿತಂತೆ ಅಧಿಕೃತ ಮಾಹಿತಿ ಹೊರಹಾಕಲಿದೆ. ಆ ಚಿತ್ರ ಯಾವುದು, ನಿರ್ದೇಶಕರು ಯಾರು, ಯಾರೆಲ್ಲಾ ಆ ಚಿತ್ರದಲ್ಲಿರುತ್ತಾರೆ ಎಂಬಿತ್ಯಾದಿ ಕುರಿತು ವಿಷಯ ಹೊರಬೀಳಲಿದೆ.
ಈಗಾಗಲೇ ಪ್ಯಾನ್​ ಇಂಡಿಯಾ ಕಾನ್ಸೆಪ್ಟ್ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿಬರುತ್ತಿದ್ದು, ಅದೊಂದು ಉತ್ತಮ ಬೆಳೆವಣಿಗೆ ಎನ್ನಲಾಗುತ್ತಿದೆ. ಕನ್ನಡದ “ಕೆಜಿಎಫ್”​ ಸಿನಿಮಾ ಈಗಾಗಲೇ ದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಿರುವುದು ಗೊತ್ತೇ ಇದೆ. ಅದರ ಹತ್ತು ಪಟ್ಟು ನಿರೀಕ್ಷೆ “ಕೆಜಿಎಫ್​ ಚಾಪ್ಟರ್ 2” ಮೇಲೂ ಇದೆ. ಹಾಗೆಯೇ ಪುನೀತ್ ರಾಜ್​ಕುಮಾರ್ ಅವರ “ಯುವರತ್ನ” ಚಿತ್ರವೂ ಕನ್ನಡದ ಜತೆಗೆ ತೆಲುಗಿನಲ್ಲೂ ಬಿಡುಗಡೆ ಆಗುತ್ತಿದೆ. ಹೀಗೆ ಈ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಸಂಸ್ಥೆಯೇ ಇದೀಗ ಇಡೀ ಭಾರತದಲ್ಲೇ ಮೊದಲ ಸಲ ಯಾರೂ ಮಾಡದಂತಹ ಹೊಸ ಸಾಹಸಕ್ಕೆ ಕೈ ಹಾಕಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಗೆ ಡಿಸೆಂಬರ್‌ 2 ರವರೆಗೆ ಕಾಯಬೇಕು.

Categories
ಸಿನಿ ಸುದ್ದಿ

ಲಾಕ್‌ಡೌನ್‌ ಸಮಯದಲ್ಲಿ ಹುಟ್ಟಿದ ಪ್ರೀತಿ – ಲವ್ ಇನ್ ಲಾಕ್ ಡೌನ್ ಚಿತ್ರಕ್ಕೆ ಚಾಲನೆ

ಹೊಸಬರ ಪ್ರೀತಿಯ ಕಥೆ ವ್ಯಥೆ

 

ಲಾಕ್‌ಡೌನ್‌ ಸಮಯದಲ್ಲಿ ಹೆಚ್ಚು ಉಪಯೋಗವಾಗಿದ್ದು ಆನ್ನುವುದಾದರೆ ಅದು ಸಿನಿಮಾ ಮಂದಿಗೆ. ಹೌದು, ಈ ಸಮಯದಲ್ಲಿ ಸಾಕಷ್ಟು ಜನ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಒಂದೊಳ್ಳೆಯ ಸ್ಕ್ರಿಪ್ಟ್‌ ಮಾಡಿಕೊಂಡಿದ್ದುಂಟು. ಅಷ್ಟೇ ಅಲ್ಲ, ಬಹುತೇಕರು ಆ ಸಮಯದಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡೋಕೆ ಮುಂದಾಗಿದ್ದು ಹೌದು. “ಕೊರೊನಾ” ಕುರಿತ ಕಥೆ ಹೆಣೆದ ಜನ ಒಂದಷ್ಟು ಇದ್ದರೆ, ಲಾಕ್‌ಡೌನ್‌ ಸಮಯದಲ್ಲಿ ಆದಂತಹ ಸಮಸ್ಯೆಗಳ ಕುರಿತು ಕಥೆ ಮಾಡಿಕೊಂಡವರು ಒಂದಷ್ಟು ಮಂದಿ ಇದ್ದಾರೆ. ಈಗ ಇಲ್ಲೊಂದು ಹೊಸಬರ ತಂಡ, ಲಾಕ್‌ ಡೌನ್‌ ಸಮಯದಲ್ಲಿ ಆಗುವಂತಹ ಕೆಲ ವಿಷಯಗಳನ್ನು ಇಟ್ಟುಕೊಂಡು ಒಂದು ಕಥೆ ಹೆಣೆದು, ಚಿತ್ರ ಮಾಡಲು ಹೊರಟಿದೆ. ಆ ಚಿತ್ರಕ್ಕೆ “ಲವ್‌ ಇನ್‌ ಲಾಕ್‌ಡೌನ್”‌ ಎಂದು ನಾಮಕರಣ ಮಾಡಿದೆ.


ಚಿತ್ರದ ಶೀರ್ಷಿಕೆಯೇ ಹೇಳಿದಂತೆ, ಇದೊಂದು ಲಾಕ್ ಡೌನ್ ಸಮಯದಲ್ಲಿ ನಡೆದ ದುರಂತ ಪ್ರೇಮಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಲಾಕ್‍ಡೌನ್ ಸಮಯದಲ್ಲಿ ಒಂದಷ್ಟು ಅಪರೂಪದ ಘಟನೆಗಳು ನಡೆದಿದ್ದು, ಆ ವೇಳೆ ನಡೆದ ಒಂದು ಘಟನೆಯೇ ಈ ಚಿತ್ರಕ್ಕೆ ಸ್ಫೂರ್ತಿ ಅನ್ನುವುದು ಚಿತ್ರತಂಡದ ಹೇಳಿಕೆ.


ಅಂದಹಾಗೆ, ಲಾಕ್ ಡೌನ್ ವೇಳೆ ನಡೆದ ಪ್ರೀತಿ, ಪ್ರೇಮ ಪ್ರಣಯದ ಕಥೆಯನ್ನು ತೆರೆಯ ಮೇಲೆ ತರಲು ಹೊರಟಿರೋದು ನಿರ್ದೇಶಕ ಮಂಜುನಾಥ್ ಬಿ.ರಾಮ್. ಶ್ರೀ ಕನ್ನಡಾಂಬೆ ಮೂವೀಸ್ ಬ್ಯಾನರ್ ಅಡಿಯಲ್ಲಿ ಎಂ.ನಾರಾಯಣಸ್ವಾಮಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಮಂಜುನಾಥ್ ಬಿ.ರಾಮ್ ಅವರು ತಾವು ಕಂಡ ಪ್ರೇಮಕಥೆಯೊಂದನ್ನು ಹಾಗು ಅದರ ದುರಂತ ಅಂತ್ಯವನ್ನು ಸಿನಿಮಾ ರೂಪದಲ್ಲಿ ಹೇಳ ಹೊರಟಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಚಿಕ್ಕಬಳ್ಳಾಪುರದ ರಂಗಸ್ಥಳದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮುಹೂರ್ತ ನಡೆದಿದೆ.

ಈಗಾಗಲೇ “ನಾ ಕನ್ನಡಿಗನೆಂದುಕೊಂಡು ಬಾಳು ಮಗಾ..” ಎನ್ನುವ ಗೀತೆಯನ್ನು ಸುಮಾರು 40 ಮಂದಿ ನೃತ್ಯ ಕಲಾವಿದರೊಂದಿಗೆ ಚಿತ್ರೀಕರಿಸಲಾಗಿದೆ. ಇನ್ನು ಈ ಚಿತ್ರದಲ್ಲಿ ಮಂಜುನಾಥ್‌ ಹೀರೋ. ಅವರಿಗೆ ಯಶಸ್ವಿ ನಾಯಕಿ. ಈ ಹಿಂದೆ ಯಶಸ್ವಿ “ಲೆಕ್ಕಾಚಾರ” ಎಂಬ ಚಿತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ “ಕಿಲ್ಲರ್” ವೆಂಕಟೇಶ್, ಬ್ಯಾಂಕ್ ಜನಾರ್ದನ್, ಗಣೇಶ್‍ರಾವ್, ಭಲರಾಮ್ ಪಾಂಚಾಲ, ಪಲ್ಲವಿ ರಾಜೇಂದ್ರ ಇತರರು ನಟಿಸುತ್ತಿದ್ದಾರೆ. ರಮೇಶ್ ಕೊಯಿರಾ ಛಾಯಾಗ್ರಹಣವಿದೆ. ಡ್ಯಾನಿಯಲ್ ಸಂಗೀತ, ಪ್ರಸನ್ನ ನೃತ್ಯವಿದೆ. ಶಿವು ಅವರ ಸಾಹಸ ಹಾಗೂ ರಾಜೀವ್ ಕೃಷ್ಣ ಅವರು ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ, ಗಜೇಂದ್ರಗಡ ಸುತ್ತಮುತ್ತ ಮೂರು ಹಂತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರು ಮಾಡಿಕೊಂಡಿದೆ.

Categories
ಸಿನಿ ಸುದ್ದಿ

ಹೊಸಬರ ಕಾಯಕವೇ ಕೈಲಾಸ – ಉದ್ಯೋಗಂ ಪುರುಷ ಲಕ್ಷಣಂ ರಿಲೀಸ್‌ಗೆ ರೆಡಿ

ಅವಳು ಮತ್ತು ಅವರು- ತ್ರಿಕೋನ ಪ್ರೇಮಕಥೆಯಲ್ಲಿ ಕೆಲಸ ಗಿಲಸ ಇತ್ಯಾದಿ..

ಪುರುಷರು ಮನೆಯಲ್ಲಿರಬಾರದು. ಹಾಗಂತ, ಹೊರಗೆ ಸುತ್ತಾಡಬೇಕು ಅಂತಲ್ಲ. ಸಣ್ಣದಾದರೂ ಪರವಾಗಿಲ್ಲ ಒಂದು ಉದ್ಯೋಗ ಅನ್ನೋದು ಇರಬೇಕು. ಅದಕ್ಕಾಗಿಯೇ ಒಂದು ಗಾದೆ ಇದೆ. “ಉದ್ಯೋಗಂ ಪುರುಷ ಲಕ್ಷಣಂ” ಅಂತ. ಈಗ ಇದೇ ಹೆಸರಿನಲ್ಲೊಂದು ಸಿನಿಮಾ ಕೂಡ ಆಗಿದೆ. ಹೌದು, ಇಲ್ಲೀಗ ಹೇಳ ಹೊರಟಿರುವುದು ಕೂಡ “ಉದ್ಯೋಗಂ ಪುರುಷ ಲಕ್ಷಣಂ” ಬಗ್ಗೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ತಮ್ಮ ಚಿತ್ರದ ಬಗ್ಗೆ ಹೇಳಲೆಂದೇ ಚಿತ್ರತಂಡ ಮಾಧ್ಯಮ ಮುಂದೆ ಆಗಮಿಸಿತ್ತು. ಇದು ಬಹುತೇಕ ಹೊಸಬರೇ ಸೇರಿ ಮಾಡಿರುವ ಚಿತ್ರ. ಈ ಚಿತ್ರದ ಮೂಲಕ ಸುಜಿತ್‌ ಕುಮಾರ್‌ ಕೆ.ಎಂ. ಕುಡ್ಲೂರು ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜವಾಬ್ದಾರಿಯೂ ಅವರದೇ. ತಮ್ಮ ಚೊಚ್ಚಲ ಸಿನಿಮಾ ಕುರಿತು ಸುಜಿತ್‌ ಕುಮಾರ್‌ ಹೇಳಿದ್ದಿಷ್ಟು.

ಸುಜಿತ್‌, ನಿರ್ದೇಶಕ

“ನನಗೆ ನಿರ್ದೇಶನ ಅನ್ನೋದು ತುಂಬ ಆಸಕ್ತಿಯ ವಿಷಯ. ಅದಕ್ಕಾಗಿ ನಾನು ಎಂಟು ವರ್ಷಗಳ ಕಾಲ ಅಲೆದಾಟ ನಡೆಸಿದೆ. ಒಂದು ಐಡೆಂಟಿಟಿ ಸಿಕ್ಕರೆ ಮಾತ್ರ ನಾವು ಏನು ಅಂತ ತೋರಿಸಲು ಸಾಧ್ಯ. ಹೀಗೆ ಒಮ್ಮೆ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಟೆಂಟ್‌ ಸಿನಿಮಾಗೆ ಹೋದೆ. ಸಿಗಲಿಲ್ಲ. ಒಂದಷ್ಟು ಸಮಯ ಹೋಗಿ ಬಂದು ಮಾಡಿದೆ. ಒಮ್ಮೆ ಸಿಕ್ಕರು. ಆಗ ನನ್ನ ಆಸೆ ಹೊರಹಾಕಿದೆ. ಚಿತ್ರಕಥೆ, ಕಟ್ಟುವ ವಿಭಾಗದಲ್ಲಿ ತರಬೇತಿ ಪಡೆದೆ. ಅವರ ಜೊತೆಗೆ ನಾನು “ಇಷ್ಟಕಾಮ್ಯ” ಸಿನಿಮಾದಲ್ಲೂ ಕೆಲಸ ಮಾಡಿದೆ. ನಂತರ ಹೊಸದೊಂದು ಸಿನಿಮಾ ಮಾಡಬೇಕು ಅಂತ ಹೊರಟೆ. ಪವನ್‌, ವೆಂಕಟೇಶ್‌, ಉಮೇಶ್‌ ನನ್ನ ಪ್ರಯತ್ನಕ್ಕೆ ಸಾಥ್‌ ಕೊಟ್ಟರು. ಈ ಚಿತ್ರ ಶುರುವಾಯ್ತು. ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ನಾಲ್ವರು ಹುಡುಗರ ಸುತ್ತ ನಡೆಯುವ ಕಥೆ. ರೊಮ್ಯಾನ್ಸ್‌, ಕಾಮಿಡಿ ಹಾಗು ಸಸ್ಪೆನ್ಸ್‌ ಜೊತೆಗೆ ಒಂದಷ್ಟು ವಿಷಯಗಳನ್ನು ಹೊಂದಿದೆ. ಸರಳ ತ್ರಿಕೋನ ಪ್ರೇಮಕಥೆ ಇಲ್ಲಿದ್ದು, ಕಾಯಕವೇ ಕೈಲಾಸ ಎಂಬುದನ್ನು ಹೇಳಲಾಗಿದೆʼ ಎನ್ನುತ್ತಾರೆ ಸುಜಿತ್.‌

ರಾಕೇಶ್‌, ನಿರ್ಮಾಪಕ

ನಾಯಕ ರಾಜ್‌ ಚರಣ್‌ ಅವರು ಇಲ್ಲಿಗೆ ಬರಲು ನಾಗತಿಹಳ್ಳಿ ಚಂದ್ರಶೇಖರ್‌ ಅವರ ಟೆಂಟ್‌ ಸಿನಿಮಾ ಕಾರಣವಂತೆ. ಅವರಿಲ್ಲಿ ಅರುಣ್‌ ಎಂಬ ಪಾತ್ರ ಮಾಡುತ್ತಿದ್ದು, ಅದೊಂದು ರೀತಿ ಲವ್ವರ್‌ ಬಾಯ್‌ ಪಾತ್ರವಂತೆ. ನನಗಿಲ್ಲಿ ಡ್ಯಾನ್ಸ್‌ ಕಷ್ಟವಿತ್ತು. ವಿಜಯ್‌ ಮಾಸ್ಟರ್‌ ಎಲ್ಲವನ್ನೂ ಚೆನ್ನಾಗಿ ಹೇಳಿಕೊಟ್ಟಿದ್ದಕ್ಕೆ ಸುಲಭವಾಯ್ತು. ಒಂದೊಳ್ಳೆಯ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅಂದರು ರಾಜ್‌ಚರಣ್.‌

ರಾಜ್‌ ಚರಣ್‌

ನಿರ್ಮಾಪಕ ರಾಕೇಶ್‌ ಚೆಲುವರಾಜ್‌ ಅವರಿಗೆ ಇದು ಮೊದಲ ಅನುಭವ. ಅವರಿಗೆ ನಿರ್ದೇಶಕ ಸುಜಿತ್‌ ಒಳ್ಳೆಯ ಗೆಳೆಯರು. ಅವರು ಒಮ್ಮೆ ಕಥೆ ಬಗ್ಗೆ ಚರ್ಚೆ ನಡೆಸಿದಾಗ, ಸಿನಿಮಾ ಮಾಡುವ ಮನಸ್ಸು ಮಾಡಿದರಂತೆ. ಚಿತ್ರದ ಕಥೆ ಮತ್ತು ಹಾಡು ಎಲ್ಲವೂ ಸೊಗಸಾಗಿದೆ. ಒಳ್ಳೆಯ ತಂಡ ಚೆನ್ನಾಗಿ ಕೆಲಸ ಮಾಡಿದೆ. ಪ್ರೇಕ್ಷಕರಿಗೆ ನಮ್ಮ ಸಿನಿಮಾ ಇಷ್ಟವಾಗುವ ನಂಬಿಕೆ ಇದೆʼ ಎಂಬುದು ರಾಕೇಶ್‌ ಚೆಲುವರಾಜ್‌ ಮಾತು.

ಸತ್ಯ, ಸಂಗೀತ ನಿರ್ದೇಶಕ

ಸಂಗೀತ ನಿರ್ದೇಶಕ ಸತ್ಯ ರಾಧಾಕೃಷ್ಣ ಮತ್ತು ಜತಿನ್‌ ದರ್ಶನ್‌ ಸಂಗೀತ ನೀಡಿದ್ದಾರೆ. ತಮ್ಮ ಸಂಗೀತದ ಬಗ್ಗೆ ಮಾತನಾಡಿದ ಸತ್ಯ ರಾಧಾಕೃಷ್ಣ, “ಇಲ್ಲಿ ಎರಡು ಹಾಡುಗಳಿವೆ. ನಾನು “ವಿರೂಪ” ಚಿತ್ರದಲ್ಲಿ ಕೆಲಸ ಮಾಡುವಾಗ, ನಿರ್ದೇಶಕರ ಪರಿಚಯವಾಯ್ತು. ಅದು ಈ ಸಿನಿಮಾ ಆಗುವರೆಗೆ ಬಂದು ನಿಂತಿದೆ. ಒಂದು ಹಾಡನ್ನು ನಾನು ಹಾಡಿದ್ದೇನೆ. ಇನ್ನೊಂದು ಚೇತನ್‌ ನಾಯಕ್‌ ಹಾಡಿದ್ದಾರೆ ಎಂದು ವಿವರ ಕೊಟ್ಟರು.

ರಿಧಿ ರಾವ್‌

ನಾಯಕಿ ರಿಧಿರಾವ್‌ ಅವರಿಲ್ಲಿ ಪೃಥ್ವಿ ಎಂಬ ಪಾತ್ರ ನಿರ್ವಹಿಸಿದ್ದಾರಂತೆ. ಇಬ್ಬರು ನಾಯಕರ ಜೊತೆ ಸಾಗುವ ಕಥೆಯಲ್ಲಿ ಪ್ರೀತಿಯ ಅಂಶಗಳಿವೆ ಎಂದರೆ, ಮತ್ತೊಬ್ಬ ಹೀರೋ ಸಾವನ್‌ ಸಿಂಗ್‌ ಠಾಕೂರ್‌, ಇಲ್ಲಿ ಚಂದು ಎಂಬ ಮುಗ್ಧ ಹುಡುಗನ ಪಾತ್ರ ಮಾಡಿದ್ದಾಗಿ ಹೇಳಿಕೊಂಡರು. ನೃತ್ಯ ನಿರ್ದೇಶಕ ವಿಜಯ್‌ ಅವರು ಎರಡು ಸಾಂಗ್‌ಗಳಿಗೆ ನೃತ್ಯ ನಿರ್ದೇಶನ ಮಾಡಿದರ ಬಗ್ಗೆ ಹೇಳಿಕೊಂಡರು. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ರಾಮಿಶೆಟ್ಟಿ ಪವನ್‌
Categories
ಸಿನಿ ಸುದ್ದಿ

ಯುವರತ್ನ ಪ್ರೋಮೋ ರಿಲೀಸ್‌- ಜನವರಿ 21ಕ್ಕೆ ಚಿತ್ರ ಬರುವ ಸಾಧ್ಯತೆ

ಪವರ್‌ ಅಫ್‌ ಯೂಥ್‌ ಅನ್ನಿ ಅಂದ್ರು ಅಪ್ಪು

ಈ ವರ್ಷದ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ ಅಂದರೆ ಅದು ಪುನೀತ್‌ರಾಜಕುಮಾರ್‌ ಅಭಿನಯದ “ಯುವರತ್ನ”. ಆರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿದ್ದ ಚಿತ್ರದ ಹೊಸದೊಂದು ಪ್ರೋಮೋ ನ.27ರ ಶುಕ್ರವಾರ ಸಂಜೆ ಬಿಡುಗಡೆಯಾಗಿದೆ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ “ಯುವರತ್ನ” ಚಿತ್ರದ ‘ಪವರ್ ಆಫ್ ಯೂಥ್” ಹೆಸರಿನ ಈ ಪ್ರೋಮದಲ್ಲಿ ಯುವರತ್ನ ಸಿನಿಮಾದ ಹಾಡಿನ ತುಣುಕು ಇದೆ. ಈ ತುಣುಕಲ್ಲಿ ಪುನೀತ್‌ರಾಜ್‌ಕುಮಾರ್ ಸಖತ್ ಯೂಥ್‌ಫುಲ್ ಆಗಿ ಮಿಂಚಿದ್ದಾರೆ. ಗಿಟಾರ್ ಹಿಡಿದುಕೊಂಡು ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಪುನೀತ್, “ಹೆಸರು ಮಾಡು ಹಸಿರಾಗೊ ಹಾಗೆ, ಉಸಿರು ಹೋದರೂ ಹೆಸರಿರುವ ಹಾಗೆ, ಆ ಚರಿತ್ರೆಗೆ ನೀನೆ ಮುನ್ನುಡಿ, ನೂರು ಸಾರಿ ಕೂಗು, ಪವರ್ ಆಫ್ ಯೂಥ್’ ಎಂದು ಹಾಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಈ ಪ್ರೋಮೋದಲ್ಲಿ ನಿರ್ದೇಶಕ ಸಂತೋಷ್‌ ಆನಂದ್‌ರಾಮ್ ಕೂಡ ಹೆಜ್ಜೆ ಹಾಕಿದ್ದಾರೆ. ಅಂದಹಾಗೆ, ಇದು ಒಂದು ಝಲಕ್. ಚಿತ್ರದ ಈ ಹಾಡು ಮತ್ತು ವಿಡಿಯೋ ಡಿಸೆಂಬರ್ 2ಕ್ಕೆ ಬಿಡುಗಡೆ ಆಗಲಿದೆ ಎಂಬುದು ಚಿತ್ರತಂಡದ ಮಾತು.


ಈ ಚಿತ್ರಕ್ಕೆ ವಿಜಯ್ ಕಿರಗಂದೂರ್ ನಿರ್ಮಾಪಕರು. ಪುನೀತ್‌ ರಾಜಕುಮಾರ್‌ ಅವರಿಗೆ ಚಿತ್ರದಲ್ಲಿ ಸಾಯೇಷಾ ನಾಯಕಿಯಾಗಿದ್ದಾರೆ. ಧನಂಜಯ್, ದಿಗಂತ್, ಸಾಯಿಕುಮಾರ್, ಸುಧಾರಾಣಿ ಸೇರಿದಂತೆ ಹಲವರು ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, “ಯುವರತ್ನ” ಜನವರಿ 21ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.

Categories
ಸಿನಿ ಸುದ್ದಿ

ಹೀಗೊಂದು ಗುಡ್‌ ಟೈಟಲ್‌ ಟೀಸರ್‌‌ ಮೇಕಿಂಗ್ – ಹೊಸಬರ ವಿಭಿನ್ನ ಪ್ರಯೋಗ!

ಟೈಟಲ್‌ಗೊಂದು ಪ್ರೋಮೋ- ಇದು ಕನ್ನಡದಲ್ಲಿ ಮೊದಲ ಪ್ರಯತ್ನ‌

ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸಬರು ಎಂಟ್ರಿಯಾಗುತ್ತಿದ್ದಾರೆ. ಪಕ್ಕಾ ತಯಾರಿಯೊಂದಿಗೆ ಒಂದಷ್ಟು ಪ್ರಯೋಗದ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಈಗ ಗುರುತಿಸಿಕೊಳ್ಳಲು ಬರುತ್ತಿರೋ ಹೊಸ ನಿರ್ದೇಶಕ ಯುವಧೀರ. ಹೌದು, ಈ ಯುವಧೀರ ಅವರಿಗೆ ಸಿನಿಮಾರಂಗ ಹೊಸದಲ್ಲ. ಕಳೆದ ಒಂದುವರೆ ದಶಕದಿಂದಲೂ ಸಿನಿಮಾರಂಗದಲ್ಲಿ ಜೀವಿಸಿದ್ದಾರೆ. ಈಗಲೂ ಜೀವಿಸುತ್ತಿದ್ದಾರೆ. ಈಗ ಹೊಸ ಸುದ್ದಿಯೆಂದರೆ, ಹೊಸತನ ಇಟ್ಟುಕೊಂಡಿರುವ ಕಥೆ ಹೆಣೆದು, ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಅವರ ಕನಸಿಗೆ ನಿರ್ಮಾಪಕ ಸುರೇಶ ಬಿ. ಅವರು ಬಣ್ಣ ತುಂಬಲು ಸಜ್ಜಾಗಿದ್ದಾರೆ.

ಯುವಧೀರ, ನಿರ್ದೇಶಕ

ಇಬ್ಬರಿಗೂ ಇದು ಮೊದಲ ಪ್ರಯತ್ನ. ಮೊದಲ ಪ್ರಯತ್ನದಲ್ಲೇ ಒಂದಷ್ಟು ಗಮನ ಸೆಳೆಯು ಅಂಶಗಳೊಂದಿಗೆ ಕನ್ನಡ ಸಿನಿಪ್ರೇಮಿಗಳಿಗೆ ಸಿನಿಮಾ ಕಟ್ಟಿಕೊಡುವ ಉದ್ದೇಶ ಇವರಿಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸ್ಕ್ರಿಪ್ಟ್‌ ಕೆಲಸ ಮುಗಿಸಿರುವ ಯುವಧೀರ, ತಮ್ಮ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಲು ತಯಾರಿ ಮಾಡಿಕೊಂಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ನವೆಂಬರ್‌ ೨೯ರಂದು ಚಿತ್ರದ ಶೀರ್ಷಿಕೆ ಅನಾವರಣಗೊಳಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶಕ ಯುವಧೀರ ಅವರು, ಶೀರ್ಷಿಕೆಗಾಗಿಯೇ ಒಂದು ಪ್ರೋಮೋ ಮಾಡಿದ್ದಾರೆ. ಅಂದು ಪ್ರೋಮೋ ಮೂಲಕ ಚಂದದ ಶೀರ್ಷಿಕೆ ಅನಾವರಣಗೊಳಿಸಲು ಸಜ್ಜಾಗಿದ್ದಾರೆ.
ಅಷ್ಟಕ್ಕೂ ಯುವಧೀರ ಅವರ ಶೀರ್ಷಿಕೆಯೇ ಒಂದಷ್ಟು ವಿಭಿನ್ನವಾಗಿದೆ. ಕಥೆಗೆ ಪೂರಕವಾಗಿಯೇ ಅವರು ಆ ಶೀರ್ಷಿಕೆ ಇಟ್ಟಿದ್ದಾರಂತೆ.‌ ಆ ಶೀರ್ಷಿಕೆ ಕುರಿತು ಹೇಳುವ ಯುವಧೀರ, ಎಲ್ಲರಿಗೂ ಸುಲಭವೆನಿಸುವ, ಎಲ್ಲರ ಬಾಯಲ್ಲೂ ಸದಾ ಬರುವ ಪದವನ್ನೇ ಇಟ್ಟುಕೊಂಡು ಶೀರ್ಷಿಕೆ ಇಟ್ಟಿದ್ದಾರೆ. ಆ ಶೀರ್ಷಿಕೆಗಾಗಿ ಒಂದು ಚಂದದ ಟೈಟಲ್‌ ಟೀಸರ್‌ ಮಾಡಿಕೊಂಡಿರುವ ಯುವಧೀರ, ಜನವರಿ ಬಳಿಕ ಚಿತ್ರೀಕರಣಕ್ಕೆ ಹೋಗುವ ಯೋಜನೆಯಲ್ಲಿದ್ದಾರೆ.

ಸುರೇಶ, ನಿರ್ಮಾಪಕರು

ಅಂದಹಾಗೆ, ಈ ಚಿತ್ರವನ್ನು ಸರ್ವಮಂಗಳ ಸುರೇಶ ಅವರು ಅರ್ಪಿಸುತ್ತಿದ್ದು, ಶ್ರೀನಿಧಿ ಪಿಕ್ಚರ್ಸ್‌ ಮೂಲಕ ತಯಾರಾಗುತ್ತಿದೆ. ಯುವಧೀರ ಅವರು, ಇಷ್ಟು ವರ್ಷಗಳ ಅನುಭವಗಳನ್ನು ಒಟ್ಟಿಗೆ ಸೇರಿಸಿಕೊಂಡು ಒಂದು ಚಂದದ ಈ ಸಿನಿಮಾಗೆ ಕೈ ಹಾಕಿದ್ದಾರೆ. ಇದೊಂದು ಡಾರ್ಕ್‌ ಹ್ಯೂಮರ್‌ ಸೆಟೈರ್‌ ಕಾಮಿಡಿ ಚಿತ್ರ. ಇದರೊಂದಿಗೆ ರೊಮ್ಯಾನ್ಸ್‌, ಥ್ರಿಲ್ಲರ್‌, ಡ್ರಾಮಾ, ಕ್ರೈಮ್‌, ಸ್ಟಂಟ್ಸ್‌ ಸೇರಿದಂತೆ ಇತ್ಯಾದಿ ಅಂಶಗಳೂ ಸೇರಿವೆ. ಇದು ಒಂದೇ ಜಾನರ್‌ಗೆ ಸೇರುವ ಸಿನಿಮಾ ಅಲ್ಲ ಅನ್ನುವ ಅವರು, ಹಲವು ಜಾನರ್‌ಗಳ ಸಮ್ಮಿಶ್ರಣ ಇಲ್ಲಿದೆ. ಹಾಗಾಗಿ ಇದನ್ನು ಹೊಸತನದ ಸಿನಿಮಾ ಎನ್ನಬಹುದು ಎಂಬುದು ಯುವಧೀರ ಮಾತು.
ಈ ಚಿತ್ರಕ್ಕೆ ಇನ್ನೂ ನಾಯಕ, ನಾಯಕಿ ಸೇರಿದಂತೆ ಕಲಾವಿದರ ಆಯ್ಕೆ ಆಗಿಲ್ಲ. ಆದರೆ, ತಾಂತ್ರಿಕ ವರ್ಗ ಅಂತಿಮವಾಗಿದೆ. ಚಿತ್ರಕ್ಕೆ ಶಶಾಂಕ್‌ ಶೇಷಗಿರಿ ಸಂಗೀತವಿದೆ. ಮರಿಸ್ವಾಮಿ ಅವರ ಸಂಕಲನವಿದೆ. ಕುಮಾರ್‌ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಸದ್ಯಕ್ಕೆ ಟೈಟಲ್‌ ಟೀಸರ್‌ ಮೇಕಿಂಗ್‌ಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.

Categories
ಸಿನಿ ಸುದ್ದಿ

ರೊಮ್ಯಾಂಟಿಕ್‌ ಮೂಡ್‌ನಲ್ಲಿ ರಾಣಿಜೇನು! ಹೊಸಬರ ವಿಡಿಯೋ ಆಲ್ಬಂ ರಿಲೀಸ್‌

ಝೇಂಕಾರ್‌ ಮ್ಯೂಸಿಕ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಹಾಡಿಗೆ ಮೆಚ್ಚುಗೆ

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿಡಿಯೋ ಆಲ್ಬಂ ಬಿಡುಗಡೆಯಾಗಿದೆ. ಆ ಸಾಲಿಗೆ ಈಗ “ರಾಣಿಜೇನು” ಎಂಬ ರೊಮ್ಯಾಂಟಿಕ್‌ ವಿಡಿಯೋ ಆಲ್ಬಂ ಬಿಡುಗಡೆಯಾಗಿದೆ. ಹೌದು, ಸಂಗೀತ ಕ್ಷೇತ್ರದಲ್ಲಿ ತಮ್ಮದ್ದೊಂದು ಛಾಪು ಮೂಡಿಸಿರುವ ಝೇಂಕಾರ್‌ ಮ್ಯೂಸಿಕ್‌ ಸಂಸ್ಥೆ ಇತ್ತೀಚೆಗೆ ತನ್ನ ಯುಟ್ಯೂಬ್‌ ಚಾನೆಲ್‌ನಲ್ಲಿ “ರಾಣಿಜೇನು” ಎಂಬ ಹೆಸರಿನ ರೊಮ್ಯಾಂಟಿಕ್‌ ವಿಡಿಯೋ ಆಲ್ಬಂ ಬಿಡುಗಡೆ ಮಾಡಿದೆ. ಸೋನಿ ಆಚಾರ್ಯ ಹಾಗೂ ಪೂಜಾ ನಾಣಯ್ಯ ನಟಿಸಿರುವ ಈ ರೊಮ್ಯಾಂಟಿಕ್‌ ಆಲ್ಬಂಗೆ ಈಗಾಗಲೇ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ.

ಈ ಹಾಡನ್ನು ಶ್ರೀರಂಗಪಟ್ಟಣ, ಕರಿಘಟ್ಟ ಸುತ್ತಮುತ್ತಲಿನ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಸೋನಿ ಆಚಾರ್ಯ ಸಾಹಿತ್ಯ ಬರೆದು, ಸಂಗೀತ ಒದಗಿಸುವುದರ ಜೊತೆಗೆ ನಟಿಸಿದ್ದಾರೆ. ಈ ರೊಮ್ಯಾಂಟಿಕ್‌ ವಿಡಿಯೋ ಅಲ್ಬಂಗೆ ರಾಮ್‌ಸಂತೋಷ್‌ ಅವರು ಛಾಯಾಗ್ರಹಣ ಮಾಡಿದರೆ, ಶಶಾಂಕ್‌ ಮುರಳೀಧರನ್‌ ಸಂಕಲನವಿದೆ. ಶ್ರೀಧರ್‌ ಶ್ರೀ ನೃತ್ಯ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕೆ ಝೇಂಕಾರ್‌ ಮ್ಯೂಸಿಕ್‌ ಯುಟ್ಯೂಬ್‌ನಲ್ಲಿ “ರಾಣಿಜೇನು” ಮೆಚ್ಚುಗೆ ಪಡೆಯುತ್ತಿದೆ.

error: Content is protected !!