ಸಿಂಹದ ಮರಿಗೆ ತಂದೆ ಹೆಸರಿಟ್ಟುಸಂಭ್ರಮಿಸಿದ ಸಿಂಹ
ಡಾ.ರಾಜಕುಮಾರ್ ಅವರು ಹುಟ್ಟಿದ ದಿನವೇ ಈ ಸಿಂಹದ ಮರಿ ಹುಟ್ಟಿದ್ದು…
ಸಿನಿಮಾ ನಟರಿಗೂ ಈ ಪ್ರಾಣಿಗಳಿಗೂ ಅವಿನಾಭಾವ ಸಂಬಂಧ. ಹೌದು, ಬಹುತೇಕ ನಟ, ನಟಿಯರು ಸಾಕು ಪ್ರಾಣಿಗಳ ಮೇಲೆ ಅತೀವ ಪ್ರೀತಿ ತೋರುತ್ತಲೇ ಇರುತ್ತಾರೆ. ಒಂದಷ್ಟು ನಟ,ನಟಿಯರು ಈಗಾಗಲೇ ನಾಯಿ ಮರಿ ಸೇರಿದಂತೆ ಒಂದಷ್ಟು ಪ್ರಾಣಿಗಳನ್ನು ದತ್ತು ಪಡೆದು ಅವುಗಳ ಯೋಗಕ್ಷೇಮ ವಿಚಾರಿಸುವಲ್ಲಿ ನಿರತರಾಗಿದ್ದಾರೆ. ಇದು ಕನ್ನಡದ ಮಟ್ಟಿಗೆ ಹೊಸದಲ್ಲದಿದ್ದರೂ, ಪ್ರಾಣಿಗಳ ಮೇಲೆ ಇರುವ ಪ್ರೀತಿಯೇ ಇಲ್ಲಿ ಮುಖ್ಯ ಎಂಬುದನ್ನು ಕಲಾವಿದರು ಸಾರಿ ಸಾರಿ ಹೇಳುತ್ತಿದ್ದಾರೆ. ಈಗ ಇಲ್ಲಿ ಹೇಳಹೊರಟಿರುವ ವಿಷಯವೆಂದರೆ, “ರಾಜಾಹುಲಿ” ಖ್ಯಾತಿಯ ನಟ ವಸಿಷ್ಡ ಸಿಂಹ ಅವರೂ ಕೂಡ ಒಂದು ಪ್ರಾಣಿ ದತ್ತು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು, ಅವರೀಗ ಒಂದು ಸಿಂಹದ ಮರಿಯನ್ನು ದತ್ತು ಪಡೆದುಕೊಂಡಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಅವರು ಮೂರು ತಿಂಗಳ ಸಿಂಹದ ಮರಿಯನ್ನು ಒಂದು ವರ್ಷಕ್ಕೆ ದತ್ತು ಪಡೆದುಕೊಂಡಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. ಹೊಸ ವರ್ಷಕ್ಕೊಂದು ಹೊಸ ನಿರ್ಧಾರ ಪ್ರಕಟಿಸಿರುವ ವಸಿಷ್ಠ ಸಿಂಹ, ಈಗ ಹೊಸ ವರ್ಷದ ಮೊದಲ ದಿನವೇ ಉದ್ಯಾನವನಕ್ಕೆ ಭೇಟಿ ಮಾಡಿ, ಅದಕ್ಕೆ ತಮ್ಮ ತಂದೆ ವಿಜಯ ನರಸಿಂಹ ಹೆಸರನ್ನೇ ನಾಮಕರಣ ಮಾಡುವ ಮೂಲಕ ಅಧಿಕೃತವಾಗಿಯೂ ಪ್ರಕಟಿಸಿದ್ದಾರೆ. ಬನ್ನೇರು ಘಟ್ಟದಲ್ಲಿಯೇ ಹುಟ್ಟಿರುವ ಸಿಂಹ ಇದಾಗಿದ್ದು, ಒಂದು ವರ್ಷಕ್ಕೆ ದತ್ತು ಪಡೆದುಕೊಂಡಿರುವುದು ವಿಶೇಷ.
ಚಿತ್ರಂಗವನ್ನು ಮತ್ತು ಸಿನಿಮಾವನ್ನು ಅತಿಯಾಗಿ ಪ್ರೀತಿಸುವ ವಸಿಷ್ಠ ಸಿಂಹ, ಸದಾ ಹೊಸತನ್ನೇ ಎದುರು ನೋಡುತ್ತಿರುತ್ತಾರೆ, ಏನಾದರೊಂದು ಹೊಸದನ್ನೇ ಮಾಡಲು ಹಂಬಲಿಸುತ್ತಲೇ ಇರುತ್ತಾರೆ. ಈ ಹೊಸ ವರ್ಷಕ್ಕೆ ಅವರು ಸಿಂಹದ ಮರಿಯೊಂದನ್ನು ದತ್ತು ಪಡೆದು ಪ್ರೀತಿ ತೋರುತ್ತಿದ್ದಾರೆ. ಅದನ್ನು ಹೊಸ ವರ್ಷದ ಮೊದಲ ದಿನ ಹೊಸ ರೀತಿಯಲ್ಲಿ ಆಚರಿಸುವ ಮೂಲಕ ಸಂಭ್ರಮಿಸಿದ್ದಾರೆ.
ಸದ್ಯಕ್ಕೆ ವಸಿಷ್ಠ ಸಿಂಹ ಸಾಕಷ್ಟು ಬಿಝಿಯಾಗಿದ್ದಾರೆ. ಕನ್ನಡದಲ್ಲಷ್ಟೇ ಅಲ್ಲದೇ ಬೇರೆ ಭಾಷೆಗಳಲ್ಲೂ ಅವರೀಗ ಹೆಜ್ಜೆ ಇಟ್ಟಿದ್ದಾರೆ. ಕನ್ನಡದ ಮಟ್ಟಿಗೆ ಅವರೀಗ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅತ್ತ ತೆಲುಗು ಚಿತ್ರರಂಗದಲ್ಲೂ ಒಂದು ಗಟ್ಟಿ ಜಾಗ ಮಾಡಿಕೊಳ್ಳುವ ಉತ್ಸಾಹದಲ್ಲೂ ಇದ್ದಾರೆ. ಒಬ್ಬ ಕನ್ನಡದ ನಟ, ಬೇರೆ ಭಾಷೆಯ ಚಿತ್ರಗಳಲ್ಲಿ ಮಿಂಚುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಹೌದು.