ಕನ್ನಡದ ಬಹುನಿರೀಕ್ಷಿತ ಚಿತ್ರ “ರಾಬರ್ಟ್” ಅಬ್ಬರ ಎಲ್ಲೆಡೆ ಜೋರಾಗಿದೆ. ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸ್ ಚಿಂದಿ ಉಡಾಯಿಸಿದೆ. ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ “ರಾಬರ್ಟ್” ಗಳಿಕೆಯಲ್ಲಿ ದೊಡ್ಡ ಮೊಟ್ಟದ ದಾಖಲೆ ಬರೆದಿದೆ. ಚಿತ್ರತಂಡ ಅಧಿಕೃತವಾಗಿಯೇ ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಹೊರ ಹಾಕಿದೆ. ಅವರ ಕಲೆಕ್ಷನ್ ರಿಪೋರ್ಟ್ ಪ್ರಕಾರ, “ರಾಬರ್ಟ್” ಚಿತ್ರ ಕರ್ನಾಟಕದಲ್ಲಿ 17.24ಕೋಟಿ ರೂ. ಗಳಿಕೆ ಕಂಡಿದೆ. ಈ ಮೂಲಕ ಅಚ್ಚರಿಯನ್ನೂ ಮೂಡಿಸಿದೆ.
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ “ರಾಬರ್ಟ್” ಮಾರ್ಚ್11ರ ಶಿವರಾತ್ರಿ ಹಬ್ಬದಂದು ಅದ್ದೂರಿಯಾಗಿ ತೆರೆಗೆ ಬಂದಿದ್ದು ಎಲ್ಲರಿಗೂ ಗೊತ್ತಿದೆ. ಕರ್ನಾಟಕ ಸೇರಿದಂತೆ ಇತರೆ ರಾಜ್ಯದಲ್ಲೂ ತೆರೆಕಂಡಿರುವ “ರಾಬರ್ಟ್” ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ “ರಾಬರ್ಟ್” ತನ್ನ ಮೊದಲ ದಿನದ ಕಲೆಕ್ಷನ್ನಲ್ಲಿ ದಾಖಲೆ ಬರೆದು ಬೀಗುತ್ತಿದೆ.
ಕನ್ನಡ ಚಿತ್ರವೊಂದು ಮೊದಲ ದಿನವೇ ದೊಡ್ಡ ಮೊತ್ತದ ಗಳಿಕೆ ಕಂಡಿರವುದು ಕನ್ನಡ ಚಿತ್ರರಂಗದ ವಿಚಾರದಲ್ಲಿ ಖುಷಿಯ ಸಂಗತಿ. ಇನ್ನು ಹೈದರಾಬಾದ್ನಲ್ಲೂ “ರಾಬರ್ಟ್” ಉತ್ತಮ ಗಳಿಕೆ ಕಂಡಿದೆ. ಮೊದಲ ದಿನ ಆಂಧ್ರ ಹಾಗು ತೆಲಂಗಾಣದಲ್ಲಿ 3.12 ಕೋಟಿ ರೂ. ಬಾಚಿದ್ದು, ದರ್ಶನ್ ಅವರ ಚಿತ್ರ ಮೊದಲ ಸಲ ತೆಲುಗಿನಲ್ಲಿ ಅದ್ದೂರಿ ಬಿಡುಗಡೆ ಕಂಡಿದೆ.
ಇನ್ನು, ಚಿತ್ರಮಂದಿರಗಳ ವಿಚಾರದಲ್ಲೂ ದಾಖಲೆ ನಿರ್ಮಿಸಿದ್ದ “ರಾಬರ್ಟ್”, ಕನ್ನಡ ಮತ್ತು ತೆಲುಗಿನಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಕರ್ನಾಟಕದಲ್ಲಿ ಏರಿಯಾ ಗಳಿಕೆ ಕುರಿತು ಹೇಳುವುದಾದರೆ, ಬಿಕೆಟಿ ಮತ್ತು ಸೌತ್ ಕೆನರಾ 2 ಕೋಟಿ, ಎಂಎಂಸಿಎಚ್ 2 ಕೋಟಿ, ಚಿತ್ರದುರ್ಗ ಮತ್ತು ದಾವಣಗೆರೆ 2.24 ಕೋಟಿ, ಶಿವಮೊಬ್ಬ 1 ಕೋಟಿ, ಹೈದರಾಬಾದ್ ಕರ್ನಾಟಕ 3 ಕೋಟಿ, ಬಾಂಬೆ ಕರ್ನಾಟಕ 2 ಕೋಟಿ ರೂ.ಗಳಿಕೆ ಕಂಡಿದೆ.
ಇದು ನಿಜಕ್ಕೂ ಹೆಮ್ಮೆಯ ವಿಷಯವೇ. ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಕಂಡಿದೆ ಎಂಬುದನ್ನಿಲ್ಲಿ ಗಮನಿಸಬಹುದು. ಮೊದಲ ಬಾರಿಗೆ ಕನ್ನಡದ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮಾರ್ಚ್11ರ ಬೆಳಗ್ಗೆ 6 ಗಂಟೆಯಿಂದಲೇ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಸಾಲುಗಟ್ಟಿ ನಿಂತು ಚಿತ್ರ ವೀಕ್ಷಿಸಿದ್ದು ವಿಶೇಷ. ಎರಡನೇ ದಿನದಲ್ಲೂ “ರಾಬರ್ಟ್” ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವುದು ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ.