ದತ್ತು ಸ್ವೀಕಾರದ’ ಸಿಂಹ’ ಹೆಜ್ಜೆ, ರೀಲ್ ಅಲ್ಲ ಈಗ ರಿಯಲ್‌ ಸಿಂಹ!

ವಸಿಷ್ಠ , ಬಲು ವಿಶಿಷ್ಟ

ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದಲ್ಲಿ ಅಂದು ‘ಸಿಂಹ’ ಓಡಾಡಿತು. ಅದನ್ನು ಹಿಂಬಾಲಿಸಿ ನಾವು ನಡೆದವು. ಒಂದು ಕಾಳಜಿಗಾಗಿ ನಡೆದ ಮ್ಯಾರಥಾನ್ ಅದಾಗಿತ್ತು. ಹೊಸ ವರ್ಷ 2021 ರ ಮೊದಲ ದಿ‌ನ ಒಂದೆಡೆ ‘ಸಿಂಹ’, ಮತ್ತೊಂದೆಡೆ ನಾವು ಒಟ್ಟಾಗಿಯೇ ಹೆಜ್ಜೆ ಹಾಕಿದ ಪರಿಯೇ ಅತ್ಯಾದ್ಬುತವಾಗಿತ್ತು. ಹೆಚ್ಚು ಕಡಿಮೆ ಒಂದೀಡಿ ದಿನ ಅದರಲ್ಲಿಯೇ ಕಳೆದು ಹೋಯಿತು. ಅರೆ, ಇದೇನು ಸಿಂಹದ ಜತೆಗಿನ ನಡಿಗೆಯಾ ಅಂತಂದು ಭಾವಿಸಬೇಡಿ. ಅದು ಹಾಗಲ್ಲ, ನಾವು ಜತೆಯಾಗಿ ಸಾಗಿದ್ದು ಬನ್ನೇರುಘಟ್ಟ ಉದ್ಯಾನವನದೊಳಗಿನ ಸಿಂಹದ ಜತೆಗಲ್ಲ, ಬದಲಿಗೆ ನಟ ವಸಿಷ್ಠ ಸಿಂಹ ಅವರ ಜತೆ. ಅದು ಕೂಡ ಒಂದು “ಸಿಂಹʼ ದ ಕಾರಣಕ್ಕೆ…

ಹೊಸ ವರ್ಷದ ಹೊಸ ಹೆಜ್ಜೆ 

ಹೊಸ ವರ್ಷ ಬಂದ್ರೆ, ಬದುಕಿಗೊಂದಿಷ್ಟು ರೆಸ್ಯೂಲೇಷನ್ ಮಾಡ್ಕೊಂಡು ಹೊಸ ವರ್ಷವನ್ನು ಹೊಸದಾಗಿ ಸ್ವಾಗತಿಸೋಣ ಅಂದುಕೊಳ್ಳುವರೆ ಹೆಚ್ಚು‌. ನಾವು- ನೀವೂ ಕೂಡ ಹೀಗೆಲ್ಲ ಅಂದುಕೊಂಡವರೆ ಅನ್ನಿ, ಆದ್ರೆ ಅವೆಲ್ಲ ಎಷ್ಟರ ಮಟ್ಟಿಗೆ ಅನುಷ್ಟಾನಗೊಂಡವು ಅಂತಂದುಕೊಂಡಾಗ, ಥಟ್ಟಂತ ನೆನಪಾಗೋದು ಅದೇ ರಾಗ, ಅದೇ ಹಾಡು.‌ ಹೊಸ ವರ್ಷ 2021ಕ್ಕೂ ಅಂತಹ ರೆಸ್ಯೂಲೇಷನ್ ಎಷ್ಟು ಜನ ಮಾಡ್ಕೊಂಡ್ರೋ ಗೊತ್ತಿಲ್ಲ, ಆದ್ರೆ ಕನ್ನಡದ ಸ್ಟಾರ್ ಗಳ ಪೈಕಿ ನಟ ವಸಿಷ್ಠ ಸಿಂಹ, 2021ಕ್ಕೆ ಹಾಗೊಂದಿಷ್ಟು ರೆಸ್ಯೂಲೇಷನ್ ಮಾಡ್ಕೊಂಡು, ಆ ಪೈಕಿ ಒಂದು ಯೋಜನೆಯನ್ನು ಹೊಸ ವರ್ಷದ ದಿನವೇ ಕಾರ್ಯಗತಕ್ಕೆ ತಂದು, ಗಮನ ಸೆಳೆದಿದ್ದು ಮಾತ್ರ ವಿಶೇಷ ಮತ್ತು ವಿಭಿನ್ನ.

ನಟನೆಯಾಚೆಯ ಇನ್ನೊಂದು ಮುಖ

ಚಿಟ್ಟೆ ಖ್ಯಾತಿಯ ವಿಲನ್ ವಸಿಷ್ಠ ಸಿಂಹ, ನಟರಾಗಿ ಹೇಗೆಲ್ಲ ವಿಭಿನ್ನ ಅನ್ನೋದು ನಿಮಗೆಲ್ಲ ಗೊತ್ತಿರುವ ವಿಚಾರ. ಕಂಚಿನ ಕಂಠ, ಖಡಕ್ ಲುಕು, ಮನೋಜ್ಞ ಅಭಿನಯದ ಮೂಲಕ ಕನ್ನಡ ಪ್ರೇಕ್ಷಕರನ್ನು ಭರಪೂರ ರಂಜಿಸುವ ವಿಶಿಷ್ಟ ಮ್ಯಾನರಿಸಂನ ನಟ. ಈಗವರು ಬರೀ ವಿಲನ್ ಅಲ್ಲ, ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್ ‘ಚಿತ್ರದ ಮೂಲಕ ಶುರುವಾದ ಅವರ ಹೀರೋಯಿಸಂ ಈಗ ಟಾಲಿವುಡ್, ಮಾಲಿವುಡ್ ಗೂ ತಲುಪಿದೆ. ಸಾಲು ಸಾಲು ಸಿನಿಮಾಗಳೀಗ ಅವರು ಹೀರೋ. ಜತೆಗೆ ಗಾಯಕ ಕೂಡ. ಇದೆಲ್ಲ ಅವರ ಸಿನಿಮಾ ಜರ್ನಿಯ ವಿಶೇಷ. ಇದರಾಚೆ ಅವರು ಒಬ್ಬ ಪರಿಸರ ಪ್ರೇಮಿ. ಹಾಗೆಯೇ ಸಾಮಾಜಿಕ ಕಾರ್ಯಕರ್ತ.‌ ಅದನ್ನೀಗ ಅಧಿಕೃತವಾಗಿ ರಿವೀಲ್‌ ಮಾಡಿದ್ದಾರೆ. ಅದರ ಒಂದು ಸ್ಯಾಂಪಲ್ ಸಿಂಹ, ಅಂದ್ರೆ ಹೆಸರಿಗೆ ತಕ್ಕಂತೆ ಅವರು ಸಿಂಹವನ್ನೇ ದತ್ತು ಪಡೆದು ಸಾಕಲು ಹೊರಟಿದ್ದು‌.ಅದು ಹೊಸ ವರ್ಷದ ಹೊಸ ರೆಸ್ಯೂಲೇಷನ್.

ಇದೇ ಮೊದಲ ರೆಸ್ಯೂಲೇಷನ್

ನಾನು ಯಾವ ವರ್ಷ ಕೂಡ ರೆಸ್ಯೂಲೇಷನ್ ಮಾಡ್ಕೊಂಡು ಹೊಸ ವರ್ಷ ಸ್ವಾಗತಿಸಿದ್ದಿಲ್ಲ. ಆದ್ರೆ ಈ ವರ್ಷ ಅಂತಹದೊಂದು ರೆಸ್ಯೂಲೇಷನ್ ಮಾಡ್ಕೊಂಡೆ .ಅದು ಸಿಂಹದ ದತ್ತು ಪ್ರಕ್ರಿಯೆ ಮೂಲಕಲೇ ಶುರುವಾಗಲಿ ಅಂತಂದುಕೊಂಡೆ. ಆಗಲೇ ಶರುವಾಗಿದ್ದು ಈ ಸಿಂಹದ ಮರಿ ದತ್ತು ಪ್ರಕ್ರಿಯೆ. ಖುಷಿ ಆಗ್ತಿದೆ. ಲೈಫ್‌ ಗೆ ಇಂತಹ ರೆಸ್ಯೂಲೇಷನ್ ಬೇಕು. ಯಾಕಂದ್ರೆ ಹಾಗೊಂದುಕೊಂಡಾಗಲೇ ಏನಾದ್ರೂ ಮಾಡ್ಲಿಕ್ಕೆ ಸಾಧ್ಯ ಅಂತ ನಂಗೆ ಈಗಲೇ ಗೊತ್ತಾಗಿದೆ ಎನ್ನುತ್ತಾ ಮೊದಲ ಮಾತಿಗೆ ಅಡಿಯಿಟ್ಟರು ವಸಿಷ್ಠ ಸಿಂಹ.

 

ಬನ್ನೇರುಘಟ್ಟದಲ್ಲಿದೆ ಆ ಮರಿ ಸಿಂಹ

ನಟ ವಸಿಷ್ಠ ಸಿಂಹ ದತ್ತು ಪಡೆದಿರುವ ಸಿಂಹದ ಮರಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಇದು ಎಂಟು ತಿಂಗಳ ಸಿಂಹದ ಮರಿ. ವಿಶೇಷ ಅಂದ್ರೆ ಇದು ಡಾ. ರಾಜ್‌ ಕುಮಾರ್‌ ಹುಟ್ಟಿದ ದಿನದಂದೇ ಹುಟ್ಟಿದ್ದಂತೆ. ಹಾಗೊಂದು ವಿಶೇಷತೆ ಈ ಸಿಂಹದ ಮರಿಗಿದೆ. ಒಂದು ವರ್ಷದ ಮಟ್ಟಿಗೆ ಅದನ್ನು ಸಾಕುವ ಜವಾಬ್ದಾರಿಯನ್ನು ಈಗ ನಟ ವಸಿಷ್ಠ ಸಿಂಹ ವಹಿಸಿಕೊಂಡಿದ್ದಾರೆ. ಹೊಸ ವರ್ಷದ ದಿನವೇ ಅವರು ಬನ್ನೇರುಘಟ್ಟಕ್ಕೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿ ಜತೆಗೆ ಮಾತುಕತೆ ನಡೆಸಿದರು. ಹಾಗೆಯೇ ದತ್ತು ಪ್ರಕ್ರಿಯೆಯ ದಾಖಲೆಗಳನ್ನು ಅಲ್ಲಿನ ಸಿಬ್ಬಂದಿಯಿಂದ ಪಡೆದುಕೊಂಡರು. ಜತೆಗೆ ತಾವು ಜವಾಬ್ದಾರಿ ಹೊತ್ತುಕೊಂಡಂತೆ ವರ್ಷಕ್ಕೆ ೧ ಲಕ್ಷ ರೂ. ಗಳ ಚೆಕ್‌ ಅನ್ನು ಅಲ್ಲಿನ ಸಿಬ್ಬಂದಿಗೆ ಹಸ್ತಾಂತರಿಸಿದರು.

ಮರಿ ಸಿಂಹಕ್ಕಿಟ್ಟ ಹೆಸರು ವಿಜಯನರಸಿಂಹ

ದತ್ತು ಸ್ವೀಕಾರ ಪ್ರಕ್ರಿಯೆ ಸಂದರ್ಭದಲ್ಲೇ ನಿನ್ನೆ ಮರಿ ಸಿಂಹಕ್ಕೆ ನಾಮಕರಣ ಪ್ರಕ್ರಿಯೆ ಕೂಡ ನಡೆಯಿತು. ವಿಜಯ ನರಸಿಂಹ ಅಂತ ಹೆಸರಿಡಲಾಯಿತು. ವಸಿಷ್ಠ ಸಿಂಹ ಹಾಗೂ ಉದ್ಯಾವನದ ಹಿರಿಯ ಅಧಿಕಾರಿ ವನಶ್ರೀ ನಾಮಕರಣದ ಫಲಕ ಆನಾವರಣ ಗೊಳಿಸಿದರು.ವಿಜಯ ನರಸಿಂಹ ಎನ್ನುವುದು ವಸಿಷ್ಠ ಅವರ ತಂದೆಯ ಹೆಸರು ಹೌದು. ಅದನ್ನೇ ದತ್ತು ಪಡೆದ ಸಿಂಹದ ಮರಿಗೆ ನಾಮಕರಣ ಮಾಡಿ, ಸಂತಸ ವ್ಯಕ್ತಪಡಿಸಿದ್ದು, ನಿಜಕ್ಕೂ ವಿಶೇಷ ಎನಿಸಿತು. ವಿಜಯ ನರಸಿಂಹ ಎನ್ನುವುದು ನನ್ನ ತಂದೆ ಹೆಸರು, ಅದರ ಮೇಲಿನ ಸೆಂಟಿಮೆಂಟ್‌ ಗೆ ಅದನ್ನೇ ಫೈನಲ್‌ ಮಾಡಿಕೊಂಡಿದ್ದೇನೆ, ಇದು ನನಗೂ ಖುಷಿ ಆಗಿದೆ ಎನ್ನುತ್ತಾ ನಾಮಕರಣ ಪ್ರಕ್ರಿಯೆಯ ವಿವರ ಬಹಿರಂಗ ಪಡಿಸಿದರು ನಟ ವಸಿಷ್ಠ ಸಿಂಹ.

ಬನ್ನೇರುಘಟ್ಟದಲ್ಲಿ ಇದೇ ಮೊದಲು

ಉದ್ಯಾನವನ ಅಥವಾ ಮೃಗಾಲಯದಲ್ಲಿನ ಪ್ರಾಣಿ- ಪಕ್ಷಿಗಳನ್ನು ಸಿನಿಮಾ ಮಂದಿ ದತ್ತು ಪಡೆಯುವುದು ಹೊಸದಲ್ಲ. ಈಗಾಗಲೇ ಶಿವರಾಜ್‌ ಕುಮಾರ್‌, ದರ್ಶನ್‌, ವಿನೋದ್‌ ಪ್ರಭಾಕರ್‌ ಸೇರಿದಂತೆ ಅನೇಕರು ಪ್ರಾಣಿ ಹಾಗೂ ಪಕ್ಷಿಗಳನ್ನು ದತ್ತು ಪಡೆದು, ಅವುಗಳನ್ನು ಸಾಕುವ ಹೊಣೆ ಹೊತ್ತುಕೊಂಡಿದ್ದು ನಿಮಗೂ ಗೊತ್ತು. ಆದರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಿನಿಮಾ ಮಂದಿ ಕಡೆಯಿಂದ ಪ್ರಾಣಿ ದತ್ತು ಪಡೆದಿದ್ದು ಇದೇ ಮೊದಲು.ಆ ಸಾಲಿನಲ್ಲಿ ವಸಿಷ್ಠ ಅವರ ನಡೆ ವಿಭಿನ್ನ ಹಾಗೂ ವಿಶೇಷ.

ವಸಿಷ್ಠ ಅವರ ಕಾರ್ಯ ಹೆಮ್ಮೆ ತಂದಿದೆ..

“ರಾಜಕಾರಣಿಗಳು, ಅಧಿಕಾರಿಗಳು, ಪರಿಸರ ಪ್ರೇಮಿಗಳು ಈಗಾಗಲೇ ಇಲ್ಲಿನ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಆದರೆ ಸಿನಿಮಾ ಕಡೆಯಿಂದ ಇಲ್ಲಿನ ಪ್ರಾಣಿಯನ್ನು ದತ್ತು ಪಡೆದಿದ್ದು ಇದೇ ಮೊದಲು. ಆ ಕಾರಣಕ್ಕಾಗಿ ನಾವು ನಟ ವಸಿಷ್ಠ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ. ಈ ಸಂಖ್ಯೆ ಇನ್ನು ಹೆಚ್ಚಲಿ, ಬೇರೆಯವರು ಕೂಡ ಆಸಕ್ತಿ ತೆಗೆದುಕೊಂಡರೆ ಒಳ್ಳೆಯದುʼ ಅಂತ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಹಿರಿಯ ಅಧಿಕಾರಿ ವನಶ್ರೀ ಸುದ್ದಿ ಗೋಷ್ಠಿಯಲ್ಲಿ ವಿವರಿಸಿದರು. ಹಾಗಾದ್ರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲೇ ಸಿಂಹದ ಮರಿ ದತ್ತು ಪಡೆದಿದ್ದು ಯಾಕೆ?

ಪ್ರಾಣಿ ರಕ್ಷಣೆ ನಮ್ಮ ಕರ್ತವ್ಯ..

ಕಾಡು ಅಂದ್ರೆ ನಂಗೆ ತುಂಬಾ ಇಷ್ಟ. ಅಲ್ಲಿನ ಪ್ರಾಣಿಗಳಂದ್ರು ಕೂಡ ಅಷ್ಟೇ ಇಷ್ಟ. ಅದೇ ಕಾರಣಕ್ಕೆ ನಾನು ರಾಜ್ಯದ ಅನೇಕ ಕಾಡುಗಳನ್ನು ಸುತ್ತಿದ್ದೇನೆ. ಈ ಸುತ್ತಾಟದ ನಡುವೆ ಕಳೆದ ಬಾರಿ ಒಮ್ಮ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿದ್ದೆ. ಆಗ ಇಲ್ಲಿನ ಸಿಬ್ಬಂದಿ ಜತೆ ಮಾತನಾಡುತ್ತಿದ್ದಾಗ, ಇಲ್ಲಿನ ಪ್ರಾಣಿ, ಪಕ್ಷಿಗಳನ್ನು ಸಾಕುವುದು ಎಷ್ಟು ಕಷ್ಟ ಅಂತ ಗೊತ್ತಾಯಿತು. ಹಾಗೆಯೇ ಮಾತನಾಡುತ್ತಿದ್ದಾಗ ಒಂದು ಪ್ಲಾನ್‌ ಹೊಳೆಯಿತು. ಅಧಿಕಾರಿಗಳೇ ಪ್ರಾಣಿ ದತ್ತು ಸ್ವೀಕಾರದ ಬಗ್ಗೆ ಹೇಳಿದರು. ಆಗ ನಂಗೆ ಹೊಳೆದಿದ್ದು ಸಿಂಹದ ಮರಿ ದತ್ತು ಪಡೆಯುವುದು. ಯಾಕಂದ್ರೆ, ಪ್ರಕೃತಿ ಅಥವಾ ಪ್ರಾಣಿ ರಕ್ಷಣೆ ನಮ್ಮ ಹೊಣೆ. ಅದೇ ಕಾರಣಕ್ಕೆ ಸಿಂಹದ ಮರಿ ದತ್ತು ಪಡೆದಿದ್ದೇನೆ ಎಂದರು ನಟ ನಟ ವಸಿಷ್ಠ.

Related Posts

error: Content is protected !!